ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

01.06.2019 - "ನೀವು ನನ್ನನ್ನು ಪ್ರೀತಿಸಿ ನಾನು ಅವರಿಂದ ಬಂದವನೆಂದು ವಿಶ್ವಾಸಿಸಿದ್ದರಿಂದ ಪಿತನಿಗೆ ನಿಮ್ಮ ಮೇಲೆ ಅಕ್ಕರೆಯಿದೆ"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 18:23-28 

ಪೌಲನು ಅಂತಿಯೋಕ್ಯದಲ್ಲಿ ಕೆಲಕಾಲವಿದ್ದು ಪನಃ ಹೊರಟು ನಲಾತ್ಯ ಮತ್ತು ಫ್ರಿಜಿಯ ಪ್ರದೇಶಗಳಲ್ಲಿ ಸಂಚರಿಸುತ್ತಾ ಭಕ್ತರೆಲ್ಲರನ್ನು ದೃಡಪಡಿಸಿದನು. ಅಲೆಕ್ಸಾಂಡ್ರಿಯದ ಅಪೊಲ್ಲೋಸ್ ಎಂಬ ಯೆಹೂದ್ಯನು ಎಫೆಸಕ್ಕೆ ಬಂದಿದ್ದನು. ಅವನೊಬ್ಬ ಉತ್ತಮ ಬಾಷಣಕಾರ ಹಾಗೂ ಪವಿತ್ರಗ್ರಂಥದಲ್ಲಿ ಪಾಂಡಿತ್ಯ ಪಡೆದವನು. ಪ್ರಭುವಿನ ಮಾರ್ಗದ ಬಗ್ಗೆ ಅವನಿಗೆ ಉಪದೇಶಮಾಡಲಾಗಿತ್ತು. ಸ್ನಾನಿಕ ಯೊವಾನ್ನನ ಸ್ನಾನದೀಕ್ಷೆ ಒಂದನ್ನೇ ಅವನು ಬಲ್ಲವನಾಗಿದ್ದನು. ಆದರೂ ಯೇಸುಸ್ವಾಮಿಯ ಬಗ್ಗೆ ಉತ್ಸಾಹಭರಿತನಾಗಿ ಉಪದೇಶಮಾಡಿ ಚ್ಯುತಿಯಿಲ್ಲದೆ ಬೋಧಿಸುತ್ತಾ ಬಂದನು. ಇವನು  ಪ್ರಾರ್ಥನಾಮಂದಿರದಲ್ಲಿ ಧೈರ್ಯದಿಂದ ಮಾತನಾಡುತ್ತಿದ್ದಾಗ, ಪ್ರಿಸ್ಸಿಲ ಮತ್ತು ಅಕ್ವಿಲರು ಅವನ ಬೋಧನೆಯನ್ನು ಕೇಳಿದರು. ಅವನನ್ನು ಮನೆಗೆ ಕರೆದುಕೊಂಡು ಹೋಗಿ ಪ್ರಭುವಿನ ಮಾರ್ಗವನ್ನು ಇನ್ನೂ ಸೂಕ್ಷ್ಮವಾಗಿ ವಿವರಿಸಿದರು. ಇವನು ಅಖಾಯದ ಭಕ್ತಾದಿಗಳಿಗೆ ಪತ್ರ ಬರೆದು, ಇವನನ್ನು ಸ್ವಾಗತಿಸುವಂತೆ ಬಿನ್ನವಿಸಿದರು. ಇವನು ಅಲ್ಲಿಗೆ ಹೋಗಿ ದೇವರ ಕೃಪೆಯಿಂದ ವಿಶ್ವಾಸಿಗಳಾಗಿದ್ದವರಿಗೆ ಬಹುವಾಗಿ ನೆರವಾದನು. ಹೇಗೆಂದರೆ, ಪವಿತ್ರಗ್ರಂಥಾನುಸಾರ ಯೇಸುವೇ ಲೋಕೋದ್ಧಾರಕನೆಂದು ಖಚಿತಪಡಿಸಿ ಯೆಹೂದ್ಯರನ್ನು ಎಲ್ಲರ ಮುಂದೆ ಬಹಿರಂಗವಾಗಿ ಪ್ರತಿಭಟಿಸಿದನು 

ಕೀರ್ತನೆ: 47:2-3, 8-9, 10 
ಶ್ಲೋಕ: ದೇವನು ಭೂಮಂಡಲಕ್ಕೆಲ್ಲಾ ಒಡೆಯನು 

ಶುಭಸಂದೇಶ: ಯೊವಾನ್ನ 16:23-28 

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: "ಆ ದಿನದಂದು ನನ್ನಿಂದ ನೀವೇನನ್ನೂ ಕೇಳುವಂತಿಲ್ಲ. ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನೀವು ಪಿತನಲ್ಲಿ ಏನನ್ನು ಬೇಡಿಕೊಂಡರೂ ನಿಮಗೆ ಅವರು ನನ್ನ ಹೆಸರಿನಲ್ಲಿ ಕೊಟ್ಟೇ ತೀರುವರು. ಈ ತನಕ ನನ್ನ ಹೆಸರಿನಲ್ಲಿ ನೀವೇನನ್ನೂ ಕೇಳಲಿಲ್ಲ. ಕೇಳಿ, ನಿಮಗೆ ದೊರಕುವುದು. ಆಗ ನಿಮ್ಮ ಆನಂದವು ತುಂಬಿ ತುಳುಕುವುದು. ಈ ಸಂಗತಿಗಳನ್ನೆಲ್ಲಾ ನಿಮಗೆ ಸಾಮತಿಗಳ ರೂಪದಲ್ಲಿ ತಿಳಿಸಿರುವೆನು. ಕಾಲವು ಬರಲಿದೆ. ಆಗ ಸಾಮತಿಗಳನ್ನು ಬಳಸದೆ ಸ್ಪಷ್ಟವಾದ ಮಾತಿನಲ್ಲಿ ಪಿತನನ್ನು ಕುರಿತು ನಿಮಗೆ ತಿಳಿಸುವೆನು. ಆ ಕಾಲವು ಬಂದಾಗ ನನ್ನ ಹೆಸರು ಹೇಳಿ ನೀವೇ ಪಿತನಲ್ಲಿ ಬೇಡುವಿರಿ. ನಿಮ್ಮ ಪರವಾಗಿ ನಾನು ಪಿತನಲ್ಲಿ ಬೇಡಿಕೊಳ್ಳುವೆನೆಂದು ನಾನು ಹೇಳುವುದಿಲ್ಲ. ಕಾರಣ, ಪಿತನೇ ನಿಮ್ಮನ್ನು ಪ್ರೀತಿಸುತ್ತಾರೆ. ನೀವು ನನ್ನನ್ನು ಪ್ರೀತಿಸಿ ನಾನು ಅವರಿಂದ ಬಂದವನೆಂದು ವಿಶ್ವಾಸಿಸಿದ್ದರಿಂದ ಪಿತನಿಗೆ ನಿಮ್ಮ ಮೇಲೆ ಅಕ್ಕರೆಯಿದೆ. ಹೌದು, ನಾನು ಪಿತನಿಂದಲೇ ಹೊರಟು ಈ ಲೋಕಕ್ಕೆ ಬಂದಿದ್ದೇನೆ. ಈಗ ಈ ಲೋಕವನ್ನು ಬಿಟ್ಟು ಪಿತನಲ್ಲಿಗೆ ಹೋಗುತ್ತಿದ್ದೇನೆ."

31.05.2019 - "ಮಾಡಿಹನೆನಗೆ ಸರ್ವಶಕ್ತನು ಮಹತ್ಕಾರ್ಯ!"

ಪೂಜ್ಯ ಕನ್ಯಾಮರಿಯಮ್ಮನವರು ಎಲೀಜಬೇತಳನ್ನು ಸಂಧಿಸಿದ್ದು

ಮೊದಲನೇ ವಾಚನ: ಜೆಫನ್ಯ 3:14-18

ಹರ್ಷಧ್ವನಿಗೈ, ಸಿಯೋನ್ ಕುವರಿಯೇ ಘೋಷಿಸು, ಇಸ್ರಯೇಲ್ ದೇಶವೇ, ಹೃತ್ಪೂರ್ವಕವಾಗಿ ಸಂತೋಷಿಸು, ಜೆರುಸಲೇಮ್ ನಗರವೇ, ತಪ್ಪಿಸಿಹನು ಸರ್ವೇಶ ನಿನಗೆ ವಿಧಿಸಿರುವ ದಂಡನೆಗಳನು ತಳ್ಳಿ ಹೊರಗಟ್ಟಿಹನು ನಿನ್ನ ಶತ್ರುಗಳನು ಇಸ್ರಯೇಲಿನ ರಾಜನಾದ ಸರ್ವೇಶ ಇಹನು ನಿನ್ನ ಮಧ್ಯೆ ನೀನಿರುವೆ ಇನ್ನೆಂದಿಗೂ ಕೇಡಿಗಂಜದೆ. ಜೆರುಸಲೇಮಿಗೆ ಈ ಪರಿ ಹೇಳುವರು ಆ ದಿನದೊಳು: "ಅಂಜಬೇಡ ಸಿಯೋನ್, ಸೋತು ಜೋಲುಬೀಳದಿರಲಿ ನಿನ್ನ ಕೈಗಳು." ಪ್ರಸನ್ನವಾಗಿಹನು ದೇವಾ, ಸರ್ವೇಶ ನಿನ್ನ ಮಧ್ಯೆ ಕೊಡುವನಾಶೂರ ನಿನಗೆ ರಕ್ಷಣೆ ಹರ್ಷಾನಂದಗೊಳ್ಳುವನು ನಿನ್ನ ವಿಷಯದಲ್ಲಿ ಪುನಶ್ಚೇತನಗೊಳಿಸುವನು ನಿನ್ನನ್ನು ಪ್ರಶಾಂತ ಪ್ರೀತಿಯಲಿ ಗಾನಗೀತೆಗಳಿಂದ ತೋಷಿಸುವನು ನಿನ್ನಲಿ ಹಬ್ಬಹುಣ್ಣಿಮೆಗಳ ತರದಲಿ. ತಡೆದುಬಿಡುವನು ಸರ್ವವಿನಾಶವನ್ನು ದೂರಮಾಡುವನು ನಿನ್ನಿಂದ ನಿಂದೆ ಅಪಮಾನವನು.

ಯೆಶಾಯ: 12:2-3, 4, 5-6
ಶ್ಲೋಕ: ಹಾಡಿರಿ ಹಾಡಿರಿ ಭಜನ ಇಸ್ರಯೇಲಿನಾ ಸ್ವಾಮಿ ಪರಮ ಪಾವನ

ಶುಭಸಂದೇಶ: ಲೂಕ 1:39-56

ಇದಾದ ಕೆಲವು ದಿನಗಳಲ್ಲೇ ಮರಿಯಳು ಪ್ರಯಾಣ ಹೊರಟು ಜುದೇಯದ ಗುಡ್ಡಗಾಡಿನಲ್ಲಿರುವ ಒಂದು ಊರಿಗೆ ತ್ವರೆಯಾಗಿ ಬಂದಳು ಅಲ್ಲಿ ಜಕರೀಯನ ಮನೆಗೆ ಹೋಗಿ ಎಲಿಜಬೇತಳನ್ನು ವಂದಿಸಿದಳು. ಮರಿಯಳ ವಂದನೆಯನ್ನು ಎಲಿಜಬೇತಳು ಕೇಳಿದ್ದೇ ತಡ, ಆಕೆಯ ಗರ್ಭದಲ್ಲಿದ್ದ ಶಿಶು ನಲಿದಾಡಿತು; ಎಲಿಜಬೇತಳು ಪವಿತ್ರಾತ್ಮಭರಿತಳಾಗಿ ಹರ್ಷೋದ್ಗಾರದಿಂದ ಹೀಗೆಂದಳು: "ಸ್ತ್ರೀಯರಲ್ಲೆಲ್ಲಾ ಧನ್ಯಳು ನೀನು; ನಿನ್ನ ಕರುಳ ಕುಡಿಯೂ ಧನ್ಯ! ನನ್ನ ಪ್ರಭುವಿನ ತಾಯಿ ನೀನು; ನನ್ನ ಬಳಿಗೆ ಬಂದುದು ಅದೆಂಥ ಭಾಗ್ಯ!ನಿನ್ನ ವಂದನೆಯ ದನಿ ನನ್ನಕಿವಿ ತಾಕಿದೊಡನೆ ನಲಿದಾಡಿತು ಆನಂದದಿಂದ, ನನ್ನ ಕರುಳ ಕುಡಿ! ನಂಬಿ ಧನ್ಯಳಾದೆ ನೀನು, ದೇವರಿಂದ ಬಂದ ವಾರ್ತೆ ನೆರವೇರಿಯೇ ತೀರುವುದೆಂದು." ಆಗ ಹೀಗೆಂದು ಮರಿಯಳು ಹೊಗಳಿದಳು. "ಎನ್ನ ಮನ ಮಾಡುತ್ತಿದೆ ಸರ್ವೇಶ್ವರನ ಸ್ತುತಿ! ಉಲ್ಲಾಸಿಸುತ್ತಿದೆ ಮುಕ್ತಿದಾತ ದೇವನಲಿ! ತನ್ನ ದಾಸಿಯ ದೀನತೆಯನು ನೆನಪಿಗೆ ತಂದುಕೊಂಡನಾತ! ಧನ್ಯಳೆಂದು ಹೊಗಳುವರೆನ್ನನ್ನು ಇಂದಿನಿಂದ ಸರ್ವ ಜನಾಂಗ! ಏಕೆನೆ ಮಾಡಿಹನೆನಗೆ ಸರ್ವಶಕ್ತನು ಮಹತ್ಕಾರ್ಯ! ನಿಜಕ್ಕೂ ಆತನ ನಾಮಧೇಯ ಪರಮಪೂಜ್ಯ! ಆತನಲ್ಲಿ ಭಯಭಕ್ತಿಯುಳ್ಳವರಿಗೆ!  ಆತನ ಪ್ರೀತಿ ತಲತಲಾಂತರದವರೆಗೆ! ಗರ್ವಹೃದಯಿಗಳನಾತ ಚದುರಿಸಿರುವನು! ಪ್ರದರ್ಶಿಸಿರುವನು ತನ್ನ ಬಾಹುಬಲವನ್ನು! ಇಳಿಸಿಹನು ಗದ್ದುಗೆಯಿಂದ ಘನಾಧಿಪತಿಗಳನು! ಏರಿಸಿರುವನು ಉನ್ನತಿಗೆ ದೀನದಲಿತರನು! ತೃಪ್ತಿಪಡಿಸಿರುವನಾತ ಹಸಿದವರನು ಮೃಷ್ಟಾನ್ನದಿ! ಹೊರದೂಡಿರುವನು ಸಿರಿವಂತರನು ಬರಿಗೈಯಲಿ! ನೆರವಾದನು ತನ್ನ ದಾಸ ಇಸ್ರಯೇಲನಿಗೆ! ಪೂರ್ವಜನರಿಗಿತ್ತ ವಾಗ್ದಾನದ ಮೇರೆಗೆ! ಮರೆಯಲಿಲ್ಲ ಆತ ಕರುಣೆತೋರಲು ಅಬ್ರಹಾಮನಿಗೆ! ಅವನ ಸಂತತಿಗೆ, ಯುಗಯುಗಾಂತರದವರೆಗೆ! ಮರಿಯಳು ಸುಮಾರು ಮೂರು ತಿಂಗಳು ಎಲಿಜಬೇತಳೊಡನೆ ತಂಗಿದ್ದು ತನ್ನ ಮನೆಗೆ ಹಿಂದಿರುಗಿದಳು.


30.05.2019 - "ನೀವು ದುಖಃಪಡುವಿರಿ. ಆದರೆ ನಿಮ್ಮ ದುಃಖ ಆನಂದವಾಗಿ ಮಾರ್ಪಡುವುದು"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 18:1-8

ಇದಾದಮೇಲೆ ಪೌಲನು ಅಥೆನ್ಸ್ ಬಿಟ್ಟು ಕೊರಿಂಥಕ್ಕೆ ಹೋದನು. ಪೂಂತ ಎಂಬ ಊರಿನ ಆಕ್ವಿಲ ಎಂಬ ಯೆಹೂದ್ಯನನ್ನು ಅಲ್ಲಿ ಕಂಡನು. ಚಕ್ರವರ್ತಿ ಕ್ಲಾಡಿಯಸನು ಯೆಹೂದ್ಯರೆಲ್ಲರೂ ರೋಮ್ನಗರವನ್ನು ಬಿಟ್ಟುಹೋಗಬೇಕೆಂದು ಆಜ್ಞಾಪಿಸಿದ್ದರಿಂದ, ಈ ಆಕ್ವಿಲನು ತನ್ನ ಪತ್ನಿ ಪ್ರಿಸ್ಸಿಲಳೊಂದಿಗೆ ಇಟಲಿಯಿಂದ ಇತ್ತೀಚೆಗೆ ಬಂದಿದ್ದನು. ಪೌಲನು ಅವರನ್ನು ನೋಡಲು ಹೋದನು. ಅವರು ತನ್ನಂತೆಯೇ ಗುಡಾರಮಾಡುವ ಕಸುಬಿನವರಾಗಿದ್ದರಿಂದ ಅವರಲ್ಲೇ ತಂಗಿದ್ದು ಅವರೊಡನೆ ಕೆಲಸ ಮಾಡುತ್ತಾ ಬಂದನು. ಪ್ರತಿ ಸಬ್ಬತ್ ದಿನ ಅವನು ಪ್ರಾರ್ಥನಾಮಂದಿರದಲ್ಲಿ ಚರ್ಚಿಸುತ್ತಾ ಯೆಹೂದ್ಯರನ್ನು ಮತ್ತು ಗ್ರೀಕರನ್ನು ವಿಶ್ವಾಸಿಗಳನ್ನಾಗಿಸಲು ಪ್ರಯತ್ನಿಸುತ್ತಿದ್ದನು. ಸೀಲ ಮತ್ತು ತಿಮೊಥೇಯ ಮಕೆದೋನಿಯದಿಂದ ಬಂದ ಮೇಲೆ ಪೌಲನು ಶುಭಸಂದೇಶವನ್ನು ಸಾರುವುದರಲ್ಲೂ ಯೇಸುವೇ ಬರಬೇಕಾದ ಲೋಕೋದ್ಧಾರಕ ಎಂದು ಯೇಹೂದ್ಯರಿಗೆ ರುಜುವಾತುಪಡಿಸುವುದರಲ್ಲೂ ತನ್ನ ಸಮಯವನ್ನು ಕಳೆದನು. ಆದರೆ ಆ ಯೆಹೂದ್ಯರು ಅವನನ್ನು ಪ್ರತಿಭಟಿಸಿ ದೂಷಿಸಿದರು. ಆಗ ಪೌಲನು ತನ್ನ ಹೊದಿಕೆಯನ್ನು ಒದರಿ, "ನಿಮ್ಮ ವಿನಾಶಕ್ಕೆ ನೀವೇ ಹೊಣೆ; ಅದಕ್ಕೆ ನಾನು ಬಾದ್ಯನಲ್ಲ. ಇಂದಿನಿಂದ ನಾನು ಅನ್ಯಧರ್ಮೀಯರ ಕಡೆಗೆ ಹೋಗುತ್ತೇನೆ," ಎಂದನು. ಅಂತೆಯೇ ಅವರನ್ನು ಬಿಟ್ಟು ದೇವರಲ್ಲಿ ಭಯಭಕ್ತಿಯುಳ್ಳವನಾಗಿದ್ದ ತೀತಯುಸ್ತ ಎಂಬುವನ ಮನೆಗೆ ಹೋದನು. ಅವನ ಮನೆ ಪ್ರಾರ್ಥನಾಮಂದಿರದ ಪಕ್ಕದಲ್ಲೇ ಇತ್ತು. ಪ್ರಾರ್ಥನಾಮಂದಿರದ ಅಧ್ಯಕ್ಷ ಕ್ರಿಸ್ಪ ಎಂಬುವನೂ ಅವನ ಮನೆಯವರೆಲ್ಲರೂ ಪ್ರಭುವಿನಲ್ಲಿ ವಿಶ್ವಾಸವಿಟ್ಟರು. ಕೊರಿಂಥದ ಇನ್ನೂ ಅನೇಕ ಜನರು ಪೌಲನ ಬೋಧನೆಯನ್ನು ಕೇಳಿ ವಿಶ್ವಾಸವಿಟ್ಟರು ಮತ್ತು ದೀಕ್ಷಾಸ್ನಾನ ಪಡೆದರು.

ಕೀರ್ತನೆ: 98:1, 2-3, 3-4
ಶ್ಲೋಕ: ರಾಷ್ಪ್ರಗಳಿಗೆ ತೋರಿಸಿಹನು ಪ್ರಭು ಜೀವೋದ್ಧಾರಕ ಶಕ್ತಿಯನು

ಶುಭಸಂದೇಶ: ಯೊವಾನ್ನ 16:16-20

"ತುಸುಕಾಲವಾದ ನಂತರ ನೀವು ನನ್ನನ್ನು ಕಾಣಲಾರಿರಿ. ಅನಂತರ ತುಸುಕಾಲ ಕಳೆಯುತ್ತಲೇ ನನ್ನನ್ನು ಪುನಃ ಕಾಣುವಿರಿ," ಎಂದರು ಯೇಸುಸ್ವಾಮಿ. ಇದನ್ನು ಕೇಳಿದ ಕೆಲವು ಮಂದಿ ಶಿಷ್ಯರು, "ಇದೇನು ಇವರು ಹೇಳುತ್ತಿರುವುದು? "ತುಸುಕಾಲವಾದ ನಂತರ ನೀವು ನನ್ನನ್ನು ಕಾಣಲಾರಿರಿ. ಅನಂತರ ತುಸುಕಾಲ ಕಳೆಯುತ್ತಲೇ ನೀವು ನನ್ನನ್ನು ಪುನಃ ಕಾಣುವಿರಿ ಮತ್ತು ಪಿತನಲ್ಲಿಗೆ ನಾನು ಹೋಗುತ್ತೇನೆ," ಎನ್ನುತ್ತಾರಲ್ಲ? "ತುಸುಕಾಲ" ಎಂದರೇನು? ಇವರ ಮಾತೇ ನಮಗೆ ಅರ್ಥವಾಗುತ್ತಿಲ್ಲವಲ್ಲಾ," ಎಂದು ತಮ್ಮ ತಮ್ಮೊಳಗೆ ಮಾತನಾಡತೊಡಗಿದರು. ಯೇಸು, ತಮ್ಮಲ್ಲಿ ಅವರು ವಿಚಾರಿಸಬೇಕೆಂದಿದ್ದಾರೆಂದು ತಿಳಿದುಕೊಂಡು, ತುಸುಕಾಲದ ನಂತರ ನೀವು ನನ್ನನ್ನು ಕಾಣಲಾರಿರಿ. ಅನಂತರ ತುಸುಕಾಲ ಕಳೆಯುತ್ತಲೇ ನನ್ನನ್ನು ಪುನಃ ಕಾಣುವಿರಿ" ಎಂದು ನಾನು ಹೇಳಿದ್ದನ್ನು ಕುರಿತು ನಿಮ್ಮ ನಿಮ್ಮಲ್ಲಿಯೇ ನೀವು ಚರ್ಚಿಸುತ್ತಿರುವುದೇನು? ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನೀವು ಹತ್ತು ಗೋಳಾಡುವಿರಿ; ಲೋಕವಾದರೋ ನಕ್ಕು ನಲಿದಾಡುವುದು. ನೀವು ದುಖಃಪಡುವಿರಿ. ಆದರೆ ನಿಮ್ಮ ದುಃಖ ಆನಂದವಾಗಿ ಮಾರ್ಪಡುವುದು ಎಂದರು.

29.05.2019 - "ಸತ್ಯಸ್ವರೂಪಿ ಆದ ಪವಿತ್ರಾತ್ಮ ಬಂದಮೇಲೆ ನಿಮ್ಮನ್ನು ಸಮಗ್ರ ಸತ್ಯದೆಡೆಗೆ ಕರೆದೊಯ್ಯವರು"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 17:15, 22-18:1

ಪೌಲನನ್ನು ಬಿಟ್ಟುಬರಲು ಹೋದವರು ಅವನ ಜೊತೆ ಅಥೆನ್ಸಿನವರೆಗೆ ಹೋದರು; ಅನಂತರ ಸೀಲ ಮತ್ತು ತಿಮೊಥೇಯರಿಬ್ಬರೂ ಸಾಧ್ಯವಾದಷ್ಟು ಬೇಗ ತನ್ನ ಬಳಿಗೆ ಬಂದು ಸೇರಬೇಕೆಂಬ ಆಜ್ಞೆಯನ್ನು ಪೌಲನಿಂದ ಪಡೆದು, ಅವರು ಬೆರೋಯಕ್ಕೆ ಹಿಂದಿರುಗಿದರು. ಪೌಲನು ಆರಿಯೊಪಾನ ಸಭೆಯ ಮುಂದೆ ನಿಂತು  ಹೀಗೆಂದನು: "ಅಥೆನ್ಸಿನ ಮಹಾಜನರೇ, ನೀವು ಎಲ್ಲಾ ವಿದದಲ್ಲೂ ಬಹು ಧರ್ಮನಿಷ್ಠರೆಂದು ನನಗೆ ತೋರುತ್ತದೆ. ನಿಮ್ಮ ಪಟ್ಟಣದಲ್ಲಿ ನಾನು ತಿರುಗಾಡುತ್ತಾ, ನೀವು ಪೂಜಿಸುವ ವಿಗ್ರಹಗಳನ್ನು ಗಮನಿಸುತ್ತಾ ಇದ್ದಾಗ ಒಂದು ಬಲಿಪೀಠವು ಕಣ್ಣಿಗೆ ಬಿದ್ದಿತು. ಅದರ ಮೇಲೆ "ಅಜ್ಞಾತ ದೇವರಿಗೆ" ಎಂಬ ಲಿಖಿತವಿತ್ತು. ನೀವು ಅರಿಯದೆ ಆರಾಧಿಸುವ ಆ ದೇವರನ್ನೇ ಆರುಹಿಸಲು ನಾನು ಬಂದಿರುತ್ತೇನೆ. ಜಗತ್ತನ್ನು ಹಾಗೂ ಅದರಲ್ಲಿರುವ ಸಮಸ್ತವನ್ನೂ ಸೃಷ್ಟಿಸಿದ ದೇವರು ಇಹಪರಗಳಿಗೆ ಒಡೆಯರು: ಮಾನವರು ನಿರ್ಮಿಸಿದ ಗುಡಿಗಳಲ್ಲಿ ಅವರು ಮನೆಮಾಡುವಂಥವರಲ್ಲ. ಎಲ್ಲಾ ಜೀವಿಗಳಿಗೆ ಪ್ರಾಣವನ್ನೂ ಶ್ವಾಸವನ್ನೂ ಸಮಸ್ತವನ್ನೂ ಕೊಡುವವರು ಅವರೇ; ಎಂದೇ ಅವರಿಗಾಗಿ ಮಾನವನು ದುಡಿಯಬೇಕಾದ ಅವಶ್ಯಕತೆ ಇಲ್ಲ. ಅಂಥ ಕೊರತೆ ಅವರಿಗೇನೂ ಇಲ್ಲ. ಒಂದೇ ಮೂಲದಿಂದ ಅವರು ಎಲ್ಲಾ ಜನಾಂಗಗಳನ್ನು ಸೃಷ್ಟಿಸಿ ಭೂಮಂಡಲದಲ್ಲೆಲ್ಲಾ ಜೀವಿಸುವಂತೆ ಮಾಡಿದ್ದಾರೆ. ಆಯಾ ಜನಾಂಗದ ಕಾಲಾವಧಿಯನ್ನೂ ಅವರವರ ನೆಲೆಯ ಎಲ್ಲೆಮೇರೆಗಳನ್ನೂ ಮುಂಚಿತವಾಗಿ ಅವರೇ ನಿರ್ಧರಿಸಿದ್ಧಾರೆ. ಜನರು ತಮ್ಮನ್ನು ಅರಸಬೇಕೆಂಬುದೇ ಅವರ ಉದ್ದೇಶ; ಹೀಗಾದರೂ ತಮ್ಮನ್ನು ಅರಸಿ ಸಾಕ್ಷಾತ್ಕರಿಸಿಕೊಂಡಾರು ಎಂದು ದೇವರು ಹೀಗೆ ಮಾಡಿದರು ಆದರೂ, ನಮ್ಮಲ್ಲಿ ಯಾರೊಬ್ಬರಿಂದಲೂ ದೇವರು ದೂರವಿಲ್ಲ. ಏಕೆಂದರೆ, "ನಾವು ಜೀವಿಸುವುದೂ ಚಲಿಸುವುದೂ ಇರುವುದೂ ಅವರಲ್ಲೇ; ನಿಮ್ಮ ಕವಿಗಳಲ್ಲೇ ಕೆಲವರು ಹೇಳಿರುವಂತೆ, "ನಾವು ನಿಜವಾಗಿ ದೇವರ ಮಕ್ಕಳು." ನಾವು ದೇವರ ಮಕ್ಕಳಾಗಿರುವುದರಿಂದ ಜನರು ಕಲಾಕುಶಲತೆಯಿಂದಲೂ ಕಲ್ಪನೆಯಿಂದಲೂ ರೂಪಿಸಿದ ಚಿನ್ನ, ಬೆಳ್ಳಿ, ಶಿಲೆಗಳ ಪ್ರತಿಮೆಗೆ ದೇವರು ಸಮಾನರೆಂದು ಭಾವಿಸಲಾಗದು. ಮಾನವರು ತಮ್ಮನ್ನು ಅರಿಯದೆ ಬಾಳಿದ ಕಾಲವನ್ನು ದೇವರು ಗಮನಕ್ಕೆ ತಂದುಕೊಳ್ಳಲಿಲ್ಲ. ಆದರೆ ಈಗ ಎಲ್ಲೆಡೆಯಲ್ಲಿರುವ ಸರ್ವಮಾನವರು ದುರ್ಮಾರ್ಗಗಳನ್ನು ಬಿಟ್ಟು ತಮಗೆ ಅಭಿಮುಖರಾಗಬೇಕೆಂದು ಆಜ್ಞಾಪಿಸುತ್ತಾರೆ. ಏಕೆಂದರೆ, ಅವರು ಒಂದು ದಿನವನ್ನು ಗೊತ್ತುಮಾಡಿದ್ದಾರೆ; ಆ ದಿನದಂದು ತಾವು ನೇಮಿಸಿದ ಒಬ್ಬ ವ್ಯಕ್ತಿಯ ಮುಖಾಂತರ ಇಡೀ ಜಗತ್ತಿಗೆ ನ್ಯಾಯನಿರ್ಣಯ ಮಾಡುವರು. ಇದನ್ನು ಎಲ್ಲರಿಗೂ ಖಚಿತಪಡಿಸಲೆಂದೇ ಆ ವ್ಯಕ್ತಿಯನ್ನು ಮರಣದಿಂದ ಪುನರುತ್ದಾನಗೊಳಿಸಿದ್ದಾರೆ." ಸತ್ತವರ ಪುನರುತ್ದಾನದ ಬಗ್ಗೆ ಪೌಲನು ಮಾತನಾಡಿದಾಗ ಕೆಲವರು ಪರಿಹಾಸ್ಯಮಾಡಿದರು. ಉಳಿದವರು, "ಈ ವಿಷಯದ ಬಗ್ಗೆ ನೀನು ಇನ್ನೊಮ್ಮೆ ಹೇಳಬಹುದು, ಆಗ ಕೇಳುತ್ತೇವೆ," ಎಃದರು. ಹೀಗೆ ಪೌಲನು ಆ ಸಭೆಯಿಂದ ನಿರ್ಗಮಿಸಿದನು. ಕೆಲವರು ಅವನನ್ನು ಸೇರಿಕೊಂಡು ಭಕ್ತವಿಶ್ವಾಸಿಗಳಾದರು. ಇವರಲ್ಲಿ  ಅರಿಯೊಪಾಗದ ದಿಯೊನಿಸಿಯನೂ ದಮರಿ ಎಂಬ ಸ್ತ್ರೀಯೂ ಮತ್ತಿತರರೂ ಇದ್ದರು. ಇದಾದಮೇಲೆ ಪೌಲನು ಅಥೆನ್ಸನ್ನು ಬಿಟ್ಟು ಕೊರಿಂಥಕ್ಕೆ ಹೋದನು.

ಕೀರ್ತನೆ: 148:1-2, 11-12, 13, 14
ಶ್ಲೋಕ: ಭೂಮ್ಯಾಕಾಶ ಮೀರಿದೆ ಆತನ ಮಹಿಮೆ

ಶುಭಸಂದೇಶ: ಯೊವಾನ್ನ  16:12-15

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: "ನಾನು ನಿಮಗೆ ಹೇಳಬೇಕಾದುದು ಇನ್ನೂ ಎಷ್ಟೋ ಇದೆ. ಸಧ್ಯಕ್ಕೆ ಅವು ನಿಮಗೆ ಹೊರಲಾಗದ ಹೊರೆಯಾಗಬಾರದು. ಹೇಗೂ ಸತ್ಯಸ್ವರೂಪಿ ಆದ ಪವಿತ್ರಾತ್ಮ ಬಂದಮೇಲೆ ನಿಮ್ಮನ್ನು ಸಮಗ್ರ ಸತ್ಯದೆಡೆಗೆ ಕರೆದೊಯ್ಯವರು. ಅವರು ತಮ್ಮಷ್ಟಕ್ಕೆ ತಾವೇ ಏನನ್ನೂ  ಬೋಧಿಸದೆ ತಾವು ಕೇಳಿದುದನ್ನು ಕುರಿತೇ ಮಾತನಾಡುವರು. ಮುಂದೆ ನಡೆಯಲ್ಲಿರುವುದನ್ನೂ ನಿಮಗೆ ತಿಳಿಸುವರು.  ಅವರು, ನಾನು ಹೇಳಿರುವುದರಿಂದಲೇ ಆಯ್ದು ನಿಮಗೆ ತಿಳಿಯಪಡಿಸಿ ನನ್ನ ಮಹಿಮೆಯನ್ನು ಬೆಳಗಿಸುವರು, ಪಿತನಿಗೆ ಇರುವುದೆಲ್ಲವೂ ನನ್ನದೇ, ಆದುದರಿಂದಲೇ ಪವಿತ್ರಾತ್ಮ ನಾನು ಹೇಳಿದವುಗಳಿಂದಲೇ ಆಯ್ದು ನಿಮಗೆ ತಿಳಿಯಪಡಿಸುವರೆಂದು ನಾನು ಹೇಳಿದ್ದು."

28.05.2019 - "ನಾನು ಹೋಗದಿದ್ದರೆ, ಪೋಷಕ ನಿಮ್ಮಲ್ಲಿಗೆ ಬರುವುದಿಲ್ಲ"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 16:22-34

ಜನರ ಗುಂಪು ಅವರೊಡನೆ ಸೇರಿ ದೊಂಬಿಮಾಡಿತು. ನ್ಯಾಯಾಧಿಪತಿಗಳು ಪೌಲ ಮತ್ತು ಸೀಲರ ವಸ್ತ್ರಗಳನ್ನು ಕಿತ್ತುಹಾಕಿಸಿ ಛಡಿ ಎಟುಗಳನ್ನು ಕೊಡುವಂತೆ ಆಜ್ಞೆ ಮಾಡಿದರು. ಅವರನ್ನು ಚೆನ್ನಾಗಿ ಥಳಿಸಿದ ಮೇಲೆ ಸೆರೆಮನೆಯಲ್ಲಿ ಹಾಕಿ ಎಚ್ಚರಿಕೆಯಿಂದ ನೋಡಿಕೊಳ್ಳಬೇಕೆಂದು ಸೆರೆಮನೆಯ ಅಧಿಕಾರಿಗೆ ಅಪ್ಪಣೆ ವಿಧಿಸಲಾಯಿತು.  ಅಂತೆಯೇ, ಆ ಅಧಿಕಾರಿ  ಅವರನ್ನು ಸೆರೆಮನೆಯ ಒಳಕೋಣೆಗೆ ತಳ್ಳಿ ಅವರ ಕಾಲುಗಳನ್ನು ಮರದ ದಿಮ್ಮಿಗಳಿಗೆ ಬಿಗಿಸಿದನು. ಸುಮಾರು ನಡುರಾತ್ರಿಯ ಸಮಯ. ಪೌಲ ಮತ್ತು ಸೀಲ ಪ್ರಾರ್ಥನೆಮಾಡುತ್ತಾ ದೇವರಿಗೆ ಸ್ತುತಿಗೀತೆಗಳನ್ನು ಹಾಡುತ್ತಾ ಇದ್ದರು. ಇತರ ಕೈದಿಗಳೆಲ್ಲರು ಆಲಿಸುತ್ತಿದ್ದರು. ಇದ್ದಕ್ಕಿದ್ದಂತೆ ಭೀಕರ ಭೂಕಂಪ ಉಂಟಾಯಿತು. ಸೆರೆಮನೆಯ ಅಸ್ತಿವಾರವೇ ಕದಲಿತು. ಆ ಕ್ಷಣವೇ ಕದಗಳೆಲ್ಲಾ ತೆರೆದುವು. ಕೈದಿಗಳೆಲ್ಲರ ಬಂಧನಗಳು ಕಳಚಿಬಿದ್ದವು. ಎಚ್ಚೆತ್ತ ಅಧಿಕಾರಿ ಸೆರೆಮನೆಯ ಬಾಗಿಲುಗಳೆಲ್ಲಾ ತೆರೆದಿರುವುದನ್ನು ಕಂಡನು. ಕೈದಿಗಳೆಲ್ಲರು ತಪ್ಪಿಸಿಕೊಂಡಿರುವರೆಂದು ಭಾವಿಸಿ ತನ್ನ ಖಡ್ಗವನ್ನು ಹಿರಿದು ಆತ್ಮಹತ್ಯೆ ಮಾಡಿಕೊಳ್ಳುವುದರಲ್ಲಿದ್ದನು.  ಆಗ ಪೌಲನು ಗಟ್ಟಿಯಾಗಿ ಕೂಗುತ್ತಾ, "ನೀನೇನೂ ಹಾನಿಮಾಡಿಕೊಳ್ಳಬೇಡ, ನಾವೆಲ್ಲರೂ ಇಲ್ಲೇ ಇದ್ದೇವೆ, ಎಂದನು. ಸೆರೆಮನೆಯ ಅಧಿಕಾರಿ ದೀಪವನ್ನು ತರಿಸಿ, ಒಳಗೆ ಧಾವಿಸಿ ಬಂದು, ಭಯದಿಂದ ನಡುಗುತ್ತಾ ಪೌಲ ಮತ್ತು ಸೀಲರ ಪಾದಕ್ಕೆ ಬಿದ್ದನು. ಅನಂತರ ಅವರನ್ನು ಹೊರಗೆ ಕರೆತಂದು, "ಸ್ವಾಮಿಗಳೇ, ಜೀವೋದ್ಧಾರ ಪಡೆಯಲು ನಾನು ಮಾಡಬೇಕಾದುದು ಏನು?" ಎಂದು ವಿಚಾರಿಸಿದನು. "ಪ್ರಭು ಯೇಸುವಿನಲ್ಲಿ ವಿಶ್ವಾಸವಿಡು, ನೀನೂ ನಿನ್ನ ಮನೆಯವರೆಲ್ಲರೂ ಜೀವೋದ್ಧಾರವನ್ನು ಹೊಂದುವಿರಿ," ಎಂದು ಅವರು ಉತ್ತರಕೊಟ್ಟರು. ಅನಂತರ ಪ್ರಭುವಿನ ಸಂದೇಶವನ್ನು ಅವನಿಗೂ ಅವನ ಮನೆಯಲ್ಲಿದ್ದ ಎಲ್ಲರಿಗೂ ಬೋಧಿಸಿದರು. ರಾತ್ರಿಯ ವೇಳೆಯಲ್ಲೇ ಸೆರೆಮನೆಯ ಅಧಿಕಾರಿ ಅವರನ್ನು ಕರೆದುಕೊಂಡು ಹೋಗಿ ಅವರ ಗಾಯಗಳನ್ನು ತೊಳೆದನು. ಅನಂತರ ಅವನೂ ಅವನ ಕುಟುಂಬದವರೂ ದೀಕ್ಷಾಸ್ನಾನವನ್ನು ಪಡೆದರು.  ಬಳಿಕ ಪೌಲ ಮತ್ತು ಸೀಲರನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಊಟಬಡಿಸಿದನು. ದೇವರಲ್ಲಿ ವಿಶ್ವಾಸವಿಡುವ ಸದಾವಕಾಶ ದೊರಕಿದ್ದಕ್ಕಾಗಿ ಅವನೂ ಅವನ ಮನೆಯವರೆಲ್ಲರೂ ಉಲ್ಲಾಸಗೊಂಡರು.

ಕೀರ್ತನೆ: 138:1-2, 2-3, 7-8
ಶ್ಲೋಕ: ಇಕ್ಕಟ್ಟಿನಲ್ಲಿ ನಡೆವಾಗಲೂ ನೀ ರಕ್ಷಿಸುವೆ ಪ್ರಭು ಪ್ರಾಣವನು

ಶುಭಸಂದೇಶ: ಯೊವಾನ್ನ 16:5-11

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: "ನಾನು ನಿಮ್ಮ ಸಂಗಡ ಇದ್ದುದರಿಂದ ಇದನ್ನೆಲ್ಲಾ ಮೊದಲೇ ನಿಮಗೆ ತಿಳಿಸಲಿಲ್ಲ. ಈಗಲಾದರೋ ನನ್ನನ್ನು ಕಳುಹಿಸಿದಾತನಲ್ಲಿಗೆ ನಾನು ತೆರಳುತ್ತೇನೆ. ನಾನು ಹೋಗುವುದು ಎಲ್ಲಿಗೆ ಎಂದು ನೀವು ಯಾರೂ ಕೇಳುತ್ತಿಲ್ಲವಾದರೂ ಇದನ್ನೆಲ್ಲಾ ನಾನು ನಿಮಗೆ ಹೇಳಿದ್ದರಿಂದ ನಿಮ್ಮ ಹೃದಯವು ದುಃಖಭರಿತವಾಗಿದೆ. ವಾಸ್ತವವಾಗಿ ಹೇಳುವುದಾದರೆ, ನಾನು ಹೋಗುವುದು ನಿಮ್ಮ ಹಿತಕ್ಕಾಗಿಯೇ. ನಾನು ಹೋಗದಿದ್ದರೆ, ಪೋಷಕ ನಿಮ್ಮಲ್ಲಿಗೆ ಬರುವುದಿಲ್ಲ. ನಾನು ಹೋದರೆ ಮಾತ್ರ ಅವರನ್ನು ನಿಮ್ಮಲ್ಲಿಗೆ ಕಳುಹಿಸಿಕೊಡಬಲ್ಲೆ. ಆ ಪೋಷಕ ಬಂದು ಪಾಪ, ನ್ಯಾಯನೀತಿ, ಮತ್ತು ಅಂತಿಮ ತೀರ್ಪು ಇವುಗಳನ್ನು ಕುರಿತು ಲೋಕದ ಜನತೆ ತಾಳಿದ್ದ ತಪ್ಪುಭಾವನೆಗಳನ್ನು ಮನವರಿಕೆ ಮಾಡಿಕೊಡುವರು. ಪಾಪದ ವಿಷಯವಾಗಿ ಅವರ ತಪ್ಪುಭಾವನೆಯನ್ನು ಮನವರಿಕೆಮಾಡಿಕೊಡುವರು. ಏಕೆಂದರೆ, ಅವರು ನನ್ನಲ್ಲಿ ವಿಶ್ವಾಸ ಇಡಲಿಲ್ಲ. ನ್ಯಾಯನೀತಿಯ ವಿಷಯವಾಗಿ ಅವರ ತಪ್ಪುಭಾವನೆಗಳನ್ನು ಮನವರಿಕೆಮಾಡಿಕೊಡುವರು. ಏಕೆಂದರೆ, ನಾನು ಪಿತನ ಬಳಿಗೆ ಹೋಗುತ್ತೇನೆ ಮತ್ತು ನೀವು ನನ್ನನ್ನು ಕಾಣಲಾರಿರಿ. ಅಂತಿಮ ತೀರ್ಪಿನ ವಿಷಯವಾಗಿ ಅವರ ತಪ್ಪು ಭಾವನೆಗಳನ್ನು ಮನವರಿಕೆಮಾಡಿಕೊಡುವರು. ಏಕೆಂದರೆ, ಇಹದ ಲೋಕಾಧಿಪತಿಗೆ ಈಗಾಗಲೇ ನ್ಯಾಯತೀರ್ಪನ್ನು ಕೊಡಲಾಗಿದೆ.

27.05.2019 - "ಸತ್ಯಸ್ವರೂಪಿಯಾದ ಪವಿತ್ರಾತ್ಮರು ಬಂದು ನನ್ನ ಪರವಾಗಿ ಸಾಕ್ಷಿ ನೀಡುವರು"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 16:11-15

ನಾವುತ್ರೋವದಲ್ಲಿ ಹಡಗುಹತ್ತಿ ಸಮೊಥ್ರಕ್ಕೆ ನೇರವಾಗಿ ಪ್ರಯಾಣಮಾಡಿದೆವು. ಮಾರನೆಯ ದಿನ ನೆಯಫೋಲನ್ನು ತಲುಪಿ, ಅಲ್ಲಿಂದ ಮಕೆದೋನಿಯದ ಪ್ರಮುಖ ಪಟ್ಟಣವಾದ ಫಿಲಿಪ್ಪಿಗೆ ಬಂದೆವು. ಇದು ರೋಮಿನ ವಸಾಹತು; ಇಲ್ಲಿ ಕೆಲವು ದಿನಗಳನ್ನು ಕಳೆದೆವು. ಪಟ್ಟಣದ ಹೊರಗಿರುವ ನದಿತೀರದ ಬಳಿ ಯೆಹೂದ್ಯರ ಪ್ರಾರ್ಥನಾ ಸ್ಥಳವಿರಬಹುದೆಂದು ಭಾವಿಸಿ ಸಬ್ಬತ್ ದಿನ ಅಲ್ಲಿಗೆ ಹೋದೆವು. ನಾವು ಕುಳಿತುಕೊಂಡು ಅಲ್ಲಿ ಸೇರಿದ್ದ ಮಹಿಳೆಯರೊಡನೆ ಸಂಭಾಷಿಸಿದೆವು. ನಮ್ಮ ಬೋಧನೆಯನ್ನು ಕೇಳಿ ಆ ಮಹಿಳೆಯರಲ್ಲಿ ಲಿಡಿಯ ಎಂಬುವಳು ಒಬ್ಬಳು. ಈಕೆ ಥುವತೈರ ಎಂಬ ಊರಿನವಳು. ಪಚ್ಛೆ ಪೀತಾಂಬರಗಳ ವ್ಯಾಪಾರಿ ಹಾಗೂ ದೇವಭಕ್ತೆ. ಪೌಲನ ಬೋಧನೆಗೆ ಕಿವಿಗೊಟ್ಟು ಗ್ರಹಿಸುವಂತೆ ಪ್ರಭು ಆಕೆಯ ಹೃದಯವನ್ನು ತೆರೆದರು. ಅಂತೆಯೇ ತನ್ನ ಮನೆಯವರ ಸಮೇತ ದೀಕ್ಷಾಸ್ನಾನವನ್ನು ಪಡೆದಳು. ಅನಂತರ, "ನಾನು ಪ್ರಭುವಿನ ನಿಜವಾದ ವಿಶ್ವಾಸಿಯೆಂದು ನೀವು ಒಪ್ಪಿಕೊಳ್ಳುವುದಾದರೆ ನನ್ನ ಮನೆಗೆ ಬಂದು ತಂಗಿರಿ," ಎಂದು ನಮ್ಮನ್ನು ಒತ್ತಾಯಪೂರ್ವಕವಾಗಿ ಆಹ್ವಾನಿಸಿದಳು.

ಕೀರ್ತನೆ: 149: 1-2, 3-4, 5-6, 9
ಶ್ಲೋಕ: ಪ್ರೀತಿಸುತ್ತಾನೆ ಪ್ರಭು ತನ್ನ ಪ್ರಜೆಯನು!

ಶುಭಸಂದೇಶ: ಯೊವಾನ್ನ 15:26--16:4

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: "ಪಿತನಿಂದ ಹೊರಡುವ ಸತ್ಯಸ್ವರೂಪಿಯಾದ ಪವಿತ್ರಾತ್ಮರನ್ನು ನಿಮ್ಮ ಪೋಷಕರನ್ನಾಗಿ ನಾನು ಪಿತನಿಂದಲೇ ಕಳುಹಿಸುವೆನು. ಅವರು ಬಂದು ನನ್ನ ಪರವಾಗಿ ಸಾಕ್ಷಿ ನೀಡುವರು. ಮೊತ್ತ ಮೊದಲಿನಿಂದಲೂ ನನ್ನ ಸಂಗಡ ಇದ್ದ ನೀವು ಕೂಡ ನನ್ನನ್ನು ಕುರಿತು ಸಾಕ್ಷಿ ನೀಡುವವರಾಗಿದ್ದೀರಿ. ನಿಮ್ಮ ವಿಶ್ವಾಸ ಕುಸಿಯದಂತೆ ನೀವು ಎಚ್ಚರಿಕೆ ವಹಿಸಬೇಕೆಂದು ನಾನು ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ. ಜನರು, ನಿಮ್ಮನ್ನು ಪ್ರಾರ್ಥನಾಮಂದಿರದಿಂದ ಬಹಿಷ್ಕರಿಸುವರು, ಅಷ್ಟೇ ಅಲ್ಲ, ನಿಮ್ಮನ್ನು ಕೊಲ್ಲುವವನು ತಾನು ದೇವರಿಗೆ ಬಲಿಕೊಟ್ಟೆನೆಂದು ಭಾವಿಸುವ ಕಾಲವೂ ಬರಲಿದೆ. ನನ್ನನ್ನಾಗಲಿ, ಪಿತನನ್ನಾಗಲಿ ಅವರು ಅರಿತಿಲ್ಲದ ಕಾರಣ ನಿಮಗೆ ಹೀಗೆ ಮಾಡುವರು. ಅಂಥ ಕಾಲ ಬಂದಾಗ ಇದನ್ನೆಲ್ಲಾ ಕುರಿತು ನಾನು ನಿಮ್ಮನ್ನು ಮೊದಲೇ ಎಚ್ಚರಿಸಿದ್ದೇನೆಂದು ನೀವು ನೆನಸಿಕೊಳ್ಳುವಂತೆ ಇದನ್ನು ಹೇಳುತ್ತಿದ್ದೇನೆ."

26.05.2019 - "ನನ್ನನ್ನು ಪ್ರೀತಿಸುವವನು ನನ್ನ ಮಾತನ್ನು ಕೈಗೊಂಡು ನಡೆಯುವನು. ಅವನನ್ನು ನನ್ನ ಪಿತನೂ ಪ್ರೀತಿಸುವರು"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 15:1-2, 22-29

ಜುದೇಯದಿಂದ ಕೆಲವು ಜನರು ಅಂತಿಯೋಕ್ಯಕ್ಕೆ ಬಂದು ಅಲ್ಲಿನ ಭಕ್ತವಿಶ್ವಾಸಿಗಳಿಗೆ, "ಮೋಶೆಯ ನಿಯಮದಂತೆ ನೀವು ಸುನ್ನತಿ ಮಾಡಿಸಿಕೊಂಡ ಹೊರತು ಜೀವೋದ್ಧಾರ ಪಡೆಯಲಾರಿರಿ," ಎಂದು ಬೋಧಿಸತೊಡಗಿದರು. ಈ ವಿಷಯವಾಗಿ ಅವರಿಗೂ ಪೌಲ ಮತ್ತು ಬಾರ್ನಬರಿಗೂ ಭಿನ್ನಾಭಿಪ್ರಾಯ ಉಂಟಾಗಿ ತೀವ್ರ ವಿವಾದವೆದ್ದಿತು. ಆದುದರಿಂದ ಈ ಸಮಸ್ಯೆಯ ಬಗ್ಗೆ ಪೌಲ ಮತ್ತು ಬಾರ್ನಬರು ಅಂತಿಯೋಕ್ಯದ ಇನ್ನೂ ಕೆಲವರ ಸಮೇತ ಜೆರುಸಲೇಮಿಗೆ ಹೋಗಿ ಪ್ರೇಷಿತರನ್ನೂ ಪ್ರಮುಖರನ್ನೂ ಕಾಣಬೇಕೆಂದು ತೀರ್ಮಾನಿಸಲಾಯಿತು. ಅನಂತರ ಪ್ರೇಷಿತರೂ ಸಭಾಪ್ರಮುಖರೂ ಇಡೀ ಧರ್ಮಸಭೆಯ ಸಮ್ಮತಿ ಪಡೆದು, ತಮ್ಮಲ್ಲಿ ಕೆಲವರನ್ನು ಆರಿಸಿ, ಪೌಲ ಮತ್ತು ಬಾರ್ನಬರೊಂದಿಗೆ ಅಂತಿಯೋಕ್ಯಕ್ಕೆ ಕಳುಹಿಸಬೇಕೆಂದು ನಿರ್ಧರಿಸಿದರು. ಅಂತೆಯೇ, ಸಹೋದರರಲ್ಲಿ ಬಹು ಗೌರವಾನ್ವಿತರಾದ ಬಾರ್ನಬ ಎಂದು ಕರೆಯಲಾದ ಯೂದ ಮತ್ತು ಸೀಲ ಎಂಬ ಇಬ್ಬರನ್ನು ಆರಿಸಿದರು. ಈ ಕೆಳಗಿನ ಪತ್ರವನ್ನು ಬರೆದು ಅವರ ಕೈಯಲ್ಲಿ  ಕಳುಹಿಸಿದರು. "ಅಂತಿಯೋಕ್ಯ, ಸಿರಿಯ ಮತ್ತು ಸಿಲಿಸಿಯಗಳಲ್ಲಿ ವಾಸಿಸುವ ಯೆಹೂದ್ಯೇತರ ಸಹೋದರರಿಗೆ - ಪ್ರೇಷಿತರೂ ಸಭಾಪ್ರಮುಖರೂ ನಿಮ್ಮ ಸಹೋದರರೂ ಆದ ನಮ್ಮ ಶುಭಾಶಯಗಳು! ನಮ್ಮ ಕಡೆಯ ಕೆಲವು ಜನರು ನಮ್ಮಿಂದ ಯಾವ ಆದೇಶವನ್ನೂ ಪಡೆಯದೆ ನಿಮ್ಮನ್ನು ತೊಂದರೆಗೆ ಈಡುಮಾಡಿ ನಿಮ್ಮ ಮನಸ್ಸನ್ನು ಕಲಕಿದರೆಂಬ ಸಮುಚಾರ ನಮ್ಮ ಗಮನಕ್ಕೆ ಬಂದಿದೆ. ಆದುದರಿಂದ ನಾವೆಲ್ಲರೂ ಸಭೆ ಸೇರಿ ಪ್ರತಿನಿಧಿಗಳನ್ನು ಆರಿಸಿ ನಿಮ್ಮಲ್ಲಿಗೆ ಕಳುಹಿಸಲು ನಿರ್ಧರಿಸಿದೆವು ನಮ್ಮ ಪ್ರಭುವಾದ ಯೇಸುಕ್ರಿಸ್ತರಿಗಾಗಿ ತಮ್ಮಪ್ರಾಣವನ್ನೇ ಮುಡಿಪಾಗಿಟ್ಟಿರುವ ನಮ್ಮೊಲವಿನ ಬಾರ್ನಬ ಮತ್ತು ಪೌಲರೊಡನೆ ಈ ಪ್ರತಿನಿಧಿಗಳು ಬರುತ್ತಿದ್ದಾರೆ. ಇವರೇ ನಾವು ಕಳುಹಿಸುತ್ತಿರುವ ಯೂದ ಮತ್ತು ಸೀಲ. ಇವರು ನಾವು ಬರೆದಿರುವುದನ್ನು ನಿಮಗೆ ಖುದ್ದಾಗಿ ತಿಳಿಸುವರು. ವಿಗ್ರಹಗಳಿಗೆ ನೈವೇದ್ಯವಾದುದು ಅಪವಿತ್ರವಾದುದು ಅದನ್ನು ಸೇವಿಸಬಾರದು; ರಕ್ತವನ್ನಾಗಲಿ, ಕುತ್ತಿಗೆ ಹಿಸುಕಿದ ಪ್ರಾಣಿಗಳನ್ನಾಗಲಿ ತಿನ್ನಬಾರದು; ಅನೈತಿಕತೆಯಿಂದ ದೂರವಿರಬೇಕು. ಈ ಅಗತ್ಯ ನಿಯಮಗಳ ಹೊರತು ಬೇರೆ ಯಾವ ಹೊರೆಯನ್ನೂ ನಿಮ್ಮ ಮೇಲೆ ಹೇರುವುದು ವಿಹಿತವಲ್ಲವೆಂಬುದು ಪವಿತ್ರಾತ್ಮ ಅವರ ಹಾಗೂ ನಮ್ಮ ತೀರ್ಮಾನ. ಈ ನಿಯಮಗಳನ್ನು  ಅನುಸರಿಸಿದರೆ, ನಿಮಗೆ ಒಳಿತಾಗುವುದು, ನಿಮಗೆ ಶುಭವಾಗಲಿ!"

ಕೀರ್ತನೆ: 67:2-3, 5, 6, 8
ಶ್ಲೋಕ: ನಿನ್ನ ಕೀರ್ತಿಸಲಿ ದೇವಾ, ಜನರು ಸಂಕೀರ್ತಿಸಲಿ ಅವರೆಲ್ಲರೂ

ಎರಡನೇ ವಾಚನ: ಪ್ರಕಟನಾ ಗ್ರಂಥ 21:10-14, 22-23

ಆಗ ಯೊವಾನ್ನನಾದ ನಾನು ಪವಿತ್ರಾತ್ಮವಶನಾದೆ. ಆ ದೇವದೂತನು ನನ್ನನ್ನು ಎತ್ತರವಾದ ಬೆಟ್ಟದ ಮೇಲೆ ಕೊಂಡೂಯ್ದನು. ಅಲ್ಲಿ ಅವನಿಗೆ ಪವಿತ್ರ ನಗರವಾದ ಜೆರುಸಲೇಮನ್ನು ತೋರಿಸಿದನು. ಅದು ಸ್ವರ್ಗದಲ್ಲಿರುವ ದೇವರ ಬಳಿಯಿಂದ ಕೆಳಗಿಳಿದು ಬರುತ್ತಿತ್ತು; ದೇವರ ತೇಜಸ್ಸಿನಿಂದ ಕೂಡಿತ್ತು; ಅಮೂಲ್ಯ ರತ್ನದಂತೆ ಹೊಳೆಯುತ್ತಿತ್ತು. ಸ್ವಚ್ಛವಾದ ಸ್ಪಟಿಕದಂತೆ ಶುಬ್ರವಾಗಿತ್ತು. ಆ ನಗರದ ಸುತ್ತಲೂ ಎತ್ತರವಾದ  ಕೋಟೆಯಿತ್ತು. ಅದಕ್ಕೆ ಹನ್ನೆರಡು ಹೆಬ್ಬಾಗಿಲುಗಳಿದ್ದವು. ಆ ಬಾಗಿಲುಗಳಿಗೆ ಹನ್ನೆರಡು ಮಂದಿ ದೇವದೂತರುಗಳು ಕಾವಲಿದ್ದರು. ಆ ಬಾಗಿಲುಗಳ ಮೇಲೆ ಇಸ್ರಯೇಲಿನ ಹನ್ನೆರಡು ಕುಲಗಳ ಹೆಸರುಗಳನ್ನು ಬರೆದಿತ್ತು. ಪೂರ್ವದಿಕ್ಕಿನಲ್ಲಿ ಮೂರು ಬಾಗಿಲುಗಳು,  ಉತ್ತರ ದಿಕ್ಕಿನಲ್ಲಿ ಮೂರು ಬಾಗಿಲುಗಳು, ದಕ್ಷಿಣ ದಿಕ್ಕಿನಲ್ಲಿ ಮೂರು ಬಾಗಿಲುಗಳು, ಮತ್ತು ಪಶ್ಚಿಮ ದಿಕ್ಕಿನಲ್ಲಿ ಮೂರು ಬಾಗಿಲುಗಳು ಇದ್ದವು. ಆ ನಗರದ ಕೋಟೆಗೆ ಹನ್ನೆರಡು ಅಸ್ತಿವಾರಗಳಿದ್ದವು. ಅವುಗಳ ಮೇಲೆ ಹನ್ನೆರಡು ಹೆಸರುಗಳಿದ್ದವು ಯಜ್ಞದ ಕುರಿಮರಿಯ ಹನ್ನೆರಡು ಪ್ರೇಷಿತರ ಹೆಸರುಗಳು ಅವು ಆ ನಗರದಲ್ಲಿ ನಾನು ದೇವಾಲಯವನ್ನು ಕಾಣಲಿಲ್ಲ; ಏಕೆಂದರೆ, ಸರ್ವಶಕ್ತ ದೇವರಾದ ಪ್ರಭುವೂ ಯಜ್ಞದ ಕುರಿಮರಿಯಾದಾತನೂ  ಅದರ ದೇವಾಲಯವಾಗಿದ್ದಾರೆ. ನಗರಕ್ಕೆ ಬೆಳಕನ್ನು ಕೊಡಲು ಸೂರ್ಯ ಇಲ್ಲವೆ ಚಂದ್ರನ ಅವಶ್ಯಕತೆ ಇಲ್ಲ. ಏಕೆಂದರೆ, ದೇವರ ತೇಜಸ್ಸೇ ಅದಕ್ಕೆ ಬೆಳಕು. ಯಜ್ಞದ ಕುರಿಮರಿಯೇ ಅದಕ್ಕೆ ಜ್ಯೋತಿ.

ಶುಭಸಂದೇಶ: ಯೊವಾನ್ನ 14:23-29


ಆಗ ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ನನ್ನನ್ನು ಪ್ರೀತಿಸುವವನು ನನ್ನ ಮಾತನ್ನು ಕೈಗೊಂಡು ನಡೆಯುವನು. ಅವನನ್ನು ನನ್ನ ಪಿತನೂ ಪ್ರೀತಿಸುವರು. ಮತ್ತು ನಾವಿಬ್ಬರೂ ಅವನ ಬಳಿ ಬಂದು ಅವನಲ್ಲಿ ನೆಲೆಸುವೆವು. ನನ್ನನ್ನು ಪ್ರೀತಿಸದೆ ಇರುವವನು ನನ್ನ ಮಾತನ್ನು ಕೈಗೊಂಡು ನಡೆಯುವುದಿಲ್ಲ. ನೀವು ಕೇಳುತ್ತಿರುವ ಮಾತು ನನ್ನದಲ್ಲ. ನನ್ನನ್ನು ಕಳುಹಿಸಿದ ಪಿತನದೇ. ನಾನು ನಿಮ್ಮೊಡನೆ ಇರುವಾಗಲೇ ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ. ಆದರೆ ಪಿತನು ನನ್ನ ಹೆಸರಿನಲ್ಲಿ ಕಳುಹಿಸಿಕೊಡುವ ಪೊಷಕರಾದ ಪವಿತ್ರಾತ್ಮ ನಿಮಗೆ ಎಲ್ಲವನ್ನೂ ಬೋಧಿಸಿ ನಾನು ಹೇಳಿರುವುದನ್ನೆಲ್ಲಾ ನಿಮ್ಮ ನೆನಪಿಗೆ ತರುವರು. ನಾನು ಶಾಂತಿಸಮಾಧಾನವನ್ನು ನಿಮಗೆ ಬಿಟ್ಟು ಹೋಗುತ್ತೇನೆ; ಈ ಲೋಕವು ಕೊಡುವ ರೀತಿಯಲ್ಲಿ ನಾನದನ್ನು ನಿಮಗೆ ಕೊಡುವುದಿಲ್ಲ. ನೀವು ಹೃದಯದಲ್ಲಿ ಕಳವಳಗೊಳ್ಳದಿರಿ. ಭಯಪಡಬೇಡಿ. ನಾನು ಹೊರಟು ಹೋಗುತ್ತೇನೆಂದೂ ಮತ್ತೆ ನಿಮ್ಮ ಬಳಿಗೆ ಬರುತ್ತೇನೆಂದೂ ನಾನು ಹೇಳಿದ್ದನ್ನು ನೀವು ಕೇಳಿದ್ದೀರಿ ನೀವು ನನ್ನನ್ನು ಪ್ರೀತಿಸುವವರಾಗಿದ್ದರೆ ನಾನು ಪಿತನ ಬಳಿಗೆ ಹೋಗುತ್ತಿರುವುದನ್ನು ಕುರಿತು ಹಿಗ್ಗುತ್ತಿದ್ದಿರಿ. ಏಕೆಂದರೆ ಪಿತ ನನಗಿಂತಲೂ ಶ್ರೇಷ್ಠರು. ಇದೆಲ್ಲಾ ಈಡೇರುವಾಗ ನೀವು ವಿಶ್ವಾಸಿಸುವಂತೆ ಅದು ಈಡೇರುವುದಕ್ಕೆ ಮುಂಚೆಯೇ ನಿಮಗೆ ತಿಳಿಯಪಡಿಸಿದ್ದೇನೆ.

25.05.2019 - "ಲೋಕವು ನಿಮ್ಮನ್ನು ದ್ವೇಷಿಸಿದರೆ, ನನ್ನ ಮೇಲೆ ಅದಕ್ಕೆ ದ್ವೇಷವಿತ್ತೆಂಬುದನ್ನು ನೆನಪಿನಲ್ಲಿಡಿ"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 16:1-10

ಪೌಲನು ದೆರ್ಬೆಗೂ ಅಲ್ಲಿಂದ ಲುಸ್ತ್ರಕ್ಕೂ ಪ್ರಯಾಣಮಾಡಿದನು. ತಿಮೊಥೇಯ ಎಂಬ ಕ್ರೈಸ್ತಭಕ್ತನು ಅಲ್ಲಿ ವಾಸಿಸುತ್ತಿದ್ದನು. ಅವನ ತಾಯಿ ಯೆಹೂದ್ಯಳು ಹಾಗೂ ಕ್ರೈಸ್ತಭಕ್ತಳು. ತಂದೆಯಾದರೋ ಗ್ರೀಕನು. ಲುಸ್ತ್ರ ಮತ್ತು ಇಕೋನಿಯದ ಸಹೋದರರೆಲ್ಲರಿಗೆ ತಿಮೊಥೇಯನ ಬಗ್ಗೆ ಸದಭಿಪ್ರಾಯವಿತ್ತು. ಪೌಲನು ತಿಮೊಥೇಯನನ್ನು ತನ್ನೊಡನೆ ಕರೆದುಕೊಂಡು ಹೋಗಲು ಅಪೇಕ್ಷಿಸಿದನು. ಆ ಪ್ರದೇಶದಲ್ಲಿದ್ದ ಯೆಹೂದ್ಯರಿಗೆ ತಿಮೊಥೇಯನ ತಂದೆ ಗ್ರೀಕನೆಂದು ತಿಳಿದಿದ್ದುರಿಂದ ಅವನಿಗೆ ಸುನ್ನತಿ ಮಾಡಿಸಿದನು. ಊರಿಂದ ಊರಿಗೆ ಪ್ರಯಾಣ ಮಾಡುತ್ತಾ, ಜೆರುಸಲೇಮಿನಲ್ಲಿದ್ದ ಪ್ರೇಷಿತರೂ ಸಭಾಪ್ರಮುಖರೂ ನಿರ್ಧರಿಸಿದ ನಿಯಮಗಳನ್ನು ಭಕ್ತರಿಗೆ ಬೋದಿಸುತ್ತಾ, ಅವುಗಳನ್ನು ಪಾಲಿಸುವಂತೆ ಹೇಳಿದನು. ಹೀಗೆ ಕ್ರೈಸ್ತಸಭೆಗಳು ವಿಶ್ವಾಸದಲ್ಲಿ ದೃಡಗೊಂಡು ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯತೊಡಗಿತು. ಏಷ್ಯದಲ್ಲಿ ಅವರು ಶುಭಸಂದೇಶವನ್ನು ಸಾರಕೂಡದೆಂದು ಪವಿತ್ರಾತ್ಮ ನಿಷೇಧಿಸಿದ್ದರಿಂದ ಅವರು ಫ್ರಿಜಿಯ ಮತ್ತು ಗಲಾತ್ಯ ಪ್ರದೇಶಗಳ ಮಾರ್ಗವಾಗಿ ಪ್ರಯಾಣಮಾಡಿದರು. ಮೂಸಿಯದ ಗಡಿಯನ್ನು ತಲುಪಿದಾಗ ಅವರು ಬಿಥೂನಿಯ ಪ್ರಾಂತ್ಯಕ್ಕೆ ಹೋಗಲು ಯತ್ನಿಸಿದರು. ಯೇಸುವಿನ ಆತ್ಮ ಅಲ್ಲಿಗೆ ಹೋಗಲು ಸಹ ಅವರನ್ನು ಬಿಡಲಿಲ್ಲ. ಆದುದರಿಂದ ಅವರು ಮೂಸಿಯವನ್ನು ಹಾದು ನೇರವಾಗಿ ತ್ರೋವಕ್ಕೆ ಹೋದರು. ಆ ರಾತ್ರಿ ಪೌಲನಿಗೆ ಒಂದು ದರ್ಶನವಾಯಿತು; ಮಕೆದೋನಿಯದ ಒಬ್ಬ ವೆಕ್ತಿ ಅಲ್ಲಿ ನಿಂತು, "ಮಕೆದೋನಿಯಕ್ಕೆ ಬಂದು ನಮಗೆ ಸಹಾಯಮಾಡಿ," ಎಂದು ಅಂಗಲಾಚಿದನು. ಪೌಲನಿಗೆ ಈ ದರ್ಶನವಾದ ತಕ್ಷಣ ಆ ಜನರಿಗೆ ಶುಭಸಂದೇಶವನ್ನು ಸಾರಲು ದೇವರು ನಮ್ಮನ್ನು ಕರೆದಿದ್ದಾರೆಂದು ನಾವು ಅರಿತುಕೊಂಡು ಮಕೆದೋನಿಯಕ್ಕೆ ಹೋಗಲು ಸಿದ್ಧರಾದೆವು.

ಕೀರ್ತನೆ: 100: 1-2, 3, 5
ಶ್ಲೋಕ: ಭೂನಿವಾಸಿಗಳೇ, ಜಯಘೋಷಮಾಡಿ ಪ್ರಭುವಿಗೆ

ಶುಭಸಂದೇಶ: ಯೊವಾನ್ನ 15:18-21


ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: "ಲೋಕವು ನಿಮ್ಮನ್ನು ದ್ವೇಷಿಸಿದರೆ, ನನ್ನ ಮೇಲೆ ಅದಕ್ಕೆ ದ್ವೇಷವಿತ್ತೆಂಬುದನ್ನು ನೆನಪಿನಲ್ಲಿಡಿ. ನೀವು ಲೋಕದ ಕಡೆಯವರಾಗಿದ್ದರೆ ಲೋಕವು ನಿಮ್ಮನ್ನು ತನ್ನವರೆಂದು ಮಮತೆಯಿಂದ ಕಾಣುತ್ತಿತ್ತು. ನೀವಾದರೋ ಲೋಕದ ಕಡೆಗೆ ಸೇರಿದವರಲ್ಲ. ನಾನು ನಿಮ್ಮನ್ನು ಆರಿಸಿಕೊಂಡಿರುವುದರಿಂದ. ನೀವು ಲೋಕದಿಂದ ಬೇರ್ಪಟ್ಟಿದ್ದೀರಿ. ಎಂದೇ ಲೋಕಕ್ಕೆ  ನಿಮ್ಮ ಮೇಲೆ ದ್ವೇಷವಿದೆ. ಧಣಿಗಿಂತಲೂ ದಾಸನು ದೊಡ್ಡವನಲ್ಲವೆಂದು ನಾನು ನಿಮಗೆ ಹೇಳಿದ್ದನ್ನು ನೆನಪಿಗೆ ತಂದುಕೊಳ್ಳಿ, ನನ್ನನ್ನು ಅವರು ಹಿಂಸೆಗೆ ಗುರಿಮಾಡುವರು. ನನ್ನ ಬೋಧನೆಯ ಮಾತನ್ನೂ ಅವರು ಅನುಸರಿಸಿ ನಡೆದರೆ ನಿಮ್ಮ ಬೋಧನೆಯ ಮಾತನ್ನು ಅನುಸರಿಸಿ ನಡೆಯುವರು. ನೀವು ನನ್ನವರಾದುದರಿಂದ ಅವರು ನಿಮ್ಮನ್ನು ಹೀಗೆ ಕಾಣುವರು. ಏಕೆಂದರೆ ನನ್ನನ್ನು ಕಳುಹಿಸಿದಾತನನ್ನು ಅವರು ಅರಿಯರು."

24.05.2019 - "ನನ್ನ ಹೆಸರಿನಲ್ಲಿ ಪಿತನಿಂದ ಏನು ಕೇಳಿದರೂ ನಿಮಗೆ ಅದು ಸಿಗುವುದು"

ಮೊದಲನೇ ವಾಚನ ಪ್ರೇಷಿತರ ಕಾರ್ಯಕಲಾಪಗಳು 15:22-31

ಅನಂತರ ಪ್ರೇಷಿತರೂ ಸಭಾಪ್ರಮುಖರೂ ಇಡೀ ಧರ್ಮಸಭೆಯ ಸಮ್ಮತಿ ಪಡೆದು, ತಮ್ಮಲ್ಲಿ ಕೆಲವರನ್ನು ಆರಿಸಿ, ಪೌಲ ಮತ್ತು ಬಾರ್ನಬರೊಂದಿಗೆ ಅಂತಿಯೋಕ್ಯಕ್ಕೆ ಕಳುಹಿಸಬೇಕೆಂದು ನಿರ್ಧರಿಸಿದರು. ಅಂತೆಯೇ ಸಹೋದರರಲ್ಲಿ ಬಹು ಗೌರವನ್ವಿತರಾದ ಬಾರ್ಸಬ್ಬ ಎಂದು ಕರೆಯಲಾದ ಯೂದ ಮತ್ತು ಸೀಲ ಎಂಬ ಇಬ್ಬರನ್ನು ಆರಿಸಿದರು. ಈ ಕೆಳಗಿನ ಪತ್ರವನ್ನು ಬರೆದು ಅವರ ಕೈಯಲ್ಲಿ ಕಳುಹಿಸಿದರು. "ಅಂತಿಯೋಕ್ಯ, ಸಿರಿಯ ಮತ್ತು ಸಿಲಿಸಿಯಗಳಲ್ಲಿ ವಾಸಿಸುವ ಯೆಹೂದ್ಯೇತರ ಸಹೋದರರಿಗೆ - ಪ್ರೇಷಿತರೂ ಸಭಾಪ್ರಮುಖರೂ ನಿಮ್ಮ ಸಹೋದರರೂ ಆದ ನಮ್ಮ ಶುಭಾಶಯಗಳು! ನಮ್ಮ ಕಡೆಯ ಕೆಲವು ಜನರು ನಮ್ಮಿಂದ ಯಾವ ಆದೇಶವನ್ನೂ ಪಡೆಯದೆ ನಿಮ್ಮನ್ನು ತೊಂದರೆಗೆ ಈಡುಮಾಡಿ ನಿಮ್ಮ ಮನಸ್ಸನ್ನು ಕಲಕಿದರೆಂಬ ಸಮಾಚಾರ ನಮ್ಮ ಗಮನಕ್ಕೆ ಬಂದಿದೆ ಆದುದರಿಂದ ನಾವೆಲ್ಲರೂ ಸಭೆಸೇರಿ ಪ್ರತಿನಿಧಿಗಳನ್ನು ಆರಿಸಿ ನಿಮ್ಮಲ್ಲಿಗೆ ಕಳುಹಿಸಲು ನಿರ್ಧರಿಸಿದೆವು. ನಮ್ಮ ಪ್ರಭುವಾದ ಯೇಸುಕ್ರಿಸ್ತರಿಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟಿರುವ ನಮ್ಮೊಲವಿನ ಬಾರ್ನಬ  ಮತ್ತು ಪೌಲರೊಡನೆ ಈ ಪ್ರತಿನಿಧಿಗಳು ಬರುತ್ತಿದ್ದಾರೆ. ಇವರೇ ನಾವು ಕಳುಹಿಸುತ್ತಿರುವ ಯೂದ ಮತ್ತು ಸೀಲ. ಇವರು ನಾವು ಬರೆದಿರುವುದನ್ನು ನಿಮಗೆ ಖುದ್ದಾಗಿ ತಿಳಿಸುವರು. ವಿಗ್ರಹಗಳಿಗೆ ನೈವೇದ್ಯವಾದುದು ಅಪವಿತ್ರವಾದುದು. ಅದನ್ನು ಸೇವಿಸಬಾರದು; ರಕ್ತವನ್ನಾಗಲಿ, ಕುತ್ತಿಗೆ ಹಿಸುಕಿಕೊಂದ ಪ್ರಾಣಿಗಳನ್ನಾಗಲಿ ತಿನ್ನಬಾರದು; ಅನೈತಿಕತೆಯಿಂದ ದೂರವಿರಬೇಕು. ಈ ಅಗತ್ಯ ನಿಯಮಗಳ ಹೊರತು ಬೇರೆ ಯಾವ ಹೊರೆಯನ್ನೂ ನಿಮ್ಮ ಮೇಲೆ ಹೇರುವುದು ವಿಹಿತವಲ್ಲವೆಂಬುದು ಪವಿತ್ರಾತ್ಮ ಅವರ ಹಾಗೂ ನಮ್ಮ ತೀರ್ಮಾನ. ಈ ನಿಯಮಗಳನ್ನು ಅನುಸರಿಸಿದರೆ, ನಿಮಗೆ ಒಳಿತಾಗುವುದು, ನಿಮಗೆ ಶುಭವಾಗಲಿ!" ಅಂತೆಯೇ ಪ್ರತಿನಿಧಿಗಳು ಅಲ್ಲಿಂದ ಅಪ್ಪಣೆ ಪಡೆದು ಅಂತಿಯೋಕ್ಯಕ್ಕೆ ಹೋದರು. ಅಲ್ಲಿ ಭಕ್ತ ಸಭೆಯನ್ನು ಒಟ್ಟುಗೂಡಿಸಿ ಅವರಿಗೆ ಆ ಪತ್ರವನ್ನು ಕೊಟ್ಟರು. ಪತ್ರದಲ್ಲಿದ್ದ ಪ್ರೋತ್ಸಾಹದಾಯಕ ಸಂದೇಶವನ್ನು ಓದಿದ್ದೇ ಭಕ್ತಾದಿಗಳು ಆನಂದಭರಿತರಾದರು.

ಕೀರ್ತನೆ: 578-9, 10, 12
ಶ್ಲೋಕ: ನಿನ್ನ ಸ್ತುತಿಸುವೆನು ಪ್ರಭೂ ಜನಾಂಗಗಳ ಮುಂದೆ

ಶುಭಸಂದೇಶ: ಯೊವಾನ್ನ 15:12-17

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ: "ನಾನು ಕೊಡುವ ಆಜ್ಞೆ ಏನೆಂದರೆ ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಸಹ ಒಬ್ಬರನೊಬ್ಬರು ಪ್ರೀತಿಸಬೇಕು. ಗೆಳೆಯರಿಗಾಗಿ ತನ್ನ ಪ್ರಾಣವನ್ನೇ ಧಾರೆಯೆರೆಯುವ ಪ್ರೀತಿಗಿಂತ ಮಿಗಿಲಾದ ಪ್ರೀತಿ ಯಾರಲ್ಲೂ ಇಲ್ಲ. ನಾನು ಆಜ್ಞಾಪಿಸಿದಂತೆ ನಡೆದರೆ ನೀವು ನನ್ನ ಗೆಳೆಯರು. ನಾನಿನ್ನು ನಿಮ್ಮನ್ನು ದಾಸರೆಂದು ಕರೆಯುವುದಿಲ್ಲ. ಧಣಿಯ ಕೆಲಸಕಾರ್ಯಗಳು ದಾಸನಿಗೆ ತಿಳಿಯವು. ನಾನಾದರೋ ಪಿತನಿಂದ ಕೇಳಿಸಿಕೊಂಡದ್ದನ್ನೆಲ್ಲಾ ನಿಮಗೆ ತಿಳಿಸಿದ್ದೇನೆ. ನೀವು ನನ್ನನ್ನು ಆರಿಸಿಕೊಳ್ಳಲಿಲ್ಲ. ನಾನೇ ನಿಮ್ಮನ್ನು ಆರಿಸಿಕೊಂಡಿದ್ದೇನೆ. ನೀವು ಲೋಕಕ್ಕೆ ಹೋಗಬೇಕು, ಸಫಲರಾಗಬೇಕು; ಆ ಫಲ ಶಾಶ್ವತವಾಗಿರಬೇಕೆಂದೇ ನಿಮ್ಮನ್ನು ನೇಮಿಸಿದ್ದೇನೆ. ಹೀಗಿರಲಾಗಿ ನೀವು ನನ್ನ ಹೆಸರಿನಲ್ಲಿ ಪಿತನಿಂದ ಏನು ಕೇಳಿದರೂ ನಿಮಗೆ ಅದು ಸಿಗುವುದು. ನೀವು ಒಬ್ಬರನೊಬ್ಬರು ಪ್ರೀತಿಸಬೇಕೆಂಬುದೇ ನಾನು ನಿಮಗೆ ಕೊಡುವ ಆಜ್ಞೆ," ಎಂದರು.

23.05.2019 - "ಪಿತನು ನನ್ನನ್ನು ಪ್ರೀತಿಸಿದಂತೆಯೇ ನಾನೂ ನಿಮ್ಮನ್ನು ಪ್ರೀತಿಸಿದ್ದೇನೆ"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 15:7-21

ಸುದೀರ್ಘ ಚರ್ಚೆಯಾದ ನಂತರ ಪೇತ್ರನು ಎದ್ದು ನಿಂತು ಹೀಗೆಂದನು: "ಸಹೋದರರೇ, ಅನ್ಯಧರ್ಮೀಯರು ಶುಭಸಂದೇಶವನ್ನು ನನ್ನ ಬಾಯಿಯಿಂದ ಕೇಳಿ ವಿಶ್ವಾಸಿಸಲೆಂದು ದೇವರು ನಿಮ್ಮ ಮಧ್ಯೆಯಿಂದ ನನ್ನನ್ನು ಬಹುದಿನಗಳ ಹಿಂದೆಯೇ ಆರಿಸಿಕೊಂಡರು. ಇದು ನಿಮಗೆ ತಿಳಿಯದ ವಿಷಯ. ಮಾನವನ ಅಂತರಂಗವನ್ನು ಅರಿತ ದೇವರು ನಿಮಗೆ ಕೊಟ್ಟಂತೆಯೇ ಅವರಿಗೂ ಪವಿತ್ರಾತ್ಮ ಅವರನ್ನು ಕೊಟ್ಟರು. ಅವರೂ ತಮ್ಮವರೇ ಎಂದು ವ್ಯಕ್ತಪಡಿಸಿದರು. ಅವರಿಗೂ ನಮಗೂ ಯಾವ ಭೇದಭಾವವನ್ನು ತೋರಿಸದೆ ವಿಶ್ವಾಸದ ನಿಮಿತ್ತ ದೇವರು ಅವರ ಪಾಪಗಳನ್ನು ಕ್ಷಮಿಸಿದರು. ಆದುದರಿಂದ ನಮ್ಮ ಪೂರ್ವಜರಿಂದಾಗಲೀ ನಮಿಂದಾಗಲೀ ಹೊರಲಾಗದಂಥ ಹೊರೆಯನ್ನು ಈ ಅನುಯಾಯಿಗಳ ಮೇಲೆ ಏಕೆ ಹೊರಿಸುತ್ತೀರಿ? ಹೀಗೆ ದೇವರನ್ನೇಕೆ ಕೆಣಕುತ್ತೀರಿ? ಇಲ್ಲ, ಇದು ಸರಿಯಲ್ಲ. ನಮಗೇ ಆಗಲಿ, ಅವರಿಗೇ ಆಗಲಿ, ಜೀವೋದ್ಧಾರ ದೊರಕುವುದು ಪ್ರಭು ಯೇಸುವಿನ ಅನುಗ್ರಹದಿಂದಲೇ ಇದೇ ನಮ್ಮ ವಿಶ್ವಾಸ," ಇದನ್ನು ಕೇಳಿದ್ದೇ, ಸಭೆ ಸೇರಿದ್ದವರೆಲ್ಲರೂ ಮೌನರಾದರು. ಪೌಲ ಮತ್ತು ಬಾರ್ನಬರಿಗೆ ಕಿವಿಗೊಟ್ಟರು. ದೇವರು ಅವರ ಮುಖಾಂತರ ಅನ್ಯಧರ್ಮೀಯರ ಮಧ್ಯೆ ಎಸಗಿದ ಸೂಚಕಕಾರ್ಯಗಳನ್ನೂ ಅದ್ಬುತಕಾರ್ಯಗಳನ್ನೂ ಕುರಿತು ಕೇಳಿದರು. ಇದಾದ ಮೇಲೆ ಯಕೋಬನು ಎದ್ದು ಹೀಗೆಂದನು: "ಸಹೋದರರೇ ಕೇಳಿ, ದೇವರು ಈ ಮೊದಲೇ ಅನ್ಯಧರ್ಮೀಯರಲ್ಲಿ ಆಸಕ್ತಿಗೊಂಡು ಅವರಿಂದಲೂ ಸ್ವಂತ ಪ್ರಜೆಯನ್ನು ಆರಿಸಿಕೊಂಡಿದ್ದಾರೆ, ಎಂಬ ವಿಷಯವನ್ನು ಸಿಮೋನನು ಈಗ ತಾನೇ ವಿವರಿಸಿದ್ದಾನೆ. ಇದಕ್ಕೂ ಪ್ರವಾದಿಗಳ ಪ್ರವಚನಗಳಿಗೂ ಪೂರ್ಣಸಾಮರಸ್ಯವಿದೆ. 'ಅಳಿದುಹೋದ ದಾವೀದನ ಮನೆತನವನು ಪುನರ್ ಸ್ಥಾಪಿಸಲು ಮರಳಿ ಬರುವೆನು ಪಾಳುಬಿದ್ದುದನು ಜೀರ್ಣೋದ್ಧಾರಗೊಳಿಸುವೆನು. ಸುಭದ್ರವಾಗಿ ನಿಲ್ಲಿಸುವೆನು ಅದನು. ನನ್ನವರೆಂದು ನಾನು ಕರೆದ ಎಲ್ಲ ಅನ್ಯಧರ್ಮೀಯರು ಉಳಿದೆಲ್ಲ ಮಾನವರು ನನ್ನತ್ತ ಬರಲಿಹರು ಎಂಬೀ ಸರ್ವೇಶ್ವರನ ನುಡಿ ಎಂದಿನಿಂದಲೋ ತಿಳಿಯಬಹುದು." ಆದುದರಿಂದ ನನ್ನ ತೀರ್ಮಾನವೇನೆಂದರೆ: ದೇವರ ಕಡೆಗೆ ತಿರುಗುತ್ತಿರುವ ಅನ್ಯಧರ್ಮೀಯರನ್ನು ತೊಂದರೆಗೆ ಈಡುಮಾಡಬಾರದು. ಅದಕ್ಕೆ ಬದಲಾಗಿ ನಾವು ಅವರಿಗೆ ಪತ್ರ ಬರೆದು, "ವಿಗ್ರಹಗಳಿಗೆ ನೈವೇದ್ಯವಾದುದು ಅಪವಿತ್ರವಾದುದು ಅದನ್ನು ಸ್ವೀಕರಿಸಬಾರದು; ಅನೈತಿಕತೆಯಿಂದ ದೂರವಿರಬೇಕು; ರಕ್ತವನ್ನಾಗಲಿ, ಕುತ್ತಿಗೆ ಹಿಸುಕಿದ ಪ್ರಾಣಿಗಳನ್ನಾಗಲಿ ತಿನ್ನಬಾರದು," ಎಂದು ತಿಳುವಳಿಕೆ ಕೊಡಬೇಕು. ಏಕೆಂದರೆ ಪುರಾತನ ಕಾಲದಿಂದಲೂ ಪ್ರತಿಯೊಂದು ಸಬ್ಬತ್ ದಿನ ಮೋಶೆಯ ಧರ್ಮಶಾಸ್ತ್ರವನ್ನು ಪ್ರಾರ್ಥನಾಮಂದಿರಗಳಲ್ಲಿ ಓದಲಾಗುತ್ತಿದೆ ಮತ್ತು ಆತನ ಬೋಧನೆಯನ್ನು ಪ್ರತಿ ನಗರಗಳಲ್ಲೂ ಸಾರಲಾಗುತ್ತಿದೆ,"ಎಂದನು.

ಕೀರ್ತನೆ: 96: 1-2, 2-3, 10
ಶ್ಲೋಕ: ಪ್ರಸಿದ್ಧಪಡಿಸಿರಿ ಆತನ ಘನತೆಯನು ರಾಷ್ಪ್ರಗಳಿಗೆ, ಆತನದ್ಬುತ ಕಾರ್ಯಗಳನು ಸಕಲ ಜನಾಂಗಗಳಿಗೆ

ಶುಭಸಂದೇಶ: ಯೊವಾನ್ನ 15:9-11


ಯೇಸುಸ್ವಾಮಿ ತಮ್ಮ ಶಿಷ್ಯರಿಗೆ:  "ಪಿತನು ನನ್ನನ್ನು ಪ್ರೀತಿಸಿದಂತೆಯೇ ನಾನೂ ನಿಮ್ಮನ್ನು ಪ್ರೀತಿಸಿದ್ದೇನೆ. ನನ್ನ ಪ್ರೀತಿಯಲ್ಲಿ ನೆಲೆಗೊಂಡು ನಿಲ್ಲಿರಿ. ನನ್ನ ಪಿತನು ಕೊಟ್ಟ ಆಜ್ಞೆಗಳನ್ನು ಪಾಲಿಸಿ ಅವರ ಪ್ರೀತಿಯಲ್ಲಿ ನಾನು ನೆಲೆಗೊಂಡಿರುವ ಹಾಗೆ ನೀವು ಕೂಡ ನಾನು ಕೊಟ್ಟ ಆಜ್ಞೆಗಳನ್ನು ಪಾಲಿಸಿದರೆ ನನ್ನ ಪ್ರೀತಿಯಲ್ಲಿ ನೆಲೆಗೊಂಡಿರುವಿರಿ. ನನ್ನಲ್ಲಿರುವ ಆನಂದವು ನಿಮ್ಮಲ್ಲಿ ಇರಬೇಕೆಂತಲೂ ನಿಮ್ಮ ಆನಂದವು ತುಂಬಿ ತುಳುಕಬೇಕೆಂತಲೂ ಇದನ್ನೆಲ್ಲಾ ನಿಮಗೆ ಹೇಳುತ್ತಿದ್ದೇನೆ," ಎಂದರು.

22.05.2019 - "ನಾನೇ ದ್ರಾಕ್ಷಾಬಳ್ಳಿ ನೀವೇ ಅದರ ಕವಲುಬಳ್ಳಿಗಳು"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 15:1-6

ಜುದೇಯದಿಂದ ಕೆಲವು ಜನರು ಅಂತಿಯೋಕ್ಯಕ್ಕೆ ಬಂದು ಅಲ್ಲಿನ ಭಕ್ತವಿಶ್ವಾಸಿಗಳಿಗೆ, "ಮೋಶೆಯ ನಿಯಮದಂತೆ ನೀವು ಸುನ್ನತಿ ಮಾಡಿಸಿಕೊಂಡ ಹೊರತು ಜೀವೋದ್ಧಾರ ಪಡೆಯಲಾರಿರಿ." ಎಂದು ಬೋಧಿಸತೊಡಗಿದರು. ಈ ವಿಷಯವಾಗಿ ಅವರಿಗೂ ಪೌಲ ಮತ್ತು ಬಾರ್ನಬರಿಗೂ ಭಿನ್ನಭಿಪ್ರಾಯ ಉಂಟಾಗಿ ತೀವ್ರ ವಿವಾದವೆದ್ದಿತು. ಆದುದರಿಂದ ಈ ಸಮಸ್ಯೆಯ ಬಗ್ಗೆ ಪೌಲ ಮತ್ತು ಬಾರ್ನಬರು ಅಂತಿಯೋಕ್ಯದ ಇನ್ನೂ ಕೆಲವರ ಸಮೇತ ಜೆರುಸಲೇಮಿಗೆ ಹೋಗಿ ಪ್ರೇಷಿತರನ್ನೂ ಪ್ರಮುಖರನ್ನೂ ಕಾಣಬೇಕೆಂದು ತೀರ್ಮಾನಿಸಲಾಯಿತು.  ಅಂತೆಯೇ ಕ್ರೈಸ್ತಸಭೆ ಅವರನ್ನು ಬೀಳ್ಕೊಟ್ಟಿತು. ಅವರು ಫೆನಿಷ್ಯ ಹಾಗೂ ಸಮಾರಿಯದ ಮಾರ್ಗವಾಗಿ ಪ್ರಯಾಣಮಾಡುತ್ತಾ ಅಲ್ಲಿಯ ಭಕ್ತವಿಶ್ವಾಸಿಗಳಿಗೆ ಅನ್ಯಧರ್ಮೀಯರು ಹೇಗೆ ಕ್ರೈಸ್ತರಾದರೆಂಬುದನ್ನು ವಿವರಿಸಿದರು. ಇದನ್ನು ಕೇಳಿದ ಭಕ್ತಾದಿಗಳು ಸಂತೋಷಭರಿತರಾದರು. ಪೌಲ, ಬಾರ್ನಬ ಮತ್ತು ಸಂಗಡಿಗರು ಜೆರುಸಲೇಮಿಗೆ ಆಗಮಿಸಿದಾಗ, ಅಲ್ಲಿಯ ಕ್ರೈಸ್ತಸಭೆ ಪ್ರೇಷಿತರ ಹಾಗೂ ಪ್ರಮುಕರ ಸಮೇತ ಅವರನ್ನು ಸ್ವಾಗತಿಸಿತು. ಆಗ ಅವರು, ದೇವರು ತಮ್ಮೊಡನೆ ಇದ್ದು, ಸಾಧಿಸಿದ ಎಲ್ಲಾ ಕಾರ್ಯಗಳನ್ನು ವರದಿ ಮಾಡಿದರು. ಫರಿಸಾಯ ಪಂಥಕ್ಕೆ ಸೇರಿದ ಕೆಲವು ಭಕ್ತರು ಮಾತ್ರ ಎದ್ದುನಿಂತು, ಅನ್ಯಧರ್ಮೀಯರು ಸುನ್ನತಿ ಮಾಡಿಸಿಕೊಳ್ಳಲೇಬೇಕು, ಅವರು ಮೋಶೆಯ ನಿಯಮಗಳನ್ನು ಅನುಸರಿಸುವಂತೆ ಆಜ್ಞೆ ಮಾಡಲೇಬೇಕು," ಎಂದರು. ಈ ಸಮಸ್ಯೆಯನ್ನು ಪರಿಶೀಲಿಸಲು ಪ್ರೇಷಿತರು ಮತ್ತು ಸಭಾಪ್ರಮುಖರು ಸಭೆ ಸೇರಿದರು.

ಕೀರ್ತನೆ: 122:1-2, 3-4, 4-5
ಶ್ಲೋಕ: ಪ್ರಭುವಿನಾಲಯಕ್ಕೆ ಹೋಗೋಣ ಬಾ ಎಂದಾಗ ಆಯಿತೆನಗೆ ಆನಂದ, ಜನರೆನ್ನ ಕರೆದಾಗ

ಶುಭಸಂದೇಶ: ಯೊವಾನ್ನ 15:1-8

"ನಾನೇ ನಿಜವಾದ ದ್ರಾಕ್ಷಾಬಳ್ಳಿ. ನನ್ನ ಪಿತನೇ ತೋಟಗಾರ ನನ್ನಲ್ಲಿದ್ದು ಫಲಕೊಡದ ಕವಲುಬಳ್ಳಿಗಳನ್ನೆಲ್ಲಾ ಅವರು ಕತ್ತರಿಸಿಹಾಕುವರು. ಫಲಕೊಡುವ ಕವಲುಬಳ್ಳಿಗಳು ಮತ್ತಷ್ಟು ಫಲಕೊಡುವಂತೆ ಅದನ್ನು ಸವರಿ ಶುದ್ಧಗೊಳ್ಳಿಸುವರು. ನೀವಾದರೋ, ನಾನು ನಿಮ್ಮೊಡನೆ ಆಡಿದ ಮಾತಿನಿಂದಾಗಿ ಸವರಿದ ಕವಲುಗಳಂತೆ ಶುದ್ಧರಾಗಿದ್ದೀರಿ. ನೀವು ನನ್ನಲ್ಲಿ ನೆಲೆಗೊಂಡಿರಿ, ಆಗ ನಾನು ನಿಮ್ಮಲ್ಲಿ ನೆಲೆಗೊಂಡಿರುವೆನು. ಕವಲು ಮೂಲಬಳ್ಳಿಯಲ್ಲಿ ಒಂದಾಗಿ ನೆಲಸದಿದ್ದರೆ ಫಲಕೊಡಲಾರಿರಿ. ಹೌದು, ನಾನೇ ದ್ರಾಕ್ಷಾಬಳ್ಳಿ ನೀವೇ ಅದರ ಕವಲುಬಳ್ಳಿಗಳು. ಒಬ್ಬನು ನನ್ನಲ್ಲಿಯೂ ನಾನು ಅವನಲ್ಲಿಯೂ ನೆಲೆಗೊಂಡಿದ್ದರೆ ಅಂಥವನು ಸಮೃದ್ಧಿಯಾಗಿ ಫಲಕೊಡುವನು. ಏಕೆಂದರೆ, ನನ್ನಿಂದ ಬೇರ್ಪಟ್ಟು ನಿಮ್ಮಿಂದ ಏನೂ ಮಾಡಲಾಗದು. ನನ್ನಲ್ಲಿ ನೆಲಸದವನನ್ನು ಕವಲುಬಳ್ಳಿಯಂತೆ ಕತ್ತರಿಸಿ ಎಸೆಯಲಾಗುವುದು; ಅವನು ಒಣಗಿಹೋಗುವನು. ಒಣಗಿದ ಕವಲುಗಳನ್ನು ಒಟ್ಟುಗೂಡಿಸಿ ಬೆಂಕಿಯಲ್ಲಿ ಸುಟ್ಟು ಹಾಕಲಾಗುವುದು. ನೀವು ನನ್ನಲ್ಲಿಯೂ ನನ್ನ ವಾಕ್ಯವು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ನೀವು ಏನು ಬೇಕಾದರು ಕೇಳಬಹುದು. ನಿಮಗದು ಸಿಗುವುದು. ನೀವು ಸಮೃದ್ಧಿಯಾಗಿ ಫಲಕೊಟ್ಟು ನನ್ನ ಶಿಷ್ಯರಾಗಿ ಬೆಳಗುವುದರಿಂದಲೇ ನನ್ನ ಪಿತನ ಮಹಿಮೆ ಪ್ರಕಟವಾಗುವುದು," ಎಂದರು ಯೇಸುಸ್ವಾಮಿ.

21.05.2019 - "ನನ್ನ ಶಾಂತಿಸಮಾಧಾನವನ್ನು ನಿಮಗೆ ಕೊಡುತ್ತೇನೆ"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 14:19-28

ಆಗ ಅಂತಿಯೋಕ್ಯ ಮತ್ತು ಇಕೋನಿಯಾದಿಂದ ಕೆಲವು ಯೆಹೂದ್ಯರು ಅಲ್ಲಿಗೆ ಬಂದರು. ಅವರು ಜನಸಮೂಹವನ್ನು ತಮ್ಮಕಡೆ ಒಲಿಸಿಕೊಂಡು ಪೌಲನ ಮೇಲೆ ಕಲ್ಲುಬೀರಿ, ಅವನು ಸತ್ತನೆಂದು ಭಾವಿಸಿ, ಪಟ್ಟಣದಿಂದ ಹೊರಗೆ ಎಳೆದುಹಾಕಿದರು. ಆದರೆ, ಭಕ್ತವಿಶ್ವಾಸಿಗಳು ಬಂದು ಅವನ ಸುತ್ತಲೂ ನೆರೆದಿದ್ದಾಗ ಅವನು ಎದ್ದು ಪಟ್ಟಣವನ್ನು ಪ್ರವೇಶಿಸಿದನು. ಮರುದಿನ ಅವನು ಬಾರ್ನಬ ಸಂಗಡ ದೆರ್ಬೆಗೆ ಹೊರಟು ಹೋದನು. ದೆರ್ಬೆಯಲ್ಲಿ ಪೌಲ ಮತ್ತು ಬಾರ್ನಬ ಶುಭಸಂದೇಶವನ್ನು ಸಾರಿ ಅನೇಕರನ್ನು ಭಕ್ತವಿಶ್ವಾಸಿಗಳನ್ನಾಗಿ ಮಾಡಿಕೊಂಡರು. ಅನಂತರ ಅಲ್ಲಿಂದ ಲುಸ್ತ್ರಕ್ಕೂ ಇಕೋನಿಯಕ್ಕೂ ಅಂತಿಯೋಕ್ಯಕ್ಕೂ ಹಿಂದಿರುಗಿ ಬಂದರು. ಅಲ್ಲಿ ಭಕ್ತಾದಿಗಳನ್ನು ದೃಢಪಡಿಸಿ ವಿಶ್ವಾಸದಲ್ಲಿ ನಿಷ್ಠರಾಗಿರುವಂತೆ ಪ್ರೋತ್ಸಾಹಿಸಿದರು. 'ಕಷ್ಟಸಂಕಟಗಳ ಮೂಲಕ ನಾವು ದೇವರ ಸಾಮ್ರಾಜ್ಯವನ್ನು ಪ್ರವೇಶಿಸಬೇಕಾಗಿದೆ' ಎಂದು ಬೋಧಿಸಿದರು. ಇದಲ್ಲದೆ ಪ್ರತಿಯೊಂದು ಕ್ರೈಸ್ತಸಭೆಗೂ ಪ್ರಮುಖರನ್ನು ನೇಮಿಸಿದರು. ಪ್ರಾರ್ಥನೆ ಮತ್ತು ಉಪವಾಸ ಮಾಡಿ ತಾವು ಅಚಲವಾಗಿ ನಂಬಿದ್ದ ಪ್ರಭುವಿಗೆ ಅವರನ್ನು ಒಪ್ಪಿಸಿದರು. ಇದಾದ ಮೇಲೆ ಪಿಸಿದಿಯ ಪ್ರದೇಶವನ್ನು ದಾಟಿ ಪಾಂಫೀಲಿಯ ಎಂಬಲ್ಲಿಗೆ ಬಂದರು.  ಪೆರ್ಗದಲ್ಲಿ ಶುಭಸಂದೇಶವನ್ನು ಸಾರಿ ಅತ್ತಾಲಿಯ ಎಂಬಲ್ಲಿಗೆ ಹೋದರು. ಅಲ್ಲಿಂದ ನೌಕಯಾನ ಮಾಡಿ ಅವರು ಅಂತಿಯೋಕ್ಯಕ್ಕೆ ಮರಳಿದರು. ಈವರೆಗೆ ಮಾಡಿ ಮುಗಿಸಿದ್ದ ಸೇವಾಕಾರ್ಯಕ್ಕಾಗಿ ಅವರು ದೇವರ ಕೃಪಾಶ್ರಯಕ್ಕೆ ಮೊದಲು ಸಮರ್ಪಿತರಾದುದ್ದು ಇಲ್ಲಿಯೇ. ಇಲ್ಲಿಗೆ ತಲುಪಿದ ಕೂಡಲೇ ಅವರು ಅವರು ಕ್ರೈಸ್ತಸಭೆಯನ್ನು ಒಟ್ಟುಗೂಡಿಸಿದರು. ದೇವರು ತಮ್ಮೊಡನೆ ಇದ್ದು ಸಾಧಿಸಿದ್ದೆಲ್ಲವನ್ನೂ ವರದಿ ಮಾಡಿದರು; ಅದೂ ಅಲ್ಲದೆ, ದೇವರು ಅನ್ಯಧರ್ಮೀಯರಿಗೆ ವಿಶ್ವಾಸದ ದ್ವಾರವನ್ನು ಹೇಗೆ ತೆರೆದರೆಂದು ವಿವರಿಸಿದರು. ತರುವಾಯ ಭಕ್ತವಿಶ್ವಾಸಿಗಳ ಸಂಗಡ ಹೆಚ್ಚುಕಾಲ ತಂಗಿದ್ದರು.

ಕೀರ್ತನೆ: 145:10-11, 12-13, 21
ಶ್ಲೋಕ: ಅರಿವರಿಂತು ಜನರು ನಿನ್ನ ಶೂರಕಾರ್ಯಗಳನ್ನು ಗ್ರಹಿಸುವರು ನಿನ್ನ ರಾಜ್ಯದ ಮಹಿಮೆ ಪ್ರಭಾವವನು

ಶುಭಸಂದೇಶ: ಯೊವಾನ್ನ 14:27-31

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ; "ನಾನು ಶಾಂತಿಸಮಾಧಾನವನ್ನು ನಿಮಗೆ ಬಿಟ್ಟು ಹೋಗುತ್ತೇನೆ; ನನ್ನ ಶಾಂತಿಸಮಾಧಾನವನ್ನು ನಿಮಗೆ ಕೊಡುತ್ತೇನೆ. ಈ ಲೋಕವು ಕೊಡುವ ರೀತಿಯಲ್ಲಿ ನಾನದನ್ನು ನಿಮಗೆ ಕೊಡುವುದಿಲ್ಲ. ನೀವು ಹೃದಯದಲ್ಲಿ ಕಳವಳಗೊಳ್ಳದಿರಿ, ಭಯಪಡಬೇಡಿ. ನಾನು ಹೊರಟು ಹೋಗುತ್ತೇನೆಂದೂ ಮತ್ತೆ ನಿಮ್ಮ ಬಳಿಗೆ ಬರುತ್ತೇನೆಂದೂ ನಾನು ಹೇಳಿದ್ದನ್ನು ನೀವು ಕೇಳಿದ್ದೀರಿ. ನೀವು ನನ್ನನ್ನು ಪೀತಿಸುವವರಾಗಿದ್ದರೆ ನಾನು ಪಿತನ ಬಳಿಗೆ ಹೋಗುತ್ತಿರುವುದನ್ನು ಕುರಿತು ಹಿಗ್ಗುತ್ತಿದ್ದಿರಿ. ಏಕೆಂದರೆ ಪಿತ ನನಗಿಂತಲೂ ಶ್ರೇಷ್ಠರು. ಇದೆಲ್ಲಾ ಈಡೇರುವಾಗ ನೀವು ವಿಶ್ವಾಸಿಸುವಂತೆ ಅದು ಈಡೇರುವುದಕ್ಕೆ ಮುಂಚೆಯೇ ನಿಮಗೆ ತಿಳಿಯಪಡಿಸಿದ್ದೇನೆ. ಇಹದ ಲೋಕಾಧಾಪತಿ ಬರುವ ಸಮಯವಾಯಿತು. ಇನ್ನು ಬಹಳ ಹೊತ್ತು ನಾನು ನಿಮ್ಮೊಡನೆ ಮಾತನಾಡಲು ಕಾಲಾವಕಾಶವಿಲ್ಲ. ನನ್ನ ಮೇಲೆ ಅವನಿಗೆ ಯಾವ ಅಧಿಕಾರವೂ ಇಲ್ಲ. ಆದರೆ ನಾನು ಪಿತನನ್ನು ಪ್ರೀತಿಸುತ್ತೇನೆಂಬುದನ್ನೂ ಅವರು ವಿಧಿಸಿದಂತೆಯೇ ಮಾಡುತ್ತೇನೆ ಎಂಬುದನ್ನೂ ಲೋಕವು ತಿಳಿಯಬೇಕು," ಎಂದರು.

20.05.2019 - "ನನ್ನನ್ನು ಪ್ರೀತಿಸುವವನು ನನ್ನ ಪಿತನಿಗೂ ಪ್ರಿಯನಾಗಿರುವನು"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 14:5-18

ಅನ್ಯಧರ್ಮದವರು ಮತ್ತು ಯೆಹೂದ್ಯರು ತಮ್ಮ ಅಧಿಕಾರಿಗಳೊಡನೆ ಸೇರಿ ಪ್ರೇಷಿತರಿಗೆ ಕಿರಿಕುಳಕೊಡಲು ಹಾಗೂ ಅವರ ಮೇಲೆ ಕಲ್ಲುತೂರಲು ಪ್ರಯತ್ನಿಸಿದರು. ಇದನ್ನರಿತುಕೊಂಡ ಪ್ರೇಷಿತರು ಅಲ್ಲಿಂದ ಪಲಾಯನಮಾಡಿ ಲುಕಪೋನಿಯದ ಪಟ್ಟಣಗಳಾದ ಲುಸ್ತ ಮತ್ತು ದೆರ್ಬೆಗೂ ಅದರ ಸುತ್ತಮುತ್ತಲ ಪ್ರದೇಶಗಳಿಗೂ ಹೊರಟುಹೋದರು. ಅಲ್ಲೂ ಶುಭಸಂದೇಶವನ್ನು ಸಾರತೊಡಗಿದರು. ಲುಸ್ತದಲ್ಲಿ ಒಬ್ಬ ಕುಂಟನಿದ್ದ, ಅವನೊಬ್ಬ  ಹುಟ್ಟುಕುಂಟ, ಎಂದೂ ಕಾಲೂರಿ ನಡೆದವನಲ್ಲ. ಒಮ್ಮೆ, ಅವನು ಕುಳಿತಲ್ಲೇ ಪೌಲನ ಮಾತುಗಳನ್ನು ಆಲಿಸುತ್ತಿದ್ದನು. ಆಗ ಪೌಲನು ಅವನನ್ನೇ ದಿಟ್ಟಿಸಿ ನೋಡಿದನು. ಅವನಲ್ಲಿ ಸ್ವಸ್ಥಪಡೆಯುವಷ್ಟು ವಿಶ್ವಾಸವನ್ನು ಕಂಡು ಸ್ವರವೆತ್ತಿ, "ಎದ್ದೇಳು, ಕಾಲೂರಿ ನೆಟ್ಟಗೆ ನಿಲ್ಲು,"  ಎಂದು ಹೇಳಿದನು. ಆ ಮನುಷ್ಯನು ನೆಗೆದುನಿಂತು ನಡೆಯಲಾರಂಭಿಸಿದನು. ಪೌಲನು ಮಾಡಿದ ಈ ಮಹತ್ಕಾರ್ಯವನ್ನು ಜನಸಮೂಹವು ನೋಡಿತು. "ದೇವರುಗಳೇ ಮನುಷ್ಯನರೂಪದಲ್ಲಿ ನಮ್ಮಲ್ಲಿಗೆ ಬಂದಿದ್ದಾರೆ," ಎಂದು ತಮ್ಮ ಲುಕವೋನಿಯ ಭಾಷೆಯಲ್ಲಿ ಗಟ್ಟಿಯಾಗಿ ಕೂಗಲಾರಂಭಿಸಿತು. ಆ ಜನರು ಬಾರ್ನಬನನ್ನು 'ಜೆಯುಸ್' ದೇವರೆಂದೂ ಪೌಲನು ಮುಖ್ಯ ಭಾಷಣಕಾರನಾದುದರಿಂದ, ಅವನನ್ನು 'ಹೆರ್ಮೆ' ದೇವರೆಂದೂ ಕರೆಯಲಾರಂಭಿಸಿದರು. ಆ ಜೆಯುಸ್ ದೇವರ ಗುಡಿ ಪಟ್ಟಣದ ಮುಂದೆಯೇ ಇತ್ತು. ಅಲ್ಲಿಯ ಅರ್ಚಕನು ದ್ವಾರದ ಬಳಿಗೆ ಹೋರಿಗಳನ್ನೂ ಹೂವಿನ ಹಾರಗಳನ್ನೂ ತೆಗೆದುಕೊಂಡು ಬಂದನು. ಜನರೊಡನೆ ಸೇರಿ ಪ್ರೇಷಿತರಿಗೆ ಬಲಿಯನ್ನು ಅರ್ಪಿಸಬೇಕೆಂದಿದ್ದನು. ಇದನ್ನು ಕೇಳಿದ ಬಾರ್ನಬ ಮತ್ತು ಪೌಲರು ಸಿಟ್ಟಿನಿಂದ ತಮ್ಮ ಮೇಲಂಗಿಗಳನ್ನು ಹರಿದು ಜನಸಂದಣಿಯತ್ತ ಧಾವಿಸಿ ಹೀಗೆಂದು ಕೂಗಿ ಹೇಳಿದರು: "ಮಹಾಜನರೇ, ನೀವು ಮಾಡುತ್ತಿರುವುದೇನು? ನಾವು ನಿಮ್ಮಂತೆ ಕೇವಲ ನರಮಾನವರು. ನಾವು ಬಂದಿರುವುದು ನಿಮಗೆ ಶುಭಸಂದೇಶವನ್ನು ಸಾರುವುದಕ್ಕೆ; ನೀವು ಈ ನಿರರ್ಥಕ ಕಾರ್ಯವನ್ನು ಬಿಟ್ಟುಬಿಡಬೇಕು; ಭೂಮ್ಯಾಕಾಶವನ್ನೂ ಸಮೂದ್ರ ಸರೋವರವನ್ನೂ  ಮತ್ತು ಅವುಗಳಲ್ಲಿರುವ ಸಮಸ್ತ ಸೃಷ್ಟಿಯನ್ನೂ ಉಂಟುಮಾಡಿದ ಜೀವಂತ ದೇವರ ಭಕ್ತರಾಗಬೇಕು; ಹಿಂದಿನ ಕಾಲದಲ್ಲಿ ಸಮಸ್ತ ಜನಾಂಗಗಳು ತಮಗೆ ಇಷ್ಟಬಂದಂತೆ ನಡೆಯಲೆಂದು ದೇವರು ಬಿಟ್ಟುಬಿಟ್ಟರು. ಆದರೆ ತಮ್ಮ ಅಸ್ತಿತ್ವವನ್ನು ಅರಿತುಕೊಳ್ಳುವಂತೆ ಸುಕೃತ್ಯಗಳ ಸಾಕ್ಷ್ಯ ನೀಡುತ್ತಲೇ ಬಂದಿದ್ದಾರೆ; ನಿಮಗೆ ಆಕಾಶದಿಂದ ಮಳೆಯನ್ನೂ ಸಕಾಲಕ್ಕೆ ಬೆಳೆಯನ್ನೂ ಕೊಡುತ್ತಾ ಆಹಾರವನ್ನು ಒದಗಿಸಿ, ನಿಮ್ಮ ಹೃದಯವನ್ನು ಪರಮಾನಂದಗೊಳಿಸುತ್ತಾ ಬಂದಿದ್ದಾರೆ." ಪ್ರೇಷಿತರು ಇಷ್ಟು ಹೇಳಿದರೂ ಜನರು ತಮಗೆ ಬಲಿಅರ್ಪಿಸುವುದನ್ನು ತಡೆಯುವುದು ಕಷ್ಟಸಾಧ್ಯವಾಯಿತು.

ಕೀರ್ತನೆ: 115:1-2, 3-4, 15-16
ಶ್ಲೋಕ: ನಮಗಲ್ಲ ಹೇ ಪ್ರಭೂ, ನಮಗಲ್ಲ ಮಹಿಮೆ, ನಿನ್ನ ನಾಮಕೇ ಸಲ್ಲಲಿ ಆ ಮಹಿಮೆ

ಶುಭಸಂದೇಶ: ಯೊವಾನ್ನ 14:21-26

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ: "ನನ್ನ ಆಜ್ಞೆಗಳನ್ನು ಅಂಗೀಕರಿಸಿ ಅವುಗಳ ಪ್ರಕಾರ ನಡೆಯುವವನೇ ನನ್ನನ್ನು ಪ್ರೀತಿಸುವವನು. ನನ್ನನ್ನು ಪ್ರೀತಿಸುವವನು ನನ್ನ ಪಿತನಿಗೂ ಪ್ರಿಯನಾಗಿರುವನು. ನಾನು ಅವರನ್ನು ಪ್ರೀತಿಸಿ ನನ್ನನ್ನೇ ಅವನಿಗೆ ಸಾಕ್ಷಾತ್ಕರಿಸಿಕೊಡುವೆನು," ಎಂದರು. ಆಗ ಯೂದನು, (ಈತ ಇಸ್ಕರಿಯೋತ ಯೂದನಲ್ಲ) "ಪ್ರಭೂ, ನೀವು ಈ ಲೋಕಕ್ಕೆ ನಿಮ್ಮನ್ನು ಸಾಕ್ಷಾತ್ಕರಿಸಿಕೊಳ್ಳದೆ ನಮಗೆ ಮಾತ್ರ ಸಾಕ್ಷಾತ್ಕರಿಸಿಕೊಳ್ಳುತ್ತೀರಲ್ಲಾ, ಏಕೆ?" ಎಂದು ಕೇಳಿದನು. ಆಗ ಯೇಸು, "ನನ್ನನ್ನು ಪ್ರೀತಿಸುವವನು ನನ್ನ ಮಾತನ್ನು ಕೈಗೊಂಡು ನಡೆಯುವನು. ಅವನನ್ನು ನನ್ನ ಪಿತನೂ  ಪ್ರೀತಿಸುವರು. ಮತ್ತು ನಾವಿಬ್ಬರೂ ಅವನ ಬಳಿಗೆ ಬಂದು ಅವನಲ್ಲಿ ನೆಲೆಸುವೆವು. ನನ್ನನ್ನು ಪ್ರೀತಿಸದೆ ಇರುವವನು ನನ್ನ ಮಾತನ್ನು ಕೈಗೊಂಡು ನಡೆಯುವುದಿಲ್ಲ. ನೀವು ಕೇಳುತ್ತಿರುವ ಮಾತು ನನ್ನದಲ್ಲ, ನನ್ನನ್ನು ಕಳುಹಿಸಿದ ಪಿತನದೇ. ನಾನು ನಿಮ್ಮೊಡನೆ ಇರುವಾಗಲೇ ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ. ಆದರೆ ಪಿತನು ನನ್ನ ಹೆಸರಿನಲ್ಲಿ ಕಳುಹಿಸಿಕೊಡುವ ಪೋಷಕರಾದ ಪವಿತ್ರಾತ್ಮ ನಿಮಗೆ ಎಲ್ಲವನ್ನೂ ಬೋಧಿಸಿ ನಾನು ಹೇಳಿರುವುದನ್ನೆಲ್ಲಾ ನಿಮಗೆ ನೆನಪಿಗೆ ತರುವರು," ಎಂದರು.

19.05.2019 - "ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಿರಿ"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 14:21-27

ದೆರ್ಬೆಯಲ್ಲಿ ಪೌಲ ಮತ್ತು ಬಾರ್ನಬ ಶುಭಸಂದೇಶವನ್ನು ಸಾರಿ ಅನೇಕರನ್ನು ಭಕ್ತವಿಶ್ವಾಸಿಗಳನ್ನಾಗಿ ಮಾಡಿಕೊಂಡರು. ಅನಂತರ ಅಲ್ಲಿಂದ ಲುಸ್ತ್ರಕ್ಕೂ ಇಕೋನಿಯಕ್ಕೂ ಅಂತಿಯೋಕ್ಯಕ್ಕೂ ಹಿಂದಿರುಗಿ ಬಂದರು. ಅಲ್ಲಿ ಭಕ್ತಾದಿಗಳನ್ನು ದೃಡಪಡಿಸಿ ವಿಶ್ವಾಸದಲ್ಲಿ ನಿಷ್ಠರಾಗಿರುವಂತೆ ಪ್ರೋತ್ಸಾಹಿಸಿದರು. ಕಷ್ಟಸಂಕಟಗಳ ಮೂಲಕ ನಾವು ದೇವರ ಸಾಮ್ರಾಜ್ಯವನ್ನು ಪ್ರವೇಶಿಸಬೇಕಾಗಿದೆ," ಎಂದು ಬೋಧಿಸಿದರು. ಇದಲ್ಲದೆ ಪ್ರತಿಯೊಂದು ಕ್ರೃಸ್ತಸಭೆಗೂ ಪ್ರಮುಖರನ್ನು ನೇಮಿಸಿದರು. ಪ್ರಾರ್ಥನೆ ಮತ್ತು ಉಪವಾಸ ಮಾಡಿ ತಾವು ಅಚಲವಾಗಿ ನಂಬಿದ್ದ ಪ್ರಭುವಿಗೆ ಅವರನ್ನು ಒಪ್ಪಿಸಿದರು. ಇದಾದ ಮೇಲೆ ಪಿಸಿದಿಯ ಪ್ರದೇಶವನ್ನು ದಾಟಿ ಪಾಂಫೀಲಿಯ ಎಂಬಲ್ಲಿಗೆ ಬಂದರು. ಪೆರ್ಗದಲ್ಲ ಶುಭಸಂದೇಶವನ್ನು ಸಾರಿ ಅತ್ತಾಲಿಯ ಎಂಬಲ್ಲಿಗೆ ಹೋದರು.ಅಲ್ಲಿಂದ ನೌಕಯಾನ ಮಾಡಿ ಅವರು ಅಂತಿಯೋಕ್ಯಕ್ಕೆ ಮರಳಿದರು. ಈವರೆಗೆ ಮಾಡಿ ಮುಗಿಸಿದ್ದ ಸೇವಾಕಾರ್ಯಕ್ಕಾಗಿ ಅವರು ದೇವರ ಕೃಪಾಶ್ರಯಕ್ಕೆ ಮೊದಲು ಸಮರ್ಪಿತರಾದದ್ದು ಇಲ್ಲಿಯೇ. ಇಲ್ಲಿಗೆ ತಲುಪಿದ ಕೂಡಲೇ ಅವರು ಕ್ರೈಸ್ತಸಭೆಯನ್ನು ಒಟ್ಟುಗೂಡಿಸಿದರು. ದೇವರು ತಮ್ಮೊಡನೆ ಇದ್ದು ಸಾಧಿಸಿದ್ದೆಲ್ಲವನ್ನು ವರದಿ ಮಾಡಿದರು; ಅದೂ ಅಲ್ಲದೆ, ದೇವರು ಅನ್ಯಧರ್ಮೀಯರಿಗೆ ವಿಶ್ವಾಸದ ದ್ವಾರವನ್ನು ಹೇಗೆ ತೆರೆದರೆಂದು ವಿವರಿಸಿದರು.

ಕೀರ್ತನೆ: 145:8-9, 10-11, 12-13
ಶ್ಲೋಕ: ದೇವಾ, ನನ್ನೊಡೆಯಾ, ಮಾಡುವೆ ನಿನ್ನ ಗುಣಗಾನ!

ಎರಡನೇ ವಾಚನ: ಪ್ರಕಟನಾಗ್ರಂಥ 21:1-5

ಯೊವಾನ್ನನಾದ ನಾನು ತರುವಾಯ ನೂತನ ಆಕಾಶ ಮಂಡಲನವನ್ನೂ ನೂತನ ಭೂಮಂಡಲವನ್ನೂ ಕಂಡೆ. ಮೊದಲಿದ್ದ ಆಕಾಶಮಂಡಲವೂ ಮೊದಲಿದ್ದ ಭೂಮಂಡಲವೂ ಕಣ್ಮರೆಯಾಗಿ ಹೋದವು. ಸಮೂದ್ರವು ಇನ್ನಿಲ್ಲವಾಯಿತು. ಇದಲ್ಲದೆ, ಪವಿತ್ರ ನಗರವಾದ ನೂತನ ಜೆರುಸಲೇಮ್ ಸ್ವರ್ಗದಿಂದಲೂ ದೇವರ ಸನ್ನಿಧಿಯಿಂದಲೂ ಕೆಳಗಿಳಿದು ಬರುವುದನ್ನು ಕಂಡೆ. ಅದು ಮದುಮಗನನ್ನು ಎದುರುಗೊಳ್ಳುವುದಕ್ಕಾಗಿ ಅಲಂಕೃತಳಾದ ಮದುವಣಗಿತ್ತಿಯಂತೆ ಶೃಂಗಾರಮಯವಾಗಿತ್ತು. ಆಗ ಸಂಹಾಸನದ ಕಡೆಯಿಂದ ಬಂದ ಮಹಾಧ್ವನಿ ಇಂತೆಂದಿತು; "ಇಗೋ ಮಾನವರ ಮಧ್ಯೆಯೇ ಇದೆ ದೇವಾಲಯ, ಆತನವರೊಡನೆ ವಾಸಿಸುವನು; ಅವರಾತನಿಗೆ  ಪ್ರಜೆಗಳಾಗುವರು; ದೇವರೇ ಅವರ ಜೊತೆಗಾರ; ಆತನಲ್ಲದೆ ಅವರಿಗಿಲ್ಲ ಬೇರಾವ ದೇವ. ಒರಸುವನಾತ ಅವರ ಕಂಬನಿಯನ್ನೆಲ್ಲಾ, ಇರದಿನ್ನು ಸಾವು ನೋವು ಅವರಿಗೆಲ್ಲಾ; ಇರವು ಶೋಕ ದುಖಃಗಳಾವುವು, ಮರೆಯಾಗಿ ಹೋದವು.  ಹಿಂದಿನದೆಲ್ಲವು." ಸಿಂಹಾಸನರೂಢನಾಗಿದ್ದವನು ಆಗ, "ಇಗೋ, ನಾವೆಲ್ಲವನ್ನೂ ಹೊಸದಾಗಿಸುತ್ತೇನೆ," ಎಂದನು. ಅಲ್ಲದೆ ಅವನು, "ಇದನ್ನು ನೀನು ಬರೆ, ಈ ಮಾತುಗಳು ಸತ್ಯವಾದುವು ಹಾಗೂ ವಿಶ್ವಾಸಾರ್ಹವಾದುವು," ಎಂದು ಹೇಳಿದನು.

ಶುಭಸಂದೇಶ:ಯೊವಾನ್ನ 13:31-35


ಯೂದನು ಹೊರಟುಹೋದಮೇಲೆ ಯೇಸುಸ್ವಾಮಿ ಹೀಗೆಂದರು: "ಈಗ ನರಪುತ್ರನ ಮಹಿಮೆ ಪ್ರಕಟವಾಗುವುದು. ಆತನಲ್ಲಿ ದೇವರ ಮಹಿಮೆಯೂ ಪ್ರಕಟವಾಗುವುದು. ದೇವರ ಮಹಿಮೆ ಆತನಲ್ಲಿ ಪ್ರಕಟವಾದರೆ, ದೇವರೇ ನರಪುತ್ರನ ಮಹಿಮೆಯನ್ನು ತಮ್ಮಲ್ಲಿ ಪ್ರಕಟಪಡಿಸುವರು. ತಕ್ಷಣವೇ ಪ್ರಕಟಪಡಿಸುವರು. ಪ್ರಿಯಮಕ್ಕಳೇ, ಇನ್ನು ತುಸುಕಾಲ ಮಾತ್ರ ನಾನು ನಿಮ್ಮೊಡನೆ ಇರುತ್ತೇನೆ, ಆಮೇಲೆ ನೀವು ನನ್ನನ್ನು ಹುಡುಕಿವಿರಿ, 'ಆದರೆ ನಾನು ಹೋಗುವಲ್ಲಿಗೆ ನೀವು ಬರಲಾರಿರಿ" ಎಂದು ನಾನು ಯೆಹೂದ್ಯರಿಗೆ ಹೇಳಿದಂತೆಯೇ ನಿಮಗೂ ಹೇಳುತ್ತೇನೆ. ನಿಮಗೊಂದು ಹೊಸ ಆಜ್ಞೆಯನ್ನು ಕೊಡುತ್ತೇನೆ: ಒಬ್ಬರನ್ನೊಬ್ಬರು ಪ್ರೀತಿಸಿರಿ. ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಿರಿ. ನಿಮ್ಮ ಈ ಪರಸ್ಪರ ಪ್ರೀತಿಯನ್ನು ಕಂಡು ನೀವು ನನ್ನ ಶಿಷ್ಯರೆಂದು ಜನರೆಲ್ಲರೂ ಅರಿತುಕೊಳ್ಳುವರು.

18.05.2019 - "ನಾನು ಪಿತನಲ್ಲಿ ಇದ್ದೇನೆ, ಪಿತನು ನನ್ನಲ್ಲಿ ಇದ್ದಾರೆ"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 13:44-52

ಮುಂದಿನ ಸಬ್ಬತ್ ದಿನ ದೇವರ ವಾಕ್ಯವನ್ನು ಕೇಳಲು ನಗರಕ್ಕೆ ನಗರವೇ ಆಗಮಿಸಿತು. ಜನರು ತಂಡೋಪತಂಡವಾಗಿ ಬರುತ್ತಿರುವುದನ್ನು ಕಂಡು ಯೆಹೂದ್ಯರು ಮತ್ಸರಭರಿತರಾದರು. ಅವರು ಪೌಲನ ಮಾತುಮಾತಿಗೂ ವಿರೋಧವಾಗಿ ವಾದಿಸಿ ದೂಷಣೆಮಾಡತೊಡಗಿದರು. ಪೌಲ ಮತ್ತು ಬಾರ್ನಬ ಮತ್ತಷ್ಟು ಧ್ಯೆರ್ಯದಿಂದ ಮಾತನಾಡಿದರು: "ದೇವರ ವಾಕ್ಯವನ್ನು ಮೊಟ್ಟಮೊದಲು ನಿಮಗೆ ಬೋಧಿಸುವುದು ಅಗತ್ಯವಾಗಿತ್ತು. ಆದರೆ ನೀವು ಅದನ್ನು ನಿರಾಕರಿಸಿ ಅಮರಜೀವಕ್ಕೆ ಅಪಾತ್ರರೆಂದು ನಿಮ್ಮನ್ನು ನೀವೇ ತೀರ್ಮಾನಿಸಿಕೊಂಡಿರಿ. ಆದುದರಿಂದ ನಾವು ನಿಮ್ಮನ್ನು ಬಿಟ್ಟು ಅನ್ಯಧರ್ಮದವರ ಕಡೆ ಹೋಗುತ್ತೇವೆ. ಏಕೆಂದರೆ ಪ್ರಭು ನಮಗಿತ್ತ ಆಜ್ಞೆ ಹೀಗಿದೆ: 'ಅನ್ಯಧರ್ಮೀಯರಿಗೆ ಜ್ಯೋತಿಯನ್ನಾಗಿಯೂ ವಿಶ್ವಪೂರ್ತಿಗೆ ಜೀವೊದ್ಧಾರದ ಸಾಧನವಾಗಿಯೂ ನಾನು ನಿಮ್ಮನ್ನು ನೇಮಿಸಿದ್ದೇನೆ', ಇದನ್ನು ಕೇಳಿ ಅನ್ಯಧರ್ಮೀಯರು ಸಂತೋಷಪಟ್ಟು ದೇವರ ಸಂದೇಶಕ್ಕಾಗಿ ಸ್ತುತಿಸಿದರು. ಅಮರಜೀವಕ್ಕೆ ಆಯ್ಕೆಯಾದವರೆಲ್ಲರೂ ವಿಶ್ವಾಸಿಗಳಾದರು. ಪ್ರಭುವಿನ ವಾಕ್ಯ ಆ ಪ್ರದೇಶದಲ್ಲೆಲ್ಲಾ ಹಬ್ಬಿ ಹರಡಿತು. ಯೆಹೂದ್ಯರಾದರೋ ದೇವಭಕ್ತೆಯರಾದ ಕುಲೀನ ಸ್ತ್ರೀಯರನ್ನೂ ಪಟ್ಟಣದ ಪ್ರಮುಖ ಜನರನ್ನೂ ಪ್ರಚೋದಿಸಿದರು: ಪೌಲ ಮತ್ತು ಬಾರ್ನಬರನ್ನು ಹಿಂಸಿಸುವಂತೆ ಹುರಿದುಂಬಿಸಿ, ಅವರನ್ನು ಆ ಪ್ರದೇಶದಿಂದ ಹೊರಗಟ್ಟಿಸಿದರು. ಇದಕ್ಕೆ ಪ್ರತಿಯಾಗಿ ಪ್ರೇಷಿತರು ತಮ್ಮ ಪಾದಧೂಳನ್ನು ಝಾಡಿಸಿ ಇಕೋನಿಯಕ್ಕೆ ಹೊರಟುಹೋದರು. ಭಕ್ತ ವಿಶ್ವಾಸಿಗಳಾದರೋ ಪರಮಾನಂದಪಟ್ಟರು, ಪವಿತ್ರಾತ್ಮಭರಿತರಾದರು.

ಕೀರ್ತನೆ: 98:1, 2-3, 3-4
ಶ್ಲೋಕ: ಕಂಡು ಬಂದಿತು ಜಗದ ಎಲ್ಲೆ ಎಲ್ಲೆಗೆ, ನಮ್ಮ ದೇವ ಸಾಧಿಸಿದ ಜಯಗಳಿಕೆ

ಶುಭಸಂದೇಶ: ಯೊವಾನ್ನ 14:7-14

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ, "ನೀವು ನನ್ನನ್ನು ಅರಿತವರಾಗಿದ್ದರೆ ನನ್ನ ಪಿತನನ್ನು ಕೂಡ ಅರಿಯುತ್ತಿದ್ದಿರಿ. ಈಗಿನಿಂದ ಅವರನ್ನು ನೀವು ಅರಿತವರಾಗಿದ್ದೀರಿ. ಹಾಗೂ ಕಂಡೂ ಇದ್ದೀರಿ," ಎಂದು ನುಡಿದರು. ಆಗ ಫಿಲಿಪ್ಪನು, "ಪ್ರಭೂ, ನಮಗೆ ಪಿತನನ್ನು ತೋರಿಸಿ; ಅಷ್ಟೇ ಸಾಕು," ಎಂದನು. ಅದಕ್ಕೆ ಉತ್ತರವಾಗಿ ಯೇಸು, "ನಾನು ಇಷ್ಟುಕಾಲ ನಿಮ್ಮೊಡನೆ ಇದ್ದರೂ ನಾನು ಯಾರೆಂಬುದನ್ನು ನೀನು ಅರಿತುಕೊಳ್ಳಲಿಲ್ಲವೆ? ನನ್ನನ್ನು ನೋಡಿದವನು ಪಿತನನ್ನೇ ನೋಡಿದವನಾಗಿದ್ದಾನೆ. ಹೀಗಿರುವಾಗ, ಫಿಲಿಪ್ಪನೇ, "ನಮಗೆ ಪಿತನನ್ನು ತೋರಿಸಿ" ಎಂದು ಹೇಗೆ ಹೇಳುತ್ತಿ? ನಾನು ಪಿತನಲ್ಲಿ ಇದ್ದೇನೆ. ಪಿತನು ನನ್ನಲ್ಲಿ ಇದ್ದಾರೆ. ಇದನ್ನು ನೀನು ವಿಶ್ವಾಸಿಸುವುದಿಲ್ಲವೇ? ನಾನು ನಿಮಗೆ ಹೇಳುವ  ಮಾತುಗಳನ್ನು ನನ್ನಷ್ಟಕ್ಕೆ ನಾನೇ ಆಡುತ್ತಿಲ್ಲ. ಪಿತನೇ ನನ್ನಲ್ಲಿದ್ದುಕೊಂಡು ತಮ್ಮ ಕಾರ್ಯಗಳನ್ನು ಸಾಧಿಸುತ್ತಾರೆ. "ನಾನು ಪಿತನಲ್ಲಿ ಇದ್ದೇನೆ, ಪಿತನು ನನ್ನಲ್ಲಿ ಇದ್ದಾರೆ," ಎನ್ನುವ ನನ್ನ ಮಾತುಗಳನ್ನು ವಿಶ್ವಾಸಿಸಿರಿ.  ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನನ್ನಲ್ಲಿ ವಿಶ್ವಾಸವುಳ್ಳವನು ನಾನು ಸಾಧಿಸುವ ಕಾರ್ಯಗಳನ್ನು ಆತನೂ ಸಾಧಿಸುವನು. ಅಷ್ಟೇ ಏಕೆ, ಅವುಗಳಿಗಿಂತಲೂ ಮಹತ್ತಾದುವುಗಳನ್ನು ಸಾಧಿಸುವನು ಏಕೆಂದರೆ ನಾನು ಪಿತನ ಬಳಿಗೆ ಹೋಗುತ್ತೇನೆ. ಇದಲ್ಲದೆ ನೀವು ನನ್ನ ಹೆಸರಿನಲ್ಲಿ ಕೇಳಿಕೊಳ್ಳುವುದನ್ನೆಲ್ಲಾ ಮಾಡುತ್ತೇನೆ. ಹೀಗೆ ಪಿತನಿಗೆ ಪುತ್ರನಲ್ಲಿ ಮಹಿಮೆ ಉಂಟಾಗುವುದು. ಹೌದು, ನನ್ನ ಹೆಸರಿನಲ್ಲಿ ನೀವು ಏನನ್ನು ಕೇಳಿದರೂ ನಾನು ಅದನ್ನು ಮಾಡಿಯೇ ತೀರುವೆನು," ಎಂದರು.

17.05.2019 - "ಮಾರ್ಗವೂ, ಸತ್ಯವೂ, ಜೀವವೂ ನಾನೇ"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 13:26-33

"ನನ್ನ ಸಹೋದರರೇ ಅಬ್ರಹಾಮನ ಸಂತತಿಯವರೇ ಮತ್ತು ದೇವರಲ್ಲಿ ಭಯಭಕ್ತಿಯುಳ್ಳ ಇನ್ನಿತರರೇ, ಈ ಜೀವೋದ್ಧಾರದ ಸಂದೇಶವನ್ನು ಕಳುಹಿಸಿರುವುದು ನಿಮಗಾಗಿಯೇ. ಜೆರುಸಲೇಮಿನ ನಿವಾಸಿಗಳು ಮತ್ತು ಅವರ ಅಧಿಕಾರಿಗಳು ಯೇಸು ಲೋಕೋದ್ಧಾರಕನೆಂದು ಅರಿತುಕೊಳ್ಳಲಿಲ್ಲ ಪ್ರತಿ ಸಬ್ಬತ್ ದಿನ ಓದಲಾದ ಪ್ರವಾದಿಗಳ ವಾಕ್ಯಗಳನ್ನು ಅವರು ಗ್ರಹಿಸಿಕೊಳ್ಳಲಿಲ್ಲ. ಯೇಸುವಿಗೆ ಮರಣದಂಡನೆಯನ್ನು ವಿಧಿಸಿ ಆ ಪ್ರವಾದನೆಗಳು ನಿಜವಾಗಲು ಕಾರಣರಾದರು. ಮರಣದಂಡನೆ ವಿಧಿಸಲು ಯಾವ ಕಾರಣವಿಲ್ಲದಿದ್ದರೂ ಅವರನ್ನು ಕೊಲ್ಲಿಸುವಂತೆ ಪಿಲಾತನನ್ನು ಕೇಳಿಕೊಂಡರು ಯೇಸುವನ್ನು ಕುರಿತು ಪವಿತ್ರಗ್ರಂಥ ಹೇಳುವುದೆಲ್ಲವೂ ನೆರವೇರಿದ ಮೇಲೆ ಅವರನ್ನು ಶಿಲುಬೆಯಿಂದ ಕೆಳಗಿಳಿಸಿ ಸಮಾಧಿಮಾಡಿದರು. ಆದರೆ ದೇವರು ಅವರನ್ನು ಮರಣದಿಂದ ಪುನರುತ್ದಾನಗೊಳಿಸಿದರು. ಹೀಗೆ ಪುನರುತ್ದಾನ ಹೊಂದಿದ ಯೇಸು, ಗಲಿಲೇಯದಿಂದ ತಮ್ಮೊಡನೆ ಜೆರುಸಲೇಮಿಗೆ ಬಂದಿದ್ದವರಿಗೆ ಕಾಣಿಸಿಕೊಂಡರು. ಆ ವ್ಯಕ್ತಿಗಳೇ ಈಗ ನಮ್ಮ ಜನರ ಮಧ್ಯೆ ಇರುವ ಯೇಸುವಿನ ಪರವಾದ ಸಾಕ್ಷಿಗಳು. ನಾವೀಗ ನಿಮಗೆ ಸಾರುವ ಶುಭಸಂದೇಶ ಇದು: ದೇವರು ಯೇಸುಸ್ವಾಮಿಯನ್ನು ಪುನರುತ್ದಾನಗೊಳಿಸಿದ್ದಾರೆ. ಈ ಮೂಲಕ ನಮ್ಮ ಪೂರ್ವಜರಿಗೆ ಮಾಡಿದ ವಾಗ್ದಾನವನ್ನು ಅವರ ಸಂತತಿಯಾದ ನಮಗಿಂದು ಈಡೇರಿಸಿದ್ದಾರೆ. ಎರಡನೆಯ ಕೀರ್ತನೆಯಲ್ಲಿ ಹೀಗೆಂದು ಬರೆದಿದೆ: 'ನೀನೇ ನನ್ನ ಪುತ್ರ, ನಾನಿಂದು ನಿನ್ನ ಜನಕ."

ಕೀರ್ತನೆ: 2:6-7, 8-9, 10-11
ಶ್ಲೋಕ: ಈ ದಿನ ನಾನಿನ್ನ ಹಡೆದಿಹೆನು; ನೀನೆನಗೆ ಮಗನು

ಶುಭಸಂದೇಶ: ಯೊವಾನ್ನ 14:1-6

ಯೇಸುಸ್ವಾಮಿ ತಮ್ಮ ಮಾತನ್ನು ಮುಂದುವರಿಸುತ್ತಾ ಶಿಷ್ಯರಿಗೆ, "ನೀವು ಹೃದಯದಲ್ಲಿ ಕಳವಳಗೊಳ್ಳದಿರಿ; ದೇವರಲ್ಲಿ ವಿಶ್ವಾಸವಿಡಿ; ನನ್ನಲ್ಲಿಯೂ ವಿಶ್ವಾಸವಿಡಿ. ನನ್ನ ಪಿತನ ಆಸ್ಥಾನದಲ್ಲಿಅನೇಕ ನೀವಾಸಗಳು ಇವೆ. ಹಾಗಿಲ್ಲದ ಪಕ್ಷದಲ್ಲಿ ನಿಮಗೆ ತಿಳಿಸುತ್ತಿದ್ದೆ. ನಾನು ಹೋಗಿ ನಿಮಗೆ ಸ್ಥಳವನ್ನು ಅಣಿಗೊಳಿಸುತ್ತೇನೆ. ಅಣಿಗೊಳಿಸಿದ ಬಳಿಕ ಹಿಂದಿರುಗಿ ಬಂದು. ನಿಮ್ಮನ್ನು ಕರೆದೊಯ್ಯುತ್ತೇನೆ. ನಾನಿರುವೆಡೆಯಲ್ಲಿಯೇ ನೀವು ಇರಬೇಕು. ನಾನು ಹೋಗುವ ಎಡೆಗೆ ಮಾರ್ಗವು ನಿಮಗೆ ತಿಳಿದೆ ಇದೆ," ಎಂದು ಹೇಳಿದರು. ಆಗ ತೋಮನು, "ಪ್ರಭುವೇ ನೀವು ಎಲ್ಲಿಗೆ ಹೋಗುತ್ತೀರೆಂದು ನಮಗೆ ತಿಳಿಯದು; ಅಂದಮೇಲೆ ಅಲ್ಲಿಗೆ ಹೋಗುವ ಮಾರ್ಗವು ಹೇಗೆ ತಿಳಿದೀತು?" ಎಂದು ಕೇಳಿದನು. ಅದಕ್ಕೆ ಯೇಸು, "ಮಾರ್ಗವೂ, ಸತ್ಯವೂ, ಜೀವವೂ ನಾನೇ. ನನ್ನ ಮುಖಾಂತರ ಬಾರದ ಹೊರತು ಯಾರೂ ಪಿತನ ಬಳಿಗೆ ಬರಲಾರರು," ಎಂದರು.

16.05.2019 - "ನಾನು ಕಳುಹಿಸಿದಾತನನ್ನು ಬರಮಾಡಿಕೊಳ್ಳುವವನು ನನ್ನನ್ನೇ ಬರಮಾಡಿಕೊಳ್ಳುತ್ತಾನೆ."

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 13:13--25

ಪೌಲ ಮತ್ತು ಸಂಗಡಿಗರು ಪಾಫೊಸಿನಿಂದ ನೌಕಯಾನ ಮಾಡಿ ಪಾಂಫೀಲಿಯದ ಪೆರ್ಗ ಎಂಬಲ್ಲಿಗೆ ಬಂದರು. ಮಾರ್ಕನೆನಿಸಿಕೊಂಡ ಯೊವಾನ್ನನು ಅವರನ್ನು ಅಲ್ಲೇ ಬಿಟ್ಟು ಜೆರುಸಲೇಮಿಗೆ ಹಿಂದಿರುಗಿದನು. ಉಳಿದವರು ಪೆರ್ಗದಿಃದ ಹೊರಟು ಪಿಸಿದಿಯ ಸೀಮೆಗೆ ಸೇರಿದ ಅಂತಿಯೋಕ್ಯಕ್ಕೆ ಬಂದರು. ಸಬ್ಬತ್ ದಿನದಲ್ಲಿ ಪ್ರಾರ್ಥನಾಮಂದಿರಕ್ಕೆ ಹೋಗಿ ಕುಳಿತುಕೊಂಡರು. ಧರ್ಮಶಾಸ್ತ್ರ ಮತ್ತು ಪ್ರವಾದಿಗಳ ಗ್ರಂಥಗಳಿಂದ ವಾಚನವಾದ ನಂತರ ಪ್ರಾರ್ಥನಾಮಂದಿರದ ಅಧಿಕಾರಿಗಳು ಅವರಿಗೆ, "ಸಹೋದರರೇ, ಜನರಿಗೆ ಉಪಯುಕ್ತವಾದ ಹಿತೋಕ್ತಿ ಏನಾದರೂ ಇದ್ದರೆ ಉಪದೇಶಮಾಡಿ," ಎಂದು ಕೇಳಿಕೊಂಡರು. ಆಗ ಪೌಲನು ಎದ್ದುನಿಂತು ಜನರಿಗೆ ನಿಶ್ಯಬ್ದವಾಗಿರುವಂತೆ ಕೈಸನ್ನೆ ಮಾಡಿ, ಹೀಗೆಂದು ಉಪದೇಶ ಮಾಡಲಾರಂಭಿಸಿದನು: "ಇಸ್ರಯೇಲ್ ಬಾಂಧವರೇ, ಹಾಗು ನಿಜ ದೇವರಲ್ಲಿ ಭಯಭಕ್ತಿಯುಳ್ಳ ಇನ್ನಿತರರೇ, ಕೇಳಿ: ಇಸ್ರಯೇಲ್ ಜನರ ದೇವರು ನಮ್ಮ ಪೂರ್ವಜರನ್ನು ಆರಿಸಿಕೊಂಡರು. ಈಜಿಪ್ಟಿನಲ್ಲಿ ಪರಕೀಯರಾಗಿ ವಾಸಿಸುತ್ತಿದ್ದ ನಮ್ಮ ಜನರನ್ನು ಪ್ರಬಲ ಜನಾಂಗವನ್ನಾಗಿ ಮಾಡಿದರು. ತಮ್ಮ ಮಹಾಶಕ್ತಿಯನ್ನು ಪ್ರಯೋಗಿಸಿ ಅವರನ್ನು ಈಜಿಪ್ಟಿನಿಂದ ಹೊರಗೆ ತಂದರು. ಬೆಂಗಾಡಿನಲ್ಲಿ ಸುಮಾರು ನಾಲ್ವತ್ತು ವರ್ಷಗಳ ಕಾಲ ಅವರನ್ನು ಕಾಪಾಡಿದರು. ಕಾನಾನ್  ನಾಡಿನ ಏಳು ಜನಾಂಗಗಳನ್ನು ನಾಶಮಾಡಿ ನಮ್ಮ ಜನರಿಗೆ ಆ ನಾಡನ್ನು ಸ್ವಾಸ್ಥ್ಯವಾಗಿ ಕೊಟ್ಟರು ಹೀಗೆ ಸುಮಾರು ನಾನೂರ ಐವತ್ತು ವರ್ಷಗಳು ಕಳೆದವು. ಆನಂತರ ಪ್ರವಾದಿ ಸಮುವೇಲನ ಕಾಲದವರೆಗೆ ದೇವರು ಅವರಿಗೆ ನ್ನಾಯಾಧಿಪತಿಗಳನ್ನು ಕಳುಹಿಸಿದರು. ತಮಗೆ ಅರಸನು ಬೇಕೆಂದು ಕೇಳಿಕೊಂಡಾಗ ದೇವರು ಬೆನ್ಯಮೀನ ಗೋತ್ರದ ಕೀಷನ ಮಗ ಸೌಲನನ್ನು ನೇಮಿಸಿದರು. ಇವನು ನಲ್ವತ್ತು ವರ್ಷ ಆಳಿದನು. ಆನಂತರ ದೇವರು ಸೌಲನನ್ನು ತ್ಯಜಿಸಿ ದಾವೀದನನ್ನು  ಅರಸನನ್ನಾಗಿ ನೇಮಿಸಿದರು. ಇವನ ಬಗ್ಗೆ ದೇವರು, 'ಜೆಸ್ಸೆಯನ ಮಗ ದಾವೀದನು ನನಗೆ ಮೆಚ್ಚುಗೆಯಾದ ವ್ಯಕ್ತಿ; ಇವನು ನನ್ನ ಆಶೆ ಆಕಾಂಕ್ಷೆಗಳನ್ನೆಲ್ಲಾ ಪೂರೈಸುವನು,' ಎಂದು ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಈ ದಾವೀದನ ಸಂತತಿಯಿಂದಲೇ ದೇವರು ತಮ್ಮ ವಾಗ್ದಾನದ ಪ್ರಕಾರ ಇಸ್ರಯೇಲ್ ಜನರಿಗೆ ಒಬ್ಬ ಉದ್ದಾರಕನನ್ನು ಕಳುಹಿಸಿದರು. ಇವರೇ ಯೇಸುಸ್ವಾಮಿ. ಇವರ ಆಗಮನಕ್ಕೆ ಸಿದ್ಧತೆಯಾಗಿ, ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿ ಸ್ನಾನದೀಕ್ಷೆಯನ್ನು ಪಡೆಯಬೇಕೆಂದು ಯೊವಾನ್ನನು ಇಸ್ರಯೇಲಿನ ಎಲ್ಲ ಜನರಿಗೆ ಸಾರಿದನು. ಯೊವಾನ್ನನು ತನ್ನ ನಿಯೋಗವನ್ನು ಪೂರೈಸುತ್ತಿದ್ದಂತೆ ಜನರಿಗೆ, "ನಾನು ಯಾರೆಂದು ನೀವು ನೆನೆಸುತ್ತೀರಿ? ನೀವು ಎದುರು ನೋಡುತ್ತಿರುವ ವ್ಯಕ್ತಿ ನಾನಲ್ಲ. ನನ್ನ ಆನಂತರ ಒಬ್ಬರು ಬರುವರು; ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ," ಎಂದನು.

ಕೀರ್ತನೆ: 89:2--3, 21--22, 25, 27

ಶ್ಲೋಕ: ಪ್ರಭು, ಕೀರ್ತಿಸುವೆನು ಸದಾ ನಿನ್ನಚಲ ಪ್ರೀತಿಯನು

ಶುಭಸಂದೇಶ: ಯೊವಾನ್ನ 13:16-20


ತಮ್ಮ ಶಿಷ್ಯರ ಪಾದಗಳನ್ನು ತೊಳೆದ ನಂತರ ಯೇಸು ಹೀಗೆಂದರು. "ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಧಣಿಗಿಂತ ದಾಸನು ದೊಡ್ಡವನಲ್ಲ. ಅಂತೆಯೇ ಕಳುಹಿಸಲಾದವನು ಕಳುಹಿಸಲಾದವನಿಗಿಂತ ಶ್ರೇಷ್ಠನಲ್ಲ. ಇದನ್ನೆಲ್ಲಾ ಅರ್ಥಮಾಡಿಕೊಂಡು ಅದರಂತೆ ನಡೆದರೆ, ನೀವು ಧನ್ಯರು! ನಾನು ನಿಮ್ಮೆಲ್ಲರನ್ನೂ ಕುರಿತು ಹೀಗೆ ಹೇಳುತ್ತಾ ಇಲ್ಲ. ಯಾರನ್ನು ನಾನು ಆರಿಸಿಕೊಂಡಿದ್ದೇನೆಂಬುದು ನನಗೆ ಗೊತ್ತು. ಆದರೆ 'ನನ್ನೊಡನೆ ಉಂಡವನೇ ನನಗೆ ದ್ರೋಹ ಬಗೆದನು' ಎಂಬುದಾಗಿ ಪವಿತ್ರಗ್ರಂಥದಲ್ಲಿ ಬರೆದಿದೆ. ಆ ಮಾತು ಈಡೇರಬೇಕಾಗಿದೆ. ಅದು ಈಡೇರುವಾಗ "ಇರುವಾತನು ನಾನೇ" ಎಂದು ನೀವು ವಿಶ್ವಾಸಿಸುವಂತೆ ಅದು ಈಡೇರುವುದಕ್ಕೆ ಮುಂಚೆಯೇ ನಿಮಗೆ ಹೇಳುತ್ತಿದ್ದೇನೆ. ನಾನು ಕಳುಹಿಸಿದಾತನನ್ನು ಬರಮಾಡಿಕೊಳ್ಳುವವನು ನನ್ನನ್ನೇ ಬರಮಾಡಿಕೊಳ್ಳುತ್ತಾನೆ. ನನ್ನನ್ನು ಬರಮಾಡಿಕೊಳ್ಳುವವನು ನನ್ನನ್ನು ಕಳುಹಿಸಿದಾತನನ್ನೇ ಬರಮಾಡಿಕೊಳ್ಳುತ್ತಾನೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ."

15.05.2019 - "ಪಿತನು ಹೇಳಿದಂತೆಯೇ ನಾನು ಮಾತನಾಡುತ್ತೇನೆ"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 12:24-13:5

ದೇವರ ಶುಭಸಂದೇಶವಾದರೋ ಹಬ್ಬಿ ಹರಡತೊಡಗಿತು. ಬಾರ್ನಬ ಮತ್ತು ಸೌಲನು ತಮ್ಮ ಧರ್ಮಕಾರ್ಯವನ್ನು ಮುಗಿಸಿಕೊಂಡು ಮಾರ್ಕ ಎಂದು ಹೆಸರುಗೊಂಡ ಯೊವಾನ್ನನೊಂದಿಗೆ ಜೆರುಸಲೇಮಿನಿಂದ ಹಿಂದಿರುಗಿದರು. ಅಂತಿಯೋಕ್ಯದ ಧರ್ಮಸಭೆಯಲ್ಲಿ ಕೆಲವು ಪ್ರವಾದಿಗಳೂ ಬೋಧಕರೂ ಇದ್ದರು. ಅವರಾರೆಂದರೆ: ಬಾರ್ನಬ, ಕಾಳನೆಂಬ ಕರೆಯಲಾದ ಸಿಮೆಯೋನ್, ಸಿರೇನಿನ  ಲೂಸಿಯಸ್, ಸಾಮಂತ ಹೆರೋದನ ಬಾಲ್ಯಸ್ನೆಹಿತ ಮೆನಹೇಲ ಮತ್ತು ಸೌಲ. ಒಂದು ದಿನ ಅವರು ದೇವಾರಾಧನೆಯಲ್ಲೂ ಉಪವಾಸ ವೃತದಲ್ಲೂ ನಿರತರಾಗಿದ್ದಾಗ ಪವಿತ್ರಾತ್ಮ, "ಬಾರ್ನಬ ಮತ್ತು ಸೌಲರನ್ನು ನಾನು ಯಾವ ಕಾರ್ಯಕ್ಕಾಗಿ ಕರೆದಿದ್ದೇನೋ ಆ ಕಾರ್ಯಕ್ಕಾಗಿ ಮೀಸಲಾಗಿಡಿ," ಎಂದರು. ಅಂತೆಯೇ ಅವರು ಉಪವಾಸವಿದ್ದು, ಪ್ರಾರ್ಥನೆ ಮಾಡಿ, ಇವರಿಬ್ಬರ ಮೇಲೆ ಹಸ್ತನಿಕ್ಷೇಪಮಾಡಿ  ಕಳುಹಿಸಿಕೊಟ್ಟರು. ಹೀಗೆ ಪವಿತ್ರಾತ್ಮ ಅವರೇ ಕಳುಹಿಸಿದ ಬಾರ್ನಬ ಮತ್ತು ಸೌಲ ಸೆಲೂಸಿಯಾಕ್ಕೆ ಹೋದರು. ಅಲ್ಲಿಂದ ಸೈಪ್ರಸ್ ದ್ವೀಪಕ್ಕೆ ನೌಕಯಾನ ಮಾಡಿದರು. ಅವರು ಸಲಮೀಸ್ ಎಂಬ ಸ್ಥಳಕ್ಕೆ ಬಂದಾಗ ಯೆಹೂದ್ಯರ ಪ್ರಾರ್ಥನಾ ಮಂದಿರಗಳಿಗೆ ಹೋಗಿ ಶುಭಸಂದೇಶವನ್ನು ಸಾರಿದರು. ಮಾರ್ಕನೆನಿಸಿಕೊಂಡ ಯೊವಾನ್ನ ಅವರ ಸಂಗಡವಿದ್ದು ಅವರಿಗೆ ನೆರವಾಗುತ್ತಿದ್ದನು.

ಕೀರ್ತನೆ: 67:2--3, 5, 6, 8
ಶ್ಲೋಕ: ನಿನ್ನ ಕೀರ್ತಿಸಲಿ ದೇವಾ, ಜನರು ಸಂಕೀರ್ತಿಸಲಿ ಅವರೆಲ್ಲರೂ

ಶುಭಸಂದೇಶ: ಯೊವಾನ್ನ 12:44-50

ಯೇಸುಸ್ವಾಮಿ ಗಟ್ಟಿಯಾಗಿ ಕೂಗಿ ಇಂತೆಂದರು: "ನನ್ನಲ್ಲಿ ವಿಶ್ವಾಸವಿಡುವವನು ನನ್ನಲ್ಲಿ ಅಲ್ಲ, ನನ್ನನ್ನು ಕಳುಹಿಸಿದಾತನಲ್ಲೇ ವಿಶ್ವಾಸವಿಡುತ್ತಾನೆ. ನನ್ನನ್ನು ಕಾಣುವವನು ನನ್ನನ್ನು ಕಳುಹಿಸಿದಾತನನ್ನೇ ಕಾಣುತ್ತಾನೆ. ನನ್ನಲ್ಲಿ ವಿಶ್ವಾಸವಿಡುವವನು ಅಂಧಕಾರದಲ್ಲಿ ಉಳಿಯಬಾರದೆಂದು ನಾನೇ ಜಗಜ್ಯೋತಿಯಾಗಿ ಬಂದಿದ್ದೇನೆ. ಯಾವನಾದರೂ ನನ್ನ ಮಾತನ್ನು ಕೇಳಿಯೂ ಅದರಂತೆ ನಡೆಯದೆ ಹೋದರೆ ಅಂಥವನಿಗೆ ತೀರ್ಪುಕೊಡುವವನು ನಾನಲ್ಲ. ನಾನು ಬಂದುದು ಲೋಕದ ಉದ್ಧಾರಕ್ಕಾಗಿ, ತೀರ್ಪು ಕೊಡುವುದಕ್ಕಾಗಿ ಅಲ್ಲ ನನ್ನನ್ನು ನಿರಾಕರಿಸಿ ನನ್ನ  ಮಾತುಗಳನ್ನು ಅಂಗೀಕರಿಸದೆ ಹೋದವನಿಗೆ ತೀರ್ಪುಕೊಡುವಂಥದ್ದು ಒಂದು ಇದೆ. ಅದು ಯಾವುದೆಂದರೆ ನಾನು ಆಡಿದ ಮಾತೇ. ಅಂತಿಮ ದಿನದಂದು ಅದೇ ಅವನಿಗೆ ತೀರ್ಪುಕೊಡುವುದು. ಏಕೆಂದರೆ, ನನ್ನಷ್ಟಕ್ಕೆ ನಾನೇ ಇದನ್ನೆಲ್ಲಾ ಮಾತನಾಡುತ್ತಿಲ್ಲ. ನನ್ನನ್ನು ಕಳುಹಿಸಿದ ಪಿತನೇ. ನಾನು ಏನು ಹೇಳಬೇಕು, ಯಾವ ಮಾತನ್ನು ಆಡಬೇಕು ಎಂದು ನನಗೆ ಆಜ್ಞೆ ಮಾಡಿದ್ದಾರೆ ಅವರ ಆಜ್ಞೆಯೇ ನಿತ್ಯಜೀವದಾಯಕ ಎಂದು ನಾನು ಬಲ್ಲೆ. ಆದ್ದರಿಂದಲೇ ಪಿತನು ಹೇಳಿದಂತೆಯೇ ನಾನು ಮಾತನಾಡುತ್ತೇನೆ.

14.05.2019 - "ನೀವು ಒಬ್ಬರನೊಬ್ಬರು ಪ್ರೀತಿಸಬೇಕೆಂಬುದೇ ನಾನು ನಿಮಗೆ ಕೊಡುವ ಆಜ್ಞೆ"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 1:15-17, 20-26


ಸ್ವಲ್ಪ ದಿನಗಳ ನಂತರ ಸುಮಾರು ನೂರಿಪ್ಪತ್ತು ಮಂದಿ ಭಕ್ತವಿಶ್ವಾಸಿಗಳು ಸಭೆಸೇರಿದ್ದರು. ಆಗ ಪೇತ್ರನು ಎದ್ದು ನಿಂತು ಹೀಗೆಂದನು: "ಪ್ರಿಯ ಸಹೋದರರೇ, ಯೇಸುವನ್ನು ಬಂಧಿಸಿದವರಿಗೆ ಮುಂದಾಳಾಗಿದ್ದವನು ಯೂದನು. ಅವನ ವಿಷಯವಾಗಿ ಪವಿತ್ರಾತ್ಮ ಅವರು ದಾವೀದನ ಮುಖಾಂತರ ಮುಂತಿಳಿಸಿದ ವಾಕ್ಯ ನೆರವೇರಲೇಬೇಕಾಗಿತ್ತು. ಈ ಯೂದನು ನಮ್ಮಲ್ಲಿ ಒಬ್ಬನಾಗಿದ್ದವನು, ನಾವು ಕೈಗೊಂಡಿರುವ ಸೇವೆಯಲ್ಲಿ ಭಾಗಿಯಾಗಲು ಆಯ್ಕೆಯಾಗಿದ್ದನು. 'ಅವನ ಮನೆ ಹಾಳಾಗಲಿ, ಅದು ಪಾಳು ಬೀಳಲಿ," ಎಂದೂ, 'ಅವನ ಸ್ಥಾನ ಇನ್ನೊಬ್ಬನದಾಗಲಿ,' ಎಂದೂ ಕೀರ್ತನಾಗ್ರಂಥದಲ್ಲಿ ಬರೆಯಲಾಗಿದೆ. ಆದುದರಿಂದ ಪ್ರಭು ಯೇಸುವಿನ ಪುನರುತ್ದಾನಕ್ಕೆ ನಮ್ಮೊಡನೆ ಸಾಕ್ಷಿಯಾಗಿರಲು ಒಬ್ಬನನ್ನು ನಾವು ಆರಿಸಬೇಕಾಗಿದೆ. ಅಂಥವನು ಯೇಸುವಿನ ಸೇವಾಸಂಚಾರದಲ್ಲೆಲ್ಲಾ ನಮ್ಮೊಡನೆ ಇದ್ದವನಾಗಿರಬೇಕು. ಅಂದರೆ, ಸ್ನಾನಿಕ ಯೊವಾನ್ನನು ಸ್ನಾನದೀಕ್ಷೆಯನ್ನು ಕುರಿತು ಬೋಧಿಸಿದ ದಿನದಿಂದ ಯೇಸುವಿನ ಸ್ವರ್ಗಾರೋಹಣದ ದಿನದವರೆಗೂ ನಮ್ಮ ಸಂಗಡ ಇದ್ದವನಾಗಿರಬೇಕು. ಆಗ ಬಾರ್ನಬ ಎಂದು ಹೆಸರಿಡಲಾದ ಜೋಸೆಫ್ (ಇವನನ್ನು ಯುಸ್ತ ಎಂದು ಕರೆಯುತ್ತಿದ್ದರು)  ಮತ್ತು ಮತ್ತೀಯ ಎಂಬ ಇಬ್ಬರ ಹೆಸರನ್ನು ಸೂಚಿಸಲಾಯಿತು. ಅನಂತರ ಎಲ್ಲರೂ ಪ್ರಾರ್ಥನೆ ಮಾಡುತ್ತಾ, "ಸರ್ವೇಶ್ವರಾ, ನೀವು ಸರ್ವರ ಅಂತರಂಗಗಳನ್ನು ಅರಿತಿರುವಿರಿ. ಯೂದನು ತನ್ನ ಪ್ರೇಷಿತ ಸ್ಥಾನದಿಂದ ಭ್ರಷ್ಟನಾದ, ತನಗೆ ತಕ್ಕುದಾದ ಸ್ಥಳಕ್ಕೆ ತೆರಳಿದ. ಈ ಸೇವಾಸ್ಥಾನಕ್ಕೆ ಇವರಿಬ್ಬರಲ್ಲಿ ನೀವು ಆರಿಸಿದವನು ಯಾರೆಂದು ನಮಗೆ ತೋರಿಸಿರಿ," ಎಂದರು. ಆನಂತರ ಚೀಟುಹಾಕಿದರು. ಅದು ಮತ್ತೀಯನ ಪರವಾಗಿತ್ತು. ಅವನನ್ನು ಹನ್ನೊಂದು ಮಂದಿಯೊಡನೆ ಪ್ರೇಷಿತಸ್ಥಾನಕ್ಕೆ ಸೇರಿಸಿಕೊಳ್ಳಲಾಯಿತು.

ಕೀರ್ತನೆ: 113:1-2, 3-4, 5-6, 7-8
ಶ್ಲೋಕ: ಕೂರಿಸುವಾತ ಅವರನು ಅಧಿಪತಿಗಳ ನಡುವೆ, ತನ್ನ ಪ್ರಜೆಯನಾಳುವ ಅಧಿಪತಿಗಳ ನಡುವೆ

ಶುಭಸಂದೇಶ: ಯೊವಾನ್ನ 15:9-17

ಯೇಸು ತಮ್ಮ ಶಿಷ್ಯರಿಗೆ ಹೇಳಿದ್ದೇನೆಂದರೆ: "ಪಿತನು ನನ್ನನ್ನು ಪ್ರೀತಿಸಿದಂತೆಯೇ ನಾನು ನಿಮ್ಮನ್ನು ಪ್ರೀತಿಸಿದ್ದೇನೆ. ನನ್ನ ಪ್ರೀತಿಯಲ್ಲಿ ನೆಲೆಗೊಂಡು ನಿಲ್ಲಿರಿ. ನನ್ನ ಪಿತನು ಕೊಟ್ಟ ಆಜ್ಞೆಗಳನ್ನು ಪಾಲಿಸಿ ಅವರ ಪ್ರೀತಿಯಲ್ಲಿ ನಾನು ನೆಲೆಗೊಂಡಿರುವ ಹಾಗೆ ನೀವು ಕೂಡ ನಾನು ಕೊಟ್ಟ ಆಜ್ಞೆಗಳನ್ನು ಪಾಲಿಸಿದರೆ ನನ್ನ ಪ್ರೀತಿಯಲ್ಲಿ ನೆಲೆಗೊಂಡಿರುವಿರಿ. ನನ್ನಲ್ಲಿರುವ ಆನಂದವು ನಿಮ್ಮಲ್ಲಿ ಇರಬೇಕೆಂತಲೂ ನಿಮ್ಮ ಆನಂದವು ತುಂಬಿ ತುಳುಕಬೇಕೆಂತಲೂ ಇದನ್ನೆಲ್ಲಾ ನಿಮಗೆ ಹೇಳುತ್ತಿದ್ದೇನೆ. ನಾನು ಕೊಡುವ ಆಜ್ಞೆ ಏನೆಂದರೆ: ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಸಹ ಒಬ್ಬರನೊಬ್ಬರು ಪ್ರೀತಿಸಬೇಕು. ಗೆಳೆಯರಿಗಾಗಿ ತನ್ನ ಪ್ರಾಣವನ್ನೇ ಧಾರೆಯೆರೆಯುವ ಪ್ರೀತಿಗಿಂತ ಮಿಗಿಲಾದ ಪ್ರೀತಿ ಯಾರಲ್ಲೂ ಇಲ್ಲ. ನಾನು ಆಜ್ಞಾಪಿಸಿದಂತೆ ನಡೆದರೆ ನೀವು ನನ್ನ ಗೆಳೆಯರು. ನಾನಿನ್ನು ನಿಮ್ಮನ್ನು ದಾಸರೆಂದು ಕರೆಯುವುದಿಲ್ಲ. ಧಣಿಯ ಕೆಲಸಕಾರ್ಯಗಳು ದಾಸನಿಗೆ ತಿಳಿಯವು, ನಾನಾದರೋ ಪಿತನಿಂದ ಕೇಳಿಸಿಕೊಂಡದ್ದನ್ನೆಲ್ಲಾ ನಿಮಗೆ ತಿಳಿಸಿದ್ದೇನೆ. ಈ ಕಾರಣ ನಿಮ್ಮನ್ನು ಗೆಳೆಯರೆಂದು ಕರೆದಿದ್ದೇನೆ. ನೀವು ನನ್ನನ್ನು ಆರಿಸಿಕೊಳ್ಳಲಿಲ್ಲ. ನಾನೇ ನಿಮ್ಮನ್ನು ಆರಿಸಿಕೊಂಡಿದ್ದೇನೆ. ನೀವು ಲೋಕಕ್ಕೆ ಹೋಗಬೇಕು, ಸಫಲರಾಗಬೇಕು; ಆ ಫಲ ಶಾಶ್ವತವಾಗಿರಬೇಕೆಂದೇ ನಿಮ್ಮನ್ನು ನೇಮಿಸಿದ್ದೇನೆ. ಹೀಗಿರಲಾಗಿ ನೀವು ನನ್ನ ಹೆಸರಿನಲ್ಲಿ ಪಿತನಿಂದ ಏನು ಕೇಳಿದರೂ ನಿಮಗೆ ಅದು ಸಿಗುವುದು. ನೀವು ಒಬ್ಬರನೊಬ್ಬರು ಪ್ರೀತಿಸಬೇಕೆಂಬುದೇ ನಾನು ನಿಮಗೆ ಕೊಡುವ ಆಜ್ಞೆ"

13.05.2019 - "ನಾನು ಬಂದದ್ದಾದರೋ ಜೀವನೀಡಲು"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 11:1-18


ಅನ್ಯಧರ್ಮದವರೂ ಸಹ ದೈವವಾಕ್ಯವನ್ನು ಸ್ವೀಕರಿಸಿದರೆಂಬ ಸುದ್ಧಿ ಜುದೇಯದಲ್ಲಿದ್ದ ಪ್ರೇಷಿತರಿಗೂ ವಿಶ್ವಾಸಿಗಳಿಗೂ ಮುಟ್ಟಿತು. ಪೇತ್ರನು ಜೆರುಸಲೇಮಿಗೆ ಹೋದಾಗ ಅನ್ಯಧರ್ಮದವರಿಗೆ ಸುನ್ನತಿಯಾಗಬೇಕು ಎನ್ನುತ್ತಿದ್ದ ಪಂಗಡದವರು ಮುಂದೆ ಬಂದು, "ನೀನು ಸುನ್ನತಿಯಿಲ್ಲದ ಅನ್ಯಧರ್ಮದವರ ಮನೆಗೆ ಭೇಟಿಕೊಟ್ಟು ಅವರೊಡನೆ ಊಟಮಾಡಿದ್ದೇಕೆ?" ಎಂದು ಆಕ್ಷೇಪಿಸಿದರು. ಅದಕ್ಕೆ ಪೇತ್ರನು ನಡೆದ ವೃತ್ತಾಂತವನ್ನು ಅಮೂಲಾಗ್ರವಾಗಿ ಅವರಿಗೆ ವಿವರಿಸಿದನು: "ಜೊಪ್ಪ ಪಟ್ಟಣದಲ್ಲಿ ನಾನು ಧ್ಯಾನಪರವಶನಾಗಿದ್ದಾಗ ದರ್ಶನವೊಂದನ್ನು ಕಂಡೆ. ಸ್ವರ್ಗದಿಂದ ದೊಡ್ಡ ದುಪ್ಪಟಿಯಂಥ ವಸ್ತು ಒಂದು ಕೆಳಕ್ಕೆ ಇಳಿಯಿತು. ಅದರ ನಾಲ್ಕು ಮೂಲೆಗಳನ್ನು ಹಿಡಿದು ಕೆಳಕ್ಕೆ ಇಳಿದುಬಿಡಲಾಗಿತ್ತು ಅದು ಬಂದು ನನ್ನ ಪಕ್ಕದಲ್ಲೇ ನಿಂತಿತು. ಅದನ್ನು ಗಮನಿಸಿ ನೋಡಿದಾಗ ಅದರಲ್ಲಿ ಪ್ರಾಣಿಗಳೂ ಕಾಡುಮೃಗಗಳೂ ಹರಿದಾಡುವ ಕ್ರಿಮಿಕೀಟಗಳೂ ಹಾರಾಡುವ ಪಕ್ಷಿಗಳೂ ಕಂಡುಬಂದವು. ಆಗ, "ಪೇತ್ರ, ಏಳು, ಕೊಯ್ದು ತಿನ್ನು" ಎಂಬ ವಾಣಿ ನನಗೆ ಕೇಳಿಸಿತು. ಅದಕ್ಕೆ ನಾನು, 'ಬೇಡವೇ ಬೇಡ ಸ್ವಾಮಿ, ಅಶುದ್ದ ಹಾಗು ಅಸ್ಫೃಶ್ಯವಾದುದು ಯಾವುದೂ ನನ್ನ ಬಾಯನ್ನು ಎಂದೂ ಹೊಕ್ಕಿಲ್ಲ,' ಎಂದೆ. ಮತ್ತೊಮ್ಮೆ ಆ ವಾಣಿ ಸ್ವರ್ಗಲೋಕದಿಂದ, "ದೇವರೇ ಶುದ್ಧೀಕರಿಸಿರುವ ಏನನ್ನೂ ನೀನು ಅಶುದ್ಧವೆನ್ನಬೇಡ," ಎಂದು ಉತ್ತರಿಸಿತು. ಹೀಗೆ ಮೂರು ಬಾರಿ ನಡೆದ ಮೇಲೆ, ಅವೆಲ್ಲವನ್ನೂ ಒಟ್ಟಿಗೆ ಸ್ವರ್ಗಕ್ಕೆ ಮರಳಿ ಎಳೆದುಕೊಳ್ಳಲಾಯಿತು. ಅದೇ ಸಮಯಕ್ಕೆ ಸರಿಯಾಗಿ, ಸೆಜರೇಯದಿಂದ ಕಳುಹಿಸಲಾದ ಮೂವರು ಮಂದಿ ನನ್ನನ್ನು ಹುಡುಕಿಕೊಂಡು, ನಾನು ತಂಗಿದ್ದ ಮನೆಗೆ ಬಂದರು. ನಾನು ಸಂಕೋಚಪಡದೆ ಅವರೊಡನೆ ಹೋಗಬೇಕೆಂದು ಪವಿತ್ರಾತ್ಮ ತಿಳಿಸಿದರು. ಜೊಪ್ಪದ ಈ ಆರುಮಂದಿ ಭಕ್ತರೂ ನನ್ನೊಡನೆ ಸೆಜರೇಯಕ್ಕೆ ಬಂದರು. ನಾವೆಲ್ಲರೂ ಕೊರ್ನೇಲಿಯನ ಮನೆಯನ್ನು ಪ್ರವೇಶಿಸಿದೆವು. ಅವನು, "ನನ್ನ ಮನೆಯಲ್ಲೇ ದೂತನೊಬ್ಬನು ಕಾಣಿಸಿಕೊಂಡು, ಈಗಲೇ ಯಾರನ್ನಾದರೂ ಜೊಪ್ಪಕ್ಕೆ ಕಳುಹಿಸಿ ಪೇತ್ರ ಎಂದು ಕರೆಯಲಾಗುವ ಸಿಮೋನನನ್ನು ಬರಹೇಳು. ಅವನು, ನೀನೂ ನಿನ್ನ ಕುಟುಂಬದವರೆಲ್ಲರೂ ಪಡೆಯಬಹುದಾದಂಥ ಜೀವೋದ್ಧಾರದ ಸಂದೇಶವನ್ನು ನೀಡುವನು," ಎಂದು ತಿಳಿಸಿದನು" ಎಂದು ನಮಗೆ ಹೇಳಿದನು. ನಾನು ಉಪದೇಶಮಾಡಲು ಪ್ರಾರಂಭಿಸಿದ ಕೂಡಲೇ ನಮ್ಮ ಮೇಲೆ ಇಳಿದಂತೆ ಅವರ ಮೇಲೂ ಪವಿತ್ರಾತ್ಮ ಇಳಿದು ಬಂದರು. ಆಗ ನನಗೆ, "ಯೊವಾನ್ನನು ನೀರಿನಿಂದ ಸ್ನಾನದೀಕ್ಷೆಯನ್ನು ಕೊಟ್ಟನು. ನೀವಾದರೋ ಪವಿತ್ರಾತ್ಮ ಅವರಿಂದ ದೀಕ್ಷಾಸ್ನಾನವನ್ನು ಪಡೆಯುವಿರಿ," ಎಂಬ ಪ್ರಭುವಿನ ಮಾತುಗಳು ನೆನಪಿಗೆ ಬಂದವು. ನಾವು ಪ್ರಭು ಯೇಸುಕ್ರಿಸ್ತರನ್ನು ವಿಶ್ವಾಸಿಸಿದಾಗ ನಮಗೆ ಕೊಟ್ಟ ವರವನ್ನೇ ದೇವರು ಆ ಅನ್ಯಧರ್ಮದವರಿಗೂ ಕೊಟ್ಟಿರುವರು. ಹೀಗಿರುವಲ್ಲಿ ದೇವರನ್ನು ತಡೆಗಟ್ಟಲು ನಾನಾರು?" ಎಂದನು. ಈ ಮಾತುಗಳನ್ನು ಕೇಳಿದ ಮೇಲೆ ಅವರು ತಮ್ಮ ಆಕ್ಷೇಪಣೆಯನ್ನು ನಿಲ್ಲಿಸಿದರು. ಮಾತ್ರವಲ್ಲ, 'ಅನ್ಯಧರ್ಮದವರೂ ಪಶ್ಚಾತಾಪಪಟ್ಟು ನವಜೀವ ಪಡೆಯುವ ಸದವಕಾಶವನ್ನು ದೇವರು ದಯಪಾಲಿಸಿದ್ದಾರಲ್ಲಾ!'  ಎಂದು ದೈವಸ್ತುತಿ ಮಾಡಿದರು.

ಕೀರ್ತನೆ: 42:2-3, 43:3-4
ಶ್ಲೋಕ: ಜೀವಂತ ದೇವನಿಗಾಗಿ ದಾಹದಿಂದಿದೆ ಎನ್ನ ಮನ ನಾ ತೆರಳಿ ಪಡೆವುದೆಂತು ಆ ದೇವನ ಮುಖದರ್ಶನ

ಶುಭಸಂದೇಶ: ಯೊವಾನ್ನ 10:1-10


"ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಕುರಿಹಟ್ಟಿಗೆ ಬಾಗಿಲ ಮೂಲಕ ಬರದೆ ಗೋಡೆ ಹತ್ತಿ ಬರುವವನು ಕಳ್ಳ ಹಾಗೂ ಕೊಳ್ಳೆಗಾರ. ಬಾಗಿಲ ಮೂಲಕ ಬರುವವನು ಕುರಿಗಾಹಿ. ಕಾವಲುಗಾರನು ಅವನಿಗೆ ಬಾಗಿಲು ತೆರೆಯುತ್ತಾನೆ. ಕುರಿಗಳು ಅವನ ಸ್ವರವನ್ನು ಕೇಳುತ್ತವೆ. ಅವನು ತನ್ನ ಕುರಿಗಳನ್ನು ಹೆಸರಿಟ್ಟು ಕರೆದು ಹೊರೆಗೆ ಬಿಡುತ್ತಾನೆ. ತನ್ನ ಕುರಿಗಳನ್ನೆಲ್ಲಾ ಹೊರಗೆ ಬಿಟ್ಟ ನಂತರ ಅವನು ಅವುಗಳ ಮುಂದೆ ಹೋಗುತ್ತಾನೆ. ಕುರಿಗಳು ಅವನ ಹಿಂದೆ ಹೋಗುತ್ತವೆ. ಏಕೆಂದರೆ ಅವುಗಳಿಗೆ ಅವನ ಸ್ವರ ಗೊತ್ತು. ಅಪರಿಚಿತನನ್ನು ಅವು ಹಿಂಬಾಲಿಸುವುದಿಲ್ಲ; ಅವನಿಂದ ದೂರ ಓಡಿಹೋಗುತ್ತವೆ. ಅಪರಿಚಿತರ ಸ್ವರವನ್ನು ಅವು ಗುರುತಿಸುವುದಿಲ್ಲ." ಯೇಸುಸ್ವಾಮಿ ಹೇಳಿದ ಈ ಸಾಮತಿಯನ್ನು ಕೇಳಿದವರು ಅರ್ಥಮಾಡಿಕೊಳ್ಳಲಿಲ್ಲ. ಆದುದರಿಂದ ಯೇಸುಸ್ವಾಮಿ,  "ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಕುರಿಗಳಿಗೆ ನಾನೇ ಬಾಗಿಲು. ನನಗಿಂತ ಮೊದಲು ಬಂದವರೆಲ್ಲರೂ ಕಳ್ಳರು ಹಾಗೂ ಕೊಳ್ಳೆಗಾರರು, ಕುರಿಗಳು ಅವರಿಗೆ ಕಿವಿಗೊಡಲಿಲ್ಲ. ಹೌದು, ನಾನೇ ಬಾಗಿಲು ನನ್ನ ಮೂಲಕ ಒಳಹೋಗುವವನು ಸುರಕ್ಷಿತನಾಗಿರುತ್ತಾನೆ. ಅವನು ಒಳಗೆ ಹೋಗುತ್ತಾನೆ, ಹೊರಗೆ ಬರುತ್ತಾನೆ; ಮೇವನ್ನು ಕಂಡುಕೊಳ್ಳುತ್ತಾನೆ. ಕಳ್ಳನು ಬರುವುದು ಕಳ್ಳತನಕ್ಕಾಗಿ, ಕೊಲ್ಲುವುದಕ್ಕಾಗಿ ಮತ್ತು ನಾಶಮಾಡುವುದಕ್ಕಾಗಿ ಮಾತ್ರ ನಾನು ಬಂದದ್ದಾದರೋ ಜೀವನೀಡಲು, ಯಥೇಚ್ಛವಾಗಿ ನೀಡಲು" ಎಂದರು.

12.05.2019 - "ನಾನೂ ಪಿತನೂ ಒಂದೇ ಆಗಿದ್ದೇವೆ,"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 13:14, 43-52

ಉಳಿದವರು ಪೆರ್ಗದಿಂದ ಹೊರಟು ಪಿಸಿದಿಯ ಸೀಮೆಗೆ ಸೇರಿದ ಅಂತಿಯೋಕ್ಯಕ್ಕೆ ಬಂದರು. ಸಬ್ಬತ್ ದಿನದಲ್ಲಿ ಪ್ರಾರ್ಥನಾಮಂದಿರಕ್ಕೆ ಹೋಗಿ ಕುಳಿತುಕೊಂಡರು. ಪ್ರಾರ್ಥನಾಕೂಟ ಮುಗಿದಮೇಲೆ ಅನೇಕ ಯೆಹೂದ್ಯರೂ ಯೆಹೂದ್ಯ ಮತಾವಲಂಬಿಗಳಾದ ಅನ್ಯರೂ ಪೌಲ ಮತ್ತು ಬಾರ್ನಬರನ್ನು ಹಿಂಬಾಲಿಸಿದರು. ಈ ಪ್ರೇಷಿತರು ಅವರೊಡನೆ ಮಾತನಾಡಿ ದೈವಾನುಗ್ರಹದಲ್ಲಿ ದೃಡವಾಗಿ ಬಾಳುವಂತೆ ಪ್ರೋತ್ಸಾಹಿಸಿದರು. ಮುಂದಿನ ಸಬ್ಬತ್ ದಿನ ದೇವರ ವಾಕ್ಯವನ್ನು ಕೇಳಲು ನಗರಕ್ಕೆ ನಗರವೇ ಆಗಮಿಸಿತು. ಜನರು ತಂಡೋಪತಂಡವಾಗಿ ಬರುತ್ತಿರುವುದನ್ನು ಕಂಡು ಯೆಹೂದ್ಯರು ಮತ್ಸರಭರಿತರಾದರು. ಅವರು ಪೌಲನ ಮಾತುಮಾತಿಗೂ ವಿರೋಧವಾಗಿ ವಾದಿಸಿ ದೂಷಣೆಮಾಡತೊಡಗಿದರು. ಪೌಲ ಮತ್ತು ಬಾರ್ನಬ ಮತ್ತಷ್ಟು ಧೈರ್ಯದಿಂದ ಮಾತನಾಡಿದರು: "ದೇವರ ವಾಕ್ಯವನ್ನು ಮೊಟ್ಟಮೊದಲು ನಿಮಗೆ ಬೋಧಿಸುವುದು ಅಗತ್ಯವಾಗಿತ್ತು. ಆದರೆ ನೀವು ಅದನ್ನು ನಿರಾಕರಿಸಿ ಅಮರಜೀವಕ್ಕೆ ಅಪಾತ್ರರೆಂದು ನಿಮ್ಮನ್ನು ನೀವೇ ತೀರ್ಮಾನಿಸಿಕೊಂಡಿರಿ. ಆದುದರಿಂದ ನಾವು ನಿಮ್ಮನ್ನು ಬಿಟ್ಟು ಅನ್ಯಧರ್ಮದವರ ಕಡೆ ಹೋಗುತ್ತೇವೆ. ಏಕೆಂದರೆ ಪ್ರಭು ನಮಗಿತ್ತ ಆಜ್ಞೆ ಹೀಗಿದೆ: "ಅನ್ಯಧರ್ಮೀಯರಿಗೆ  ಜ್ಯೋತಿಯನ್ನಾಗಿಯೂ ವಿಶ್ವಪೂರ್ತಿಗೆ ಜೀವೋದ್ಧಾರ ಸಾದನವಾಗಿಯೂ ನಾನು ನಿಮ್ಮನ್ನು ನೇಮಿಸಿದ್ದೇನೆ" ಇದನ್ನು ಕೇಳಿದ ಅನ್ಯಧರ್ಮೀಯರು ಸಂತೋಷಪಟ್ಟು ದೇವರ ಸಂದೇಶಕ್ಕಾಗಿ ಸ್ತುತಿಸಿದರು. ಅಮರ ಜೀವಕ್ಕೆ ಆಯ್ಕೆಯಾದವರೆಲ್ಲರೂ ವಿಶ್ವಾಸಿಗಳಾದರು. ಪ್ರಭುವಿನ ವಾಕ್ಯ ಆ ಪ್ರದೇಶದಲ್ಲೆಲ್ಲಾ ಹಬ್ಬಿ ಹರಡಿತು. ಯೆಹೂದ್ಯರಾದರೋ ದೇವಭಕ್ತೆಯರಾದ ಕುಲೀನ ಸ್ತ್ರೀಯರನ್ನೂ ಪಟ್ಟಣದ ಪ್ರಮುಖ ಜನರನ್ನೂ ಪ್ರಚೋದಿಸಿದರು. ಪೌಲ ಮತ್ತು ಬಾರ್ನಬರನ್ನು ಹಿಂಸಿಸುವಂತೆ ಹುರಿದುಂಬಿಸಿ, ಅವರನ್ನು ಆ ಪ್ರದೇಶದಿಂದ ಹೊರಗಟ್ಟಿದರು. ಇದಕ್ಕೆ ಪ್ರತಿಯಾಗಿ ಪ್ರೇಷಿತರು ತಮ್ಮ ಪಾದ ಧೂಳನ್ನು ಝಾಡಿಸಿ ಇಕೋನಿಯಕ್ಕೆ ಹೊರಟು ಹೋದರು. ಭಕ್ತ ವಿಶ್ವಾಸಿಗಳಾದರೋ ಪರಮಾನಂದಪಟ್ಟರು, ಪವಿತ್ರಾತ್ಮಭರಿತರಾದರು.

ಕೀರ್ತನೆ: 100:1-2, 3, 5
ಶ್ಲೋಕ: ಆತನವರು ನಾವು, ಆತನ ಜನ, ಆತನೇ ಮೇಯಿಸುವ ಕುರಿಗಳು ನಾವು

ಎರಡನೇ ವಾಚನ: ಪ್ರಕಟನಾಗ್ರಂಥ 7:9, 14-17

ಇದಾದ ಬಳಿಕ ನಾನು ಇನ್ನೊಂದು ದಿವ್ಯದರ್ಶನವನ್ನು ಕಂಡೆ: ಯಾರಿಂದಲೂ ಎಣಿಸಲಾಗದಷ್ಟು ಒಂದು ದೊಡ್ಡ ಜನಸಮೂಹವು ನೆರೆದಿತ್ತು. ಅವರು ಎಲ್ಲಾ ದೇಶ, ಭಾಷೆ, ಕುಲಗೋತ್ರಗಳಿಂದ ಬಂದವರಾಗಿದ್ದರು. ಶ್ವೇತಾಂಬರರಾಗಿ ಸಿಂಹಾಸನದ ಮತ್ತು ಯಜ್ಞದ ಕುರಿಮರಿಯಾದನಾತ ಸಾನ್ನಿದ್ಯದಲ್ಲಿ ನಿಂತಿದ್ದರು. ಕೈಗಳಲ್ಲಿ ಕರ್ಜೂರದ ಗರಿಗಳನ್ನು ಹಿಡಿದಿದ್ದರು. ಸಭಾ ಪ್ರಮುಖರಲ್ಲಿ ಒಬ್ಬನು, "ಶ್ವೇತಾಂಬರರಾದ ಇವರೆಲ್ಲರೂ ಯಾರು? ಎಲ್ಲಿಂದ ಬಂದರು?"ಎಂದು ನನ್ನನ್ನು ಪ್ರಶ್ನಿಸಿದನು. ಅದಕ್ಕೆ ನಾನು, "ಸ್ವಾಮೀ ನೀವೇ ಬಲ್ಲಿರಿ", ಎಂದು ಉತ್ತರಕೊಟ್ಟೆ. ಆಗ ಆತನು ನನಗೆ ಹೀಗೆಂದನು: "ಇವರು ಆ ಭೀಕರ ಹಿಂಸೆಬಾಧೆಯನ್ನು ಅನುಭವಿಸಿ ಬಂದವರು. ತಮ್ಮ ನಿಲುವಂಗಿಗಳನ್ನು ಯಜ್ಞದ ಕುರಿಮರಿಯ ರಕ್ತದಿಂದ ತೊಳೆದು ಬಿಳುಪಾಗಿಸಿಕೊಂಡಿದ್ದಾರೆ.  "ಇರುವರು ದೇವರ ಸಿಂಹಾಸನದ ಸಮ್ಮುಖದಲ್ಲೇ ಆರಾಧಿಪರಾತತನನು ಹಗಲಿರುಳು ದೇವಾಲಯದಲ್ಲೇ ಸಂರಕ್ಷಿಪನಾತನು ಅವರನ್ನು ಗುಡಾರದಂತೆ. ಇನ್ನಿರದು ಅವರಿಗೆ ಹಸಿವು ಬಾಯಾರಿಕೆ ತಟ್ಟದವರನು ಬಿಸಿಲಿನ ತಾಪ, ಸೂರ್ಯನ ಕೋಪ. ನಿಂತಿಹನು ಕುರಿಮರಿಯಾದಾತನು ಸಿಂಹಾಸನದ ನಡುವೆ ಕಾಯುವನು ಅವರುಗಳನು ಕುರುಬನಂತೆ. ನಡೆಸುವನು ಅವರನು ಜೀವಜಲದ ಒರತೆಗಳ ಬಳಿಗೆ ದೇವನೊರಸುವನು ಅವರ ಕಂಬನಿಗಳನು ಬಿಡದೆ", ಎಂದು ನನಗೆ ತಿಳಿಸಿದನು.

ಶುಭಸಂದೇಶ: ಯೊವಾನ್ನ 10:27-30

ಯೇಸುಸ್ವಾಮಿ ತಮ್ಮ ಶಿಷ್ಯರನ್ನುದ್ದೇಶಿಸಿ: ನನ್ನ ಕುರಿಗಳಾದರೋ ನನ್ನ ಸ್ವರವನ್ನು ಗುರುತಿಸುತ್ತವೆ. ನಾನು ಅವರನ್ನು ಬಲ್ಲೆನು, ಅವು ನನ್ನನ್ನು ಹಿಂಬಾಲಿಸುತ್ತವೆ. ನಾನು ಅವುಗಳಿಗೆ ನಿತ್ಯ ಜೀವವನ್ನು ಕೊಡುತ್ತೇನೆ. ಅವು ಎಂದಿಗೂ ನಾಶವಾಗುವುದಿಲ್ಲ. ನನ್ನ ಕೈಯಿಂದ ಅವನ್ನು ಯಾರೂ ಕಸಿದುಕೊಳ್ಳಲಾರರು, ಅವನು ನನಗೆ ಕೊಟ್ಟ ಪಿತ ಸರ್ವಶ್ರೇಷ್ಠರು. ಪಿತನ ಕೈಯಿಂದ ಅವನ್ನು ಯಾರೂ ಕಸಿದುಕೊಳ್ಳಲಾರರು. ನಾನೂ ಪಿತನೂ ಒಂದೇ ಆಗಿದ್ದೇವೆ," ಎಂದರು.

11.05.2019 - ನಿತ್ಯಜೀವವನ್ನು ಈಯುವ ನುಡಿ ಇರುವುದು ತಮ್ಮಲ್ಲೇ.

ಮೊದಲನೇ ವಾಚನ : ಪ್ರೇಷಿತರ ಕಾರ್ಯಕಲಾಪಗಳು 9:31-42

ಜುದೇಯ, ಗಲಿಲೇಯ ಮತ್ತು ಸಮಾರಿಯಾದ ಧರ್ಮಸಭೆಯಲ್ಲಿ ಶಾಂತಿ ನೆಲಸಿತು. ಸಭೆ ಬೆಳೆಯುತ್ತಾ ಪ್ರಭುವಿನ ಭಯ ಭಕ್ತಿಯಲ್ಲಿ ಬಾಳುತ್ತಾ ಪವಿತ್ತಾತ್ಮ ಅವರ ನೆರವಿನಿಃದ ಪ್ರವರ್ಧಿಸುತ್ತಾ ಇತ್ತು. ಪೇತ್ರನು ಅಲ್ಲಲ್ಲಿದ್ದ ಭಕ್ತವಿಶ್ವಾಸಿಗಳಿಗೆ ಭೇಟಿ ಕೊಡುತ್ತಾ ಲುದ್ದ ಎಃಬ ಊರಿನಲ್ಲಿ ವಾಸವಾಗಿದ್ದ ಭಕ್ತರ ಬಳಿಗೆ ಬಂದನು. ಅಲ್ಲಿ ಪಾರ್ಶ್ವವಾಯು ಪೀಡಿತನಾಗಿ ಎಂಟು ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಐನೇಯಾ ಎಂಬುವನನ್ನು ಕಂಡನು. ಪೇತ್ಯನು ಅವನಿಗೆ, "ಐನೇಯಾ, ಯೇಸುಕ್ರಿಸ್ತರು ನಿನ್ನನ್ನು ಸ್ವಸ್ಥ ಪಡಿಸುತ್ತಾರೆ. ಎದ್ದು ನಿನ್ನ ಹಾಸಿಗೆಯನ್ನು ಎತ್ತಿಡು," ಎಂದನು. ಆಕ್ಷಣವೇ ಅವನು ಎದ್ದನು. ಲುದ್ದ ಮತ್ತು ಸಾರೋನಿನ ನಿವಾಸಿಗಳೆಲ್ಲರೂ ಅವನನ್ನು ಕಂಡು ಪ್ರಭುವಿನ ಭಕ್ತರಾದರು. ಜೊಪ ಎಂಬ ಊರಿನಲ್ಲಿ ತಬಿಥ ಎಂಬ ಒಬ್ಬ ಭಕ್ತೆ ಇದ್ದಳು. (ಗ್ರೀಕ್ ಭಾಷೆಯಲ್ಲಿ ಅವಳ ಹೆಸರು  "ದೋರ್ಕ") ಅವಳು ಸತ್ಕಾರ್ಯಗಳಲ್ಲೂ ದಾನಧರ್ಮಗಳಲ್ಲೂ ಸದಾ ನಿರತಳಾಗಿದ್ದವಳು. ಅವಳು ಕಾಯಿಲೆಯಿಂದ ಒಂದು ದಿನ ಸತ್ತಳು. ಜನರು ಅವಳ ಶವಕ್ಕೆ ಸ್ನಾನಮಾಡಿಸಿ ಮೇಲಂತಸ್ತಿನ  ಕೋಣೆಯಲ್ಲಿ ಇರಿಸಿದರು. ಲುದ್ದವು ಜೊಪ್ಪಕ್ಕೆ ಸಮೀಪದಲ್ಲೇ ಇತ್ತು. ಪೇತ್ರನು ಲುದ್ದದಲ್ಲಿರುವುದನ್ನು ಕೇಳಿದ ಭಕ್ತಾದಿಗಳು, "ದಯವಿಟ್ಟು ಬೇಗನೆ ನಮ್ಮೂರಿಗೆ ಬನ್ನಿ" ಎಂದು ಇಬ್ಬರ ಮುಖಾಂತರ ಹೇಳಿ ಕಳುಹಿಸಿದರು. ಪೇತ್ರನು ಎದ್ದು ಅವರ ಜೊತೆಯಲ್ಲೇ ಹೊರಟುಬಂದನು. ಅವನನ್ನು ಮೇಲಂತಸ್ತಿನ ಕೋಣೆಗೆ  ಕರೆದುಕೊಂಡು ಹೋದರು. ಅಲ್ಲಿ ಕೂಡಿದ್ದ ವಿಧವೆಯರೆಲ್ಲರೂ ಅವನ ಸುತ್ತುವರಿದು ಅಳುತ್ತಾ, ದೋರ್ಕಳು ಜೀವದಿಂದ ಇದ್ದಾಗ ತಮಗೆ ಮಾಡಿಕೊಟ್ಟ ಬಟ್ಟೆಬರೆಗಳನ್ನು ಅವನಿಗೆ ತೋರಿಸಿದರು.  ಪೇತ್ರನು ಅವರೆಲ್ಲರನ್ನೂ ಹೊರಗೆ ಕಳುಹಿಸಿ ಮೊಣಕಾಲೂರಿ ಪ್ರಾರ್ಥಿಸಿದನು. ಆನಂತರ ಶವದ ಕಡೆಗೆ ತಿರುಗಿ,  "ತಬಿಥಾ, ಮೇಲಕ್ಕೇಳು," ಎಂದನು. ಆಕೆ ಕಣ್ತೆರೆದು ಪೇತ್ರನನ್ನು ನೋಡಿ ಎದ್ದು ಕುಳಿತಳು. ಪೇತ್ರನು ಕೈ ನೀಡಿ ಆಕೆಯನ್ನು ಎತ್ತಿನಿಲ್ಲಿಸಿದನು. ಭಕ್ತರನ್ನೂ ವಿಧವೆಯರನ್ನೂ ಕರೆದು ಜೀವಂತಳಾದ ತಬಿಥಳನ್ನು ಅವರಿಗೆ ತೋರಿಸಿದನು ಈ ಸಮಾಚಾರ ಜೊಪ್ಪದಲ್ಲೆಲ್ಲಾ ಹರಡಿತು. ಅನೇಕರು ಪ್ರಭುವನ್ನು ವಿಶ್ವಾಸಿಸಿದರು.

ಕೀರ್ತನೆ: 116:12-13, 14-15, 16-17

ಶ್ಲೋಕ: ಪ್ರಭು ಎನಗೆ ಮಾಡಿದ ಮಹೋಪಕಾರಗಳಿಗಾಗಿ ನನ್ನಿಂದೇನು ಮಾಡಲು ಸಾಧ್ಯ ಪ್ರತಿಯಾಗಿ?

ಶುಭಸಂದೇಶ: ಯೊವಾನ್ನ 6:60-69

ಯೇಸುಸ್ವಾಮಿಯ ಶಿಷ್ಯರಲ್ಲಿ ಹಲವರು, "ಇವು ಕಟುವಾದ ಮಾತುಗಳು, ಇವನ್ನು ಯಾರುತಾನೇ ಕೇಳಿಯಾರು?" ಎಂದು ಮಾತನಾಡಿಕೊಂಡರು. ಈ ವಿಷಯವಾಗಿ ತಮ್ಮ ಶಿಷ್ಯರು ಗೊಣಗುಟ್ಟುತ್ತಿರುವುದನ್ನು ಯೇಸು ತಾವಾಗಿಯೇ ಅರಿತು, "ಇಷ್ಟು ಮಾತ್ರಕ್ಕೆ ನೀವು ಕಂಗೆಡಬೇಕೆ?  ಹಾಗಾದರೆ ನರಪುತ್ರನು ತಾನು ಮೊದಲಿದ್ದ ಸ್ಥಳಕ್ಕೆ  ಮರಳಿ ಏರುವುದನ್ನು ನೀವು ಕಂಡಾಗ ಏನನ್ನುವಿರಿ? ಸಜೀವವನ್ನು ಕೊಡುವಂಥಾದ್ದು ದೇವರ ಆತ್ಮವೇ. ನರಮಾಂಸದಿಂದ ಏನೂ ಆಗದು. ನಾನು ನಿಮ್ಮೊಡನೆ ಆಡಿದ ಮಾತುಗಳು ಜೀವದಾಯಕ ದೇವರಾತ್ಮವನ್ನು ತರುತ್ತವೆ. ಆದರೂ ನಿಮ್ಮಲ್ಲಿ ಕೆಲವರಿಗೆ ವಿಶ್ವಾಸವಿಲ್ಲ," ಎಂದು ಹೇಳಿದರು. "ಪಿತನು ಅನುಗ್ರಹಿಸಿದ  ಹೊರತು ಯಾರೂ ನನ್ನ ಬಳಿಗೆ  ಬರಲಾರರು," ಎಂದು ನಾನು ಹೇಳಿದುದು ಇದಕ್ಕಾಗಿಯೇ," ಎಂದು ಯೇಸು ಮತ್ತೆ ನುಡಿದರು. ಅಂದಿನಿಂದ ಯೇಸುಸ್ವಾಮಿಯ ಹಿಂಬಾಲಕರಲ್ಲಿ ಹಲವರು ಅವರ ಸಹವಾಸವನ್ನು ಬಿಟ್ಟುಬಿಟ್ಟರು. ಹೋದವರು ಹಿಂದಿರುಗಿ ಬರಲಿಲ್ಲ. ಆಗ ಯೇಸು ಹನ್ನೆರಡು ಮಂದಿ ಶಿಷ್ಯರಿಗೆ, "ನೀವು ಕೂಡ ಹೋಗಬೇಕೆಂದು ಇದ್ದೀರಾ?" ಎಂದು ಕೇಳಿದರು. ಅದಕ್ಕೆ ಸಿಮೋನ ಪೇತ್ರನು, "ಪ್ರಭುವೇ, ನಾವು ಹೋಗುವುದಾದರೂ ಯಾರ ಬಳಿಗೆ? ನಿತ್ಯಜೀವವನ್ನು ಈಯುವ ನುಡಿ ಇರುವುದು ತಮ್ಮಲ್ಲೇ. ತಾವೇ ದೇವರಿಂದ ಬಂದ ಪರಮಪೂಜ್ಯರೂ ಹೌದು. ಇದೇ ನಮ್ಮ ವಿಶ್ವಾಸ ಮತ್ತು ಗ್ರಹಿಕೆ," ಎಂದು ಹೇಳಿದನು.