ಮೊದಲನೇ ವಾಚನ: ಜ್ಞಾನಗ್ರಂಥ: 1: 13-15, 2:23-24
ಏಕೆಂದರೆ ದೇವರು ಉಂಟುಮಾಡಿಲ್ಲ ಮರಣವನ್ನು ಆತ ನೋಡಿ ಹಿಗ್ಗುವವನಲ್ಲ ಜೀವಿಗಳ ಸಾವನ್ನು, ಅಸ್ತಿತ್ವದಲ್ಲಿರಲೆಂದೇ ದೇವಾ ಸೃಷ್ಠಿಸಿದನು ಸಮಸ್ತವನ್ನು ಸೃಷ್ಠಿಗಳಲ್ಲಿದೆ ಆರೋಗ್ಯ, ಅವುಗಳಲಿಲ್ಲ ಮಾರಕ ವಿಷಯ ಅಧೋಲೋಕಕ್ಕೆ ಈ ಲೋಕದ ಮೇಲಿಲ್ಲ ಅಧಿಕಾರವು. ಅಂತ್ಯವೆಂಬುದಿಲ್ಲ ನ್ಯಾಯ ನೀತಿಗೆ. ದೇವರು ಮಾನವನನ್ನು ಸೃಷ್ಠಿಸಿದ್ದು ಅಮರತ್ವಕ್ಕಾಗಿ, ಅವನನ್ನು ರಚಿಸಿದ್ದು ತಮ್ಮ ಸ್ವರೂಪಕ್ಕನುಗುಣವಾಗಿ. ಸೈತಾನನ ಮತ್ಸರದಿಂದಲೆ ಮರಣ ಪ್ರವೇಶಿಸಿತು ಲೋಕವನ್ನು. ಅವನ ಪಕ್ಷಕೆ ಸೇರಿದವರೆಲ್ಲರು ಅನುಭವಿಸುವರೂ ಅದನು.
ಕೀರ್ತನೆ: 30:2, 4, 5-6, 11, 12-13
ಶ್ಲೋಕ: ನಿನಗೆನ್ನ ವಂದನೆ ಪ್ರಭು, ನನ್ನನುದ್ಧರಿಸಿದೆ.
ಎರಡನೇ ವಾಚನ: 2 ಕೊರಿಂಥಿಯರಿಗೆ: 8:7, 9, 13-15
ವಿಶ್ವಾಸ, ವಾಕ್ಚಾತುರ್ಯ, ಜ್ನಾನ, ಶ್ರದ್ದೆ, ನಮ್ಮ ಬಗ್ಗೆ ನಿಮಗಿರುವ ಪ್ರೀತಿ - ಈ ಎಲ್ಲಾ ವಿಷಯಗಳಲ್ಲೂ ನೀವು ಸಮೃದ್ದರಾಗಿದ್ದೀರಿ. ಹಾಗೆಯೇ ಈ ಸೇವಾಕರ್ಯದಲ್ಲೂ ಸಮೃದ್ದರಾಗಿರಿ. ಪ್ರಭು ಯೇಸು ಕ್ರಿಸ್ತರ ಕೃಪಾಶಕ್ತಿಯನ್ನು ನೀವು ಬಲ್ಲಿರಿ. ಅವರು ತಮ್ಮ ಬಡತನದಿಂದ ನಿಮ್ಮನ್ನು ಶ್ರೀಮಂತವಾಗಿಸಲೆಂದು, ತಾವು ಶ್ರೀಮಂತರಾಗಿದ್ದರೂ ನಿಮಗೋಸ್ಕರ ಬಡವರಾದರು. ನಿಮ್ಮ ಕೊಡುಗೆಯಿಂದ ಇತರರ ಕಷ್ಟಪರಿಹಾರವಾಗಬೇಕು; ಅದರಿಂದ ನಿಮಗೆ ನಷ್ಟವುಂಟಾಗಬೇಕು ಎಂದು ಸಮಾನತೆ ಇರಬೇಕು. ಈ ಕಾಲದಲ್ಲಿ ನಿಮಗೆ ಸಮೃದ್ದಿಯಾಗಿರುವುದರಿಂದ ಅವರ ಕೊರತೆಯನ್ನು ನೀವು ನೀಗಿಸಬೇಕು. ಮುಂದಕ್ಕೆ ಅವರು ಸಮೃದ್ದಿಯಿಂದಿರುವಾಗ, ನಿಮ್ಮ ಕೊರತೆಯನ್ನು ಅವರು ನೀಗಿಸುವರು. ಹೀಗೆ ನಿಮ್ಮಲ್ಲಿ ಸಮಾನತೆ ಉಂಟಾಗುವುದು. "ಅತಿಯಾಗಿ ಶೇಖರಿಸಿದವನಿಗೆ ಅಧೀಕವಾಗಲಿಲ್ಲ, ಮಿತಿಯಾಗಿ ಶೇಖರಿಸಿದವನಿಗೆ ಕೊರತೆಯಾಗಲಿಲ್ಲ" ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ.
ಶುಭಸಂದೇಶ: ಮಾರ್ಕ: 5:21-43 ( ಮಾರ್ಕ : 21-24, 35-42)
ಯೇಸುಸ್ವಾಮಿ ದೋಣಿಯನ್ನೇರಿ ಸರೋವರದ ಈಚೆದಡಕ್ಕೆ ಮರಳಿದರು. ತೀರವನ್ನು ಸೇರಿದೊಡನೆ ಜನರು ದೊಡ್ಡ ಗುಂಪಾಗಿ ಅವರ ಸುತ್ತಲೂ ನೆರೆದರು. ಪ್ರಾರ್ಥನಾ ಮಂದಿರದಿಂದ ಅಧಿಕಾರಿಯೊಬ್ಬನು ಅಲ್ಲಿಗೆ ಬಂದನು. ಅವನ ಹೆಸರು ಯಾಯಿರ. ಅವನು ಯೇಸುವನ್ನು ನೋಡಿದೊಡನೆ ಅವರ ಪಾದಕ್ಕೆರಗಿ, "ನನ್ನ ಪುಟ್ಟ ಮಗಳು ಮರಣಾವಸ್ಥೆಯಲ್ಲಿದ್ದಾಳೆ; ತಾವು ಬಂದು ತಮ್ಮ ಹಸ್ತವನ್ನು ಅವಳ ಮೇಲಿಟ್ಟು, ಅವಳು ಗುಣ ಹೊಂದಿ ಬದುಕುವಂತೆ ಅನುಗ್ರಹಿಸಬೇಕು," ಎಂದು ಬಹಳವಾಗಿ ವಿನಂತಿಸಿದನು. ಯೇಸು ಅವನ ಜೊತೆಯಲ್ಲಿ ಹೊರಟರು. ದೊಡ್ಡ ಜನಸ್ತೋಮವು ಯೇಸುವನ್ನು ಮುತ್ತಿಕೊಂಡು ಅವರ ಜೊತೆಯಲ್ಲೇ ಹೊರಟಿತು.
ಹನ್ನೆರಡು ವರ್ಷಗಳಿಂದಲೂ ರಕ್ತಸ್ರಾವ ರೋಗದಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ಆ ಗುಂಪಿನಲ್ಲಿದ್ದಳು. ಅನೇಕ ವೈದ್ಯರಿಂದ ಚಿಕಿತ್ಸೆ ಪಡೆದಿದ್ದರೂ ಕೈಯಲ್ಲಿದ್ದ ಹಣವನ್ನೆಲ್ಲಾ ವ್ಯಯ ಮಾಡಿದ್ದರೂ ಅವಳ ರೋಗಮಾತ್ರ ಉಲ್ಬಣ ಆಗುತಿತ್ತೇ ಹೊರತು ಸ್ವಲ್ಪವೂ ಗುಣಮುಖ ಆಗುತ್ತಿರಲಿಲ್ಲ. ಯೇಸುವಿನ ವಿಷಯವಾಗಿ ಜನರು ಹೇಳುತ್ತಿದ್ದುದನ್ನು ಆಕೆ ಕೇಳಿ, ಜನರ ಗುಂಪಿನಲ್ಲಿ ಸೇರಿ, ಯೇಸುವನ್ನು ಹಿಂಬಾಲಿಸಿದಳು. "ನಾನು ಅವರ ಉಡುಪನ್ನು ಮುಟ್ಟಿದರೂ ಸಾಕು ಗುಣಹೊಂದುವೆನು" ಎಂದುಕೊಂಡು ಯೇಸುವಿನ ಉಡುಪನ್ನು ಮುಟ್ಟಿದಳು. ಅದನ್ನು ಮುಟ್ಟಿದಾಕ್ಷಣ ಅವಳ ರಕ್ತಸ್ರಾವ ನಿಂತು ಹೋಯಿತು. ಕಾಡುತ್ತಿದ್ದ ವ್ಯಾಧಿಯಿಂದ ತಾನು ಗುಣಹೊಂದ್ದಿದ್ದೇನೆಂದು ಆಕೆಗೆ ಅರಿವಾಯಿತು. ಇತ್ತ ಯೇಸು, ರೋಗವನ್ನು ಗುಣಪಡಿಸುವ ಶಕ್ತಿ ತಮ್ಮಿಂದ ಹೊರಹೊಮ್ಮಿದ್ದನ್ನು ತಕ್ಷಣ ತಿಳಿದು, ಸುತ್ತಲಿದ್ದ ಜನರತ್ತಾ ತಮ್ಮ ದೃಷ್ಠಿಯನ್ನು ಹರಿಸಿ, "ನನ್ನ ಉಡುಪನ್ನು ಮುಟ್ಟಿದವರಾರು?" ಎಂದು ಪ್ರಶ್ನಿಸಿದರು. ಅದಕ್ಕೆ ಶಿಷ್ಯರು, "ತಮ್ಮ ಸುತ್ತಲೂ ಜನರು ಮುತ್ತಿಕೊಂಡಿರುವುದು ತಮಗೆ ತಿಳಿದೇ ಇದೆ. ಆದರೂ ’ನನ್ನನ್ನು ಮುಟ್ಟಿದವರು ಯಾರು’ ಎಂದು ಕೇಳುತ್ತೀರಲ್ಲಾ." ಎಂದರು. ಆದರೆ ಯೇಸು ತಮ್ಮನ್ನು ಮುಟ್ಟಿದವರು ಯಾರೆಂದು ಗುರುತಿಸಲು ಸುತ್ತಲೂ ನೋಡುತ್ತಿದ್ದರು. ತನ್ನಲ್ಲಿ ಸಂಭವಿಸಿದ್ದನ್ನು ಅರಿತಿದ್ದ ಆ ಮಹಿಳೆ ಭಯದಿಂದ ನಡುಗುತ್ತಾ ಮುಂದೆ ಬಂದು ಯೇಸುವಿನ ಪಾದಕ್ಕೆ ಎರಗಿ, ಅವರಿಗೆ ನಡೆದ ಸಂಗತಿಯನ್ನು ತಿಳಿಸಿದಳು. ಯೇಸು ಆಕೆಗೆ, "ಮಗಳೇ, ನಿನ್ನ ವಿಶ್ವಾಸ ನಿನ್ನನ್ನು ಗುಣಪಡಿಸಿದೆ; ಸಮಾಧಾನದಿಂದ ಹೋಗು, ವ್ಯಾಧಿಮುಕ್ತಳಾಗಿ ಆರೋಗ್ಯದಿಂದಿರು." ಎಂದು ಅನುಗ್ರಹಿಸಿದರು. ಯೇಸುಸ್ವಾಮಿ ಇನ್ನೂ ಮಾತನಾಡುತ್ತಾ ಇರುವಾಗಲೇ ಯಾಯಿರನ ಮನೆಯಿಂದ ಕೆಲವರು ಬಂದು ಅವನಿಗೆ, "ನಿಮ್ಮ ಮಗಳು ತೀರಿಹೋದಳು; ಇನ್ನೇಕೆ ಗುರುವಿಗೆ ತೊಂದರೆ ಕೊಡುತ್ತೀರಿ?" ಎಂದರು. ಅವರು ಹೇಳಿದ ಮಾತುಗಳಾನ್ನು ಯೇಸು ಕೇಳಿಯೂ ಅವನ್ನು ಲಕ್ಷಕ್ಕೆ ತೆಗೆದುಕೊಳ್ಳದೇ ಯಾಯಿರನಿಗೆ, "ಭಯಪಡಬೇಡ ನಿನ್ನಲ್ಲಿ ವಿಶ್ವಾಸ ಒಂದಿದ್ದರೆ ಸಾಕು." ಎಂದರು.
ಅನಂತರ ಪೇತ್ರ, ಯಕೋಬ ಹಾಗು ಅವನ ಸೋದರ ಯೊವಾನ್ನ, ಇವರನ್ನು ಮಾತ್ರ ತಮ್ಮ ಜೊತೆಯಲ್ಲಿ ಕರೆದುಕೊಂಡು ಯಾಯಿರನ ಮನೆಯನ್ನು ತಲುಪಿದರು. ಅಲ್ಲಿ ಜನರ ಗೋಳಾಟ, ಗೊಂದಲದ ದೃಶ್ಯ ಅವರ ಕಣ್ಣಿಗೆ ಬಿತ್ತು. ಯೇಸು ಮನೆಯೊಳಕ್ಕೆ ಹೋಗಿ, "ಏತಕ್ಕೆ ಇಷ್ಟೆಲ್ಲಾ ಗಲಭೆ, ಗೋಳಾಟ? ಬಾಲಕಿ ಸತ್ತಿಲ್ಲ, ನಿದ್ರಿಸುತ್ತಿದ್ದಾಳೆ," ಎಂದರು. ಇದನ್ನು ಕೇಳಿದ ಜನರು, ಯೇಸುವನ್ನು ಪರಿಹಾಸ್ಯ ಮಾಡಿದರು. ಆದರೆ ಯೇಸು ಎಲ್ಲರನ್ನೂ ಹೊರಗೆ ಕಳುಹಿಸಿ ಬಾಲಕಿಯ ತಂದೆ ತಾಯಿಯನ್ನು ಮತ್ತು ತಮ್ಮೊಂದಿಗಿದ್ದ ಮೂವರು ಶಿಷ್ಯರನ್ನು ಮಾತ್ರ ಕರೆದುಕೊಂಡು ಆ ಬಾಲಕಿಯನ್ನು ಮಲಗಿಸಿದ್ದ ಕೊಠಡಿಯನ್ನು ಪ್ರವೇಶಿಸಿದರು. ಆಕೆಯ ಕೈಯನ್ನಿಡಿದು "ತಲಿಥಾಕೂಮ್"ಎಂದರು. (’ಮಗಳೇ, ನಿನಗೆ ಹೇಳುತ್ತೇನೆ, ಎದ್ದೇಳು’ ಎಂಬುದು ಆ ಮಾತಿನ ಅರ್ಥ). ಅವಳು ತಟ್ಟನೆ ಎದ್ದು ನಡೆದಾಡ ತೊಡಗಿದಳು. ಅಲ್ಲಿದ್ದವರೆಲ್ಲರೂ ಆಶ್ಚರ್ಯ ಭರಿತರಾದರು. ಅವಳಿಗೆ ಹನ್ನೆರಡು ವರ್ಷ ವಯಸ್ಸು ಆಗಿತ್ತು. ಈ ವಿಷಯವನ್ನು ಬೇರೆ ಯಾರಿಗೂ ತಿಳಿಸಬಾರದೆಂದು ಯೇಸು ಅವರಿಗೆ ಕಟ್ಟಪ್ಪಣೆ ಮಾಡಿದರು. ಬಾಲಕಿಗೆ ತಿನ್ನಲು ಏನಾದರು ಕೊಡುವಂತೆ ತಿಳಿಸಿದರು.
No comments:
Post a Comment