ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

16.08.22 - "ಆದರೆ ಮೊದಲಿನವರಲ್ಲಿ ಅನೇಕರು ಕಡೆಯವರಾಗುವರು; ಕಡೆಯವರಲ್ಲಿ ಅನೇಕರು ಮೊದಲಿನವರಾಗುವರು"

 ಮೊದಲನೇ ವಾಚನ: ಪ್ರವಾದಿ ಯೆಜೆಕಿಯೇಲನ ಗ್ರಂಥ 28:1-10

ಸರ್ವೇಶ್ವರ ಈ ವಾಣಿಯನ್ನು ನನಗೆ ದಯಪಾಲಿಸಿದರು - “ನರಪುತ್ರನೇ, ನೀನು ಟೈರ್ ನಗರದ ರಾಜನಿಗೆ ಹೀಗೆ ನುಡಿ; ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನೀನು ಗರ್ವದಿಂದ ‘ಆಹಾ, ನಾನೆ ದೇವರು, ಸಮುದ್ರ ಮಧ್ಯೆ ದೇವರ ಆಸನವನ್ನೇ ಆಲಂಕರಿಸಿದ್ದೇನೆ’, ಎಂದುಕೊಂಡೆ. ನೀನು ನಿನ್ನ ದೇವರಿಗೆ ಸಮನಾಗಿಸಿಕೊಂಡೆಯೋ? ನೀನು ಎಂದಿಗೂ ದೇವರಲ್ಲ, ನೀನೊಬ್ಬ ನರಪ್ರಾಣಿಯಷ್ಟೆ. ನೀನು ದಾನಿಯೇಲನಿಗಿಂತಲೂ ಬುದ್ಧಿವಂತನೋ? ಹಾಗಾದರೆ ನಿನಗೆ ಮರೆಯಾದ ರಹಸ್ಯ ಯಾವುದೂ ಇಲ್ಲ! ನಿನ್ನ ಜ್ಞಾನ ವಿವೇಕಿಗಳಿಂದ ಐಶ್ವರ್ಯವನ್ನು ಗಳಿಸಿ, ನಿನ್ನ ಬೊಕ್ಕಸಗಳಲ್ಲಿ ಬೆಳ್ಳಿಬಂಗಾರವನ್ನು ತುಂಬಿಸಿ ಕೊಂಡಿರುವೆ. ನಿನ್ನ ಅಧಿಕ ಜ್ಞಾನದಿಂದ ಹಾಗು ವ್ಯಾಪಾರದಿಂದ ಸಿರಿಸಂಪತ್ತನ್ನು ವೃದ್ಧಿಮಾಡಿಕೊಂಡಿರುವೆ. ಆದುದರಿಂದ ನಿನ್ನ ಮನಸ್ಸು ನಿನ್ನ ಆಸ್ತಿಯ ನಿಮಿತ್ತ ಉಬ್ಬಿಹೋಗಿದೆ. ಹೀಗಿರಲು ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ-ನೀನು ನಿನ್ನನ್ನೆ ದೇವರಿಗೆ ಸಮನಾಗಿಸಿಕೊಂಡಿರುವೆ. ಆದುದರಿಂದ ನಾನು ಅತಿಭಯಂಕರ ಜನಾಂಗದವರಾದ ಮ್ಲೇಚ್ಛರನ್ನು ನಿನ್ನ ಮೇಲೆ ಬೀಳಮಾಡುವೆನು; ಅವರು ನಿನ್ನ ಜ್ಞಾನದ ಸೊಬಗಿನ ಮೇಲೆ ಕತ್ತಿ ಹಿರಿದು, ನಿನ್ನ ಹೊಳಪನ್ನು ಹೊಲಸು ಮಾಡುವರು. ನಿನ್ನನ್ನು ಪಾತಾಳಕ್ಕೆ ತಳ್ಳಿಬಿಡುವರು; ಸಮುದ್ರಮಧ್ಯೆ ಹತರಾದವರ ಗತಿ ನಿನಗೆ ಸಂಭವಿಸುವುದು. ನಿನ್ನನ್ನು ಸಂಹರಿಸುವವನೆದುರಿಗೆ ನಿಂತು, ‘ನಾನು ದೇವರು’ ಎಂದು ಹೇಳಬಲ್ಲೆಯಾ? ಹತಿಸುವವನ ಕೈಗೆ ನೀನು ಎಂದಿಗೂ ದೇವರಲ್ಲ, ನರಪ್ರಾಣಿಯೇ! ನೀನು ಅನ್ಯರ ಕೈಯಿಂದ ಸುನ್ನತಿಹೀನರ ಮರಣಕ್ಕೆ ಗುರಿಯಾಗುವೆ; ನಾನೇ ನುಡಿದಿದ್ದೇನೆ, ಇದು ಸರ್ವೇಶ್ವರನಾದ ದೇವರ ಸಂಕಲ್ಪ.”

ಕೀರ್ತನೆ: 32:26-27, 28, 30, 35-36

ಶ್ಲೋಕ: ಬದುಕಿಸುವವನು, ಕೊಲ್ಲುವವನು ನಾನೇ

ಶುಭಸಂದೇಶ: ಮತ್ತಾಯ 19:23-30


ಆಗ ಯೇಸುಸ್ವಾಮಿ ತಮ್ಮ ಶಿಷ್ಯರನ್ನು ಉದ್ದೇಶಿಸಿ, “ಐಶ್ವರ್ಯವಂತನು ಸ್ವರ್ಗಸಾಮ್ರಾಜ್ಯವನ್ನು ಪ್ರವೇಶಿಸುವುದು ಕಷ್ಟವೆಂದು ನಿಮಗೆ ಒತ್ತಿ ಹೇಳುತ್ತೇನೆ. ಐಶ್ವರ್ಯವಂತನು ದೇವರ ಸಾಮ್ರಾಜ್ಯವನ್ನು ಪ್ರವೇಶಿಸುವುದಕ್ಕಿಂತಲೂ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಸುಳುವುದು ಸುಲಭ ಎಂಬುದು ನಿಜ,” ಎಂದರು. ಇದನ್ನು ಕೇಳಿದ ಮೇಲಂತೂ ಶಿಷ್ಯರು ಬೆಬ್ಬೆರಗಾದರು. “ಹಾಗಾದರೆ, ಯಾರು ತಾನೆ ಜೀವೋದ್ಧಾರ ಹೊಂದಲು ಸಾಧ್ಯ?” ಎಂದುಕೊಂಡರು. ಯೇಸು ಅವರನ್ನು ನಿಟ್ಟಿಸಿ ನೋಡುತ್ತಾ, “ಮನುಷ್ಯರಿಗಿದು ಅಸಾಧ್ಯ; ಆದರೆ ದೇವರಿಗೆ ಎಲ್ಲವೂ ಸಾಧ್ಯ,” ಎಂದರು. ಪರಿತ್ಯಾಗಕ್ಕೆ ನೂರ್ಮಡಿ ಪ್ರತಿಫಲ ಪೇತ್ರನು ಆಗ ಮುಂದೆ ಬಂದು, “ನೋಡಿ, ನಾವು ಎಲ್ಲವನ್ನು ಬಿಟ್ಟುಬಿಟ್ಟು ತಮ್ಮನ್ನು ಹಿಂಬಾಲಿಸಿದ್ದೇವೆ. ನಮಗೇನು ದೊರಕುತ್ತದೆ?” ಎಂದು ಕೇಳಿದನು.  ಅದಕ್ಕೆ ಯೇಸು, “ನಿಮಗೆ ಸತ್ಯವಾಗಿ ಹೇಳುತ್ತೇನೆ: ಹೊಸ ಸೃಷ್ಟಿಯಲ್ಲಿ ನರಪುತ್ರನು ತನ್ನ ಮಹಿಮಾನ್ವಿತ ಸಿಂಹಾಸನದ ಮೇಲೆ ಆಸೀನನಾಗುವಾಗ, ನನ್ನನ್ನು ಹಿಂಬಾಲಿಸಿರುವ ನೀವು ಕೂಡ, ಇಸ್ರಯೇಲಿನ ಹನ್ನೆರಡು ಗೋತ್ರಗಳಿಗೆ ನ್ಯಾಯಾಧಿಪತಿಗಳಾಗಿ ಹನ್ನೆರಡು ಸಿಂಹಾಸನಗಳ ಮೇಲೆ ಆಸೀನರಾಗುವಿರಿ. ನನ್ನ ನಾಮದ ನಿಮಿತ್ತ ಮನೆಮಠವನ್ನಾಗಲಿ, ಅಣ್ಣತಮ್ಮಂದಿರನ್ನಾಗಲಿ, ಅಕ್ಕತಂಗಿಯರನ್ನಾಗಲಿ, ತಂದೆ ತಾಯಿಯರನ್ನಾಗಲಿ, ಮಕ್ಕಳು ಮರಿಗಳನ್ನಾಗಲಿ, ಹೊಲಗದ್ದೆಗಳನ್ನಾಗಲಿ ತ್ಯಜಿಸುವ ಪ್ರತಿಯೊಬ್ಬನೂ ನೂರ್ಮಡಿಯಷ್ಟು ಪಡೆಯುವನು; ಮಾತ್ರವಲ್ಲ, ಅಮರಜೀವಕ್ಕೆ ಬಾಧ್ಯಸ್ಥನಾಗುವನು. ಆದರೆ ಮೊದಲಿನವರಲ್ಲಿ ಅನೇಕರು ಕಡೆಯವರಾಗುವರು; ಕಡೆಯವರಲ್ಲಿ ಅನೇಕರು ಮೊದಲಿನವರಾಗುವರು.


No comments:

Post a Comment