ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

11.06.10 - ಕಾಣದೆ ಹೋದ ಕುರಿ

ಸಂತ ಲೂಕನ ಶುಭ ಸಂದೇಶ - 15:3-7

"ಪಾಪಕ್ಕೆ ವಿಮುಖನಾಗಿ ದೇವರಿಗೆ ಅಭಿಮುಖನಾಗುವ ಒಬ್ಬ ಪಾಪಿಯ ವಿಷಯವಾಗಿ ಹೆಚ್ಚು ಸಂತೋಷ ಉಂಟಾಗುತ್ತದೆ"

ಈ ಸಂದರ್ಭದಲ್ಲಿ ಯೇಸು ಈ ಸಾಮತಿಯನ್ನು ಹೇಳಿದರು:"ನಿಮ್ಮಲ್ಲಿ ಯಾರ ಬಳಿಯಾದರೂ ನೂರು ಕುರಿಗಳಿವೆಯೆನ್ನೋಣ. ಅವುಗಳಲ್ಲಿ ಒಂದು ಕುರಿ ಕಾಣದೆ ಹೋದಾಗ ಅವನೇನು ಮಾಡುತ್ತಾನೆ? ಇರುವ ತೊಂಭತ್ತೊಂಭತ್ತು ಕುರಿಗಳನ್ನು ಹುಲ್ಲುಗಾವಲ್ಲಿನಲ್ಲೇ ಬಿಟ್ಟು ಕಾಣದೆ ಹೋದ ಒಂದು ಕುರಿ ಸಿಕ್ಕುವ ತನಕ ಹುಡುಕಿಕೊಂಡು ಹೋಗುತ್ತಾನಲ್ಲವೇ? ಅದು ಸಿಕ್ಕಿದಾಗ ಸಿಕ್ಕಿತೆಂಬ ಸಂತೋಷದಿಂದ ಅದನ್ನು ಹೆಗಲ ಮೇಲೆ ಹೊತ್ತುಕೊಂಡು ಮನಗೆ ಬರುತ್ತಾನೆ. ಸ್ನೇಹಿತರನ್ನೂ ನೆರೆಯವರನ್ನೂ ಒಟ್ಟಿಗೆ ಕರೆಯುತ್ತಾನೆ. ’ಕೆಳೆದು ಹೋಗಿದ್ದ ಕುರಿ ಸಿಕ್ಕಿತು; ನನ್ನೊಡನೆ ಸೇರಿ ಸಂತೋಷಪಡಿ’ ಎನ್ನುತ್ತಾನೆ ಅಲ್ಲವೇ? ಅದೇ ರೀತಿಯಲ್ಲಿ ಪಶ್ಚಾತ್ತಾಪದ ಅವಶ್ಯಕತೆಯಿಲ್ಲದ ತೊಂಭತ್ತೊಂಭತ್ತು ಸತ್ಪುರುಷರ ವಿಷಯವಾಗಿ ಸ್ವರ್ಗದಲ್ಲಿ ಉಂಟಾಗುವ ಸಂತೋಷಕ್ಕಿಂತ ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖನಾಗಿ ದೇವರಿಗೆ ಅಭಿಮುಖನಾಗುವ ಒಬ್ಬ ಪಾಪಿಯ ವಿಷಯವಾಗಿ ಹೆಚ್ಚು ಸಂತೋಷ ಉಂಟಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.

10.06.10 - ನಿನ್ನ ಸೋದರನೊಡನೆ ಸಮಾಧಾನ ಮಾಡಿಕೋ

ಸಂತ ಮತ್ತಾಯನ ಶುಭ ಸಂದೇಶ - 5:20-26

"ತನ್ನ ಸೋದರನ ಮೇಲೆ ನಿಷ್ಕಾರಣವಾಗಿ ಕೋಪಗೊಳ್ಳುವ ಪ್ರತಿಯೊಬ್ಬನೂ ನ್ಯಾಯ ತೀರ್ಪಿಗೆ ಈಡಾಗುವನು"

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೇಳಿದ್ದೇನೆಂದರೆ : ಧರ್ಮಶಾಸ್ತ್ರಿಗಳ ಹಾಗೂ ಫರಿಸಾಯರ ಧರ್ಮನಿಷ್ಠೆಗಿಂತ ನಿಮ್ಮ ಧರ್ಮ ನಿಷ್ಠೆ ಉತ್ತಮವಾಗದ ಹೊರತು ನೀವು ಸ್ವರ್ಗಸಾಮ್ರಾಜ್ಯವನ್ನು ಪ್ರವೇಶಿಸಲಾರಿರಿ ಎಂಬುದು ನಿಶ್ಚಯ.’ನರಹತ್ಯೆ ಮಾಡಬೇಡ; ನರಹತ್ಯೆ ಮಾಡುವವನು ನ್ಯಾಯ ತೀರ್ಪಿಗೆ ಗುರಿಯಾಗುವನು’ ಎಂದು ಪೂರ್ವಿಕರಿಗೆ ಹೇಳಿದ್ದನ್ನು ನೀವು ಕೇಳಿದ್ದೀರಿ. ಆದರೆ ನಾನೀಗ ನಿಮಗೆ ಹೇಳುತ್ತೇನೆ,ಕೇಳಿ : ತನ್ನ ಸೋದರನ ಮೇಲೆ ನಿಷ್ಕಾರಣವಾಗಿ ಕೋಪಗೊಳ್ಳುವ ಪ್ರತಿಯೊಬ್ಬನೂ ನ್ಯಾಯ ತೀರ್ಪಿಗೆ ಈಡಾಗುವನು. ತನ್ನ ಸೋದರನನ್ನು ತುಚ್ಛೀಕರಿಸುವವನು ನ್ಯಾಯಸಭೆಯ ವಿಚಾರಣೆಗೆ ಒಳಗಾಗುವನು; ’ಮೂರ್ಖ’ ಎಂದು ಮೂದಲಿಸುವವನು ನರಕಾಗ್ನಿಗೆ ಗುರಿಯಾಗುವನು.ಆದಕಾರಣ, ಬಲಿಪೀಠದ ಮುಂದೆ ದೇವರಿಗೆ ಕಾಣಿಕೆಯನ್ನು ಅರ್ಪಿಸಲಿರುವಾಗ, ನಿನ್ನ ಸೋದರನಿಗೆ ನಿನ್ನ ಮೇಲೆ ಏನೋ ಮನಸ್ತಾಪವಿದೆ ಎಂಬುದು ನಿನ್ನ ನೆನಪಿಗೆ ಬಂದರೆ, ನಿನ್ನ ಕಾಣಿಕೆಯನ್ನು ಆ ಬಲಿಪೀಠದ ಮುಂದೆಯೇ ಇಟ್ಟುಬಿಡು. ಮೊದಲು ಹೋಗಿ ನಿನ್ನ ಸೋದರನೊಡನೆ ಸಮಾಧಾನ ಮಾಡಿಕೋ ಅನಂತರ ಬಂದು ನಿನ್ನ ಕಾಣಿಕೆಯನ್ನು ಒಪ್ಪಿಸು.ನಿನ್ನ ಎದುರಾಳಿ ನಿನ್ನನ್ನು ನ್ಯಾಯಸ್ಥಾನಕ್ಕೆ ಎಳೆಯುವಾಗ ಮಾರ್ಗ ಮಧ್ಯದಲ್ಲೇ ಅವನೊಡನೆ ಬೇಗ ಸಂಧಾನ ಮಾಡಿಕೊ. ಇಲ್ಲದಿದ್ದರೆ, ಅವನು ನಿನ್ನನ್ನು ನ್ಯಾಯಾಧಿಪತಿಗೆ ಒಪ್ಪಿಸಬಹುದು.  ನ್ಯಾಯಾಧಿಪತಿ ನಿನ್ನನ್ನು ಪೋಲಿಸರ ವಶಕ್ಕೆ ಬಿಡಬಹುದು. ಅನಂತರ ನಿನಗೆ ಸೆರೆವಾಸ ಪ್ರಾಪ್ತವಾದೀತು! ಅಲ್ಲಿಂದ  ನೀನು ಹೊರಗೆ ಬರಬೇಕಾದರೆ ಬಿಡಿಕಾಸನ್ನೂ ಬಿಡದೆ ಎಲ್ಲವನ್ನೂ ತೆರೆಬೇಕಾಗುವುದು.ಇದನ್ನು ನೆನಪಿನಲ್ಲಿಡು.

09.06.10 - ಧರ್ಮಶಾಸ್ತ್ರ

ಸಂತ ಮತ್ತಾಯನ ಶುಭ ಸಂದೇಶ - 5:17-19

"ಧರ್ಮಶಾಸ್ತ್ರವನ್ನು ಪಾಲಿಸುವವನು, ಪಾಲಿಸುವಂತೆ ಜನರಿಗೆ ಬೋಧಿಸುವವನು, ಸ್ವರ್ಗ ಸಾಮ್ರಾಜ್ಯದಲ್ಲಿ ಮಹಾತ್ಮನೆಂದು ಪರಿಗಣಿತನಾಗುವನು"

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು:" ಮೋಶೆಯ ಧರ್ಮಶಾಸ್ತ್ರವನ್ನಾಗಲಿ,ಪ್ರವಾದಿಗಳ ಪ್ರವಚನವನ್ನಾಗಲಿ ರದ್ದು ಮಾಡಲು ನಾನು ಬಂದೆನೆಂದು ತಿಳಿಯಬೇಡಿ.ರದ್ದು ಮಾಡಲು ಅಲ್ಲ,ಅವುಗಳನ್ನು ಸಿದ್ಧಿಗೆ ತರಲು ಬಂದಿದ್ದೇನೆ. ಭೂಮ್ಯಾಕಾಶಗಳು ಉಳಿದಿರುವ ತನಕ ಧರ್ಮಶಾಸ್ತ್ರವೆಲ್ಲ ನೆರೆವೇರುವುದೇ ಹೊರತು ಅದರಲ್ಲಿ ಚಿಕ್ಕ ಅಕ್ಷರವಾಗಲಿ ಚುಕ್ಕೆಯಾಗಲಿ ನಿರರ್ಥಕವಾಗದೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.

ಹೀಗಿರುವಲ್ಲಿ, ಅದರ ಆಜ್ಞೆಗಳಲ್ಲಿ ಅತಿ ಚಿಕ್ಕದೊಂದನ್ನು ಮೀರುವಂತೆ ಜನರಿಗೆ ಬೋಧಿಸುವವನು, ಸ್ವರ್ಗಸಾಮ್ರಾಜ್ಯದಲ್ಲಿ ಅತ್ಯಲ್ಪನೆಂದು ಪರಿಗಣಿತನಾಗುವನು; ಧರ್ಮಶಾಸ್ತ್ರವನ್ನು ಪಾಲಿಸುವವನು, ಪಾಲಿಸುವಂತೆ ಜನರಿಗೆ ಬೋಧಿಸುವವನು, ಸ್ವರ್ಗ ಸಾಮ್ರಾಜ್ಯದಲ್ಲಿ ಮಹಾತ್ಮನೆಂದು ಪರಿಗಣಿತನಾಗುವನು."

08.06.10 - ಉಪ್ಪು - ಬೆಳಕು

ಸಂತ ಮತ್ತಾಯನ ಶುಭ ಸಂದೇಶ - 5:13-16

"ಈ ಧರೆಗೆ ನೀವೇ ಉಪ್ಪು"

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು : " ಈ ಧರೆಗೆ ನೀವೇ ಉಪ್ಪು; ಉಪ್ಪೇ ಸಪ್ಪೆಯಾಗಿಬಿಟ್ಟರೆ ಅದಕ್ಕೆ ಇನ್ನಾವುದರಿಂದ ಪುನ: ರುಚಿ ಬಂದೀತು? ಇನ್ನು ಅದು ಕೆಲಸಕ್ಕೆ ಬಾರದ ವಸ್ತು. ಜನರು ಅದನ್ನು ಆಚೆ ಬಿಸಾಡುತ್ತಾರೆ.ದಾರಿಗರು ಅದನ್ನು ತುಳಿದು ಬಿಡುತ್ತಾರಷ್ಟೇ.ಜಗತ್ತಿಗೆ ನೀವೇ ಜ್ಯೋತಿ.ಬೆಟ್ಟದ ಮೇಲಿನ ಪಟ್ಟಣವನ್ನು ಮುಚ್ಚಿಡಲಾಗದು. ಅಂತೆಯೇ ಯಾರೂ ದೀಪವನ್ನು ಹಚ್ಚಿ ಬಟ್ಟಲ ಕೆಳಗೆ ಬಚ್ಚಿಡುವುದಿಲ್ಲ: ದೀಪ ಸ್ತಂಭದ ಮೇಲೆ ಇಡುತ್ತಾರೆ. ಆಗ ಅದು ಮನೆಯಲ್ಲಿರುವ ಎಲ್ಲರಿಗೆ ಬೆಳಕನ್ನು ಕೊಡುತ್ತದೆ. ಅದೇ ರೀತಿ ನಿಮ್ಮ ಜ್ಯೋತಿ ಜನರ ಮುಂದೆ  ಬೆಳಗಲಿ. ಹೀಗೆ ಅವರು ನಿಮ್ಮ ಸತ್ಕಾರ್ಯಗಳನ್ನು ಕಂಡು ಸ್ವರ್ಗದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡಲಿ".

07.06.10 - ಭಾಗ್ಯಗಳು

ಸಂತ ಮತ್ತಾಯನ ಶುಭ ಸಂದೇಶ - 5:1-12

ಶಾಂತಿಗಾಗಿ ಶ್ರಮಿಸುವವರು ಭಾಗ್ಯವಂತರು; ಅವರು ದೇವರ ಮಕ್ಕಳೆನಿಸಿಕೊಳ್ಳುವರು. 

ಜನರ ದೊಡ್ಡ ಗುಂಪನ್ನು ಕಂಡು ಯೇಸುಸ್ವಾಮಿ ಒಂದು ಬೆಟ್ಟವನ್ನು ಹತ್ತಿ ಕುಳಿತುಕೊಂಡರು. ಅವರ ಶಿಷ್ಯರು ಸುತ್ತಲೂ ನೆರೆದರು.ಆಗ ಯೇಸು ಇಂತೆಂದು ಪ್ರಬೋಧಿಸಿದರು "ಪಾರಮಾರ್ಥಿಕವಾಗಿ ಬಡವರು ಭಾಗ್ಯವಂತರು; ಸ್ವರ್ಗ ಸಾಮ್ರಜ್ಯ ಅವರದು. ದು:ಖಿಗಳು ಭಾಗ್ಯವಂತರು; ದೇವರು ಅವರನ್ನು ಸಂತೈಸುವರು. ವಿನಯಶೀಲರು ಭಾಗ್ಯವಂತರು; ದೇವರ ವಾಗ್ದತ್ತ ನಾಡಿಗೆ ಬಾಧ್ಯಸ್ಥರು ಅವರು. ನ್ಯಾಯ ನೀತಿಗಾಗಿ ಹಸಿದು ಹಾತೊರೆಯುವರು ಭಾಗ್ಯವಂತರು; ದೇವರು ಅವರಿಗೆ ತೃಪ್ತಿಯನ್ನೀಯುವರು.ದಯಾವಂತರು ಭಾಗ್ಯವಂತರು; ದೇವರ ದಯೆ ಅವರಿಗೆ ದೊರಕುವುದು. ನಿರ್ಮಲ ಹೃದಯಿಗಳು ಭಾಗ್ಯವಂತರು; ಅವರು ದೇವರನ್ನು ಕಾಣುವರು. ಶಾಂತಿಗಾಗಿ ಶ್ರಮಿಸುವವರು ಭಾಗ್ಯವಂತರು; ಅವರು ದೇವರ ಮಕ್ಕಳೆನಿಸಿಕೊಳ್ಳುವರು. ನ್ಯಾಯ ನೀತಿಯ ನಿಮಿತ್ತ ಹಿಂಸೆಯನ್ನು ತಾಳುವವರು ಭಾಗ್ಯವಂತರು; ಸ್ವರ್ಗ ಸಾಮ್ರಾಜ್ಯ ಅವರದು.

ನನ್ನ ಶಿಷ್ಯರು ನೀವಾದ್ದರಿಂದ ಜನರು ನಿಮ್ಮನ್ನು ಧಿಕ್ಕರಿಸುವರು,ಹಿಂಸಿಸುವರು,ಅನ್ಯಾಯವಾಗಿ ಇಲ್ಲಸಲ್ಲದ್ದನ್ನು ನಿಮ್ಮ ಮೇಲೆ ಹೊರಿಸುವರು; ಆಗ ನೀವು ಭಾಗ್ಯವಂತರು. ಅದಕ್ಕಾಗಿ ಹರ್ಷಿಸಿ ಆನಂದಪಡಿ; ಏಕೆಂದರೆ ಸ್ವರ್ಗದಲ್ಲಿ ನಿಮಗೆ ದೊರಕುವ ಪ್ರತಿಫಲ ಹಿರಿದು. ನಿಮಗಿಂತ ಮೊದಲಿದ್ದ ಪ್ರವಾದಿಗಳನ್ನೂ ಜನರು ಹೀಗೆಯೇ ಚಿತ್ರ ಹಿಂಸೆಗೆ ಒಳಪಡಿಸಿದರು. 

02.06.10 - ಪುನರುತ್ಥಾನ

ಸಂತ ಮಾರ್ಕನ ಶುಭ ಸಂದೇಶ - 12: 18-27

"ಅವರು ಸ್ವರ್ಗದ ದೇವದೂತರಂತೆ ಇರುತ್ತಾರೆ"

ಅನಂತರ ಸದ್ದುಕಾಯರು ಯೇಸುಸ್ವಾಮಿಯ ಬಳಿಗೆ ಬಂದರು.ಸತ್ತ ಮೇಲೆ ಪುನರುತ್ಥಾನ ಇಲ್ಲವೆಂಬುದು ಅವರ ಅಭಿಮತ. ಇವರು ಯೇಸುವನ್ನು" ಬೋಧಕರೇ, ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ಹೆಂಡತಿಯನ್ನು ಅವನ ತಮ್ಮನು ಮದುವೆ ಮಾಡಿಕೊಂಡು ಅಣ್ಣನಿಗೆ ಸಂತಾನ ಪಡೆಯಬೇಕು ಎಂದು ಮೋಶೆ ನಮಗೆ ಬರೆದಿಟ್ಟಿದ್ದಾನಲ್ಲವೇ? ಒಮ್ಮೆ ಏಳು ಮಂದಿ ಅಣ್ಣ ತಮ್ಮಂದಿರಿದ್ದರು.ಅವರಲ್ಲಿ ಮೊದಲನೆಯವನಿಗೆ ವಿವಾಹವಾಯಿತು.ಅವನು ಮಕ್ಕಳಿಲ್ಲದೆ ಮೃತನಾದುದರಿಂದ ಎರಡನೆಯವನು ಅವನ ಹೆಂಡತಿಯನ್ನು ಮುದುವೆ ಮಾಡಿಕೊಂಡು, ಸಂತಾನವಿಲ್ಲದೆ ಸಾವನಪ್ಪಿದ . ಮೂರನೆಯವನಿಗೂ ಇದೇ ಗತಿಯಾಯಿತು. ಅನಂತರ,ಉಳಿದವರೂ ಒಬ್ಬರ ಬಳಿಕ ಇನ್ನೊಬ್ಬರು ಆಕೆಯನ್ನು ಮದುವೆ ಮಾಡಿಕೊಂಡು ಸಂತಾನವಿಲ್ಲದೆ ಸತ್ತುಹೋದರು. ಕಡೆಗೆ ಆ ಸ್ತ್ರೀಯೂ ಮರಣ ಹೊಂದಿದಳು. ಈಗ ಹೇಳಿ,ಪುನರುತ್ಥಾನ ದಿನದಲ್ಲಿ, ಆಕೆ ಯಾರ ಹೆಂಡತಿ ಎನಿಸಿಕೊಳ್ಳುವಳು?ಏಳು ಮಂದಿ ಸಹೋದರರೂ ಆಕೆಯನ್ನು ವಿವಾಹವಾಗಿದ್ದರಲ್ಲವೇ?" ಎಂದು ಪ್ರಶ್ನಿಸಿದರು. ಅದಕ್ಕೆ ಯೇಸು,"ನಿಮ್ಮದು ಎಂಥಾ ತಪ್ಪು ಅಭಿಪ್ರಾಯ!ಪವಿತ್ರ ಗಂಥವನ್ನಾಗಲೀ,ದೇವರ ಶಕ್ತಿಯನ್ನಾಗಲೀ,ನೀವು ಅರ್ಥಮಾಡಿಕೊಂಡಿಲ್ಲ. ಸತ್ತವರು ಪುನರುತ್ಥಾನವಾದ ಮೇಲೆ ಮದುವೆ ಮಾಡಿಕೊಳ್ಳುವುದೂ ಇಲ್ಲ,ಮಾಡಿಕೊಡುವುದೂ ಇಲ್ಲ.ಅವರು ಸ್ವರ್ಗದ ದೇವದೂತರಂತೆ ಇರುತ್ತಾರೆ.ಇದಲ್ಲದೆ ಸತ್ತವರು ಪುನರುತ್ಥಾನವಾಗುವ ವಿಷಯದಲ್ಲಿ ಹೇಳುವುದಾದರೆ:’ನಾನು ಅಬ್ರಹಾಮನಿಗೆ ದೇವರು,ಇಸಾಕನಿಗೆ ದೇವರು,ಯಾಕೋಬನಿಗೆ ದೇವರು’ಎಂದು ದೇವರು ಮೋಶೆಗೆ ಹೇಳಿದ್ದನ್ನು ಮೋಶೆಯ ಗ್ರಂಥ ’ಉರಿಯುವ ಪೊದೆ’ಯ ಪ್ರಸ್ತಾಪವಿರುವ ಭಾಗದಲ್ಲಿ, ನೀವು ಓದಿರಬೇಕಲ್ಲವೇ? ದೇವರು ಜೀವಿತರ ದೇವರೇ ಹೊರತು ಮೃತರ ದೇವರಲ್ಲ.ನಿಮ್ಮ ಅಭಿಪ್ರಾಯ ತೀರಾ ತಪ್ಪಾಗಿದೆ" ಎಂದರು.