ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

15.12.21 - "ಕುರುಡರು ನೋಡುತ್ತಾರೆ, ಕುಂಟರು ನಡೆಯುತ್ತಾರೆ, ಕುಷ್ಠರೋಗಿಗಳು ಸ್ವಸ್ಥರಾಗುತ್ತಾರೆ, ಕಿವುಡರು ಕೇಳುತ್ತಾರೆ, ಸತ್ತವರು ಮತ್ತೆ ಜೀವ ಪಡೆಯುತ್ತಾರೆ"

ಮೊದಲನೇ ವಾಚನ: ಯೆಶಾಯ 45: 6c-8, 18, 21c-25 

ಇದ ಕಂಡು ತಿಳಿಯುವರೆಲ್ಲರು ಪೂರ್ವದಿಂದ ಪಶ್ಚಿಮದವರೆಗು: ನನ್ನ ವಿನಾ ದೇವರಾರು ಇಲ್ಲವೆಂದು ನಾನೇ ಸರ್ವೇಶ್ವರ ಮತ್ತಾರು ಅಲ್ಲವೆಂದು; ಬೆಳಕಿಗೂ ಕತ್ತಲಿಗೂ ನಾನೆ ಸೃಷ್ಟಿಕರ್ತನೆಂದು ಸುಖದುಃಖಗಳಿಗೆ ಕಾರಣಕರ್ತನೆಂದು ಸಕಲವನು ನಡೆಸುವ ಸರ್ವೇಶ್ವರ ನಾನೇ ಎಂದು. ವರ್ಷಿಸಲಿ ಸದ್ಧರ್ಮವನು ಆಕಾಶಮಂಡಲ ಸುರಿಸಲಿ ಮೇಲಿಂದ ಅದನ್ನು ಆ ಗಗನಮಂಡಲ; ಅಂಕುರಿಸಲಿ ಜೀವೋದ್ಧಾರವನು ಭೂಮಂಡಲ ಬೆಳೆಯಲಿ ಅದರೊಡನೆಯೇ ಸದ್ಧರ್ಮದ ಫಲ, ಸರ್ವೇಶ್ವರನಾದ ನಾನೇ ಕರ್ತ ಇದಕ್ಕೆಲ್ಲ.” ಕೇಳಿ, ಆಕಾಶಮಂಡಲವನ್ನು ಸೃಷ್ಟಿಸಿದ ಸರ್ವೇಶ್ವರನ ಮಾತನ್ನು: ಭೂಲೋಕವನು ನಿರ್ಮಿಸಿ, ರೂಪಿಸಿ, ಸ್ಥಾಪಿಸಿದ ದೇವರು ಆತನು. ಅದನ್ನು ಶೂನ್ಯಸ್ಥಾನವಾಗಿ ಸೃಷ್ಟಿಸದೆ, ಜನನಿವಾಸಕ್ಕಾಗಿಯೇ ರೂಪಿಸಿದವನು ಆತನು. ಅಂಥವನು ಇಂತೆನ್ನುತ್ತಾನೆ: “ಸರ್ವೇಶ್ವರ ನಾನೇ; ನಾನಲ್ಲದೆ ಇನ್ನಾರೂ ಇಲ್ಲ. ಹೇಳಿ, ನ್ಯಾಯಸ್ಥಾನಕ್ಕೆ ಬಂದು ನಿಮ್ಮ ವಾದವನ್ನು ಮಂಡಿಸಿ; ನಿಮ್ಮ ದೇವರುಗಳು ತಮ್ಮತಮ್ಮೊಳಗೆ ಪರ್ಯಾಲೋಚಿಸಿ ನೋಡಲಿ. ಪ್ರಾರಂಭದಿಂದಲೂ ಈ ವಿಷಯವನ್ನು ಪ್ರಕಟಿಸಿದವರು ಯಾರು? ಅದು ನಡೆಯುವುದಕ್ಕೆ ಮುಂಚೆಯೇ ತಿಳಿಸಿದವನು ನಾನಲ್ಲದೆ ಇನ್ಯಾರು? ನನ್ನ ಹೊರತು ಇನ್ನು ಯಾವ ದೇವರೂ ಇಲ್ಲ; ನಾನಲ್ಲದೆ ಸತ್ಯಸ್ವರೂಪವನು, ಉದ್ಧಾರಕನು ಆದ ದೇವನಿಲ್ಲವೇ ಇಲ್ಲ. “ಎಲ್ಲೆ ಎಲ್ಲೆಗಳಲ್ಲಿರುವ ಜನರೇ, ತಿರುಗಿಕೊಳ್ಳಿರಿ ನನ್ನ ಕಡೆಗೆ, ಆಗ ಉದ್ಧಾರವಾಗುವಿರಿ. ದೇವರು ಬೇರಾರೂ ಇಲ್ಲ, ನಾನೊಬ್ಬನೆ ಎಂಬುದನರಿಯಿರಿ. ಪ್ರತಿಯೊಬ್ಬರು ಮೊಣಕಾಲೂರುವರು ನನಗೆ ಎಲ್ಲರು ನಾನೇ ದೇವರೆಂದು ಮಾಡುವರು ಪ್ರತಿಜ್ಞೆ. ಆ ನುಡಿ ಹೊರಟಿದೆ ನನ್ನ ಸತ್ಯದ ಬಾಯಿಂದ ಅದನ್ನು ಹಿಂತೆಗೆಯೆನು ನನ್ನ ಮೇಲಿಟ್ಟ ಆಣೆಯಿಂದ. “ಜೀವೋದ್ಧಾರವು, ಶಕ್ತಿಯು ಸರ್ವೇಶ್ವರನಲ್ಲಿ ಮಾತ್ರ ಉಂಟು ಆತನ ವಿರೋಧಿಗಳೆಲ್ಲರೂ ಆತನನ್ನೇ ಮರೆಹೋಗುವರು ನಾಚಿಕೆಪಟ್ಟು. ಪಡೆವರು ಇಸ್ರಯೇಲಿನ ವಂಶಜರೆಲ್ಲರು ಸರ್ವೇಶ್ವರನಲ್ಲೇ ಜೀವೋದ್ಧಾರವನು, ಆನಂದವನು.”

ಕೀರ್ತನೆ: 85: 9ab and 10, 11-12, 13-14 
ಶ್ಲೋಕ: ವರ್ಷಿಸಲಿ ಸದ್ಧರ್ಮವನು ಆಕಾಶಮಂಡಲ, ಸುರಿಸಲಿ ಮೇಲಿಂದ ಅದನ್ನು ಆ ಗಗನಮಂಡಲ. 

ಶುಭಸಂದೇಶ: ಲೂಕ 7: 18b-23 


ಸ್ನಾನಿಕ ಯೊವಾನ್ನನ್ನು, ತನ್ನ ಶಿಷ್ಯರಲ್ಲಿ ಇಬ್ಬರನ್ನು ಕರೆದು, “ಬರಬೇಕಾದವರು ನೀವೋ ಅಥವಾ ಬೇರೊಬ್ಬರಿಗಾಗಿ ನಾವು ಎದುರು ನೋಡಬೇಕೋ?” ಎಂದು ಯೇಸುಸ್ವಾಮಿಯನ್ನು ಕೇಳಲು ಅವರ ಬಳಿಗೆ ಕಳುಹಿಸಿದನು. ಆ ಶಿಷ್ಯರು ಯೇಸುವಿನ ಬಳಿಗೆ ಬಂದು, “ಬರಬೇಕಾದವರು ನೀವೋ ಅಥವಾ ನಾವು ಬೇರೊಬ್ಬರನ್ನು ಎದುರುನೋಡಬೇಕೋ ಎಂದು ವಿಚಾರಿಸಲು ಸ್ನಾನಿಕ ಯೊವನ್ನನು ನಮ್ಮನ್ನು ತಮ್ಮ ಬಳಿಗೆ ಕಳುಹಿಸಿದ್ದಾರೆ,”ಎಂದರು.ಅದೇ ಸಮಯದಲ್ಲಿ ಯೇಸು ರೋಗ ರುಜಿನಗಳಿಂದ ನರಳುತ್ತಿದ್ದ ಹಾಗೂ ದೆವ್ವಹಿಡಿದಿದ್ದ ಅನೇಕರನ್ನು ಗುಣಪಡಿಸುತ್ತಿದ್ದರು ಮತ್ತು ಹಲವು ಮಂದಿ ಕುರುಡರಿಗೆ ದೃಷ್ಟಿಯನ್ನು ದಯಪಾಲಿಸುತ್ತಿದ್ದರು. ಯೇಸು ಅವರಿಗೆ ಪ್ರತ್ಯುತ್ತರವಾಗಿ,“ನೀವು ಕಂಡದ್ದನ್ನೂ ಕೇಳಿದ್ದನ್ನೂ ಯೊವಾನ್ನನಿಗೆ ಹೋಗಿ ತಿಳಿಸಿರಿ : ಕುರುಡರು ನೋಡುತ್ತಾರೆ, ಕುಂಟರು ನಡೆಯುತ್ತಾರೆ, ಕುಷ್ಠರೋಗಿಗಳು ಸ್ವಸ್ಥರಾಗುತ್ತಾರೆ, ಕಿವುಡರು ಕೇಳುತ್ತಾರೆ, ಸತ್ತವರು ಮತ್ತೆ ಜೀವ ಪಡೆಯುತ್ತಾರೆ. ದೀನದಲಿತರಿಗೆ ಶುಭಸಂದೇಶವನ್ನು ಪ್ರಕಟಿಸಲಾಗುತ್ತಿದೆ. ನನ್ನಲ್ಲಿ ವಿಶ್ವಾಸ ಕಳೆದುಕೊಳ್ಳದವನು ಭಾಗ್ಯವಂತನು,” ಎಂದು ಹೇಳಿ ಕಳುಹಿಸಿದರು.

14.12.21

ಮೊದಲನೇ ವಾಚನ: ಜೆಫನ್ಯನು 3: 1-2, 9-13

ದಬ್ಬಾಳಿಕೆ ನಡೆಸುವ, ದಂಗೆಯೇಳುವ ದುಷ್ಟ ನಗರಕ್ಕೆ ದಿಕ್ಕಾರ! ಅದು ಯಾರ ಬುದ್ಧಿಮಾತಿಗೂ ಕಿವಿಗೊಡಲಿಲ್ಲ. ಶಿಕ್ಷಣಕ್ಕೆ ಒಳಪಡಲಿಲ್ಲ. ಸರ್ವೇಶ್ವರಸ್ವಾಮಿಯಲ್ಲಿ ಭರವಸೆ ಇಡಲಿಲ್ಲ. ತನ್ನ ದೇವರ ಸನ್ನಿಧಿಗೆ ಬರಲಿಲ್ಲ. “ಆಗ ಎಲ್ಲರೂ ಒಮ್ಮನಸ್ಸಿನಿಂದ ನನ್ನನ್ನು ಪೂಜಿಸಿ ನನ್ನ ಹೆಸರೆತ್ತಿ ಪ್ರಾರ್ಥಿಸುವಂತೆ ಜನಾಂಗಗಳ ಬಾಯನ್ನು ಪರಿವರ್ತಿಸಿ ಶುದ್ಧೀಕರಿಸುವೆನು. ಚದರಿಹೋಗಿರುವ ನನ್ನ ಜನರು, ನನ್ನ ಭಕ್ತಾದಿಗಳು, ಸುಡಾನಿನ ನದಿಗಳ ಆಚೆಯಿಂದಲೂ ನನಗೆ ಕಾಣಿಕೆಯನ್ನು ತಂದೊಪ್ಪಿಸುವರು. ನೀನು ನನಗೆ ಎದುರಾಗಿ ದಂಗೆಯೆದ್ದು ಮಾಡಿದ ನಾನಾ ದುಷ್ಕøತ್ಯಗಳಿಗಾಗಿ ಆ ದಿನದಂದು ನೀನು ನಾಚಿಕೆಪಡುವ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ಅತಿ ಗರ್ವದಿಂದ ಮೆರೆಯುವವರನ್ನು ನಿನ್ನ ಮಧ್ಯೆಯಿಂದ ತೊಲಗಿಸಿಬಿಡುವೆನು. ಅಂದಿನಿಂದ ನನ್ನ ಪವಿತ್ರ ಪರ್ವತದ ಮೇಲೆ ನೀನು ಗರ್ವಪಡದೆ ಬಾಳುವೆ. ದೀನರೂ ನಮ್ರರೂ ಆದ ಜನರನ್ನು ನಿನ್ನಲ್ಲಿ ಉಳಿಸುವೆನು. ಅವರು ಪ್ರಭುವಿನ ನಾಮದಲ್ಲಿ ಭಯಭಕ್ತಿಯಿಂದಿರುವರು. ಇಸ್ರಯೇಲಿನಲ್ಲಿ ಅಳಿದುಳಿದವರು ಅನ್ಯಾಯ ಮಾಡರು, ಸುಳ್ಳಾಡರು. ಅವರ ಬಾಯಲ್ಲಿ ಮೋಸವಿರದು. ಕುರಿಮಂದೆಯಂತೆ ಮೇದು ಸುರಕ್ಷಿತವಾಗಿರುವರು. ಅವರನ್ನು ಯಾರೂ ಹೆದರಿಸರು.” 

ಕೀರ್ತನೆ: 34: 2-3, 6-7, 17-18, 19 and 23
ಶ್ಲೋಕ: ನಿರ್ಗತಿಕನು ಮೊರೆಯಿಡಲು ಪ್ರಭು ಕಿವಿಗೊಟ್ಟನು

ಶುಭಸಂದೇಶ: ಮತ್ತಾಯ 21: 28-32 

ಯೇಸು ಮುಖ್ಯಯಾಜಕರನ್ನೂ ಪ್ರಜಾಪ್ರಮುಕರನ್ನೂ ಉದ್ದೇಶಿಸಿ ಹೀಗೆಂದರು: “ಈ ಬಗ್ಗೆ ನಿಮಗೇನು ಅನಿಸುತ್ತದೆ? ಒಬ್ಬಾತನಿಗೆ ಇಬ್ಬರು ಮಕ್ಕಳಿದ್ದರು. ಒಮ್ಮೆ ಆತ ಮೊದಲನೆಯ ಮಗನ ಹತ್ತಿರ ಬಂದು, ‘ಮಗನೇ, ಈ ಹೊತ್ತು ದ್ರಾಕ್ಷಿತೋಟಕ್ಕೆ ಹೋಗಿ ಕೆಲಸ ಮಾಡು’ ಎಂದ. ಅದಕ್ಕೆ ಅವನು, ‘ನಾನು ಹೋಗುವುದಿಲ್ಲ’ ಎಂದು ಉತ್ತರವಿತ್ತ. ಆದರೂ ಅನಂತರ ಪಶ್ಚಾತ್ತಾಪಪಟ್ಟು ಅವನು ತೋಟಕ್ಕೆ ಹೋದ. ತಂದೆ ಎರಡನೆಯ ಮಗನ ಹತ್ತಿರ ಹೋಗಿ ಅಂತೆಯೇ ತೋಟಕ್ಕೆ ಹೋಗಲು ಹೇಳಿದ. ಅವನು, ‘ಇಗೋ, ಹೋಗುತ್ತೇನಪ್ಪಾ’ ಎಂದು ಹೇಳಿದ. ಆದರೆ ಹೋಗಲೇ ಇಲ್ಲ. ಇವರಿಬ್ಬರಲ್ಲಿ ತಂದೆಯ ಇಷ್ಟದಂತೆ ನಡೆದವನು ಯಾರು?” ಎಂದು ಯೇಸು ಕೇಳಿದರು. “ಮೊದಲನೆಯ ಮಗನೇ,” ಎಂದು ಉತ್ತರಿಸಿದರು ಅವರು. ಆಗ ಯೇಸುಸ್ವಾಮಿ, “ಸುಂಕದವರೂ ವೇಶ್ಯೆಯರೂ ನಿಮಗಿಂತ ಮೊದಲೇ ದೇವರ ಸಾಮ್ರಾಜ್ಯವನ್ನು ಪ್ರವೇಶಿಸುವರು ಎಂದು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ. ಸ್ನಾನಿಕ ಯೊವಾನ್ನನು ಧರ್ಮಮಾರ್ಗವನ್ನು ತೋರಿಸಲು ಬಂದನು. ನೀವು ಆತನನ್ನು ನಂಬಲಿಲ್ಲ. ಆದರೆ ಸುಂಕದವರೂ ವೇಶ್ಯೆಯರೂ ಆತನನ್ನು ನಂಬಿದರು. ಇದನ್ನು ಕಂಡ ಮೇಲೂ ನೀವು ಪಶ್ಚಾತ್ತಾಪ ಪಡಲಿಲ್ಲ, ಯೊವಾನ್ನನನ್ನು ನಂಬಲೂ ಇಲ್ಲ.

13.12.21 - ನಿನ್ನ ಮಾರ್ಗವನು ಪ್ರಭು ನನಗೆ ತೋರಿಸು

ಮೊದಲನೇ ವಾಚನ: ಸಂಖ್ಯಾಕಾಂಡ 24:2-7, 15-17


ಬಿಳಾಮನು ಕಣ್ಣೆತ್ತಿ ನೋಡಿದಾಗ ಕುಲಗಳ ಅನುಸಾರ ಡೇರೆಗಳನ್ನು ಹಾಕಿಕೊಂಡಿದ್ದ ಇಸ್ರಯೇಲರು ಅವನಿಗೆ ಕಾಣಿಸಿದರು. ಆಗ ಅವನು ದೇವಾತ್ಮ ಪ್ರೇರಿತನಾಗಿ ಪದ್ಯರೂಪದಲ್ಲಿ ಇಂತೆಂದು ಭವಿಷ್ಯ ನುಡಿದನು: "ಇದು ಬೆಯೋರನ ಮಗ ಬಿಳಾಮನ ಭವಿಷ್ಯವಾಣಿ: ಮನೋದೃಷ್ಟಿಯಿಂದ ನೋಡುವ; ಪುರುಷನ ವಾಣಿ. ದೈವೋಕ್ತಿಗಳನ್ನು ಕೇಳುವವನ ಭವಿಷ್ಯವಾಣಿ, ಪರವಶನಾಗಿ ಕಣ್ದೆರೆದು ಸರ್ವಶಕ್ತನ ದರ್ಶನ ಹೊಂದಿದಾ ವೆಕ್ತಿಯ ವಾಣಿ. ಯಕೋಬ್ಯರೇ, ನಿಮ್ಮ ಡೇರೆಗಳೆಷ್ಟು ರಮ್ಯ! ಇಸ್ರಯೇಲರೇ, ನಿಮ್ಮ ನಿವಾಸಗಳೆಷ್ಟು ಸುಂದರ! ಅವಿವೆ ಉದ್ದುದ್ದ ಚಾಚಿಕೊಂಡಿರುವ ಕಣಿವೆಗಳಂತೆ; ನದಿಯ ಬಳಿಯಿರುವ ತೋಟಗಳಂತೆ ಸರ್ವೇಶ್ವರ ನೆಟ್ಟ ಅಗರು ಮರಗಳಂತೆ; ನೀರ ಬದಿಯ ದೇವದಾರು ವೃಕ್ಷಗಳಂತೆ. ನೀರು ಹರಿಯುತ್ತಲೇ ಇದೆ ಅವರ ಕಪಿಲೆಗಳಿಂದ, ಅವರ ಬಿತ್ತನೆಗೆ ನೀರಿನ ಕೊರತೆಯೆಂಬುದಿಲ್ಲ. ಆಗಾಗ್ ರಾಜನಿಗಿಂತ ಶ್ರೇಷ್ಠ ಅವರ ಅರಸ; ಅಭಾವೃದ್ಧಿಯಾಗುತ್ತಿದೆ ಅವರ ರಾಜ್ಯ." ನಂತರ ಬಿಳಾಮನು ಪುನಃ ಪದ್ಯರೂಪದಲ್ಲಿ ಹೀಗೆಂದನು: "ಬೆಯೋರನ ಮಗ ಬಿಳಾಮನು ನುಡಿದ ಭವಿಷ್ಯವಾಣಿ; ಮನೋದೃಷ್ಟಿಯಿಂದ ನೋಡುವ ಪುರುಷನ ವಾಣಿ ದೈವೋಕ್ತಿಗಳನ್ನು ಕೇಳುವವನ ಭವಿಷ್ಯವಾಣಿ; ಪರಾತ್ಪರನ ಜ್ಞಾನವನ್ನು ಪಡೆದವನ ವಾಣಿ ಪರವಷನಾಗಿ ಕಣ್ದೆರೆದು ಸರ್ವಶಕ್ತನ ದರ್ಶನ ಹೊಂದಿದವನ ಭವಿಷ್ಯವಾಣಿ; ಒಬ್ಬಾತನನ್ನು ನೋಡುತ್ತಿದ್ದೇನೆ; ಆತ ಈಗಿನವನಲ್ಲ. ಆತ ಕಾಣಿಸುತ್ತಾನೆ, ಆದರೆ ಸಮಿಾಪದಲ್ಲಿಲ್ಲ. ನಕ್ಷತ್ರಪ್ರಾಯನೊಬ್ಬನು ಉದಯಿಸಿದ್ದಾನೆ ಯಕೋಬವಂಶದಲ್ಲಿ; ರಾಜದಂಡ ಹಿಡಿದವನ ಕಂಡು ಬಂದಿದ್ದಾನೆ ಇಸ್ರಯೇಲರಲ್ಲಿ. ಆತ ಸೀಳಿಹಾಕಿದ್ದಾನೆ ಮೋವಾಬ್ಯರ ತಲೆಯನ್ನು; ಕೆಡವಿಬಿಟ್ಟಿದ್ದಾನೆ ಯುದ್ಧವೀರರೆಲ್ಲರನ್ನು.

ಕೀರ್ತನೆ: 25:4-5, 6, 7, 8-9
ಶ್ಲೋಕ: ನಿನ್ನ ಮಾರ್ಗವನು ಪ್ರಭು ನನಗೆ ತೋರಿಸು

ಶುಭಸಂದೇಶ: ಮತ್ತಾಯ 21:23-27


ಯೇಸುಸ್ವಾಮಿ ಮಹಾದೇವಾಲಯದ ಒಳಕ್ಕೆ ಹೋಗಿ ಅಲ್ಲಿ ಬೋಧನೆ ಮಾಡತೊಡಗಿದರು. ಮುಖ್ಯ ಯಾಜಕರೂ ಪ್ರಜಾಪ್ರಮುಖರೂ ಅವರ ಬಳಿಗೆ ಬಂದು, "ಇದನ್ನೆಲ್ಲಾ ನೀನು ಯಾವ ಅಧಿಕಾರದಿಂದ ಮಾಡುತ್ತಿರುವೆ? ನಿನಗೆ ಈ ಅಧಿಕಾರವನ್ನು ಕೊಟ್ಟವರಾರು?" ಎಂದು ಪ್ರಶ್ನಿಸಿದರು. ಅದಕ್ಕೆ ಯೇಸು, "ನಾನು ನಿಮಗೆ ಒಂದು ಪ್ರಶ್ನೆ ಕೇಳುತ್ತೇನೆ; ಅದಕ್ಕೆ ನೀವು ಉತ್ತರಕೊಟ್ಟರೆ ನಾನು ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತಿದ್ದೇನೆಂದು ನಿಮಗೆ ತಿಳಿಸುತ್ತೇನೆ. "ಸ್ನಾನದೀಕ್ಷೆ ಕೊಡುವ ಅಧಿಕಾರ ಯೊವಾನ್ನನಿಗೆ ಎಲ್ಲಿಂದ ಬಂದಿತು? ದೇವರಿಂದಲೋ, ಮನುಷ್ಯರಿಂದಲೋ?"  ಎಂದು ಕೇಳಿದರು. ಅದಕ್ಕೆ ಅವರು ತಮ್ಮ ತಮ್ಮೊಳಗೇ ತರ್ಕ ಮಾಡಲಾರಂಭಿಸಿದರು; "ದೇವರಿಂದ ಬಂತು ಎಂದು ಉತ್ತರಿಸಿದರೆ, "ಹಾಗಾದರೆ ನೀವೇಕೆ ಆತನನ್ನು ನಂಬಲಿಲ್ಲ?" ಎಂದು ಕೇಳುವನು. "ಮನುಷ್ಯರಿಂದ ಬಂತು" ಎಂದು ಕೇಳಿದೆವಾದರೆ ಜನಸಮೂಹಕ್ಕೆ ನಾವು ಭಯಪಡಬೇಕಾಗಿದೆ. ಏಕೆಂದರೆ ಯೊವಾನ್ನನು ಒಬ್ಬ ಪ್ರವಾದಿಯೆಂದು ಸರ್ವರೂ ಸನ್ಮಾನಿಸುತ್ತಾರೆ" ಎಂದುಕೊಂಡರು. ಬಳಿಕ ಬಂದು, "ನಮಗೆ ಗೊತ್ತಿಲ್ಲ," ಎಂದು ಯೇಸುವಿಗೆ ಉತ್ತರಕೊಟ್ಟರು. ಆಗ ಯೇಸು, "ಹಾಗಾದರೆ, ನಾನು ಕೂಡ ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೇನೆಂದು ನಿಮಗೆ ಹೇಳುವುದಿಲ್ಲ," ಎಂದರು.

12.12.21

ಮೊದಲನೇ ವಾಚನ: ಜೆಫನ್ಯನು 3:14-18

ಹರ್ಷದ್ವನಿಗೈ, ಸಿಯೋನ್ ಕುವರಿಯೇ ಘೋಷಿಸು, ಇಸ್ರಯೇಲ್ ದೇಶವೇ, ಹೃತ್ಪೂರ್ವಕವಾಗಿ ಸಂತೋಷಿಸು, ಜೆರುಸಲೇಮ್ ನಗರವೇ. ತಪ್ಪಿಸಿಹನು ಸರ್ವೇಶ ನಿನಗೆ ವಿಧಿಸಿರುವ ದಂಡನೆಗಳನ್ನು ತಳ್ಳಿ ಹೊರಗಟ್ಟಿಹನು ನಿನ್ನ ಶತ್ರುಗಳನ್ನು ಇಸ್ರಯೇಲಿನ ರಾಜನಾದ ಸರ್ವೇಶ ಇಹನು ನಿನ್ನ ಮಧ್ಯೆ ನೀನಿರುವೆ ಇನ್ನೆಂದಿಗೂ ಕೇಡಿಗಂಜದೆ. ಜೆರುಸಲೇಮಿಗೆ ಈ ಪರಿ ಹೇಳುವವರು ಆ ದಿನದೊಳು: "ಅಂಜಬೇಡ ಸಿಯೋನ್, ಸೋತು ಜೋಲುಬೀಳದಿರಲಿ ನಿನ್ನ ಕೈಗಳು." ಪ್ರಸನ್ನವಾಗಿಹನು ದೇವ, ಸರ್ವೇಶ ನಿನ್ನ ಮದ್ಯೆ ಕೊಡುವನಾ ಶೂರ ನಿನಗೆ ರಕ್ಷಣೆ ಹರ್ಷಾನಂದಗೊಳ್ಳುವನು ನಿನ್ನ ವಿಷಯದಲ್ಲಿ ಪುನಶ್ಚೇತನಗೊಳಿಸುವನು ನಿನ್ನನು ಪ್ರಶಾಂತ ಪ್ರೀತಿಯಲ್ಲಿ ಗಾನಗೀತೆಗಳಿಂದ ತೋಷಿಸುವನು ನಿನ್ನಲ್ಲಿ ಹಬ್ಬಹುಣ್ಣಿಮೆಗಳ ತರದಲ್ಲಿ. ತಡೆದುಬಿಡುವನು ಸರ್ವವಿನಾಶವನ್ನು ದೂರಮಾಡುವನು ನಿನ್ನಿಂದ ನಿಂದೆ ಅಪಮಾನವನ್ನು.

ಯೆಶಾಯ: 12:2-3, 4, 5-6
ಶ್ಲೋಕ: ಸಿಯೋನಿನ ನಿವಾಸಿಗಳೇ ಹಾಡಿರಿ, ಮಾಡಿರಿ ಭಜನ ನಿಮ್ಮ ಮಧ್ಯಯಿರುವ ಆ ಘನವಂತನ, ಇಸ್ರಯೇಲಿನಾ ಸ್ವಾಮಿ ಪರಮ ಪಾವನ

ಎರಡನೇ ವಾಚನ: ಫಿಲಿಪ್ಪಿಯರಿಗೆ 4:4-7

ಪ್ರಭುವಿನಲ್ಲಿ ನೀವು ಸತತವೂ ಆನಂದಿಸಿರಿ. ಆನಂದಿಸ ಬೇಕೆಂದು ಮತ್ತೆ ಒತ್ತಿ ಹೇಳುತ್ತೇನೆ. ನಿಮ್ಮ ಸಹನೆ, ಸಹಾನುಭೂತಿ ಸರ್ವರಿಗೂ ತಿಳಿದಿರಲಿ. ಪ್ರಭುವಿನ ಪುನರಾಗಮನ ಸಮೀಪಿಸಿದೆ. ಯಾವ ವಿಷಯದಲ್ಲೂ ಚಿಂತಿಸದೆ, ನಿಮ್ಮ ಅಗತ್ಯಗಳಿಗಾಗಿ ದೇವರಲ್ಲಿ ಪ್ರಾರ್ಥಿಸಿರಿ. ಪ್ರಾರ್ಥಿಸುವಾಗಲೆಲ್ಲಾ ನಿಮ್ಮಲ್ಲಿ ಕೃತಜ್ಞತಾ ಭಾವ ಇರಲಿ. ಆಗ ಮನುಷ್ಯಗ್ರಹಿಕೆಗೂ ಮೀರಿದ ದೈವಶಾಂತಿಯು ನಿಮ್ಮ ಹೃನ್ಮನಗಳನ್ನು ಕ್ರಿಸ್ತೇಸುವಿನ ಅನ್ಯೋನ್ಯತೆಯಲ್ಲಿ ಸುರಕ್ಷಿತವಾಗಿ ಕಾಪಾಡುವುದು.

ಶುಭಸಂದೇಶ: ಲೂಕ 3:10-18

ಆಗ ಜನಸಮೂಹವು, "ಹಾಗಾದರೆ ನಾವೇನು ಮಾಡಬೇಕು?" ಎಂದು ಕೇಳಲು, "ನಿಮಗೆ ಎರಡು ಅಂಗಿಗಳಿದ್ದರೆ, ಒಂದನ್ನು ಏನೂ ಇಲ್ಲದವನಿಗೆ ಕೊಡಿ; ಅಂತೆಯೇ ಆಹಾರ ಉಳ್ಳವನು ಇಲ್ಲದವನೊಂದಿಗೆ ಹಂಚಿಕೊಳ್ಳಲಿ," ಎಂದು ಉತ್ತರಕೊಟ್ಟನು. ಆನಂತರ ಸುಂಕದವರು ಸಹ ಸ್ನಾನದೀಕ್ಷೆ ಪಡೆಯಲು ಬಂದು, "ಭೋಧಕರೇ, ನಾವೇನು ಮಾಡಬೇಕು?" ಎಂದು ಕೇಳಿದಾಗ, "ಗೊತ್ತು ಮಾಡಿರುವುದಕ್ಕಿಂತ ಹೆಚ್ಚಾಗಿ ಕಿತ್ತುಕೊಳ್ಳಬೇಡಿ," ಎಂದನು. "ನಾವುಮಾಡಬೇಕಾದುದೇನು?" ಎಂದು ಸಿಪಾಯಿಗಳು ಮುಂದೆ ಬಂದು ಪ್ರಶ್ನಿಸಿದಾಗ, "ಬಲಾತ್ಕಾರದಿಂದಾಗಲೀ, ಸುಳ್ಳು ಬೆದರಿಕೆಯಿಂದಾಗಲೀ, ಯಾರನ್ನೂ ಸುಲಿಗೆ ಮಾಡಬೇಡಿ; ನಿಮಗೆ ಬರುವ ಸಂಬಳದಿಂದ ತೃಪ್ತರಾಗಿರಿ," ಎಂದು ಆತ ಉತ್ತರವಿತ್ತನು. "ಈ ಯೊವಾನ್ನನೇ ಎಲ್ಲರು ಎದುರು ನೋಡುತ್ತಾ ಇರುವ ಅಭಿಷಿಕ್ತನಾದ ಲೋಕೋದ್ಧಾರಕ ಆಗಿರಬಹುದೇ" ಎಂದು ಜನರು ತಮ್ಮ ಮನಸ್ಸಿನಲ್ಲೇ ಆಲೋಚಿಸುತ್ತಿದ್ದರು. ಅದಕ್ಕೆ ಉತ್ತರವಾಗಿ ಯೊವಾನ್ನನು, "ನಾನು ನಿಮಗೆ ನೀರಿನಿಂದ ಸ್ನಾನದೀಕ್ಷೆ ಕೊಡುತ್ತಿದ್ದೇನೆ. ಆದರೆನನಗಿಂತಲೂ ಶಕ್ತರೊಬ್ಬರು ಬರುತ್ತಾರೆ. ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಅರ್ಹನಲ್ಲ; ಅವರು ನಿಮಗೆ ಪವಿತ್ರಾತ್ಮ ಅವರಿಂಲೂ ಅಗ್ನಿಯಿಂದಲೂ ದೀಕ್ಷಾಸ್ನಾನ ಕೊಡುವರು. ಅವರ ಕೈಯಲ್ಲಿ ಮೊರವಿದೆ. ತಮ್ಮ ಕಣದಲ್ಲಿಯ ರಾಶಿಯನ್ನು ತೂರಿ, ಗಟ್ಟಿಕಾಳನ್ನು ಮಾತ್ರ ಕಣಜಕ್ಕೆ ತುಂಬುವರು. ಹೊಟ್ಟನ್ನು ಆರಿಸಲಾಗದ ಬೆಂಕಿಯಲ್ಲಿ ಸುಟ್ಟು ಹಾಕುವರು," ಎಂದು ನುಡಿದನು. ಹೀಗೆ ಯೊವಾನ್ನನು ನಾನಾ ವಿಧಗಳಲ್ಲಿ ಪ್ರಭೋಧಿಸುತ್ತಾ ಜನರಿಗೆ ಶುಭಸಂದೇಶವನ್ನು ಸಾರುತ್ತಾ ಇದ್ದನು.

11.12.21 - "ನೀವು ಕಂಡ ಈ ದರ್ಶನವನ್ನು ಯಾರಿಗೂ ಹೇಳಬೇಡಿ,"

ಮೊದಲನೇ ವಾಚನ: ಸಿರಾಖ 48:1-4, 9-11

ಆಮೇಲೆ ಪ್ರವಾದಿ ಎಲೀಯನೆದ್ದನು ಬೆಂಕಿಯಂತೆ ಉರಿಯಿತವನ ನುಡಿ ಪಂಜಿನಂತೆ, ಕ್ಷಾಮವನ್ನು ಬರಮಾಡಿದನಿವನು ಜನರ ಮೇಲೆ ಅವರನ್ನು ಕುಂದಿಸಿದನು ತನ್ನ ರೋಷದಿಂದಲೆ, ಆಕಾಶವನ್ನೇ ಮುಚ್ಚಿಬಿಟ್ಟನು ಸರ್ವೇಶ್ವರನ ಹೆಸರಿನಲ್ಲಿ ಬೆಂಕಿಯಿಳಿಯುವಂತೆ ಮಾಡಿದನು ಮೂರುಸಾರಿ. ಎಲೈ ಎಲೀಯನೇ, ಮಹತ್ಕಾರ್ಯಗಳಲ್ಲಿ ನೀನು  ಎಷ್ಟು ಘನವಂತನಾಗಿದ್ದೆ! ನಿನ್ನಂತೆ ಹೆಚ್ಚಳಪಡುವವರು ಯಾರಿದ್ದಾರೆ? ನೀ ಒಯ್ಯಲ್ಪಟ್ಟೆ ಬೆಂಕಿಯ ಬಿರುಗಾಳಿಯಲ್ಲಿ ಅಗ್ನಿಮಯ ಕುದುರುಗಳೆಳೆದ ರಥದಲ್ಲಿ. ಕೋಪ ರೌದ್ರಕ್ಕೇರುವುದಕ್ಕೆ ಮುಂಚೆ ಅದನ್ನು ಶಾಂತಪಡಿಸುವುದಕ್ಕಾಗಿ ತಂದೆಯ ಹೃದಯವನ್ನು ಮಗನ ಕಡೆಗೆ ತಿರುಗಿಸುವುದಕ್ಕಾಗಿ ಇಸ್ರಯೇಲಿನ ಕುಲಗಳನ್ನು ಯಥಾಸ್ಥಿತಿಗೆ ತರುವುದಕ್ಕಾಗಿ ತಕ್ಕಕಾಲದಲ್ಲಿ ಗದರಿಸುವಾತ ನೀನೆಂದು ಬರೆದಿದೆ ನಿನ್ನ ವಿಷಯವಾಗಿ. ನಿನ್ನನ್ನು ನೋಡುವವರು ಧನ್ಯರು ಪ್ರೀತಿಯಿಂದ ನಿಧನರಾದವರು ಧನ್ಯರು! ಕಾರಣ, ನಾವು ಸಹ ನಿಜವಾಗಿ ಜೀವಿಸುವೆವು.

ಕೀರ್ತನೆ: 80:2, 3, 15-16, 18, 19
ಶ್ಲೋಕ: ಸರ್ವಶಕ್ತನಾದ ದೇವನೇ, ಉದ್ಧರಿಸೆಮ್ಮನು ಬೆಳಗಲಿ ನಿನ್ನ ಮುಖಕಾಂತಿ, ಪಡೆದೆವು ರಕ್ಷಣೆಯನು

ಶುಭಸಂದೇಶ: ಮತ್ತಾಯ 17:9, 10-13

ಅವರೆಲ್ಲರು ಬೆಟ್ಟದಿಂದ ಇಳಿದು ಬರುವಾಗ ಯೇಸು, "ನರಪುತ್ರನು ಸತ್ತು ಪುನರುತ್ಥಾನ ಹೊಂದುವ ತನಕ ನೀವು ಕಂಡ ಈ ದರ್ಶನವನ್ನು ಯಾರಿಗೂ ಹೇಳಬೇಡಿ," ಎಂದು ಆಜ್ಞಾಪಿಸಿದರು. ಶಿಷ್ಯರು, "ಎಲೀಯನೇ ಮೊದಲು ಬರಬೇಕಾಗಿದೆ ಎಂದು ಶಾಸ್ತ್ರಜ್ಞರು ಹೇಳುತ್ತಾರಲ್ಲಾ, ಅದು ಹೇಗೆ?", ಎಂದು ಯೇಸುವನ್ನು ಕೇಳಿದರು ಅದಕ್ಕೆ ಪ್ರತ್ಯುತ್ತರವಾಗಿ ಯೇಸು, "ಎಲೀಯನು ಬಂದು  ಎಲ್ಲವನ್ನೂ ಸಜ್ಜುಗೊಳಿಸುವನು ಎಂಬುದು ನಿಜ, ಆದರೆ ನಾನು ನಿಮಗೆ ಹೇಳುತ್ತೇನೆ; ಎಲೀಯನು ಈಗಾಗಲೇ ಬಂದಾಗಿದೆ; ಜನರು ಆತನನ್ನು ಗುರುತಿಸದೇ ತಮಗೆ ಇಷ್ಟ ಬಂದ ಹಾಗೆ ಹಿಂಸಿಸಿದ್ದೂ ಆಗಿದೆ. ಅಂತೆಯೇ ನರಪುತ್ರನೂ ಅವರ ಕೈಯಿಂದ ಯಾತನೆಯನ್ನು ಅನುಭವಿಸುವನು," ಎಂದರು. ಅವರು ಹೇಳುತ್ತಿರುವುದು ಸ್ನಾನಿಕ ಯೊವಾನ್ನನನ್ನು ಕುರಿತೇ ಎಂದು ಪ್ರೇಷಿತರು ಆಗ ಅರ್ಥಮಾಡಿಕೊಂಡರು.

10.12.21 - "ದೈವಜ್ಞಾನವೇ ನಿಜವಾದ ಜ್ಞಾನ"

 ಮೊದಲನೇ ವಾಚನ ಯೆಶಾಯ 48:17-19

ನಿನ್ನ ಜೀವೋದ್ಧಾರಕನು ಇಸ್ರಯೇಲಿನ ಪರಮಪಾವನನು ಆದ ಸರ್ವೇಶ್ವರಸ್ವಾಮಿಯೆ ನುಡಿದಿಹನು: "ನಿನಗೆ ಕ್ಷೇಮಕರವಾದ ಮಾರ್ಗವನು ಬೋಧಿಸುವವನೂ ನೀ ಹೋಗಬೇಕಾದ ಹಾದಿಯಲಿ ನಡೆಯಿಸುವವನೂ ಆದಂಥ ಸರ್ವೇಶ್ವರಸ್ವಾಮಿ ದೇವರು ನಾನು. ಎಷ್ಟೋ ಚೆನ್ನಾಗಿರುತ್ತಿತ್ತು ನೀ ನನ್ನ ಆಜ್ಞೆಗಳನ್ನು ಪಾಲಿಸಿದ್ದರೆ ಇರುತಿತ್ತು ನಿನಗೆ ಸುಖಶಾಂತಿ ಮಹಾನದಿಯಂತೆ ನಿನ್ನ ಸತ್ಯಸಂಧತೆ ಸಮುದ್ರ ಅಲೆಗಳಂತೆ. ಆಗಣಿತವಾಗಿರುತಿತ್ತು ನಿನ್ನ ಸಂತತಿ ಕಡಲ ಮರಳಿನಂತೆ, ನಿನ್ನ ಕರುಳಿನ ಕುಡಿಗಳು ಉಸುಬಿನ ಅಣುರೇಣುಗಳಂತೆ, ಅವರ ಹೆಸರುಗಳು ಕೆಟ್ಟು ಅಳಿದುಹೋಗುತ್ತಿರಲಿಲ್ಲ ನನ್ನ ಮುಂದೆ."

ಕೀರ್ತನೆ: 1:1-2, 3, 4, 6

ಶ್ಲೋಕ: ನಾನೇ ಜಗಜ್ಯೋತಿ, ನನ್ನನ್ನು ಹಿಂಬಾಲಿಸುವವನು ಕತ್ತಲಲ್ಲಿ ನಡೆಯುವುದಿಲ್ಲ, ಜೀವದಾಯಕ ಜ್ಯೋತಿ ಅವನಲ್ಲಿರುತ್ತದೆ

ಶುಭಸಂದೇಶ: ಮತ್ತಾಯ 11:16-19
"ಈ ಪೀಳಿಗೆಯನ್ನು ನಾನು  ಯಾರಿಗೆ ಹೋಲಿಸಲಿ? ನಾವು ಕೊಳಲನೂದಲು ನೀವು ಕುಣಿದಾಡಲಿಲ್ಲ; ನಾವು ಶೋಕಗೀತೆಗಳ ಹಾಡಲು ನೀವು ಕಣ್ಣೀರಿಡಲಿಲ್ಲ," ಎಂದು ಪೇಟೆಬೀದಿಗಳಲ್ಲಿ ಕುಳಿತು, ಒಬ್ಬರಿಗೊಬ್ಬರು ಕೂಗಾಡುವ ಮಕ್ಕಳನ್ನು ಇವರು ಹೋಲುತ್ತಾರೆ. ಏಕೆಂದರೆ, ಯೊವಾನ್ನನು ಬಂದನು; ಅವನು ಅನ್ನಪಾನೀಯಗಳನ್ನು ಸೇವಿಸಲಿಲ್ಲ. ಅದಕ್ಕೆ "ಇವನಿಗೆ ದೆವ್ವ ಹಿಡಿದಿದೆ" ಎಂದರು. ನರಪುತ್ರನು ಬಂದನು; ಅನ್ನಪಾನೀಯಗಳನ್ನು ಸೇವಿಸಿದನು. ಇವನೊಬ್ಬ ಹೊಟ್ಟೆಬಾಕ, ಕುಡುಕ, ಸುಂಕದವರ ಹಾಗೂ ಪಾಪಿಷ್ಠರ ಗೆಳೆಯ ಎನ್ನುತ್ತಾರೆ. ಆದರೆ ದೈವಜ್ಞಾನವೇ ನಿಜವಾದ ಜ್ಞಾನವೆಂದು ಅದರ ಕಾರ್ಯಗಳಿಂದಲೇ ಸಮರ್ಥಿಸಲಾಗುತ್ತದೆ," ಎಂದರು.

09.12.21 - "ಕೇಳುವುದಕ್ಕೆ ಕಿವಿಯುಳ್ಳವನು ಕೇಳಿಸಿಕೊಳ್ಳಲಿ"

ಮೊದಲನೇ ವಾಚನ: ಯೆಶಾಯ 41:13-20


ನಿನ್ನ ದೇವರಾದ ಸರ್ವೇಶ್ವರ ನಾನೇ, ಭಯಪಡಬೇಡ, ನಿನಗೆ ನಾನೇ ನೆರವಾಗುವೆ ಎಂತಲೇ, ನಿನ್ನ ಕೈ ಹಿಡಿದುಕೊಳ್ಳುವೆ. ಸರ್ವೇಶ್ವರ ಇಂತೆನ್ನುತ್ತಾರೆ: "ಹುಳುವಿನಂತಿರುವ ಯಕೋಬೇ, ಇಸ್ರಯೇಲಿನ ಜನತೆಯೇ, ಭಯಪಡಬೇಡ, ನಾನೇ ನಿನಗೆ ಸಹಾಯಕ, ಇಸ್ರಯೇಲಿನ ಪರಮಪಾವನ ಸ್ವಾಮಿಯೇ ನಿನಗೆ ವಿಮೋಚಕ. ಮಾಡಿರುವೆ ನಿನ್ನನ್ನು ಮಸೆದ ಮೊನೆಹಲ್ಲಿನ ಹೊಸ ಕುಂಟೆಯಂತೆ. ನೀನು ಒಕ್ಕುತ್ತಾ ಪುಡಿಪುಡಿ ಮಾಡುವೆ ಬೆಟ್ಟಗಳನ್ನೆ, ಹೊಟ್ಟು ಧೂಳಾಗಿಸುವೆ ಗುಡ್ಡಗಳನ್ನೆ ನೀನು ತೂರಲು ಅವುಗಳನ್ನು ಕೊಂಡೊಯ್ವದು ಗಾಳಿ, ಚಂಡಮಾರುತವು ಮಾಡುವುದವುಗಳನ್ನು ಚೆಲ್ಲಾಪಿಲ್ಲಿ. ನೀನಾದರೋ ಆನಂದಿಸುವೆ ಸರ್ವೇಶ್ವರ ಸ್ವಾಮಿಯಲಿ. ದೀನದರಿದ್ರರು ನೀರಿಗಾಗಿ ಪರದಾಡುವಾಗ, ಬಾಯಾರಿ ಅವರ ನಾಲಿಗೆ ಒಣಗಿಹೋದಾಗ, ಪ್ರಸನ್ನನಾಗುವೆ ಸರ್ವೇಶ್ವರನಾದ ನಾನೇ. ಇಸ್ರಯೇಲಿನ ದೇವರಾದ ನಾನವರನ್ನು ಕೈಬಿಡುವನೆ? ಹೊರಡಿಸುವೆನು ಬೋಳುಗುಡ್ಡಗಳಲ್ಲಿ ನದಿಗಳನು, ತಗ್ಗುತಿಟ್ಟುಗಳಲ್ಲಿ ಒರತೆಗಳನು, ಮಾರ್ಪಡಿಸುವೆನು ಕೆರೆಯಾಗಿ ಅರಣ್ಯವನು, ಬುಗ್ಗೆಗಳಾಗಿ ಮರುಭೂಮಿಯನು, ನೆಡುವೆನು ಅಡವಿಯಲಿ ದೇವದಾರು, ಕಸ್ತೂರಿ, ಜಾಲಿ, ಸುಗಂಧ ಓಲೀವ್ ಮರಗಳನು; ತೋಪಾಗಿ ಬೆಳೆಸುವೆನು ಅರಣ್ಯದೊಳು ತುರಾಯಿ, ತಪಸಿ, ತಿಲಕ ವೃಕ್ಷಗಳನು. ಇದನು ಕುರಿತು ಗ್ರಹಿಸಿಕೊಳ್ಳುವರು ಜನರು ಮನಸಾರೆ, ನುಡಿವರಾಗ, ಇದನ್ನು ಮಾಡಿದ ಹಸ್ತವು ಸರ್ವಶ್ವರಸ್ವಾಮಿಯದೇ, ಇದನ್ನು ಸೃಷ್ಟಿಸಿದಾತ ಇಸ್ರಯೇಲಿನ ಪರಮಪಾವನ ಸ್ವಾಮಿಯೇ."

ಕೀರ್ತನೆ: 144:1, 9, 10-12, 13
ಶ್ಲೋಕ: ಪ್ರಭು ದಯಾನಿಧಿ, ಕೃಪಾಸಾಗರನು ಸಹನಶೀಲನು, ಪ್ರೀತಿಪೂರ್ಣನು

ಶುಭಸಂದೇಶ: ಮತ್ತಾಯ 11:11-15

ಯೇಸು ಜನಸಮೂಹಕ್ಕೆ ಯೊವಾನ್ನನನ್ನು ಕುರಿತು ಹೀಗೆಂದರು. ಮಾನವನಾಗಿ ಜನಿಸಿದ್ದವರಲ್ಲಿ ಸ್ನಾನಿಕ ಯೆವಾನ್ನನಿಗಿಂತ ಶ್ರೇಷ್ಠನಾರೂ ಹುಟ್ಟಿಲ್ಲ! ಎಂದು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ. ಆದರೂ ಸ್ವರ್ಗಸಾಮ್ರಾಜ್ಯದಲ್ಲಿ ಕನಿಷ್ಠನಾದವನು ಕೂಡ ಅವನಿಗಿಂತ ಶ್ರೇಷ್ಟನೆ ಸರಿ. ಯೊವಾನ್ನನು ತನ್ನ ಸಂದೇಶವನ್ನು ಸಾರಿದಂದಿನಿಂದ ಇಂದಿನವರಿಗೆ ಸ್ವರ್ಗ ಸಾಮ್ರಾಜ್ಯವು ನೂಕುನುಗ್ಗಲಿಗೆ ಗುರಿಯಾಗಿದೆ. ಬಲಪ್ರಯೋಗ ಮಾಡುವವರು ಅದನ್ನು ಸ್ವಾಧೀನಪಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಯೊವಾನ್ನನ ಕಾಲದ ತನಕ ಧರ್ಮಶಾಸ್ತ್ರ ಹಾಗೂ ಎಲ್ಲ ಪ್ರವಾದಿಗಳು ದೇವರ ಸಾಮ್ರಾಜ್ಯವನ್ನು ಕುರಿತು ಪ್ರವಾದನೆ ಮಾಡಿದರು. ಅವರ ಹೇಳಿಕೆಯನ್ನು ನಂಬಲು ನಿಮಗಿಷ್ಟವಿದ್ದರೆ ಈಗೋ, ಬರತಕ್ಕ ಎಲೀಯನು ಈ ಯೊವಾನನ್ನೇ. ಕೇಳುವುದಕ್ಕೆ ಕಿವಿಯುಳ್ಳವನು ಕೇಳಿಸಿಕೊಳ್ಳಲಿ.

08.12.21 - "ಇಗೋ, ನಾನು ದೇವರ ದಾಸಿ, ನೀವು ಹೇಳಿದಂತೆ ನನಗಾಗಲಿ,"

ಮೊದಲನೇ ವಾಚನ: ಆದಿಕಾಂಡ 3:9-15, 20


ಸರ್ವೇಶ್ವರನಾದ ದೇವರು, "ಎಲ್ಲಿರುತ್ತೀಯಾ?" ಎಂದು ಆದಾಮನನ್ನು ಕೂಗಿ ಕೇಳಿದರು. ಅದಕ್ಕೆ ಅವನು, "ತಾವು ತೋಟದಲ್ಲಿ ಸಂಚರಿಸುವ ಸಪ್ಪಳವು ಕೇಳಿಸಿತು; ಬೆತ್ತಲೆಯಾಗಿದ್ದೇನಲ್ಲಾ ಎಂದು ಹೆದರಿ ಅವಿತುಕೊಂಡೆ," ಎಂದನು. "ನೀನು ಬೆತ್ತಲೆಯಾಗಿರುವಿಯೆಂದು ನಿನಗೆ ತಿಳಿಸಿದವರು ಯಾರು?" ಎಂದು ಕೇಳಿದರು. ಅದಕ್ಕೆ ಆದಾಮನು, "ನನ್ನ ಜೊತೆಯಲ್ಲಿ ಇರಲು ತಾವು ಕೊಟ್ಟ ಮಹಿಳೆ, ಆ ಮರದ ಹಣ್ಣನ್ನು ನನಗೆ ಕೊಟ್ಟಳು: ನಾನು ತಿಂದೆ," ಎಂದನು. ಸರ್ವೇಶ್ವರನಾದ ದೇವರು ಈ ಮಹಿಳೆಯನ್ನು, "ಇದೇನು ನೀನು ಮಾಡಿದ್ದು?" ಎಂದು ಕೇಳಲು ಆಕೆ, "ಸರ್ಪವು ನನ್ನನ್ನು ವಂಚಿಸಿ ತಿನ್ನುವಂತೆ ಮಾಡಿತು," ಎಂದು ಉತ್ತರಕೊಟ್ಟಳು. ಆಗ ಸರ್ವೇಶ್ವರನಾದ ದೇವರು, ಇಂತೆಂದರು ಸರ್ಪಕ್ಕೆ: "ಈ ಪರಿಯ ಕೃತ್ಯವನ್ನು ನೀನೆಸಗಿದುದರಿಂದ ಶಾಪಗ್ರಸ್ತನಾದೆ ಎಲ್ಲ ಪಶುಪ್ರಾಣಿಗಳಿಗಿಂತ: ಹರಿದಾಡುವೆ ಹೊಟ್ಟೆಯ ಮೇಲೆ ಇಂದಿನಿಂದ ತಿನ್ನುವೆ ಮಣ್ಣನ್ನೇ ಜೀವಮಾನ ಪರಿಯಂತ. ಹಗೆತನವಿರುಸುವೆನು ನಿನಗೂ ಈ ಮಹಿಳೆಗೂ ನಿನ್ನ ಸಂತಾನಕ್ಕೂ ಇವಳ ಸಂತಾನಕ್ಕೂ. ಜಜ್ಜುವುದಿವಳ ಸಂತಾನ ನಿನ್ನ ತಲೆಯನ್ನು ಕಚ್ಚುವೆ ನೀನಾ ಸಂತಾನದ ಹಿಮ್ಮಡಿಯನು." ಆದಾಮನು ತನ್ನ ಹೆಂಡತಿಗೆ "ಹವ್ವ" ಎಂದು ಹೆಸರಿಟ್ಟನು. ಏಕೆಂದರೆ ಮಾನವಕುಲಕ್ಕೆ ಮೂಲಮಾತೆ ಆಕೆ.

ಕೀರ್ತನೆ:98:2-3, 3-4
ಶ್ಲೋಕ: ಹಾಡಿರಿ ಪ್ರಭುವಿಗೆ ಹೊಸಗೀತೆಯೊಂದನು ಎಸಗಿಹನಾತನು ಪವಾಡಕಾರ್ಯಗಳನು

ಎರಡನೇ ವಾಚನ: ಎಫೆಸಿಯರಿಗೆ 1:3-6, 11-12

ನಮ್ಮ ಪ್ರಭು ಯೇಸುಕ್ರಿಸ್ತರ ಪಿತನಾದ ದೇವರಿಗೆ ಸ್ತುತಿ ಸಲ್ಲಲಿ! ಪಿತದೇವರು ಸ್ವರ್ಗಲೋಕದಿಂದ ಎಲ್ಲಾ ಬಗೆಯ ಆಧ್ಯಾತ್ಮಿಕ ಆಶೀರ್ವಾದಗಳನ್ನು ಕ್ರಿಸ್ತ ಯೇಸುವಿನಲ್ಲಿ ನಮಗೆ ಅನುಗ್ರಹಿಸಿದ್ದಾರೆ. ಜಗತ್ತು ಸೃಷ್ಟಿಯಾಗುವ ಮೊದಲೇ ದೇವರು ಕ್ರಿಸ್ತಯೇಸುವಿನಲ್ಲಿ ನಮ್ಮನ್ನು ತಮ್ಮವರನ್ನಾಗಿ ಆರಿಸಿಕೊಂಡರು. ಹೀಗೆ ಅವರ ಸನ್ನಿಧಿಯಲ್ಲಿ ನಾವು ನಿಷ್ಕಳಂಕರೂ ನಿರ್ದೋಷಿಗಳೂ ಆಗಿರಬೇಕೆಂದು ಇಚ್ಛಿಸಿದರು. ನಮ್ಮ ಮೇಲಿನ ಪ್ರೀತಿಯಿಂದಾಗಿ ದೇವರು ಯೇಸುಕ್ರಿಸ್ತರ ಮೂಲಕ ನಮ್ಮನ್ನು ತಮ್ಮ ಮಕ್ಕಳನ್ನಾಗಿಸಿಕೊಳ್ಳಲು ಆಗಲೇ ನಿರ್ಧರಿಸಿದ್ದರು. ಇದು ಅವರ ಸಂಕಲ್ಪ ಹಾಗೂ ಚಿತ್ತವಾಗಿತ್ತು. ತಮ್ಮ ಪ್ರೀತಿಯ ಪುತ್ರನಲ್ಲೇ ಅವರು ನಮಗೆ ಉಚಿತವಾಗಿ ಅನುಗ್ರಹಿಸಿರುವ ಅತಿಶಯ ವರಪ್ರಸಾದಕ್ಕಾಗಿ ಅವರಿಗೆ ಸ್ತುತಿ ಸಲ್ಲಿಸೋಣ. ದೈವಯೋಜನೆಯಂತೆಯೇ ಸಕಲವೂ ಸಂಭವಿಸುತ್ತದೆ. ದೇವರು ಆದಿಯಲ್ಲೇ ಸಂಕಲ್ಪಿಸಿದ್ದಂತೆ ತಮ್ಮ ಚಿತ್ತಕ್ಕನುಗುಣವಾಗಿ ಕ್ರಿಸ್ತ ಯೇಸುವಿನ ಅನ್ಯೋನ್ಯತೆಯಲ್ಲಿ ನಮ್ಮನ್ನು ತಮ್ಮವರನ್ನಾಗಿ ಆರಿಸಿಕೊಂಡರು. ಆದಕಾರಣ ಯೇಸುಕ್ರಿಸ್ತರಲ್ಲಿ ಮೊತ್ತಮೊದಲು ನಿರೀಕ್ಷೆಯನ್ನಿರಿಸಿದ ನಾವು ದೇವರ ಮಹಿಮೆಯನ್ನು ಸ್ತುತಿಸಿ ಹಾಡಬೇಕು.

ಶುಭಸಂದೇಶ: ಲೂಕ 1:26-38


ಎಲಿಜಬೇತಳು ಗರ್ಭಿಣಿಯಾದ ಆರನೇ ತಿಂಗಳಲ್ಲಿ, ದೇವರು ಗಬ್ರಿಯೇಲ್ ದೂತನನ್ನು ಗಲಿಲೇಯ ಪ್ರಾಂತ್ಯದ ನಜರೇತೆಂಬ ಊರಿನಲ್ಲಿದ್ದ ಒಬ್ಬ ಕನ್ನಿಕೆಯಲ್ಲಿಗೆ ಕಳುಹಿಸಿದರು. ಆಕೆಗೆ ದಾವೀದರಸನ ವಂಶಜನಾದ ಜೋಸೆಫನೊಂದಿಗೆ ನಿಶ್ಚಿತಾರ್ಥವಾಗಿತ್ತು. ಆಕೆಯ ಹೆಸರು ಮರಿಯ. ದೇವದೂತನು ಆಕೆಯ ಬಳಿಗೆ ಬಂದು "ದೈವಾನುಗ್ರಹಭರಿತಳೇ, ನಿನಗೆ ಶುಭವಾಗಲಿ; ಸರ್ವೇಶ್ವರ ನಿನ್ನೊಡನೆ ಇದ್ದಾರೆ!" ಎಂದನು. ಇದನ್ನು ಕೇಳಿದ ಮರಿಯಳು ತಬ್ಬಿಬ್ಬಾದಳು. "ಇದೆಂಥ ಶುಭಾಶಯ" ಎಂದು ಅವಳು ಯೋಚಿಸತೊಡಗಿದಳು. ದೂತನು ಆಕೆಗೆ, "ಮರಿಯಾ, ನೀನು ಅಂಜಬೇಕಾಗಿಲ್ಲ; ದೇವರ ಅನುಗ್ರಹ ನಿನಗೆ ಲಭಿಸಿದೆ; ಇಗೋ, ನೀನು  ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ ಆತನಿಗೆ "ಯೇಸು" ಎಂಬ ಹೆಸರಿಡಬೇಕು; ಆತನು ಮಹಾಪುರುಷನಾಗುವನು; ಪರಾತ್ಪರ ದೇವರ ಪುತ್ರ ಎನಿಸಿಕೊಳ್ಳುವನು. ಪಿತಾಮಹ ದಾವೀದರಸನ ಸಿಂಹಾಸನವನ್ನು ಸರ್ವೇಶ್ವರನಾದ ದೇವರು ಆತನಿಗೆ ಕೊಡುವರು, ಯಕೋಬನ ವಂಶವನ್ನು ಅವನು ಚಿರಕಾಲ ಆಳುವನು; ಆತನ ರಾಜ್ಯಭಾರಕ್ಕೆ ಅಂತ್ಯವೇ ಇರದು," ಎಂದನು. ಅದಕ್ಕೆ ಮರಿಯಳು, "ಇದು ಆಗುವುದಾದರೂ ಹೇಗೆ? ನನಗೆ ಯಾವ ಪುರುಷನ ಸಂಸರ್ಗವೂ  ಇಲ್ಲವಲ್ಲಾ?" ಎಂದು ವಿಚಾರಿಸಿದಳು. ದೂತನು ಪ್ರತ್ಯುತ್ತರವಾಗಿ, "ಪವಿತ್ರಾತ್ಮ ನಿನ್ನ ಮೇಲೆ ಬರುವರು; ಪರಾತ್ಪರ ದೇವರ ಶಕ್ತಿ ನಿನ್ನನ್ನು ಆವರಿಸುವುದು; ಈ ಕಾರಣದಿಂದ, ನಿನ್ನಲ್ಲಿ ಹುಟ್ಟುವ ಆ ಪವಿತ್ರ ಶಿಶು "ದೇವರ ಪುತ್ರ ಎನಿಸಿಕೊಳ್ಳುವನು. ನಿನ್ನ ಸಂಬಂಧಿಕಳಾದ ಎಲಿಜಬೇತಳ ವಿಷಯವನ್ನು ಕೇಳು; ಆಕೆ ತನ್ನ ಮುಪ್ಪಿನಲ್ಲೂ ಒಬ್ಬ ಮಗನನ್ನು ಹೆರಲಿದ್ದಾಳೆ; ಬಂಜೆ ಎನಿಸಿಕೊಂಡಿದ್ದ ಆಕೆ ಈಗ ಆರು ತಿಂಗಳ ಗರ್ಭಿಣಿ. ದೇವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ," ಎಂದನು. ಆಗ ಮರಿಯಳು, "ಇಗೋ, ನಾನು ದೇವರ ದಾಸಿ, ನೀವು ಹೇಳಿದಂತೆ ನನಗಾಗಲಿ," ಎಂದಳು.  ದೇವದೂತನು ಆಕೆಯನ್ನು ಬೀಳ್ಕೊಟ್ಟು ಅದೃಶ್ಯನಾದನು.


07.12.21 - "ಸಿಕ್ಕಿದ ಈ ಒಂದು ಕುರಿಗಾಗಿ ಅವನು ಹೆಚ್ಚು ಆನಂದಪಡುತ್ತಾನೆ"

ಮೊದಲನೇ ವಾಚನ: ಯೆಶಾಯ 40:1-11

ನಿಮ್ಮ ದೇವರು ಇಂತೆನ್ನುತ್ತಾರೆ: "ಸಂತೈಸಿ, ನನ್ನ ಜನರನ್ನು ಸಂತೈಸಿರಿ. ಜೆರುಸಲೇಮಿನೊಡನೆ ಪ್ರೀತಿಯಿಂದ ಮಾತನಾಡಿ; ಅದರ ಊಳಿಗತನ ಮುಗಿಯಿತೆನ್ನಿ: ತಕ್ಕ ಪ್ರಾಯಶ್ಚಿತ್ತವಾಗಿದೆ ಅದು ಗೈದ ದೋಷಕ್ಕೆ ಸರ್ವೇಶ್ವರಸ್ವಾಮಿಯಿಂದಲೇ ಅದರ ಎಲ್ಲಾ ಪಾಪಕೃತ್ಯಗಳಿಗೆ ಇಮ್ಮಡಿ ಶಿಕ್ಷೆಯಾಗಿದೆ ಎಂದು ಕೂಗಿ ಹೇಳಿ ಆ ನಗರಿಗೆ" ಇಗೋ, ಈ ವಾಣಿಯನ್ನು. ಕೇಳಿ: "ಸರ್ವೇಶ್ವರಸ್ವಾಮಿಗೆ ಮಾರ್ಗವನ್ನು ಸಿದ್ಧ ಮಾಡಿ ಅರಣ್ಯದಲ್ಲಿ ನಮ್ಮ ದೇವರಿಗೆ ರಾಜಮಾರ್ಗವನ್ನು ಸರಾಗ ಮಾಡಿ ಅಡವಿಯಲ್ಲಿ. ತುಂಬಬೇಕು ಎಲ್ಲ ಹಳ್ಳಕೊಳ್ಳಗಳನ್ನು ಮಟ್ಟಮಾಡಬೇಕು ಎಲ್ಲ ಬೆಟ್ಟಗುಡ್ಡಗಳನ್ನು. ನೆಲಸಮ ಮಾಡಬೇಕು ದಿಬ್ಬ ದಿಣ್ಣೆಗಳನ್ನು. ಸಮತಲಗೊಳಿಸಬೇಕು ತಗ್ಗುಮುಗ್ಗಾದ ಸ್ಥಳಗಳನ್ನು. ಗೋಚರವಾಗುವುದಾಗ ಸರ್ವೇಶ್ವರಸ್ವಾಮಿಯ ಮಹಿಮೆಯು, ಮಾನವರೆಲ್ಲರೂ ಅದನ್ನು ಕಾಣುವರು ಒಟ್ಟಿಗೆ, ಸರ್ವೇಶ್ವರಸ್ವಾಮಿಯೇ ಇದನ್ನು ಬಾಯಾರೆ ನುಡಿದಿದ್ದಾರೆ." ಆ ವಾಣಿ ಮತ್ತೆ ಕೇಳಿಸಿತು: "ಗಟ್ಟಿಯಾಗಿ ಕೂಗು" ಎಂದಿತು. ನಾನೇನೆಂದು ಕೂಗಲಿ ಎನ್ನಲು ಈ ಪರಿಯಾಗಿ ಉತ್ತರಿಸಿತು: "ನರಮಾನವರೆಲ್ಲ ಬರೀ ಹುಲ್ಲಿನಂತೆ ಅವರ ಸೊಬಗೆಲ್ಲಾ ಬಯಲಿನ ಕುಸುಮದಂತೆ. ಪ್ರಭುವಿನ ಶ್ವಾಸ ಬೀಸಲು ಒಣಗಿ ಹೋಗುವುದಾ ಹುಲ್ಲು ಬಾಡಿ ಹೋಗುವುದಾ ಹೂವು ಮಾನವರೆಲ್ಲ ಹುಲ್ಲೇ ಹುಲ್ಲು, ಒಣಗಿ ಹೋಗುವುದಾ ಹುಲ್ಲು, ಬಾಡಿ ಹೋಗುವುದಾ ಹೂವು, ನಮ್ಮ ದೇವರ ನುಡಿಯಾದರೋ ಇರುವುದು ಚಿರಕಾಲವು." ಪರ್ವತವನ್ನೇರು ಶುಭಸಂದೇಶಕಳಾದ ಸಿಯೋನೇ, ಧ್ವನಿಯೇರಿಸು, ನಿರ್ಭಯದಿಂದ ಏರಿಸು "ಇಗೋ, ನಿಮ್ಮ ದೇವರು" ಎಂದು ಜೂದ ನಗರಗಳಿಗೆ ಸಾರು. ಇಗೋ, ಬರುತಿಹನು ಸ್ವಾಮಿ ಸರ್ವೇಶ್ವರ ಶೂರನಂತೆ ರಾಜ್ಯವಾಳುವನು ತನ್ನ ಭುಜಬಲದಿಂದಲೇ ಇಗೋ,  ಶ್ರಮಕ್ಕೆ ತಕ್ಕ ಪ್ರತಿಫಲ ಆತನ ಕೈಯಲ್ಲಿದೆ ಆತ ಜಯಿಸಿದ ಪರಿವಾರ ಆತನ ಮುಂದಿದೆ. ಆತ ಮೇಯಿಸುವನು ತನ್ನ ಮಂದೆಯನ್ನು ಕುರುಬನ ಹಾಗೆ ಮರಿಗಳನ್ನು ಕೈಗೆ ಎತ್ತಿಕೊಳ್ಳುವನು, ಅಪ್ಪಿಕೊಳ್ಳುವನು ಎದೆಗೆ ನಡೆಸುವನು ಹಾಲೂಡಿಸುವ ಕುರಿಗಳನ್ನು ಮೆಲ್ಲಗೆ.

ಕೀರ್ತನೆ: 96:1-2, 3, 10, 11-12, 13
ಶ್ಲೋಕ: ಇಗೋ, ಸರ್ವೇಶ್ವರಸ್ವಾಮಿ ಬರುತಿಹನು ಶೂರನಂತೆ

ಹೊಸಗೀತೆಯನು ಹಾಡಿರಿ ಪ್ರಭುವಿಗೆ|
ವಿಶ್ವವೆಲ್ಲವು ಹಾಡಲಿ ಆತನಿಗೆ||
ಪ್ರಭುವಿಗೆ ಹಾಡಿರಿ, ಆತನ ನಾಮವನು ಕೊಂಡಾಡಿರಿ|
ಆತನ ಮುಕ್ತಿಮಾರ್ಗವನು ಪ್ರತಿನಿತ್ಯವೂ ಸಾರಿರಿ||

ಪ್ರಸಿದ್ಧಪಡಿಸಿರಿ ಆತನ ಘನತೆಯನು ರಾಷ್ಟ್ರಗಳಿಗೆ|
ಆತನದ್ಭುತ ಕಾರ್ಯಗಳನು ಸಕಲ ಜನಾಂಗಗಳಿಗೆ||
ಪ್ರಭು ರಾಜನೆಂದು ಸಾರಿರಿ ರಾಷ್ಟ್ರಗಳಿಗೆ|
ನ್ಯಾಯತೀರ್ಪು ಕೊಡುವನು ಜನಾಂಗಕೆ||

ಹರ್ಷಿಸಲಿ ಆಕಾಶವು, ಸಂತೋಷಿಸಲಿ ಭೂಲೋಕವು|
ಗರ್ಜಿಸಲಿ ಸಮುದ್ರವು ಮತ್ತು ಅದರೊಳಿರುವುದೆಲ್ಲವು||
ಉಲ್ಲಾಸಿಸಲಿ ಹೊಲಗದ್ದೆಗಳು, ಪೈರುಪಚ್ಚೆಗಳು|
ಹರ್ಷಧ್ವನಿಗೈಯಲಿ ಕಾಡಿನ ಫಲವೃಕ್ಷಗಳು||

ಪ್ರಭು ಧರೆಗೆ ನ್ಯಾಯತೀರಿಸಲು|
ಬಂದೇ ಬರುವನು ಖರೆಯಾಗಿ||
ಜಗಕು ಜನತೆಗು ತೀರ್ಪಿಡುವನು|
ನೀತಿ ನಿಯಮಾನುಸಾರವಾಗಿ||

ಘೋಷಣೆ:
ಅಲ್ಲೆಲೂಯ, ಅಲ್ಲೆಲೂಯ!
ಸ್ವಾಮಿ ಸರ್ವೇಶ್ವರಾ, ತಡಮಾಡಬೇಡಿ | ನಿಮ್ಮ ಜನರ ಪಾಪಗಳನ್ನು ಕ್ಷಮಿಸಿರಿ ||
ಅಲ್ಲೆಲೂಯ!

ಶುಭಸಂದೇಶ: ಮತ್ತಾಯ 18:12-14


"ನಿಮ್ಮಲ್ಲಿ ಒಬ್ಬನಿಗೆ ನೂರು ಕುರಿಗಳು ಇವೆಯೆನ್ನೋಣ, ಅವುಗಳಲ್ಲಿ ಒಂದು ಕುರಿ ತಪ್ಪಿಸಿಕೊಂಡು ಹೋಯಿತೆಂದು ಇಟ್ಟುಕೊಳ್ಳಿ, ಆಗ ನಿಮಗೇನು ಅನ್ನಿಸುತ್ತದೆ? ಅವನು ಉಳಿದ ತೊಂಭತ್ತೊಂಭತ್ತು ಕುರಿಗಳನ್ನು ಗುಡ್ಡದಲ್ಲೇ ಬಿಟ್ಟು, ತಪ್ಪಿಸಿಕೊಂಡು ಹೋದ ಆ ಒಂದು ಕುರಿಯನ್ನು ಹುಡುಕಿಕೊಂಡು ಹೋಗುವುದಿಲ್ಲವೇ? ಅದು ಸಿಕ್ಕಿತು ಅನ್ನಿ; ತಪ್ಪಿಸಿಕೊಳ್ಳದ ಈ ತೊಂಭತ್ತೊಂಭತ್ತು ಕುರಿಗಳಿಗಿಂತ ಸಿಕ್ಕಿದ ಈ ಒಂದು ಕುರಿಗಾಗಿ ಅವನು ಹೆಚ್ಚು ಆನಂದಪಡುತ್ತಾನೆ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಅಂತೆಯೇ, ಈ ಚಿಕ್ಕವರಲ್ಲಿ ಒಬ್ಬನು ಕೂಡ ಕಳೆದುಹೋಗಬಾರದು; ಇದೇ ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತ," ಎಂದರು ಯೇಸುಸ್ವಾಮಿ.

06.12.21 - 'ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ," ಎನ್ನುವುದು ಸುಲಭವೋ ಅಥವಾ 'ಎದ್ದು ನಡೆ' ಎನ್ನುವುದು ಸುಲಭವೋ?

ಮೊದಲನೇ ವಾಚನ: ಯೆಶಾಯ  35:1-10

ಆನಂದಿಸಲಿ ಅರಣ್ಯವೂ ಮರಭೂಮಿಯೂ, ಹೂಗಳಂತೆ ಅರಳಿ ಹರ್ಷಿಸಲಿ ಒಣನೆಲವು. ಉಲ್ಲಾಷಿಸಲಿ ಅದು ಹುಲುಸಾಗಿ ಹೂಬಿಟ್ಟು, ಹೌದು, ಸಂತಸ ಸಂಗೀತ ಹಾಡುವಷ್ಟು. ದೊರಕಲಿ ಅದಕ್ಕೆ ಲೆಬನೋನಿನ ಮಹಿಮೆಯು; ಕರ್ಮೆಲಿನ ಮತ್ತು ಶಾರೋನಿನ ವೈಭವವು.  ಕಾಣುವುವು ಸರ್ವೇಶ್ವರನ ಮಹಿಮೆಯನು, ನೋಡುವುವು ಇವೆಲ್ಲ ನಮ್ಮ ದೇವರ ವೈಭವವನ್ನು. ಜೋಲುಬಿದ್ದ ಕೈಗಳನ್ನು ಬಲಗೊಳಿಸಿರಿ. ನಡುಗುವ ಕಾಲುಗಳನ್ನು ದೃಢಗೊಳಿಸಿರಿ. ಚಂಚಲ ಹೃದಯರಿಗೆ ಹೀಗೆಂದು ಹೇಳಿ: "ಭಯಪಡಬೇಡಿ, ಎದೆಗುಂದಬೇಡಿ, ಬರುವನು ಆ ದೇವನು ಮುಯ್ಯಿತೀರಿಸಲು; ಬರುವನು ಆ ದೇವನು ಪ್ರತೀಕಾರವೆಸಗಲು; ತಾನೇ ಬರುವನು ನಿಮ್ಮನ್ನು ರಕ್ಷಿಸಲು." ಕುರುಡರ ಕಣ್ಣು ಕಾಣುವುದಾಗ, ಕಿವುಡರ ಕಿವಿ ತೆರೆಯುವುದಾಗ, ಜಿಗಿಯುವನು ಕುಂಟನು ಜಿಂಕೆಯಂತೆ ಹಾಡುವುದು ಮೂಕನ ನಾಲಿಗೆ ಹರ್ಷಗೀತೆ, ಒರತೆಗಳು ಒಡೆಯುವುವು ಅರಣ್ಯದಲ್ಲಿ ನದಿಗಳು ಹುಟ್ಟಿಹರಿಯುವುವು ಒಣನೆಲದಲ್ಲಿ. ಸರೋವರವಾಗುವುದಾ ಉರಿಗಾಡು ಬುಗ್ಗೆಯಾಗುವುದಾ ಬುವಿ ಬರಡು, ನರಿಗಳು ನಿವಾಸಿಸುವ ಗುಹೆಗಳು ಆಗುವುವು ಹುಲುಸಾದ  ಹುಲ್ಲುಗಾವಲುಗಳು. ಅಲ್ಲಿರುವುದೊಂದು ರಾಜಮಾರ್ಗ ಅದೆನಿಸಿಕೊಳ್ಳುವುದು ಪವಿತ್ರಮಾರ್ಗ ನಡೆಯನು ಅದರೊಳು ಪಾಪಾತ್ಮನು; ಅದಾಗುವುದು ಜನರಿಗೆ ಮೀಸಲು ದಾರಿತಪ್ಪನು ಅಲ್ಲ ನಡೆಯುವ ಮೂಢನು. ಅಲ್ಲಿರದು ಸಿಂಹ ಸಿಂಹಿಣಿ, ಅಲ್ಲಿ ಸೇರದು ಕ್ರೂರ ಪ್ರಾಣಿ, ಕಾಣಸಿಗದಲ್ಲಿ ಇದಾವ ಹಾನಿ, ಪಾಪವಿಮುಕ್ತರೇ ನಡೆವರಲ್ಲಿ. ಹಿಂದಿರುಗುವರು ಸರ್ವೇಶ್ವರನಿಂದ ವಿಮೋಚನೆ ಪಡೆದವರು ಜಯಜಯಕಾರದೊಂದಿಗೆ ಸಿಯೋನನು ಸೇರುವರು. ನಿತ್ಯಾನಂದ ಸುಖವಿರುವುದು ಕಿರೀಟಪ್ರದವಾಗಿ ಸಿಗುವುದವರಿಗೆ ಹರ್ಷಾನಂದದ ಸವಿ ತೊಲಗುವುದು ದುಃಖ ದುಗುಡದ ಕಹಿ.

ಕೀರ್ತನೆ: 85:9, 10, 11-12, 13-14
ಶ್ಲೋಕ: ಅಗೋ, ದೇವನು ತಾನೇ ಬರುವನು ನಿಮ್ಮನ್ನು ರಕ್ಷಿಸಲು.

ಶುಭಸಂದೇಶ: ಲೂಕ 5:17-26

ಒಮ್ಮೆ ಯೇಸುಸ್ವಾಮಿ ಬೋಧನೆ ಮಾಡುತ್ತಾ ಇದ್ದಾಗ, ಫರಿಸಾಯರೂ ಧರ್ಮಶಾಸ್ತ್ರಜ್ಞರೂ ಅವರ ಹತ್ತಿರ ಕುಳಿತ್ತಿದ್ದರು. ಇವರು ಗಲಿಲೇಯ ಹಾಗೂ ಜುದೇಯ ಪ್ರಾಂತ್ಯದ ಊರೂರುಗಳಿಂದಲೂ ಜೆರುಸಲೇಮ್ ಪಟ್ಟಣದಿಂದಲೂ ಬಂದಿದ್ದರು. ಗುಣಪಡಿಸುವಂತಹ ದೈವಶಕ್ತಿ ಯೇಸುವಿನಲ್ಲಿತ್ತು. ಆಗ ಕೆಲವರು ಒಬ್ಬ ಪಾರ್ಶ್ವವಾಯು ರೋಗಿಯನ್ನು ಹಾಸಿಗೆಯ ಸಮೇತ ಹೊತ್ತುಕೊಂಡು ಅಲ್ಲಿಗೆ ಬಂದರು. ರೋಗಿಯನ್ನು ಒಳಕ್ಕೆ ತೆಗೆದುಕೊಂಡು ಹೋಗಿ ಯೇಸುವಿನ ಮುಂದೆ ಇಡಬೇಕೆಂದು ಪ್ರಯತ್ನಿಸಿದರು. ಆದರೆ ಜನಸಂದಣಿಯ ನಿಮಿತ್ತ ದಾರಿ ಮಾಡಲಾಗಲಿಲ್ಲ. ಆಗ ಅವರು ಮನೆಯ ಮೇಲೆ ಹತ್ತಿ , ಹೆಂಚುಗಳನ್ನು ತೆಗೆದು, ಅಲ್ಲಿಂದ ರೋಗಿಯನ್ನು ಹಾಸಿಗೆಯ ಸಹಿತ ಯೇಸುವಿನ ಮುಂದೆ ಇಳಿಸಿದರು. ಯೇಸು ಅವರ ವಿಶ್ವಾಸವನ್ನು ಮೇಚ್ಚಿ,  "ತಮ್ಮಾ, ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ," ಎಂದರು. ಇದನ್ನು ಕೇಳಿದ ಧರ್ಮಶಾಸ್ತ್ರಿಗಳೂ ಫರಿಸಾಯರೂ, "ದೇವದೂಷಣೆ ಆಡುತ್ತಿರುವ ಇವನಾರು? ದೇವರೊಬ್ಬರನ್ನು ಬಿಟ್ಟರೆ ಪಾಪಗಳನ್ನು ಕ್ಷಮಿಸಿ ಪರಿಹರಿಸಲು ಬೇರೆ ಯಾರಿಂದ ಸಾಧ್ಯ?" ಎಂದು ತಮ್ಮಲ್ಲೇ ಹೇಳಿಕೊಳ್ಳಲು  ಆರಂಭಿಸಿದರು. ಯೇಸು ಅವರ ಆಲೋಚನೆಗಳನ್ನು ಗ್ರಹಿಸಿಕೊಂಡು, "ನೀವು ನಿಮ್ಮ ಮನಸ್ಸಿನಲ್ಲಿ ಆಲೋಚಿಸುತ್ತಾ ಇರುವುದೇನು? 'ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ," ಎನ್ನುವುದು ಸುಲಭವೋ ಅಥವಾ 'ಎದ್ದು ನಡೆ' ಎನ್ನುವುದು ಸುಲಭವೋ? ಭೂಲೋಕದಲ್ಲಿ ಪಾಪಗಳನ್ನು ಕ್ಷಮಿಸಲು ನರಪುತ್ರನಿಗೆ ಅಧಿಕಾರ ಉಂಟೆಂದು ಈ ಮೂಲಕ ನಿಮಗೆ ಖಚಿತವಾಗಬೇಕು," ಎಂದು ಹೇಳಿ, ಅ ಪಾರ್ಶ್ವವಾಯು ರೋಗಿಯ ಕಡೆ ನೋಡಿ,  'ಏಳು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೊರಡು,' ಎಂದು ನಿನಗೆ ಆಜ್ಞಾಪಿಸುತ್ತೇನೆ" ಎಂದರು. ತಕ್ಷಣವೇ ಅವರೆಲ್ಲರೂ ನೋಡುತ್ತಿದ್ದ ಹಾಗೆ ಅವನು ಎದ್ದು, ಮಲಗಿದ್ದ ಹಾಸಿಗೆಯನ್ನು ಎತ್ತಿಕೊಂಡು, ದೇವರನ್ನು ಸ್ತುತಿಸುತ್ತಾ ತನ್ನ ಮನೆಗೆ ಹೋದನು. ಎಲ್ಲರೂ ನಿಬ್ಬೆರಗಾಗಿ, ನಾವು ಈ ದಿನ ಎಂಥ ಅಪೂರ್ವ ಕಾರ್ಯವನ್ನು ಕಂಡೆವು!" ಎಂದು ಭಯಭಕ್ತಿಯಿಂದ ದೇವರನ್ನು ಕೊಂಡಾಡಿದರು.

05.12.21 - "ಹಳ್ಳಕೊಳ್ಳಗಳೆಲ್ಲ ಭರ್ತಿಯಾಗಬೇಕು; ಬೆಟ್ಟಗುಡ್ಡಗಳು ಮಟ್ಟವಾಗಬೇಕು; ಅಂಕು ಡೊಂಕಾದವು ನೆಟ್ಟಗಾಗಬೇಕು; ತಗ್ಗುಮುಗ್ಗಾದ ಹಾದಿಗಳು ಹಸನಾಗಬೇಕು"

ಮೊದಲನೇ ವಾಚನ: ಬಾರೂಕ  5:1-9

ಜೆರುಸಲೇಮೇಕಳಚಿಬಿಡು ನಿನ್ನ ಶೋಕಾರ್ಥ ವಸ್ತ್ರಗಳನ್ನು ಧರಿಸಿಕೋ  ನಿತ್ಯಕ್ಕೆಂದು ದೇವರಿಂದ ಬರುವ ಪ್ರಭಾವದ ಸೊಬಗನ್ನು. ತೊಟ್ಟುಕೋ ದೇವರಿಂದ ಬರುವ ನೀತಿಯೆಂಬ ನಿಲುವಂಗಿಯನ್ನು ಇಟ್ಟುಕೋ ತಲೆಯ ಮೇಲೆ ಮಹಿಮೆಯೆಂಬ ಮುಕುಟವನ್ನು. ದೇವರೇ ನಿನ್ನ ತೇಜಸ್ಸನ್ನು ಹರಡುವರು. ಆಕಾಶದಡಿಯಿರುವ ಎಲ್ಲಾ ದಿಕ್ಕುಗಳಿಗು. "ನೀತಿಯಿಂದ ಶಾಂತಿ", "ಭಕ್ತಿಯಿಂದ ಕೀರ್ತಿ" ಎಂದು ದೇವರೇ ನಿನ್ನನ್ನು ಹೆಸರಿಸುವರು ಎಂದೆಂದಿಗು. ಜೆರುಸಲೇಮೇಎದ್ದೇಳುಉನ್ನತಸ್ಥಾನದಲ್ಲಿ ನಿಲ್ಲು ಪೂರ್ವಾಭಿಮುಖವಾಗಿ ತಿರುಗಿಸು ನಿನ್ನ ಕಣ್ಣುಗಳನ್ನು. ದೇವರು ತಮ್ಮನ್ನು ನೆನೆಸಿಕೊಂಡರೆಂದು ಹಿಗ್ಗುತಿಹರು ನಿನ್ನ ಮಕ್ಕಳು ಪರಮಪಾವನನ ನುಡಿಯಂತೆ ಪೂರ್ವ ಪಶ್ಚಿಮದಿಂದ ಕೂಡಿಬರುತಹರು ನೋಡು. ಶತ್ರುಗಳಿಂದ ಒಯ್ಯಲ್ಪಟ್ಟು ಕಾಲ್ನಡೆಯಲ್ಲಿ ಅವರು ನಿನ್ನನ್ನು ಬಿಟ್ಟುಹೋದರು. ಈಗ ವೈಭವದಿಂದ ಹೊರಟು ಸಿಂಹಾಸನರೂಢರಾದವರಂತೆ ಬರುತ್ತಿಹರು ದೇವರೇ ಅವರನ್ನು ನಿನ್ನ ಬಳಿಗೆ ಬರಮಾಡುತ್ತಿಹರು. ಇಸ್ರಯೇಲ್ ದೈವಪ್ರಭೆಯಲ್ಲಿ ಸುರಕ್ಷಿತವಾಗಿ ಸಾಗಬೇಕಂದು ಅದಕ್ಕಾಗಿ ಉನ್ನತಬೆಟ್ಟಗಳುನೆಲೆಯಾದ ಗುಡ್ಡಗಳು ತಗ್ಗಬೇಕೆಂದು ಹಳ್ಳಕೊಳ್ಳಗಳು ತುಂಬಿ ಭರ್ತಿಯಾಗಿ ನೆಲಸಮವಾಗಬೇಕೆಂದು ದೇವರೇ ನೇಮಕಮಾಡಿರುವರು. ಆ ದೇವರ ಅಪ್ಪಣೆಯ ಪ್ರಕಾರ ಇಸ್ರಯೇಲಿಗೆ ನೆರಳು ನೀಡುವುವು ಕಾಡುಗಳು. ಸುಗಂಧವಾಸನೆಯನ್ನು ಬೀರುವುವು ಗಿಡಮರಗಳು. ದೇವರು ಇಸ್ರಯೇಲನ್ನು ನಡೆಸುವರು ತಮ್ಮ ಮಹಿಮೆ ಪ್ರಕಾಶದಲ್ಲೇ ಹರುಷದೊಡನೆ ತಮ್ಮಿಂದ ಬರುವ ಕರುಣೆ ಹಾಗು ನ್ಯಾಯನೀತಿಗಳೊಡನೆ.

ಕೀರ್ತನೆ: 126:1-2, 2-3, 4-5, 6
ಶ್ಲೋಕ: ಪ್ರಭು ನಮಗೆ ಮಹತ್ಕಾರ್ಯ ಮಾಡಿದುದು ಖಚಿತ ಎಂತೆಲೇ ನಾವು ಆನಂದಭರಿತರಾಗುವುದು ಉಚಿತ.

ಎರಡನೇ ವಾಚನ: ಫಿಲಿಪ್ಪಿಯರಿಗೆ  1:4-6, 8-11

ನಿಮಗೋಸ್ಕರ ಯಾವಾಗಲೂ ತುಂಬುಹೃದಯದಿಂದ ಪ್ರಾರ್ಥಿಸುತ್ತೇನೆ. ಏಕೆಂದರೆನಾನು ನಿಮ್ಮನ್ನು ಸಂದಿಸಿದ ಮೊದಲ ದಿನದಿಂದ ಇಂದಿನವರೆಗೂ ನೀವು ನನ್ನೊಡನೆ ಶುಭಸಂದೇಶದ ಪ್ರಚಾರಕಾರ್ಯದಲ್ಲಿ ಸಹಕರಿಸುತ್ತಿರುವಿರಿ. ಈ ಸತ್ಕಾರ್ಯವನ್ನು ನಿಮ್ಮಲ್ಲಿ ಪ್ರಾರಂಭಿಸಿದ ದೇವರು ಅದನ್ನು ಮುಂದುವರಿಸುತ್ತಾಯೇಸುಕ್ರಿಸ್ತರು ಪುನರಾಗಮಿಸುವಷ್ಟರಲ್ಲಿ ಪೂರೈಸುವರು ಎಂಬುದೇ ನನ್ನ ದೃಢ ನಂಬಿಕೆ. ಕ್ರಿಸ್ತಯೇಸುವಿನಲ್ಲಿರುವ ಉತ್ಕಟ ಪ್ರೀತಿಯಿಂದಲೇ ನಾನು ನಿಮ್ಮೆಲ್ಲರಿಗಾಗಿ ಹಂಬಲಿಸುತ್ತಿದ್ದೇನೆಇದಕ್ಕೆ ದೇವರೇ ಸಾಕ್ಷಿ. ನೀವು ಪ್ರೀತಿಯಲ್ಲಿ ಪ್ರವರ್ಧಿಸುತ್ತಾಪೂರ್ಣ ಜ್ಞಾನ ಹಾಗೂ ವಿವೇಕದಂದ ಕೂಡಿದವರಾಗಬೇಕೆಂಬುದೇ ನನ್ನ ಪ್ರಾರ್ಥನೆ. ಹೀಗೆ ನೀವು ಉತ್ತಮೋತ್ತಮವಾದುವುಗಳನ್ನೇ ಆರಿಸಿಕೊಂಡುಪ್ರಭುಕ್ರಿಸ್ತರ ದಿನದಂದು ನಿರ್ದೋಷಿಗಳೂ ನಿಷ್ಕಳಂಕರೂ ಆಗಿ ಕಾಣಿಸಿಕೊಳ್ಳುವಿರಿ. ಯೇಸುಕ್ರಿಸ್ತರ ಮುಖಾಂತರ ಲಭಿಸುವ ಸತ್ಸಂಬಂಧದ ಫಲಗಳಿಂದ ತುಂಬಿದವರಾಗಿ ದೇವರಿಗೆ ಸ್ತುತಿಸಲ್ಲಿಸಿಅವರ ಮಹಿಮೆ ಬೆಳಗುವಂತೆ ಮಾಡಿವಿರಿ.

ಶುಭಸಂದೇಶ: ಲೂಕ 3:1-6



ಅದು ತಿಬೇರಿಯಸ್ ಚಕ್ರವರ್ತಿಯ ಆಡಲಿತದ ಹದಿನೈದನೆಯ ವರ್ಷ. ಆ ಕಾಲದಲ್ಲಿ ಜುದೇಯ ಪ್ರಾಂತ್ಯಕ್ಕೆ ಪೊನ್ಸಿಯುಸ್ ಪಿಲಾತನು ರಾಜ್ಯಪಾಲನಾಗಿದ್ದನು. ಗಲಿಲೇಯ ಪ್ರಾಂತ್ಯಕ್ಕೆ ಹೆರೋದನೂ ಇತುರೆಯ ಮತ್ತು ತ್ರಕೋನಿತಿ ಪ್ರಾಂತ್ಯಗಳಿಗೆ ಇವನ ತಮ್ಮನಾದ ಫಿಲಿಪ್ಪನೂ ಮತ್ತು ಅಬಿಲೇನೆ ಪ್ರಾಂತ್ಯಕ್ಕೆ ಲುಸಾನಿಯನೂ ಸಾಮಂತರಾಗಿದ್ದರು. ಅನ್ನನು ಮತ್ತು ಕಾಯಿಫನು ಅಂದಿನ ಪ್ರದಾನ ಯಾಜಕರು. ಆಗ ಬೆಂಗಾಡಿನಲ್ಲಿ ಜಕರಿಯನ ಮಗ ಯೊವಾನ್ನನಿಗೆ ದೇವರ ಸಂದೇಶದ ಬೋದೆ ಆಯಿತು. ಆತನು ಜೋರ್ಡಾನ್ ನದಿಯ ಪರಿಸರ ಪ್ರಾಂತ್ಯದಲ್ಲೆಲ್ಲಾ ಸಂಚರಿಸುತ್ತಾ,  "ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿರಿ ಮತ್ತು ಸ್ನಾನದೀಕ್ಷೆ ಪಡೆದುಕೊಳ್ಳಿರಿದೇವರು ನಿಮ್ಮ ಪಾಪಗಳನ್ನು ಕ್ಷಮಿಸಿಬಿಡುವರು," ಎಂದು ಸಾರಿ ಹೇಳುತ್ತಿದ್ದನು. ಈ ಬಗ್ಗೆ ಪ್ರವಾದಿ ಯೆಶಾಯನ ಗ್ರಂಥದಲ್ಲಿ ಮುಂಚಿತವಾಗಿಯೇ ಹೀಗೆಂದು ಬರೆದಿಡಲಾಗಿದೆ:"  ಪ್ರಭುವಿಗಾಗಿ ಮಾರ್ಗವನ್ನು ಸಿದ್ದಪಡಿಸಿರಿಆತನ ಆಗಮನಕ್ಕಾಗಿ ಹಾದಿಯನ್ನು ಸರಾಗ ಮಾಡಿರಿ" ಎಂದು ಬೆಂಗಾಡಿನಲ್ಲಿ ಒಬ್ಬನು ಘೋಷಿಸುತ್ತಿದ್ದಾನೆ. ಹಳ್ಳಕೊಳ್ಳಗಳೆಲ್ಲ ಭರ್ತಿಯಾಗಬೇಕುಬೆಟ್ಟಗುಡ್ಡಗಳು ಮಟ್ಟವಾಗಬೇಕುಅಂಕು ಡೊಂಕಾದವು ನೆಟ್ಟಗಾಗಬೇಕುತಗ್ಗುಮುಗ್ಗಾದ ಹಾದಿಗಳು ಹಸನಾಗಬೇಕು. ಆಗ ದೇವರು ದಯಪಾಲಿಸುವ ಜೀವೋದ್ಧಾರವನ್ನು ಮಾನವರೆಲ್ಲರೂ ಕಾಣುವರು."

04.12.21 - "ನೀವಿನ್ನು ಅಳಬೇಕಾಗಿಲ್ಲ. ನಿಮ್ಮ ಕೂಗನ್ನು ಕೇಳಿದ್ದೇ, ಸರ್ವೇಶ್ವರ ನಿಮಗೆ ಕೃಪೆ ತೋರಿಸುವರು"

ಮೊದಲನೇ ವಾಚನ: ಯೆಶಾಯ 30:19-21, 23-26 


ಪರಮ ಪಾವನವಾಗಿರುವ ಇಸ್ರಯೇಲಿನ ಸರ್ವೇಶ್ವರಸ್ವಾಮಿ ಹೇಳುವುದೇನೆಂದರೆ: ಜೆರುಸಲೇಮಿನಲ್ಲಿ ವಾಸಿಸುವ ಸಿಯೋನಿನ ಜನರೇ, ನೀವಿನ್ನು ಅಳಬೇಕಾಗಿಲ್ಲ. ನಿಮ್ಮ ಕೂಗನ್ನು ಕೇಳಿದ್ದೇ, ಸರ್ವೇಶ್ವರ ನಿಮಗೆ ಕೃಪೆ ತೋರಿಸುವರು. ನಿಮ್ಮ ಸ್ವರವನ್ನು ಕೇಳಿದಾಕ್ಷಣ ಸದುತ್ತರವನ್ನು ದಯಪಾಲಿಸುವರು. ಅವರು ನಿಮಗೆ ಕಷ್ಟಸಂಕಟವನ್ನು ಅನ್ನಪಾನವಾಗಿ ಕೊಟ್ಟರೂ ನಿಮ್ಮ ಬೋಧಕರು ಇನ್ನು ನಿಮಗೆ ಮರೆಯಾಗಿ ಇರುವುದಿಲ್ಲ. ನೀವು ಅವರನ್ನು ಕಣ್ಣಾರೆ ಕಾಣುವಿರಿ. ನೀವು ಬಲಕ್ಕಾಗಲೀ ಎಡಕ್ಕಾಗಲೀ ತಿರುಗಿದರೆ "ಇದೇ ಮಾರ್ಗ, ಇದರಲ್ಲೇ ನಡೆಯಿರಿ" ಎಂಬ ಮಾತು ಹಿಂದಿನಿಂದ ನಿಮ್ಮ ಕಿವಿಗೆ ಕೇಳಿಸುವುದು. ಆಗ ಸರ್ವೇಶ್ವರ ಹೊಲದ ಬಿತ್ತನೆಗೆ ಬೇಕಾದ ಮಳೆಯನ್ನು ನಿಮಗೆ ಸುರಿಸುವರು. ಆ ಹೊಲದ ಬೆಳೆಯಿಂದ ಸಾರವತ್ತಾದ ಆಹಾರವನ್ನು ಸಮೃದ್ಧಿಯಾಗಿ ಒದಗಿಸುವರು. ಅಂದು ನಿಮ್ಮ ದನಕರುಗಳು ವಿಶಾಲವಾದ ಹುಲ್ಲುಗಾವಲುಗಳಲ್ಲಿ ಮೇಯುವುವು. ಹೊಲ ಮೇಯುವ ನಿಮ್ಮ ಎತ್ತು ಕತ್ತೆಗಳು ಮೊರದಿಂದಲೂ ಕವೆಗೋಲಿನಿಂದಲೂ ತೂರಿದ ರುಚಿಕರವಾದ ಮೇವನ್ನು ತಿನ್ನುವುವು. ಕೋಟೆ ಕೊತ್ತಲಗಳು ಬಿದ್ದು ಹೋಗುವುವು. ಶತ್ರುಗಳ ಮಹಾಸಂಹಾರ ನಡೆಯುವ ಆ ದಿನದಂದು ಉನ್ನತ ಪರ್ವತಗಳಿಂದಲೂ ಎತ್ತರವಾದ ಗುಡ್ಡಗಳಿಂದಲೂ ತೊರೆಗಳೂ ನೀರಿನ ಕಾಲುವೆಗಳೂ ಹರಿಯುವುವು. ಇದಲ್ಲದೆ ಚಂದ್ರನ ಬೆಳಕು ಸೂರ್ಯನ ಬೆಳಕಿನಂತಿರುವುದು. ಸೂರ್ಯನ ಬೆಳಕು ಏಳ್ಮಡಿ ಹೆಚ್ಚುವುದು. ಏಳು ದಿನಗಳ ಬೆಳಕು ಒಂದೇ ದಿನದ ಬೆಳಕಿನಂತಾಗುವುದು. ಅಂದು ಸರ್ವೇಶ್ವರ ತಮ್ಮ ಜನರ ಹುಣ್ಣುಗಳನ್ನು ಕಟ್ಟುವರು ತಮ್ಮ ಪೆಟ್ಟಿನಿಂದ ಜನರಿಗಾದ ಗಾಯಗಳನ್ನು ಗುಣಪಡಿಸುವರು. 

ಕೀರ್ತನೆ: 147:1-2, 3-4, 5-6 
ಶ್ಲೋಕ: ಪ್ರಭುವಿನಲ್ಲಿ ವಿಶ್ವಾಸವಿಡುವವರು ಉಲ್ಲಾಸಿಸುತ್ತಾರೆ 

ಶುಭಸಂದೇಶ: ಮತ್ತಾಯ 9:35-10:1, 6-8 

ಯೇಸುಸ್ವಾಮಿ ಉರೂರುಗಳಲ್ಲೂ ಹಳ್ಳಿ ಹಳ್ಳಿಗಳಲ್ಲೂ ಸಂಚಾರ ಮಾಡುತ್ತಾ ಅಲ್ಲಿಯ ಪ್ರಾರ್ಥನಾ ಮಂದಿರಗಳಲ್ಲಿ ಬೋಧಿಸಿದರು. ಶ್ರೀಸಾಮ್ರಾಜ್ಯದ ಶುಭಸಂದೇಶವನ್ನು ಸಾರಿದರು. ಎಲ್ಲಾ ತರದ ರೋಗರುಜಿನಗಳನ್ನು ಗುಣಪಡಿಸಿದರು. ಆ ಜನ ಸಮೂಹವನ್ನು ಕಂಡಾಗ ಅವರ ಮನ ಕರಗಿತು. ಏಕೆಂದರೆ, ಕುರುಬನಿಲ್ಲದ ಕುರಿಗಳಂತೆ ಅವರು ತೊಳಲಿದ್ದರು ಹಾಗೂ ಬಳಲಿದ್ದರು ಆದುದರಿಂದ ಯೇಸು ತಮ್ಮ ಶಿಷ್ಯರಿಗೆ, "ಬೆಳೆಯೇನೋ ಹೇರಳ: ಕೊಯಿಲಿಗಾರರೋ ವಿರಳ; ಈ ಕಾರಣ ತನ್ನ ಕೊಯಿಲಿಗೆ ಆಳುಗಳನ್ನು ಕಳುಹಿಸುವಂತೆ ಬೆಳೆಯ ಯಜಮಾನನನ್ನು ಪ್ರಾರ್ಥಿಸಿರಿ," ಎಂದರು. ಯೇಸುಸ್ವಾಮಿ ತಮ್ಮ ಹನ್ನೆರಡು ಮಂದಿ ಶಿಷ್ಯರನ್ನು ಒಟ್ಟಿಗೆ ಕರೆದು, ಎಲ್ಲ ರೋಗ ರುಜಿನಗಳನ್ನು ಗುಣಪಡಿಸುವುದಕ್ಕೂ ದೆವ್ವಗಳನ್ನು ಬಿಡಿಸುವುದಕ್ಕೂ ಅವರಿಗೆ ಅಧಿಕಾರವನ್ನು ಕೊಟ್ಟರು. ಆ ಹನ್ನೆರಡು ಮಂದಿಯ ನಿಯೋಗವನ್ನು ಕಳುಹಿಸುವಾಗ ಯೇಸು ಅವರಿಗೆ ಕೊಟ್ಟ ಆದೇಶವೇನೆಂದರೆ: ತಪ್ಪಿಹೋದ ಕುರಿಗಳಂತೆ ಇರುವ ಇಸ್ರಯೇಲ್ ಜನರ ಬಳಿಗೆ ಹೋಗಿರಿ: ಹೋಗುತ್ತಾ, "ಸ್ವರ್ಗಸಾಮ್ರಾಜ್ಯವು ಸಮಿಾಪಿಸಿದೆ" ಎಂದು ಬೋಧನೆ ಮಾಡಿರಿ. ರೋಗಿಗಳನ್ನು ಗುಣಪಡಿಸಿರಿ, ಸತ್ತವರನ್ನು ಮತ್ತೆ ಬದುಕಿಸಿರಿ, ಕುಷ್ಠರೋಗಿಗಳನ್ನು ಸ್ವಸ್ಥಮಾಡಿರಿ, ದೆವ್ವಗಳನ್ನು ಬಿಡಿಸಿರಿ. ಉಚಿತವಾಗಿ ಪಡೆದಿರುವಿರಿ, ಉಚಿತವಾಗಿ ಕೊಡಿ.

03.12.21 - "ನೀವು ವಿಶ್ವಾಸವಿಟ್ಟ ಪ್ರಕಾರವೇ ನಿಮಗೆ ಗುಣವಾಗಲಿ,"

ಮೊದಲನೇ ವಾಚನ: ಯೆಶಾಯ 29:17-24 


ಸ್ವಾಮಿ ಸರ್ವೇಶ್ವರ ಹೀಗೆನ್ನುತ್ತಾರೆ; ಕೊಂಚ ಕಾಲದೊಳಗೆ ಲೆಬನೋನ್ ಅರಣ್ಯವು ತೋಟವಾಗುವುದು. ಈಗಿನ ತೋಟವಾದರೋ ಅರಣ್ಯವಾಗಿ ಕಾಣಿಸುವುದು. ಆ ದಿನದಂದು ಕಿವುಡರು ಗ್ರಂಥ ವಾಕ್ಯಗಳನ್ನು ಓದುವುದನ್ನು ಕೇಳುವರು. ಕುರುಡರಿಗೆ ಮಬ್ಬಿನಲ್ಲೂ ಕತ್ತಲಲ್ಲೂ ಕಣ್ಣು ಕಾಣಿಸುವುದು. ದೀನದಲಿತರು ಸರ್ವೇಶ್ವರನಲ್ಲಿ ಅತಿಯಾಗಿ ಆನಂದಿಸುವರು. ಬಡಬಗ್ಗರು ಇಸ್ರಯೇಲಿನ ಪರಮಪಾವನ ಸ್ವಾಮಿಯಲ್ಲಿ ಉಲ್ಲಾಸಿಸುವರು. ಏಕೆಂದರೆ ಭಯೋತ್ಪಾದಕರು ನಿಶ್ಯೇಷರಾಗುವರು, ಧರ್ಮನಿಂದಕರು ನಿರ್ನಾಮವಾಗುವರು. ಸುಳ್ಳುಸಾಕ್ಷಿ ಹೇಳಿ ತಪ್ಪು ಹೊರಿಸುವವರು, ನ್ಯಾಯಸ್ಥಾನದಲ್ಲಿ ದೋಷವನ್ನು ಖಂಡಿಸುವವರಿಗೆ ಉರುಲೊಡ್ಡುವವರು, ನೀತಿವಂತನಿಗೆ ನ್ಯಾಯತಪ್ಪಿಸುವವರು, ಹೀಗೆ ಅಧರ್ಮದಲ್ಲಿ ನಿರತರಾಗಿರುವ ಇವರೆಲ್ಲರು ನಿರ್ಮೂಲವಾಗುವರು. ಹೀಗಿರಲು ಅಬ್ರಹಾಮನನ್ನು ಉದ್ಧರಿಸುವ ಸರ್ವೇಶ್ವರಸ್ವಾಮಿ ಯಕೋಬನ ಮನೆತನದ ವಿಷಯವಾಗಿ ಹೀಗೆನ್ನುತ್ತಾರೆ: "ಯಕೋಬನ ವಂಶದವರೇ, ಇನ್ನು ಮೇಲೆ ನೀವು ನಾಚಿಕೆಗೀಡಾಗುವುದಿಲ್ಲ, ನಿಮ್ಮ ಮುಖ ಇನ್ನು ಬಾಡುವುದಿಲ್ಲ. ನಿಮ್ಮ ವಂಶಜರು ತಮ್ಮ ಮಧ್ಯದಲ್ಲಿ ನಾನು ಎಸಗುವ ಕಾರ್ಯಗಳನ್ನು ನೋಡಿ, ನನ್ನ ನಾಮವೇ ಪರಮ ಪೂಜಿತವೆಂದು ಸ್ಥಿರಪಡಿಸುವರು. ಹೌದು, ಯಕೋಬ ವಂಶದ ಪರಮ ಪಾವನ ಸ್ವಾಮಿಯಾದ ನನ್ನನ್ನು ಪ್ರತಿಷ್ಠಾಪಿಸುವರು.  ಇಸ್ರಯೇಲರ ದೇವರಾದ ನನ್ನಲ್ಲಿ ಭಯ ಭಕ್ತಿಯಿಂದಿರುವರು, ಚಂಚಲಚಿತ್ತರು ಬುದ್ಧಿವಂತರಾಗುವರು. ಗೊಣಗುಟ್ಟುವವರು ಧ್ಯಾನ ಮಗ್ನರಾಗುವರು. 

ಕೀರ್ತನೆ: 27:1, 4, 13-14 
ಶ್ಲೋಕ: ನನಗೆ ಬೆಳಕು, ನನಗೆ ರಕ್ಷೆ ಪ್ರಭುವೇ 

ಶುಭಸಂದೇಶ: ಮತ್ತಾಯ 9:27-31 

ಯೇಸುಸ್ವಾಮಿ ಅಲ್ಲಿಂದ ಹೋಗುತ್ತಿರುವಾಗ ಇಬ್ಬರು ಕುರುಡರು, "ಸ್ವಾಮಿಾ, ದಾವೀದ ಕುಲಪುತ್ರರೇ, ನಮಗೆ ದಯೆತೋರಿ," ಎಂದು ದನಿಯೆತ್ತಿ ಕೂಗಿಕೊಳ್ಳುತ್ತಾ ಅವರ ಹಿಂದೆ ಹೋದರು. ಯೇಸು ಮನೆ ಸೇರಿದಾಗ ಆ ಕುರುಡರು ಸಮಿಾಪಕ್ಕೆ ಬಂದರು. "ನಾನು ನಿಮ್ಮನ್ನು ಗುಣಪಡಿಸಬಲ್ಲೆನೆಂದು ನೀವು ವಿಶ್ವಾಸವಿಡುತ್ತೀರೋ?" ಎಂದು ಯೇಸು ಪ್ರಶ್ನಿಸಿದರು. "ಹೌದು ಸ್ವಾಮಿಾ, ಹೌದು," ಎಂದು ಅವರು ಉತ್ತರವಿತ್ತರು. ಆಗ ಯೇಸು ಅವರ ಕಣ್ಣುಗಳನ್ನು ಮುಟ್ಟಿ, "ನೀವು ವಿಶ್ವಾಸವಿಟ್ಟ ಪ್ರಕಾರವೇ ನಿಮಗೆ ಗುಣವಾಗಲಿ," ಎಂದರು. ಅವರಿಗೆ ದೃಷ್ಟಿ ಬಂದಿತು, "ಈ ವಿಷಯ ಯಾರಿಗೂ, ತಿಳಿಯಬಾರದು, ಎಚ್ಚರಿಕೆ!"  ಎಂದು ಯೇಸು ಅವರಿಗೆ ಕಟ್ಟಪ್ಪಣೆ ಮಾಡಿದರು. ಆದರೂ ಅವರು ಹೋಗಿ ಆ ಪ್ರಾಂತ್ಯದಲ್ಲೆಲ್ಲಾ ಸ್ವಾಮಿಯ ಕೀರ್ತಿಯನ್ನು ಹರಡಿದರು.

02.12.21 - ಎತ್ತರದಲಿ ವಾಸಿಸುವವರನು; ಕೆಡವಿ, ನೆಲಸಮಮಾಡಿ, ಧೂಳಾಗಿಸುವನು

ಮೊದಲನೇ ವಾಚನ: ಯೆಶಾಯ 26:1-6 



ಕಾಲ ಬರುವುದು; ಆಗ ಹಾಡುವರು ಜುದೇಯನಾಡಿನಲ್ಲಿ ಈ ಗೀತೆಯನ್ನು: ನಮಗಿದೆ ಸುಭದ್ರ ನಗರ, ದೇವರೇ ಅದರ ದುರ್ಗ, ಪ್ರಾಕಾರ, ತೆರೆಯಿರಿ ನಗರ ದ್ವಾರಗಳನು, ಪ್ರವೇಶಿಸಲಿ ವಿಶ್ವಾಸವುಳ್ಳ ಸಜ್ಜನರು. ನಿನ್ನ ನೆಚ್ಚಿದವರಿಗೆ, ಸ್ಥಿರ ಚಿತ್ತವುಳ್ಳವರಿಗೆ, ಚಿರಶಾಂತಿಯ ನೀ ನೀಡುವೆ, ಶಾಶ್ವತ ಆಶ್ರಯಗಿರಿ, ಸ್ವಾಮಿ ಸರ್ವೇಶ್ವರನೇ, ಸತತ ಭರವಸೆಯಿಡಿರಿ ಆತನಲ್ಲೇ. ತಗ್ಗಿಸುವನಾತ ಎತ್ತರದಲಿ ವಾಸಿಸುವವರನು; ಕೆಡವಿ, ನೆಲಸಮಮಾಡಿ, ಧೂಳಾಗಿಸುವನು ಅವರು ವಾಸಮಾಡುವಾ ಉನ್ನತ ನಗರವನು. ಈಡಾಗುವುದು ಕಾಲತುಳಿತಕೆ ದೀನದಲಿತರ ಪಾದತುಳಿತಕೆ. 

ಕೀರ್ತನೆ: 118:1, 8-9, 19-21, 25-27 
ಶ್ಲೋಕ: ಪ್ರಭುವಿನ ನಾಮದಲ್ಲಿ ಬರುವವನಿಗೆ ಜಯ ಮಂಗಳ 

ಶುಭಸಂದೇಶ: ಮತ್ತಾಯ 7:21, 24-27 



ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ನನ್ನನ್ನು "ಸ್ವಾಮಿಾ, ಸ್ವಾಮಿಾ," ಎನ್ನುವ ಪ್ರತಿಯೊಬ್ಬನೂ ಸ್ವರ್ಗಸಾಮ್ರಾಜ್ಯವನ್ನು ಪ್ರವೇಶಿಸನು. ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತಾನುಸಾರ ನಡೆಯುವವನು ಮಾತ್ರ ಅದನ್ನು ಪ್ರವೇಶಿಸುವನು. ನನ್ನ ಈ ಮಾತನ್ನು ಕೇಳಿ ಅದರಂತೆ ನಡೆಯುವ ಪ್ರತಿಯೊಬ್ಬನೂ ಬಂಡೆಯ ಮೇಲೆ ಮನೆ ಕಟ್ಟಿಕೊಂಡ ಬುದ್ದಿವಂತನನು ಹೋಲುತ್ತಾನೆ ಮಳೆ ಬಿತ್ತು, ನೆರೆ ಬಂತು ಗಾಳಿ ಬೀಸಿ ಆ ಮನೆಗೆ ಅಪ್ಪಳಿಸಿತು. ಆದರೂ ಅದು ಬೀಳಲಿಲ್ಲ ಕಾರಣ  ಅದರ ಅಡಿಗಟ್ಟು ಬಂಡೆಯ ಮೇಲಿತ್ತು. ನನ್ನ ಈ ಮಾತುಗಳನ್ನು ಕೇಳಿಯೂ ಅದರಂತೆ ನಡೆಯದ ಪ್ರತಿಯೊಬ್ಬನೂ ಮರಳಿನ ಮೇಲೆ ಮನೆ ಕಟ್ಟಿಕೊಂಡ ಬುದ್ದಿಹೀನನನ್ನು ಹೋಲುತ್ತಾನೆ. ಮಳೆ ಬಿತ್ತು, ನೆರೆ ಬಂತು ಗಾಳಿ ಬೀಸಿ ಆ ಮನೆಗೆ ಅಪ್ಪಳಿಸಿತು: ಅದು ಕುಸಿದು ಬಿತ್ತು ಅದಕ್ಕಾದ ಪತನವೋ ಆಗಾಧ!"

01.12.21 - "ಏಳು ರೊಟ್ಟಿಗಳು ಮತ್ತು ಕೆಲವು ಸಣ್ಣ ಮಿಾನುಗಳಿವೆ,"

ಮೊದಲನೇ ವಾಚನ: ಯೆಶಾಯ 25:6-10 


ಇದಲ್ಲದೆ ಸೇನಾಧೀಶ್ವರ ಸರ್ವೇಶ್ವರ ಈ ಪರ್ವತದಲ್ಲಿ ಸಕಲ ರಾಷ್ಟ್ರಗಳಿಗೆ ಸಾರವತ್ತಾದ ಮೃಷ್ಟಾನ್ನವನ್ನೂ ಶ್ರೇಷ್ಟವಾದ
ದ್ರಾಕ್ಷಾರಸವನ್ನೂ ಭೋಜನಕ್ಕಾಗಿ ಅಣಿಗೊಳಿಸುವರು. ಸಮಸ್ತ ರಾಷ್ಟ್ರಗಳನ್ನು ಆವರಿಸಿರುವ ಮುಸುಕನ್ನೂ ಸಕಲ ದೇಶಗಳನ್ನು ಮುಚ್ಚಿರುವ ತೆರೆಯನ್ನೂ ಇದೇ ಪರ್ವತದಲ್ಲಿ ನಾಶಮಾಡುವರು. ಮರಣವನ್ನು ಶಾಶ್ವತವಾಗಿ ನಿರ್ನಾಮ ಮಾಡುವರು. ಸರ್ವೇಶ್ವರಸ್ವಾಮಿ ಎಲ್ಲರ ಕಣ್ಣೀರನ್ನು ಒರೆಸಿ ಬಿಡುವರು. ತಮ್ಮ ಪ್ರಜೆಗಾದ ಅವಮಾನವನ್ನು ಜಗದಿಂದಲೇ ತೊಲಗಿಸಿಬಿಡುವರು. ಸರ್ವೇಶ್ವರ ಸ್ವಾಮಿಯೇ ಇಂತೆಂದು ನುಡಿದಿದ್ದಾರೆ. ಇದು ನೆರವೇರಿದಾಗ ಜನರು: "ಇವರೇ ನಮ್ಮ ದೇವರು; ನಮ್ಮನ್ನು ರಕ್ಷಿಸುವರೆಂದು ಇವರನ್ನೇ ನೆಚ್ಚಿಕೊಂಡಿದ್ದೆವು. ಇವರೇ ಸರ್ವೇಶ್ವರ; ಇವರನ್ನೇ ನೆಚ್ಚಿಕೊಂಡಿದ್ದೆವು. ಇವರು ನೀಡುವ ರಕ್ಷಣೆಯಲ್ಲಿ ಆನಂದಿಸೋಣ!" ಎಂದು ಹೇಳಿಕೊಳ್ಳುವರು. ಸರ್ವೇಶ್ವರಸ್ವಾಮಿಯ ಅಭಯ ಹಸ್ತವು ಈ ಪರ್ವತದ ಮೇಲೆ ಶಾಶ್ವತವಾಗಿ ನೆಲಸುವುದು. ಮೋವಾಬಾದರೋ ತಿಪ್ಪೆಗುಂಡಿಯ ರೊಚ್ಚಿನಲ್ಲಿ ಒಣಹುಲ್ಲು ತುಳಿತಕ್ಕೆ ಈಡಾಗುವಂತೆ ತಾವಿದ್ದಲ್ಲೇ ತುಳಿತಕ್ಕೀಡಾಗುವುದು. 

ಕೀರ್ತನೆ: 23:1-3, 3-4, 5, 6 
ಶ್ಲೋಕ: ದೇವಮಂದಿರದಲ್ಲಿ ನಾ ವಾ‌ಸಿಸುವೆ ಚಿರಕಾಲವೆಲ್ಲ 

ಶುಭಸಂದೇಶ: ಮತ್ತಾಯ 15:29-37 


ಯೇಸುಸ್ವಾಮಿ ಆ ಸ್ಥಳವನ್ನು ಬಿಟ್ಟು, ಗಲಿಲೇಯ ಸರೋವರದ ತೀರದಲ್ಲೇ ನಡೆದು, ಒಂದು ಗುಡ್ಡವನ್ನು ಹತ್ತಿ ಅಲ್ಲಿ ಕುಳಿತುಕೊಂಡರು. ಜನರು ಗುಂಪುಗುಂಪಾಗಿ ಅಲ್ಲಿಗೆ ಬಂದರು. ಕುಂಟರು, ಕುರುಡರು, ಮೂಕರು, ಅಂಗವಿಕಲರು ಮುಂತಾದ ಅನೇಕರನ್ನು  ತಮ್ಮೊಡನೆ ಕರೆ ತಂದು ಯೇಸುವಿನ ಪಾದಸನ್ನಿಧಿಯಲ್ಲಿ ಬಿಟ್ಟರು. ಯೇಸು ಅವರನ್ನು ಗುಣಪಡಿಸಿದರು. ಮೂಕರು ಮಾತಾನಾಡುವುದನ್ನೂ ಅಂಗವಿಕಲರು ಸ್ವಸ್ಥರಾಗುವುದನ್ನೂ ಕುಂಟರು ನಡೆಯುವುದನ್ನೂ ಕುರುಡರು ನೋಡುವುದನ್ನೂ ಈ ಜನರು ಕಂಡು ಆಶ್ಚರ್ಯ ಚಕಿತರಾಗಿ ಇಸ್ರಯೇಲಿನ ದೇವರನ್ನು ಕೊಂಡಾಡಿದರು.  ಯೇಸುಸ್ವಾಮಿ ತಮ್ಮ ಶಿಷ್ಯರನ್ನು ಹತ್ತಿರಕ್ಕೆ ಕರೆದು, "ಈ ಜನಸ್ತೋಮ ಕಳೆದ ಮೂರು ದಿನಗಳಿಂದಲೂ ನನ್ನ ಬಳಿ ಇದೆ. ಊಟಕ್ಕೆ ಇವರಲ್ಲಿ ಏನೂ ಇಲ್ಲ. ಇವರನ್ನು ಕಂಡು ನನ್ನ ಹೃದಯ ಕರಗುತ್ತದೆ. ಇವರನ್ನು ಹಸಿದ ಹೊಟ್ಟೆಯಲ್ಲಿ ಕಳಿಸಿಬಿಡಲು ನನಗೆ ಇಷ್ಟವಿಲ್ಲ, ದಾರಿಯಲ್ಲಿ ಬಳಲಿ ಬಿದ್ದಾರು," ಎಂದರು. ಅದಕ್ಕೆ ಶಿಷ್ಯರು, "ಇಷ್ಟು ದೊಡ್ಡ ಗುಂಪಿಗೆ ಆಗವಷ್ಟು ರೊಟ್ಟಿಯನ್ನು ಈ ಅಡವಿಯಲ್ಲಿ ನಾವು ತರುವುದಾದರೂ ಎಲ್ಲಿಂದ?" ಎಂದು ಕೇಳಿದರು. "ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ?" ಎಂದು ಯೇಸು ಕೇಳಿದರು. "ಏಳು ರೊಟ್ಟಿಗಳು ಮತ್ತು ಕೆಲವು ಸಣ್ಣ ಮಿಾನುಗಳಿವೆ," ಎಂದು ಶಿಷ್ಯರು ಉತ್ತರಕೊಟ್ಟರು. ಆಗ ಜನ ಸಮೂಹಕ್ಕೆ ನೆಲದ ಮೇಲೆ ಕುಳಿತುಕೊಳ್ಳುವಂತೆ ಯೇಸು ಆಜ್ಞಾಪಿಸಿದರು. ಆನಂತರ ಆ ಏಳು ರೊಟ್ಟಿಗಳನ್ನೂ ಮಿಾನುಗಳನ್ನೂ ತೆಗೆದುಕೊಂಡು, ದೇವರಿಗೆ ಸ್ತೋತ್ರಸಲ್ಲಿಸಿ, ಅವುಗಳನ್ನು ಮುರಿದು ತಮ್ಮಶಿಷ್ಯರಿಗೆ ಕೊಟ್ಟರು; ಶಿಷ್ಯರು ಜನರಿಗೆ ಬಡಿಸಿದರು.  ಜನರೆಲ್ಲರೂ ಉಂಡು ತೃಪ್ತರಾದರು. ಉಳಿದ ತುಂಡುಗಳನ್ನು ಶಿಷ್ಯರು ಏಳು ಕುಕ್ಕೆಗಳ ತಂಬ ತುಂಬಿಸಿಕೊಂಡರು

30.11.21

ಮೊದಲನೇ ವಾಚನ: ರೋಮನ್ನರಿಗೆ  10: 9-18

"ಯೇಸುಸ್ವಾಮಿಯೇ ಪ್ರಭು" ಎಂದು ನೀನು ಬಾಯಿಂದ ನಿವೇದಿಸಿಅವರನ್ನು ದೇವರು ಸಾವಿನಿಂದ ಪುನರುತ್ದಾನಗೊಳಿಸಿದ್ದಾರೆಂದು ಹೃದಯದಿಂದ ವಿಶ್ವಾಸಿಸಿದರೆ ಜೀವೋದ್ಧಾರವನ್ನು ಹೊಂದುತ್ತೀಯೆ. ಹೌದುಹೃದಯಪೂರ್ವಕವಾಗಿ ವಿಶ್ವಾಸಿಸುವವನು ದೇವರೊಡನೆ ಸತ್ಸಂಬಂದವನ್ನು ಪಡೆಯುತ್ತಾನೆಬಾಯಿಂದ ನಿವೇದಿಸುವವನು ಜೀವೋದ್ಧಾರ ಹೊಂದುತ್ತಾನೆ. ಏಕೆಂದರೆ, "ಅವರಲ್ಲಿ ವಿಶ್ವಾಸ ಇಡುವ ಯಾರಿಗೂ ಆಶಾಭಂಗವಾಗುವುದಿಲ್ಲ." ಎಂದು ಪವಿತ್ರಗ್ರಂಥದಲ್ಲೇ ಹೇಳಲಾಗಿದೆ. ಈ ವಿಷಯದಲ್ಲಿ ಯೆಹೂದ್ಯರುಯೆಹೂದ್ಯರಲ್ಲದವರು ಎಂಬ ಭೇದಭಾವವಿಲ್ಲಸರ್ವರಿಗೂ ಒಬ್ಬರೇ ಪ್ರಭು. ತಮ್ಮನ್ನು ಬೇಡಿಕೊಳ್ಳುವ ಎಲ್ಲರಿಗೂ ಅವರು ಧಾರಾಳವಾಗಿ ವರದಾನವನ್ನು ನೀಡುತ್ತಾರೆ. "ಪ್ರಭುವಿನ ನಾಮಸ್ಮರಣೆ ಮಾಡುವ ಪ್ರತಿಯೊಬ್ಬನೂ ಜೀವೋದ್ಧಾರವನ್ನು ಹೊಂದುತ್ತಾನೆ," ಎಂದು ಲಿಖಿತವಾಗಿದೆ. ಪ್ರಭುವಿನಲ್ಲಿ ವಿಶ್ವಾಸವಿಲ್ಲದಿದ್ದರೆ ಅವರ ನಾಮಸ್ಮರಣೆ ಮಾಡುವುದಾದರೂ ಹೇಗೆಅವರ ವಿಷಯವನ್ನು ಕುರಿತು ಕೇಳದಿದ್ದರೆ ಅವರನ್ನು ವಿಶ್ವಾಸಿಸುವುದಾದರೂ ಹೇಗೆಭೋಧಿಸುವವರು ಇಲ್ಲದಿದ್ದರೆ ಅವರ ವಿಷಯಗಳನ್ನು ಕುರಿತು ಕೇಳುವುದಾದರೂ ಹೇಗೆಭೋಧಿಸುವವರನ್ನು ಕಳುಹಿಸದೆ ಹೋದರೆಅವರು ಶುಭಸಂದೇಶವನ್ನು ಭೋಧಿಸುವುದಾದರೂ ಹೇಗೆ? "ಶುಭಸಂದೇಶವನ್ನು ತರುವವರ ಬರುವಿಕೆ ಎಷ್ಟೋ ಶುಭದಾಯಕ," ಎಂದು ಪವಿತ್ರ ಗ್ರಂಥದಲ್ಲೇ ಬರೆಯಲಾಗಿದೆ. ಆದರೂ ಈ ಶುಭಸಂದೇಶವನ್ನು ಎಲ್ಲರೂ ಅಃಗೀಕರಿಸಲಿಲ್ಲ. ಆದ್ದರಿಂದಲೇ ಯೆಶಾಯನು, "ಪ್ರಭುವೇನಾವು ಸಾರಿದ ಸಂದೇಶವನ್ನು ನಂಬಿದವರು ಯಾರು?"  ಎಂದು ಮೊರೆಯಿಟ್ಟಿದ್ದಾನೆ. ಇಂತಿರಲುಶುಭಸಂದೇಶವನ್ನು ಆಲಿಸುವುದರಿಂದ ವಿಶ್ವಾಸ ಮೂಡುತ್ತದೆ. ಶುಭಸಂದೇಶ ಕ್ರಿಸ್ತಯೇಸುವನ್ನು ಭೋಧಿಸುವುದರ ಮೂಲಕ ಪ್ರಕಟವಾಗುತ್ತದೆ. ಈಗ ನನ್ನದೊಂದು ಪ್ರಶ್ನೆ; "ಇಸ್ರಯೇಲರಿಗೆ ಶುಭಸಂದೇಶವನ್ನು ಕೇಳುವ ಸಂದರ್ಭ ಇರಲಿಲ್ಲವೇ?" ನಿಶ್ಚಯವಾಗಿ ಇತ್ತು. ಪವಿತ್ರ ಗ್ರಂಥದಲ್ಲಿ ಹೇಳಿರುವಂತೆ: "ಸಾರುವವರ ಧ್ವನಿ ಜಗದಲ್ಲೆಲ್ಲಾ ಹರಡಿತು ಅವರ ನುಡಿ ಭೂಮಿಯ ತುತ್ತತುದಿಯನ್ನು ಮುಟ್ಟಿತು,"

ಕೀರ್ತನೆ: 19:2-3, 4-5
ಶ್ಲೋಕ: ಅವುಗಳ ನುಡಿಮಾತು ವ್ಯಾಪಿಸಿದೆ ಜಗದಾದ್ಯಂತ.

ಆಕಾಶಮಂಡಲ ಸಾರುತಿದೆ ದೇವರ ಮಹಿಮೆಯನು|
ತಾರಮಂಡಲ ತೋರುತಿದೆ ದೇವರ ಕೈಕೃತಿಗಳನು||
ದಿನವು ಮರುದಿನಕೆ ಈ ಪ್ರಕಟನೆಯನು|
ರಾತ್ರಿ ಮರುರಾತ್ರಿಗೆ ನೀಡುತಿದೆ ಈ ಪ್ರಚಾರವನು||

ಅವುಗಳಿಗೆ ಮಾತಿಲ್ಲ, ಅವುಗಳಿಗೆ ಶಬ್ದವಿಲ್ಲ|
ಅವುಗಳ ಸ್ವರವಂತೂ ಕೇಳಿ ಬರುವುದಿಲ್ಲ||
ಆದರೂ ಅವುಗಳ ಧ್ವನಿರೇಖೆ ಹರಡಿದೆ ಬುವಿಯಾದ್ಯಂತ|
ಅವುಗಳ ನುಡಿಮಾತು ವ್ಯಾಪಿಸಿದೆ ಜಗದಾದ್ಯಂತ||

ಘೋಷಣೆ: ಮತ್ತಾಯ 4:19

ಅಲ್ಲೆಲೂಯ, ಅಲ್ಲೆಲೂಯ!
ನನ್ನನ್ನು ಹಿಂಬಾಲಿಸಿ ಬನ್ನಿ; ನಿಮ್ಮನ್ನು ಮನುಷ್ಯರನೇ ಹಿಡಿಯುವವರನ್ನಾಗಿ ಮಾಡುವೆನು.
ಅಲ್ಲೆಲೂಯ!

ಶುಭಸಂದೇಶ: ಮತ್ತಾಯ  4:18-22

ಯೇಸುಸ್ವಾಮಿ ಗಲಿಲೇಯ ಸರೋವರದ ತೀರದಲ್ಲಿ ನಡೆದು ಹೋಗುತ್ತಿದ್ದರು ಆಗ ಇಬ್ಬರು ಸಹೋದರರನ್ನು ಕಂಡರು. ಇವರೇ 'ಪೇತ್ರಎನಿಸಿಕೊಂಡ ಸಿಮೋನ ಮತ್ತು ಅವನ ಸಹೋದರ ಆಂದ್ರೆಯ. ಬೆಸ್ತರಾದ ಇವರು ಸರೋವರದಲ್ಲಿ ಬಲೆ ಬೀಸುತ್ತಾ ಇದ್ದರು. "ನನ್ನನ್ನು ಹಿಂಬಾಲಿಸಿ ಬನ್ನಿ. ನಿಮ್ಮನ್ನು ಮನುಷ್ಯರನ್ನೇ ಹಿಡಿಯುವವರನ್ನಾಗಿ ಮಾಡುವೆನು," ಎಂದು ಹೇಳಿ ಯೇಸು ಅವರನ್ನು ಕರೆದರು. ತಕ್ಷಣವೇಅವರು ತಮ್ಮ ಬಲೆಗಳನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು. ಅಲ್ಲಿಂದ ಮುಂದಕ್ಕೆ ಹೋಗುತ್ತಿದ್ದಾಗ ಯೇಸು ಜೆಬೆದಾಯನ ಮಕ್ಕಳಾದ ಯಕೋಬ ಮತ್ತು ಯೊವಾನ್ನ ಎಂಬ ಇನ್ನಿಬ್ಬರು ಸಹೋದರರನ್ನು ಕಂಡರು. ಇವರು ತಮ್ಮ ತಂದೆ ಜೆಬೆದಾಯನೊಡನೆ ದೋಣಿಯಲ್ಲಿ ಬಲೆಗಳನ್ನು ಸರಿಪಡಿಸುತ್ತಿದ್ದರು. ಯೇಸು ಇವರನ್ನೂ ಕರೆದರು. ಕೂಡಲೇ ಅವರು ದೋಣಿಯನ್ನೂ ತಮ್ಮ ತಂದೆಯನ್ನೂ ಬಿಟ್ಟು ಯೇಸುವನ್ನು ಹಿಂಬಾಲಿಸಿದರು.

29.11.21

ಮೊದಲನೆಯ ವಾಚನ: ಯೆಶಾಯ 2:1-5

ಜುದೇಯ ಮತ್ತು ಜೆರುಸಲೇಮಿನ ವಿಷಯವಾಗಿ ಆಮೋಚನ ಮಗನಾದ ಯೆಶಾಯನು ಕಂಡ ದರ್ಶನದಲ್ಲಿ ಕೇಳಿಬಂದ ದೈವೋಕ್ತಿ: ಸರ್ವೇಶ್ವರನ ಶ್ರೀ ನಿವಾಸದ ಪರ್ವತವು ಅಂತಿಮ ಕಾಲದಂದು ಪ್ರತಿಷ್ಠೆಗೊಳ್ಳುವುದು, ಬೆಟ್ಟಗುಡ್ಡಗಳಿಗಿಂತ ಎತ್ತರವಾಗಿ ಬೆಳೆದುಬರುವುದು ಅದರತ್ತ ಸಕಲ ರಾಷ್ಟ್ರಗಳು ಜಲಧಾರೆಯಂತೆ ಹರಿದುಬರುವುವು. ದೇಶವಿದೇಶಗಳವರು ಬಂದು ಹೇಳುವರು ಹೀಗೆ : " ಬನ್ನಿ, ಹೋಗೋಣ ಸರ್ವೇಶ್ವರಸ್ವಾಮಿಯ ಪರ್ವತಕ್ಕೆ, ಇಸ್ರಯೇಲರ ದೇವರ ಮಂದಿರಕ್ಕೆ. ಬೋಧಿಸುವನಾತ ನಮಗೆ ಆತನ ಮಾರ್ಗಗಳನು, ನಾವು ಹಿಡಿದು ನಡೆವಂತೆ ಆತನ ಪಥವನು. ಹೊರಡುವುದು ಧರ್ಮಶಾಸ್ತ್ರ ಸಿಯೋನಿನಿಂದ; ಸ್ವಾಮಿಯ ದಿವ್ಯವಾಣಿ ಜೆರುಸಲೇಮಿನಿಂದ. ಬಗೆಹರಿಸುವನು ದೇಶದೇಶಗಳ ವ್ಯಾಜ್ಯವನು, ತೀರಿಸುವನು ರಾಷ್ಟ್ರರಾಷ್ಟ್ರಗಳ ನ್ಯಾಯವನು. ಹಾಕುವರವರು ಕುಲುಮೆಗೆ ತಮ್ಮಾಯುಧಗಳನು. ಮಾರ್ಪಡಿಸುವರು ಕತ್ತಿಗಳನು ನೇಗಿಲ ಗುಳಗಳನ್ನಾಗಿ, ಬರ್ಚಿಗಳನು ಕುಡುಗೋಲುಗಳನ್ನಾಗಿ, ಕತ್ತಿಯನೆತ್ತರು ಜನಾಂಗ ಜನಾಂಗದೆದುರಿಗೆ; ಯುದ್ಧವಿದ್ಯೆಯ ಕಲಿಕೆ ಅಗತ್ಯವಿರದು ಅವರಿಗೆ. ಯಕೋಬ ಮನೆತನದವರೇ, ಬನ್ನಿ, ಸ್ವಾಮಿಯ ಬೆಳಕಿನಲ್ಲಿ ನಡೆಯೋಣ."

ಕೀರ್ತನೆ 122:1-2, 3-4, 6-9
ಶ್ಲೋಕ: ಪ್ರಭುವಿನಾಲಯಕೆ ಹೋಗೋಣ ಬಾ ಎಂದಾಗ | ಆಯಿತೆನಗೆ ಆನಂದ, ಜನರೆನ್ನ ಕರೆದಾಗ ||

ಪ್ರಭುವಿನಾಲಯಕೆ ಹೋಗೋಣ ಬಾ ಎಂದಾಗ|
ಆಯಿತೆನಗೆ ಆನಂದ, ಜನರೆನ್ನ ಕರೆದಾಗ||
ನಮ್ಮ ಕಾಲುಗಳು ಓ ಜೆರುಸಲೇಮೇ|
ತಲುಪಿವೆ ನಿನ್ನ ಪುರದ್ವಾರಗಳನೇ||

ನೋಡು, ಜೆರುಸಲೇಮ್ ಪಟ್ಟನವಿದು|
ಗಟ್ಟಿಯಾಗಿಯೇ ಕಟ್ಟಲ್ಪಟ್ಟಿಹುದು||
ಕುಲಗಳು ಯಾತ್ರೆಯಾಗಿ ಬರುವುವು ಇಲ್ಲಿಗೆ|
ಮಾಡುವರಿಲ್ಲಿಯೇ ಪ್ರಭುವಿನ ನಾಮಕೀರ್ತನೆ|
ಪಾಲಿಪರಿಂತು ಇಸ್ರಯೇಲರಿಗೆ ವಿಧಿಸಿದ ಆಜ್ಞೆ||

"ಜೆರುಸಲೇಮಿನ ಶುಭಕ್ಕಾಗಿ ಮಾಡಿರಿ ಪ್ರಾರ್ಥನೆ|
ಜೆರುಸಲೇಮ್, ನಿನ್ನಭಿಮಾನಿಗಳಿಗೆ ಪ್ರವರ್ಧನೆ||
ಶುಭವಿರಲಿ ನಿನ್ನೀ -- ಪೌಳಿಗೋಡೆಗಳೊಳಗೆ|
ಸಂರಕ್ಷಣೆ ಇರಲಿ ನಿನ್ನ ಅರಮನೆಯೊಳಗೆ"||

ನನ್ನ ಬಂಧುಬಳಗದವರ ನಿಮಿತ್ತ|
ನಿನಗೆ ಶುಭವಿರಲಿ " ಎಂಬುದು ನನ್ನ ಮಾತು||
ನಮ್ಮ ಸ್ವಾಮಿದೇವರ ಮಂದಿರದ ನಿಮಿತ್ತ|
ಹರಸುವೆ ನಿನ್ನ ಸುಕ್ಷೇಮವನು ಹಾರೈಸುತ||

ಶುಭಸಂದೇಶ ವಾಚನ: ಮತ್ತಾಯ 8:5-11

ಆ ಕಾಲದಲ್ಲಿ ಯೇಸು ಕಫೆರ್ನವುಮ್ ಊರಿಗೆ ಬಂದಾಗ ಶತಾಧಿಪತಿಯೊಬ್ಬನು ಅವರನ್ನು ಎದುರುಗೊಂಡನು. " ಪ್ರಭೂ, ನನ್ನ ಸೇವಕ ಮನೆಯಲ್ಲಿ ಪಾರ್ಶ್ವವಾಯು ರೋಗದಿಂದ ಹಾಸಿಗೆ ಹಿಡಿದಿದ್ದಾನೆ, " ಎಂದು ವಿನಂತಿಸಿದನು. ಯೇಸು, " ನಾನೇ ಬಂದು ಅವನನ್ನು ಗುಣಪಡಿಸುತ್ತೇನೆ, " ಎಂದರು. ಅದಕ್ಕೆ ಶತಾಧಿಪತಿ, " ಪ್ರಭುವೇ, ತಾವು ನನ್ನ ಮನೆಗೆ ಬರುವಷ್ಟು ಯೋಗ್ಯತೆ ನನಗಿಲ್ಲ. ತಾವು ಒಂದೇ ಒಂದು ಮಾತು ಹೇಳಿದರೆ ಸಾಕು, ನನ್ನ ಸೇವಕ ಸ್ವಸ್ಥನಾಗುವನು. ಏಕೆಂದರೆ, ನಾನೂ ಮತ್ತೊಬ್ಬರ ಕೈಕೆಳಗಿರುವವನು. ನನ್ನ ಅಧೀನದಲ್ಲೂ ಸೈನಿಕರಿದ್ದಾರೆ. ಅವರಲ್ಲಿ ಒಬ್ಬನಿಗೆ ನಾನು, 'ಬಾ' ಎಂದರೆ ಬರುತ್ತಾನೆ. ಇನ್ನೊಬ್ಬನಿಗೆ, 'ಹೋಗು' ಎಂದರೆ ಹೋಗುತ್ತಾನೆ. ಸೇವಕನಿಗೆ, 'ಇಂಥದ್ದನ್ನು ಮಾಡು' ಎಂದರೆ ಮಾಡುತ್ತಾನೆ, " ಎಂದನು. ಈ ಮಾತನು ಕೇಳಿದ್ದೇ ಯೇಸುವಿಗೆ ಅತ್ಯಾಶ್ಚರ್ಯವಾಯಿತು. ತಮ್ಮನ್ನು ಹಿಂಬಾಲಿಸಿ ಬರುತ್ತಿದ್ದ ಜನರನ್ನು ನೋಡಿ ಹೀಗೆಂದರು : " ಇಂಥ ಗಾಢ ವಿಶ್ವಾಸವನ್ನು ನಾನು ಇಸ್ರಯೇಲ್ ಜನರಲ್ಲಿ ಕೂಡ ಕಾಣಲಿಲ್ಲವೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಪೂರ್ವ ಪಶ್ಚಿಮ ದಿಕ್ಕುಗಳಿಂದ ಅನೇಕ ಜನರು ಬಂದು ಅಬ್ರಹಾಮ, ಇಸಾಕ, ಯಕೋಬರ ಸಮೇತ ಸ್ವರ್ಗಸಾಮ್ರಾಜ್ಯದ ಹಬ್ಬದೂಟದಲ್ಲಿ ಭಾಗಿಗಳಾಗುವರು.

28.11.21 - ನರಪುತ್ರನ ಮುಂದೆ ನಿಲ್ಲಲು ನೀವು ಶಕ್ತರಾಗುವಂತೆ ನಿರಂತರವಾಗಿ ಪ್ರಾರ್ಥನೆಮಾಡುತ್ತಾ ಎಚ್ಚರಿಕೆಯಿಂದಿರಿ

ಮೊದಲನೆಯ ವಾಚನ: ಯೆರೆಮೀಯ 33:14-16


ಸರ್ವೇಶ್ವರ ಹೀಗೆನ್ನುತ್ತಾರೆ: "ಗಮನಿಸಿರಿ ! ದಿನಗಳು ಬರಲಿವೆ, ಇಸ್ರಯೇಲ್, ಯೆಹೂದ ವಂಶಗಳ ವಿಷಯವಾಗಿ ನಾನು ನುಡಿದಿರುವ ಶುಭವಾಕ್ಯವನ್ನು ನೆರವೇರಿಸುವ ದಿನಗಳು ಬರಲಿವೆ. ಆ ಕಾಲದಲ್ಲಿ, ಆ ದಿನಗಳಲ್ಲಿ, ದಾವೀದನೆಂಬ ಮೂಲದಿಂದ ಸದ್ಧರ್ಮಿಯಾದ ಮೊಳಕೆಯೊಂದನ್ನು ಚಿಗುರಿಸುವೆನು. ಆತನು ನಾಡಿನಲ್ಲಿ ನ್ಯಾಯನೀತಿಯನ್ನು ನಿರ್ವಹಿಸುವನು. ಆಗ ಯೆಹೂದ್ಯರು ಸುರಕ್ಷಿತವಾಗಿರುವರು. ಜೆರುಸಲೇಮಿನವರು ನೆಮ್ಮದಿಯಿಂದ ವಾಸಿಸುವರು. ' ಯೆಹೋವಚಿದ್ಕೇನು ' (ಅಂದರೆ ಸರ್ವೇಶ್ವರನೇ ನನ್ನ ಸದ್ಧರ್ಮ) ಎಂಬ ಹೆಸರು ಈ ನಗರಕ್ಕೆ ಸಲ್ಲುವುದು.

ಕೀರ್ತನೆ 25:4-5, 8-9, 10
ಶ್ಲೋಕ : ಎತ್ತಿರುವೆ ಪ್ರಭೂ ಹೃನ್ಮನಗಳನ್ನು ನಿನ್ನತ್ತ |


ನಿನ್ನ ಮಾರ್ಗವನು, ಪ್ರಭೂ, ಎನಗೆ ತೋರಿಸು|
ನೀನೊಪ್ಪುವ ಪಥದಲಿ ನಾ ನಡೆಯ ಕಲಿಸು||
ಸನ್ಮಾರ್ಗದಲಿ ಮುನ್ನಡೆಸೆನ್ನ ದೇವಾ ಮುಕ್ತಿದಾತಾ|
ಕಲಿಸೆನಗೆ, ನಿನಗಾಗಿ ಕಾದಿರುವೆ ಸತತ||

ಸತ್ಯಸ್ವರೂಪನು ದಯಾವಂತನು ಪ್ರಭು|
ದಾರಿತಪ್ಪಿದವರಿಗೆ ಬೋಧಕನು ಪ್ರಭು||
ದೀನರನು ನಡೆಸುವನು ತನ್ನ ವಿಧಿಗನುಸಾರ|
ದಲಿತರಿಗೆ ಕಲಿಸುವೆನು ತನ್ನ ಧರ್ಮಾಚಾರ||

ಪ್ರಭುವಿನೊಪ್ಪಂದಗಳ ಪಾಲಕರಿಗೆ ಆತನ ಮಾರ್ಗಗಳು ಸನ್ನುತ|
ಆತನ ವಿಧಿನಿಯಮಗಳ ಪರಿಪಾಲಕರಿಗೆ ಅವುಗಳು ಸುಪ್ರೀತ||
ಪ್ರಭುವಿನ ಮೈತ್ರಿ, ಭಯಭಕುತಿಯುಳ್ಳವರಿಗೆ|
ಅಂಥವರಿಗೆ ವ್ಯಕ್ತ ಆತನ ಒಡಂಬಡಿಕೆ||

ಎರಡನೆಯ ವಾಚನ: 1 ಪೌಲ 3:12-4:2

ಸಹೋದರರೇ, ನಿಮ್ಮ ಮೇಲೆ ನಮಗಿರುವ ಪ್ರೀತಿ ವೃದ್ಧಿಯಾಗುತ್ತಿರುವಂತೆಯೇ, ನಿಮ್ಮ ಪರಸ್ಪರ ಪ್ರೀತಿಯೂ ಸರ್ವಜನಪ್ರೇಮವೂ ಬೆಳೆದು ಸಮೃದ್ದಿಯಾಗಲೆಂದು ಪ್ರಭುವಿನಲ್ಲಿ ಪ್ರಾರ್ಥಿಸುತ್ತೇವೆ. ನಮ್ಮ ಪ್ರಭು ಯೇಸು ನಿಮ್ಮನ್ನು ದೃಢಪಡಿಸಲಿ; ತಮ್ಮ ಪರಿಶುದ್ಧ ಪರಿವಾರದ ಸಮೇತ ಯೇಸು ಪುನರಾಗಮಿಸುವಾಗ, ನಮ್ಮ ಪಿತನಾದ ದೇವರ ಸನ್ನಿಧಾನದಲ್ಲಿ ನೀವೂ ಸಹ ಪರಿಶುದ್ಧರೂ ನಿಷ್ಕಳಂಕರೂ ಆಗಿ ಕಾಣಿಸಿಕೊಳ್ಳುವಂತೆ ಮಾಡಲಿ. ಕಡೆಯದಾಗಿ ಸಹೋದರರೇ, ನೀವು ಹೇಗೆ ಬಾಳಬೇಕು, ದೇವರು ಮೆಚ್ಚುವಂತೆ ಹೇಗೆ ನಡೆದುಕೊಳ್ಳಬೇಕು, ಎಂಬುದನ್ನು ನಮ್ಮಿಂದ ಕಲಿತುಕೊಂಡಿರಿ, ಅಂತೆಯೇ ಜೀವಿಸುತ್ತಿದ್ದೀರಿ. ನಿಮ್ಮ ನಡತೆ ಇನ್ನೂ ಉತ್ತಮಗೊಳ್ಳಬೇಕೆಂದು ಪ್ರಭು ಯೇಸುವಿನ ಹೆಸರಿನಲ್ಲಿ ನಾವು ನಿಮ್ಮನ್ನು ಕೇಳಿಕೊಳ್ಳುತ್ತೇವೆ ಹಾಗೂ ಪ್ರಬೋಧಿಸುತ್ತೇವೆ. ಪ್ರಭು ಯೇಸುವಿನ ಅಧಿಕಾರದಿಂದ ನಾವು ನಿಮಗೆ ವಿಧಿಸಿದ ನಿಯಮಗಳನ್ನು ನೀವು ಬಲ್ಲಿರಿ.

ಶುಭಸಂದೇಶ: ಲೂಕ 21:25-28, 34-36


ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ಸೂರ್ಯ, ಚಂದ್ರ, ನಕ್ಷತ್ರಗಳಲ್ಲಿ ವಿಚಿತ್ರ ಸೂಚನೆಗಳು ಕಾಣಿಸುಕೊಳ್ಳುವುವು; ಮೊರೆಯುವ ತೆರೆಗಳ ಹಾಗೂ ಭೋರ್ಗರೆಯುವ ಸಮುದ್ರದ ನಿಮಿತ್ತ ಭೂಮಿಯಲ್ಲಿ ಜನಾಂಗಗಳು ದಿಕ್ಕು ತೋಚದೆ ತತ್ತರಿಸಿಹೋಗುವುವು. ಗ್ರಹಶಕ್ತಿಗಳು ಕದಲುವುದರಿಂದ ಧರೆಯಲ್ಲಿ ಏನೇನು ಸಂಭವಿಸುವುದೋ ಎಂಬ ಭಯಭೀತಿಯಿಂದ ಮಾನವರು ದಿಗ್ಭ್ರಮೆಗೊಳ್ಳುವರು. ಆಗ ನರಪುತ್ರನು ಮಹಾ ಶಕ್ತಿಯಿಂದಲೂ ಮಹಿಮಾ ಪ್ರಭಾವದಿಂದಲೂ ಮೇಘಾರೂಢನಾಗಿ ಬರುವುದನ್ನು ಜನರು ಕಾಣುವರು. ಇವೆಲ್ಲವೂ ಸಂಭವಿಸಲು ತೊಡಗುವಾಗ ನೀವು ನಿರೀಕ್ಷಿಸುತ್ತಾ ತಲೆಯೆತ್ತಿ ನಿಲ್ಲಿರಿ; ಏಕೆಂದರೆ, ನಿಮ್ಮ ಉದ್ಧಾರವು ಸಮೀಪಿಸಿತು. ಮಿತಿಮೀರಿದ ಭೋಜನದಿಂದಾಗಲಿ, ಕುಡಿತದಿಂದಾಗಲಿ, ಲೌಕಿಕ ಚಿಂತೆಗಳಿಂದಾಗಲಿ ಮಂದಮತಿಗಳಾಗಬೇಡಿ. ಆ ದಿನವು ಅನಿರೀಕ್ಷಿತ ಉರುಲಿನಂತೆ ನಿಮ್ಮನ್ನು ಸಿಕ್ಕಿಸೀತು, ಜಾಗುರೂಕರಾಗಿರಿ ! ಜಗತ್ತಿನ ಎಲ್ಲಾ ನಿವಾಸಿಗಳೂ ಅದಕ್ಕೆ ಸಿದ್ಧರಾಗಿರಬೇಕು. ಬಂದೊದಗಲಿರುವ ಇವೆಲ್ಲವುಗಳಿಂದ ಪಾರಾಗಿ ನರಪುತ್ರನ ಮುಂದೆ ನಿಲ್ಲಲು ನೀವು ಶಕ್ತರಾಗುವಂತೆ ನಿರಂತರವಾಗಿ ಪ್ರಾರ್ಥನೆಮಾಡುತ್ತಾ ಎಚ್ಚರಿಕೆಯಿಂದಿರಿ, " ಎಂದರು.

27.11.21

ಮೊದಲನೆಯ ವಾಚನ: ದಾನಿಯೇಲ 7:15-27

ದಾನಿಯೇಲನಾದ ನನ್ನ ಮನ ಒಳಗೇ ವ್ಯಥೆಗೊಂಡಿತು. ನನ್ನ ಮನಸ್ಸಿನಲ್ಲಿ ತೋಚದ ದರ್ಶನಗಳು ನನ್ನನ್ನು ಕಳವಳಪಡಿಸಿದವು. ಹತ್ತಿರದಲ್ಲೇ ನಿಂತಿದ್ದವರಲ್ಲಿ ಒಬ್ಬನ ಬಳಿಗೆ ಹೋಗಿ ಇವುಗಳ ಸರಿಯಾದ ಅರ್ಥ ಏನೆಂದು ವಿಚಾರಿಸಿದೆ. ಅವನು ನನಗೆ: " ಆ ನಾಲ್ಕು ದೊಡ್ಡ ಮೃಗಗಳು ಲೋಕಸಾಗರಗಳಿಂದ ಏರತಕ್ಕ ನಾಲ್ಕು ರಾಜ್ಯಗಳು. ಆದರೆ ರಾಜ್ಯಾಧಿಕಾರ ಲಭಿಸುವುದು ಮಹೋನ್ನತರ ಪವಿತ್ರ ಪ್ರಜೆಗೆ. ಅದನ್ನು ತಲೆತಲಾಂತರಕ್ಕೂ ಶಾಶ್ವತವಾಗಿ ಅನುಭವಿಸುವವರು ಅವರೇ, " ಎಂದು ಆ ವಿಷಯಗಳ ತಾತ್ಪರ್ಯವನ್ನು ವಿವರಿಸಿ ತಿಳಿಸಿದನು. ಆದಾದ ಮೇಲೆ ಇತರ ಮೃಗಗಳಿಗಿಂತ ವಿಲಕ್ಷಣವಾಗಿಯೂ ಅತಿ ಭಯಂಕರವಾಗಿಯೂ ಕಬ್ಬಿಣದ ಹಲ್ಲು, ಕಂಚಿನ ಉಗುರುಳ್ಳದ್ದಾಗಿಯೂ ತನ್ನ ಬಲಿಯನ್ನು ತುಂಡುತುಂಡಾಗಿಸಿ ಕಬಳಿಸುತ್ತಿದ್ದ ಆ ನಾಲ್ಕನೆಯ ಮೃಗದ ವಿಷಯವನ್ನು ತಿಳಿದುಕೊಳ್ಳಲು ಬಯಸಿದೆ. ಅದರ ತಲೆಯ ಮೇಲಿದ್ದ ಹತ್ತು ಕೊಂಬುಗಳ ವಿಷಯವಾಗಿಯೂ, ನಾನು ನೋಡುತ್ತಿದ್ದ ಹಾಗೆ ಯಾವ ಕೊಂಬು ಮೊಳೆತು ಮೂರು ಕೊಂಬುಗಳನ್ನು ಬೀಳಿಸಿ, ತನ್ನಲ್ಲೆ ಕಣ್ಣುಳ್ಳದಾಗಿ ಬಡಾಯಿ ಕೊಚ್ಚಿಕೊಳ್ಳುವ ಬಾಯುಳ್ಳದ್ದಾಗಿ, ಮಿಕ್ಕ ಕೊಂಬುಗಳಿಗಿಂತ ಭಯಂಕರವಾಗಿ ಕಾಣಿಸುತ್ತಾ ಇತ್ತೋ, ಆ ಕೊಂಬಿನ ವಿಷಯವಾಗಿ ಸತ್ಯಾರ್ಥವನ್ನೂ ತಿಳಿದುಕೊಳ್ಳಬೇಕೆಂದು ವಿಚಾರಿಸಿದೆ. ಆ ಕೊಂಬು ಪವಿತ್ರ ಪ್ರಜೆಯೊಂದಿಗೆ ಯುದ್ಧಮಾಡುತ್ತಿತ್ತು. ಮಹಾವೃದ್ಧನು ಬಂದು ಮಹೋನ್ನತರ ಆ ಪವಿತ್ರ ಪ್ರಜೆಗೆ ನ್ಯಾಯತೀರಿಸಿ ಅವರಿಗೆ ರಾಜ್ಯವನ್ನು ದೊರಕಿಸುವ ತನಕ ಅವರನ್ನು ಗೆಲ್ಲುತ್ತಾ ಬಂದಿತ್ತು. ಆಗ ಅವನು ನನಗೆ ಕೊಟ್ಟ ವಿವರ ಇದು: " ಆ ನಾಲ್ಕನೆಯ ಮೃಗ ಲೋಕದಲ್ಲಿ ತಲೆಯೆತ್ತುವ ನಾಲ್ಕನೆಯ ರಾಜ್ಯ. ಅದು ಮಿಕ್ಕ ರಾಜ್ಯಗಳಿಗಿಂತ ವಿಲಕ್ಷಣವಾದುದು. ಲೋಕವನ್ನೇ ಕಾಲಿನಿಂದ ತುಳಿದು ಚೂರುಚೂರು ಮಾಡಿ ಕಬಳಿಸುವುದು. ಆ ಹತ್ತು ಕೊಂಬುಗಳು ಅದೇ ರಾಜ್ಯವನ್ನು ಆಳುವ ಹತ್ತು ಮಂದಿ ಅರಸರು. ಅವರ ತರುವಾಯ ಮತ್ತೊಬ್ಬನು ತಲೆದೋರುವನು. ಅವನು ಮುಂಚಿನ ಅರಸರಿಗಿಂತ ವಿಲಕ್ಷಣವಾಗಿರುವನು, ಆ ಮೂವರು ಅರಸರನ್ನು ಸದೆಬಡಿದುಬಿಡುವನು. ಅವನು ಮಹೋನ್ನತ ದೇವರಿಗೆ ವಿರುದ್ದವಾಗಿ ಕೊಚ್ಚಿಕೊಳ್ಳುವನು. ಮಹೋನ್ನತರ ಪವಿತ್ರ ಪ್ರಜೆಯನ್ನು ಶೋಷಣೆಗೆ ಗುರಿಮಾಡುವನು. ಆ ಪ್ರಜೆ ಅವನಿಗೆ ಮೂರುವರೆ ವರ್ಷ ಅಧೀನರಾಗಿರುವರು. ಆದರೆ ದೇವರ ನ್ಯಾಯಸಭೆ ತೀರ್ಪಿತ್ತು, ಅವನ ದೊರೆತನವನ್ನು ಕಿತ್ತು, ವಿನಾಶಮಾಡಿ, ಕೊನೆಗಾಣಿಸಿಬಿಡುವುದು. ರಾಜ್ಯಭಾರವೂ ದೊರೆತನವೂ ಸಮಸ್ತಲೋಕದಲ್ಲಿನ ರಾಜ್ಯಗಳ ಮಹಿಮೆಯೂ ಮಹೋನ್ನತರ ಭಕ್ತಜನರಿಗೆ ಕೊಡಲಾಗುವುದು. ಅವರ ರಾಜ್ಯ ಶಾಶ್ವತ ರಾಜ್ಯ. ಎಲ್ಲ ದೇಶಾಧಿಪತಿಗಳೂ ಅವರಿಗೆ ಅಧೀನರಾಗಿ ಸೇವೆ ಮಾಡುವರು, " ಎಂದು ಹೇಳಿದನು.

ಕೀರ್ತನೆ ಅಜರ್ಯ 60:65
ಶ್ಲೋಕ: ಸರ್ವೇಶ್ವರನನ್ನು ಕೊಂಡಾಡಿ, ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.

ಮಾನವ ಜನಾಂಗಗಳೇ, ಸರ್ವೇಶ್ವರನನ್ನು ಕೊಂಡಾಡಿ|
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ||
ಇಸ್ರಯೇಲ್ ನಾಡೇ, ಸರ್ವೇಶ್ವರನನ್ನು ಕೊಂಡಾಡು|
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸು||

ಸರ್ವೇಶ್ವರನ ಯಾಜಕರೇ,, ಸರ್ವೇಶ್ವರನನ್ನು ಕೊಂಡಾಡಿ|
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ||
ಸರ್ವೇಶ್ವರನ ದಾಸರೇ, ಸರ್ವೇಶ್ವರನನ್ನು ಕೊಂಡಾಡಿ|
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ||

ಸಜ್ಜನರ ಜೀವಾತ್ಮಗಳೇ, ಸರ್ವೇಶ್ವರನನ್ನು ಕೊಂಡಾಡಿ|
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ||
ಸಂತರೇ, ದೀನಮನಸ್ಕರೇ, ಸರ್ವೇಶ್ವರನನ್ನು ಕೊಂಡಾಡಿ|
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ||

ಶುಭಸಂದೇಶ: ಲೂಕ 21:34-36

ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ಮಿತಿಮೀರಿದ ಭೋಜನದಿಂದಾಗಲಿ, ಕುಡಿತದಿಂದಾಗಲಿ, ಲೌಕಿಕ ಚಿಂತೆಗಳಿಂದಾಗಲಿ ಮಂದಮತಿಗಳಾಗಬೇಡಿ. ಆ ದಿನವು ಅನಿರೀಕ್ಷಿತ ಉರುಲಿನಂತೆ ನಿಮ್ಮನ್ನು ಸಿಕ್ಕಿಸೀತು, ಜಾಗುರೂಕರಾಗಿರಿ! ಜಗತ್ತಿನ ಎಲ್ಲಾ ನಿವಾಸಿಗಳೂ ಅದಕ್ಕೆ ಸಿದ್ಧರಾಗಿರಬೇಕು. ಬಂದೊದಗಲಿರುವ ಇವೆಲ್ಲವುಗಳಿಂದ ಪಾರಾಗಿ ನರಪುತ್ರರ ಮುಂದೆ ನಿಲ್ಲಲು ನೀವು ಶಕ್ತರಾಗುವಂತೆ ನಿರಂತರವಾಗಿ ಪ್ರಾರ್ಥನೆ ಮಾಡುತ್ತಾ ಎಚ್ಚರಿಕೆಯಿಂದಿರಿ, " ಎಂದರು.

26.11.21 - "ಭೂಮ್ಯಾಕಾಶಗಳು ಗತಿಸಿಹೋಗುತ್ತದೆ; ಆದರೆ ನನ ಮಾತುಗಳು ಶಾಶ್ವತವಾಗಿ ಉಳಿಯುತ್ತವೆ"

ಮೊದಲನೇ ವಾಚನ: ದಾನಿಯೇಲ  7:2-14 


ದಾನಿಯೇಲನು ತಾನು ಕಂಡ ಕನಸಿನ ವಿಷಯವಾಗಿ ಇಂತೆಂದನು: ನಾನು ರಾತ್ರಿ ಕಂಡ ಕನಸಿನಲ್ಲಿ ನಾಲ್ಕು ದಿಕ್ಕುಗಳಿಂದಲೂ ಗಾಳಿ ಮಹಾಸಾಗರದ ಮೇಲೆ ರಭಸವಾಗಿ ಬೀಸಿ ಬಡಿಯುತ್ತಿತ್ತು. ವಿಲಕ್ಷಣವಾದ ನಾಲ್ಕು ದೊಡ್ಡ ಮೃಗಗಳು ಆ ಸಾಗರದಿಂದ ಹೊರಗೆ ಬಂದವು ಮೊದಲು ಕಾಣಿಸಿದ ಮೃಗ ಸಿಂಹದ ಹಾಗಿತ್ತು. ಆದರೆ ಅದಕ್ಕೆ ಹದ್ದಿನಂಥ ರೆಕ್ಕೆಗಳಿದ್ದವು. ನಾನು ನೋಡುತ್ತಿರುವಾಗಲೇ ಆ ರೆಕ್ಕೆಗಳು ಕೀಳಲ್ಪಟ್ಟವು. ಆ ಮೃಗವನ್ನು ನೆಲದಿಂದ ಮೇಲಕ್ಕೆತ್ತಿ ಮನುಷ್ಯನ ಹಾಗೆ ಎರಡು ಕಾಲುಗಳ ಮೇಲೆ ನಿಲ್ಲಿಸಲಾಯಿತು. ಅದಕ್ಕೆ ಮನುಷ್ಯನ ಹೃದಯ ಕೊಡಲಾಯಿತು. ಬಳಿಕ ಎರಡನೆಯ ಇನ್ನೊಂದು ಮೃಗವನ್ನು ಕಂಡೆ. ಅದು ಕರಡಿಯ ಹಾಗಿತ್ತು. ಒಂದು ಹೆಗಲನ್ನು ಮೇಲಕ್ಕೆ ಎತ್ತಿಕೊಂಡಿತ್ತು. ತನ್ನ ಬಾಯಲ್ಲಿನ ಹಲ್ಲುಗಳ ನಡುವೆ ಮೂರು ಪಕ್ಕೆಲುಬುಗಳನ್ನು ಕಚ್ಚಿಕೊಂಡಿತ್ತು. "ನೀನೆದ್ದು ಬೇಕಾದಷ್ಟು ಮಾಂಸವನ್ನು ತಿನ್ನು," ಎಂದು ಅದಕ್ಕೆ ಹೇಳಲಾಯಿತು. ಆನಂತರ ನಾನು ನೋಡುತ್ತಿರುವಾಗಲೇ ಚಿರತೆಯ ಹಾಗಿದ್ದ ಮತ್ತೊಂದು ಮೃಗ ಕಾಣಿಸಿತು. ಅದರ ಪಕ್ಕೆಗಳಲ್ಲಿ ಪಕ್ಷಿಯ ರೆಕ್ಕೆಗಳಂತಿರುವ ನಾಲ್ಕು ರೆಕ್ಕೆಗಳಿದ್ದವು. ಆ ಮೃಗಕ್ಕೆ ನಾಲ್ಕು ತಲೆಗಳಿದ್ದವು. ಅದಕ್ಕೆ ದೊರೆತನ ಕೊಡಲಾಯಿತು. ಇದಾದ ಬಳಿಕ ಆ ರಾತ್ರಿ ಕನಸಿನಲ್ಲಿ ಕಾಣಿಸಿಕೊಂಡ ನಾಲ್ಕನೇ ಮೃಗ ಭಯಂಕರವಾಗಿತ್ತು, ಹೆದರಿಸುವಂಥದಾಗಿತ್ತು. ಅಧಿಕ ಬಲವುಳ್ಳದ್ದಾಗಿತ್ತು. ಅದಕ್ಕೆ ಕಬ್ಬಿಣದ ದೊಡ್ಡ ಹಲ್ಲುಗಳಿದ್ದವು. ಅದು ತನ್ನ ಬಲಿಯನ್ನು ತುಂಡು ತುಂಡಾಗಿಸಿ ಕಬಳಿಸುತ್ತಿತ್ತು. ಮಿಕ್ಕದ್ದನ್ನು ಕಾಲುಗಳಿಂದ ತುಳಿಯುತ್ತಾ ಇತ್ತು. ಅದು ಮುಂಚಿನ  ಮೃಗಗಳಿಗಿಂತ ವಿಲಕ್ಷಣವಾಗಿತ್ತು ಅದಕ್ಕೆ ಹತ್ತು ಕೊಂಬುಗಳಿದ್ದವು. ನಾನು ಆ ಕೊಂಬುಗಳನ್ನು ಗಮನಿಸುತ್ತಿರುವಾಗಲೇ ಅವುಗಳ ನಡುವೆ ಇಗೋ ಇನ್ನೊಂದು ಚಿಕ್ಕ ಕೊಂಬು ಮೊಳೆಯಿತು. ಅದಕ್ಕೆ ಎಡೆ ಮಾಡಿಕೊಡಲು ಮುಂಚಿನ ಕೊಂಬುಗಳಲ್ಲಿ ಮೂರನ್ನು ಬೇರುಸಹಿತ ಕೀಳಲಾಯಿತು. ಆಶ್ಚರ್ಯವೆಂದರೆ, ಆ ಕೊಂಬಿನಲ್ಲಿ ಮನುಷ್ಯನ ಕಣ್ಣುಗಳಂತಿರುವ ಕಣ್ಣುಗಳಿದ್ದವು. ಬಡಾಯಿ ಕೊಚ್ಚಿಕೊಳ್ಳುವ ಬಾಯೂ ಇತ್ತು. ನಾನು ನೋಡುತ್ತಿದ್ದ ಹಾಗೆ: ಸಿಂಹಾಸನಗಳನ್ನು ಹಾಕಲಾಯಿತು.  ಮಹಾವೃದ್ಧನೊಬ್ಬನು ಆಸೀನನಾದನು. ಆತನ ಉಡುಪು ಬೆಳ್ಳಗಿತ್ತು ಹಿಮದಂತೆ. ಆತನ ಸಿಂಹಾಸನ ಅಗ್ನಿಜ್ವಾಲೆಗಳು. ಧಗಧಗಿಸುವ ಬೆಂಕಿ ಅದರ ಚಕ್ರಗಳು. ಆ ಸಿಂಹಾಸನದ ಸಮ್ಮುಖದಿಂದ ಪ್ರಜ್ವಲ ಪ್ರವಾಹವೊಂದು ಉಕ್ಕಿ ಹರಿದು ಬಂದಿತು. ಲಕ್ಷೋಪಲಕ್ಷ ದೂತರು ಆತನಿಗೆ ಸೇವೆ ಸಲ್ಲಿಸುತ್ತಿದ್ದರು. ಕೋಟ್ಯಾನುಕೋಟಿ ಕಿಂಕರರು ಆತನ ಮುಂದೆ ನಿಂತಿದ್ದರು. ನ್ಯಾಯಸಭೆಯವರು ತೀರ್ಪು ನೀಡಲು ಕುಳಿತುಕೊಂಡರು. ಪಟ್ಟಿ ಪುಸ್ತಕಗಳನ್ನು ತೆರೆಯಲಾಯಿತು. ನಾನು ನೋಡುತ್ತಾ ಇದ್ದೆ: ಆ ಕಿರು ಕೊಂಬು ಬಡಾಯಿಕೊಚ್ಚಿಕೊಂಡ ನಿಮಿತ್ತ ಆ ಕೊಂಬಿನ ಮೃಗವನ್ನು ಕೊಂದು ಅದರ ಹೆಣವನ್ನು ಉರಿಯುವ ಬೆಂಕಿಗೆ ಹಾಕಿ ನಾಶಮಾಡಿದರು. ಮಿಕ್ಕ ಮೃಗಗಳ ದೊರೆತನವನ್ನು ತೆಗೆದುಬಿಟ್ಟರು. ಆದರೆ ಕೆಲವು ಕಾಲದ ಮಟ್ಟಿಗೆ, ತಕ್ಕ ಸಮಯ ಬರುವ ತನಕ, ಅವುಗಳ ಜೀವಾವಧಿಯನ್ನು ಉಳಿಸಿದರು. ನಾನು ಕಂಡ ರಾತ್ರಿಯ ಕನಸಿನಲ್ಲಿ ನರಪುತ್ರನಂತಿರುವವನು ಆಕಾಶದ ಮೇಘಗಳೊಂದಿಗೆ ಬಂದು ಆ ಮಹಾವೃದ್ಧನನ್ನು ಸಮೀಪಿಸಿದನು. ಅವನನ್ನು ಆತನ ಸನ್ನಿಧಿಗೆ ತಂದರು. ಸಕಲ ರಾಷ್ಟ್ರ - ಕುಲ - ಭಾಷೆಗಳವರು ಅವನಿಗೆ ಸೇವೆ ಸಲ್ಲಿಸಲೆಂದು ಅವನಿಗೆ ದೊರೆತನ, ಘನತೆ, ರಾಜ್ಯತ್ವ ಇವುಗಳನ್ನು ಕೊಡಲಾಯಿತು. ಅವನ ಆಳ್ವಿಕೆಗೆ ಅಂತ್ಯವಿಲ್ಲ. ಅದು ಶಾಶ್ವತವಾದುದು, ಅವನ ರಾಜ್ಯ ಎಂದಿಗೂ ಅಳಿಯದು! 

ಅಜರ್ಯ: 1:53-54, 55-56, 57-59 
ಶ್ಲೋಕ: ಸರ್ವೇಶ್ವರನನು ಕೊಂಡಾಡಿ ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ 

ಶುಭಸಂದೇಶ: ಲೂಕ 21:29-33 


ಯೇಸುಸ್ವಾಮಿ ಶಿಷ್ಯರಿಗೆ ಈ ಸಾಮತಿಯನ್ನು ಹೇಳಿದರು; "ಅಂಜೂರದ ಹಾಗೂ ಇತರ ಮರಗಳನ್ನು ಗಮನಿಸಿರಿ. ಅವುಗಳ ಎಲೆಗಳು ಚಿಗುರುತ್ತಲೇ ವಸಂತಕಾಲ ಆರಂಭಿಸಿತೆಂದು ನೀವೇ ಅರಿತುಕೊಳ್ಳುತ್ತೀರಿ. ಅಂತೆಯೇ ಇವೆಲ್ಲವೂ ಸಂಭವಿಸುವುದನ್ನು ನೋಡುವಾಗ ದೇವರ ಸಾಮ್ರಾಜ್ಯವು ಸಮೀಪಿಸಿತೆಂದು ತಿಳಿದುಕೊಳ್ಳಿರಿ. ಇವೆಲ್ಲ ಸಂಭವಿಸುವವರೆಗೆ ಈ ಪೀಳಿಗೆ ಗತಿಸಿ ಹೋಗದೆಂದು ಒತ್ತಿಹೇಳುತ್ತೇನೆ. ಭೂಮ್ಯಾಕಾಶಗಳು ಗತಿಸಿಹೋಗುತ್ತದೆ; ಆದರೆ ನನ ಮಾತುಗಳು ಶಾಶ್ವತವಾಗಿ ಉಳಿಯುತ್ತವೆ.

25.11.21 - ನರಪುತ್ರನು ಮಹಾಶಕ್ತಿಯಿಂದಲೂ ಮಹಿಮಾ ಪ್ರಭಾವದಿಂದಲೂ ಮೇಘಾರೂಢನಾಗಿ ಬರುವುದನ್ನು ಜನರು ನಿರೀಕ್ಷಿಸುತ್ತಾ ತಲೆಯೆತ್ತಿ ನಿಲ್ಲಿರಿ

ಮೊದಲನೇ ವಾಚನ: ದಾನಿಯೇಲ 6:12-18 


ಆಸ್ಥಾನಕ್ಕೆ ಬಂದು ರಾಜಾಜ್ಞೆಯ ಪ್ರಸ್ತಾಪವನ್ನೆತ್ತಿ, "ರಾಜರೇ, ಯಾರೂ ಮೂವತ್ತು ದಿನಗಳ ತನಕ ತಮಗೆ ಹೊರತು ಬೇರೆ ಯಾವ ದೇವರಿಗಾಗಲಿ ಮನುಷ್ಯನಿಗಾಗಲಿ ಪ್ರಾರ್ಥನೆ ಮಾಡಕೂಡದು. ಮಾಡಿದರೆ ಅಂಥವನನ್ನು ಸಿಂಹಗಳ ಗವಿಯಲ್ಲಿ ಹಾಕಲಾಗುವುದು ಎಂಬ ಶಾಸನಕ್ಕೆ ನೀವು ರುಜುಹಾಕಿದಿರಲ್ಲವೆ?" ಎಂದು ಕೇಳಿದರು. ಅದಕ್ಕೆ ರಾಜನು, "ಹೌದು, ಮೇದ್ಯರ ಹಾಗು ಪರ್ಷಿಯರ ಧರ್ಮವಿಧಿಗಳಂತೆ ಅದು ಸ್ಥಿರವಾದ ನಿಬಂಧನೆ," ಎಂದು ಉತ್ತರಕೊಟ್ಟನು. ಆಗ ಅವರು ರಾಜಸನ್ನಿಧಿಯಲ್ಲಿ, "ರಾಜರೇ, ಜುದೇಯದಿಂದ ಸೆರೆಯಾಳುಗಳಾಗಿ ತಂದವರಲ್ಲಿ ಒಬ್ಬನಾದ  ಆ ದಾನಿಯೇಲನು ನಿಮ್ಮನ್ನಾಗಲಿ, ನಿಮ್ಮ ಹಸ್ತಾಕ್ಷರದ ರುಜುವಿರುವ ಶಾಸನವನ್ನಾಗಲಿ ಮಾನ್ಯಮಾಡುತ್ತಿಲ್ಲ," ಬದಲಿಗೆ ದಿನಕ್ಕೆ ಮೂರಾವರ್ತಿ ಪ್ರಾರ್ಥನೆ ಮಾಡುತ್ತಿದ್ದಾನೆ," ಎಂದು ದೂರಿತ್ತರು. ಆದರೆ ರಾಜನು ಈ ಮಾತುಗಳನ್ನು ಕೇಳಿ ಬಹಳ ವ್ಯಸನಗೊಂಡನು. ದಾನಿಯೇಲನನ್ನು ಈ ಇಕ್ಕಟ್ಟಿನಿಂದ ತಪ್ಪಿಸಲು ಮನಸ್ಸು ಮಾಡಿಕೊಂಡನು. ಆದರೆ ಹೇಗೆ ರಕ್ಷಿಸುವುದೆಂದು ಸೂರ್ಯಾಸ್ತಮದವರೆಗೂ ಆಲೋಚಿಸುತ್ತಾ ಇದ್ದನು. ಇದನ್ನು ಅರಿತುಕೊಂಡ ಆ ಅಧಿಕಾರಿಗಳು ರಾಜಸನ್ನಿಧಿಗೆ ಮತ್ತೆ ಕೂಡಿಬಂದು, "ಪ್ರಭೂ, ರಾಜರು ವಿಧಿಸಿದ ಯಾವ ನಿಬಂಧನೆಯಾಗಲಿ, ಶಾಸನವಾಗಲಿ ರದ್ದಾಗಬಾರದು ಎಂಬ ಧರ್ಮಸೂತ್ರ ಮೇದ್ಯರಲ್ಲೂ ಪರ್ಷಿಯರಲ್ಲೂ ಉಂಟೆಂಬುದು ತಮಗೆ ತಿಳಿದಿರಬೇಕು," ಎಂದರು. ಈ ಕಾರಣ ರಾಜನು ಅಪ್ಪಣೆ ಕೊಡಲೇಬೇಕಾಯಿತು. ಕೂಡಲೆ ಅವರು ದಾನಿಯೇಲನನ್ನು ತಂದು ಸಿಂಹಗಳ ಗವಿಯಲ್ಲಿ ಹಾಕಿಯೇಬಿಟ್ಟರು. ಆಗ ರಾಜನು ದಾನಿಯೇಲನಿಗೆ, "ನೀನು ದಿನನಿತ್ಯವೂ ಆರಾಧಿಸುವ ದೇವರು ನಿನ್ನನ್ನು ಉದ್ಧರಿಸಲಿ!" ಎಂದು ಹರಸಿದನು. ಆ ಆಧಿಕಾರಿಗಳಾದರೋ ಒಂದು ಬಂಡೆಯನ್ನು ತಂದು ಆ ಗವಿಯ ಬಾಯನ್ನು ಮುಚ್ಚಿದರು. ದಾನಿಯೇಲನ ಈ ಗತಿಯನ್ನು ಯಾರೂ ಬದಲಾಯಿಸಲಾಗದಂತೆ ರಾಜನ ಮತ್ತು ಅವನ ಮುಖಂಡರ ಮುದ್ರೆಯನ್ನು ಅದಕ್ಕೆ ಒತ್ತಿ ಮೊಹರು ಮಾಡಲಾಯಿತು. ಬಳಿಕ ರಾಜನು ಅರಮನೆಗೆ ಹಿಂದಿರುಗಿದನು. ಆ ರಾತ್ರಿಯೆಲ್ಲಾ ಉಪವಾಸವಿದ್ದನು.  ವಾದ್ಯವಿನೋದಾವಳಿ ಯಾವುದನ್ನೂ ಹತ್ತಿರಬರಲು ಬಿಡಲಿಲ್ಲ. ನಿದ್ರೆ ಅವನ ಕಣ್ಣುಗಳಿಂದ ಮಾಯವಾಯಿತು. ಮಾರನೆಯ ದಿನ ಬೆಳಗ್ಗೆ ರಾಜನು ಉದಯದಲ್ಲೇ ಎದ್ದು ಸಿಂಹಗಳ ಗವಿಯ ಬಳಿಗೆ ವೇಗವಾಗಿ ಹೋದನು. ದಾನಿಯೇಲನಿದ್ದ ಗವಿಯ ಸಮೀಪಕ್ಕೆ ಬಂದು, ದುಃಖ ಧ್ವನಿಯಿಂದ ದಾನಿಯೇಲನನ್ನು ಕೂಗಿ, "ದಾನಿಯೇಲನೇ, ಜೀವಸ್ವರೂಪನಾದ ದೇವರ ದಾಸನೇ, ನೀನು ದಿನನಿತ್ಯವು ಆರಾಧಿಸುವ ನಿನ್ನ ದೇವರಿಗೆ ನಿನ್ನನ್ನು ಸಿಂಹಗಳಿಂದ ಉದ್ಧರಿಸಲು ಸಾಧ್ಯವಾಯಿತೋ?" ಎಂದು ಕೇಳಿದನು. ಆಗ ದಾನಿಯೇಲನು ರಾಜನಿಗೆ, "ಅರಸರೇ, ಚಿರಂಜೀವಿಯಾಗಿರಿ! ನನ್ನ ದೆವರು ತಮ್ಮ ದೂತನನ್ನು ಕಳಿಸಿ, ಸಿಂಹಗಳ ಬಾಯನ್ನು ಬಂಧಿಸಿದರು. ಅವುಗಳಿಂದ ನನಗೆ ಯಾವ ಹಾನಿಯೂ ಆಗಲಿಲ್ಲ. ಏಕೆಂದರೆ ಆ ದೇವರ ದೃಷ್ಟಿಯಲ್ಲಿ ನಾನು ನಿರ್ಮಲನು.  ರಾಜನಾದ ತಮಗೂ ನಾನು ಯಾವ ದ್ರೋಹವನ್ನು ಮಾಡಲಿಲ್ಲ," ಎಂದು ಹೇಳಿದನು. ರಾಜನು ಇದನ್ನು ಕೇಳಿ ಬಹಳ ಸಂತೋಷಪಟ್ಟನು. ದಾನಿಯೇಲನನು ಗವಿಯೊಳಗಿಂದ ಮೇಲಕ್ಕೆತ್ತಬೇಕೆಂದು ಅಪ್ಪಣೆಮಾಡಿದನು. ಅಂತೆಯೇ ಅವನನ್ನು ಮೇಲಕ್ಕೆತ್ತಲಾಯಿತು. ಆತನು ತನ್ನ ದೇವರಲ್ಲಿ ದೃಢವಾದ ವಿಶ್ವಾಸವಿಟ್ಟ ಕಾರಣ ಅವನಿಗೆ ಯಾವ ಹಾನಿಯೂ ಆಗಿರಲಿಲ್ಲ. ಆನಂತರ ರಾಜನು ಆಜ್ಞಾಪಿಸಲು ದಾನಿಯೇಲನ  ಮೇಲೆ ದೂರು ಹೊರಿಸಿದವರನ್ನು ಮಡದಿಮಕ್ಕಳ ಸಮೇತ ತಂದು ಸಿಂಹಗಳ ಗವಿಯಲ್ಲಿ ಹಾಕಿಬಿಟ್ಟರು ಅವರು ಗವಿಯ ತಳಮುಟ್ಟುವುದರೊಳಗೆ ಸಿಂಹಗಳು ಅವರ ಮೇಲೆ ಹಾರಿ ಅವರ ಎಲುಬುಗಳನ್ನೆಲ್ಲ ಚೂರು ಚೂರು ಮಾಡಿದವು. ಇದಾದಮೇಲೆ ರಾಜ ದಾರ್ಯಾವೆಷನು ಜಗದಲ್ಲಿ ವಾಸಿಸುವ ಸಕಲ ದೇಶ - ಕುಲ - ಭಾಷೆಗಳವರಿಗೆ ಈ ಪ್ರಸಿದ್ಧ ಪತ್ರವನು ಬರೆಯಿಸಿದನು; "ನಿಮಗೆ ಹೆಚ್ಚೆಚ್ಚು ಸುಖಶಾಂತಿ ಲಭಿಸಲಿ!" ನನ್ನ ರಾಜ್ಯದ ಪ್ರಜೆಗಳೆಲ್ಲರಿಗೆ ನಾನು ಆಜ್ಞಾಪಿಸುವುದೇನೆಂದರೆ: ನೀವೆಲ್ಲರು ದಾನಿಯೇಲನ ದೇವರ ಮುಂದೆ ಭಯಭಕ್ತಿಯಿಂದ ನಡೆದುಕೊಳ್ಳತಕ್ಕದ್ದು . ಏಕೆಂದರೆ ಆತನೇ ಜೀವಸ್ವರೂಪನಾದ ಸನಾತನ ದೇವರು! ಆತನ ರಾಜ್ಯ ಎಂದೆಂದಿಗೂ ಅಳಿಯದು. ಆತನ ಆಳ್ವಿಕೆ ಶಾಶ್ವತವಾದುದು ! ಆತ ಉದ್ಧರಿಸುವಂಥವನು, ರಕ್ಷಿಸುವಂಥವನು ಭೂಮ್ಯಾಕಾಶಗಳಲ್ಲಿ ಅದ್ಭುತ ಮಹತ್ವಗಳನ್ನು ನಡೆಸುವಂಥವನು! ಆತನೇ ದಾನಿಯೇಲನನ್ನು ಸಿಂಹಗಳ ಬಾಯಿಂದ ತಪ್ಪಿಸಿದವನು! ಹೀಗೆ ಈ ದಾನಿಯೇಲನು ದಾರ್ಯಾವೆಶನ ಆಳ್ವಿಕೆಯಲ್ಲೂ ಪರ್ಷಿಯಾನಾದ ಸೈರೆಷನ ಆಳ್ವಿಕೆಯಲ್ಲೂ ಪ್ರವರ್ಧಿಸುತ್ತಾ ಬಾಳಿದನು. 

ಅಜರ್ಯ: 46-48, 49-50, 51-52 
ಶ್ಲೋಕ: ಸರ್ವೇಶ್ವರನನ್ನು ಕೊಂಡಾಡಿ, ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿರಿ 

ಇಬ್ಬನಿ, ಹಿಮಪಾತಗಳೇ, ಸರ್ವೇಶ್ವರನನ್ನು ಕೊಂಡಾಡಿ|
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ||
ಚಳಿ ಬೇಸಿಗೆಗಳೇ, ಸರ್ವೇಶ್ವರನನ್ನು ಕೊಂಡಾಡಿ|
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ||
ಮಂಜು ಹಿಮಗಡ್ಡೆಗಳೇ, ಸರ್ವೇಶ್ವರನನ್ನು ಕೊಂಡಾಡಿ|
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ||

ಹಗಲು ಇರುಳುಗಳೇ, ಸರ್ವೇಶ್ವರನನ್ನು ಕೊಂಡಾಡಿ|
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ||
ಬೆಳಕು ಕತ್ತಲುಗಳೇ, ಸರ್ವೇಶ್ವರನನ್ನು ಕೊಂಡಾಡಿ|
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ||

ಮಿಂಚು ಮೋಡಗಳೇ, ಸರ್ವೇಶ್ವರನನ್ನು ಕೊಂಡಾಡಿ|
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ||
ಧರಣಿಮಂಡಲವು ಸರ್ವೇಶ್ವರನನ್ನು ಕೊಂಡಾಡಲಿ|
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಲಿ||


ಶುಭಸಂದೇಶ: ಲೂಕ 21:20-28 



ಯೇಸು ಶಿಷ್ಯರಿಗೆ ಹೀಗೆಂದರು: ಜೆರುಸಲೇಮ್ ಪಟ್ಟಣವನ್ನು ಸೈನ್ಯಗಳು ಸುತ್ತುಗಟ್ಟುತ್ತಿರುವುದನ್ನು ನೀವು ಕಾಣುವಾಗ ಅದರ ವಿನಾಶ ಸಮೀಪಿಸಿತೆಂದು ತಿಳಿದುಕೊಳ್ಳಿ. ಆಗ ಜುದೇಯದಲ್ಲಿರುವವರು ಬೆಟ್ಟಗುಡ್ಡಗಳಿಗೆ ಓಡಿಹೋಗಲಿ; ಪಟ್ಟಣದೊಳಗಿರುವವರು ಅಲ್ಲಿಂದ ಹೊರಟುಹೋಗಲಿ; ಹಳ್ಳಿಗಾಡಿನಲ್ಲಿರುವವರು ಪಟ್ಟಣಕ್ಕೆ ಬಾರದಿರಲಿ. ಏಕೆಂದರೆ, ದಂಡನೆಯ ಕಾಲ ಅದು. ಅದನ್ನು ಕುರಿತು ಪವಿತ್ರ ಗ್ರಂಥದಲ್ಲಿ ಬರೆದಿರುವುದೆಲ್ಲಾ ಆಗ ನೆರವೇರಬೇಕು. ಅಯ್ಯೋ, ಆ ದಿನಗಳಲ್ಲಿ ಗರ್ಭಿಣಿಯರ ಮತ್ತು ಹಾಲೂಡಿಸುವ ತಾಯಂದಿರ ಗೋಳೇನು! ಈ ನಾಡು ಮಹಾವಿಪತ್ತಿಗೆ ಈಡಾಗುವುದು. ಈ ಜನತೆ ದೈವಕೋಪಕ್ಕೆ ಗುರಿಯಾಗುವುದು. ಕೆಲವರು ಕತ್ತಿಯ ಬಾಯಿಗೆ ತುತ್ತಾಗುವರು. ಮತ್ತೆ ಕೆಲವರು ಬಂಧಿತರಾಗಿ ದೇಶದೇಶಗಳಿಗೆ ಕೊಂಡೊಯ್ಯಲ್ಪಡುವರು; ಅನ್ಯದೇಶೀಯರು ತಮ್ಮ ಕಾಲಾವಧಿಯ ತನಕ ಜೆರುಸಲೇಮನ್ನು ತುಳಿದುಹಾಕುವರು. "ಸೂರ್ಯ, ಚಂದ್ರ, ನಕ್ಷತ್ರಗಳಲ್ಲಿ ವಿಚಿತ್ರ ಸೂಚನೆಗಳು ಕಾಣಿಸಿಕೊಳ್ಳುವುವೂ; ಮೊರೆಯುವ ತೆರೆಗಳ ಹಾಗೂ ಭೋರ್ಗರೆಯುವ ಸಮುದ್ರದ ನಿಮಿತ್ತ ಭೂಮಿಯಲ್ಲಿ ಜನಾಂಗಗಳು ದಿಕ್ಕುತೋಚದೆ ತತ್ತರಿಸಿಹೋಗುವುವು. ಗ್ರಹಶಕ್ತಿಗಳು ಕದಲುವುದರಿಂದ ಧರೆಯಲ್ಲಿ  ಏನೇನು ಸಂಭವಿಸುವುದೋ ಎಂಬ ಭಯಭೀತಿಯಿಂದ ಮಾನವರು ದಿಗ್ಬ್ರಮೆಗೊಳ್ಳುವರು. ಆಗ ನರಪುತ್ರನು ಮಹಾಶಕ್ತಿಯಿಂದಲೂ ಮಹಿಮಾ ಪ್ರಭಾವದಿಂದಲೂ ಮೇಘಾರೂಢನಾಗಿ ಬರುವುದನ್ನು ಜನರು ನಿರೀಕ್ಷಿಸುತ್ತಾ ತಲೆಯೆತ್ತಿ ನಿಲ್ಲಿರಿ; ಏಕೆಂದರೆ, ನಿಮ್ಮ ಉದ್ಧಾರವು ಸಮೀಪಿಸಿತು."