ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

01.09.2019 - "ಮದುವೆಯ ಔತಣಕ್ಕೆ ನಿನ್ನನ್ನು ಯಾರಾದರೂ ಆಹ್ವಾನಿಸಿದಾಗ ಪ್ರಧಾನ ಆಸನದಲ್ಲಿ ಹೋಗಿ ಕುಳಿತುಕೊಳ್ಳಬೇಡ"

ಮೊದಲನೇ ವಾಚನ: ಸಿರಾಖ 3:17-18, 20, 28-29


ಮಗನೇ, ಕರ್ತವ್ಯ ನಿರ್ವಹಣೆಯಲ್ಲಿ ವಿನಯದಿಂದ ವರ್ತಿಸುವೆಯಾದರೆ, ದೇವರ ಯ್ಯೋಗ್ಯರಾದವರ ಪ್ರೀತಿಗೆ ನೀನೂ ಪಾತ್ರನಾಗುವೆ. ನೀನು ದೊಡ್ಡವನಾಗೀರುವಷ್ಟು ನಿನ್ನನ್ನೇ ತಗ್ಗಿಸಿಕೊಂಡೆಯಾದರೆ ದೇವರ ಸನ್ನಿಧಿಯಲ್ಲಿ ನಿಮಗೆ ಗಿಟ್ಟುವುದು ಕರುಣೆ, ಅಪೂರ್ವವಾದುದು ದೇವರ ಬಲ ದೀನರಿಂದ ಆತನಿಗೆ ಸಲ್ಲುವುದು ಘನಮಾನ. ಖಂಡನೆಯಿಂದ ಗುಣವಾಗದು ಗರ್ವಿಗೆ ದುಷ್ಟತನದ ಬಳ್ಳಿ ಬೇರೂರಿದೆ ಅವನಲ್ಲೇ,  ವಿವೇಕ ಮನಸ್ಸುಳ್ಳವರು ಪಾಠ ಕಲಿಯುವರು ಸಾಮತಿಗಳಂದ ಲಕ್ಷವಿಟ್ಟು ಕೇಳುವನು ಜ್ಞಾನಿ ಹೆಬ್ಬಯಕೆಯಿಂದ.

ಕೀರ್ತನೆ: 68:4-5, 6-7, 10-11

ಶ್ಲೋಕ: ದೇವಾ ಆಸ್ಥೆಯಿಂದೊದಗಿಸಿದೆ ದೀನದಲಿತರಿಗೆ

ಎರಡನೇ ವಾಚನ: ಹಿಬ್ರಿಯರಿಗೆ 12:18-19, 22-24

ನೀವು ಇಸ್ರಯೇಲರಂತೆ ಮುಟ್ಟಬಹುದಾದ ಸೀನಾಯ್ ಬೆಟ್ಟಕ್ಕೆ ಬಂದಿಲ್ಲ. ಅಲ್ಲಿ ಬೆಂಕಿ ಧಗಧಗಿಸುತ್ತಿತ್ತು. ಕಾರ್ಗತ್ತಲು ಕವಿದಿತ್ತು; ಮೋಡದ ಮಬ್ಬು ಮುಸುಕಿತ್ತು; ಬಿರುಗಾಳಿ ಬೀಸುತ್ತಿತ್ತು. ಕಹಳೆಗಳು ಮೊಳಗುತ್ತಿದ್ದವು. ಆಗ ಧ್ವನಿಯೊಂದು ಕೇಳಿಬಂತು. ಅದನ್ನು ಕೇಳಿದವರು, ಇನ್ನೆಂದಿಗೂ ಆ ಧ್ವನಿ ತಮ್ಮೊಂದಿಗೆ ಮಾತನಾಡುವುದೇ ಬೇಡವೆಂದು ಕೇಳಿಕೊಂಡರು. ಆದರೆ ನೀವು ಬಂದಿರುವುದು ಸಿಯೋನ್ ಬೆಟ್ಟಕ್ಕೆ; ಜೀವಂತ ದೇವರ ನಗರಕ್ಕೆ; ಸ್ವರ್ಗೀಯ ಜೆರುಸಲೇಮಿಗೆ;  ಅಸಂಖ್ಯಾತ ದೇವದೂತರು ಕೂಡಿರುವ ಉತ್ಸವ ಕೂಟಕ್ಕೆ; ಸ್ವರ್ಗದಲ್ಲಿ ದಾಖಲೆಯಾಗಿರುವ ಜ್ಯೇಷ್ಠಪುತ್ರನ ಸಭೆಗೆ; ನೀವು  ಬಂದಿರುವುದು ಸಕಲ ಮಾನವರ ನ್ಯಾಯ ಮೂರ್ತಿಯಾದ ದೇವರ ಸನ್ನಿಧಿಗೆ; ಸಿದ್ಧಿಗೆ ಬಂದ ಸತ್ಪುರುಷರ ಆತ್ಮಗಳ ಸಮೂಹಕ್ಕೆ; ಹೊಸ ಒಡಂಬಡಿಕೆಯ ಮಧ್ಯಸ್ಥರಾದ ಯೇಸುಸ್ವಾಮಿಯ ಬಳಿಗೆ, ಹೇಬೆಲನ ರಕ್ತಕಿಂತಲೂ ಅಮೋಘವಾಗಿ ಮೊರೆಯಿಡುವ ಪ್ರೋಕ್ಷಣಾ ರಕ್ತದ ಬಳಿಗೆ ನೀವು ಬಂದಿದ್ದೀರಿ.

ಶುಭಸಂದೇಶ: ಲೂಕ 14:7-14


ಅಂದು ಸಬ್ಬತ್ ದಿನ. ಯೇಸುಸ್ವಾಮಿ ಒಬ್ಬ ಪ್ರಮುಖ ಫರಿಸಾಯನ ಮನೆಗೆ ಊಟಕ್ಕೆ ಹೋದರು. ಎಲ್ಲರ ಕಣ್ಣು ಅವರ ಮೇಲಿತ್ತು. ಅಲ್ಲದೆ, ಅಲ್ಲಿಗೆ ಬಂದಿದ್ದ ಅತಿಥಿಗಳು ಪಂಕ್ತಿಯಲ್ಲಿ ಉತ್ತಮ ಸ್ಥಾನಗಳನ್ನು ಆರಿಸಿಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ಯೇಸು ಸಾಮತಿ ರೂಪದಲ್ಲಿ ಹೀಗೆಂದರು: "ಮದುವೆಯ ಔತಣಕ್ಕೆ ನಿನ್ನನ್ನು ಯಾರಾದರೂ ಆಹ್ವಾನಿಸಿದಾಗ ಪ್ರಧಾನ ಆಸನದಲ್ಲಿ ಹೋಗಿ ಕುಳಿತುಕೊಳ್ಳಬೇಡ. ಏಕೆಂದರೆ, ನಿನಗಿಂತ ಗೌರವಸ್ಥನನ್ನು ಆಹ್ವಾನಿಸಿರಬಹುದು. ನಿಮ್ಮಿಬ್ಬರನ್ನು ಕರೆದಾತ ನಿನ್ನ ಹತ್ತಿರ ಬಂದು, "ಇವನಿಗೆ ನಿನ್ನ ಸ್ಥಳವನ್ನು ಬಿಟ್ಟುಕೊಡು," ಎನ್ನಬಹುದು. ಆಗ ನೀನು ನಾಚಿಕೆಪಟ್ಟುಕೊಂಡು ಕಡೆಯ ಸ್ಥಾನದಲ್ಲಿ ಹೋಗಿ ಕುಳಿತುಕೊಳ್ಳಬೇಕಾಗಬಹುದು. ಅದಕ್ಕೆ ಬದಲಾಗಿ ನಿನ್ನನ್ನು ಆಹ್ವಾನಿಸಿದಾಗ ಕಡೆಯ ಸ್ಥಾನದಲ್ಲಿ ಹೋಗಿ ಕುಳಿತುಕೋ. ಕರೆದವನು ಬಂದು, "ಗೆಳೆಯಾ, ಮೇಲೆ ಬಾ" ಎಂದು ಹೇಳುವನು. ಆಗ ಜೊತೆಗೆ ಕುಳಿತಿರುವ ಅತಿಥಿಗಳೆಲ್ಲರ ಮುಂದೆ ನಿನಗೆ ಗೌರವ ಸಿಗುವುದು. ಅಂತೆಯೇ, ತನ್ನನ್ನು ತಾನೇ ಮೇಲಕ್ಕೆ ಏರಿಸಿಕೊಳ್ಳುವವನನ್ನು ದೇವರು ಕೆಳಗಿಳಿಸುವರು; ತನ್ನನ್ನು ತಾನೇ ತಗ್ಗಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು," ಎಂದರು. ಆನಂತರ ತಮ್ಮನ್ನು ಊಟಕ್ಕೆ ಆಮಂತ್ರಿಸಿದವನನ್ನು ನೋಡಿ ಯೇಸುಸ್ವಾಮಿ, "ನೀನು ಊಟ ಆಥವಾ ಔತಣವನ್ನು ಏರ್ಪಡಿಸುವಾಗ ನಿನ್ನ ಸ್ನೇಹಹಿತರನ್ನಾಗಲಿ, ಸೋದರರನ್ನಾಗಲಿ ಕರೆಯಬೇಡ. ಏಕೆಂದರೆ, ಅವರು ನಿನ್ನನ್ನು ಪ್ರತಿಯಾಗಿ ಕರೆದು ಮುಯ್ಯಿ ತೀರಿಸಿಬಿಡಬಹುದು. ಆದ್ದರಿಂದ ಔತಣವನ್ನು ಏರ್ಪಡಿಸುವಾಗ ದರಿದ್ರರು, ಅಂಗವಿಕಲರು, ಕುಂಟರು, ಕುರುಡರು ಇಂಥವರನ್ನು ಕರೆ; ಆಗ ನೀನು ಧನ್ಯನಾಗುವೆ. ಏಕೆಂದರೆ, ಅವರು ನಿನಗೆ ಪ್ರತಿಯಾಗಿ ಏನು ಮಾಡಲೂ ಇಲ್ಲದವರು. ಸತ್ಪುರುಷರು ಪುನರುತ್ದಾನ ಹೊಂದುವಾಗ ದೇವರೇ ನಿನಗೆ ಸಲ್ಲಬೇಕಾದುದನ್ನು ಸಲ್ಲಿಸುವರು," ಎಂದರು.

31.08.2019 - "ಉಳ್ಳ ಪ್ರತಿಯೊಬ್ಬನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ"

ಮೊದಲನೇ ವಾಚನ: 1 ಥೆಸಲೋನಿಯರಿಗೆ 4:9-11

ಸೋದರ ಪ್ರೇಮವನ್ನು ಕುರಿತು ನಿಮಗೆ ಬರೆಯುವ ಅವಶ್ಯಕತೆಯಿಲ್ಲ. ನೀವು ಒಬ್ಬರನ್ನೊಬ್ಬರು ಪ್ರೀತಿಸುವುದನ್ನು ದೇವರಿಂದಲೇ ಕಲಿತಿದ್ದೀರಿ. ಮಕೆದೋನಿಯದಲ್ಲಿ ವಾಸಿಸುವ ಎಲ್ಲ ಸಹೋದರರನ್ನೂ ನೀವು ಪ್ರೀತಿಸುತ್ತಿರುವುದೇನೋ ನಿಜ. ಆದರೂ ಸಹೋದರರೇ, ನಿಮ್ಮ ಈ ಪ್ರೀತಿ ಇನ್ನೂ ಅಧಿಕಾಧಿಕವಾಗಬೇಕೆಂಬುದೇ ನಮ್ಮ ಆಶಯ. ಮತ್ತೊಬ್ಬರ ವಿಷಯದಲ್ಲಿ ನೀವು ತಲೆಹಾಕದೆ ನಿಮ್ಮ ಸ್ವಂತಕಾರ್ಯಗಳಲ್ಲೇ ಮಗ್ನರಾಗಿರಿ. ನೆಮ್ಮದಿಯ ಜೀವನವೇ ನಿಮ್ಮ ಗುರಿಯಾಗಿರಲಿ. ನಿಮ್ಮ ಸ್ವಂತ ದುಡಿಮೆಯಿಂದ ಬದುಕನ್ನು ಸಾಗಿಸಿರಿ. ಇದೇ ನಿಮಗೆ ನಮ್ಮ ಆದೇಶ.

ಕೀರ್ತನೆ: 98:1, 7-8, 9

ಶ್ಲೋಕ: ಜಗಕು, ಜನತೆಗು, ನ್ಯಾಯನೀತಿಗನುಸಾರ ತೀರ್ಪುಕೊಡಲು.

ಶುಭಸಂದೇಶ: ಮತ್ತಾಯ 25:14-30


"ಅದು ಅಲ್ಲದೆ ಆ ದಿನಗಳಲ್ಲಿ ಸ್ವರ್ಗಸಾಮ್ರಾಜ್ಯ ಇಂತಿರುವುದು: ಒಬ್ಬಾತ ಪ್ರವಾಸ ಹೊರಡಲಿದ್ದ. ತನ್ನ ಸೇವಕರನ್ನು ಕರೆದು ಅವರ ವಶಕ್ಕೆ ತನ್ನ ಆಸ್ತಿಯನ್ನು ಒಪ್ಪಿಸಿದ. ಒಬ್ಬನಿಗೆ ಐದು ತಲೆಂತು, ಇನ್ನೊಬ್ಬನಿಗೆ ಎರಡು, ಮತ್ತೊಬ್ಬನಿಗೆ ಒಂದು - ಹೀಗೆ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ವಹಿಸಿಕೊಟ್ಟು ಹೊರಟುಹೋದ. ಐದು ತಲೆಂತು ಪಡೆದ ಸೇವಕ ಒಡನೇ ಹೋಗಿ ಆ ಮೊತ್ತದಿಂದ ವ್ಯಾಪಾರಮಾಡಿ ಇನ್ನೂ ಐದನ್ನು ಸಂಪಾದಿಸಿದ. ಎರಡು ಪಡೆದವನೂ ಹಾಗೆಯೇ ಮಾಡಿ ಇನ್ನೂ ಎರಡನ್ನು ಸಂಪಾದಿಸಿದ. ಒಂದು ತಲೆಂತು ಪಡೆದವನು ಮಾತ್ರ, ಅದನ್ನು ತೆಗೆದುಕೊಂಡು ಹೋಗಿ ಭೂಮಿ ಅಗೆದು, ಅದರಲ್ಲಿ ತನ್ನ ಧಣಿಯ ಆ ಹಣವನ್ನು ಹೂತಿಟ್ಟ. ಬಹಳ ಕಾಲವಾದ ಬಳಿಕ ಆ ದಣಿ ಹಿಂದಿರುಗಿ ಬಂದ. ಸೇವಕರಿಂದ ಲೆಕ್ಕಚಾರ ಕೇಳಿದ. ಐದು ತಲೆಂತು ಪಡೆದವನು ಇನ್ನೂ ಐದು ತಲೆಂತುಗಳನ್ನು ಮುಂದೆ ತಂದು, "ಒಡೆಯಾ, ನೀವು ನನ್ನ ವಶಕ್ಕೆ ಐದು ತಲೆಂತು ಒಪ್ಪಿಸಿದಿರಿ. ಇಗೋ ನೋಡಿ, ಮತ್ತೆ ಐದು ತಲೆಂತು ಸಂಪಾಸಿದ್ದೇನೆ." ಎಂದ. ಅದಕ್ಕೆ ಆ ಧಣಿ, "ಭಲಾ, ನೆಚ್ಚಿನ ಸೇವಕ, ನೀನು ಪ್ರಾಮಾಣಿಕ. ಈ ಚಿಕ್ಕ ಕಾರ್ಯದಲ್ಲಿ ಪ್ರಾಮಾಣಿಕನಾಗಿದ್ದ ನಿನಗೆ ದೊಡ್ಡ ಜವಾಬ್ದಾರಿಯನ್ನೇ ವಹಿಸುತ್ತೇನೆ. ಬಾ, ನಿನ್ನ ಧಣಿಯ ಸೌಭಾಗ್ಯದಲ್ಲಿ ಭಾಗಿಯಾಗು," ಎಂದ. ಎರಡು ತಲೆಂತು ಪಡೆದಿದ್ದವನೂ ಮಂದೆ ಬಂದು, "ಒಡೆಯಾ, ನೀವು ನನ್ನ ವಶಕ್ಕೆ ಎರಡು ತಲೆಂತುಗಳನ್ನು ಒಪ್ಪಿಸಿದಿರಿ.  ಇಗೋ ನೋಡಿ, ಇನ್ನೂ ಎರಡು ತಲೆಂತುಗಳನ್ನು ಸಂಪಾದಿಸಿದ್ದೇನೆ," ಎಂದ. ಧಣಿ ಅವನಿಗೂ, "ಭಲಾ, ನೆಚ್ಚಿನ ಸೇವಕ, ನೀನು ಪ್ರಾಮಾಣಿಕ. ಈ ಚಿಕ್ಕ ಕಾರ್ಯದಲ್ಲಿ ಪ್ರಾಮಾಣಿಕನಾದ ನಿನಗೂ ದೊಡ್ಡ ಜವಾಬ್ದಾರಿಯನ್ನೇ ವಹಿಸುತ್ತೇನೆ.  ಬಾ, ನಿನ್ನ ಧಣಿಯ ಸೌಭಾಗ್ಯದಲ್ಲಿ ನೀನೂ ಭಾಗಿಯಾಗು," ಎಂದ. ತರುವಾಯ ಒಂದು ತಲೆಂತು ಪಡೆದವನೂ ಮುಂದೆ ಬಂದ: 'ಒಡೆಯಾ, ನಿಮ್ಮ ಮನಸ್ಸು ಕಠಿಣ ಎಂಬುದನ್ನು ನಾನು ಬಲ್ಲೆ. ನೀವು ಬಿತ್ತದ ಎಡೆಯಲ್ಲಿ ಕೊಯ್ಲು ಮಾಡುವವರು; ನೀವು ತೂರದ ಎಡೆಯಲ್ಲಿ ರಾಶಿಮಾಡುವವರು; ಆದ್ದರಿಂದ ನಾನು ಭಯಪಟ್ಟೆ; ಹೋಗಿ ನಿಮ್ಮ ತಲೆಂತನ್ನು ಭೂಮಿಯಲ್ಲಿ  ಹೂತಿಟ್ಟೆ. ಇಗೋ, ಸ್ವೀಕರಿಸಿ, ನಿಮ್ಮದು ನಿಮಗೆ ಸಂದಿದೆ," ಎಂದ. "ಆಗ ಧಣಿ ಅವನಿಗೆ, "ಎಲವೋ ಮೈಗಳ್ಳನಾದ ದುಷ್ಟ ಸೇವಕ, ನಾನು ಬಿತ್ತದ ಎಡೆಯಲ್ಲಿ ಕೊಯ್ಲು ಮಾಡುವವನು; ನಾನು ತೂರದ ಎಡೆಯಲ್ಲಿ ರಾಶಿ ಮಾಡುವವನು  ಎಂದು ನಿನಗೆ ಗೊತ್ತಿಲ್ಲವೆ? ಹಾಗಾದರೆ ನನ್ನ ಹಣವನ್ನು ನೀನು ಬಡ್ಡಿ ಅಂಗಡಿಯಲ್ಲಿ ಹಾಕಿಡಬೇಕಿತ್ತು; ನಾನು ಬಂದು ಬಡ್ಡಿ ಸಮೇತ ನನ್ನ ಅಸಲನ್ನು ಪಡೆಯುತ್ತಿದ್ದೆ", ಎಂದ. ಆನಂತರ ಪರಿಚಾರಕರಿಗೆ, "ಇವನಿಂದ ಆ ತಲೆಂತು ನಾಣ್ಯವನ್ನು ಕಿತ್ತು ಹತ್ತು ತಲೆಂತು ಇರುವವನಿಗೆ ಕೊಡಿ. ಉಳ್ಳ ಪ್ರತಿಯೊಬ್ಬನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ. ಅವನು ಸಮೃದ್ಧನಾಗುತ್ತಾನೆ. ಇಲ್ಲದವನಿಂದ ಇರುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ. ಅಪ್ರಯೋಜಕನಾದ ಈ ಸೇವಕನನ್ನು ಹೊರಗಿನ ಕಗ್ಗತ್ತಲೆಗೆ ದಬ್ಬಿರಿ. ಅಲ್ಲಿ ಕಟಕಟನೆ ಹಲ್ಲುಕಡಿದುಕೊಂಡು ಗೋಳಿಡಬೇಕಾಗುವುದು," ಎಂದು ಹೇಳಿದ.

30.08.0219 - "ಆ ದಿನವಾಗಲಿ, ಆ ಗಳಿಗೆಯಾಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು"

ಮೊದಲನೇ ವಾಚನ: 1 ಥೆಸಲೋನಿಯರಿಗೆ 4:1-8

ಸಹೋದರರೇ, ನೀವು ಹೇಗೆ ಬಾಳಬೇಕು, ದೇವರು ಮೆಚ್ಚುವಂತೆ ಹೇಗೆ ನಡೆದುಕೊಳ್ಳಬೇಕು, ಎಂಬುದನ್ನು ನಮ್ಮಿಂದ ಕಲಿತುಕೊಂಡಿರಿ. ಅಂತೆಯೇ ಜೀವಿಸುತ್ತಿದ್ದೀರಿ. ನಿಮ್ಮ ನಡತೆ ಇನ್ನೂ ಉತ್ತಮಗೊಳ್ಳಬೇಕೆಂದು ಪ್ರಭು ಯೇಸುವಿನ ಹೆಸರಿನಲ್ಲಿ ನಾವು ನಿಮ್ಮನ್ನು ಕೇಳಿಕೊಳ್ಳುತ್ತೇವೆ. ಹಾಗೂ ಪ್ರಬೋಧಿಸುತ್ತೇವೆ. ಪ್ರಭು ಯೇಸುವಿನ ಅಧಿಕಾರದಿಂದ ನಾವು ನಿಮಗೆ ವಿಧಿಸಿದ ನಿಯಮಗಳನ್ನು ನೀವು ಬಲ್ಲಿರಿ. ನೀವು ಕೆಟ್ಟ ನಡತೆಯನ್ನು ಬಿಟ್ಟು ಪರಿಶುದ್ಧರಾಗಿ ಜೀವಿಸಬೇಕು ಎಂಬುದು ದೇವರ ಚಿತ್ತ. ನಿಮ್ಮಲ್ಲಿ  ಪ್ರತಿಯೊಬ್ಬನೂ ತನ್ನ ಪತ್ನಿಯನ್ನು ಘನತೆ, ಗೌರವದಿಂದಲೂ ಶುದ್ಧ ಮನಸ್ಸಿನಿಂದಲೂ ನಡೆಸಿಕೊಳ್ಳಬೇಕು. ದೇವರ ಅರಿವೇ ಇಲ್ಲದ ಅನ್ಯ ಜನರಂತೆ ಕಾಮಾತಿರೇಕದಿಂದ ವರ್ತಿಸಬಾರದು. ಈ ವಿಷಯದಲ್ಲಿ ಯಾರೂ ತನ್ನ ಸಹೋದರನನ್ನು ವಂಚಿಸಿ ಅತಿಕ್ರಮಿಸದಿರಲಿ. ಹೀಗೆ ವರ್ತಿಸುವವರು ಪ್ರಭುವಿನ ಪ್ರತೀಕಾರಕ್ಕೆ ಒಳಗಾಗುವರೆಂದು ನಾವು ನಿಮಗೆ ಮುನ್ನೆಚ್ಚರಿಕೆ ಕೊಟ್ಟಿದ್ದೇವೆ. ದೇವರು ನಮ್ಮನ್ನು ಕರೆದಿರುವುದು ಅಶುದ್ಧ ನಡತೆಗಲ್ಲ, ಪರಿಶುದ್ಧ ನಡತೆಗೆ. ಅಂದಮೇಲೆ, ಈ ಬೋಧನೆಯನ್ನು ತಿರಸ್ಕರಿಸುವವನು ಮನುಷ್ಯನನ್ನು ಮಾತ್ರವಲ್ಲ, ನಿಮಗೆ ಪವಿತ್ರಾತ್ಮರನ್ನು ಪ್ರದಾನ ಮಾಡಿರುವ ದೇವರನ್ನೇ ತಿರಸ್ಕರಿಸುತ್ತಾನೆ.

ಕೀರ್ತನೆ: 97:1, 2, 5-6, 10, 11-12

ಶ್ಲೋಕ: ಸಜ್ಜನರೇ, ಪ್ರಭುವಿನಲಿ ಆನಂದಿಸಿರಿ

ಶುಭಸಂದೇಶ: ಮತ್ತಾಯ 25:1-13


ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು:  "ಆ ದಿನಗಳಲ್ಲಿ ಸ್ವರ್ಗ ಸಾಮ್ರಾಜ್ಯ ಹೇಗಿರುವುದು ಎನ್ನುವುದಕ್ಕೆ ಈ ಸಾಮತಿಯನ್ನು ಕೊಡಬಹುದು: ಹತ್ತು ಮಂದಿ ಕನ್ಯೆಯರು ದೀಪಾರತಿ ಹಿಡಿದು ಮದುವಣಿಗನನ್ನು ಎದುರುಗೊಳ್ಳಲು ಹೋದರು. ಅವರಲ್ಲಿ ಐವರು ವಿವೇಕಿಗಳು, ಐವರು ಅವಿವೇಕಿಗಳು, ಅವಿವೇಕಿಗಳು ದೀಪಗಳನ್ನು ತೆಗೆದುಕೊಂಡರೇ  ಹೊರತು ಜೊತೆಗೆ ಎಣ್ಣೆಯನ್ನು ತೆಗೆದುಕೊಳ್ಳಲಿಲ್ಲ. ವಿವೇಕಿಗಳಾದರೋ ದೀಪಗಳ ಜೊತೆಗೆ ಬುಡ್ಡಿಗಳಲ್ಲಿ ಎಣ್ಣೆಯನ್ನೂ ತೆಗೆದುಕೊಂಡರು. ಮದುವಣಿಗ ಬರುವುದು ತಡವಾಯಿತು. ಅವರೆಲ್ಲರೂ ತೂಕಡಿಸುತ್ತಾ ಹಾಗೇ ನಿದ್ರೆ ಹೋದರು. ನಡುರಾತ್ರಿಯ ವೇಳೆ, "ಇಗೋ,  ಮದುವಣಿಗ ಬರುತ್ತಿದ್ದಾನೆ; ಬನ್ನಿ, ಆತನನ್ನು ಎದುರುಗೊಳ್ಳಿ," ಎಂಬ ಕೂಗು ಕೇಳಿಸಿತು. ಕನ್ಯೆಯರೆಲ್ಲರೂ ಎದ್ದರು. ತಮ್ಮ ತಮ್ಮ ದೀಪದ ಬುತ್ತಿಯನ್ನು ಸರಿಮಾಡಿದರು. ಅವಿವೇಕಿಗಳು, "ನಮ್ಮ ದೀಪಗಳು ಆರಿಹೋಗುತ್ತಾ ಇವೆ; ನಿಮ್ಮ ಎಣ್ಣೆಯಲ್ಲಿ ನಮಗೂ ಕೊಂಚ ಕೊಡಿ," ಎಂದು ವಿವೇಕಿಗಳನ್ನು ಕೇಳಿಕೊಂಡರು. ಅದಕ್ಕೆ ಅವರು, "ನಿಮಗೆ ಕೊಟ್ಟರೆ ನಮಗೂ ನಿಮಗೂ ಸಾಲದೆ ಹೋದೀತು. ನೀವು ಅಂಗಡಿಗೆ ಹೋಗಿ ಕೊಂಡುಕೊಂಡರೆ ಒಳ್ಳೆಯದು," ಎಂದರು. ಅಂತೆಯೇ ಅವರು ಎಣ್ಣೆಯನ್ನು ಕೊಂಡುಕೊಳ್ಳಲು ಹೋದಾಗ ಮದುವಣಿಗನು ಬಂದೇ ಬಿಟ್ಟನು. ಸಿದ್ಧರಾಗಿದ್ದವರು ಅವನ ಸಂಗಡ ವಿವಾಹ ಮಹೋತ್ಸವಕ್ಕೆ ಹೋದರು. ಕಲ್ಯಾಣಮಂಟಪದ ಬಾಗಿಲುಗಳನ್ನು ಮುಚ್ಚಲಾಯಿತು. ಉಳಿದ ಕನ್ಯೆಯರು ಆನಂತರ ಬಂದರು. "ಸ್ವಾಮೀ, ಸ್ವಾಮೀ, ನಮಗೆ ಬಾಗಿಲು ತೆರೆಯಿರಿ," ಎಂದು ಕೂಗಿಕೊಂಡರು. ಅದಕ್ಕೆ ಉತ್ತರವಾಗಿ ಆ ಮದುವಣಿಗ, "ಅದಾಗದು, ನೀವು ಯಾರೋ ನನಗೆ ಗೊತ್ತಿಲ್ಲ," ಎಂದುಬಿಟ್ಟ. ಆದ್ದರಿಂದ ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆಯಾಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು.

29.08.2019 - "ನಾನು ಆಜ್ಞಾಪಿಸುವುದನ್ನೆಲ್ಲ ಅವರಿಗೆ ತಿಳಿಸು, ಅವರಿಗೆ ಹೆದರಬೇಡ"

ಮೊದಲನೇ ವಾಚನ: ಯೆರೆಮೀಯ 1: 17-29

ಸರ್ವೇಶ್ವರಸ್ವಾಮಿ ನನಗೆ ಹೀಗೆಂದರು: ನೀನು ಎದ್ದು ನಡುಕಟ್ಟಿಕೊ, ನಾನು ಆಜ್ಞಾಪಿಸುವುದನ್ನೆಲ್ಲ ಅವರಿಗೆ ತಿಳಿಸು, ಅವರಿಗೆ ಹೆದರಬೇಡ; ಹೆದರಿದರೆ ನಾನೂ ನಿನ್ನನ್ನು ಅವರ ಮುಂದೆ ಹೆದರಿಸುವೆನು. ನಾನು ಹೇಳುವುದನ್ನು ಗಮನದಿಂದ ಕೇಳು - ಈದಿನ ನಿನ್ನನ್ನು ಜುದೇಯದ ಅರಸರು, ಅಧಿಪತಿಗಳು, ಯಾಜಕರು, ಜನ ಸಾಮಾನ್ಯರು, ಹೀಗೆ ನಾಡಿನವರೆಲ್ಲರನ್ನು ಎದುರಿಸತಕ್ಕವನ್ನಾಗಿ ಮಾಡಿದ್ದೇನೆ; ಕೋಟೆ ಕೊತ್ತಲಗಳಿಂದ ಸುಸಜ್ಜಿತ ನಗರವನ್ನಾಗಿಯೂ ಕಬ್ಬಿಣದ ಕಂಬವನ್ನಾಗಿಯೂ ತಾಮ್ರದ ಪೌಳಿಗೋಡೆಯನ್ನಾಗಿಯೂ ನಿನ್ನನ್ನು ಕಾಪಾಡಲು ನಾನೇ ನಿನ್ನೊಂದಿಗಿರುವೆನು. ಇದು ಸರ್ವೇಶ್ವರನಾದ ನನ್ನ ನುಡಿ."


ಕೀರ್ತನೆ: 71:1-2, 3-4, 5-6, 15, 17

ಶ್ಲೋಕ: ವರ್ಣಿಸುವೆನು ದಿನವೆಲ್ಲ ನಿನ್ನ ನ್ಯಾಯನೀತಿಯನ್ನು

ಶುಭಸಂದೇಶ: ಮಾರ್ಕ 6:17-29

ಹೆರೋದನು ತಾನು ಇಟ್ಟುಕೊಂಡಿದ್ದ ಹೆರೋದಿಯಳ ನಿಮಿತ್ತಯೊವಾನ್ನನನ್ನು ಸೆರೆಹಿಡಿಸಿ ಬಂಧನದಲ್ಲಿರಿಸಿದ್ದನು. ಹೆರೋದಿಯಳು ಹೆರೋದನ ಸಹೋದರ ಫಿಲಿಪ್ಪನ ಧರ್ಮಪತ್ನಿ. ಆದರೂ ಹೆರೋದನು ಆಕೆಯನ್ನು ಹೆಂಡತಿಯಾಗಿ ಇಟ್ಟುಕೊಂಡಿದ್ದನು. ಈ ಕಾರಣ ಯೊವಾನ್ನನು , "ನಿನ್ನ ಸಹೋದರನ ಪತ್ನಿಯನ್ನು ನೀನು ಇಟ್ಟುಕೊಂಡಿರುವುದು ನ್ಯಾಯವಲ್ಲ," ಎಂದು ಪದೇಪದೇ ಅವನನ್ನು ಎಚ್ಚರಿಸುತ್ತಿದ್ದನು. ಇದರ ನಿಮಿತ್ತ ಹೆರೋದಿಯಳು ಯೊವಾನ್ನನ ಮೇಲೆ ಹಗೆಯಿಟ್ಟು ಆತನನ್ನು ಕೊಲ್ಲಿಸಬೇಕು ಎಂದಿದ್ದಳು. ಆದರೆ ತನ್ನ ಸೇಡನ್ನು ತೀರಿಸಿಕೊಳ್ಳಲು ಅವಳಿಂದಾಗಿರಲಿಲ್ಲ. ಏಕೆಂದರೆ, ಯೊವಾನ್ನನು ಸಂತನು ಹಾಗೂ ಸತ್ಪುರುಷನು ಎಂದು ಹೆರೋದನು ಅರಿತು, ಆತನಿಗೆ ಭಯಪಟ್ಟು ಯಾವ ಅಪಾಯವು ಆತನಿಗೆ ಬಾರದಂತೆ ನೋಡಡಿಕೊಳ್ಳುತ್ತಿದ್ದನು. ಯೊವಾನ್ನನು ಹೇಳುತ್ತಿದ್ದ ಮಾತುಗಳನ್ನು ಕೇಳಿದಾಗಲೆಲ್ಲಾ ಹೆರೋದನ ಮನಸ್ಸು ಅಲ್ಲೋಲ ಕಲ್ಲೋಲವಾಗುತ್ತಿತ್ತು. ಆದರೂ ಆತನ ಮಾತುಗಳನ್ನು ಕಿವಿಗೊಟ್ಟು ಕೇಳುತ್ತಿದ್ದನು. ಕಡೆಗೊಮ್ಮೆ, ಹೆರೋದಿಯಳಿಗೆ ಅನುಕೂಲವಾದ ಸಂದರ್ಭ ಒದಗಿತು. ಹೆರೋದನು ತನ್ನ ಹುಟ್ಟುಹಬ್ಬದ ದಿನಾಚರಣೆಯಂದು, ಆಸ್ಥಾನಿಕರಿಗೂ ಸೇನಾಧಿಪತಿಗಳಿಗೂ ಗಲಿಲೇಯ ಪ್ರಾಂತ್ಯದ ಪ್ರಮುಖರಿಗೂ ಔತಣಕೂಟವನ್ನು ಏರ್ಪಡಿಸಿದನು. ಆ ಸಮಾರಂಭದಲ್ಲಿ ಹೆರೋದಿಯಳ ಮಗಳು ಔತಣಶಾಲೆಗೆ ಬಂದು ನರ್ತನ ಮಾಡಿದಳು. ಹೆರೋದನೂ ಅವನ ಜೊತೆಯಲ್ಲಿ ಭೋಜನಕ್ಕೆ ಕುಳಿತ್ತಿದ್ದ ಅತಿಥಿಗಳೂ ಅದನ್ನು ಬಹಳವಾಗಿ ಮೆಚ್ಚಿಕೊಂಡರು. ಆಗ ಅರಸ ಹೆರೋದನು ಅವಳಿಗೆ, "ನಿನಗೆ ಏನು ಬೇಕಾದರೂ ಕೇಳು, ಕೊಡುತ್ತೇನೆ" ಎಂದನು. "ನೀನು ಏನು ಕೇಳಿಕೊಂಡರೂ ಸರಿ, ನನ್ನ ರಾಜ್ಯದಲ್ಲಿ ಅರ್ಧವನ್ನು ಕೇಳಿಕೊಂಡರೂ ಅದನ್ನು ನಿನಗೆ ಕೊಡುತ್ತೇನೆ" ಎಂದು ಪ್ರಮಾಣ ಮಾಡಿದನು. ಅವಳು ತನ್ನ ತಾಯಿಯ ಬಳಿಗೆ ಹೋಗಿ, "ಅಮ್ಮಾ, ನಾನು ಏನನ್ನು ಕೇಳಿಕೊಳ್ಳಲಿ?" ಎಃದು ವಿಚಾರಿಸಿದಳು. "ಸ್ನಾನಿಕ ಯೊವಾನ್ನನ ತಲೆಯನ್ನು ಕೇಳು," ಎಂದು ಆಕೆ ಮಗಳನ್ನು ಪ್ರೇರೇಪಿಸಿದಳು. ಕೂಡಲೆ ಅವಳು ಅರಸನ ಬಳಿಗೆ ಧಾವಿಸಿ, "ಸ್ನಾನಿಕ ಯೊವಾನ್ನನ ತಲೆಯನ್ನು ಇದೀಗಲೆ ಒಂದು ತಟ್ಟೆಯಲ್ಲಿ ತರಿಸಿಕೊಡಿ; ಇದೇ ನನ್ನ ಬೇಡಿಕೆ, "ಎಂದು ಕೇಳಿಕೊಂಡಳು. ಅರಸನಿಗೆ ಅತೀವ ದುಃಖವಾಯಿತು. ಆದರೂ ಅತಿಥಿಗಳೆಲ್ಲರ ಮುಂದೆ ತಾನು ಮಾಡಿದ ಪ್ರಮಾಣದ ನಿಮಿತ್ತ ಅವಳ ಕೋರಿಕೆಯನ್ನು ನಿರಾಕರಿಸಲಾಗಲಿಲ್ಲ. ಆದುದರಿಂದ ಅವನು ಒಬ್ಬ ಪಹರೆಯವನನ್ನು ಕರೆದು, ಕೂಡಲೇ ಯೊವಾನ್ನನ ತಲೆಯನ್ನು ತರಬೇಕೆಂದು ಅವನಿಗೆ ಆಜ್ಞೆ ಮಾಡಿ ಕಳುಹಿಸಿದನು. ಪಹರೆಯವನು ಸೆರೆಮನೆಗೆ ಹೋಗಿ ಯೊವಾನ್ನನ ತಲೆಯನ್ನು ಕತ್ತರಿಸಿ, ಅದನ್ನು ತಟ್ಟೆಯಲ್ಲಿ ಇಟ್ಟು ಹುಡುಗಿಗೆ ತಂದುಕೊಟ್ಟನು.  ಅವಳು ಅದನ್ನು ತನ್ನ ತಾಯಿಗೆ ಕೊಟ್ಟಳು. ಇದನ್ನು ಕೇಳಿದ ಯೊವಾನ್ನನ ಶಿಷ್ಯರು ಅಲ್ಲಿಗೆ ಬಂದು ಶವವನ್ನು ತೆಗೆದುಕೊಂಡು ಹೋಗಿ ಸಮಾಧಿ ಮಾಡಿದರು.

28.08.2019 - "ಹೊರ ನೋಟಕ್ಕೇನೋ ಅವು ಥಳಕಾಗಿವೆ. ಒಳಗೋ ಸತ್ತವರ ಮೂಳೆಗಳಿಂದಲೂ ಕೊಳಕಿನಿಂದಲೂ ತುಂಬಿವೆ"

ಮೊದಲನೇ ವಾಚನ: 1 ಥೆಸಲೋನಿಯರಿಗೆ 2:9-13

ಸಹೋದರರೇ, ನಮ್ಮ ಶ್ರಮ ಹಾಗೂ ದುಡಿಮೆಗಳನ್ನು ನೀವು ಮರೆಯುವಂತಿಲ್ಲ. ನಿಮ್ಮಲ್ಲಿ ಯಾರಿಗೂ ನಾವು ಹೊರೆಯಾಗಬಾರದೆಂದು, ಬದುಕಿಗಾಗಿ ಹಗಲಿರುಳೂ ದುಡಿಯುತ್ತಾ ದೇವರ ಶುಭಸಂದೇಶವನ್ನು ಸಾರಿದೆವು. ವಿಶ್ವಾಸಿಗಳಾದ ನಮ್ಮ ನಡುವೆ ನಾವು ಎಷ್ಟು ಶುದ್ಧರಾಗಿ, ನೀತಿವಂತರಾಗಿ,  ನಿರ್ದೋಷಿಗಳಾಗಿ ನಡೆದುಕೊಂಡೆವು ಎಂಬುವುದಕ್ಕೆ ನೀವೇ ಸಾಕ್ಷಿಗಳು. ಮಾತ್ರವಲ್ಲದೆ ದೇವರೂ ಸಾಕ್ಷಿಯೇ. ತಂದೆ ಮಕ್ಕಳನ್ನು ಕಾಣುವಂತೆ ನಾವು ಪ್ರತಿಯೊಬ್ಬನನ್ನೂ ಆದರದಿಂದ ಕಂಡೆವು; ಬುದ್ಧಿ ಹೇಳಿದೆವು. ಪ್ರೊತ್ಸಾಹಿಸಿದೆವು. ತಮ್ಮ ರಾಜ್ಯ ಹಾಗೂ ವೈಭವದಲ್ಲಿ ಭಾಗವಹಿಸಲು ಕರೆಯಿತ್ತ ದೇವರು ಮೆಚ್ಚುವಂತೆ ಬಾಳಬೇಕೆಂದು ನಿಮಗೆ ವಿಧಿಸಿದೆವು; ಇದೆಲ್ಲಾ ನಿಮಗೆ ತಿಳಿದಿದೆ. ಇನ್ನೊಂದು ಕಾರಣಕ್ಕಾಗಿಯೂ ನಾವು ಸತತವೂ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ನೀವು ದೇವರ ಸಂದೇಶವನ್ನು ನಮ್ಮಿಂದ ಕೇಳಿದಾಗ, ಅದನ್ನು ಮನುಷ್ಯರ ಮಾತುಗಳೆಂದು ಪರಿಗಣಿಸದೆ, ದೇವರ ವಾಕ್ಯವೆಂದೇ ಅರಿತು ಅಂಗೀಕರಿಸಿದಿರಿ. ವಿಶ್ವಾಸಿಗಳಾದ ನಿಮ್ಮಲ್ಲಿ ಚೈತನ್ಯಪೂರ್ಣವಾಗಿರುವ ಈ ವಾಕ್ಯವು, ನಿಜವಾಗಿಯೂ ದೇವರ ಸಂದೇಶವೇ ಸರಿ.

ಕೀರ್ತನೆ: 139:7-8, 9-10, 11-12

ಶ್ಲೋಕ: ಪ್ರಭೂ, ಪರಿಶೋಧಿಸಿರುವೆ ನೀ ನನ್ನನು, ಅರಿತುಕೊಂಡಿರುವೆ ಅಂತರಂಗವನು

ಶುಭಸಂದೇಶ: ಮತ್ತಾಯ 23:27-32

ಯೇಸು,  ವೇದಪಾರಗರನ್ನೂ ಫರಿಸಾಯರನ್ನೂ ಉದ್ದೇಶಿಸಿ ಹೀಗೆಂದರು. "ಕಪಟ ಧರ್ಮಶಾಸ್ತ್ರಿಗಳೇ ಮತ್ತು ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ಸುಣ್ಣ ಬಳಿದ ಸಮಾಧಿಗಳು. ಹೊರ ನೋಟಕ್ಕೇನೋ ಅವು ಥಳಕಾಗಿವೆ. ಒಳಗೋ  ಸತ್ತವರ ಮೂಳೆಗಳಿಂದಲೂ ಕೊಳಕಿನಿಂದಲೂ ತುಂಬಿವೆ.  ಬಹಿರಂಗ ನೋಟಕ್ಕೆ ನೀವು ಸತ್ಪುರುಷರು. ಅಂತರಂಗದಲ್ಲಾದರೋ ಕಪಟ, ಕಲ್ಮಷಗಳಿಂದ ತುಂಬಿದವರು. ಕಪಟ ಧರ್ಮಶಾಸ್ತ್ರಿಗಳೇ ಮತ್ತು ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ಪ್ರವಾದಿಗಳಿಗೆ ಗೋರಿಗಳನ್ನು ಕಟ್ಟಿಸುತ್ತೀರಿ. ಸತ್ಪುರುಷರ ಸ್ಮಾರಕಗಳನ್ನು ಶೃಂಗರಿಸುತ್ತೀರಿ. "ನಮ್ಮ ಪೂರ್ವಜರ ಕಾಲದಲ್ಲಿ ನಾವು ಇದ್ದಿದ್ದರೆ ಪ್ರವಾದಿಗಳ ರಕ್ತಪಾತದಲ್ಲಿ ಭಾಗಿಗಳಾಗುತ್ತಿರಲಿಲ್ಲ" ಎಂದುಕೊಳ್ಳುತ್ತೀರಿ. ಹೀಗೆ ಪ್ರವಾದಿಗಳನ್ನು ಕೊಲೆಮಾಡಿದವರ ಪೀಳಿಗೆಗೆ ನೀವು ಸೇರಿದವರು ಎಂದು ನೀವೇ ಸಾಕ್ಷಿ ಕೊಡುತ್ತೀರಿ. ಒಳ್ಳೆಯದು, ನಿಮ್ಮ ಪೂರ್ವಜರು ಪ್ರಾರಂಭಿಸಿದ್ದನ್ನು ನೀವು ಹೋಗಿ ಪೂರ್ಣಗೊಳಿಸಿರಿ."

27.08.2019 - "ಮೊತ್ತ ಮೊದಲು ತಟ್ಟೆ ಲೋಟಗಳ ಒಳಭಾಗವನ್ನು ತೊಳೆ, ಆಗ ಅವುಗಳ ಹೊರ ಭಾಗವೂ ಶುಚಿಯಾಗುವುದು"

ಮೊದಲನೇ ವಾಚನ: 1 ಥೆಸೆಲೋನಿಯರಿಗೆ 2:1-8

ಸಹೋದರರೇ ನಾವು ನಿಮ್ಮಲ್ಲಿಗೆ ಬಂದುದು ವ್ಯರ್ಥವಾಗಲಿಲ್ಲವೆಂಬುದು ನಿಮಗೆ ಗೊತ್ತು. ನಿಮಗೆ ತಿಳಿದಿರುವಂತೆ ನಾವು ನಿಮ್ಮಲ್ಲಿಗೆ ಬರುವ ಮೊದಲೇ ಫಿಲಿಪ್ಪಿ ಪಟ್ಟಣದಲ್ಲಿ ಹಿಂಸೆ, ಅವಮಾನಗಳನ್ನು ಸಹಿಸಿದೆವು. ತೀವ್ರವಾದ ವಿರೋಧವಿದ್ದರೂ ದೇವರ ನೆರವಿನಿಂದ ನಿರ್ಭೀತರಾಗಿ ಶುಭಸಂದೇಶವನ್ನು ನಿಮಗೆ ಸಾರಿದೆವು. ನಮ್ಮ ಬೋಧನೆಯಾದರೋ ದುರುದ್ದೇಶದಿಂದ ಕೂಡಿದುದಲ್ಲ; ಅಶುದ್ಧ ಅಥವಾ ಕಪಟ ಮನಸ್ಸಿನಂದ ಮೂಡಿದುದೂ ಅಲ್ಲ. ಶುಭಸಂದೇಶವನ್ನು ಸಾರಲು ನಾವು ಯೋಗ್ಯರೆಂದೆಣಿಸಿ, ದೇವರೇ ಈ ಹೊಣೆಯನ್ನು ನಮಗೆ ವಹಿಸಿಕೊಟ್ಟಿದ್ದಾರೆ. ಎಂತಲೇ, ನಾವು ಮನುಷ್ಯರನ್ನು ಮೆಚ್ಚಿಸುವುದಕ್ಕಾಗಿ ಅಲ್ಲ, ಅಂತರಂಗವನ್ನು ಪರಿಶೋಧಿಸುವ ದೇವರನ್ನು ಮೆಚ್ಚಿಸುವುದಕ್ಕಾಗಿ ಈ ಕಾರ್ಯವನ್ನು ನಿರ್ವಹಿಸುತ್ತೇವೆ. ನಿಮಗೆ ತಿಳಿದಿರುವ ಪ್ರಕಾರ ನಾವು ಎಂದಿಗೂ ಮುಖಸ್ತುತಿಗಾಗಿ ಮಾತಾಡುವವರಲ್ಲ, ಧನದಾಶೆಯನ್ನು ಮರೆಮಾಚುವ ವೇಷಧಾರಿಗಳೂ ಅಲ್ಲ. ಇದಕ್ಕೆ ದೇವರೇ ಸಾಕ್ಷಿ. ಕ್ರಿಸ್ತ ಯೇಸುವಿನ ಪ್ರೆಷಿತರಾದ ನಾವು ಜನರಿಂದ ಮರ್ಯಾದೆ, ಗೌರವಗಳನ್ನು ಗಳಿಸಬಹುದಾಗಿದ್ದರೂ ನಿಮ್ಮಿಂದಾಗಲಿ, ಇತರರಿಂದಾಗಲಿ ಅವನ್ನು ನಾವು ಬಯಸಲಿಲ್ಲ. ತಾಯಿ ತನ್ನ ಮಕ್ಕಳನ್ನು ಸಾಕಿ ಸಲಹುವಂತೆಯೇ, ನಾವು ನಿಮ್ಮನ್ನು ವಾತ್ಸಲ್ಯದಿಂದ ಕಂಡೆವು. ನೀವು ನಮಗೆ ಇಷ್ಟು ಪ್ರಿಯರಾದ ಕಾರಣ ದೇವರ ಶುಭಸಂದೇಶವನ್ನು ಸಾರುವುದಕ್ಕೆ ಮಾತ್ರವಲ್ಲ ನಿಮಗಾಗಿ ನಮ್ಮ ಪ್ರಾಣವನ್ನು ನೀಡುವುದಕ್ಕೂ ಸಿದ್ಧರಾಗಿದ್ದೆವು.

ಕೀರ್ತನೆ: 139:1-3, 4-6

ಶ್ಲೋಕ; ಪ್ರಭೂ, ಪರಿಶೋಧಿಸಿರುವೆ ಅಂತರಂಗವನು

ಶುಭಸಂದೇಶ: ಮತ್ತಾಯ 23-26

ಯೇಸುಸ್ವಾಮಿ ತಮ್ಮ ಶಿಷ್ಯರನ್ನೂ ಜನಸಮೂಹವನ್ನೂ ಉದ್ದೇಶಿಸಿ, "ಕಪಟ ಧರ್ಮಶಾಸ್ತ್ರಗಳೇ, ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ಪುದೀನ, ಸದಾಪ, ಜೀರಿಗೆ ಮುಂತಾದುವುಗಳ ದಶಾಂಶವನ್ನು ದೇವರಿಗೆ ಸಲ್ಲಿಸುತ್ತೀರಿ. ಆದರೆ ಧರ್ಮಶಾಸ್ತ್ರದಲ್ಲಿ ಪ್ರಮುಖವಾದ ನ್ಯಾಯನೀತಿ, ದಯೆದಾಕ್ಷಿಣ್ಯ, ಪ್ರಾಮಾಣಿಕತೆ ಇವುಗಳನ್ನು ಬದಿಗೊತ್ತಿದ್ದೀರಿ. ನೀವು ಅವುಗಳನ್ನು ಅಲಕ್ಷ್ಯ ಮಾಡಬೇಕೆಂದು ಅಲ್ಲ. ಆದರೆ ಇವುಗಳನ್ನೂ ಅನುಷ್ಠಾನಕ್ಕೆ ತರಲೇಬೇಕಿತ್ತು. ಅಂಧ ನಿರ್ದೇಶಕರೇ, ನೀವು ಸಸೊಳ್ಳೆಯನ್ನೇನೋ ಸೋಸುತ್ತೀರಿ. ಆದರೆ ಒಂಟೆಯನ್ನೇ ನುಂಗಿಬಿಡುತ್ತೀರಿ. ಕಪಟ ಧರ್ಮಶಾಸ್ತ್ರಿಗಳೇ ಮತ್ತು ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ನಿಮ್ಮ ತಟ್ಟೆಲೋಟಗಳ ಹೊರ ಭಾಗಗಳನ್ನೇನೋ ಶುಚಿಮಾಡುತ್ತೀರಿ; ಆದರೆ ಅವುಗಳ ಒಳ ಭಾಗ ಕೊಳೆ ಹಾಗೂ ಲೋಭದ ಗಳಿಕೆಗಳಿಂದ ತುಂಬಿ ಹೋಗಿದೆ. ಕುರುಡ ಫರಿಸಾಯನೇ, ಮೊತ್ತಮೊದಲು ತಟ್ಟೆ ಲೋಟಗಳ ಒಳಭಾಗವನ್ನು ತೊಳೆ, ಆಗ ಅವುಗಳ ಹೊರ ಭಾಗವೂ ಶುಚಿಯಾಗುವುದು," ಎಂದರು.

26.08.19 - ಕಪಟ ಧರ್ಮಶಾಸ್ತ್ರಿಗಳೇ ಮತ್ತು ಫರಿಸಾಯರೇ, ನಿಮಗೆ ಧಿಕ್ಕಾರ!

ಮೊದಲನೇ ವಾಚನ: 1 ಥೆಸಲೋನಿಯರಿಗೆ 1:1-5, 8-10

ಪಿತನಾದ ದೇವರ ಹಾಗೂ ಪ್ರಭುವಾದ ಯೇಸುಕ್ರಿಸ್ತರ ಅನ್ಯೋನ್ಯತೆಯಲ್ಲಿರುವ ಥೆಸೆಲೋನಿಕದ ಸಭೆಯವರಿಗೆ ಪೌಲ,  ಸಿಲ್ವಾನ ಹಾಗೂ ತಿಮೊಥೇಯ ಇವರು ಬರೆಯುವ ಪತ್ರ. ದೈವಾನುಗ್ರಹವೂ ಶಾಂತಿ ಸಮಾಧಾನವೂ ನಿಮಗೆ ಲಭಿಸಲಿ! ನಾವು ಪ್ರಾರ್ಥಿಸುವಾಗಲೆಲ್ಲಾ ನಿಮ್ಮನ್ನು ಸ್ಮರಿಸುತ್ತಾ, ನಿಮ್ಮೆಲ್ಲರಿಗಾಗಿ ದೇವರಿಗೆ ನಿರಂತರ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ವಿಶ್ವಾಸಭರರಿತವಾದ ನಿಮ್ಮ ಕಾರ್ಯವನ್ನೂ ಪ್ರೀತಿಪೂರಿತವಾದ ನಿಮ್ಮ ದುಡಿಮೆಯನ್ನೂ ಪ್ರಭು ಯೇಸುವಿನಲ್ಲಿ ನೀವಿಟ್ಟಿರುವ ಅಚಲ ನಿರೀಕ್ಷೆಯನ್ನೂ ತಂದೆಯಾದ ದೇವರ ಸನ್ನಿಧಿಯಲ್ಲಿ ಜ್ಞಾಪಿಸಿಕೊಳ್ಳುತ್ತೇವೆ. ಸಹೋದರರೇ, ನೀವು ದೇವರಿಗೆ ಪ್ರಿಯರು; ದೇವರಿಂದಲೇ ಆಯ್ಕೆಗೊಂಡವರು ಎಂದು ನಾವು ಬಲ್ಲೆವು. ನಮ್ಮ ಶುಭಸಂದೇಶ ಕೇವಲ ಬಾಯಿ ಮಾತಿನದಲ್ಲ; ಅದು ಶಕ್ತಿಪೂರ್ಣವಾಗಿ ಪವಿತ್ರಾತ್ಮರ ಸಮೇತವಾಗಿ ಪೂರ್ಣ ಪ್ರಮಾಣದಿಂದ ಬಂದದ್ದು. ನಾವು ನಿಮ್ಮ ನಡುವೆಯಿದ್ದಾಗ, ನಿಮಗೋಸ್ಕರ ಹೇಗೆ ವರ್ತಿಸಿದೆವು ಎಂದು ನೀವೇ ಬಲ್ಲಿರಿ. ಪ್ರಭುವಿನ ಶುಭಸಂದೇಶ ನಿಮ್ಮಿಂದಲೇ  ಘೋಷಿತವಾಯಿತು. ದೇವರಲ್ಲಿ ನೀವಿಟ್ಟಿರುವ ವಿಶ್ವಾಸ ಮಕೆದೋನಿಯ ಮತ್ತು ಅಖಾಯದಲ್ಲಿ ಮಾತ್ರವಲ್ಲದೆ ಎಲ್ಲೆಡೆಯಲ್ಲೂ ಪ್ರಸರಿಸಿತು. ಈ ನಿಮ್ಮ ವಿಶ್ವಾಸವನ್ನು ಕುರಿತು ನಾವು ಹೇಳಬೇಕಾದುದು ಏನೂ ಇಲ್ಲ; ಅಲ್ಲಿಯ ಜನರೇ ಹೇಳುತ್ತಾರೆ. ನಾವು ನಿಮ್ಮಲ್ಲಿಗೆ ಬಂದಾಗ, ನೀವು ನಮ್ಮನ್ನು ಹೇಗೆ ಸ್ವಾಗತಿಸಿದಿರಿ; ವಿಗ್ರಹಗಳನ್ನು ತೊರೆದು, ಸತ್ಯ ಹಾಗೂ ಜೀವಸ್ವರೂಪರಾದ ದೇವರ ಕಡೆಗೆ ಹೇಗೆ ಅಭಿಮುಖರಾದಿರಿ; ಸಾವಿನಿಂದ ಜೀವಕ್ಕೆ ಎಬ್ಬಿಸಲಾದ ದೇವರ ಪುತ್ರ ಯೇಸು ಸ್ವರ್ಗದಿಂದ ಪುನರಾಗಮಿಸುವುದನ್ನು ನೀವು ಹೇಗೆ ಎದುರು ನೋಡುತ್ತಿದ್ದೀರಿ,  ಎಂಬುದನ್ನು ಆ ಜನರೇ ಹೇಳುತ್ತಾರೆ. ಈ ಯೇಸುವೇ ಮುಂದೆ ಬರಲಿರುವ ದೈವ ಕೋಪದಿಂದ ನಮ್ಮನ್ನು ಪಾರು ಮಾಡುವವರು.

ಕೀರ್ತನೆ: 149:1-2, 3-4, 5-6, 9

ಶ್ಲೋಕ: ಪ್ರೀತಿಸುತ್ತಾನೆ ಪ್ರಭು ತನ್ನ ಪ್ರಜೆಯನು

ಶುಭಸಂದೇಶ: ಮತ್ತಾಯ 23:13-22


 "ಕಪಟ ಧರ್ಮಶಾಸ್ತ್ರಿಗಳೇ ಮತ್ತು ಫರಿಸಾಯರೇ, ನಿಮಗೆ ಧಿಕ್ಕಾರ! ಸ್ವರ್ಗ ಸಾಮ್ರಾಜ್ಯದ ದ್ವಾರಗಳನ್ನು ಮಾನವರಿಗೆ ಮುಚ್ಚಿದ್ದೀರಿ. ನೀವೂ ಪ್ರವೇಶಿಸುವುದಿಲ್ಲ, ಒಳಕ್ಕೆ ಪ್ರವೇಶಿಸಲು ಯತ್ನಿಸುವವರನ್ನೂ ಬಿಡುವುದಿಲ್ಲ. ಕಪಟ ಧರ್ಮಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಧಿಕ್ಕಾರ! (ವಿಧವೆಯರ ಮನೆಮಾರುಗಳನ್ನು ನೀವು ನುಂಗಿಬಿಡುತ್ತೀರಿ. ನಟನೆಗಾಗಿ ಉದ್ದದ್ದ ಜಪತಪಗಳನ್ನು ಮಾಡುತ್ತೀರಿ, ನೀವು ಅತಿ ಕಠಿಣವಾದ ದಂಡನೆಗೆ ಗುರಿಯಾಗುವಿರಿ.) ಕಪಟ ಧರ್ಮಶಾಸ್ತ್ರಿಗಳೇ ಮತ್ತು ಫರಿಸಾಯರೇ, ನಿಮಗೆ ಧಿಕ್ಕಾರ! ಕೇವಲ ಒಬ್ಬ ವ್ಯಕ್ತಿಯನ್ನು ಮತಾಂತರಿಸಿಕೊಳ್ಳುವುದಕ್ಕಾಗಿ ಜಲ ನೆಲಗಳನ್ನು ಸುತ್ತಿ ಬರುತ್ತೀರಿ. ಮತಾಂತರಗೊಂಡ ಬಳಿಕವಾದರೋ ಅವನು ನಿಮಗಿಂತಲೂ ಇಮ್ಮಡಿ ನರಕಕ್ಕೆ ಗುರಿಯಾಗುವಂತೆ ಮಾಡುತ್ತೀರಿ. "ಕುರುಡ ಮಾರ್ಗದರ್ಶಕರೇ, ನಿಮಗೆ ಧಿಕ್ಕಾರ! ಒಬ್ಬನು ದೇವಾಲಯದ ಮೇಲೆ ಆಣೆಯಿಟ್ಟರೆ ಅವನು ಅದಕ್ಕೇನೂ ಬದ್ಧನಲ್ಲ.  ದೇವಾಲಯದ ಚಿನ್ನದ ಮೇಲೆ ಆಣೆಯಿಟ್ಟರೋ, ಅವನು ಅದನ್ನು ನಡೆಸಿಯೇ ತೀರಬೇಕು ಎನ್ನುತ್ತೀರಿ. ದೃಷ್ಟಿಗೆಟ್ಟ ಮತಿಭ್ರಷ್ಟರೇ, ಯಾವುದು ಶ್ರೇಷ್ಠ? ಚಿನ್ನವೋ, ಚಿನ್ನವನ್ನು ಪಾವನಗೊಳಿಸುವ ದೇವಾಲಯವೋ? ಅಂತೆಯೇ, ಒಬ್ಬನು ಬಲಿಪೀಠದ ಮೇಲೆ ಆಣೆಯಿಟ್ಟರೆ ಅದಕ್ಕೇನೂ ಬದ್ಧನಲ್ಲ. ಬಲಿ ಪೀಠದ ಮೇಲಿರುವ ಕಾಣಿಕೆಗಳ ಮೇಲೆ ಆಣೆಯಿಟ್ಟರೋ, ಅದನ್ನು ಅವನು ನಡೆಸಿಯೇ ತೀರಬೇಕು ಎನ್ನುತ್ತೀರಿ. ದೃಷ್ಟಿಹೀನರೇ!ಯಾವುದು ಶ್ರೇಷ್ಠ! ಕಾಣಿಕೆಯೋ, ಕಾಣಿಕೆಯನ್ನು ಪಾವನಗೊಳಿಸುವ ಬಲಿಪೀಠವೋ? ಬಲಿಪೀಠದ ಮೇಲೆ ಆಣೆಯಿಡುವವನು ಬಲಿಪೀಠದ ಮೇಲೆ ಮಾತ್ರವಲ್ಲ, ಅದರ ಮೇಲಿರುವ ಪ್ರತಿಯೊಂದು ಕಾಣಿಕೆಯ ಮೇಲೂ ಆಣೆಯಿಡುತ್ತಾನೆ. ದೇವಾಲಯದ ಮೇಲೆ ಆಣೆಯಿಡುವವನು ಅದರ ಮೇಲೆ ಮಾತ್ರವಲ್ಲ, ಅದರಲ್ಲಿ ನೆಲಸಿರುವ ದೇವರ ಮೇಲೂ ಆಣೆಯಿಡುತ್ತಾನೆ. ಹಾಗೆಯೇ, ಸ್ವರ್ಗದ ಮೇಲೆ ಆಣೆಯಿಡುವವನು ದೇವರ ಸಿಂಹಾಸನದ ಮೇಲೂ ಅದರಲ್ಲಿ ಆಸೀನರಾಗಿರುವವರ ಮೇಲೂ ಆಣೆಯಿಡುತ್ತಾನೆ.

25.08.19 - " ಕಡೆಯವರಲ್ಲಿ ಕೆಲವರು ಮೊದಲಿಗರಾಗುವರು. ಮೊದಲಗರಲ್ಲಿ ಕೆಲವರು ಕಡೆಯವರಾಗುವರು,"

ಮೊದಲನೇ ವಾಚನ: ಯೆಶಾಯ 66:18-21

ಸರ್ವೇಶ್ವರ ಸ್ವಾಮಿ ಹೀಗೆನ್ನುತ್ತಾರೆ: "ಸಮಸ್ತ ರಾಷ್ಟ್ರಗಳನ್ನೂ ಸಕಲ ಭಾಷೆಯವರನ್ನೂ ಒಟ್ಟಿಗೆ ಬರ ಮಾಡುವೆನು. ಅವರು ಬಂದು ನನ್ನ ಮಹಿಮೆಯ ಪ್ರಕಾಶವನ್ನು ಕಾಣುವರು. ಅವರ ಮಧ್ಯೆ ಒಂದು ಸೂಚಕ ಕಾರ್ಯವನ್ನು ಮಾಡುವೆನು. ಅವರಲ್ಲಿ ಅಳಿದುಳಿದವರನ್ನು ನನ್ನ ಸುದ್ಧಿಯನ್ನು ಕೇಳದೆಯೂ ನನ್ನ ಮಹಿಮೆಯನ್ನು ಕಾಣದೆಯೂ ಇರುವವರ ಬಳಿಗೆ ಕಳಿಸುವೆನು. ತಾರ್ಷೀರ್ಷ್, ಲಿಬಿಯಾ, ಧನುರ್ಧಾರಿಗಳಾದ ಲೂದಿಯಾ, ತೂಬಲ್, ಗ್ರೀಸ್ ಎಂಬ ನಾಡುಗಳಿಗೂ ದೂರದ ದ್ವೀಪ ನಿವಾಸಿಗಳ ಬಳಿಗೂ ಕಳಿಸುವೆನು. ಈ ಅನ್ಯ ಜನಾಂಗಗಳಿಗೆ ನಿಮ್ಮ ಸಹೋದರರನ್ನು ಕರೆದು ತರುವರು. ಇಸ್ರಯೇಲರು ನನ್ನ ಆಲಯಕ್ಕೆ ಶುದ್ಧ ಪಾತ್ರೆಗಳಲ್ಲಿ ನೈವೇದ್ಯವನ್ನು ತೆಗೆದುಕೊಂಡು ಬರುವಂತೆ,  ಅವರನ್ನು ಕುದುರೆ, ತೇರು, ಪಲ್ಲಕ್ಕಿ, ಹೇಸರಗತ್ತೆ, ಒಂಟೆ, ಇವುಗಳ ಮೇಲೆ ಏರಿಸಿಕೊಂಡು ಜೆರುಸಲೇಮೆಂಬನನ್ನ ಪವಿತ್ರ ಪರ್ವತಕ್ಕೆ ಕರೆದು ತರುವರು. ನಾನು ಅವರಲ್ಲಿ ಕೆಲವರನ್ನು ಯಾಜಕರನ್ನಾಗಿಯೂ ಲೇವಿಯರನ್ನಾಗಿಯೂ ಆರಿಸಿಕೊಳ್ಳುವೆನು" ಇದು ಸರ್ವೇಶ್ವರಸ್ವಾಮಿರ ನುಡಿ.

ಕೀರ್ತನೆ: 117:1,2

ಶ್ಲೋಕ: ವಿಶ್ವದ ಎಲ್ಲೆಡೆಗಳಿಗೂ ಹೋಗಿ ಜಗತ್ತಿಗೆಲ್ಲಾ ಶುಭಸಂದೇಶವನ್ನು ಪ್ರಬೋಧಿಸಿರಿ

ಎರಡನೇ ವಾಚನ: ಹಿಬ್ರಿಯರಿಗೆ 12:5-7, 11-13

ಸಹೋದರರೇ, ಮಕ್ಕಳಿಗೆ ಹೇಳುವಂತೆ ದೇವರು ನಿಮಗೆ ಹೇಳಿರುವ ಎಚ್ಚರಿಕೆಯ ಮಾತನ್ನು ನೀವು ಮರೆತುಬಿಟ್ಟಿರೋ? "ಸುಕುಮಾರ, ಸರ್ವೇಶ್ವರ ಕೊಡುವ ಶಿಕ್ಷೆಯನ್ನು ತಾತ್ಸಾರ ಮಾಡದಿರು ಅವರು ನಿನ್ನನ್ನು ದಂಡಿಸುವಾಗ ಧೈರ್ಯಗೆಡದಿರು ಸರ್ವೇಶ್ವರ ತಾವು ಪ್ರೀತಿಸುವವನನ್ನು ಶಿಕ್ಷಿಸುವರು; ತಮಗೆ ಮಗನೆಂದು ಬರಮಾಡಿಕೊಳ್ಳುವವನನ್ನು ದಂಡಿಸುವರು.  ಶಿಸ್ತಿಗಾಗಿ ಶಿಕ್ಷೆಯನ್ನು ಸಹಿಸಿಕೊಳ್ಳಬೇಕು. ದೇವರು ನಿಮ್ಮನ್ನು ಮಕ್ಕಳಂತೆ ನೋಡಿಕೊಳ್ಳುತ್ತಾರೆ. ತಂದೆಯಿಂದ ಶಿಕ್ಷೆಯನ್ನು ಪಡೆಯದ ಮಗನಿದ್ದಾನೆಯೇ? ಯಾವ ಶಿಕ್ಷೆಯಾದರೂ ತಕ್ಷಣಕ್ಕೆ ಸಿಹಿಯಾಗಿರದೆ ಕಹಿಯಾಗಿಯೇ ಇರುತ್ತದೆ. ಹೀಗೆ ಶಿಸ್ತಿನ ಕ್ರಮಕ್ಕೆ ಒಳಗಾದವರು ಮುಂದಕ್ಕೆ ನ್ಯಾಯನೀತಿಯನ್ನೂ ಶಾಂತಿಸಮಾಧಾನವನ್ನು ಪ್ರತಿಫಲವಾಗಿ ಪಡೆಯುತ್ತಾರೆ. ಆದ್ದರಿಂದ, ಜೋತುಬೀಳುವ ನಿಮ್ಮ ಕೈಗಳನ್ನ ಮೇಲೆತ್ತಿ, ಕುಸಿದುಬೀಳುವ ನಿಮ್ಮ ಮೊಣಕಾಲುಗಳನ್ನು ಚೇತರಿಸಿಕೊಳ್ಳಿ ನೀವು ಹಿಡಿದಿರುವ ಹಾದಿಯನ್ನು ಸರಿಪಡಿಸಿಕೊಳ್ಳಿ, ಆಗ ಕುಂಟುವ ಕಾಲು ಉಳುಕದೆ ವಾಸಿಯಾಗುತ್ತದೆ.

ಶುಭಸಂದೇಶ: ಲೂಕ 13:22-30


ಯೇಸುಸ್ವಾಮಿ ಊರೂರುಗಳಲ್ಲೂ ಹಳ್ಳಿ ಹಳ್ಳಿಗಳಲ್ಲೂ ಉಪದೇಶ ಮಾಡಿಕೊಂಡು ಜೆರುಸಲೇಮಿನತ್ತ ಪ್ರಯಾಣ ಮಾಡುತ್ತಿದ್ದರು. ಆಗ ಒಬ್ಬನು, ಸ್ವಾಮೀ, ಜೀವೋದ್ಧಾರ ಹೊಂದುವವರು ಕೆಲವರು ಮಾತ್ರವೋ?" ಎಂದು ವಿಚಾರಿಸಿದನು. ಆಗ ಯೇಸು ಜನರಿಗೆ, "ಇಕ್ಕಟ್ಟಾದ ಬಾಗಿಲಿನಿಂದಲೇ ಒಳ ಹೋಗಲು  ಸರ್ವ ಪ್ರಯತ್ನ ಮಾಡಿ. ಏಕೆಂದರೆ, ಅನೇಕರು ಒಳಕ್ಕೆ ಹೋಗಲು ಖಂಡಿತವಾಗಿ ಪ್ರಯತ್ನಿಸುವರು; ಆದರೆ ಆದು ಅವರಿಂದಾಗದು ಮನೆಯ ಯಜಮಾನನು ಎದ್ದು ಬಾಗಿಲನ್ನು ಮುಚ್ಚಿದ ಮೇಲೆ ನೀವು ಹೊರಗಡೆ ನಿಲ್ಲಬೇಕಾಗುವುದು. ಬಾಗಿಲನ್ನು ತಟ್ಟುತ್ತಾ,  "ಸ್ವಾಮೀ ನಮಗೆ ಬಾಗಿಲನ್ನು ತೆರೆಯಿರಿ,"  ಎಂದು ನೀವು ಕೇಳುವಿರಿ. ಅದಕ್ಕೆ ಅವನು, "ನೀವು ಎಲ್ಲಿಯವರೋ ನಾನು ಅರಿಯೆ" ಎನ್ನುವನು. ಆಗ ನೀವು, "ನಿಮ್ಮೊಂದಿಗೆ ನಾವು ಊಟ ಮಾಡಿದ್ದೇವೆ, ಪಾನ ಮಾಡಿದ್ದೇವೆ; ನೀವು ನಮ್ಮ ಬೀದಿಗಳಲ್ಲಿ ಉಪದೇಶ ಮಾಡಿದ್ದೀರಿ," ಎಂದು ಹೇಳಲಾರಂಭಿಸುವಿರಿ. ಆದರೆ ಅವನು ಪುನಃ, "ನೀವು ಎಲ್ಲಿಯವರೋ ನಾನರಿಯೆ. ಆಕ್ರಮಿಗಳೇ, ಎಲ್ಲರೂ ನನ್ನಿಂದ ತೊಲಗಿರಿ," ಎಂದು ಸ್ಪಷ್ಟವಾಗಿ ನುಡಿಯುವೆನು. ಅಬ್ರಹಾಮ, ಇಸಾಕ, ಯಕೋಬ ಮತ್ತು ಎಲ್ಲಾ ಪ್ರವಾದಿಗಳು ದೇವರ ಸಾಮ್ರಾಜ್ಯದಲ್ಲಿ ಇರುವುದನ್ನೂ ನಿಮ್ಮನ್ನು ಮಾತ್ರ ಹೊರಗೆ ಹಾಕಿರುವುದನ್ನೂ ನೋಡುವಾಗ ನಿಮಗಾಗುವ ಗೋಳಾಟವೇನು! ಹಲ್ಲು ಕಡಿತವೇನು!! ಚತುರ್ದಿಕ್ಕುಗಳಿಂದಲೂ ಜನರು ಬಂದು, ದೇವರ ಸಾಮ್ರಾಜ್ಯದ  ಹಬ್ಬದೂಟದಲ್ಲಿ ಭಾಗಿಗಳಾಗುವರು. ಇಗೋ, ಕಡೆಯವರಲ್ಲಿ ಕೆಲವರು ಮೊದಲಿಗರಾಗುವರು. ಮೊದಲಗರಲ್ಲಿ ಕೆಲವರು ಕಡೆಯವರಾಗುವರು," ಎಂದರು.

24.08.2019 - "ಗುರುದೇವಾ, ದೇವರ ಪುತ್ರ ನೀವೇ; ಇಸ್ರಯೇಲರ ಅರಸ ನೀವೇ,"

ಮೊದಲನೇ ವಾಚನ: ಪ್ರಕಟನಾ ಗ್ರಂಥ 21:9-14

ದೇವದೂತರುಗಳಲ್ಲಿ ಒಬ್ಬನು ಬಂದು, ನನ್ನೊಡನೆ ಮಾತಾನಾಡಿ ಇಂತೆಂದನು: "ಇಲ್ಲಿಗೆ ಬಾ, ಯಜ್ಞದ ಕುರಿಮರಿಗೆ ಸತಿಯಾಗಲಿರುವ ಮದುವಣಗಿತ್ತಿಯನ್ನು ನಿನಗೆ ತೋರಿಸುತ್ತೇನೆ," ಎಂದನು. ಆಗ ನಾನು ಪವಿತ್ರಾತ್ಮವಶನಾದೆ. ಆ ದೇವದೂತನು ನನ್ನನ್ನು ಎತ್ತರವಾದ ಬೆಟ್ಟದ ಮೇಲೆ ಕೊಂಡೊಯ್ದನು. ಅಲ್ಲಿ ನನಗೆ ಪವಿತ್ರ ನಗರವಾದ ಜೆರುಸಲೇಮನ್ನು ತೋರಿಸಿದನು. ಅದು ಸ್ವರ್ಗದಲ್ಲಿರುವ ದೇವರ ಬಳಿಯಿಂದ ಕೆಳಗಿಳಿದು ಬರುತ್ತಿತ್ತು; ದೇವರ ತೇಜಸ್ಸಿನಿಂದ ಕೂಡಿತ್ತು; ಅಮೂಲ್ಯ ರತ್ನದಂತೆ ಹೊಳೆಯುತ್ತಿತ್ತು; ಸ್ವಚ್ಛವಾದ ಸ್ಪಟಿಕದಂತೆ ಶುಭ್ರವಾಗಿತ್ತು. ಆ ನಗರದ ಸುತ್ತಲೂ ಎತ್ತರವಾದ ಕೋಟೆಯಿತ್ತು. ಅದಕ್ಕೆ ಹನ್ನೆರಡು ಹೆಬ್ಬಾಗಿಲುಗಳಿದ್ದವು. ಆ ಬಾಗಿಲುಗಳಿಗೆ ಹನ್ನೆರಡು ಮಂದಿ ದೇವದೂತರುಗಳು ಕಾವಲಿದ್ದರು. ಆ ಬಾಗಿಲುಗಳ ಮೇಲೆ ಇಸ್ರಯೇಲಿನ ಹನ್ನೆರಡು ಕುಲಗಳ ಹೆಸರುಗಳನ್ನು ಬರೆದಿತ್ತು. ಪೂರ್ವ ದಿಕ್ಕಿನಲ್ಲಿ ಮೂರು ಬಾಗಿಲುಗಳು, ಉತ್ತರ ದಿಕ್ಕಿನಲ್ಲಿ ಮೂರು ಬಾಗಿಲುಗಳು, ದಕ್ಷಿಣ ದಿಕ್ಕಿನಲ್ಲಿ ಮೂರು ಬಾಗಿಲುಗಳು ಮತ್ತು ಪಶ್ಚಿಮ ದಿಕ್ಕಿನಲ್ಲಿ ಮೂರು ಬಾಗಿಲುಗಳು ಇದ್ದವು. ಆ ನಗರದ ಕೋಟೆಗೆ ಹನ್ನೆರಡು ಅಸ್ತಿವಾರಗಳಿದ್ದವು. ಅವುಗಳ ಮೇಲೆ ಹನ್ನೆರಡು ಹೆಸರುಗಳಿದ್ದವು. ಯಜ್ಞದ ಕುರಿಮರಿಯ ಹನ್ನೆರಡು ಪ್ರೇಷಿತರ ಹೆಸರುಗಳು ಅವು.

ಕೀರ್ತನೆ:145:10-11, 12-13, 17-18

ಶ್ಲೋಕ: ಪ್ರಭೂ, ಭಕ್ತಸಮೂಹವು ಪ್ರಸಿದ್ಧಪಡಿಸುವುದು ನಿನ್ನ ರಾಜ್ಯದ ಮಹತ್ವವನು

ಶುಭಸಂದೇಶ: ಯೊವಾನ್ನ 1:45-51

ಫಿಲಿಪನು ನತಾನಿಯೇಲನನ್ನು ಕಂಡು, "ಧರ್ಮಶಾಸ್ತ್ರದಲ್ಲಿ ಮೋಶೆ ಉಲ್ಲೇಖಿಸಿದ ಮತ್ತು ಪ್ರವಾದಿಗಳು ಪ್ರವಚನ ಮಾಡಿದ ವ್ಯಕ್ತಿಯು ನಮಗೆ ಸಿಕ್ಕಿದ್ದಾರೆ. ಇವರೇ ಜೋಸೆಫನ ಮಗನಾದ ನಜರೇತ್ ಊರಿನ ಯೇಸು," ಎಂದು ಹೇಳಿದನು. ಅದಕ್ಕೆ ನತಾನಿಯೇಲನು, "ಏನು? ನಜರೇತಿನಿಂದ ಒಳ್ಳೆಯದೇನಾದರೂ ಬರುವುದುಂಟೆ?" ಎಂದು ಕೇಳಲು, "ಬಂದು ನೀನೇ ನೋಡು," ಎಂದು ಫಿಲಿಪ್ಪನು ಉತ್ತರಕೊಟ್ಟನು. ತಮ್ಮ ಬಳಿಗೆ ಬರುತ್ತಿದ್ದ ನತಾನಿಯೇಲನನ್ನು ಕಂಡ ಯೇಸು, "ಇಗೋ ನೋಡಿ, ನಿಜವಾದ ಇಸ್ರಯೇಲನು, ಈತನಲ್ಲಿ ಕಪಟವಿಲ್ಲ," ಎಂದು ನುಡಿದರು. ನತಾನಿಯೇಲನು, "ನನ್ನ ಪರಿಚಯ ನಿಮಗೆ ಹೇಗಾಯಿತು?" ಎಂದು ಕೇಳಲು ಯೇಸು, "ಫಿಲಿಪ್ಪನು ನಿನ್ನನ್ನು ಕರೆಯುವ ಮೊದಲೇ ನೀನು ಅಂಜೂರದ ಮರದಡಿ ಇದ್ದಾಗ ನಾನು ನಿನ್ನನ್ನು ಕಂಡೆ," ಎಂದು ಉತ್ತರಕೊಟ್ಟರು. ಅದಕ್ಕೆ ನತಾನಿಯೇಲನು "ಗುರುದೇವಾ, ದೇವರ ಪುತ್ರ ನೀವೇ; ಇಸ್ರಯೇಲರ ಅರಸ ನೀವೇ," ಎಂದನು. ಆಗ ಯೇಸು, "ಅಂಜೂರದ ಮರದಡಿಯಲ್ಲಿ ನಿನ್ನನ್ನು ಕಂಡೆ ಎಂದು ನಾನು ಹೇಳಿದ ಮಾತ್ರಕ್ಕೆ ಇಷ್ಟೊಂದು ವಿಶ್ವಾಸವೇ? ಇದಕ್ಕೂ ಮಿಗಿಲಾದುವುಗಳನ್ನು ನೀನು ಕಾಣುವೆ," ಎಂದು ನುಡಿದರು. ತಮ್ಮ ಮಾತನ್ನು ಮುಂದುವರಿಸುತ್ತಾ, "ನಾನೂ ನಿಮಗೆ  ಸತ್ಯವಾಗಿ ಹೇಳುತ್ತೇನೆ. ಸ್ಥರ್ಗವು ತೆರೆದಿರುವುದನ್ನು ನರಪುತ್ರನ ಮುಖಾಂತರ ದೇವದೂತರು ಏರುವುದನ್ನೂ ಇಳಿಯುವುದನ್ನೂ ನೀವು ಕಾಣುವಿರಿ," ಎಂದು ಹೇಳಿದರು.

23.08.2019 - "ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸು"

ಮೊದಲನೇ ವಾಚನ: ರೂತ 1:1, 3-6, 14-16, 22

ಇಸ್ರಯೇಲ್ ನಾಡಿನಲ್ಲಿ ನ್ಯಾಯಸ್ಥಾಪಕರು ಆಳುತ್ತಿದ್ದಾಗ, ಒಮ್ಮೆ ಕಠಿಣವಾದ ಬರಗಾಲವು ತಲೆದೋರಿತು. ಈ ಕಾರಣ ಜುದೇಯ ಪ್ರಾಂತ್ಯದ ಬೆತ್ಲೆಹೇಮ್ ಎಂಬ ಊರಿನವನಾದ ಎಲಿಮಲೆಕ್ ಎಂಬುವವನು ತನ್ನ ಪತ್ನಿ ಮತ್ತು ಪುತ್ರರಿಬ್ಬರನ್ನು ಕರೆದುಕೊಂಡು ಮೋವಾಬ್ ಎಂಬ ನಾಡಿಗೆ ವಲಸೆ ಹೋದನು. ಇವರು ಮೋವಾಬ್ ನಾಡಿನಲ್ಲಿ ವಾಸಿಸುತ್ತಿದ್ದಾಗ ಎಲಿಮಲೆಕನು ಮರಣ ಹೊಂದಿದನು. ವಿಧವೆಯಾದ ನವೊಮಿಇಬ್ಬರು ಗಂಡು ಮಕ್ಕಳೊಡನೆ ಅಲ್ಲೇ ಉಳಿದಳು. ಹುಡುಗರು ಇಬ್ಬರೂ, ಮೋವಾಬ್ಯ ಹುಡುಗಿಯರನ್ನು ವಿವಾಹವಾದರು. ಒಬ್ಬಳ ಹೆಸರು ಒರ್ಫಾ ಮತ್ತು ಇನ್ನೊಬ್ಬಳು ರೂತ್. ಅವರು ಅಲ್ಲಿ ಸುಮಾರು ಹತ್ತು ವರ್ಷಗಳ ಕಾಲ ವಾಸಮಾಡಿದ ನಂತರ, ಪುತ್ರರಾದ ಮಹ್ಲೋನ್ ಮತ್ತು ಕಿಲ್ಯೋನ್ ಸಹ ತೀರಿಹೋದರು. ಹೀಗೆ ನವೊಮಿ ತನ್ನ ಪತಿಯನ್ನೂ ಇಬ್ಬರು ಪುತ್ರರನ್ನೂ ಕಳೆದುಕೊಂಡು ಒಬ್ಬಂಟಿಗಳಾದಳು. ಸರ್ವೇಶ್ವರಸ್ವಾಮಿಯ ಅನುಗ್ರಹದಿಂದ ತನ್ನ ನಾಡಿನಲ್ಲಿ ಒಳ್ಳೆಯ ಮಳೆ ಬೆಳೆಗಳಾಗಿವೆ ಎಂಬ ಸಮಾಚಾರ ಮೋವಾಬ್ ನಾಡಿನಲ್ಲಿದ್ದ ನವೊಮಿಗೆ ತಿಳಿದುಬಂತು. ಒರ್ಫಾ ಅತ್ತೆಗೆ ಮುತ್ತಿಟ್ಟು ತನ್ನ ಮನೆಗೆ ಹಿಂದಿರುಗಿ ಹೋದಳು. ರೂತಳು ಮಾತ್ರ ಅತ್ತೆಯನ್ನು ಬಿಟ್ಟುಹೋಗಲಿಲ್ಲ. ಆಗ ನವೊಮಿ ರೂತಳಿಗೆ: "ನೋಡು, ನಿನ್ನ ಓರಗಿತ್ತಿಯ ತನ್ನ ಜನಾಂಗದವರ ಬಳಿಗೂ ತನ್ನ ಕುಲದೇವರ ಬಳಿಗೂ ಹಿಂದಿರುಗಿ ಹೋಗಿದ್ದಾಳೆ. ನೀನೂ ಅವಳಂತೆಯೇ ಹೋಗಿಬಿಡು," ಎಂದು ಒತ್ತಾಯಪಡಿಸಿದಳು. ಅದಕ್ಕೆ ರೂತಳು; "ನಿಮ್ಮನ್ನು ಬಿಟ್ಟು ಹೋಗುವಂತೆ ಒತ್ತಾಯಪಡಿಸಬೇಡಿ. ನೀವು ಎಲ್ಲಿಗೆ ಹೋದರೂ ನಾನೂ ಅಲ್ಲಿಗೆ ಬರುತ್ತೇನೆ. ನೀವು ಎಲ್ಲಿ ವಾಸಿಸಿದರೂ ನಾನೂ ಅಲ್ಲೇ ವಾಸಿಸುತ್ತೇನೆ." ಎಂದಳು. ಹೀಗೆ ನವೊಮಿ ತನ್ನ ಮೋವಾಬ್ಯ ಸೊಸೆಯಾದ ರೂತಳ ಸಂಗಡ ಬೆತ್ಲೆಹೇಮಿಗೆ ಬಂದಳು. ಆಗ ಜವೆಗೋದಿಯ ಸುಗ್ಗಿ ಪ್ರಾರಂಭವಾಗಿತ್ತು.

ಕೀರ್ತನೆ: 146:5-6, 6-7, 8-9, 9-10

ಶ್ಲೋಕ: ಎನ್ನ ಮನವೇ, ವಂದಿಸು ಪ್ರಭುವನು

ಶುಭಸಂದೇಶ: ಮತ್ತಾಯ 22:34-10

ಯೇಸುಸ್ವಾಮಿ ಸದ್ದುಕಾಯರನ್ನು ಸದ್ದೆತ್ತದಂತೆ ಮಾಡಿದರೆಂಬ ಸಮಾಚಾರ ಫರಿಸಾಯರಿಗೆ ಮುಟ್ಟಿತು. ಅವರು ಒಟ್ಟಾಗಿ ಸ್ವಾಮಿಯ ಬಳಿಗೆ ಬಂದರು.  ಅವರಲ್ಲಿ ಒಬ್ಬ ಧರ್ಮೋಪದೇಶಕನು ಯೇಸುವನ್ನು ಪರೀಕ್ಷಿಸುವ ಸಲುವಾಗಿ, ಹೀಗೆಂದು ಪ್ರಶ್ನಿಸಿದನು: "ಬೋಧಕರೇ, ಧರ್ಮಶಾಸ್ತ್ರದಲ್ಲಿ ಪ್ರಮುಖವಾದ ಆಜ್ಞೆ ಯಾವುದು?" ಅದಕ್ಕೆ ಪ್ರತ್ಯುತ್ತರವಾಗಿ ಯೇಸು, "ನಿನ್ನ ಸರ್ವೇಶ್ವರನಾದ ದೇವರನ್ನು ನಿನ್ನ ಪೂರ್ಣ  ಹೃದಯದಿಂದಲೂ ನಿನ್ನ ಪೂರ್ಣ ಆತ್ಮದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸು." ಇದೇ ಪ್ರಮುಖ ಹಾಗೂ ಪ್ರಥಮ ಆಜ್ಞೆ, ಇದಕ್ಕೆ ಸರಿಹೊಂದುವ ಎರಡನೇ ಆಜ್ಞೆ ಯಾವುದೆಂದರೆ, "ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸು." ಸಮಸ್ತ ಧರ್ಮಶಾಸ್ತ್ರಕ್ಕೂ ಪ್ರವಾದಿಗಳ ಪ್ರವಚನಕ್ಕೂ ಈ ಎರಡು ಆಜ್ಞೆಗಳೇ ಆಧಾರ," ಎಂದರು.

22.08.2019 - "ಆಹ್ವಾನಿತರು ಅನೇಕರಾದರೂ ಆರಿಸಲಾದವರು ಕೆಲವರು ಮಾತ್ರ,"

ಮೊದಲನೇ ವಾಚನ: ನ್ಯಾಯಸ್ಥಾಪಕರು 11:29-39


ಆಗ ಸರ್ವೇಶ್ವರನ ಆತ್ಮ ಯೆಪ್ತಾಹನ ಮೇಲೆ ಬಂದಿತು. ಅವನು ಗಿಲ್ಯಾದ್ ಪ್ರಾಂತ್ಯ, ಮನಸ್ಸೆಯ ನಾಡು, ಇವುಗಳಲ್ಲಿ ಸಂಚರಿಸಿ ಮತ್ತೆ ಗಿಲ್ಯಾದಿನ ಮಿಚ್ಛೆಗೆ ಬಂದು ಅಲ್ಲಿಂದ ಅಮ್ಮೋನಿಯರ ಮೇಲೆ ಯುದ್ಧಕ್ಕೆ ಹೋದನು. ಇದಲ್ಲದೆ ಅವನು ಸರ್ವೇಶ್ವರಸ್ವಾಮಿಗೆ, "ತಾವು ಅಮ್ಮೋನಿಯರನ್ನು ನನ್ನ ಕೈಗೆ ಒಪ್ಪಿಸುವುದಾದರೆ ನಾನು ಸುರಕ್ಷಿತವಾಗಿ ಹಿಂದಿರುಗುವಾಗ ನನ್ನ ಮನೆಯ ಬಾಗಿಲಿನಿಂದ ನನ್ನನ್ನು ಎದುರುಗೊಳ್ಳಲು ಮೊದಲು ಬರುವಂಥ ಪ್ರಾಣಿ ತಮಗೆ ಮೀಸಲು" ಎಂದೂ "ಅದನ್ನು ತಮಗೆ ದಹನಬಲಿದಾನ ಮಾಡುವೆನು" ಎಂದೂ ಹರಕೆಮಾಡಿದನು. ಯೆಪ್ತಾಹನು ನದಿಯನ್ನು ದಾಟಿ ಅಮ್ಮೋನಿಯರಿಗೆ ವಿರುದ್ಧ ಯುದ್ಧಕ್ಕೆ ಹೋಗಲು ಅವರನ್ನು ಸರ್ವೇಶ್ವರ ಅವನ ಕೈಗೆ ಒಪ್ಪಿಸಿದರು. ಅವನು ಅವರನ್ನು ಸೋಲಿಸಿ ಆರೋಯೇರಿನಿಂದ ಮಿನ್ನೀತಿನ ದಾರಿಯವರೆಗೂ ಆಬೇಲ್ ಕೆರಾಮೀಮಿನವರೆಗೂ ಇಪ್ಪತ್ತು ಪಟ್ಟಣಗಳನ್ನು ಹಾಳು ಮಾಡಿದನು. ಹೀಗೆ ದೊಡ್ಡ ಜಯವಾಗಿ, ಅಮ್ಮೋನಿಯರು ಇಸ್ರಯೇಲರಿಗೆ ಶರಣಾದರು. ಯೆಪ್ತಾಹನು ಮಿಚ್ಛೆಯಲ್ಲಿದ್ದ ತನ್ನ ಮನೆಯನ್ನು ಸಮೀಪಿಸಿದಾಗ ಅವನ ಮಗಳು ದಮ್ಮಡಿ ಬಡಿಯುತ್ತಾ ನಾಟ್ಯವಾಡುತ್ತಾ ಅವನನ್ನು ಎದುರುಗೊಳ್ಳುವುದಕ್ಕಾಗಿ ಬಂದಳು. ಆಕೆ ಅವನ ಒಬ್ಬಳೇ ಮಗಳು. ಆಕೆಯ ಹೊರತು ಅವನಿಗೆ ಬೇರೆ ಗಂಡುಹೆಣ್ಣು ಮಕ್ಕಳೇ ಇರಲಿಲ್ಲ. ಆಕೆಯನ್ನು ಕಾಣುತ್ತಲೆ ಅವನು ದುಃಖತಾಳಲು ಆಗದೆ ಬಟ್ಟೆಯನ್ನು ಹರಿದುಕೊಂಡು, "ಅಯ್ಯೋ ನನ್ನ ಮಗಳೇ, ನೀನು ನನ್ನನ್ನು ಎಂಥಾ ಯಾತನೆಗೆ ಈಡುಮಾಡಿದೆ; ನನಗೆ ಮಹಾ ಸಂಕಟವನ್ನುಂಟುಮಾಡಿದೆ!  ನಾನು ಬಾಯಾರೆ ಸರ್ವೇಶ್ವರನಿಗೆ ಹರಕೆಮಾಡಿದ್ದೇನೆ; ಅದನ್ನು ಹಿಂದೆಗೆಯಲಾಗದು," ಎಂದು ಕೂಗಿಕೊಂಡನು. ಆಕೆ ಅವನಿಗೆ, "ಅಪ್ಪಾ, ನೀನು ಬಾಯಾರೆ ಸರ್ವೇಶ್ವರನಿಗೆ ಹರಕೆ ಮಾಡಿದ ಮೇಲೆ ಅವರು ನಿನ್ನ ಶತ್ರುಗಳಾದ ಅಮ್ಮೋನಿಯರಿಗೆ ಮುಯ್ಯಿ ತೀರಿಸಿದ್ದಾರೆ. ಆದ್ದರಿಂದನಿನ್ನ ಬಾಯಿಂದ ಬಂದುದ್ದನ್ನೇ ನೆರವೇರಿಸು," ಎಂದಳು. ಆಕೆ ಪುನಃ ತನ್ನ ತಂದೆಗೆ, "ನನ್ನ ಬಿನ್ನಹವನ್ನು ಆಲಿಸು; ಎರಡು ತಿಂಗಳುಗಳವರೆಗೆ ನನ್ನನ್ನು ಬಿಡು. ನಾನು ನನ್ನ ಗೆಳತಿಯರೊಡನೆ ಗುಡ್ಡ ಪ್ರದೇಶಗಳಿಗೆ ಹೋಗಿ ನನ್ನ ಕನ್ಯಾವಸ್ಥೆಗಾಗಿ ಗೋಳಾಡುವೆನು," ಎಂದಳು. ಅವನು, "ಎರಡು ತಿಂಗಳ ತನಕ ಹೋಗಿ ಬಾ," ಎಂದು ಹೇಳಿ ಕಳುಹಿಸಿದನು. ಆಕೆ ಸಖಿಯರ ಸಹಿತ ಗುಡ್ಡ ಪ್ರದೇಶಗಳಿಗೆ ಹೋಗಿ ತನ್ನ ಕನ್ಯಾವಸ್ಥೆಗಾಗಿ ಗೋಳಾಡಿದಳು. ಎರಡು ತಿಂಗಳು ಕಳೆದ ನಂತರ ಆಕೆ ಮರಳಿ ತಂದೆಯ ಹತ್ತಿರ ಬಂದಳು. ಅವನು ತನ್ನ ಹರಕೆಯನ್ನು ತೀರಿಸಿದನು. ಆಕೆ ಕನ್ಯೆಯಾಗಿಯೇ ಸತ್ತಳು.

ಕೀರ್ತನೆ: 40:5, 7-8, 8-9, 10
ಶ್ಲೋಕ: ನಿನ್ನ ಚಿತ್ತಾನುಸಾರ ನಡೆವುದೇ ನನಗೆ ಪರಮಾವೇಶ

ಶುಭಸಂದೇಶ: ಮತ್ತಾಯ 22:1-14

ಯೇಸುಸ್ವಾಮಿ ಯಾಜಕರು ಫರಿಸಾಯರನ್ನುದ್ದೇಶಿಸಿ ಈ ಸಾಮತಿಯನ್ನು ಹೇಳಿದರು: ಸ್ವರ್ಗಸಾಮ್ರಾಜ್ಯ ಇಂತಿದೆ; ರಾಜನೊಬ್ಬ ತನ್ನ ಕುಮಾರನ ವಿವಾಹ ಮಹೋತ್ಸವವನ್ನು ಏರ್ಪಡಿಸಿದ. ಅದಕ್ಕೆ ಆಹ್ವಾನಿತರಾಗಿದ್ದವರನ್ನು ಕರೆಯಲು ಸೇವಕರನ್ನು ಕಳುಹಿಸಿದ. ಆದರೆ ಅವರು ಬರಲು ಒಪ್ಪಲಿಲ್ಲ ಪುನಃ ಬೇರೆ ಸೇವಕರನ್ನು ಅಟ್ಟಿದ. "ಔತಣ ಸಿದ್ಧವಾಗಿದೆ. ಕೊಬ್ಬಿನ ಮಾಂಸದ ಅಡಿಗೆಯನ್ನು ಮಾಡಿಸಿದ್ದೇನೆ ಎಲ್ಲವೂ ಅಣಿಯಾಗಿದೆ. ಉತ್ಸವಕ್ಕೆ ಬೇಗ ಬನ್ನಿ" ಎಂದು ಅಹ್ವಾನಿತರಿಗೆ ತಿಳಿಸುವಂತೆ ಹೇಳಿ ಕಳುಹಿಸಿದ. ಆದರೂ ಅಹ್ವಾನಿತರು ಅಲಕ್ಷ್ಯ ಮಾಡಿದರು. ಒಬ್ಬ ತೋಟಕ್ಕೆ ಹೊರಟುಬಿಟ್ಟ, ಇನ್ನೊಬ್ಬ ವ್ಯಾಪಾರಕ್ಕೆ ಹೊರಟು ಹೋದ. ಉಳಿದವರು, ಕರೆಯಲು ಬಂದ ಆಳುಗಳನ್ನೇ ನಂದಿಸಿ, ಬಡಿದು,  ಕೊಂದುಹಾಕಿದರು. ರಾಜನಿಗೆ ಕಡುಗೋಪ ಬಂದಿತು. ತನ್ನ ಸೈನಿಕರನ್ನು ಕಳುಹಿಸಿ ಆ ಕೊಲೆಗಾರರನ್ನು ಸಂಹರಿಸಿದ. ಅವರ ಊರನ್ನು ಸುಟ್ಟುಹಾಕಿಸಿದ. ಆನಂತರ ತನ್ನ ಸೇವಕರಿಗೆ, "ವಿವಾಹ ಮಹೋತ್ಸವವೇನೋ ಸಿದ್ಧವಾಗಿದೆ; ಆಹ್ವಾನಿತರೋ ಅಯೋಗ್ಯರು. ನೀವು ಹೆದ್ದಾರಿಗಳಿಗೆ ಹೋಗಿ ಕಂಡ ಕಂಡವರನ್ನೆಲ್ಲಾ ಉತ್ಸವಕ್ಕೆ ಕರೆಯಿರಿ" ಎಂದ. ಅಂತೆಯೇ ಅವರು ಹೋಗಿ ಯೋಗ್ಯರು, ಅಯೋಗ್ಯರೆನ್ನದೆ ಕಂಡವರನ್ನೆಲ್ಲಾ ಒಟ್ಟುಗೂಡಿಸಿ ಕರೆತಂದರು. ವಿವಾಹ ಮಂಟಪ ಅತಿಥಿಗಳಿಂದ ತುಂಬಿಹೋಯಿತು. ಆಮೇಲೆ ರಾಜನು ಅತಿಥಿಗಳನ್ನು ನೋಡಲು ಬಂದ. ಅಲ್ಲಿ ವಿವಾಹಕ್ಕೆ ತಕ್ಕ ವಸ್ತ್ರವನ್ನು ಧರಿಸದೆ ಬಂದಿದ್ದ ಒಬ್ಬನನ್ನು ಕಂಡ, "ಏನಯ್ಯಾ, ಸಮಾರಂಭಕ್ಕೆ ತಕ್ಕ ಉಡುಪಿಲ್ಲದೆ ಒಳಗೆ ಹೇಗೆ ಬಂದೆ?" ಎಂದು ಅವನನ್ನು ಕೇಳಿದ. ಅದಕ್ಕೆ ಅವನು ಮೌನತಳೆದ. ಆಗ ರಾಜನು ಪರಿಚಾರಕರಿಗೆ, "ಇವನ ಕೈಕಾಲುಗಳನ್ನು ಕಟ್ಟಿ ಹೊರಗಿನ ಕತ್ತಲೆಗೆ ದಬ್ಬಿರಿ; ಅಲ್ಲಿರುವವರೊಡನೆ ಹಲ್ಲುಕಡಿದು ಗೋಳಾಡಲಿ," ಎಂದು ಹೇಳಿದ. ಹೀಗೆ ಆಹ್ವಾನಿತರು ಅನೇಕರಾದರೂ ಆರಿಸಲಾದವರು ಕೆಲವರು ಮಾತ್ರ," ಎಂದರು ಸ್ವಾಮಿ.

21.08.2019 - "ನನ್ನ ಔದಾರ್ಯವನ್ನು ಕಂಡು ನಿನಗೇಕೆ ಹೊಟ್ಟೆಯುರಿ?"

ಮೊದಲನೇ ವಾಚನ: ನ್ಯಾಯಸ್ಥಾಪಕರು 9:6-15

ಎಲ್ಲಾ ಶೆಕೆಮಿನವರೂ ಹಾಗು ಮಿಲ್ಲೋಕೋಟೆಯವರೂ ಶೆಕೆಮಿನ ಬಳಿಯಲ್ಲಿ ಸ್ಮಾರಕ ಸ್ತಂಭವಿರುವ ಓಕ್ ಮರದ ಹತ್ತಿರ ಕೂಡಿಬಂದು ಅಬೀಮೆಲೆಕನನ್ನು ತಮ್ಮ ಅರಸನನ್ನಾಗಿ ಮಾಡಿಕೊಂಡರು. ಯೋತಾಮನು ಇದನ್ನು ಕೇಳಿ, ಗೆರಿಜ್ಜೀಮ್ ಬೆಟ್ಟದ ತುದಿಯಲ್ಲಿ ನಿಂತು ಗಟ್ಟಿಯಾದ ಧ್ವನಿಯಿಂದ ಹೀಗೆಂದನು: "ಶೆಕೆಮಿನ ಜನರೇ, ನನ ಮಾತಿಗೆ ಕಿವಿಗೊಡಿ; ಆಗ ದೇವರೂ ನಿಮ್ಮ ಮೊರೆಗೆ ಕಿವಿಗೊಡುವರು; ಒಮ್ಮೆ ಮರಗಳು ತಮಗೆ ಒಬ್ಬ ಅರಸನನ್ನು ಅಭಿಷೇಕಿಸಬೇಕೆಂದು ಹೊರಟು ಓಲಿವ್ ಮರದ ಬಳಿಗೆ ಬಂದು, "ನೀನು ನಮಗೆ ಅರಸನಾಗು," ಎಂದವು. ಅದು ಅವುಗಳಿಗೆ, "ನನ್ನಲ್ಲಿರುವ ಎಣ್ಣೆಯಿಂದ ದೇವತೆಗಳೂ ಮಾನವರೂ ಘನತೆ ಗೌರವಗಳನ್ನು ಪಡೆಯುತ್ತಾರೆ. ಇದನ್ನು ಬಿಟ್ಟು ಮರಗಳ ಮೇಲೆ ಓಲಾಡುವುದಕ್ಕೆ ಬರಬೇಕೊ?" ಎಂದಿತು. ಬಳಿಕ ಆ ಮರಗಳು ಅಂಜೂರದ ಗಿಡದ ಬಳಿಗೆ ಹೋಗಿ ಅದಕ್ಕೆ, "ನೀನು ಬಂದು ನಮ್ಮ ಅರಸನಾಗು," ಎಂದವು. ಅದು, "ನಾನು ನನ್ನ ಶ್ರೇಷ್ಠವಾದ ಸಿಹಿಹಣ್ಣು ಕೊಡುವುದನ್ನು ಬಿಟ್ಟು ಮರಗಳ ಮೇಲೆ ಓಲಾಡುವುದಕ್ಕೆ ಬರಬೇಕೊ?" ಎಂದಿತು. ಆನಂತರ ಆ ಮರಗಳು ದ್ರಾಕ್ಷಾಬಳ್ಳಿಯ ಬಳಿಗೆ ಹೋಗಿ, "ನೀನು ಬಂದು ನಮ್ಮ ಅರಸನಾಗು," ಎಂದವು. ಅದಕ್ಕೆ ಆ ಬಳ್ಳಿ, "ನಾನು ನನ್ನ ರಸದಿಂದ ದೇವತೆಗಳಿಗೂ ಮಾನವರಿಗೂ ಆನಂದ ತರುವುದನ್ನು ಬಿಟ್ಟು ಮರಗಳ ಮೇಲೆ ಓಲಾಡುವುದಕ್ಕೆ ಬರಬೇಕೊ?" ಎಂದಿತು. ಕಡೆಗೆ ಆ ಮರಗಳು ಮುಳ್ಳು ಪೊದೆಯ ಬಳಿಗೆ ಹೋಗಿ, "ನೀನು ಬಂದು ನಮ್ಮ ಅರಸನಾಗು," ಎಂದವು. ಅದಕ್ಕೆ ಆ ಪೊದೆ, "ನೀವು ನಿಜವಾದ ಮನಸ್ಸಿನಿಂದ ನನಗೆ ರಾಜ್ಯಾಭಿಷೇಕ ಮಾಡಬೇಕೆಂದಿರುವುದಾದಾರೆ, ಬನ್ನಿ, ಬಂದು ನನ್ನ ನೆರಳಲ್ಲಿ ಆಶ್ರಯಿಸಿಕೊಳ್ಳಿ; ಇಲ್ಲವಾದರೆ ನನ್ನಿಂದ ಬೆಂಕಿಹೊರಟು ಲೆಬನೋನಿನ ದೇವದಾರುವೃಕ್ಷಗಳನ್ನು ಸುಟ್ಟುಬಿಡುವುದು," ಎಂದು ಬಿಟ್ಟಿತು.

ಕೀರ್ತನೆ: 21:2-3, 4-5, 6-7

ಶ್ಲೋಕ: ಅರಸನಿಗೆ ಹರ್ಷವಾಯಿತು ಪ್ರಭೂ, ನೀ ತೋರಿದ ಪರಾಕ್ರಮಕ್ಕಾಗಿ

ಶುಭಸಂದೇಶ: ಮತ್ತಾಯ 20:1-16

ಯೇಸು ತಮ್ಮ ಶಿಷ್ಯರಿಗೆ ಈ ಸಾಮತಿ ಹೇಳಿದರು, ಸ್ವರ್ಗಸಾಮ್ರಾಜ್ಯವು ಹೀಗಿದೆ: ಒಬ್ಬ ಯಜಮಾನನಿಗೆ ಒಂದು ದ್ರಾಕ್ಷಿತೋಟವಿತ್ತು. ಅದರಲ್ಲಿ ಕೆಲಸ ಮಾಡುವುದಕ್ಕೆ ಕೂಲಿಗಾರರನ್ನು ಗೊತ್ತುಮಾಡಲು ಅವನು ಬೆಳಗಿನ ಜಾವದಲ್ಲೇ ಹೊರಟ. ಆಳಿಗೆ ಒಂದು ಬೆಳ್ಳಿ ನಾಣ್ಯದಂತೆ ದಿನಕೂಲಿಯನ್ನು ಮಾತಾಡಿ ತೋಟಕ್ಕೆ ಕಳುಹಿಸಿದ. ಸುಮಾರು ಬೆಳಗ್ಗೆ ಒಂಭತ್ತು ಗಂಟೆಗೆ ಅವನು ಪುನಃ ಸಂತೆಬೀದಿಯ ಕಡೆಗೆ ಹೋದ ಕೆಲಸವಿಲ್ಲದೆ ಸುಮ್ಮನೆ ನಿಂತುಕೊಂಡಿದ್ದ ಕೆಲವು ಕೂಲಿಗಾರರನ್ನು ಅಲ್ಲಿ ಕಂಡ. ನೀವೂ ನನ ದ್ರಾಕ್ಷಿತೋಟಕ್ಕೆ ಹೋಗಿರಿ ನ್ಯಾಯವಾದ ಕೂಲಿಯನ್ನು ನಿಮಗೆ ಕೊಡುತ್ರೇನೆ, ಎಂದ. ಅವರೂ ಹೋದರು. ಬಳಿಕ  ಸುಮಾರು ಹನ್ನೆರಡು ಗಂಟೆಗೊಮ್ಮೆ ಮತ್ತೆ ಮೂರು ಗಂಟೆಗೊಮ್ಮೆ ಹೋಗಿ ಇನ್ನೂ ಕೆಲವರನ್ನು ಕೆಲಸಕ್ಕೆ ಕಳುಹಿಸಿದ. ಐದು ಗಂಟೆಗೆ ಹೋದಾಗಲೂಬೇರೆ ಕೆಲವರು ಅಲ್ಲಿ ನಿಂತಿರುವುದನ್ನು ಕಂಡು, ದಿನವಿಡೀ ಕೆಲಸ ಮಾಡದೆ ಸುಮ್ಮನೆ ಇಲ್ಲಿ ನಿಂತಿದ್ದೀರಲ್ಲಾ, ಏಕೆ?" ಎಂದು ಕೇಳಿದ, ಅದಕ್ಕೆ ಅವರು, "ನಮ್ಮನ್ನು ಯಾರೂ ಕೂಲಿಗೆ ಕರೆಯಲಿಲ್ಲ," ಎಂದರು. "ಹಾಗಾದರೆ ನೀವೂ ಕೂಡ ನನ್ನ ದ್ರಾಕ್ಷಿ ತೋಟಕ್ಕೆ ಹೋಗಿ ಕೆಲಸಮಾಡಿ," ಎಂದು ಹೇಳಿ ಅವರನ್ನೂ ಕಳುಹಿಸಿದ. "ಸಂಜೆಯಾಯಿತು. ತೋಟದ ಯಜಮಾನ ತನ್ನ ಮೇಸ್ತ್ರಿಗೆ, "ಕೂಲಿಯಾಳುಗಳನ್ನು ಕರೆದು, ಕೊನೆಗೆ ಬಂದವರಿಂದ ಆರಂಭಿಸಿ ಮೊದಲು ಬಂದವರ ತನಕ ಕೂಲಿಕೊಡು," ಎಂದ. ಅದರಂತೆ ಐದು ಗಂಟೆಗೆ ಗೊತ್ತುಮಾಡಿದವರು ಬಂದಾಗ ಒಬ್ಬೊಬ್ಬನಿಗೆ ಒಂದೊಂದು ಬೆಳ್ಳಿನಾಣ್ಯ ಸಿಕ್ಕಿತು. ಮೊತ್ತಮೊದಲು ಗೊತ್ತುಮಾಡಿದವರು  ತಮ್ಮ ಸರದಿ ಬಂದಾಗ, ತಮಗೆ ಹೆಚ್ಚು ಸಿಗುವುದೆಂದು ಭಾವಿಸಿದರು. ಆದರೆ ಅವರಿಗೂ ಒಂದೊಂದೇ  ಬೆಳ್ಳಿನಾಣ್ಯ ದೊರಕಿತು. ಅದನ್ನು ತೆಗೆದುಕೊಂಡಾಗ ಅವರು ದಣಿಯ ವಿರುದ್ಧ ಗೊಣಗಲಾರಂಭಿಸಿದರು. "ಕಡೇ ಹೊತ್ತಿನಲ್ಲಿ ಬಂದ ಇವರು ಒಂದೇ ಒಂದು ಗಂಟೆ  ಕೆಲಸಮಾಡಿದ್ದಾರೆ; ಬಿಸಿಲಲ್ಲಿ ಬೆಂದು, ದಿನವೆಲ್ಲಾ ದುಡಿದು ನಮ್ಮನ್ನು ಇವರಿಗೆ ಸರಿಸಮ  ಮಾಡಿದ್ದೀರಲ್ಲಾ!" ಎಂದರು. ಅದಕ್ಕೆ ಯಜಮಾನ ಅವರಲ್ಲಿ ಒಬ್ಬನಿಗೆ, "ಅಯ್ಯಾ, ನಿನಗೆ ನಾನು ಅನ್ಯಾಯ ಮಾಡಿಲ್ಲ. ದಿನಕೊಂದು ಬೆಳ್ಳಿ ನಾಣ್ಯದಂತೆ ನೀನು ನನ್ನೊಡನೆ ಒಪ್ಪಂದ ಮಾಡಿಕೊಳ್ಳಲಲ್ಲವೇ? ನಿನ್ನ ಕೂಲಿ ಏನೋ ಅದನ್ನು ತೆಗೆದುಕೊಂಡು ಹೋಗು. ನಿನಗೆ ಕೊಟ್ಟಷ್ಟನ್ನು ಈ ಕಟ್ಟಕಡೆಯವನಿಗೂ ಕೊಡುವುದು ನನ್ನ ಇಷ್ಟ . ನನ್ನದನ್ನು ನನ್ನಿಷ್ಟಾನುಸಾರ ಕೊಡುವ ಹಕ್ಕು ನನಗಿಲ್ಲವೆ? ನನ್ನ ಔದಾರ್ಯವನ್ನು ಕಂಡು ನಿನಗೇಕೆ ಹೊಟ್ಟೆಯುರಿ?" ಎಂದ. ಹೀಗೆ, ಕಡೆಯವರು ಮೊದಲಿಗರಾಗುವರು; ಮೊದಲಿನವರು ಕಡೆಯವರಾಗುವರು," ಎಂದು ಯೇಸು ಬೊಧಿಸಿದರು.

20.08.2019 - "ಮೊದಲಿನವರಲ್ಲಿ ಅನೇಕರು ಕಡೆಯವರಾಗುವರು; ಕಡೆಯವರಲ್ಲಿ ಅನೇಕರು ಮೊದಲಿನವರಾಗುವರು"

ಮೊದಲನೇ ವಾಚನ: ನ್ಯಾಯಸ್ಥಾಪಕರು 6:11-24


ಸರ್ವೇಶ್ವರನ ದೂತನು ಬಂದು ಒಫ್ರದಲ್ಲಿದ್ದ ಓಕ್ ಮರದ ಅಡಿಯಲ್ಲಿ ಕುಳಿತುಕೊಂಡನು. ಅದು ಅಬೀಯೆಜೆರನ ಗೋತ್ರದವನಾದ ಯೋವಾಷನದಾಗಿತ್ತು. ಅವನ ಮಗ ಗಿದ್ಯೋನನು ಮಿದ್ಯಾನ್ಯರಿಗೆ ಗೊತ್ತಾಗದ ಹಾಗೆಅಲ್ಲಿ ದ್ರಾಕ್ಷಿಯ ಆಲೆಯ ಮರೆಯಲ್ಲಿ ಗೋದಿಯನ್ನು ಬಡಿಯುತ್ತಿದ್ದನು. ಸರ್ವೇಶ್ವರನ ದೂತನು ಗಿದ್ಯೋನನಿಗೆ ಪ್ರತ್ಯಕ್ಷನಾಗಿ ಅವನಿಗೆ, "ಪರಾಕ್ರಮಶಾಲಿಯೇ, ಸರ್ವೇಶ್ವರ ನಿನ್ನೊಡನೆ ಇದ್ದಾರೆ" ಎಂದನು. ಆಗ ಗಿದ್ಯೋನನು ಅವನಿಗೆ, "ಸ್ವಾಮೀ, ಸರ್ವೇಶ್ವರ ನಮ್ಮೊಡನೆ ಇದ್ದರೆ ನಮಗೆ ಇದೆಲ್ಲಾ ಏಕೆ ಸಂಭವಿಸಿತು? ನಮ್ಮ ಹಿರಿಯರು, ಸರ್ವೇಶ್ವರ ಅದ್ಬುತಗಳನ್ನು ನಡಿಸಿ ತಮ್ಮನ್ನು ಈಜಿಪ್ಟಿನಿಂದ ಬಿಡಿಸಿದರೆಂಬುದಾಗಿ ವಿವರಿಸುತ್ತಿದ್ದರು. ಅಂಥ ಅದ್ಬುತಗಳು ಈಗೆಲ್ಲಿವೆ? ಅವರು ನಮ್ಮನ್ನು ತಿರಸ್ಕರಿಸಿ ಮಿದ್ಯಾನ್ಯರ  ಕೈಗೆ ಒಪ್ಪಿಸಿಬಿಟ್ಟಿದ್ದಾರಲ್ಲಾ," ಎನ್ನಲು, ಸರ್ವೇಶ್ವರ ಅವರನ್ನು ದಿಟ್ಟಿಸಿ ನೋಡಿ, "ನಾನು ನಿನ್ನನ್ನು ಕಳುಹಿಸುತ್ತೇನೆ, ಹೋಗು; ಈ ನಿನ್ನ ಬಲದಿಂದ ಇಸ್ರಯೇಲರನ್ನು ಮಿದ್ಯಾನ್ಯರಿಂದ ಬಿಡಿಸು," ಎಂದು ಹೇಳಿದರು. ಆಗ ಗಿದ್ಯಾನನು, "ಸ್ವಾಮೀ, ನಾನು ಇಸ್ರಯೇಲರನ್ನು ರಕ್ಷಿಸುವುದು ಹೇಗೆ?, ಮನಸ್ಸೆ ಕುಲದಿಂದ ನನ್ನ ಮನೆ ಕನಿಷ್ಠವಾದುದ್ದು; ಮತ್ತು ನಾನು ನಮ್ಮ ಕುಟುಂಬದಲ್ಲಿ ಅಲ್ಪನು," ಎಂದನು. ಸರ್ವೇಶ್ವರ ಅವನಿಗೆ, "ನಾನು ನಿನ್ನೊಂದಿಗೆ ಇರುವುದರಿಂದ ನೀನು ಮಿದ್ಯಾನ್ಯರೆಲ್ಲರನ್ನೂ ಒಬ್ಬ ಮನುಷ್ಯನನ್ನೋ ಎಂಬಂತೆ ಸದೆಬಡಿಯುವೆ," ಎಂದರು.  ಗಿದ್ಯಾನನು: "ಸ್ವಾಮೀ, ದಯವಿರಲಿ; ನನ್ನೊಂದಿಗೆ ಮಾತನಾಡುತ್ತಿರುವ ತಾವು ಸ್ವಾಮಿಯವರೇ ಆಗಿದ್ದೀರೆಂಬುದಕ್ಕೆ ನನಗೊಂದು ಗುರುತನ್ನು ಅನುಗ್ರಹಿಸಬೇಕು. ನಾನು ಹೋಗಿ ತಮಗೆ ಕಾಣಿಕೆಯನ್ನು ತೆಗೆದುಕೊಂಡು ಬರುವವರೆಗೆ ತಾವು ಈ ಸ್ಥಳವನ್ನು ಬಿಡಬಾರದು," ಎಂದು ಬಿನ್ನವಿಸಲು ಅವರು, "ನೀನು ತಿರುಗಿ ಬರುವವರೆಗೆ ನಾನು ಇಇಲ್ಲೇ ಇರುವೆನು," ಎಂದರು. ಗಿದ್ಯಾನನು ಮನೆಗೆ ಹೋಗಿ ಒಂದು ಆಡಿನ ಮರಿಯನ್ನು ಪಕ್ವಮಾಡಿ ಹತ್ತು ಕಿಲೋಗ್ರಾಂ ಹಿಟ್ಟಿನಿಂದ ಹಳಿಯಿಲ್ಲದ ರೊಟ್ಟಿಗಳನ್ನು ಸುಟ್ಟು ಮಾಂಸವನ್ನು ಪುಟ್ಟಿಯಲ್ಲಿಟ್ಟು, ಅದರ ರಸವನ್ನು ಬಟ್ಟಲಿನಲ್ಲಿ ಹೊಯ್ದು, ಎಲ್ಲವನ್ನೂ ಓಕ್ ಮರದ ಕೆಳಗೆ ಅವರ ಮುಂದೆ ತಂದಿಟ್ಟನು. ಆಗ ದೇವದೂತನು ಅವನಿಗೆ, "ಮಾಂಸವನ್ನೂ ರೊಟ್ಟಿಗಳನ್ನೂ ಆ ಬಂಡೆಯ ಮೇಲಿಟ್ಟು ರಸವನ್ನು ಹೊಯ್ಯಿ" ಎನ್ನಲು ಅವನು ಹಾಗೆಯೇ ಮಾಡಿದನು. ಆನಂತರ ಸರ್ವೇಶ್ವರನ ದೂತನು ತನ್ನ ಕೈ ಕೋಲನ್ನು ಚಾಚಿ ಅದರ ತುದಿಯನ್ನು ಆ ರೊಟ್ಟಿಗಳಿಗೂ ಮಾಂಸಕ್ಕೂ  ಮುಟ್ಟಿಸಲು ಬಂಡೆಯಿಂದ ಬೆಂಕಿಯೆದ್ದು ಅವೆರಡನ್ನೂ ದಹಿಸಿಬಿಟ್ಟಿತು. ಸರ್ವೇಶ್ವರನ ದೂತನು ಅದೃಶ್ಯನಾದನು. ಆತನು ಸರ್ವೇಶ್ವರನ ದೂತನೆಂದು ಗಿದ್ಯೋನನು  ತಿಳಿದು ಭಯಪಟ್ಟು, "ಅಯ್ಯೋ ಸ್ವಾಮಿ, ಸರ್ವೇಶ್ವರಾ, ಸರ್ವೇಶ್ವರನ ದೂತನನ್ನು ಮುಖಾಮುಖಿಯಾಗಿ ನೋಡಡಿಬಿಟ್ಟೆನಲ್ಲಾ"ಎಂದು ಕೂಗಿದನು. ಆದರೆ ಸರ್ವೇಶ್ವರನು ಅವನಿಗೆ, "ಸಮಾಧಾನದಿಂದಿರು, ಹೆದರಬೇಡ; ನೀನು ಸಾಯುವುದಿಲ್ಲ" ಎಂದನು. ಗಿದ್ಯೋನನು ಅಲ್ಲೇ ಸರ್ವೇಶ್ವರನಿಗಾಗಿ  ಒಂದು ಬಲಿಪೀಠವನ್ನು ಕಟ್ಟಿ ಅದಕ್ಕೆ "ಯೆಹೋವ ಷಾಲೋಮ್"ಎಂದು ಹೆಸರಿಟ್ಟನು.

ಕೀರ್ತನೆ: 85:9, 11-12, 13-14

ಶ್ಲೋಕ: ಭಯಭಕ್ತಿಯುಳ್ಳವರಿಗಾತ ರಕ್ಷಣೆ ಸನ್ನಿಹಿತ

ಶುಭಸಂದೇಶ: ಮತ್ತಾಯ 19:23-30

ಆಗ ಯೇಸುಸ್ವಾಮಿ ತಮ್ಮ ಶಿಷ್ಯರನು ಉದ್ದೇಶಿಸಿ, "ಐಶ್ವರ್ಯವಂತನು ಸ್ವರ್ಗಸಾಮ್ರಾಜ್ಯವನ್ನು ಪ್ರವೆಶಿಸುವುದು ಕಷ್ಟವೆಂದು ನಿಮಗೆ ಒತ್ತಿ ಹೇಳುತ್ತೇನೆ. ಐಶ್ವರ್ಯವಂತನು ದೇವರ ಸಾಮ್ರಾಜ್ಯವನ್ನು ಪ್ರವೇಶಿಸುವುದಕಿಂತಲೂ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಸುಳುವುದು ಸುಲಭ ಎಂಬುದು ನಿಜ," ಎಂದರು. ಇದನ್ನು ಕೇಳಿದ ಮೇಲಂತೂ ಶಿಷ್ಯರು ಬೆಬ್ಬೆರಗಾದರು, "ಹಾಗಾದರೆ, ಯಾರು ತಾನೇ ಜೀವೋದ್ಧಾರ ಹೊಂದಲು ಸಾಧ್ಯ?" ಎಂದು ಕೊಂಡರು.  ಯೇಸು ಅವರನು ನಿಟ್ಟಿಸಿ ನೋಡುತ್ತಾ, "ಮನುಷ್ಯರಿಗಿದು ಅಸಾಧ್ಯ; ಆದರೆ ದೇವರಿಗೆ ಎಲ್ಲವೂ ಸಾಧ್ಯ," ಎಂದರು. ಪೇತ್ರನು ಆಗ ಮುಂದೆ ಬಂದು, "ನೋಡಿ ನಾವು ಎಲ್ಲವನ್ನು ಬಿಟ್ಟುಬಿಟ್ಟು ತಮ್ಮನ್ನು ಹಿಂಬಾಲಿಸಿದ್ದೇವೆ. ನಮಗೇನು ದೊರಕುತ್ತದೆ?" ಎಂದು ಕೇಳಿದನು. ಅದಕ್ಕೆ ಯೇಸು, "ನಿಮಗೆ ಸತ್ಯವಾಗಿ ಹೇಳುತ್ತೇನೆ: ಹೊಸ ಸೃಷ್ಟಿಯಲ್ಲಿ ನರಪುತ್ರನು ತನ್ನ ಮಹಿಮಾನ್ವಿತ ಸಿಂಹಾಸನದ ಮೇಲೆ ಆಸೀನನಾಗುವಾಗ, ನನ್ನನ್ನು ಹಿಂಬಾಲಿಸಿರುವ ನೀವು ಕೂಡ, ಇಸ್ರಯೆಲಿನ ಹನ್ನೆರಡು ಗೋತ್ರಗಳಿಗೆ ನ್ಯಾಯಾಧಿಪತಿಗಳಾಗಿ ಹನ್ನೆರಡು  ಸಿಂಹಾಸನಗಳ ಮೇಲೆ ಆಸೀನರಾಗುವಿರಿ. ನನ್ನ ನಾಮದ ನಿಮಿತ್ತ ಮನೆಮಠವನ್ನಾಗಲಿ, ಅಣ್ಣ ತಮ್ಮಂದಿರನ್ನಾಗಲಿ, ಅಕ್ಕ ತಂಗಿಯರನ್ನಾಗಲಿ, ತಂದೆ ತಾಯಿಯರನ್ನಾಗಲಿ, ಮಕ್ಕಳು ಮರಿಗಳನ್ನಾಗಲಿ, ಹೊಲ ಗದ್ದೆಗಳನ್ನಾಗಲಿ ತ್ಯೆಜಿಸುವ ಪ್ರತಿಯೊಬ್ಬನೂ ನೂರ್ಮಡಿಯಷ್ಟು ಪಡೆಯುವನು; ಮಾತ್ರವಲ್ಲ, ಅಮರ ಜೀವಕ್ಕೆ ಬಾಧ್ಯಸ್ಥನಾಗುವನು. ಆದರೆ ಮೊದಲಿನವರಲ್ಲಿ ಅನೇಕರು ಕಡೆಯವರಾಗುವರು; ಕಡೆಯವರಲ್ಲಿ ಅನೇಕರು ಮೊದಲಿನವರಾಗುವರು.

19.08.2019 - ಯುವಕ ಖಿನ್ನಮನಸ್ಕನಾಗಿ, ಅಲ್ಲಿಂದ ಹೊರಟೇ ಹೋದ. ಏಕೆಂದರೆ ಅವನಿಗೆ ಅಪಾರ ಆಸ್ತಿಪಾಸ್ತಿಯಿತ್ತು

ಮೊದಲನೇ ವಾಚನ: ನ್ಯಾಯಸ್ಥಾಪಕರು 2:11-19

ಇಸ್ರಯೇಲರು ಬಾಳ್ ದೇವತೆಯ ಪ್ರತಿಮೆಗಳನ್ನು ಪೂಜಿಸಿ ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಗಳಾದರು. ತಮ್ಮ ಪೂರ್ವಜರನ್ನು ಈಜಿಪ್ಟಿನಿಂದ ಕರೆದು ತಂದ ದೇವರಾದ ಸರ್ವೇಶ್ವರನನ್ನು ಬಿಟ್ಟು ಅನ್ಯ ದೇವತೆಗಳನ್ನು ಅಂದರೆ, ತಮ್ಮ ಸುತ್ತಮುತ್ತಲಿನ ಜನಾಂಗಗಳ ದೇವರುಗಳನ್ನು ಅವಲಂಬಿಸಿ ಅವುಗಳಿಗೆ ಅಡ್ಡ ಬಿದ್ದು ಸರ್ವೇಶ್ವರನನ್ನು ರೇಗಿಸಿದರು. ಅವರು ಸರ್ವೇಶ್ವರನನ್ನು ಬಿಟ್ಟು "ಬಾಳ್ ಅಷ್ಟೋರೆತ್" ಎಂಬ ದೇವತೆಗಳನ್ನು ಪೂಜಿಸತೊಡಗಿದರು. ಅದ್ದರಿಂದ ಸರ್ವೇಶ್ವರನ ಕೋಪ ಅವರ ಮೇಲೆ ಉರಿಯಹತ್ತಿತು; ಅವರನ್ನು ಕೊಳ್ಳೆ ಹೊಡೆದವರ ಕೈಗೆ ಒಪ್ಪಿಸಿದರು. ಶತ್ರುಗಳು ಅವರನ್ನು ಸುಲಿಗೆ ಮಾಡಿದರು. ಸರ್ವೇಶ್ವರ ಅವರನ್ನು ಅಕ್ಕಪಕ್ಕದ ವೈರಿಗಳಿಗೆ ಮಾರಿ ಬಿಟ್ಟರು. ಆ ಶತ್ರುಗಳ. ಮುಂದೆ ಇಸ್ರಯೇಲರು ನಿಲ್ಲಲಾರದೆ ಹೋದರು. ಮೊದಲೇ ಆಣೆಯಿಟ್ಟು ಹೇಳಿದಂತೆ ಅವರು ಎಲ್ಲಿಗೆ ಹೋದರೂ ಸರ್ವೇಶ್ವರನ ಕೈ ಅವರಿಗೆ ವಿರೋಧವಾಗಿಯೇ ಇತ್ತು. ಅವರಿಗೆ ಬಹಳ ದುಃಖ  ಉಂಟಾಯಿತು. ಆಗ ಸರ್ವೇಶ್ವರ ಅವರನ್ನು ಸೂರೆ ಮಾಡುವವರ ಕೈಯಿಂದ ತಪ್ಪಿಸಲು ನ್ಯಾಯಾಧಿಪತಿಗಳನ್ನು ಕಳುಹಿಸಿದರು. ಇಸ್ರಯೇಲರು ಇವರ ಮಾತನ್ನೂ ಕೇಳದೆ ಅನ್ಯದೇವತೆಗಳನ್ನು ಪೂಜಿಸಿ ಅವುಗಳಿಗೆ ಅಡ್ಡಬಿದ್ದು ದೇವ ದ್ರೋಹಿಗಳಾದರು. ಸರ್ವೇಶ್ವರನ ಆಜ್ಞೆಗಳನ್ನು ಪಾಲಿಸುತ್ತಿದ್ದ ತಮ್ಮ ಪೂರ್ವಜರ ಮಾರ್ಗವನ್ನು ಬೇಗನೆ ತ್ಯಜಿಸಿಬಿಟ್ಟರು. ಅವರಂತೆ ನಡೆಯಲ್ಲೇ ಇಲ್ಲ. ವೈರಿಗಳ ಹಿಂಸೆಯನ್ನು ತಾಳಲಾರದೆ ಇಸ್ರಯೇಲರು ಗೋಳಿಟ್ಟರು. ಸರ್ವೇಶ್ವರ ಅದನ್ನು ಕೇಳಿ ಕನಿಕರಪಟ್ಟು ನ್ಯಾಯಾಧಿಪತಿಗಳನ್ನು ಕಳುಹಿಸಿಕೊಟ್ಟರು; ಜೀವಮಾನವೆಲ್ಲ ಅವರ ಸಂಗಡವೇ ಇದ್ದು ಅವರ ಮುಖಾಂತರ ಇಸ್ರಯೇಲರನ್ನು ಶತ್ರುಗಳಿಂದ ಬಿಡಿಸಿದರು. ತಮ್ಮನ್ನು ಹಿಂಸಿಸುತ್ತಿದ್ದವರ ಕಾಟವನ್ನು ತಾಳದೆ ಮೊರೆಯಿಡುವುದನ್ನು ಸರ್ವೇಶ್ವರ ಕೇಳಿ ಮನ ಮರುಗಿದರು. ಅಂಥ ನ್ಯಾಯಾಧಿಪತಿಗಳು ತೀರಿಹೋದ ನಂತರ ಇಸ್ರಯೇಲರು ಮತ್ತೆ ತಮ್ಮ ಹಿಂದಿನವರಿಗಿಂತಲೂ ಭ್ರಷ್ಠರಾಗಿ ಅನ್ಯ ದೇವತೆಗಳನ್ನು ಅವಲಂಬಿಸಿ ಅವುಗಳಿಗೆ ಸೇವೆ ಮಾಡಿ ಅಡ್ಡಬಿದ್ದರು. ಅವರು ತಮ್ಮ ದುರ್ಮಾರ್ಗವನ್ನೂ ಹಠಮಾರಿತನವನ್ನೂ ಬಿಡಲೇ ಇಲ್ಲ.

ಕೀರ್ತನೆ: 106:34-35, 36-37, 39-40, 43-44

ಶ್ಲೋಕ: ಮರೆಯಬೇಡೆನ್ನನು ಪ್ರಭೂ, ನಿನ್ನ ಪ್ರಜೆಗೆ ದಯೆ ತೋರುವಾಗ

ಶುಭಸಂದೇಶ: ಮತ್ತಾಯ 19:16-22


ಒಮ್ಮೆ ಯೇಸುಸ್ವಾಮಿಯ ಬಳಿಗೆ ಒಬ್ಬ ಯುವಕನು ಬಂದು, "ಗುರುದೇವಾ, ಅಮರ ಜೀವವನ್ನು ಪಡೆಯಲು ನಾನು ಒಳ್ಳೆಯದೇನನ್ನು ಮಾಡಬೇಕು?" ಎಂದು ಕೇಳಿದನು. ಅದಕ್ಕೆ ಅವರು, "ಒಳ್ಳೆಯದನ್ನು ಕುರಿತು ನೀನು  ನನ್ನನ್ನು ವಿಚಾರಿಸುವುದು ಏಕೆ? ಒಳ್ಳೆಯವರು ಒಬ್ಬರೇ. ನೀನು ಆ ಜೀವಕ್ಕೆ ಪ್ರವೇಶಿಸಬೇಕಾದರೆ ದೈವಾಜ್ಞೆಯನ್ನು ಅನುಸರಿಸು," ಎಂದರು. "ಅವು ಯಾವುವು?" ಎಂದು ಮರು ಪ್ರಶ್ನೆ ಹಾಕಿದ ಅವನಿಗೆ ಯೇಸು, "ನರ ಹತ್ಯೆ ಮಾಡಬಾರದು, ವ್ಯೆಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳು ಸಾಕ್ಷಿ ಹೇಳಬಾರದು, ನಿನ್ನ ತಂದೆ ತಾಯಿಗಳನ್ನು ಗೌರವಿಸಬೇಕು ಮತ್ತು ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸಬೇಕು," ಎಂದರು. ಅದಕ್ಕೆ ಆ ಯುವಕ, "ಇವೆಲ್ಲವನ್ನೂ ಅನುಸರಿಸಿಕೊಂಡು ಬಂದಿದ್ದೇನೆ. ನನ್ನಲ್ಲಿ ಇನ್ನೇನು ಕೊರತೆ ಇದೆ?" ಎಂದು ಮತ್ತೇ ಕೇಳಿದ. ಆಗ ಯೇಸು, "ನೀನು ಸಂಪೂರ್ಣನಾಗಬೇಕು ಎಂದಿದ್ದರೆ ಹೋಗು, ನಿನ್ನ ಆಸ್ಥಿಯನ್ನೆಲ್ಲಾ ಮಾರಿ, ಬಡಬಗ್ಗರಿಗೆ ದಾನ ಮಾಡು; ಸ್ವರ್ಗದಲ್ಲಿ ನಿನಗೆ ಸಂಪತ್ತು ಇರುತ್ತದೆ. ನೀನು ಬಂದು ನನ್ನನ್ನು ಹಿಂಬಾಲಿಸು," ಎಂದರು. ಇದನ್ನು ಕೇಳಿದ್ದೇ. ಆ ಯುವಕ ಖಿನ್ನಮನಸ್ಕನಾಗಿ ಅಲ್ಲಿಂದ ಹೊರಟೇ ಹೋದ. ಏಕೆಂದರೆ ಅವನಿಗೆ ಅಪಾರ ಆಸ್ತಿಪಾಸ್ತಿಯಿತ್ತು.

18.08.19 - "ನಾನು ಬಂದಿರುವುದು ಜಗತ್ತಿನಲ್ಲಿ ಬೆಂಕಿಯನ್ನು ಹೊತ್ತಿಸಲು"

ಮೊದಲನೇ ವಾಚನ: ಯೆರೆಮೀಯ 38:4-6, 8-10

ಪದಾಧಿಕಾರಿಗಳು ಅರಸನ ಬಳಿಗೆ ಬಂದು, "ಒಡೆಯಾ, ಈ ಯೆರೆಮೀಯನಿಗೆ ಮರಣ ದಂಡನೆಯಾಗಬೇಕು. ಇವನು ನಗರದಲ್ಲಿರುವ ಸೈನಿಕರಿಗೂ ಇಂಥ ಭವಿಷ್ಯವನ್ನು ನುಡಿಯುತ್ತಾ  ಅವರು ಎದೆಗುಂದುವಂತೆ ಮಾಡುತ್ತಿದ್ದಾನೆ. ಅವನು ಹಾರೈಸುವುದು ಜನರ ಕ್ಷೇಮವನ್ನಲ್ಲ ಹಾನಿಯನ್ನೇ," ಎಂದು ದೂರಿತ್ತನು. ಅದಕ್ಕೆ ಅರಸ ಚಿದ್ಕೀಯನು, "ಇಗೋ, ಯೆರೆಮೀಯನು ನಿಮ್ಮ ಕೈಯಲ್ಲಿದ್ದಾನೆ. ಅರಸನು ನಿಮಗೆ ಅಡ್ಡಬಂದು ಏನೂ ಮಾಡಬಲ್ಲವನಲ್ಲ," ಎಂದನು. ಅವರು ಯೆರೆಮೀಯನನ್ನು ಹಿಡಿದು   ಕಾರಾಗೃಹದ ಅಂಗಳದಲ್ಲಿದ್ದ ರಾಜವಂಶೀಯನಾದ ಮಲ್ಕೀಯನ ಬಾವಿಯೊಳಗೆ ಹಗ್ಗಗಳಿಂದ ಇಳಿಸಿ ಅಲ್ಲೇ ಬಿಟ್ಟುಬಿಟ್ಟರು ಆ ಬಾವಿಯಲ್ಲಿ ನೀರಿರಲಿಲ್ಲ. ಕೆಸರಿತ್ತು. ಯೆರೆಮೀಯನು ಅದರೊಳಗೆ ಹೂತುಕೊಂಡನು. ಇದನ್ನು ತಿಳಿದುಕೊಂಡ ಅರಮನೆಯ ಕಂಚುಕಿಯು ಅರಮನೆಯಿಂದ ಹೊರಟು, ಬೆನ್ಯಾಮೀನಿನ ಬಾಗಿಲಿನಲ್ಲಿ ಕುಳಿತುಕೊಂಡಿದ್ದ ಅರಸನ ಬಳಿಗೆ ಬಂದು, "ನನ್ನೊಡೆಯಾ, ಅರಸರೇ, ಈ ಜನರು ಪ್ರವಾದಿ ಯೆರೆಮೀಯನಿಗೆ ಮಾಡಿರುವುದೆಲ್ಲಾ ದುಷ್ಟ ಕಾರ್ಯವೇ ಸರಿ. ಅವನನು ಬಾವಿಯಲ್ಲಿ ಹಾಕಿದ್ದಾರೆ. ಆಹಾರವಿಲ್ಲದೆ ಅವನು ಬಿದ್ದಲ್ಲೇ ಸಾಯುವುದು ಖಚಿತ. ಏಕೆಂದರೆ ನಗರದಲ್ಲಿ ರೊಟ್ಟಿಯಲ್ಲಾ ತೀರಿಹೋಗದೆ," ಎಂದು ಅರಿಕೆ ಮಾಡಿದನು . ಇದನ್ನು ಕೇಳಿದ ಅರಸನು ಸುಡಾನಿನ ಎಬೆದ್ಮೆಲೆಕನಿಗೆ, "ನೀನು ಇಲ್ಲಿಂದ ಮೂವತ್ತು ಮಂದಿ ಆಳುಗಳನ್ನು ಕರೆದುಕೊಂಡು ಹೋಗಿ ಪ್ರವಾದಿ ಯೆರೆಮೀಯನು ಸಾಯುವ ಮೊದಲೇ, ಅವನನ್ನು ಬಾವಿಯಿಂದ ಎತ್ತಿಸು," ಎಂದು ಅಪ್ಪಣೆಕೊಟ್ಟನು.

ಕೀರ್ತನೆ: 40:2, 3, 4, 18

ಶ್ಲೋಕ: ನನಗೊತ್ತಾಸೆ ಮಾಡಲು ಪ್ರಭೂ, ಬೇಗ ಬಾ

ಎರಡನೇ ವಾಚನ: ಹಿಬ್ರಿಯರಿಗೆ 12:1-4

ಆದಕಾರಣ ಇಷ್ಟುಮಂದಿ ಸಾಕ್ಷಿಗಳು ದೊಡ್ಡ ಮೇಘದಂತೆ ನಮ್ಮ ಸುತ್ತಲೂ ಆವರಿಸಿರುವಾಗ, ನಮಗೆ ಅಡ್ಡಿಯಾಗಬಲ್ಲ ಹೊರೆಯನ್ನೂ ಅಂಟಿಕೊಳ್ಳುವ ಪಾಪವನ್ನೂ ತೆಗೆದುಹಾಕಿ, ನಮಗಾಗಿ ನೇಮಿಸಿರುವ ಓಟದ ಸ್ಪರ್ಧೆಯಲ್ಲಿ ನಾವು ಸ್ಥಿರಚಿತ್ತದಿಂದ ಭಾಗವಹಿಸೋಣ. ವಿಶ್ವಾಸವನ್ನು ಹುಟ್ಟಿಸುವ ಮತ್ತು ಅದನ್ನು ಪರಿಪೂರ್ಣಗೊಳಿಸುವ ಯೇಸುಸ್ವಾಮಿಯನ್ನು ಗುರಿಯಾಗಿಟ್ಟು ಓಡೋಣ. ಅವರು ತಮ್ಮ ಮುಂದಿಡಲಾದ ಸೌಭಾಗ್ಯವನ್ನು ಗಳಿಸಲು ನಿಂದೆ ಅವಮಾನಗಳನ್ನು ಲೆಕ್ಕಿಸದೆ ಶಿಲುಬೆಯ ಮರಣವನ್ನು ಸಹಿಸಿಕೊಂಡರು. ಈಗಲಾದರೋ ದೇವರ ಸಿಂಹಾಸನದ ಬಲಗಡೆ ಆಸೀನರಾಗಿದ್ದಾರೆ. ಪಾಪಿಗಳಿಂದ ತಮಗುಂಟಾದ ಕಠಿಣ ವಿರೋಧವನ್ನು ಯೇಸುಸ್ವಾಮಿ ಹೇಗೆ ಸಹಿಸಿಕೊಂಡರೆಂಬುದನ್ನು ಮನಸ್ಸಿನಲ್ಲಿಡಿ. ಆಗ ನೀವು ಬೇಸತ್ತು ಎದೆಗುಂದಲಾರಿರಿ.  ಪಾಪದ ವಿರುದ್ಧ ನೀವು ಕೈಗೊಂಡ ಹೋರಾಟದಲ್ಲಿ ನಿಮ್ಮ ರಕ್ತವನ್ನೇ ಸುರಿಸುವ ಸ್ಥಿತಿಗೆ ನೀವಿನ್ನೂ ಬಂದಿಲ್ಲ.

 ಶುಭಸಂದೇಶ: ಲೂಕ 12:49-53


ಯೇಸು ತಮ್ಮ ಶಿಷ್ಯರಿಗೆ ಹೇಳಿದ್ದೇನೆಂದರೆ, "ನಾನು ಬಂದಿರುವುದು ಜಗತ್ತಿನಲ್ಲಿ ಬೆಂಕಿಯನ್ನು ಹೊತ್ತಿಸಲು. ಅದು ಈಗಾಗಲೇ ಉರಿಯುತ್ತಿರಬೇಕೆಂಬುದೇ ನನ್ನ ಬಯಕೆ. ಆದರೆ ನಾನು ಪಡೆಯಬೇಕಾದ ಶ್ರಮಾಸ್ನಾನ ಒಂದುಂಟು. ಅದು ಈಡೇರುವ ತನಕನನಗೆ ನೆಮ್ಮದಿಯಿಲ್ಲ. ನಾನು ಲೋಕಕ್ಕೆ ಸಮಾಧಾನವನ್ನು ತರಲು ಬಂದೆ ಎಂದು ಭಾವಿಸುತ್ತೀರೋ? ಇಲ್ಲ. ಭಿನ್ನಭೇದಗಳನ್ನು ಉಂಟುಮಾಡಲು ಬಂದೆನೆಂದು ನಿಮಗೆ ಒತ್ತಿ ಹೇಳುತ್ತೇನೆ. ಹೇಗೆಂದರೆ, ಒಂದೇ ಮನೆಯಲ್ಲಿರುವ ಐವರಲ್ಲಿ,  ಇಬ್ಬರಿಗೆ ವಿರುದ್ಧ ಮೂವರು ಮೂವರಿಗೆ ವಿರುದ್ಧ ಇಬ್ಬರು ವಿಭಾಗವಾಗುವರು. ಮಗನಿಗೆ ವಿರುದ್ಧವಾಗಿ ತಂದೆ, ಮಗಳಿಗೆ, ವಿರುದ್ಧವಾಗಿ ತಾಯಿ, ಸೊಸೆಗೆ ವಿರುದ್ಧವಾಗಿ ಅತ್ತೆ, ಪರಸ್ಪರ ವಿರೋಧವಾಗಿ ವಿಂಗಡಿಸಿ ಹೋಗುವರು."

17.08.19 - "ನಾನು ಮತ್ತು ನನ್ನ ಮನೆಯವರು ಮಾತ್ರ ಸರ್ವೇಶ್ವರನಿಗೆ ಸೇವೆ ಸಲ್ಲಿಸುತ್ತೇವೆ"

ಮೊದಲನೇ ವಾಚನ: ಯೆಹೋಶುವ 24:14-29

"ಈ ಕಾರಣ ನೀವು ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರಾಗಿರಿ. ಪೂರ್ಣ ಮನಸ್ಸಿನಿಂದ ಯಥಾರ್ಥಚಿತ್ತದಿಂದ ಅವರಿಗೆ ಸೇವೆ ಸಲ್ಲಿಸಿರಿ. ನಿಮ್ಮ ಪೂರ್ವಜರು ಯೂಪ್ರಟೀಸ್ ನದಿಯಾಚೆ ಯಲ್ಲೂ ಈಜಿಪ್ಟಿನಲ್ಲೂ ಪೂಜಿಸುತ್ತಿದ್ದ ದೇವತೆಗಳನ್ನು ತೊರೆದು ಬಿಡಿ. ಸರ್ವೇಶ್ವರನಿಗೆ ಸೇವೆ ಸಲ್ಲಿಸಿರಿ. ನಿಮಗೆ ಇದು ಸರಿ ಕಾಣದಿದ್ದರೆ ಯಾರಿಗೆ ಸೇವೆ ಸಲ್ಲಿಸಬೇಕೆಂದಿದ್ದೀರಿ ಇಂದೇ ಆರಿಸಿಕೊಳ್ಳಿ; ನಿಮ್ಮ ಪೂರ್ವಜರು ಯೂಪ್ರಟಿಸ್ ನದಿಯ ಆಚೆಯಲ್ಲಿ ಪೂಜಿಸುತ್ತಿದ್ದ ದೇವತೆಗಳಿಗೋ? ಹೇಳಿ. ನಾನು ಮತ್ತು ನನ್ನ ಮನೆಯವರು ಮಾತ್ರ ಸರ್ವೇಶ್ವರನಿಗೆ ಸೇವೆ ಸಲ್ಲಿಸುತ್ತೇವೆ," ಎಂದನು. ಅದಕ್ಕೆ ಜನರು, "ಸರ್ವೇಶ್ವರನನ್ನು ಬಿಟ್ಟು ಅನ್ಯ ದೇವತೆಗಳಿಗೆ ಸೇವೆ ಸಲ್ಲಿಸುವುದು  ನಮ್ಮಿಂದ ದೂರವಿರಲಿ. ನಾವು ದಾಸತ್ವದಲ್ಲಿದ್ದ ಈಜಿಪ್ಟಿನಿಂದ ನಮ್ಮನ್ನೂ ನಮ್ಮ ಪೂರ್ವಜರನ್ನೂ ಹೊರ ತಂದವರು ನಮ್ಮ ದೇವರಾದ ಸರ್ವೇಶ್ವರ ಸ್ವಾಮಿಯೇ. ನಮ್ಮೆದುರಿನಲ್ಲೇ ಅವರು ಮಾಡಿದ ಅದ್ಬುತ ಕಾರ್ಯಗಳನ್ನು  ನೋಡಿದ್ದೇವೆ. ನಮ್ಮ ಎಲ್ಲಾ ಪ್ರಯಾಣಗಳಲ್ಲೂ ನಾವು ದಾಟಿಬಂದ ಜನಾಂಗಗಳಿಂದ ನಮ್ಮನ್ನು ಕಾಪಾಡಿದವರು ಅವರೇ. ಈನಾಡಿನ ನಿವಾಸಿಗಳಾಗಿದ್ದ ಅಮೋರಿಯರು ಮೊದಲಾದ ಎಲ್ಲಾ ಜನಾಂಗಗಳನ್ನು ಇಲ್ಲಿಂದ ಹೊರಡಿಸಿಬಿಟ್ಟರು ಅವರೇ. ಆದುದರಿಂದ ನಾವು ಕೂಡ ಸರ್ವೇಶ್ವರನಿಗೆ ಸೇವೆ ಸಲ್ಲಿಸುತ್ತೇವೆ. ಅವರೇ ನಮ್ಮ ದೇವರು," ಎಂದು ಉತ್ತರಕೊಟ್ಟರು. ಆಗ ಯೆಹೋಶುವನು ಅವರಿಗೆ, "ನೀವು ಸರ್ವೇಶ್ವರನಿಗೆ ಸೇವೆ ಸಲ್ಲಿಸಲು ಶಕ್ತರಲ್ಲ. ಸರ್ವೇಶ್ವರ ಸ್ವಾಮಿ ಪರಿಶುದ್ದರು; ತಮಗೆ ಸಲ್ಲಿಸಬೇಕಾದ ಗೌರವವನ್ನು ಮತ್ತೊಬ್ಬರಿಗೆ ಸಲ್ಲಗೊಡಿಸದ ದೇವರು; ಅವರು ನಿಮ್ಮ ಪಾಪ, ಅಪರಾಧಗಳನ್ನು ಕ್ಷಮಿಸುವರು. ನೀವು ಅವರನು ಬಿಟ್ಟು ಅನ್ಯ ದೇವತೆಗಳಿಗೆ ಸೇವೆ ಸಲ್ಲಿಸಿದರೆ ನಿಮಗೆ ವಿಮುಖರಾಗಿ, ಒಳಿತಿಗೆ ಬದಲಾಗಿ ಕೇಡನ್ನೇ ಬರಮಾಡಿ ನಿಮ್ಮನ್ನು ನಾಶಮಾಡಿ ಬಿಡುವರು," ಎಂದನು. ಜನರು ಯೆಹೋಶುವನಿಗೆ, "ಇಲ್ಲ ನಾವು ಸರ್ವೇಶ್ವರ ಸ್ವಾಮಿಗೇ  ಸೇವೆ ಸಲ್ಲಿಸುತ್ತೇವೆ," ಎಂದರು. ಯೆಹೋಶುವ ಅವರಿಗೆ, "ನೀವು ಸರ್ವೇಶ್ವರನಿಗೇ ಸೇವೆ ಸಲ್ಲಿಸುವುದನ್ನು ಆರಿಸಿ ಕೊಂಡಿರುವುದಕ್ಕೆ ನೀವೇ ಸಾಕ್ಷಿಗಳು," ಎನ್ನಲು ಅವರು, "ಹೌದು, ನಾವೇ ಸಾಕ್ಷಿಗಳು," ಎಂದು ಉತ್ತರ ಕೊಟ್ಟರು. ಆಗ ಯೆಹೋಶುವ, ಹಾಗಾದರೆ ನಿಮ್ಮಲ್ಲಿರುವ ಅನ್ಯ ದೇವತೆಗಳನ್ನು ತೊರೆದು ಬಿಟ್ಟು ಇಸ್ರಯೇಲಿನ ದೇವರಾದ ಸರ್ವೇಶ್ವರನ ಕಡೆಗೆ ನಿಮ್ಮ ಹೃನ್ಮನಗಳನ್ನು ತಿರುಗಿಸಿಕೊಳ್ಳಿ," ಎಂದನು. ಅದಕ್ಕೆ ಜನರು, "ನಮ್ಮ ದೇವರಾದ ಸರ್ವೇಶ್ವರನಿಗೇ ಸೇವೆ ಸಲ್ಲಿಸುತ್ರೇವೆ.  ಅವರ ಮಾತನ್ನೇ ಕೇಳುತ್ತೇವೆ," ಎಂದರು. ಹೀಗೆ ಯೆಹೋಶುವ ಶೆಕೆಮಿನಲ್ಲಿ ಇಸ್ರಯೇಲರೊಡನೆ ಒಪ್ಪಂದ ಮಾಡಿಕೊಂಡು  ಅವರಿಗೆ ವಿಧಿ ನಿಯಮಗಳನ್ನು ನೇಮಿಸಿದನು. ಇದು ಮಾತ್ರವಲ್ಲ, ಈ ಎಲ್ಲಾ ಮಾತುಕತೆಯನ್ನು ದೇವರ ಧರ್ಮಶಾಸ್ತ್ರಗ್ರಂಥಲ್ಲಿ ಬರೆದಿಟ್ಟನು. ಒಂದು ದೊಡ್ಡ ಕಲ್ಲನ್ನು ಸರ್ವೇಶ್ವರನ ಆಲಯದ ಹತ್ತಿರದಲ್ಲೇ ಇದ್ದ ಓಕ್ ವೃಕ್ಷದ ಅಡಿಯಲ್ಲಿ ನಿಲ್ಲಿಸಿದನು. ಬಳಿಕ ಎಲ್ಲಾ ಜನರಿಗೆ,  "ಇಗೋ, ನೋಡಿ ಈ ಕಲ್ಲು! ಇದು ನಿಮ್ಮ ವಿಷಯದಲ್ಲಿ ಸಾಕ್ಷಿ ಹೇಳುವುದು. ಸರ್ವೇಶ್ವರ ನಮಗೆ ಹೇಳಿದ ಎಲ್ಲ ಮಾತುಗಳನ್ನು ಇದು ಕೇಳಿದೆ. ಆದ್ದರಿಂದ ನೀವು ನಿಮ್ಮ ದೇವರಾದ ಅವರನ್ನು ಅಲ್ಲಗಳೆದುದ್ದೇ ಆದರೆ ಈ ಕಲ್ಲೇ ನಿಮಗೆ ಸಾಕ್ಷಿಯಾಗಿರುವುದು," ಎಂದು ಹೇಳಿ ಆ ಜನರನ್ನು ಅವರವರ ಸೊತ್ತಿದ್ದಲ್ಲಿಗೆ ಕಳುಹಿಸಿಬಿಟ್ಟನು. ಇದಾದ ಮೇಲೆ ಸರ್ವೇಶ್ವರನ ದಾಸನಾದ ನೂನನ ಮಗ ಯೆಹೋಶುವನು ನೂರ ಹತ್ತು ವರ್ಷದವನಾಗಿ ಮರಣ ಹೊಂದಿದ.

ಕೀರ್ತನೆ: 16:1-2, 5, 7-8, 11

ಶ್ಲೋಕ: ನಿನ್ನ ಕೈಯಲ್ಲಿದೆ ಪ್ರಭು, ನನ್ನ ವಿಮೆ

ಶುಭಸಂದೇಶ: ಮತ್ತಾಯ 19:13-15


ಆನಂತರ ಕೆಲವರು ಚಿಕ್ಕಮಕ್ಕಳನ್ನು ಯೇಸುಸ್ವಾಮಿಯ ಬಳಿಗೆ ತಂದರು. ಶಿಷ್ಯರು ಅವರನ್ನು ಗದರಿಸಿದರು. ಆಗ ಯೇಸು, "ಚಿಕ್ಕ ಮಕ್ಕಳನ್ನು ನನ್ನ ಬಳಿಗೆ  ಬರಲು ಬಿಡಿ; ಅವುಗಳನ್ನು ತಡೆಯಬೇಡಿ. ಸ್ವರ್ಗ ಸಾಮ್ರಾಜ್ಯ ಇಂಥವರದೇ," ಎಂದರು. ತರುವಾಯ ಆ ಮಕ್ಕಳ ಮೇಲೆ ಕೈ ಇಟ್ಟು ಆಶೀರ್ವದಿಸಿದರು. ಬಳಿಕ ಅಲ್ಲಿಂದ ಹೊರಟು ಹೋದರು.

16.08.19 - "ದೇವರು ಒಂದುಗೂಡಿಸಿದ್ದನ್ನು ಮನುಷ್ಯನು ಬೇರ್ಪಡಿಸದೆ ಇರಲಿ,"

ಮೊದಲನೇ ವಾಚನ: ಯೆಹೋಶುವ  24:1-13


ಯೆಹೋಶುವನು ಎಲ್ಲ ಇಸ್ರಯೇಲ ಕುಲದವರನ್ನು ಶೆಕೆಮಿನಲ್ಲಿ ಸಭೆ ಸೇರಿಸಿದನು. ಹಿರಿಯರು, ನಾಯಕರು, ನ್ಯಾಯಾಧಿಪತಿಗಳು, ಅಧಿಕಾರಿಗಳು ಬಂದು ದೇವರ ಸನ್ನಿಧಿಯಲ್ಲಿ ಉಪಸ್ಥಿತರಾದರು. ಯೆಹೋಶುವ ಅವರೆಲ್ಲರನ್ನು  ಉದ್ದೇಶಿಸಿ: "ಅಬ್ರಹಾಮ್, ನಾಹೊರ್ ಎಂಬುವರ ತಂದೆಯಾದ ತೆಹರ ಮೊದಲಾದ ನಿಮ್ಮ ಮೂಲ ಪುರುಷರು ಪೂರ್ವದಲ್ಲಿ ಯೂಫ್ರೆಟಿಸ್ ನದಿಯ ಆಚೆಯಿದ್ದರು. ಅನ್ಯ ದೇವತೆಗಳನ್ನು ಪೂಜಿಸುತ್ತಿದ್ದರು. ನಾನು ನಿಮ್ಮ ಪಿತೃವಾದ ಅಬ್ರಹಾಮನನ್ನು ಅಲ್ಲಿಂದ ಕರೆ ತಂದು, ಕಾನಾನ್ ನಾಡಿನಲ್ಲೆಲ್ಲಾ ಸಂಚಾರ ಮಾಡಿಸಿದೆ. ಇಸಾಕನೆಂಬ ಮಗನನು ಕೊಟ್ಟು ಅವನ ಸಂತಾನವನ್ನು ಹೆಚ್ಚಿಸಿದೆ. ಇಸಾಕನಿಗೆ ಯಾಕೋಬ್ ಮತ್ತು ಏಸಾವ್ ಎಂಬ ಇಬ್ಬರು ಮಕ್ಕಳನ್ನು ಅನುಗ್ರಹಿಸಿದೆ ಏಸಾವನಿಗೆ ಸೇಯೀರ್ ಬೆಟ್ಟವನ್ನು ಸ್ವಂತ ಸೊತ್ತಾಗಿ ದಯಪಾಲಿಸಿದೆ. ಯಕೋಬನಾದರೋ ತನ್ನ ಮಕ್ಕಳ ಸಮೇತ ಈಜಿಪ್ಟ್ ದೇಶಕ್ಕೆ ಹೋದ  ಬಳಿಕ ನಾನು ಮೋಶೆ ಹಾಗೂ ಆರೋನರನ್ನು ಕಳಿಸಿ, ಆ ಈಜಿಪ್ಟಿನಲ್ಲಿ ಅನೇಕ ಅದ್ಬುತ ಕಾರ್ಯಗಳನ್ನು ನಡೆಸಿ, ಆ ಜನರನ್ನು ಬಾಧಿಸಿ, ನಿಮ್ಮನ್ನು ಹೊರಗೆ ಕರೆ ತಂದೆ. ನಿಮ್ಮ ಪೂರ್ವಜರು ಈಜಿಪ್ಟಿನಿಂದ ಬಿಡುಗಡೆಯಾಗಿ ಕೆಂಪು ಸಮುದ್ರಕ್ಕೆ ಬರುತ್ತಾ ಇರುವಾಗ ಈಜಿಪ್ಟಿನವರ ರಥಾಶ್ವಬಲಗಳ ಸಹಿತ  ಅವರನ್ನು ಆ ಸಮುದ್ರದವರೆಗೂ ಹಿಂದಟ್ಟಿ ಬಂದರು. ಆಗ ನಮ್ಮ ಪೂರ್ವಜರು ನನಗೆ ಮೊರೆಯಿಟ್ಟರು. ನಾನು ಅವರಿಗೂ ಈಜಿಪ್ಟಿನವರಿಗೂ ಮಧ್ಯೆ ಕಾರ್ಗತ್ತಲೆಯನ್ನು ಉಂಟುಮಾಡಿದೆ. ಇದಲ್ಲದೆ ಈಜಿಪ್ಟಿನವರ ಮೇಲೆ ಸಮುದ್ರವನ್ನು ಬರಮಾಡಿ ಅವರನ್ನು ಮುಳುಗಿಸಿಬಿಟ್ಟೆ. ನಾನು ಈಜಿಪ್ಟಿನಲ್ಲಿ ಏನೇನು ಮಾಡಿದೆನೆಂಬುದಕ್ಕೆ ನೀವೇ ಸಾಕ್ಷಿಗಳು. ನೀವು ದೀರ್ಘಕಾಲ ಮರುಭೂಮಿಯಲ್ಲಿದ್ದಿರಿ. ಆನಂತರ ನಿಮ್ಮನ್ನು ಜೋರ್ಡಾನಿನ ಆಚೆ ಅಮೋರಿಯರ ನಾಡಿಗೆ ಕರೆತಂದೆ. ನಿಮ್ಮೊಡನೆ ಯುದ್ಧಕ್ಕೆ ಬಂದ ಅವರನ್ನು ನಿಮ್ಮ ಕೈ ವಶ ಮಾಡಿದೆ. ನೀವು ಅವರ ನಾಡನ್ನು ಸ್ವತಂತ್ರಿಸಿಕೊಂಡಿರಿ. ಅವರನ್ನು ನಿಮ್ಮೆದುರಿನಲ್ಲೇ ನಾಶ ಮಾಡಿದೆ. ಆಮೇಲೆ ಮೊವಾಬ್ಯರ ಅರಸನೂ ಚಿಪ್ಪೋರನ ಮಗನೂ ಆದ  ಬಾಲಾಕನು ಇಸ್ರಯೇಲರಾದ ನಿಮ್ಮ ವಿರುದ್ಧ ಯುದ್ಧ ಮಾಡಲು ಎದ್ದ. ನಿಮ್ಮನ್ನು ಶಪಿಸಲು ಬೆಯೋರನ ಮಗ ಬಿಳಾಮನಿಗೆ ಕರೆ ಕಳುಹಿಸಿದ. ಆದರೆ ನಾನು ಆ ಬಿಳಾಮನಿಗೆ ಸಮ್ಮತಿ ಕೊಡಲಿಲ್ಲವಾದ್ದರಿಂದ ಅವನು ನಿಮ್ಮನ್ನು ಆಶೀರ್ವದಿಸುತ್ತಲೇ ಇರಬೇಕಾಯಿತು. ಹೀಗೆ ನಿಮ್ಮನ್ನು ಅವನ ಕೈಗೆ ಬೀಳದಂತೆ ತಪ್ಪಿಸಿದೆ. ನೀವು ಜೋರ್ಡಾನನ್ನು ದಾಟಿ ಜೆರಿಕೋವಿಗೆ ಬಂದಿರಿ. ಆಗ ಜೆರಿಕೋವಿನವರು, ಅಮೋರಿಯರು, ಪೆರಿಜ್ಜೀಯರು, ಕಾನಾನ್ಯರು, ಹಿತ್ತಿಯರು, ಗಿರ್ಗಾಷ್ಟಿಯರು, ಹಿವ್ವಿಯರು ಹಾಗೂ ಯೆಬೂಸಿಯರು ಇವರೆಲ್ಲರೂ ನಿಮಗೆ ವಿರುದ್ಧ ಯುದ್ಧಕ್ಕೆ ಬಂದರು. ನಾನು ಅವರೆಲ್ಲರನ್ನು ನಿಮ್ಮ ಕೈವಶ ಮಾಡಿದೆ. ಇದಲ್ಲದೆ ಕಣಜದ ಹುಳುಗಳನ್ನು ನಿಮ್ಮ ಮುಂದಾಗಿ ಕಳುಹಿಸಿದೆ. ಅವು ಅಮೋರಿಯರ ಅರಸರಿಬ್ಬರನ್ನು ಓಡಿಸಿಬಿಟ್ಟವು. ಇದು ನಿಮ್ಮ ಕತ್ತಿಬಿಲ್ಲುಗಳಿಂದ ಆದುದಲ್ಲ. ನೀವು ಕೃಷಿಮಾಡದ, ಬೆಳೆ ತುಂಬಿದ ಭೂಮಿಯನ್ನು ನಿಮಗೆ ಕೊಟ್ಟೆ. ನೀವು ಕಟ್ಟದ ನಗರಗಳಲ್ಲಿ ವಾಸಮಾಡುತ್ತಿದ್ದೀರಿ. ನೀವು ನೆಟ್ಟು ಬೆಳಸದ ದ್ರಾಕ್ಷಿ ಹಾಗೂ ಎಣ್ಣೆಮರಗಳ ತೋಟಗಳನ್ನು ಅನುಭವಿಸುತ್ತಿದ್ದೀರಿ."

ಕೀರ್ತನೆ: 136:1-3, 16-18, 21-22, 24

ಶ್ಲೋಕ: ಪ್ರಭುವಿನ ಪ್ರೀತಿ ಶಾಶ್ವತ

ಶುಭಸಂದೇಶ: ಮತ್ತಾಯ 19:3-12


ಫರಿಸಾಯರಲ್ಲಿ ಕೆಲವರು ಯೇಸುವಿನ ಬಳಿಗೆ ಬಂದು ಅವರನ್ನು ಮಾತಿನಲ್ಲಿ ಸಿಕ್ಕಿಸುವ ಉದ್ದೇಶದಿಂದ, "ಯಾವುದಾದರು ಕಾರಣದಿಂದ ಗಂಡನು ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಧರ್ಮಸಮ್ಮತವೋ?" ಎಂದು ಕೇಳಿದರು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, "ಸೃಷ್ಟಿಕರ್ತ ಆದಿಯಿಂದಲೇ ಅವರನ್ನು ಗಂಡು ಹೆಣ್ಣಾಗಿ ಉಂಟು ಮಾಡಿದರು ಎಂದೂ, ಈ ಕಾರಣದಿಂದಲೇ ಗಂಡನು ತಂದೆ ತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಕೂಡಿಕೊಂಡು ಅವರಿಬ್ಬರೂ ಒಂದಾಗಿ ಬಾಳುವರು ಎಂದೂ ಹೇಳಿದ್ದಾರೆಂಬುದಾಗಿ ನೀವು  ಪವಿತ್ರಗ್ರಂಥದಲ್ಲಿ ಓದಿಲ್ಲವೇ? ಹೀಗಿರುವಲ್ಲಿ, ಇನ್ನು ಮುಂದೆ ಅವರು ಇಬ್ಬರಲ್ಲ, ಒಂದೇ ಶರೀರವಾಗಿರುವರು. ಈ ನಿಮಿತ್ತ ದೇವರು ಒಂದುಗೂಡಿಸಿದ್ದನ್ನು ಮನುಷ್ಯನು ಬೇರ್ಪಡಿಸದೆ ಇರಲಿ," ಎಂದರು. "ಹಾಗಾದರೆ ವಿವಾಹ ವಿಚ್ಛೇದನ ಪತ್ರವನ್ನು ಕೊಟ್ಟು ಹೆಂಡತಿಯನ್ನು ಬಿಟ್ಟು ಬಿಡಬಹುದೆಂದು ಮೋಶೆಯು ನಿಯಮಿಸಿದ್ದು ಏಕೆ?" ಎಂದು ಫರಿಸಾಯರು ಮರುಪ್ರಶ್ನೆ ಹಾಕಿದರು. "ನಿಮ್ಮ ಹೆಂಡತಿಯನ್ನು ನೀವು ಬಿಟ್ಟು ಬಿಡಬಹುದೆಂದು ಮೋಶೆ ಅನುಮತಿ ಇತ್ತದ್ದು ನಿಮ್ಮ ಹೃದಯ ಕಾಠಿಣ್ಯದ ನಿಮಿತ್ತದಿಂದಲೇ. ಆದರೆ ಅದು ಆದಿಯಿಂದಲೇ ಹಾಗಿರಲಿಲ್ಲ. ನಾನು ನಿಮಗೆ ಹೇಳುವುದನ್ನು ಕೇಳಿ: ತನ್ನ ಹೆಂಡತಿಯನ್ನು ಅವಳ ದುರ್ನಡತೆಯ ಕಾರಣದಿಂದಲ್ಲದೆ ಬಿಟ್ಟುಬಿಟ್ಟು ಮತ್ತೊಬ್ಬಳನ್ನು ಮದುವೆ ಮಾಡಿಕೊಳ್ಳುವ ಪ್ರತಿಯೊಬ್ಬನೂ ವ್ಯಭಿಚಾರಿಯಾಗುತ್ತಾನೆ." ಶಿಷ್ಯರು ಆಗ, "ಸತಿ ಪತಿಯರ ಸಂಬಂಧ ಈ  ರೀತಿ ಇರುವುದಾದರೆ, ಮದುವೆ ಮಾಡಿಕೊಳ್ಳದಿರುವುದೇ ಲೇಸು," ಎಂದರು. ಅದಕ್ಕೆ ಯೇಸು, "ಇದನ್ನು ಅಂಗೀಕರಿಸಲು ಎಲ್ಲರಿಂದಲೂ ಸಾಧ್ಯವಿಲ್ಲ: ಯಾರಿಗೆ ಅನುಗ್ರಹಿಸಲಾಗಿದೆಯೋ ಅವರಿಂದ ಮಾತ್ರ ಸಾಧ್ಯ ತಾಯಿಯ ಉದರದಿಂದಲೇ ನಪುಂಸಕರಾಗಿ ಹುಟ್ಟಿದವರಿದ್ದಾರೆ; ಜನರಿಂದ ನಪುಂಸಕರಾದವರು ಕೂಡ ಇದ್ದಾರೆ; ಸ್ವರ್ಗಸಾಮ್ರಾಜ್ಯದ ನಿಮಿತ್ತ ಅವಿವಾಹಿತರಾಗಿ ಇರುವವರೂ ಇದ್ದಾರೆ; ಇದನ್ನು ಅಂಗೀಕರಿಸಬಲ್ಲವನು ಅಂಗೀಕರಿಸಲಿ,"ಎಂದರು.

15.08.2019 - ಪಟ್ಟದ ರಾಣಿಯು ನಿಂತಿಹಳು ನಿನ್ನ ಬಲಪಾರ್ಶ್ವದಲ್ಲಿ

ಮೊದಲನೇ ವಾಚನ: ಪ್ರಕಟನಾ ಗ್ರಂಥ 11:19; 12:1-6, 10


ಸ್ವರ್ಗದಲ್ಲಿನ ದೇವಾಲಯವು ತೆರೆಯಿತು. ದೇವರ ಒಡಂಬಡಿಕೆಯ  ಮಂಜೂಷವು ಅಲ್ಲಿರುವುದು ಕಾಣಿಸಿತು. ಆಕಾಶದಲ್ಲಿ ಚಿಹ್ನೆಯೊಂದು ಕಾಣಿಸಿಕೊಂಡಿತು. ಮಹಿಳೆಯೊಬ್ಬಳು ಸೂರ್ಯಭೂಷಿತಳಾಗಿದ್ದಳು. ಆಕೆಯ ಪಾದದಡಿ ಚಂದ್ರನಿದ್ದನು. ತಲೆಯ ಮೇಲೆ ಹನ್ನೆರಡು ನಕ್ಷತ್ರ ಖಚಿತವಾದ ಕಿರೀಟವಿತ್ತು. ಆಕೆ ತುಂಬು ಗರ್ಭಿಣಿ, ಪ್ರಸವ ವೇದನೆಯಿಂದ ನರಳುತ್ತಿದ್ದಳು. ಆಕಾಶದಲ್ಲಿ ಮತ್ತೊಂದು ಚಿಹ್ನೆ ಕಾಣಿಸಿಕೊಂಡಿತು. ಅಲ್ಲಿ ಕೆಂಪು ಘಟಸರ್ಪವೊಂದು ಇತ್ತು. ಅದಕ್ಕೆ ಏಳು ತಲೆಗಳಿದ್ದವು, ಹತ್ತು ಕೊಂಬುಗಳಿದ್ದವು; ಅದರ ಏಳು ತಲೆಗಳ ಮೇಲೆ ಏಳು ಮುಕುಟಗಳಿದ್ದವು. ಅದು ತನ್ನ ಬಾಲದಿಂದ ಮೂರನೆಯ ಒಂದು ಭಾಗದಷ್ಟು ನಕ್ಷತ್ರಗಳನ್ನು ಆಕಾಶದಿಂದ ಸೆಳೆದೆಳೆದು ಅವುಗಳನ್ನು ಭೂಮಿಗೆ ಎಸೆಯಿತು. ಮಗು ಹುಟ್ಟಿದ ಕೂಡಲೇ  ಅದನ್ನು ನುಂಗಿಬಿಡಬೇಕೆಂದು ಘಟಸರ್ಪವು ಆ ತುಂಬು ಗರ್ಭಿಣಿಯ ಬಳಿಯಲ್ಲಿಯೇ ಕಾಯ್ದುಕೊಂಡಿತ್ತು. ಸರ್ವಜನಾಂಗಗಳನ್ನು ಕಬ್ಬಿಣದ ದಂಡದಿಂದ ಆಳಬಲ್ಲಂಥ ಒಂದು ಗಂಡುಮಗುವಿಗೆ  ಆಕೆ ಜನ್ಮವಿತ್ತಳು. ಆದರೆ, ಆ ಮಗುವನ್ನು ಸಿOಹಾಸನದಲ್ಲಿದ್ದ ದೇವರ ಬಳಿಗೆ ಕೊಂಡೊಯ್ಯಲಾಯಿತು. ಆ ಮಹಿಳೆ ಅರಣ್ಯಕ್ಕೆ ಓಡಿ ಹೋದಳು. ಅಲ್ಲಿ ಸಾವಿರದ ಇನ್ನೂರ ಅರವತ್ತು ದಿನಗಳ ಕಾಲ ಆಕೆಗೆ ಶುಶ್ರೂಷೆಯಾಗಬೇಕೆಂದು ದೇವರೇ ಆ ಸ್ಥಳವನ್ನು ಸಜ್ಜುಗೊಳಿಸಿದ್ದರು. ಸ್ವರ್ಗದಿಂದ ಬಂದ ಮಹಾ ಶಬ್ದವನ್ನು ನಾನು ಕೇಳಿಸಿಕೊಂಡೆ. ಅದು ಇಂತೆಂದಿತು: "ಇಗೋ, ನಮ್ಮ ದೇವನಿತ್ತ ಜೀವೋದ್ಧಾರ ಸಿದ್ಧಿಸಿದೆ ಆತನ ಶಕ್ತಿ, ಸಾಮ್ರಾಜ್ಯಗಳು ಕಂಗೊಳಿಸುತ್ತಿವೆ. ಆತನ ಕ್ರಿಸ್ತಾಧಿಪತ್ಯ ಸ್ಥಾಪಿತವಾಗಿದೆ.

ಕೀರ್ತನೆ: 45:10, 11, 12, 16

ಶ್ಲೋಕ: ಪಟ್ಟದ ರಾಣಿಯು ನಿಂತಿಹಳು ನಿನ್ನ ಬಲಪಾರ್ಶ್ವದಲ್ಲಿ, ಓಫಿರ್ ನಾಡಿನ ಚಿನ್ನಾಭರಣಗಳಿಂದ ಭೂಷಿತಳಾಗಿ

ಎರಡನೇ ವಾಚನ: 1 ಕೊರಿಂಥಿಯರಿಗೆ 15:20-27

ಕ್ರಿಸ್ತ ಯೇಸು ಪುನರುತ್ದಾನ ಹೊಂದಿದ್ದೇನೋ ಸತ್ಯಸ್ಯ ಸತ್ಯ. ಅವರ ಪುನರುತ್ದಾನವು, ಸತ್ತವರು ಪುನರುತ್ದಾನ ಹೊಂದುತ್ತಾರೆ ಎನ್ನುವುದಕ್ಕೆ ಪ್ರಮಾಣ. ಒಬ್ಬ ಮನುಷ್ಯನಿಂದ ಸಾವು ಸಂಭವಿಸಿದಂತೆಯೇ ಒಬ್ಬ ಮನುಷ್ಯನಿಂದಲೇ ಸತ್ತವರಿಗೆ ಪುನರುತ್ದಾನವು ಪರಿಣಮಿಸಿತು. ಆದಾಮನ ಸಂಬಂಧದಿಂದ ಎಲ್ಲರೂ ಸಾವಿಗೀಡಾದಂತೆ ಕ್ರಿಸ್ತಯೇಸುವಿನ ಸಂಬಂಧದಿಂದ ಎಲ್ಲರೂ ಜೀವಂತರಾಗಿ ಏಳುತ್ತಾರೆ. ಈ ಭಾಗ್ಯವನ್ನು ಒಬ್ಬೊಬ್ಬನೂ ಕ್ರಮಬದ್ಧ ರೀತಿಯಲ್ಲಿ ಪಡೆಯುತ್ತಾನೆ. ಪ್ರಪ್ರಥಮ ಫಲವಾಗಿ ಕ್ರಿಸ್ತಯೇಸುವೇ ಜೀವಂತರಾದರು. ಆನಂತರ, ಕ್ರಿಸ್ತಯೇಸುವಿಗೆ ಸೇರಿದವರು ಯೇಸು ಪುನರಾಗಮಿಸುವಾಗ ಜೀವಂತರಾಗುತ್ತಾರೆ. ಅಂತ್ಯ ಬರುವುದು ಆನಂತರವೇ. ಆಗ ಯೇಸು ಎಲ್ಲಾ ಅಧಿಪತ್ಯವನ್ನೂ ಅಧಿಕಾರವನ್ನೂ ಶಕ್ತಿಯನ್ನೂ ನಿರ್ಮೂಲಮಾಡಿ ತಂದೆಯಾದ ದೇವರಿಗೆ ಸಾಮ್ರಾಜ್ಯವನ್ನು ಒಪ್ಪಿಸಿಕೊಡುವರು.  ಶತ್ರುಗಳೆಲ್ಲರನ್ನು ತಮ ಪಾದಪೀಠವಾಗಿಸಿಕೊಳ್ಳುವ ತನಕ ಅವರು ರಾಜ್ಯವಾಳಬೇಕಾಗಿದೆ.  ಕಟ್ಟಕಡೆಗೆ ನಿರ್ಮೂಲವಾಗುವ ಶತ್ರುವೆಂದರೆ ಮೃತ್ಯುವೇ. "ದೇವರು ಎಲ್ಲವನ್ನು ಆಧೀನಪಡಿಸಿ, ಅತನ ಪಾದಪೀಠವನ್ನಾಗಿಸಿದ್ದಾರೆ," ಎಂದು ಲಿಖಿತವಾಗಿದೆ. "ಎಲ್ಲವನ್ನೂ ಅಧೀನಪಡಿಸಿಕೊಳ್ಳಲಾಗಿದೆ," ಎಂದು ಹೇಳುವಾಗ, ಹಾಗೆ ಅಧೀನಪಡಿಸಿದ ದೇವರು ಅದರಲ್ಲಿ ಸೇರಲಿಲ್ಲ ಎಂಬುದು ಸುಸ್ಪಷ್ಟವಾಗಿದೆ.

ಶುಭಸಂದೇಶ: ಲೂಕ 1:39-56

ಮರಿಯಳು ಪ್ರಯಾಣಹೊರಟು  ಜುದೇಯದ ಗುಡ್ಡಗಾಡಿನಲ್ಲಿರುವ ಒಂದು ಊರಿಗೆ ತ್ವರೆಯಾಗಿ ಬಂದಳು. ಅಲ್ಲಿ ಜಕರೀಯನ ಮನೆಗೆ ಹೋಗಿ ಎಲಿಜಬೇತಳನ್ನು ವಂದಿಸಿದಳು. ಮರಿಯಳ ವಂದನೆಯನ್ನು ಎಲಿಜಬೇತಳು ಕೇಳಿದ್ದೇ ತಡ, ಆಕೆಯ ಗರ್ಭದಲ್ಲಿದ್ದ ಶಿಶು ನಲಿದಾಡಿತು; ಎಲಿಜಬೇತಳು ಪವಿತ್ರಾತ್ಮಭರಿತಳಾಗಿ ಹರ್ಷೋದ್ಗಾರದಿಂದ  ಹೀಗೆಂದಳು: "ಸ್ತ್ರೀಯರಲ್ಲೆಲ್ಲಾ ಧನ್ಯಳು ನೀನು; ನಿನ್ನ ಕರುಳ ಕುಡಿಯೂ ಧನ್ಯ!ನನ್ನ ಪ್ರಭುವಿನ ತಾಯಿ ನೀನು; ನನ ಬಳಿಗೆ ಬಂದುದು ಅದೆಂಥ ಭಾಗ್ಯ! ನಿನ್ನ ವಂದನೆಯ ದನಿ ನನ ಕಿವಿ ತಾಕಿದೊಡನೆ ನಲಿದಾಡಿತು ಆನಂದದಿಂದ, ನನ್ನ ಕರುಳ ಕುಡಿ! ನಂಬಿ ಧನ್ಯಳಾದೆ ನೀನು, ದೇವರಿಂದ ಬಂದ ವಾರ್ತೆ ನೆರವೇರಿಯೇ ತೀರುವುದೆಂದು," ಆಗ ಮರಿಯಳು ಹೀಗೆಂದು ಹೊಗಳಿದಳು: "ಎನ್ನ ಮನ ಮಾಡುತ್ತಿದೆ ಸರ್ವೇಶ್ವರನ ಸ್ತುತಿ; ಉಲ್ಲಾಸಿಸುತ್ತಿದೆ ಮುಕ್ತಿದಾತ ದೇವನಲಿ ತನ್ನ ದಾಸಿಯ ದೀನತೆಯನ್ನು ನೆನಪಿಗೆ ತಂದುಕೊಂಡನಾತ   ಧನ್ಯಳೆಂದು ಹೊಗಳುವರೆನ್ನನು ಇಂದಿನಿಂದ ಸರ್ವಜನಾಂಗ ಏಕೆನೆ ಮಾಡಿಹನೆನಗೆ ಸರ್ವಶಕ್ತನು ಮಹತ್ಕಾರ್ಯ ನಿಜಕ್ಕೂ ಆತನ ನಾಮಧೇಯ ಪರಮಪೂಜ್ಯ; ಆತನಲ್ಲಿ ಭಯಭಕ್ತಿಯುಳ್ಳವರಿಗೆ ಆತನ ಪ್ರೀತಿ ತಲತಲಾಂತರದವರೆಗೆ, ಗರ್ವ ಹೃದಯಿಗಳನಾತ  ಚದರಿಸಿರುವನು ಪ್ರದರ್ಶಿಸಿರುವನು ತನ್ನ ಬಾಹುಬಲವನು ಇಳಿಸಿಹನು ಗದ್ದುಗೆಯಿಂದ ಘನಾಧಿಪತಿಗಳನು ಏರಿಸಿರುವನು ಉನ್ನತಿಗೆ ದೀನದಲಿತರನು. ತೃಪ್ತಿಪಡಿಸಿರುವನಾತ ಹಸಿದವರನು ಮೃಷ್ಟಾನ್ನದಿ, ಹೊರದೂಡಿರುವನು ಸಸಿರಿವಂತರನು ಬರೀಗೈಯಲಿ ನೆರವಾದನು ತನ್ನ ದಾಸ ಇಸ್ರಯೇಲರಿಗೆ  ಪೂರ್ವಜರಿಗಿತ್ತ ವಾಗ್ದಾನದ ಮೇರೆಗೆ ಮರೆಯಲಿಲ್ಲ ಆತ ಕರುಣೆತೋರಲು ಅಬ್ರಹಾಮನಿಗೆ ಅವನ ಸಂತತಿಗೆ, ಯುಗಯುಗಾಂತರದವರೆಗೆ," ಮರಿಯಳು ಸುಮಾರು ಮೂರು ತಿಂಗಳು ಎಲಿಜಬೇತಳೊಡನೆ ತಂಗಿದ್ದು ತನ್ನ ಮನೆಗೆ ಹಿಂದಿರುಗಿದಳು.

14.08.19 - "ಎಲ್ಲಿ ಇಬ್ಬರು, ಮೂವರು ನನ್ನ ನಾಮದಲ್ಲಿ ಸೇರಿರುತ್ತಾರೋ, ಅಲ್ಲಿ ನಾನು ಅವರ ಮಧ್ಯೆ ಇರುತ್ತೇನೆ'

ಮೊದಲನೇ ವಾಚನ:ಧರ್ಮೋಪದೇಶಕಾಂಡ 34:1-12

ಮೋಶೆ ಮೋವಾಬ್ಯರ ಬಯಲು ನಾಡಿನಿಂದ ಜೆರಿಕೋ ಪಟ್ಟಣಕ್ಕೆ ಎದುರಾಗಿರುವ ನೆಬೋ ಪರ್ವತಕ್ಕೆ ಹೋಗಿ, ಪಿಸ್ಗಾ ಎಂಬ ಬೆಟ್ಟದ ಶಿಖರವನ್ನು ಹತ್ತಿದನು. ಆಗ ಸರ್ವೇಶ್ವರ ಕಾನಾನ್ ನಾಡೆಲ್ಲವನ್ನು ಅಂದರೆ, ದಾನ್ ಪಟ್ಟಣದವರೆಗಿದ್ದ ಗಿಲ್ಯಾದ್ ಪ್ರಾಂತ್ಯ, ನಫ್ತಾಲಿ ಪ್ರದೇಶ, ಎಫ್ರಯಿಮ್ ಮನಸ್ಸೆ ಕುಲಗಳವರ ಪ್ರಾಂತ್ಯ, ಪಶ್ಚಿಮ ಸಮುದ್ರದವರೆಗಿದ್ದ ಜುದೇಯನಾಡು, ದಕ್ಷಿಣ ಪ್ರದೇಶ, ಜೋಗರೂರಿನ ತನಕ ಇದ್ದ ಜೆರಿಕೋ ಎಂಬ ಖರ್ಜೂರಗಳ ಪಟ್ಟಣದ ಸುತ್ತಲಿನ ಬಯಲು, ಇದನ್ನೆಲ್ಲಾ ಅವನಿಗೆ ತೋರಿಸಿದರು. ಆನಂತರ, "ನಾನು ಅಬ್ರಹಾಮ್, ಇಸಾಕ್, ಯಕೋಬರಿಗೆ ಪ್ರಮಾಣಮಾಡಿ ಅವರ ಸಂತತಿಯವರಿಗೆ ಕೊಡುವೆನೆಂದು ವಾಗ್ದಾನ ಮಾಡಿದ ನಾಡು ಇದೇ; ಇದನ್ನು ನಿನಗೆ ಪ್ರತ್ಯಕ್ಷವಾಗಿ ತೋರಿಸಿದ್ದೇನೆ. ಆದರೆ ನೀನು ನದಿದಾಟಿ ಅಲ್ಲಿಗೆ ಹೋಗಕೂಡದು," ಎಂದು ಹೇಳಿದರು. ಸರ್ವೇಶ್ವರನ ಮಾತಿನಂತೆ ಅವರ ದಾಸ ಮೋಶೆ ಅಲ್ಲೇ ಮೋವಾಬ್ಯರ ದೇಶದಲ್ಲಿ ಮೃತನಾದನು.  ಮೋವಾಬ್ಯರ ದೇಶದಲ್ಲಿ ಬೇತ್ಪೆ ಗೋರಿಗೆ ಎದುರಾಗಿರುವ ಕಣಿವೆಯಲ್ಲಿ ಅವನ ದೇಹವನ್ನು ಸಮಾಧಿಮಾಡಿದರು. ಅವನ ಸಮಾಧಿ ಎಲ್ಲಿದೆಯೆಂದು ಇಂದಿನವರೆಗೆ ಯಾರಿಗೂ ತಿಳಿಯದು. ಮೋಶೆ ಸಾಯುವಾಗ ನೂರಿಪ್ಪತ್ತು ವರ್ಷದವನಾಗಿದ್ದನು. ಅವನ ಕಣ್ಣು ಮೊಬ್ಬಾಗಲಿಲ್ಲ, ಅವನ ಜೀವಕಳೆ ಕುಂದಿಹೋಗಿರಲಿಲ್ಲ. ಮೋವಾಬ್ಯರ ಬಯಲಿನಲ್ಲಿ ಇಸ್ರಯೇಲರು ಮೋಶೆಗಾಗಿ ಮೂವತ್ತು ದಿನ ದುಃಖಿಸಿದರು. ಅಲ್ಲಿಗೆ ಮೋಶೆಯ ಸಂತಾಪದ ದಿನಗಳು ಮುಗಿದವು. ಮೋಶೆ ನೂನನ ಮಗನಾದ ಯೆಹೋಶುವನ ಮೇಲೆ ಹಸ್ತಕ್ಷೇಪಮಾಡಿದ್ದರಿಂದ ಅವನು ಜ್ಞಾನವರಸಂಪನ್ನನಾದನು. ಸರ್ವೇಶ್ವರ ಮೋಶೆಗೆ ಕೊಟ್ಟ ಆಜ್ಞೆಗೆ ಅನುಸಾರ ಇಸ್ರಯೇಲರು ಯೆಹೋಶುವನ ಮಾತಿನ ಪ್ರಕಾರ ನಡೆದರು. ಸರ್ವೇಶ್ವರ ಮೋಶೆಯ ಸಂಗಡ ಮುಖಾಮುಖಿಯಾಗಿ ಮಾತಾಡಿದರು. ಈಜಿಪ್ಟ್ ದೇಶದಲ್ಲಿ ಫರೋಹನ ಮುಂದೆ ಹಾಗು ಅವನ ಪ್ರಜಾಪರಿವಾರದವರ ಮುಂದೆ ಅವನು ವಿಧವಿಧವಾಗಿ ಪವಾಡಗಳನ್ನೂ ಮಹತ್ಕಾರ್ಯಗಳನ್ನೂ ನಡೆಸಿದನು; ಸರ್ವೇಶ್ವರ ಅವನನ್ನು ಅದಕ್ಕಾಗಿಯೇ ಕಳುಹಿಸಿದರು. ಇಸ್ರಯೇಲರ ಕಣ್ಮುಂದೆ ವಿಷೇಷ ಭುಜಪರಾಕ್ರಮವನ್ನೂ ಆಶ್ಚರ್ಯಕರವಾದ ಕಾರ್ಯಗಳನ್ನೂ ನಡೆಸಿದನು. ಇಂಥವನಿಗೆ ಸಮಾನನಾದ ಮತ್ತೊಬ್ಬ ಪ್ರವಾದಿ ಈಚೆಗೆ ಇಸ್ರಯೇಲರಲ್ಲಿ ಹುಟ್ಟಲೇ ಇಲ್ಲ.

ಕೀರ್ತನೆ: 66:1-3, 5, 8, 16-17

ಶ್ಲೋಕ: ನಮ್ಮ ಪ್ರಾಣವನ್ನು ಉಳಿಸಿದ ದೇವನಿಗೆ ಸ್ತೋತ್ರ

ಶುಭಸಂದೇಶ: ಮತ್ತಾಯ 18:15-20


ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೇಳಿದ್ದೇನೆಂದರೆ "ನಿನ್ನ ಸೋದರನು ನಿನಗೆ ಅಪರಾಧ ಮಾಡಿದರೆ, ನೀನು ಹೋಗಿ ನೀವಿಬ್ಬರೆ ಇರುವಾಗ, ಅವನ ತಪ್ಪನ್ನು ಮನಗಾಣಿಸು. ಅವನು ನಿನಗೆ ಕಿವಿಗೊಟ್ಟರೆ ಅವನ ಸೋದರತ್ವವನ್ನು ನೀನು ಮತ್ತೆ ಗಳಿಸಿಕೊಂಡಂತಾಗುವುದು. ಒಂದು ವೇಳೆ, ಅವನು ನಿನಗೆ ಕಿವಿಗೊಡದೆ ಹೋದರೆ ಒಬ್ಬಿಬ್ಬರನ್ನು ನಿನ್ನ ಸಂಗಡ ಕರೆದುಕೊಂಡು ಹೋಗು; ಹೀಗೆ ಇಬ್ಬರು ಅಥವಾ ಮೂವರು ಸಾಕ್ಷಿಗಳ  ಸಮ್ಮುಖದಲ್ಲಿ ಪ್ರತಿಯೊಂದು ಮಾತೂ ಇತ್ಯಾರ್ಥವಾಗಲಿ. ಅವರಿಗೂ ಅವನು ಕಿವಿಗೊಡದೆ ಹೋದಲ್ಲಿ ಧರ್ಮಸಭೆಗೆ ತಿಳಿಸು. ಧರ್ಮಸಭೆಗೂ ಅವನು ಕಿವಿಗೊಡದೆ ಹೋದರೆ ಅವನನ್ನು ಧರ್ಮಭ್ರಷ್ಟನೆಂದು ಹಾಗೂ ಬಹಿಷ್ಕ್ರತನೆಂದು ಪರಿಗಣಿಸು. ನೀವು ಇಹದಲ್ಲಿ ಏನನ್ನು ಬಂಧಿಸುತ್ತೀರೋ ಅದು ಪರದಲ್ಲೂ ಬಂಧಿಸಲಾಗುವುದು; ನೀವು ಇಹದಲ್ಲಿ ಏನನ್ನು ಬಿಚ್ಚುತ್ತೀರೋ ಅದು ಪರದಲ್ಲೂ ಬಿಚ್ಚಲಾಗುವುದು. ಎಂದು ನಿಮಗೆ ಕಚಿತವಾಗಿ ಹೇಳುತ್ತೇನೆ. ಇನ್ನೂ ನಾನು ನಿಮಗೆ  ಹೇಳುವುದು ಏನೆಂದರೆ: ನಿಮ್ಮಲ್ಲಿಬ್ಬರು ತಾವು ಬೇಡಿಕೊಳ್ಳುವ ಯಾವುದಾದರೊಂದು ವಿಷಯವಾಗಿ ಇಹಲೋಕದಲ್ಲಿ ಒಮ್ಮನಸ್ಸುಳ್ಳವರಾಗಿದ್ದರೆ, ಅದು ಸ್ವರ್ಗದಲ್ಲಿರುವ ನನ್ನ ತಂದೆಯಿಂದ ಅವರಿಗೆ ಕೈಗೂಡುತ್ತದೆ. ಎಲ್ಲಿ ಇಬ್ಬರು, ಮೂವರು ನನ್ನ ನಾಮದಲ್ಲಿ ಸೇರಿರುತ್ತಾರೋ, ಅಲ್ಲಿ ನಾನು ಅವರ ಮಧ್ಯೆ ಇರುತ್ತೇನೆ.

13.08.19 - "ಸ್ವರ್ಗ ಸಾಮ್ರಾಜ್ಯದಲ್ಲಿ ಎಲ್ಲರಿಗಿಂತಲೂ ದೊಡ್ಡವನು ಯಾರು?"

ಮೊದಲನೇ ವಾಚನ : ಧರ್ಮೋಪದೇಶಕಾಂಡ : 10:12-22

ಮೋಶೆ ಹೋಗಿ ಇಸ್ರಯೇಲರೆಲ್ಲರಿಗೆ ಈ ಮಾತುಗಳನ್ನು ತಿಳಿಸಿದನು: "ನಾನು ಈಗ ನೂರಿಪ್ಪತ್ತು ವರ್ಷದವನಾಗಿದ್ದೇನೆ; ವಿಶೇಷವಾದ ಕಾರ್ಯಗಳನ್ನು ನಿರ್ವಹಿಸುವುದು ಇನ್ನು ನನ್ನಿಂದಾಗದು; ಸರ್ವೇಶ್ವರ ನನಗೆ, "ನೀನು ಈ ಜೋರ್ಡಾನ್ ನದಿಯನ್ನು ದಾಟ ಕೂಡದು" ಎಂದು ಆಜ್ಞಾಪಿಸಿದ್ದಾರೆ. ನಿಮ್ಮ ದೇವರಾದ ಸರ್ವೇಶ್ವರ ತಾವೇ ನಿಮ್ಮ ಸೇನಾನಾಯಕರಾಗಿ ನದಿಯನ್ನು ದಾಟಿ ಹೋಗುವರು; ಅವರು ಆ ಜನಾಂಗಗಳನ್ನು ನಿಮ್ಮ ಎದುರಿನಲ್ಲಿ ನಿಲ್ಲದಂತೆ ನಾಶಮಾಡುವರು. ಆಗ ನೀವು ಅವರ ನಾಡನ್ನು ಸ್ವಾಧೀನ ಮಾಡಿಕೊಳ್ಳುವಿರಿ. ಸರ್ವೇಶ್ವರ ಆಜ್ಞಾಪಿಸಿದಂತೆ ಯೆಹೋಶುವನು ಕೂಡ ನಿಮ್ಮ ನಾಯಕನಾಗಿ ನದಿಯನ್ನು ದಾಟಿ ಹೋಗುವನು. ಸರ್ವೇಶ್ವರ, ಅಮೋರಿಯರ ಅರಸನಾದ ಸೀಹೋನ್ ಹಾಗೂ ಓಗರನ್ನು ನಾಶಮಾಡಿ ಅವರ ದೇಶವನ್ನು ನಿಮಗೆ ಸ್ವಾಧೀನಪಡಿಸಿದಂತೆ ಆ ಜನಾಂಗಗಳನ್ನೂ ನಾಶಮಾಡಿ ಅವರ ದೇಶವನ್ನು ನಿಮಗೆ ವಶಪಡಿಸುವರು. ಸರ್ವೇಶ್ವರ ಅವರನ್ನು ನಿಮ್ಮಿಂದ ಪರಾಜಯಪಡಿಸಿದಾಗ ನೀವು ಅವರ ವಿಷಯದಲ್ಲಿ ನನ್ನ ಆಜ್ಞೆಗಳನ್ನೆಲ್ಲಾ ಅನುಸರಿಸಿ ನಡೆದುಕೊಳ್ಳಬೇಕು. ನೀವು ಶೂರರಾಗಿ ಧೈರ್ಯದಿಂದಿರಿ;  ಅವರಿಗೆ ಅಂಜಬೇಡಿ, ಕಳವಳಪಡಬೇಡಿ. ನಿಮ್ಮ ದೇವರಾದ ಸರ್ವೇಶ್ವರನೇ ನಿಮ್ಮ ಸಂಗಡ ಇರುತ್ತಿರೆ; ಅವರು ನಿಮ್ಮನ್ನು ಕೈ ಬಿಡುವುದಿಲ್ಲ, ಅಪಜಯಕ್ಕೆ ಗುರಿಪಡಿಸುವುದೇ ಇಲ್ಲ," ಎಂದು ಹೇಳಿದನು. ಆನಂತರ ಮೋಶೆ ಯೆಹೋಶುವನನ್ನು ಕರೆದು ಇಸ್ರಯೇಲರೆಲ್ಲರ ಮುಂದೆ, "ಸರ್ವೇಶ್ವರ ಇವರ ಪಿತೃಗಳಿಗೆ ಪ್ರಮಾಣ ಮಾಡಿಕೊಟ್ಟ ನಾಡಿಗೆ ನೀನೇ ಇವರೊಡನೆ ಹೋಗಿ ಅದನ್ನು ಅವರಿಗೆ ಸ್ವಾಧೀನಪಡಿಸಬೇಕು. ಆದುದರಿಂದ ಶೂರನಾಗಿರು, ಧೈರ್ಯದಿಂದಿರು; ಸರ್ವೇಶ್ವರ ತಾವೇ ನಿನ್ನ ಮುಂದುಗಡೆ ಹೋಗುವರು; ಅವರೇ ನಿನ್ನ ಸಂಗಡ ಇರುವರು; ನಿನ್ನನ್ನು ಅಪಜಯಕ್ಕೆ ಗುರಿಪಡಿಸುವುದೇ ಇಲ್ಲ, ಕೈಬಿಡುವುದಿಲ್ಲ, ಅಂಜಬೇಡ; ಧೈರ್ಯದಿಂದಿರು," ಎಂದು ಹೇಳಿದನು.

ಧರ್ಮೋಪದೇಶಕಾಂಡ: 32:3-4, 7, 8-9, 12

ಪ್ರಕಟಿಸುವೆನು ನಾನು ಸರ್ವೇಶ್ವರನ ನಾಮಮಹತ್ವವನು. "ನಿಮಗೆ ಪೊರೆಬಂಡೆ ಆತ, ಆತನ ಕಾರ್ಯ ದೋಷರಹಿತ ಆತನ ಮಾರ್ಗ ನ್ಯಾಯಯುತ, ಆ ದೇವ ನಂಬಿಕಸ್ತ. ನೆನಪಿಗೆ ತಂದುಕೊಳ್ಳಿ ಆ ಪೂರ್ವಕಾಲವನು ಆಲೋಚಿಸಿ ನೋಡಿ ಪೂರ್ವಿಕರ ಚರಿತೆಯನು. ವಿಚಾರಿಸಿದರೆ ತಿಳಿಸುವರು ನಿಮ್ಮ ನಿಮ್ಮ ತಂದೆಗಳು. ಕೇಳಿದರೆ ವಿವರಿಸುವರು ನಿಮ್ಮ ನಿಮ್ಮ ಹಿರಿಯರು. ಪರಾತ್ಪರ ದೇವರು ಜನಾಂಗಗಳನ್ನು ಬೇರೆಬೇರೆ ಮಾಡಿದಾಗ, ಅವರವರಿಗೆ ಸ್ವದೇಶಗಳನು ವಿಂಗಡಿಸಿಕೊಟ್ಟಾಗ, ದೇವಕುವರ ಸಂಖ್ಯಾನುಸಾರ ಪ್ರದೇಶಗಳನ್ನು ಗೊತ್ತುಮಾಡಿದಾಗ, ಇಸ್ರಯೇಲರು ಮಾತ್ರ ಸ್ವಜನರಾದರು ಸರ್ವೇಶ್ವರನಿಗೆ, ಸ್ವಕೀಯ ಪ್ರಜೆಯಾದರು. ಆ ಯಕೋಬ ವಂಶಜರು ಆತನಿಗೆ. ಅವರನು ನಡೆಸಿದವನು ಸರ್ವೇಶ್ವರನೇ, ಅನ್ಯದೇವರಾರೂ ಇಲ್ಲ, ಆತನೊರ್ವನೇ.

ಶ್ಲೋಕ: ಪ್ರಭು ದಯಾಳು, ಕೃಪಾಪೂರ್ಣನು

ಶುಭಸಂದೇಶ: ಮತ್ತಾಯ 18:1-5, 10, 12-14


ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದು, "ಸ್ವರ್ಗ ಸಾಮ್ರಾಜ್ಯದಲ್ಲಿ ಎಲ್ಲರಿಗಿಂತಲೂ ದೊಡ್ಡವನು ಯಾರು? ಎಂದು ಕೇಳಿದರು. ಯೇಸು ಒಂದು ಚಿಕ್ಕ ಮಗುವನ್ನು ತಮ್ಮ ಹತ್ತಿರಕ್ಕೆ ಕರೆದು, ಅದನ್ನು ನಡುವೆ ನಿಲ್ಲಿಸಿ ಹೀಗೆಂದರು: "ನೀವು ಪರಿವರ್ತನೆ ಹೊಂದಿ ಮಕ್ಕಳಂತೆ ಆಗದಿದ್ದರೆ ಸ್ವರ್ಗ ಸಾಮ್ರಾಜ್ಯವನ್ನು ಸೇರಲಾರಿರಿ, ಎಂದು ನಿಶ್ಚಯವಾಗಿ ಹೇಳುತ್ತೇನೆ. ಈ ಮಗುವಿನಂತೆ ನಮ್ರಭಾವವುಳ್ಳವನೇ ಸ್ವರ್ಗ ಸಾಮ್ರಾಜ್ಯದಲ್ಲಿ ಎಲ್ಲರಿಗಂತ ದೊಡ್ಡವನು. ನನ್ನ ಹೆಸರಿನಲ್ಲಿ ಇಂತಹ ಮಗುವೊಂದನ್ನು ಸ್ವೀಕರಿಸುವವನು ನನ್ನನ್ನೇ ಸ್ವೀಕರಿಸುತ್ತಾನೆ. ಎಚ್ಚರಿಕೆ! ಈ ಚಿಕ್ಕವರಲ್ಲಿ ಯಾರನ್ನೂ ತೃಣಿಕರಿಸಬೇಡಿ. ಸ್ವರ್ಗದಲ್ಲಿನ ಇವರ ದೂತರು ಸದಾಕಾಲ ನನ್ನ ಸ್ವರ್ಗೀಯ ಪಿತನ ಸಮ್ಮುಖದಲ್ಲಿ ಇದ್ದಾರೆ; ಇದು ನಿಮಗೆ ತಿಳಿದಿರಲಿ. ನಿಮ್ಮಲ್ಲಿ ಒಬ್ಬನಿಗೆ ನೂರು ಕುರಿಗಳು ಇವೆಯೆನ್ನೋಣ, ಅವುಗಳಲ್ಲಿ ಒಂದು ಕುರಿ ತಪ್ಪಿಸಿಕೊಂಡು ಹೋಯಿತೆಂದು ಇಟ್ಟುಕೊಳ್ಳಿ, ಆಗ ನಿಮಗೇನು ಅನ್ನಿಸುತ್ತದೆ? ಅವನು ಉಳಿದ ತೊಂಭತ್ತೊಂಭತ್ತು ಕುರಿಗಳನ್ನು ಗುಡ್ಡದಲ್ಲೇ ಬಿಟ್ಟು, ತಪ್ಪಿಸಿಕೊಂಡು ಹೋದ ಆ ಒಂದು ಕುರಿಯನ್ನು ಹುಡುಕಿಕೊಂಡು ಹೋಗುವುದಿಲ್ಲವೇ? ಅದು ಸಿಕ್ಕಿತು ಅನ್ನಿ; ತಪ್ಪಿಸಿಕೊಳ್ಳದ ಈ ತೊಂಭತ್ತೊಂಭತ್ತು ಕುರಿಗಳಿಗಿಂತ ಸಿಕ್ಕಿದ ಈ ಒಂದು ಕುರಿಗಾಗಿ ಅವನು ಹೆಚ್ಚು ಆನಂದಪಡುತ್ತಾನೆ. ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಅಂತೆಯೇ, ಈ ಚಿಕ್ಕವರಲ್ಲಿ ಒಬ್ಬನು ಕೂಡ ಕಳೆದು ಹೋಗಬಾರದು; ಇದೇ ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತ."

12.08.19 - "ನೀನು ಸರೋವರಕ್ಕೆ ಹೋಗಿ ಗಾಳ ಹಾಕು...."

ಮೊದಲನೇ ವಾಚನ: ಧರ್ಮೋಪದೇಶಕಾಂಡ 10:12-22

"ಆದುದರಿಂದ ಇಸ್ರಯೇಲರೇ, ನೀವು ನಿಮ್ಮ ದೇವರಾದ ಸರ್ವೇಶ್ವರನಲ್ಲಿ ಭಯಭಕ್ತಿ ಉಳ್ಳವರಾಗಿರಬೇಕು; ಎಲ್ಲ ವಿಷಯಗಳಲ್ಲೂ ಅವರು ಹೇಳುವ ಮಾರ್ಗದಲ್ಲೇ ನಡೆಯಬೇಕು; ಅವರನ್ನು ಪ್ರೀತಿಸುತ್ತಾ ಸಂಪೂರ್ಣವಾದ ಹೃದಯದಿಂದಲೂ  ಮನಸ್ಸಿನಿಂದಲೂ ಸೇವೆಮಾಡಬೇಕು; ನಾನು ನಿಮ್ಮ ಒಳಿತಿಗಾಗಿ ಈಗ ಬೋಧಿಸುವ ಅವರ ಆಜ್ಞಾವಿಧಿಗಳನ್ನು ಅನುಸರಿಸುತ್ತಾ ಬರಬೇಕು.  ಇಷ್ಟನ್ನೇ ಹೊರತು, ನಿಮ್ಮ ದೇವರಾದ ಸರ್ವೇಶ್ವರ ನಿಮ್ಮಿಂದ ಬೇರೇನನ್ನು ಕೇಳಿಕೊಳ್ಳುವುದಿಲ್ಲ. ಇಗೋ ಕೇಳಿ; ಉನ್ನತೋನ್ನತವಾದ ಆಕಾಶಮಂಡಲವು, ಭೂಮಿಯು ಹಾಗು ಅದರಲ್ಲಿರುವ ಎಲ್ಲವು ನಿಮ್ಮ ದೇವರಾದ ಸರ್ವೇಶ್ವರಸ್ವಾಮಿಯವೇ. ಆದರೂ ಅವರು ನಿಮ್ಮ ಪಿತೃಗಳಲ್ಲಿ ಇಷ್ಟವುಳ್ಳವರಾಗಿ ಅವರನ್ನು ಪ್ರೀತಿಸಿದರು. ಈಗ ನಿಮ್ಮ ಅನುಭವಕ್ಕೆ ಬಂದಿರುವಂತೆ, ಅವರ ತರುವಾಯ ಅವರ ಸಂತತಿಯವರಾದ ನಿಮ್ಮನ್ನೇ ಎಲ್ಲ ಜನಾಂಗಗಳಿಂದ ಆರಿಸಿಕೊಂಡರು.  ಆದುದರಿಂದ ಅವರ ಆಜ್ಞೆಗೆ ಮಣಿಯದ ನಿಮ್ಮ ದುಷ್ಟಸ್ವಭಾವವನ್ನು ಬಿಟ್ಟು ಬಿಟ್ಟು ನಿಮ್ಮ ಹೃದಯದಲ್ಲೇ ಸುನ್ನತಿ ಮಾಡಿಕೊಳ್ಳಿ. ನಿಮ್ಮ ದೇವರಾದ ಸರ್ವೇಶ್ವರ ದೇವಾದಿದೇವರು. ಸರ್ವೇಶ್ವರಾಧಿ  ಸರ್ವೇಶ್ವರ. ಅವರು ಪರಮ ದೇವರೂ ಪರಾಕ್ರಮಿಯೂ ಭಯಂಕರವೂ ಆಗಿದ್ದಾರೆ. ಅವರು ಮುಖದಾಕ್ಷಿಣ್ಯ ನೋಡುವವರಲ್ಲ. ಲಂಚ ತೆಗೆದುಕೊಳ್ಳುವವರಲ್ಲ. ಅನಾಥರಿಗೆ ಮತ್ತು ವಿಧವೆಯರಿಗೆ ನ್ಯಾಯದೊರಕಿಸುತ್ತಾರೆ; ಪರದೇಶಿಗಳಾದವರಿಗೆ ಪ್ರೀತಿಯಿಂದ ಅನ್ನವಸ್ತ್ರಗಳನ್ನು ನೀಡುತ್ತಾರೆ. ಈಜಿಪ್ಟ್ ದೇಶದಲ್ಲಿ ನೀವೇ ಪರದೇಶಿಗಳಾಗಿ ಇದ್ದುದನ್ನು ಜ್ಞಾಪಿಸಿಕೊಂಡು ಪರದೇಶದವರಲ್ಲಿ ಪ್ರೀತಿಯಿಡಿ. ನಿಮ್ಮ ದೇವರಾದ ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರಾಗಿ ಅವರಿಗೇ ಸೇವೆ ಸಲ್ಲಿಸಿ. ಅವರನ್ನು ಹೊಂದಿಕೊಂಡು ಅವರ ಹೆಸರಿನ ಮೇಲೆಯೇ ಪ್ರಮಾಣಮಾಡಬೇಕು. ಅವರೊಬ್ಬರೇ ನಿಮ್ಮ ಸ್ತುತಿಸ್ತೋತ್ರಕ್ಕೆ ಪಾತ್ರರು; ಅಲರು ನಿಮ್ಮ ದೇವರು; ನೀವು ನೋಡಿದ ಆ ಮಹಾಭಯಂಕರವಾದ ಮಹತ್ಕಾರ್ಯಗಳನ್ನು ನಿಮ್ಮ ಪರವಾಗಿ ನಡೆಸಿದವರು ಅವರೇ. ನಿಮ್ಮ ಪಿತೃಗಳು, ಎಪ್ಪತ್ತುಮಂದಿ ಮಾತ್ರ, ಈಜಿಪ್ಟ್ ದೇಶಕ್ಕೆ ಹೋದರು; ಈಗಲಾದರೋ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಆಕಾಶದ ನಕ್ಷತ್ರಗಳಷ್ಟು ಅಂಸಖ್ಯರಾಗುವಂತೆ ಮಾಡಿದ್ದಾರೆ.

ಕೀರ್ತನೆ: 147:12-13, 14-15, 19-20

ಶ್ಲೋಕ: ಜೆರುಸಲೇಮೇ,, ಕೀರ್ತಿಸು ಪ್ರಭುವನು

ಶುಭಸಂದೇಶ: ಮತ್ತಾಯ 17:22-27


ಶಿಷ್ಯರೆಲ್ಲರು ಒಮ್ಮೆ ಗಲಿಲೇಯದಲ್ಲಿ ಒಟ್ಟಿಗೆ ಸೇರಿದ್ದರು. ಆಗ ಯೇಸು ಅವರಿಗೆ, "ನರಪುತ್ರನನ್ನು ಜನರ ವಶಕ್ಕೆ ಒಪ್ಪಿಸಲಾಗುವುದು; ಅವರು ಆತನನ್ನು ಕೊಲ್ಲುವರು. ಆದರೆ ಮೂರನೆಯ ದಿನ ಆತನನು ಪುನರುತ್ದಾನಗೊಳಿಸಲಾಗುವುದು," ಎಂದರು. ಅದನ್ನು ಕೇಳಿ ಶಿಷ್ಯರು ತುಂಬಾ ವ್ಯಥೆಗೊಂಡರು. ಯೇಸು ಮತ್ತು ಶಿಷ್ಯರು ಕಫೆರ್ನವುಮಿಗೆ ಹೋದರು.  ದೇವಾಲಯದ ತೆರಿಗೆಯನ್ನು ವಸೂಲಿ ಮಾಡುತ್ತಿದ್ದವರು ಪೇತ್ರನ ಬಳಿಗೆ ಬಂದು, "ನಿಮ್ಮ ಗುರು ತೆರಿಗೆ ಕಟ್ಟುವುದಿಲ್ಲವೇ?" ಎಂದು ವಿಚಾರಿಸಿದರು. ಅದಕ್ಕೆ ಪೇತ್ರನು, "ಹೌದು, ಕಟ್ಟುತ್ತಾರೆ," ಎಂದು ಉತ್ತರವಿತ್ತನು. ಬಳಿಕ ಮನೆಗೆ ಬಂದಾಗ, ಅವನು ಮಾತೆತ್ತುವುದಕ್ಕೆ ಮೊದಲೇ ಯೇಸು "ಸಿಮೋನಾ, ನಿನಗೆ ಏನನ್ನಿಸುತ್ತದೆ? ಇಹಲೋಕದ ರಾಜರು ಕಂದಾಯವನ್ನಾಗಲಿ, ತೆರಿಗೆಯನ್ನಾಗಲಿ ಯಾರಿಂದ ವಸೂಲಿಮಾಡುತ್ತಾರೆ? ತಮ್ಮ ಪುತ್ರರಿಂದಲೋ ಅಥವಾ ಪರರಿಂದಲೋ?" ಎಂದು ಕೇಳಿದರು. "ಪರರಿಂದಲೇ," ಎಂದು ಪೇತ್ರನು ಉತ್ತರಕೊಟ್ಟನು. ಯೇಸು, "ಹಾಗಾದರೆ, ಪುತ್ರರು ತೆರಿಗೆ ಕಟ್ಟಬೇಕಾಗಿಲ್ಲ ತಾನೇ? ಆದರೂ, ನಾವೂ ಇವರಿಗೆ ಅಡ್ಡಿಯಾಡಬಾರದು. ಎಂದೇ ನೀನು ಸರೋವರಕ್ಕೆ ಹೋಗಿ ಗಾಳ ಹಾಕು. ಮೊದಲು ಸಿಕ್ಕುವ ಮೀನನ್ನು ಎತ್ತಿಕೊಂಡು ಅದರ ಬಾಯಿ ತೆರೆದು ನೋಡು. ಅದರಲ್ಲಿ ಒಂದು ಬೆಳ್ಳಿ ನಾಣ್ಯ ದೊರಕುವುದು. ಅದನ್ನು ತಂದು ನನ್ನ ಮತ್ತು ನಿನ್ನ ಪರವಾಗಿ ಅವರಿಗೆ ಕೊಡು," ಎಂದರು.