ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

01.08.2018

ಮೊದಲನೇ ವಾಚನ: ಯೆರೆಮೀಯ 15:10, 16-21 

"ನನ್ನ ಹೆತ್ತ ತಾಯಿಯೇ.  ನನ್ನ ಗತಿಯನ್ನು ಎನು ಹೇಳಲಿ! ಜಗದ ಜನರಿಗೆಲ್ಲ ನಾನೊಬ್ಬ ಜಗಳಗಂಟಿಗ, ವ್ಯಾಜ್ಯಗಾರ. ನಾನು ಹಣವನ್ನು ಸಾಲವಾಗಿ ಕೊಟ್ಟವನಲ್ಲ, ಕೊಂಡವನೂ ಅಲ್ಲ. ಆದರೂ ನನ್ನನ್ನು ಶಪಿಸುವವರೇ. ನಿಮ್ಮ ವಚನಗಳು ನನಗೆ ದೊರೆತವು. ಅವುಗಳನ್ನು ಹಾಗೆಯೆ ನುಂಗಿಬಿಟ್ಟೆನು. ನಿಮ್ಮ ನುಡಿಗಳು ನನಗೆ ಹರ್ಷವನ್ನೂ ಹೃದಯಾನಂದವನ್ನೂ ತಂದವು. ಸರ್ವಶಕ್ತರಾದ ದೇವರೇ, ಸರ್ವೇಶ್ವರಾ, ನಾನು ನಿಮ್ಮ ನಾಮಧಾರಿಯಲ್ಲವೆ? ವಿನೋದಗಾರರ ಕೂಟದಲ್ಲಿ ಭಾಗವಹಿಸಿ ನಾನು ಉಲ್ಲಾಸಪಟ್ಟವನಲ್ಲ. ನಿಮ್ಮ ಕೈ ನನ್ನ ಮೇಲೆ ಇದ್ದುದರಿಂದ ನಾನು ಒಬ್ಬಂಟಿಗನಾದೆ. ಕೋಪಾವೇಶದಿಂದ ತುಂಬಿದವನಾದೆ. ನನಗೇಕೆ ನಿರಂತರವಾದ ವೇದನೆ? ? ಗುಣವಾಗದ ಗಡಸು ಗಾಯ? ನೀರು ಇರುವುದಾಗಿ ತೋರಿಸಿಕೊಳ್ಳುವ ಕಳ್ಳ ತೊರೆಯಾಗಬೇಕೆ ನೀವು ನನಗೆ?" ಅದಕ್ಕೆ ಸರ್ವೇಶ್ವರ: " ನೀನು ನನಗೆ ಅಭಿಮುಖವಾಗಿ ಹಿಂದಿರುಗಿ ಬಂದರೆ ಮರಳಿ ನಿನ್ನನ್ನು ನನ್ನ ಸೇವೆಗೆ ಸೇರಿಸಿಕೊಳ್ಳುವೆನು. ತುಚ್ಛವಾದುದನ್ನು ತೊರೆದು ಅಮೂಲ್ಯವಾದುದನ್ನು ಉಚ್ಛರಿಸುವೆಯಾದರೆ ನೀನು ನನ್ನ ಬಾಯಿಯಂತಿರುವೆ. ಜನರು ನಿನ್ನ ಕಡೆಗೆ ತಿರುಗಿಕೊಳ್ಳುವರು. ನೀನು ಅವರ ಕಡೆಗೆ ತಿರುಗದಿರುವೆ. ನಾನು ನಿನ್ನನ್ನು ಆ ಜನರಿಗೆ ದುರ್ಗಮವಾದ ಕಂಚಿನ  ಪೌಳಿಗೋಡೆಯನ್ನಾಗಿಸುವೆನು. ನಿನಗೆ ವಿರುದ್ದ ಅವರು ಯುದ್ಧ ಮಾಡುವರು. ಆದರೆ ನಿನ್ನನ್ನು ಸೋಲಿಸಲಾಗದು. ನಿನ್ನನ್ನು ಉದ್ಧರಿಸಿ ರಕ್ಷಿಸಲು ನಾನೇ ನಿನ್ನೊಂದಿಗಿರುವೆನು. ಇದು ಸರ್ವೇಶ್ವರನಾದ ನನ್ನ ಮಾತು. ನಿನ್ನನ್ನು ದುಷ್ಟರ ಕೈಯಿಂದ ಉದ್ಧರಿಸುವೆನು. ಕ್ರೂರಿಗಳ ಕೈಯಿಂದ ರಕ್ಷಿಸುವೆನು" ಎಂದರು. 

ಕೀರ್ತನೆ: 59:2-3,4, 10-11,17,18 
ಶ್ಲೋಕ: ದೇವಾ, ಸಂಕಟದಲ್ಲೆನಗಾದ ಆಶ್ರಯಗಿರಿ ನೀವು. 

ಶುಭಸಂದೇಶ: ಮತ್ತಾಯ 13:44-46 

"ಸ್ವರ್ಗಸಾಮ್ರಾಜ್ಯವನ್ನು ಹೊಲದಲ್ಲಿ ಹೂಳಿಟ್ಟ ನಿಧಿಗೆ ಹೋಲಿಸಬಹುದು, ಇದನ್ನು ಒಬ್ಬನು ಪತ್ತೆ ಹಚ್ಚಿ ಅಲ್ಲಿಯೇ ಮುಚ್ಛಿಡುತ್ತಾನೆ. ತನಗಾದ ಸಂತೋಷದಿಂದ ಹೋಗಿ ತನಗೆ ಇದ್ದುಬದ್ದುದೆಲ್ಲವನ್ನೂ ಮಾರಿ ಈ ಹೊಲವನ್ನೇ ಕೊಂಡು ಕೊಂಡುಬಿಡುತ್ತಾನೆ. "ಸ್ವರ್ಗಸಾಮ್ರಾಜ್ಯವನ್ನು ಉತ್ತಮವಾದ ಮುತ್ತು ರತ್ನಗಳನ್ನು ಹುಡುಕಿಕೊಂಡು ಹೋಗುವ ವರ್ತಕನಿಗೂ ಹೋಲಿಸಬಹುದು. ಅನರ್ಘ್ಯವಾದ ಒಂದು ಮುತ್ತನ್ನು ಕಂಡ ಕೂಡಲೇ ವರ್ತಕ ತನ್ನ ಆಸ್ತಿಪಾಸ್ತಿಯನ್ನೆಲ್ಲಾ ಮಾರಿ ಆ ಮುತ್ತನ್ನು ಕೊಂಡುಕೊಳ್ಳುತ್ತಾನೆ" ಎಂದರು ಯೇಸುಸ್ವಾಮಿ.

31.07.2018

ಲೊಯೊಲ್ಲಾದ ಸಂತ ಇಗ್ನೇಷಿಯಸ್

ಮೊದಲನೇ ವಾಚನ: ಯೆರೆಮಿಯ 14:17-22

"ನೀನು ನಿನ್ನ ದುಃಖವನ್ನು ಅವರಿಗೆ ಹೀಗೆಂದು ವ್ಯಕ್ತಪಡಿಸು - ’ರಾತ್ರಿ ಹಗಲು ನನ್ನ ಕಣ್ಣೀರು ಸುರಿಯಲಿ ನಿರಂತರವಾಗಿ ಏಕೆಂದರೆ ನನ್ನ ಜನವೆಂಬ ಯುವತಿ ಗಾಯಗೊಂಡಿದ್ದಾಳೆ ತೀವ್ರವಾಗಿ, ಹೌದು, ಅವಳಿಗೆ ಪೆಟ್ಟುಬಿದ್ದಿದೆ ಗಡುಸಾಗಿ. ಊರುಬಿಟ್ಟು ಹೊರಗೆ ಹೋದರೆ ಅಲ್ಲಿ ಕಾಣಿಸುತ್ತಾರೆ ಖಡ್ಗದಿಂದ ಸತ್ತವರು. ಊರ ಒಳಗೆ ಬಂದರೆ ಅಲ್ಲಿ ಕಾಣಿಸುತ್ತಾರೆ ಕ್ಷಾಮದಿಂದ ನರಳುವವರು. ಅಪರಿಚಿತ ನಾಡಿಗೆ ಗಡೀಪಾರಾಗಿದ್ದಾರೆ ಪ್ರವಾದಿಗಳು ಮತ್ತು ಯಾಜಕರು’." "ಸ್ವಾಮಿ, ನೀವು ಜುದೇಯವನ್ನು ಸಂಪೂರ್ಣವಾಗಿ ತ್ಯಜಿಸಿಬಿಟ್ಟಿರೋ? ಸಿಯೋನಿನ ಬಗ್ಗೆ ನಿಮಗೆ ಮನಃಪೂರ್ವಕವಾದ ಅಸಹ್ಯ ಹುಟ್ಟಿದೆಯೊ? ಗುಣವಾಗದಂಥ ಪೆಟ್ಟನ್ನು ನಮಗೆ ಕೊಟ್ಟಿರುವಿರಿ ಏಕೆ? ಸುಖವನ್ನು ನಿರೀಕ್ಷಿಸಿದೆವು, ಸಿಗಲಿಲ್ಲ ನಮಗೆ ಯಾವ ಫಲ. ಸುಕ್ಷೇಮವನ್ನು ಎದುರು ನೋಡಿದೆವು, ಇಗೋ ಬಂದೊದಗಿದೆ ಸಂಕಟ. ಹೇ ಸರ್ವೇಶ್ವರಾ, ಒಪ್ಪಿಕೊಂಡಿದ್ದೇವೆ ನಮ್ಮ ದುಷ್ಟತನವನ್ನು ನಮ್ಮ ಪೂರ್ವಜರು ಎಸಗಿದ ದುರಾಚಾರವನ್ನು ನಾವು ಮಾಡಿದ ಪಾಪ ನಿಮಗೆ ವಿರುದ್ಧವೆಂಬುದನ್ನು. ನಿಮ್ಮ ನಾಮವನ್ನು ಮುಂದಿಟ್ಟು, ನಮಗೆ ಅವಮಾನ ಮಾಡಬೇಡಿ ನಿಮ್ಮ ಮಹಿಮೆಯ ಸಿಂಹಾಸನವನ್ನು ಅಸಡ್ಡೆ ಮಾಡಬೇಡಿ ನಮ್ಮೊಡನೆ ಮಾಡಿದ ಒಡಂಬಡಿಕೆಯನ್ನು ನೆನೆಯಿರಿ. ಅದನ್ನು ಭಂಗಪಡಿಸಬೇಡಿ. ಅನ್ಯಜನಾಂಗಗಳ ಶೂನ್ಯದೇವತೆಗಳಲ್ಲಿ ಮಳೆಸುರಿಸಬಲ್ಲವರುಂಟೆ? ಆಕಾಶವು ತಾನಾಗಿ ಹದಮಳೆಯನ್ನು ಬರಮಾಡಬಲ್ಲುದೆ? ನಮ್ಮ ದೇವರಾದ ಸರ್ವೇಶ್ವಾರಾ, ಸೃಷ್ಟಿದಾತರು ನೀವೇ ನಾವು ನಿರೀಕ್ಷಿಸುತ್ತಿರುವುದು ನಿಮ್ಮನ್ನೇ ಹೌದು, ಇವುಗಳನ್ನೆಲ್ಲ ನಡೆಸುವವರು ನೀವೇ."

ಕೀರ್ತನೆ: 27-8, 9,11,13

ಶ್ಲೋಕ: ದೇವಾ, ನೆರವಾಗು ನಿನ್ನ ನಾಮ ಮಹಿಮೆಯ ನಿಮಿತ್ತ.

ಶುಭಸಂದೇಶ: ಮತ್ತಾಯ: 13: 36-43

ಯೇಸುಸ್ವಾಮಿ ಜನರನ್ನು ಬೀಳ್ಕೊಟ್ಟು ಮನೆಗೆ ಬಂದರು. ಶಿಷ್ಯರು ಅವರ ಬಳಿಗೆ ಬಂದು, "ಹೊಲದಲ್ಲಿ ಬಿತ್ತಲಾದ ಕಳೆಗಳ ಸಾಮತಿಯನ್ನು ನಮಗೆ ವಿವರಿಸಿರಿ," ಎಂದು ಕೇಳಿಕೊಂಡರು. ಅದಕ್ಕೆ ಯೇಸು, "ಒಳ್ಳೆಯ ಗೋಧಿಯನ್ನು ಬಿತ್ತುವವನು ಎಂದರೆ ನರಪುತ್ರನು; ಹೊಲವೇ ಈ ಲೋಕ; ಒಳ್ಳೆಯ ಕಾಳುಗಳೇ ಶ್ರೀಸಾಮ್ರಾಜ್ಯದ ಮಕ್ಕಳು; ಕಳೆಗಳೇ ಕೇಡಿಗನ ಮಕ್ಕಳು. ಆ ಕಳೆಗಳನ್ನು ಬಿತ್ತಿದ ವೈರಿಯೇ ಪಿಶಾಚಿ. ಸುಗ್ಗಿಯೇ ಕಾಲಾಂತ್ಯ, ಕೊಯ್ಲುಗಾರರೇ ದೇವದೂತರು. ಕಳೆಗಳನ್ನು ಕಿತ್ತು ಬೆಂಕಿಯಲ್ಲಿ ಸುಟ್ಟು ಹಾಕಿದಂತೆ ಕಾಲಾಂತ್ಯದಲ್ಲೂ ನಡೆಯುವುದು. ನರಪುತ್ರನು ತನ್ನ ದೂತರನ್ನು ಕಳುಹಿಸುವನು. ಅವರು ಆತನ ರಾಜ್ಯದಿಂದ ಪಾಪಕ್ಕೆ ಕಾರಣವಾದುದೆಲ್ಲವನ್ನೂ ಮತ್ತು ದುಷ್ಕರ್ಮಿಗಳೆಲ್ಲರನ್ನೂ ಒಟ್ಟುಗೂಡಿಸಿ ಅಗ್ನಿಕುಂಡದಲ್ಲಿ ಹಾಕುವರು; ಅಲ್ಲಿ ಅವರು ಕಟಕಟನೆ ಹಲ್ಲು ಕಡಿದುಕೊಂಡು ಗೋಳಾಡುವರು. ಸದ್ದರ್ಮಿಗಳು ತಮ್ಮ ತಂದೆಯ ಸಾಮ್ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುವರು. ಕಿವಿಯುಳ್ಳವನು ಕೇಳಿಸಿಕೊಳ್ಳಲಿ!" ಎಂದರು.


29.07.2018

ಮೊದಲನೆಯ ವಾಚನ
ನಮ್ಮ ಉದ್ದೇಶ ಒಳ್ಳೆಯದಾಗಿದ್ದರೆ, ನಾವು ಎಂಥ ಸಂದರ್ಭದಲ್ಲೂ ಅದ್ಭುತಗಳನ್ನು ಮಾಡಬಹುದು. ಕಾರಣ ನಾವು ಸಾಧನಗಳಷ್ಟೇ, ದೇವರೇ ಅದ್ಭುತ ಮಾಡುತ್ತಾರೆ. ಎಲೀಷಾ ಪ್ರವಾದಿಯ ಈ ಘಟನೆ ಇದನ್ನು ಸಾಬೀತುಪಡಿಸುತ್ತದೆ.

ಅರಸರ ಎರಡನೆಯ ಗ್ರಂಥದಿಂದ ವಾಚನ - 4: 42-44


ಒಂದು ದಿನ ಬಾಳ್‌ಷಾಲಿಷಾ ಊರಿನ ಒಬ್ಬ ವ್ಯಕ್ತಿ ಇಪ್ಪತ್ತು ಜವೆಗೋಧಿಯ ರೊಟ್ಟಿಗಳನ್ನೂ ಒಂದು ಚೀಲ ತುಂಬ ಹಸೀ ತೆನೆಗಳನ್ನೂ ಪ್ರಥಮ ಫಲದ ಕಾಣಿಕೆಯಾಗಿ ತೆಗೆದುಕೊಂಡು ಬಂದು ದೈವಪುರುಷನಿಗೆ ಸಮರ್ಪಿಸಿದನು. ಎಲೀಷನು ತನ್ನ ಸೇವಕನಿಗೆ, “ಇದನ್ನು ಜನರಿಗೆ ಕೊಡು; ಅವರು ಊಟಮಾಡಲಿ,” ಎಂದು ಹೇಳಿದನು. ಅದಕ್ಕೆ ಅವನು, “ಇಷ್ಟನ್ನು ನೂರು ಮಂದಿಗೆ ಹೇಗೆ ಬಡಿಸಲಿ,” ಎಂದನು. ಎಲೀಷನು, “ಇರಲಿ, ಕೊಡು; ಅವರು ಊಟ ಮಾಡಲಿ. ‘ಅವರು ಅದನ್ನು ಊಟಮಾಡಿ ತೃಪ್ತರಾಗಿ ಇನ್ನೂ ಉಳಿಸಿಕೊಳ್ಳುವರು ಎಂಬುದು ಸರ್ವೇಶ್ವರನ ನುಡಿ,” ಎಂದು ಹೇಳಿದನು. ಸೇವಕನು ಬಡಿಸಿದನು. ಸರ್ವೇಶ್ವರನು ನುಡಿದಂತೆಯೇ ಜನರು ಊಟ ಮಾಡಿ, ತೃಪ್ತರಾಗಿ ಇನ್ನೂ ಉಳಿಸಿಕೊಂಡರು.
- ಪ್ರಭುವಿನ ವಾಕ್ಯ

ಎರಡನೆಯ ವಾಚನ
ನೀವು ಕರೆಯಲ್ಪಟ್ಟ ಉದ್ದೇಶಕ್ಕೆ ಸರಿಯಾಗಿ ನಡೆದುಕೊಳ್ಳಿ ಎಂದು ಪೌಲ ಹೇಳುವಾಗ ಅದು ಬರೀ ಬಾಯಿ ಮಾತಿನ ಉಪದೇಶವಲ್ಲ, ತನ್ನ ಬದುಕಿನದೇ ಉದಾಹರಣೆ

ಸಂತ ಪೌಲ ಎಫೆಸಿಯರಿಗೆ ಬರೆದ ಪತ್ರದಿಂದ ವಾಚನ  - 4 : 1-6
ಹೋದರರೇ, ಪ್ರಭುವಿನ ಸೇವೆಯ ನಿಮಿತ್ತ ಸೆರೆಯಾಳಾಗಿರುವ ಪೌಲನಾದ ನಾನು ನಿಮ್ಮಲ್ಲಿ ಬಿನ್ನವಿಸುವುದು ಏನೆಂದರೆ: ದೇವರ ಕರೆಗೆ ಅನುಗುಣವಾಗಿ ಯೋಗ್ಯ ಬಾಳುವೆ ನಡೆಸಿರಿ. ಯಾವಾಗಲೂ ದೀನದಯಾಳತೆ, ವಿನಯಶೀಲತೆ ಹಾಗೂ ಶಾಂತಿ ಸಮಾಧಾನವುಳ್ಳವರಾಗಿರಿ. ಪರಸ್ಪರ ಪ್ರೀತಿಯಿಂದಲೂ ಸಹನೆಯಿಂದಲೂ ವರ್ತಿಸಿರಿ. ಪವಿತ್ರಾತ್ಮರಿಂದ ಉಂಟಾಗುವ ಐಕ್ಯತೆಯನ್ನು ಕಾಪಾಡಿಕೊಳ್ಳಲು ಆಸಕ್ತರಾಗಿರಿ. ಅದು ನಿಮ್ಮನ್ನು ಸಮಾಧಾನದಲ್ಲಿ ಬಂಧಿಸುವುದು. ನೀವೆಲ್ಲರೂ ಒಂದೇ ಶರೀರಕ್ಕೆ ಸೇರಿದವರು; ಒಬ್ಬರೇ ಪವಿತ್ರಾತ್ಮರನ್ನು ಪಡೆದವರು; ಒಂದೇ ನಿರೀಕ್ಷೆಗಾಗಿ ಕರೆ ಹೊಂದಿದವರು. ನಮ್ಮೆಲ್ಲರಿಗೂ ಪ್ರಭೂ ಒಬ್ಬರೇ; ವಿಶ್ವಾಸವೂ ಒಂದೇ;  ದೀಕ್ಷಾಸ್ನಾನವೂ ಒಂದೇ. ದೇವರು ಒಬ್ಬರೇ, ಸರ್ವರ ತಂದೆಯೂ ಅವರೇ; ಸರ್ವಶ್ರೇಷ್ಟರೂ ಅವರೇ; ಸರ್ವರ ಮೂಲಕ ಕಾರ್ಯ ನಿರ್ವಹಿಸುವವರೂ ಅವರೇ ಮತ್ತು ಸಮಸ್ತರಲ್ಲಿ ವಾಸಿಸುವವರೂ ಅವರೇ.
- ಪ್ರಭುವಿನ ವಾಕ್ಯ

ಘೋಷಣೆ
ಅಲ್ಲೆಲೂಯ, ಅಲ್ಲೆಲೂಯ! ಮಾರ್ಗವು ಸತ್ಯವೂ ಜೀವವೂ ನಾನೇ, ನನ್ನ ಮುಖಾಂತರ ಬಾರದ ಹೊರತು ಯಾರೂ ಪಿತನ ಬಳಿಗೆ ಬರಲಾರರು. ಅಲ್ಲೆಲೂಯ!

ಶುಭಸಂದೇಶ

ಸಂತ ಯೊವಾನ್ನರು ಬರೆದ ಶುಭಸಂದೇಶದಿಂದ ವಾಚನ - 6: 1-15

ಯೇಸುಸ್ವಾಮಿ ಗಲಿಲೇಯ ಸರೋವರವನ್ನು ದಾಟಿ, ಆಚೆಯ ದಡಕ್ಕೆ ಹೋದರು. ಅದಕ್ಕೆ ತಿಬೇರಿಯ ಸರೋವರವೆಂದು ಹೆಸರು. ಜನರ ದೊಡ್ಡ ಗುಂಪೊಂದು ಅವರ ಹಿಂದೆ ಹೋಯಿತು. ಏಕೆಂದರೆ, ಯೇಸು ಸೂಚಕ ಕಾರ್ಯಗಳನ್ನು ಮಾಡುತ್ತಾ ರೋಗಪೀಡಿತರನ್ನು ಗುಣಪಡಿಸುತ್ತಾ ಇದ್ದುದನ್ನು ಆ ಜನರು ನೋಡಿದ್ದರು. ಯೇಸು ಬೆಟ್ಟವನ್ನು ಹತ್ತಿ ತಮ್ಮ ಶಿಷ್ಯರ ಸಂಗಡ ಕುಳಿತುಕೊಂಡರು. ಯೆಹೂದ್ಯರ ಪಾಸ್ಕ ಹಬ್ಬವು ಹತ್ತಿರವಾಗಿತ್ತು. ಯೇಸು ಕಣ್ಣು ಹಾಯಿಸಿ ನೋಡಿದಾಗ ಆ ದೊಡ್ಡ ಗುಂಪು ತಮ್ಮ ಕಡೆಗೆ ಬರುವುದನ್ನು ಕಂಡರು. “ಈ ಜನರ ಊಟಕ್ಕೆ ರೊಟ್ಟಿಯನ್ನು ನಾವು ಎಲ್ಲಿಂದ ಕೊಂಡುಕೊಳ್ಳುವುದು?” ಎಂದು ಯೇಸು ಫಿಲಿಪ್ಪನನ್ನು ಕೇಳಿದರು. ಫಿಲಿಪ್ಪನನ್ನು ಪರೀಕ್ಷಿಸುವ ಸಲುವಾಗಿ ಅವರು ಹಾಗೆ ಹೇಳಿದರು. ಏಕೆಂದರೆ, ತಾವು ಮಾಡಲಿರುವುದು ಅವರಿಗೆ ತಿಳಿದಿತ್ತು. ಅದಕ್ಕೆ ಫಿಲಿಪ್ಪನು, “ಇನ್ನೂರು ದಿನಾರಿ ನಾಣ್ಯಗಳನ್ನು ಕೊಟ್ಟು ರೊಟ್ಟಿಯನ್ನು ತಂದರೂ ಆಳಿಗೊಂದು ತುಂಡೂ ಬಾರದು”, ಎಂದನು. ಆಗ ಶಿಷ್ಯರಲ್ಲಿ ಒಬ್ಬನು, ಅಂದರೆ ಸಿಮೋನ್ ಪೇತ್ರನ ಸಹೋದರನಾದ ಅಂದ್ರೇಯನು, “ಇಲ್ಲಿ ಒಬ್ಬ ಹುಡುಗನ ಬಳಿ ಜವೆಗೋಧಿಯ ಐದು ರೊಟ್ಟಿಗಳೂ ಎರಡು ಮೀನುಗಳೂ ಇವೆ. ಆದರೆ ಈ ಜನಸಮೂಹಕ್ಕೆ ಇವೆಲ್ಲಿ ಸಾಕಾಗುತ್ತವೆ?” ಎಂದನು. ಯೇಸು, “ಜನರನ್ನು ಊಟಕ್ಕೆ ಕೂರಿಸಿರಿ,” ಎಂದರು. ಅಲ್ಲಿ ಹುಲುಸಾಗಿದ್ದ ಹುಲ್ಲಿನ ಮೇಲೆ ಜನರು ಕುಳಿತುಕೊಂಡರು. ಗಂಡಸರ ಸಂಖ್ಯೆಯೇ ಐದು ಸಾವಿರದಷ್ಟಿತ್ತು. ಯೇಸು, ರೊಟ್ಟಿಗಳನ್ನು ತೆಗೆದುಕೊಂಡು ದೇವರಿಗೆ ಸ್ತೋತ್ರವನ್ನು ಸಲ್ಲಿಸಿ, ಕುಳಿತಿದ್ದ ಜನರಿಗೆ ಅವುಗಳನ್ನು ಹಂಚಿದರು. ಹಾಗೆಯೇ ಮೀನುಗಳನ್ನೂ ಹಂಚಿಕೊಟ್ಟರು. ಎಲ್ಲರೂ ತಮಗೆ ಬೇಕಾದಷ್ಟು ತಿಂದರು. ಅವರೆಲ್ಲರೂ ತಿಂದು ತೃಪ್ತರಾದ ಮೇಲೆ ಯೇಸು, “ತಿಂದುಳಿದ ತುಂಡುಗಳನ್ನೆಲ್ಲಾ ಒಟ್ಟುಗೂಡಿಸಿರಿ; ಒಂದು ತುಂಡೂ ಹಾಳಾಗಬಾರದು,” ಎಂದು ತಮ್ಮ ಶಿಷ್ಯರಿಗೆ ಹೇಳಿದರು. ತಿಂದುಳಿದ ಆ ಐದು ರೊಟ್ಟಿಗಳ ತುಂಡುಗಳನ್ನು ಒಟ್ಟು ಗೂಡಿಸಲು ಅವು ಹನ್ನೆರಡು ಬುಟ್ಟಿಗಳ ತುಂಬ ಆದವು. ಯೇಸು ಮಾಡಿದ ಈ ಸೂಚಕ ಕಾರ್ಯಗಳನ್ನು ಕಂಡ ಜನರು, “ಲೋಕಕ್ಕೆ ಬರಬೇಕಾಗಿದ್ದ ಪ್ರವಾದಿ ನಿಜವಾಗಿಯೂ ಇವರೇ,” ಎಂದು ಹೇಳತೊಡಗಿದ್ದರು. ಅವರೆಲ್ಲರೂ ಬಂದು ತಮ್ಮನ್ನು ಹಿಡಿದು ಅರಸನನ್ನಾಗಿ ಮಾಡುವ ಯೋಚನೆಯಲ್ಲಿದ್ದಾರೆ ಎಂಬುದನ್ನು ಅರಿತ ಯೇಸು ತಾವೊಬ್ಬರೇ ಬೆಟ್ಟದ ಕಡೆಗೆ ಹೊರಟುಬಿಟ್ಟರು.

27.07.2018

ಪ್ರವಾದಿ ಯೆರೇಮಿಯನ ಗ್ರಂಥದಿಂದ ವಾಚನ 3: 14-17

ಇದು ಪ್ರಭುವಿನ ನುಡಿ: ಭ್ರಷ್ಟರಾದ ಜನರೇ, ನನಗೆ ಅಭಿಮುಖರಾಗಿರಿ, ನಾನು ನಿಮಗೆ ಅಧಿಪತಿ. ನಿಮ್ಮಲ್ಲಿ ಒಂದು ಪಟ್ಟಣಕ್ಕೆ ಒಬ್ಬನಂತೆ ಗೋತ್ರಕ್ಕೆ ಇಬ್ಬರಂತೆ ಆರಿಸಿ ಸಿಯೋನಿಗೆ ಕರೆತರುವೆನು. ಇದಲ್ಲದೆ ನನ್ನ ಮನಸ್ಸು ಒಪ್ಪುವ ಪಾಲಕರನ್ನು ನಿಮಗೆ ಕೊಡುವೆನು. ಅವರು ನಿಮ್ಮನ್ನು ಜ್ಞಾನವಿವೇಕಗಳಿಂದ ಪೋಷಿಸುವರು. ನೀವು ನಾಡಿನಲ್ಲಿ ಹೆಚ್ಚಿನ ಅಭಿವೃದ್ಧಿಯಾದಾಗ, ಸರ್ವೇಶ್ವರನ ಒಡಂಬಡಿಕೆಯ ಮಂಜೂಷವೆಲ್ಲಿ? ಎಂದು ಪ್ರಸ್ತಾಪಿಸುವಂತಿಲ್ಲ. ಅದು ಜ್ಞಾಪಕಕ್ಕೆ ಬರುವುದಿಲ್ಲ, ಯಾರೂ ಅದನ್ನು ಸ್ಮರಿಸುವುದಿಲ್ಲ. ಅದು ಇಲ್ಲವಲ್ಲಾ ಎಂದು ದುಃಖಿಸುವುದಿಲ್ಲ. ಹೊಸದೊಂದನ್ನು ಕಲ್ಪಿಸುವುದಿಲ್ಲ. ಇದು ಸರ್ವೇಶ್ವರನಾದ ನನ್ನ ನುಡಿ. ಆ ಕಾಲ ಬಂದಾಗ ಜೆರುಸಲೇಮನ್ನೇ ಸರ್ವೇಶ್ವರನ ಸಿಂಹಾಸನ ಎಂದು ಕರೆಯುವರು. ನನ್ನ ನಾಮ ಮಹತ್ವದ ಸ್ಥಾನವಾದ ಜೆರುಸಲೇಮಿಗೆ ಸಕಲ ರಾಷ್ಟ್ರಗಳವರು ನೆರೆದು ಬರುವರು. ಆಮೇಲೆ ತಮ್ಮ ದುಷ್ಟ ಹೃದಯದ ನಿಮಿತ್ತ ಹಟಮಾರಿಗಳಂತೆ ನಡೆಯಲಾರರು.

ಕೀರ್ತನೆ 31 : 10, 11-12, 13

ಶ್ಲೋಕ : ಪ್ರಭು, ನಮ್ಮನ್ನು ಕಾಪಾಡುವರು|

ಸಂತ ಮತ್ತಾಯ ಬರೆದ ಶುಭಸಂದೇಶದಿಂದ ವಾಚನ 13 : 18-23

ಯೇಸು ತಮ್ಮ ಶಿಷ್ಯರನ್ನುದ್ದೇಶಿಸಿ, ಈಗ ಬಿತ್ತುವವನ ಸಾಮತಿಯ ಅರ್ಥವನ್ನು ಕೇಳಿ: ಒಬ್ಬನು ಶ್ರೀ ಸಾಮ್ರಾಜ್ಯದ ಸಂದೇಶವನ್ನು ಕೇಳಿ ಅದನ್ನು ಗ್ರಹಿಸದೆ ಹೋದರೆ, ಕೇಡಿಗನು ಬಂದು ಅವನ ಹೃದಯದಲ್ಲಿ ಬಿತ್ತಿದ್ದ ಬೀಜವನ್ನು ತೆಗೆದೆಸೆಯುತ್ತಾನೆ. ಇವನು ಕಾಲ್ದಾರಿಯಲ್ಲಿ ಬಿದ್ದ ಬೀಜವನ್ನು ಹೋಲುತ್ತಾನೆ. ಬೇರೊಬ್ಬನು ಈ ಸಂದೇಶವನ್ನು ಕೇಳಿದ ಕೂಡಲೇ ಅದನ್ನು ಸಂತೋಷದಿಂದ ಸ್ವೀಕರಿಸುತ್ತಾನೆ. ಆದರೆ ಅದು ತನ್ನಲ್ಲಿ ಬೇರೂರದ ಕಾರಣ ಕೊಂಚಕಾಲ ಮಾತ್ರ ಇದ್ದು, ಸಂದೇಶದ ನಿಮಿತ್ತ ಕಷ್ಟಕೋಟಲೆಗಳು ಬಂದೊದಗಿದ ಕೂಡಲೇ ಎಡವಿ ಬೀಳುತ್ತಾನೆ. ಇವನು ಕಲ್ಲು ನೆಲದ ಮೇಲೆ ಬಿದ್ದ ಬೀಜವನ್ನು ಹೋಲುತ್ತಾನೆ. ಇನ್ನೊಬ್ಬನು ಸಂದೇಶವನ್ನೇನೋ ಕೇಳುತ್ತಾನೆ, ಆದರೆ ಪ್ರಾಪಂಚಿಕ ಚಿಂತನೆಗಳು, ಐಶ್ವರ್ಯದ ವ್ಯಾಮೋಹಗಳು ಆ ಸಂದೇಶವನ್ನು ಫಲಬಿಡದಂತೆ ಅದುಮಿಬಿಡುತ್ತವೆ; ಇವನು ಮುಳ್ಳುಪೊದೆಗಳಲ್ಲಿ ಬಿದ್ದ ಬೀಜವನ್ನು ಹೋಲುತ್ತಾನೆ. ಇನ್ನೊಬ್ಬನು ವಾಕ್ಯವನ್ನು ಕೇಳುತ್ತಾನೆ, ಗ್ರಹಿಸಿಕೊಳ್ಳುತ್ತಾನೆ; ಫಲಪ್ರದವಾಗಿ ನೂರರಷ್ಟು, ಅರವತ್ತರಷ್ಟು, ಮೂವತ್ತರಷ್ಟು, ಫಲಕೊಡುತ್ತಾನೆ. ಇವನು ಹದವಾದ ಭೂಮಿಯಲ್ಲಿ ಬಿದ್ದ ಬೀಜವನ್ನು ಹೋಲುತ್ತಾನೆ, ಎಂದರು

ಸಂವೇದ್ಯ ಧ್ವನಿಸುರಳಿಯ ಫಾ ಚಸರಾ ರಚಿತ ’ಒಂದೂರಲ್ಲಿ ಒಬ್ಬ ರೈತನಿದ್ದ’ ಹಾಡು ಕೇಳಿ



26.07.2018

ಸಂತ ಜೋವಾಕಿಂ ಮತ್ತು ಅನ್ನ, ಮಾತೆ ಮೇರಿಯ ತಂದೆತಾಯಿ




ಸಿರಾಖನ ಗ್ರಂಥದಿಂದ ವಾಚನ 44: 1, 10-15

ವಂದನೆ ಸಲ್ಲಿಸೋಣ ನಾವೀಗ 
ಪ್ರಸಿದ್ಧ ಪುರುಷರಿಗೆ
ನಮ್ಮನ್ನು ಪಡೆದ ನಮ್ಮ 
ಕುಲದ ಮೂಲಪಿತೃಗಳಿಗೆ.
ಅವರು ದಯಾಳುಗಳಾಗಿದ್ದರು
ಮರೆತುಹೋಗಲಿಲ್ಲ ಅವರ ಸತ್ಕಾರ್ಯಗಳು.
ಒಳ್ಳೆಯ ಸೊತ್ತು ಸದಾ ಉಳಿಯುವುದು 
ಅವರ ಪೀಳಿಗೆಯಲ್ಲಿ
ಅವರ ಮಕ್ಕಳೂ ಸಹ ನೆಲೆಯಾಗಿ ನಿಲ್ಲುವರು 
ಅದರ ಅನ್ವೇಷಣೆಯಲ್ಲಿ
ಉಳಿಯುವುದು ಅವರ ಸಂತಾನ ಎಂದೆಂದಿಗೂ
ಅವರ ಗೌರವ ಅಳಿಸಿಹೋಗದು.
ಸಮಾಧಾನದಲ್ಲಿ ಅವರ 
ದೇಹಗಳಿಗೆ ಸಮಾಧಿಯಾಯಿತು
ಜೀವಂತವಾಗುವುದು ಅವರ 
ಹೆಸರು ತಲತಲಾಂತರದವರೆಗೂ.
ಕುಲದವರು ಪ್ರಸಿದ್ದಪಡಿಸುವರು 
ಅವರ ಜ್ಞಾನವನು
ಸಭೆಯು ಸಾರುವುದು ಅವರ ಕೀರ್ತಿಯನು

ಕೀರ್ತನೆ 132 : 11, 13-14, 17-18

ಶ್ಲೋಕ : ಪಿತಾಮಹ ದಾವೀದರಸನ ಸಿಂಹಾಸನವನ್ನು
ಸರ್ವೇಶ್ವರನಾದ ದೇವರು ಆತನಿಗೆ ಕೊಡುವರು|

ಸಂತ ಮತ್ತಾಯನು ಬರೆದ ಶುಭಸಂದೇಶದಿಂದ ವಾಚನ  13: 16-17

ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು : ನೀವಾದರೋ ಭಾಗ್ಯವಂತರು. ನಿಮ್ಮ ಕಣ್ಣುಗಳು ಕಾಣುತ್ತವೆ, ಕಿವಿಗಳು ಕೇಳುತ್ತವೆ. ಎಷ್ಟೋ ಪ್ರವಾದಿಗಳು ಹಾಗೂ ಸತ್ಪುರುಷರು ನೀವು ನೋಡುವುದನ್ನು ನೋಡುವುದಕ್ಕೂ ಕೇಳುವುದನ್ನು ಕೇಳುವುದಕ್ಕೂ ಅಪೇಕ್ಷಿಸಿದರು. ಆದರೆ ಅವರು ನೋಡಲೂ ಇಲ್ಲ, ಕೇಳಲೂ ಇಲ್ಲ ಎಂಬುದು ನಿಮಗೆ ತಿಳಿದಿರಲಿ,’’ ಎಂದರು.



25.07.2018

ಸಂತ ಯಕೋಬ ಹಬ್ಬ

ಪೌಲನು ಕೊರಿಂಥಿಯರಿಗೆ ಬರೆದ ಎರಡನೆಯ ಪತ್ರದಿಂದ ವಾಚನ 4: 7-15

ಸಹೋದರರೇನಾವು ಇಂಥ ಆಧ್ಯಾತ್ಮಿಕ ಮಾಣಿಕ್ಯವನ್ನು ಪಡೆದಿದ್ದರೂ ಮಣ್ಣಿನ ಮಡಕೆಗಳಂತೆ ಇದ್ದೇವೆಹೀಗೆಈ ಪರಮೋನ್ನತ ಶಕ್ತಿ ನಮಗೆ ಸೇರಿದ್ದಲ್ಲದೇವರಿಗೆ ಸೇರಿದ್ದೆಂದು ವ್ಯಕ್ತವಾಗುತ್ತದೆನಾವು ಇಕ್ಕಟ್ಟು ಬಿಕ್ಕಟ್ಟುಗಳಿಗೆ ಒಳಗಾಗಿದ್ದರೂ ನುಜ್ಜುಗುಜ್ಜಾಗಲಿಲ್ಲಸಂಶಯ ಸಂದೇಹಗಳಿಗೊಳಗಾದರೂ ನಿರಾಶೆಗೊಳ್ಳಲಿಲ್ಲಶತ್ರುಗಳು ಅನೇಕರಿದ್ದರೂ ಮಿತ್ರನೊಬ್ಬನು ಇಲ್ಲದಿರಲಿಲ್ಲಪ್ರಾಣ ಹಿಂಸೆಗಳಿಗೀಡಾಗಿದ್ದರೂ ಪ್ರಾಣ ನಷ್ಟವನ್ನು ಅನುಭವಿಸಲಿಲ್ಲಯೇಸುವಿನ ದಿವ್ಯ ಜೀವವು ನಮ್ಮ ದೇಹದಲ್ಲಿ ಗೋಚರವಾಗುವಂತೆ ಅವರ ಮರಣಯಾತನೆಯನ್ನು ನಿರಂತರವಾಗಿ ಅನುಭವಿಸುತ್ತಾ ಬಾಳುತ್ತಿದ್ದೇವೆಯೇಸುವಿನ ಅಮರ ಜೀವವು ನಮ್ಮ ನಶ್ವರ ಶರೀರದಲ್ಲಿ ಗೋಚರವಾಗುವಂತೆ ಅವರ ಮರಣಯಾತನೆಯನ್ನು ನಿರಂತರವಾಗಿ ಅನುಭವಿಸುತ್ತಾ ಬಾಳುತ್ತಿದ್ದೇವೆಯೇಸುವಿನ ಅಮರ ಜೀವವು ನಮ್ಮ ನಶ್ವರ ಶರೀರದಲ್ಲಿ ಗೋಚರವಾಗುವಂತೆ ಬದುಕಿರುವಾಗಲೇ ನಾವು ಯೇಸುವಿಗೋಸ್ಕರ ಸತತ ಸಾವಿಗೆ ಈಡಾಗಿದ್ದೇವೆಹೀಗೆ ನಮ್ಮಲ್ಲಿ ಸಾವು ಕಾರ್ಯಗತವಾಗುತ್ತಿದ್ದರೆ ನಿಮ್ಮಲ್ಲಿ ಜೀವ ಕಾರ್ಯಗತವಾಗುತ್ತಿದೆನಾನು ವಿಶ್ವಾಸವಿಟ್ಟೆನುಆದ್ದರಿಂದ ಮಾತನಾಡಿದೆನು,’’ ಎಂದು ಪವಿತ್ರಗ್ರಂಥದಲ್ಲಿ ಬರೆಯಲಾಗಿದೆಇದೇ ಮನೋಭಾವನೆಯಿಂದ ಕೂಡಿರುವ ನಾವು ಮಾತನಾಡಲೇ ಬೇಕುಏಕೆಂದರೆ ನಮಗೆ ವಿಶ್ವಾಸವಿದೆಪ್ರಭು ಯೇಸುವನ್ನು ಪುನರುತ್ಥಾನಗೊಳಿಸಿದ ದೇವರು ನಮ್ಮನ್ನು ಯೇಸುಕ್ರಿಸ್ತರೊಡನೆ ಪುನರುತ್ಥಾನಗೊಳಿಸಿ ತಮ್ಮ ಸಾನಿಧ್ಯಕ್ಕೆ ಬರಮಾಡಿಕೊಳ್ಳುವರು ಎಂಬುದನ್ನು ನಾವು ಬಲ್ಲೆವುಅಂತೆಯೇ ನಿಮ್ಮನ್ನೂ ಬರಮಾಡಿಕೊಳ್ಳುವರುಇದೆಲ್ಲವೂ ನಿಮ್ಮ ಒಳಿತಿಗಾಗಿಯೇಹೀಗೆ ಅನೇಕರಲ್ಲಿ ದೇವರ ವರಪ್ರಸಾದವು ಉಕ್ಕಿ ಹರಿಯುವುದುಅವರಲ್ಲಿ ಕೃತಜ್ಞತಾ ಭಾವನೆಯನ್ನು ಹೆಚ್ಚಿಸುವುದುಇದರಿಂದಾಗಿ ದೇವರ ಮಹಿಮೆ ಬೆಳಗುವುದು.

ಕೀರ್ತನೆ 126 :1-6
ಶ್ಲೋಕ ಅಳುತಳುತಾ ಬಿತ್ತುವವರು ನಲಿನಲಿಯುತಾ ಕೊಯ್ಯುವರು|

ಸಂತ ಮತ್ತಾಯನು ಬರೆದ ಶುಭಸಂದೇಶದಿಂದ ವಾಚನ  20:20-28

ಜೆಬೆದಾಯನ ಮಕ್ಕಳ ತಾಯಿ ತನ್ನ ಪುತ್ರರ ಸಮೇತ ಯೇಸುಸ್ವಾಮಿಯ ಬಳಿಗೆ ಬಂದಳುತಮ್ಮಿಂದ ನನಗೊಂದು ಉಪಕಾರ ಆಗಬೇಕುಎಂದು ಸ್ವಾಮಿಯ ಪಾದಕ್ಕೆರಗಿದಳುನಿನ್ನ ಕೋರಿಕೆ ಏನು?" ಎಂದರು ಯೇಸುಅದಕ್ಕೆ ಅವಳುತಮ್ಮ ಸಾಮ್ರಾಜ್ಯದಲ್ಲಿನನ್ನ ಈ ಇಬ್ಬರು ಮಕ್ಕಳಲ್ಲಿ ಒಬ್ಬನು ತಮ್ಮ ಬಲಗಡೆಯಲ್ಲೂ ಇನ್ನೊಬ್ಬನು ತಮ್ಮ ಎಡಗಡೆಯಲ್ಲೂ ಆಸೀನರಾಗುವಂತೆ ಅಪ್ಪಣೆಯಾಗಬೇಕು," ಎಂದು ಕೋರಿದಳುಅದಕ್ಕೆ ಪ್ರತ್ಯತ್ತರವಾಗಿ ಯೇಸುನೀವು ಕೋರಿಕೊಂಡದ್ದು ಏನೆಂದು ನಿಮಗೇ ತಿಳಿಯದುನಾನು ಕುಡಿಯಬೇಕಾದ ಪಾತ್ರೆಯಿಂದ ಕುಡಿಯಲು ನಿಮ್ಮಿಂದ ಆದೀತೇ?" ಎಂದು ಪ್ರಶ್ನಿಸಿದರುಹೌದು ಆಗುತ್ತದೆಎಂದು ಅವರು ಮರು ನುಡಿದರುಆಗ ಯೇಸುನನ್ನ ಪಾತ್ರೆಯಿಂದ ನೀವೇನೋ ಕುಡಿಯುವಿರಿಆದರೆ ನನ್ನ ಬಲಗಡೆಯಲ್ಲಾಗಲೀ ಎಡಗಡೆಯಲ್ಲಾಗಲೀ ಆಸೀನರಾಗುವಂತೆ ಅನುಗ್ರಹಿಸುವುದು ನನ್ನದಲ್ಲಅದು ಯಾರಿಗಾಗಿ ನನ್ನ ಪಿತನಿಂದ ಸಿದ್ಧಮಾಡಲಾಗಿದೆಯೋ ಅವರಿಗೇ ಸಿಗುವುದು,’’ ಎಂದು ನುಡಿದರುಉಳಿದ ಹತ್ತುಮಂದಿ ಶಿಷ್ಯರು ಇದನ್ನು ಕೇಳಿದಾದ ಆ ಇಬ್ಬರು ಸಹೋದರರ ಮೇಲೆ ಸಿಟ್ಟುಗೊಂಡರುಯೇಸುವಾದರೋಶಿಷ್ಯರೆಲ್ಲರನ್ನು ತಮ್ಮ ಬಳಿಗೆ ಕರೆದುಲೋಕದ ಪ್ರಜಾಧಿಪತಿಗಳು ತಮ್ಮ ಪ್ರಜೆಗಳ ಮೇಲೆ ದರ್ಪದಿಂದ ದೊರೆತನ ಮಾಡುತ್ತಾರೆಜನನಾಯಕರು ಎನ್ನಿಸಿಕೊಳ್ಳುವವರು ಜನರ ಮೇಲೆ ಅಧಿಕಾರ ಪ್ರದರ್ಶನ ಮಾಡುತ್ತಾರೆಇದು ನಿಮಗೆ ಗೊತ್ತುನೀವು ಹಾಗಿರಬಾರದು

ನಿಮ್ಮಲ್ಲಿ ಶ್ರೇಷ್ಠನಾಗಿರಲು ಇಚ್ಛಿಸುವವನು ನಿಮಗೆ ಸೇವಕನಾಗಿರಲಿಪ್ರಥಮನಾಗಿರಲು ಆಶಿಸುವವನು ನಿಮ್ಮ ದಾಸನಾಗಿರಲಿಹಾಗೆಯೇ ನರಪುತ್ರನು ಸೇವೆ ಮಾಡಿಸಿಕೊಳ್ಳುವುದಕ್ಕೆ ಅಲ್ಲಇತರರ ಸೇವೆ ಮಾಡುವುದಕ್ಕೂ ಸರ್ವರ ಉದ್ಧಾರಕ್ಕಾಗಿ ತನ್ನ ಪ್ರಾಣವನ್ನು ಈಡಾಗಿ ಕೊಡುವುದಕ್ಕೂ ಬಂದಿದ್ದಾನೆ,’’ ಎಂದು ಹೇಳಿದರು






24.07.2018


ಪ್ರವಾದಿ ಮೀಕನ ಗ್ರಂಥದಿಂದ ವಾಚನ 7 : 14-15, 18-20

ಸರ್ವೇಶ್ವರಾ, ನಿಮ್ಮ ಮಂದೆಗೆ ಸೇರಿದ ಜನರನ್ನು ಕುರಿಗಾಹಿಯಂತೆ ಪರಿಪಾಲಿಸಿರಿ. ನಿಮ್ಮ ಸ್ವಾಸ್ತ್ಯವಾಗಿ, ಮಂದೆಯಾಗಿ ಇರುವಂಥ ಜನರು, ಸುತ್ತಮುತ್ತಲು ಫಲವತ್ತಾದ ಹಸಿರು ಭೂಮಿಯಿದ್ದರೂ ಮರಳುಗಾಡಿನಲ್ಲಿ ಪ್ರತ್ಯೇಕವಾಗಿ ಜೀವಿಸುತ್ತಿರುವರು. ಪೂರ್ವಕಾಲದಲ್ಲಿದ್ದಂತೆ ಈಗ ಅವರು ಬಾಷಾನ್ ಮತ್ತು ಗಿಲ್ಯಾದ್ ನಾಡುಗಳಿಗೆ ತೆರಳಿ ಪೋಷಣೆ ಪಡೆಯಲಿ. ಈಜಿಪ್ಟ್ ದೇಶದಿಂದ ನಮ್ಮನ್ನು ಹೊರತಂದ ದಿನಗಳಲ್ಲಿ ನೀವು ಮಾಡಿದ ಮಹತ್ಕಾರ್ಯಗಳನ್ನು ಮರಳಿ ಮಾಡಿ ತೋರಿಸಿರಿ. ನಿಮ್ಮಂಥ ದೇವರು ಯಾರಿದ್ದಾರೆ? ತಮ್ಮ ಸ್ವಂತ ಜನರಲ್ಲಿ ಅಳಿದುಳಿದವರ ಅಪರಾಧಗಳನ್ನು ಲೆಕ್ಕಿಸದೆ, ಅವರ ದ್ರೋಹಗಳನ್ನು ಕ್ಷಮಿಸುವಂಥ ದೇವರು ಯಾರಿದ್ದಾರೆ? ನೀವು ನಿತ್ಯಕ್ಕೂ ಕೋಪಿಷ್ಠರಾಗಿರದೆ ಸಂತುಷ್ಟರಾಗುವಿರಿ. ಮತ್ತೊಮ್ಮೆ ನಮಗೆ ದಯೆತೋರಿ. ನಮ್ಮ ಅಪರಾಧಗಳನ್ನು ಅಳಿಸಿಬಿಡಿ; ಅವನ್ನು ತುಳಿದು ಸಮುದ್ರದ ತಳಕ್ಕೆ ತಳ್ಳಿಬಿಡಿ. ಪುರಾತನ ಕಾಲದಲ್ಲಿ ನಮ್ಮ ಪಿತೃಗಳಿಗೆ ಪ್ರಮಾಣಮಾಡಿದಂತೆ ಯಕೋಬ ವಂಶದವರಿಗೆ ನಂಬಿಗಸ್ಥರಾಗಿರಿ. ಅಬ್ರಹಾಮನ ವಂಶದವರಿಗೆ ಪ್ರೀತಿಪರರಾಗಿರಿ.

ಕೀರ್ತನೆ 85: 1-3, 4-5, 6-7

ಶ್ಲೋಕ : ತೋರಿಸೆಮಗೆ ಪ್ರಭೂ ಕರುಣೆಯನು |

ಸಂತ ಮತ್ತಾಯರು ಬರೆದ ಶುಭಸಂದೇಶದಿಂದ ವಾಚನ 12 : 46-50

ಯೇಸುಸ್ವಾಮಿ ತಮ್ಮನ್ನು ಸುತ್ತುವರಿದಿದ್ದ ಜನರಿಗೆ ಇನ್ನೂ ಬೋಧನೆ ಮಾಡುತ್ತಿದ್ದರು. ಆಗ ಅವರ ತಾಯಿ ಮತ್ತು ಸಹೋದರರು ಬಂದು ಅವರೊಡನೆ ಮಾತನಾಡ ಬಯಸಿ ಹೊರಗೆ ನಿಂತಿದ್ದರು. ನಿಮ್ಮ ತಾಯಿ ಮತ್ತು ಸಹೋದರರು ಹೊರಗೆ ನಿಂತಿದ್ದಾರೆ; ನಿಮ್ಮೊಡನೆ ಮಾತನಾಡಬೇಕೆಂದಿದ್ದಾರೆ," ಎಂದು ಒಬ್ಬನು ತಿಳಿಸಿದನು. ಅದಕ್ಕೆ ಯೇಸು, ನನ್ನ ತಾಯಿ ಯಾರು? ನನ್ನ ಸಹೋದರರು ಯಾರು?" ಎನ್ನುತ್ತಾ, ತಮ್ಮ ಶಿಷ್ಯರ ಕಡೆಗೆ ಕೈ ತೋರಿಸಿ, ಇಗೋ ನೋಡಿ, ನನ್ನ ತಾಯಿ, ನನ್ನ ಸಹೋದರರು; ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತವನ್ನು ಯಾರು ನೆರವೇರಿಸುತ್ತಾರೋ ಅವರೇ ನನಗೆ ಸಹೋದರ, ಸಹೋದರಿ ಮತ್ತು ತಾಯಿ," ಎಂದರು.

23.07.2018




ಪ್ರವಾದಿ ಮೀಕನ ಗ್ರಂಥದಿಂದ ವಾಚನ 6: 1-4, 6-8

 ಸರ್ವೇಶ್ವರ ಹೇಳುವುದನ್ನು ಕೇಳಿರಿ : “ಎದ್ದೇಳು; ಬೆಟ್ಟಗಳ ಸಮ್ಮುಖದಲ್ಲಿ ನಿನ್ನ ವ್ಯಾಜ್ಯ ನಡೆಯಲಿ; ನಿನ್ನ ಧ್ವನಿ ಗುಡ್ಡಗಳಿಗೆ ಕೇಳಿಸಲಿ. ಬೆಟ್ಟಗಳೇ, ಸರ್ವೇಶ್ವರಸ್ವಾಮಿಯ ಆಪಾದನೆಯನ್ನು ಕೇಳಿರಿ. ಭೂಮಿಯ ಸ್ಥಿರವಾದ ಅಸ್ತಿಭಾರಗಳೇ, ಕಿವಿಗೊಡಿ. ಆ ಸ್ವಾಮಿಗೆ ತನ್ನ ಪ್ರಜೆಯ ಮೇಲೆ ವ್ಯಾಜ್ಯವಿದೆ; ಅವರು ಇಸ್ರಯೇಲಿನ ವಿರುದ್ಧ ವಾದಿಸುವುದನ್ನು ಗಮನಿಸಿರಿ. ಸರ್ವೇಶ್ವರ ಇಂತೆನ್ನುತ್ತಾರೆ; ‘ನನ್ನ ಪ್ರಜೆಯೇ, ನಾನು ನಿನಗೇನು ಮಾಡಿದೆ? ಯಾವ ವಿಷಯದಲ್ಲಿ ನಿನಗೆ ಬೇಸರವನ್ನುಂಟುಮಾಡಿದೆ ಪ್ರಮಾಣವಾಗಿ ಹೇಳು. ಈಜಿಪ್ಟ್ ದೇಶದಿಂದ ನಾನು ನಿನ್ನನ್ನು ಕರೆತಂದೆ; ದಾಸತ್ವದ ಬಂಧನದಿಂದ ನಿನ್ನನ್ನು ಬಿಡುಗಡೆ ಮಾಡಿದೆ. ನಿನಗೆ ಮೋಶೆ, ಆರೋನ್ ಮತ್ತು ಮಿರ‍್ಯಾಮಳನ್ನು ನಾಯಕರನ್ನಾಗಿ ಕಳುಹಿಸಿದೆ,’’ ನಾನು ಸರ್ವೇಶ್ವರಸ್ವಾಮಿಯ ಸನ್ನಿಧಿಗೆ ಯಾವ ಕಾಣಿಕೆಯೊಂದಿಗೆ ಹೋಗಲಿ? ಮಹೋನ್ನತ ದೇವರಿಗೆ ಹೇಗೆ ಅಡ್ಡಬೀಳಲಿ? ಹೋಮಕ್ಕಾಗಿ ಒಂದು ವರ್ಷದ ಎಳೆಕರುಗಳನ್ನು ತೆಗೆದುಕೊಂಡು ಹೋಗಲೇ? ಸಾವಿರಾರು ಟಗರುಗಳನ್ನೂ ಧಾರಾಕಾರವಾಗಿ ಹರಿಯುವ ತೈಲ ಪ್ರವಾಹಗಳನ್ನೂ ನೋಡಿ ಸರ್ವೇಶ್ವರ ಮೆಚ್ಚುವುದುಂಟೇ? ನಾನು ಮಾಡಿದ ದ್ರೋಹಕ್ಕಾಗಿ ನನ್ನ ಚೊಚ್ಚಲುಮಗನನ್ನೇ ಅರ್ಪಿಸಲೇ? ನನ್ನ ಪಾಪಕ್ಕಾಗಿ ನನ್ನ ಕರುಳ ಕುಡಿಯನ್ನೇ ಬಲಿಕೊಡಲೇ? ಇಲ್ಲ ಮನುಜಾ, ನಿನಗೆ ಯಾವುದು ಒಳಿತೆಂದು ಸರ್ವೇಶ್ವರ ಈಗಾಗಲೇ ಸ್ಪಷ್ಟಪಡಿಸಿದ್ದಾರೆ: ನ್ಯಾಯನೀತಿಯ ನಡವಳಿಕೆ, ಕರುಣೆಯಲ್ಲಿ ಅಚಲ ಆಸಕ್ತಿ, ದೇವರ ಮುಂದೆ ನಮ್ರತೆ, ಇಷ್ಟನ್ನೇ ಆ ಸ್ವಾಮಿ ನಿನ್ನಿಂದ ಅಪೇಕ್ಷಿಸುವುದು.

ಕೀರ್ತನೆ 50 : 5-9, 16-17, 21,23

ಶ್ಲೋಕ : ಸನ್ಮಾರ್ಗಿಗೆ ತೋರುವೆ ಪರಮ ಜೀವೋದ್ಧಾರವನು |

ಸಂತ ಮತ್ತಾಯನು ಬರೆದ ಶುಭಸಂದೇಶದಿಂದ ವಾಚನ 12: 38-42

ಕೆಲವು ಮಂದಿ ಧರ್ಮಶಾಸ್ತ್ರಿಗಳೂ ಫರಿಸಾಯರೂ ಯೇಸುಸ್ವಾಮಿಯನ್ನು ಉದ್ದೇಶಿಸಿ, “ಬೋಧಕರೇ, ನೀವು ಒಂದು ಸೂಚಕ ಕಾರ್ಯ ಮಾಡುವುದನ್ನು ನೋಡಬೇಕೆಂದಿದ್ದೇವೆ,’’ ಎಂದರು. ಅದಕ್ಕೆ ಪ್ರತ್ಯತ್ತರವಾಗಿ ಯೇಸು ಇಂತೆಂದರು : ಈ ಕೆಟ್ಟ ಹಾಗೂ ದೈವಭ್ರಷ್ಟ ಪೀಳಿಗೆ ಸೂಚಕ ಕಾರ್ಯವನ್ನು ಸಂಕೇತವಾಗಿ ಕೋರುತ್ತದೆ. ಪ್ರವಾದಿ ಯೋನನ ಸಂಕೇತವೇ ಹೊರತು ಬೇರೆ ಯಾವ ಸಂಕೇತವೂ ಇದಕ್ಕೆ ದೊರಕದು. ಯೋನನು ಮೂರು ದಿನ ಹಗಲು ರಾತ್ರಿ ದೊಡ್ಡ ಮೀನಿನ ಉದರದಲ್ಲಿದ್ದನು. ಅದರಂತೆಯೇ ನರಪುತ್ರನು ಮೂರು ದಿನ ಹಗಲು ರಾತ್ರಿ ಭೂಗರ್ಭದಲ್ಲಿರುವನು. ತೀರ್ಪಿನ ದಿನ ನಿನೆವೆ ನಗರದವರು ಈ ಪೀಳಿಗೆಗೆ ಎದುರಾಗಿ ನಿಂತು ಇದನ್ನು ಅಪರಾಧಿಯೆಂದು ಖಂಡಿಸುವರು. ಏಕೆಂದರೆ, ಪ್ರವಾದಿ ಯೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ. ಅದೇ ತೀರ್ಪಿನ ದಿನ ದಕ್ಷಿಣ ದೇಶದ ರಾಣಿ ಈ ಪೀಳಿಗೆಗೆ ಎದುರಾಗಿ ನಿಂತು ಇದನ್ನು ಅಪರಾಧಿಯೆಂದು ಖಂಡಿಸುವಳು. ಆಕೆ ಸೊಲೊಮೋನನ ಜ್ಞಾನೋಕ್ತಿಗಳನ್ನು ಕೇಳುವುದಕ್ಕಾಗಿ ದೂರ ದೇಶದಿಂದ ಬಂದಳು. ಆದರೆ ಸೊಲೊಮೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ.

22.07.2018


ಮೊದಲನೆಯ ವಾಚನ
ಸರ್ವೇಶ್ವರ ದೇವರು ಇಸ್ರಯೇಲ್ ಜನರಿಗೆ ಒಬ್ಬ ಕುರಿಗಾಹಿಯನ್ನು ನೇಮಿಸಿ ಜನರ ರಕ್ಷಣೆಯನ್ನು ಮಾಡುವೆನೆಂದು ಭರವಸೆಯನ್ನೀಯುವ ವಚನಗಳು ಈ ವಾಚನದಲ್ಲಿದೆ. ಯಾರು ಹೆದರಬೇಕಾಗಿಲ್ಲ, ಬೆದರಬೇಕಾಗಿಲ್ಲ, ಕುರಿಗಳಲ್ಲಿ ಒಂದೂ ಕಡಿಮೆ ಆಗುವುದಿಲ್ಲವೆಂದು ಭರವಸೆಯನ್ನೀಯುತ್ತಾರೆ.

ಪ್ರವಾದಿ ಯೆರೇಮಿಯನ ಗ್ರಂಥದಿಂದ ವಾಚನ    23: 1-6

ನ್ನ ಮಂದೆಯ ಕುರಿಗಳನ್ನು ಚದರಿಸಿ ಹಾಳುಮಾಡುವ ಕುರುಬರಿಗೆ ಧಿಕ್ಕಾರ!” ಇದು ಸರ್ವೇಶ್ವರಸ್ವಾಮಿಯ ನುಡಿ. ಇಸ್ರಯೇಲರ ದೇವರಾದ ಸರ್ವೇಶ್ವರ, ತಮ್ಮ ಜನರೆಂಬ ಕುರಿಗಳನ್ನು ಮೇಯಿಸುವ ಕುರಿಗಾಹಿಗಳ ದ್ರೋಹವನ್ನು ಅರಿತಿದ್ದಾರೆ. ಅಂಥವರನ್ನು ಕುರಿತು ಹೀಗೆನ್ನುತ್ತಾರೆ: “ನೀವು ನನ್ನ ಮಂದೆಯನ್ನು ಚದರಿಸಿ ಓಡಿಸಿಬಿಟ್ಟಿದ್ದೀರಿ. ಅವುಗಳ ಬಗ್ಗೆ ಎಚ್ಚರಿಕೆ ವಹಿಸಲೇ ಇಲ್ಲ. ನಿಮ್ಮ ನೀಚ ಕಾರ‍್ಯಗಳ ನಿಮಿತ್ತ ನಿಮ್ಮನ್ನು ವಿಚಾರಣೆಗೆ ಗುರಿಪಡಿಸುವೆನು. ನನ್ನ ಮಂದೆಯನ್ನು ಯಾವ ಯಾವ ದೇಶಗಳಿಗೆ ಅಟ್ಟಲಾಗಿದೆಯೋ ಆ ಎಲ್ಲ ದೇಶಗಳಿಂದ ಅಳಿದುಳಿದ ಕುರಿಗಳನ್ನು ಒಟ್ಟುಗೂಡಿಸಿ ತಮ್ಮ ತಮ್ಮ ಹಟ್ಟಿಗಳಿಗೆ ಮರಳಿ ಬರಮಾಡುವೆನು. ಅವು ದೊಡ್ಡ ಪೀಳಿಗೆಯಾಗಿ ಬೆಳೆಯುವುವು. ನಾನು ಅವುಗಳ ಮೇಲೆ ಕುರಿಗಾಹಿಗಳನ್ನು ನೇಮಿಸುವೆನು. ಅವರು ಅವುಗಳನ್ನು ಪರಿಪಾಲಿಸುವರು. ಅವು ಇನ್ನು ಹೆದರಬೇಕಾಗಿಲ್ಲ, ಬೆದರಬೇಕಾಗಿಲ್ಲ. ಅವುಗಳಲ್ಲಿ ಒಂದೂ ಕಡಿಮೆಯಾಗುವುದಿಲ್ಲ. ಇದು ಸರ್ವೇಶ್ವರನಾದ ನನ್ನ ನುಡಿ”. ಸರ್ವೇಶ್ವರ ಹೇಳುವುದನ್ನು ಗಮನಿಸಿರಿ: “ದಿನಗಳು ಬರಲಿವೆ; ಆಗ ನಾನು ದಾವೀದನೆಂಬ ಮೂಲದಿಂದ ಒಂದು ‘ಮೊಳಕೆ’ಯನ್ನು ಚಿಗುರಿಸುವೆನು. ಆತ ಸತ್ಪುರುಷ; ರಾಜನಾಗಿ ಆಳುವನು. ವಿವೇಕದಿಂದ ಕಾರ‍್ಯ ಸಾಧಿಸುವನು. ಧರೆಯಲ್ಲಿ ನ್ಯಾಯನೀತಿಯನ್ನು ನಿರ್ವಹಿಸುವನು. ಆತನ ಕಾಲದಲ್ಲಿ ಯೆಹೂದ್ಯರು ಸುರಕ್ಷಿತರಾಗಿ ಇರುವರು. ಇಸ್ರಯೇಲರು ನೆಮ್ಮದಿಯಿಂದ ಬಾಳುವರು. ‘ಯೆಹೋವ ಚಿದ್ಕೇನು’ (ಎಂದರೆ ಸರ್ವೇಶ್ವರನೇ ನಮ್ಮ ಸದ್ಧರ್ಮ) ಎಂಬ ಹೆಸರು ಆತನಿಗಿರುವುದು.
- ಪ್ರಭುವಿನ ವಾಕ್ಯ

ಎರಡನೆಯ ವಾಚನ
ಯೇಸು ಕ್ರಿಸ್ತರೇ ಎಲ್ಲರನ್ನು ಒಂದು ಗೂಡಿಸಿ, ಶಾಂತಿ ಸಮಾದಾನವನ್ನೇರ್ಪಡಿಸಿ ನೂತನ ಮಾನವನನ್ನು ಪರಿವರ್ತಿಸುವ ಭರವಸೆಯನ್ನು ನೀಡಿದ್ದಾರೆಂದು ಸಂತ ಪೌಲ ಹೇಳುತ್ತಾರೆ.
ಸಂತ ಪೌಲ ಎಫೆಸಿಯರಿಗೆ ಬರೆದ ಪತ್ರದಿಂದ ವಾಚನ       2: 13-18

ಹೋದರರೇ, ಹಿಂದೊಮ್ಮೆ ದೇವರಿಂದ ದೂರವಾಗಿದ್ದ ನಿಮ್ಮನ್ನು ಕ್ರಿಸ್ತ ಯೇಸು ಸುರಿಸಿದ ರಕ್ತದ ಮೂಲಕ ದೇವರ ಹತ್ತಿರಕ್ಕೆ ತರಲಾಯಿತು. ಯೇಸುಕ್ರಿಸ್ತರೇ ನಮ್ಮ ಶಾಂತಿದಾತ. ನಿಮ್ಮನ್ನೂ ನಮ್ಮನ್ನೂ ಒಂದುಗೂಡಿಸಿದವರು ಅವರೇ. ನಮ್ಮೀರ್ವರನ್ನು ಪ್ರತ್ಯೇಕಿಸಿದ್ದ ಹಗೆತನವೆಂಬ ಅಡ್ಡಗೋಡೆಯನ್ನು ತಮ್ಮ ಶರೀರದಿಂದಲೇ ಕೆಡವಿಹಾಕಿದ್ದಾರೆ. ವಿಧಿನಿಯಮಗಳಿಂದ ಕೂಡಿದ ಧರ್ಮಶಾಸ್ತ್ರವನ್ನು ನಿರರ್ಥಕಗೊಳಿಸಿದ್ದಾರೆ. ಉಭಯರನ್ನು ಒಂದುಗೂಡಿಸಿ, ಶಾಂತಿ ಸಮಾಧಾನವನ್ನೇರ್ಪಡಿಸಿ, ನೂತನ ಮಾನವರನ್ನಾಗಿ ಪರಿವರ್ತಿಸಿದ್ದಾರೆ. ತಮ್ಮ ಶಿಲುಬೆಯ ಮರಣದ ಮೂಲಕ ಹಗೆತನವನ್ನು ನಿರ್ಮೂಲಗೊಳಿಸಿ ಉಭಯತ್ರರನ್ನು ಒಂದೇ ದೇಹದಂತೆ ಮಾಡಿ ದೇವರೊಂದಿಗೆ ಸಂಧಾನಗೊಳಿಸಿದ್ದಾರೆ. ಯೇಸುಕ್ರಿಸ್ತರು ಬಂದು ದೇವರಿಂದ ದೂರವಾಗಿದ್ದ ನಿಮಗೂ ಹತ್ತಿರವಾಗಿದ್ದ ನಮಗೂ ಶಾಂತಿಯ ಸಂದೇಶವನ್ನು ಸಾರಿದರು. ಇದರ ಪರಿಣಾಮವಾಗಿ ಅವರ ಮುಖಾಂತರವೇ ಉಭಯತ್ರರು ಒಂದೇ ಪವಿತ್ರಾತ್ಮ ಅವರಲ್ಲಿ ಪಿತನ ಸಾನಿಧ್ಯವನ್ನು ಸೇರಲು ಮಾರ್ಗವಾಯಿತು.
- ಪ್ರಭುವಿನ ವಾಕ್ಯ
ಘೋಷಣೆ
ಅಲ್ಲೆಲೂಯ, ಅಲ್ಲೆಲೂಯ! ಸರ್ವೇಶ್ವರಾ, ಅಪ್ಪಣೆಯಾಗಲಿ; ತಮ್ಮ ದಾಸ ಕಾದಿದ್ದಾನೆ. ನಿತ್ಯ ಜೀವವನ್ನೀಯುವ ನುಡಿ ಇರುವುದು ತಮ್ಮಲ್ಲೇ. ಅಲ್ಲೆಲೂಯ!

ಶುಭಸಂದೇಶ
ಸಂತ ಮಾರ್ಕ ಬರೆದ ಶುಭಸಂದೇಶದಿಂದ ವಾಚನ               6: 30-34

ಪ್ರೇಷಿತರು ಯೇಸುಸ್ವಾಮಿಯ ಬಳಿಗೆ ಹಿಂತಿರುಗಿ ಬಂದು ತಾವು ಮಾಡಿದ ಸಕಲ ಕಾರ್ಯಕಲಾಪಗಳ ಹಾಗು ನೀಡಿದ ಬೋಧನೆಯ ವರದಿಯನ್ನು ಒಪ್ಪಿಸಿದರು. ಜನರು ಗುಂಪು ಗುಂಪಾಗಿ ಎಡೆಬಿಡದೆ ಬರುತ್ತಾ ಹೋಗುತ್ತಾ ಇದ್ದುದರಿಂದ ಯೇಸುವಿಗೆ ಮತ್ತು ಅವರ ಶಿಷ್ಯರಿಗೆ ಊಟಮಾಡಲೂ ಬಿಡುವಿರಲಿಲ್ಲ. ಆದುದರಿಂದ ಯೇಸು, “ಬನ್ನಿ, ಪ್ರತ್ಯೇಕವಾಗಿ ನಾವು ನಿರ್ಜನ ಪ್ರದೇಶಕ್ಕೆ ಹೋಗಿ ಸ್ವಲ್ಪ ವಿಶ್ರಮಿಸಿಕೊಂಡು ಬರೋಣ,” ಎಂದರು. ಅಂತೆಯೇ ಅವರೆಲ್ಲರೂ ಪ್ರತ್ಯೇಕವಾಗಿ ದೋಣಿಯನ್ನು ಹತ್ತಿ ಏಕಾಂತ ಪ್ರದೇಶಕ್ಕೆ ಹೊರಟರು. ಆದರೆ ಅವರು ಹೋಗುತ್ತಿರುವುದನ್ನು ಕಂಡು ಗುರುತಿಸಿದ ಅನೇಕರು ಎಲ್ಲಾ ಊರುಗಳಿಂದ ಕಾಲ್ದಾರಿಯಲ್ಲಿ ತ್ವರಿತವಾಗಿ ಸಾಗಿ ಅವರಿಗೆ ಮುಂಚಿತವಾಗಿಯೇ ಆ ಸ್ಥಳವನ್ನು ಸೇರಿದರು. ಯೇಸು ದೋಣಿಯಿಂದ ಇಳಿದಾಗ ಅಲ್ಲಿ ದೊಡ್ಡ ಜನಸಮೂಹವೇ ಸೇರಿತ್ತು. ಆ ಜನರು ಕುರುಬನಿಲ್ಲದ ಕುರಿಗಳಂತಿರುವುದನ್ನು ಕಂಡು ಯೇಸುವಿನ ಮನ ಕರಗಿತು; ಅನೇಕ ವಿಷಯಗಳನ್ನು ಕುರಿತು ಅವರಿಗೆ ಉಪದೇಶವಿತ್ತರು.

21.07.2018



ಪ್ರವಾದಿ ಮೀಕನ ಗ್ರಂಥದಿಂದ ವಾಚನ 2 : 1-5

ತಮ್ಮ ಹಾಸಿಗೆಯಲ್ಲೇ ಕುತಂತ್ರವನ್ನು ಕಲ್ಪಿಸಿಕೊಂಡು ಕೇಡನನ್ನು ಬಗೆಯುವವರಿಗೆ ಧಿಕ್ಕಾರ! ಬೆಳಗಾದದ್ದೇ ಅವರು ಕುತಂತ್ರವನ್ನು ಕಾರ್ಯಗತ ಮಾಡುತ್ತಾರೆ. ಆ ಸಾಮರ್ಥ್ಯ ಅವರ ಕೈಯಲ್ಲಿದೆ. ಇತರರ ಹೊಲಗದ್ದೆಗಳನ್ನು ದುರಾಶೆಯಿಂದ ಆಕ್ರಮಿಸಿಕೊಳ್ಳುತ್ತಾರೆ. ಅಂತೆಯೇ ಮನೆಗಳನ್ನು ಅಪಹರಿಸುತ್ತಾರೆ. ಈ ರೀತಿಯಲ್ಲಿ ಮನೆಯನ್ನೂ ಮಾಲೀಕನನ್ನೂ ಸ್ವತ್ತನ್ನೂ ಹಕ್ಕುದಾರನನ್ನೂ ತುಳಿದುಬಿಡುತ್ತಾರೆ. ಆದುದರಿಂದ ಸರ್ವೇಶ್ವರ ಇಂತೆನ್ನುತ್ತಾರೆ : “ಈ ಪೀಳಿಗೆಯ ಮೇಲೆ ನಾನೇ ವಿನಾಶವನ್ನು ಬರಮಾಡುತ್ತಾನೆ. ಆ ಕೇಡಿನಿಂದ ನೀವು ತಲೆತಪ್ಪಿಸಿಕೊಳ್ಳಲಾರಿರಿ. ತಲೆಯೆತ್ತಿ ನಡೆಯಲು ನಿಮಗೆ ಸಾಧ್ಯವಾಗದು. ಕಾಲವು ಅಷ್ಟು ಹದಗೆಟ್ಟಿರುವುದು. ಆ ದಿನಗಳಲ್ಲಿ ಜನರು ನಿಮ್ಮ ಬಗ್ಗೆ ಪರಿಹಾಸ್ಯ ಮಾಡಿ, ಲಾವಣಿ ಕಟ್ಟುವರು. “ಅಯ್ಯೋ, ಸಂಪೂರ್ಣವಾಗಿ ಸೂರೆಹೋದೆವಲ್ಲಾ, ಸ್ವಾಮಿ ನಮ್ಮ ಜನರ ಸ್ವತ್ತನ್ನು ಪರಾಧೀನ ಮಾಡಿಬಿಟ್ಟಿರಲ್ಲಾ. ಅಕಟಾ, ನಮ್ಮ ಹೊಲಗದ್ದೆಗಳನ್ನು ಕಸಿದುಕೊಂಡು ದೇವ ದ್ರೋಹಿಗಳಿಗೆ ಹಂಚಿಕೊಟ್ಟರಲ್ಲಾ!” ಎಂದು ರೋಧಿಸುವರು. ಹೀಗಿರಲು ನೂಲೆಳೆದು ಭೂಮಿಯನ್ನು ಹಂಚಿಕೊಡಲು ಸ್ವಾಮಿಯ ಸಭೆಯಲ್ಲಿ ಯಾರೂ ಇರುವುದಿಲ್ಲ.

ಕೀರ್ತನೆ 10 : 1-2, 3-4, 7-8,14
ಶ್ಲೋಕ : ಪ್ರಭೂ, ದಲಿತನನು ಮರೆಯದಿರಯ್ಯಾ|

ಶುಭಸಂದೇಶ ಮತ್ತಾಯ 12:14-21

ಫರಿಸಾಯರು ಯೇಸುವನ್ನು ಕೊಲೆಮಾಡಲು ಒಳಸಂಚು ಹೂಡಿದರು. ತಮಗೆ ವಿರುದ್ಧ ಒಳಸಂಚು ನಡೆಯುತ್ತಿದೆ ಎಂದು ಯೇಸುಸ್ವಾಮಿ ಅರಿತುಕೊಂಡು ಅಲ್ಲಿಂದ ಹೊರಟುಹೋದರು. ಅನೇಕ ಜನರು ಅವರ ಹಿಂದೆಯೇ ಹೋದರು. ಯೇಸು ಅಸ್ವಸ್ಥರಾಗಿದ್ದ ಎಲ್ಲರನ್ನೂ ಗುಣಪಡಿಸಿದರು ಮತ್ತು ತಮ್ಮ ವಿಷಯವನ್ನು ಯಾರಿಗೂ ತಿಳಿಸಬಾರದೆಂದು ಆಜ್ಞೆ ಮಾಡಿದರು. ಹೀಗೆ ದೇವರು ಪ್ರವಾದಿ ಯೆಶಾಯನ ಮುಖಾಂತರ ಹೇಳಿದ ಈ ವಚನ ನೆರವೇರಿತುಇಗೋ, ನನ್ನ ದಾಸನು, ನನ್ನಿಂದಾಯ್ಕೆಯಾದವನು, ನನಗೆ ಪರಮಪ್ರಿಯನು, ನನ್ನ ಅಪಾರ ಮೆಚ್ಚುಗೆಗೆ ಪಾತ್ರನು. ನೆಲೆಗೊಳಿಸುವೆ ಇವನಲಿ ಎನ್ನಾತ್ಮವನು; ಸಾರುವನಿವನು ಜಗದಲಿ ನನ್ನ ಧರ್ಮವನುವಾದಿಸುವವನಲ್ಲ, ದನಿಯೆತ್ತಿ ಕೂಗುವವನಲ್ಲ, ಹಾದಿ ಬೀದಿಯಲ್ಲಿವನ ಕಂಠ ಮೊರೆಯುವುದಿಲ್ಲಮುರಿದ ಜೊಂಡಿನಂತಹ ದುರ್ಬಲರಿಗಿಂತ ದೀನಬಂಧು, ನಂದಿಹೋಗುತಿಹ ದೀನದಲಿತರಿಗೆ ಕೃಪಾಸಿಂಧು, ನ್ಯಾಯನೀತಿಗೆ ಜಯದೊರಕಿಸದೆ ಬಿಡನಿವನು. ನೆನೆಯುವರು ಅನ್ಯ ಜನರೆಲ್ಲರು ಇವನ ನಾಮವನು."

20.07.2018



ಪ್ರವಾದಿ ಯೆಶಾಯನ ಗ್ರಂಥದಿಂದ ವಾಚನ 38 :1-6

ಹಿಜ್ಕೀಯನು ರೋಗದಿಂದ ಮರಣಾವಸ್ಥೆಯಲ್ಲಿದ್ದನು. ಆಗ ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನು ಅವನ ಬಳಿಗೆ ಬಂದು, “ನೀನು ಉಳಿಯುವ ಹಾಗಿಲ್ಲ, ಸಾಯಬೇಕಾಗಿದೆ. ಆದುದರಿಂದ ನಿನ್ನ ಸಂಸಾರವನ್ನು ವ್ಯವಸ್ಥೆ ಮಾಡಬೇಕು ಎಂದು ಸರ್ವೇಶ್ವರ ಹೇಳಿದ್ದಾರೆ,” ಎಂದು ತಿಳಿಸಿದನು. ಇದನ್ನು ಕೇಳಿದೊಡನೆ ಹಿಜ್ಕೀಯನು ಗೋಡೆಯ ಕಡೆಗೆ ತಿರುಗಿಕೊಂಡು, “ಸರ್ವೇಶ್ವರಾ, ನಿಮಗೆ ಶ್ರದ್ಧೆಯಿಂದಲೂ, ಪ್ರಾಮಾಣಿಕತೆಯಿಂದಲೂ ಸೇವೆ ಮಾಡಿದ್ದೇನೆ. ನಿಮ್ಮ ದೃಷ್ಟಿಯಲ್ಲಿ ಒಳ್ಳೆಯವನಾಗಿಯೇ ನಡೆದುಕೊಂಡಿದ್ದೇನೆ. ಇದನ್ನು ದಯೆಯಿಂದ ನೆನಪಿಗೆ ತಂದುಕೊಳ್ಳಿ,” ಎಂದು ಬಹಳವಾಗಿ ಕಣ್ಣೀರಿಡುತ್ತಾ ಪ್ರಾರ್ಥನೆ ಮಾಡಿದನು. ಆಗ ಸರ್ವೇಶ್ವರ ಯೆಶಾಯನಿಗೆ, “ನೀನು ಹೋಗಿ ಹಿಜ್ಕೀಯನಿಗೆ ಹೀಗೆಂದು ತಿಳಿಸು : ‘ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ, ನಿನ್ನ ಕಣ್ಣೀರನ್ನು ನೋಡಿದ್ದೇನೆ; ಇಗೋ, ನಿನ್ನ ಆಯುಷ್ಯಕ್ಕೆ ಇನ್ನೂ ಹದಿನೈದು ವರ್ಷಗಳನ್ನು ಸೇರಿಸುತ್ತೇನೆ. ನಿನ್ನನ್ನು ಮತ್ತು ಈ ಪಟ್ಟಣವನ್ನು ಅಸ್ಸೀರಿಯದ ಅರಸರ ಕೈಗೆ ಸಿಕ್ಕದಂತೆ ತಪ್ಪಿಸುತ್ತೇನೆ. ಈ ಪಟ್ಟಣವನ್ನು ಉಳಿಸಿ ಕಾಪಾಡುತ್ತೇನೆ.” ಅದಕ್ಕೆ ಯೆಶಾಯನು ಸರ್ವೇಶ್ವರ ನುಡಿದದ್ದನ್ನು ನೆರವೇರಿಸುವರು ಎಂಬುದಕ್ಕೆ ಈ ಗುರುತನ್ನು ಕಾಣುವೆ : ಇಗೋ, ಆಹಾಜನು ಕಟ್ಟಿಸಿದ ನೆರಳು ಗಡಿಯಾರದಲ್ಲಿ ಸೂರ್ಯನ ನೆರಳು ಹತ್ತು ಮೆಟ್ಟಿಲು ಹಿಂದಕ್ಕೆ ಬರುವಂತೆ ಮಾಡುವರು,” ಎಂದು ತಿಳಿಸಿದನು. ಅಂತೆಯೇ ಮುಂದೆ ಹೋಗಿದ್ದ ನೆರಳು ಹತ್ತು ಮೆಟ್ಟಿಲು ಹಿಂದಕ್ಕೆ ಬಂದಿತು.

ಕೀರ್ತನೆ ಯೆಶಾಯ 38 : 10,11,12,16

ನನ್ನಾತ್ಮವನು ನಾಶಕೂಪದಿಂದ ರಕ್ಷಿಸಿದ್ದು ನಿನ್ನ ಪ್ರೀತಿಯೇ |

ಸಂತ ಮತ್ತಾಯರು ಬರೆದ ಶುಭಸಂದೇಶದಿಂದ ವಾಚನ 12: 1-8

ಒಂದು ಸಬ್ಬತ್ ದಿನ ಯೇಸುಸ್ವಾಮಿ ಗೋಧಿಯ ಹೊಲಗಳನ್ನು ಹಾದುಹೋಗುತ್ತಿದ್ದರು. ಅವರ ಸಂಗಡವಿದ್ದ ಶಿಷ್ಯರಿಗೆ ಹಸಿವಾಯಿತು. ಅವರು ಗೋಧಿಯ ತೆನೆಗಳನ್ನು ಕಿತ್ತು ತಿನ್ನಲಾರಂಭಿಸಿದರು. ಇದನ್ನು ಕಂಡ ಫರಿಸಾಯರು, “ನೋಡು, ನೋಡು, ನಿನ್ನ ಶಿಷ್ಯರು ಸಬ್ಬತ್ ದಿನದಲ್ಲಿ ನಿಷಿದ್ಧವಾದುದನ್ನು ಮಾಡುತ್ತಿದ್ದಾರೆ," ಎಂದರು. ಅದಕ್ಕೆ ಯೇಸು, “ಹಿಂದೆ ಅರಸ ದಾವೀದನು ಮತ್ತು ಅವನ ಸಂಗಡಿಗರು ಹಸಿದಿದ್ದಾಗ ಏನು ಮಾಡಿದರೆಂದು ನೀವು ಓದಿರಬೇಕಲ್ಲವೇ? ಅವನು ದೇವಮಂದಿರದೊಳಕ್ಕೆ ಹೋಗಿ ಯಾಜಕರ ಹೊರತು ತಾನೇ ಆಗಲಿ, ಸಂಗಡಿಗರೇ ಆಗಲಿ, ತಿನ್ನಬಾರದಾಗಿದ್ದ ನೈವೇದ್ಯದ ರೊಟ್ಟಿಗಳನ್ನೇ ತಿನ್ನಲಿಲ್ಲವೇ? ಇದಲ್ಲದೆ, ಪ್ರತಿಯೊಂದು ಸಬ್ಬತ್ ದಿನವೂ ಯಾಜಕರು ದೇವಾಲಯದಲ್ಲಿ ಸಬ್ಬತ್ ದಿನದ ನಿಯಮಗಳನ್ನು ಉಲ್ಲಂಘಿಸಿಯೂ ನಿರ್ದೋಷಿಗಳಾಗಿದ್ದಾರೆ. ಇದನ್ನು ನೀವು ಮೋಶೆಯ ಧರ್ಮಶಾಸ್ತ್ರದಲ್ಲಿ ಓದಿಲ್ಲವೇ? ದೇವಾಲಯಕ್ಕಿಂತಲೂ ಶ್ರೇಷ್ಠವಾದವನು ಇಲ್ಲಿದ್ದಾನೆಂಬುದು ನಿಮಗೆ ತಿಳಿದಿರಲಿ. ‘ನನಗೆ ಬೇಕಾದುದು ದಯೆ, ಯಜ್ಞಬಲಿಯಲ್ಲ ಎಂಬ ವಾಕ್ಯದ ಅರ್ಥ ನಿಮಗೆ ತಿಳಿದಿದ್ದರೆ, ನಿರ್ದೋಷಿಗಳನ್ನು ನೀವು ಖಂಡಿಸುತ್ತಿರಲಿಲ್ಲ. ಏಕೆಂದರೆ ನರಪುತ್ರನು ಸಬ್ಬತ್ತಿಗೆ ಒಡೆಯ,” ಎಂದರು.