ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

27.11.2019

ಮೊದಲನೇ ವಾಚನ: ದಾನಿಯೇಲ 5:1-6, 13-14, , 16-17, 23-28 

ಬೇಲ್ಯಚ್ಚರ ಎಂಬ ಅರಸನು ತನ್ನ ರಾಜ್ಯದ ಪ್ರಮುಖರಲ್ಲಿ ಸಾವಿರ ಮಂದಿಯನ್ನು ಸೇರಿಸಿ ಒಂದು ಔತಣವನ್ನು ಏರ್ಪಡಿಸಿದ. ಆ ಸಾವಿರ ಜನರ ಮುಂದೆ ಅವನೂ ದ್ರಾಕ್ಷಾರಸವನ್ನು ಕುಡಿದ. ಹಾಗೆ ಕುಡಿದು ಕೊಂಡಿರುವಾಗ ತಾನೂ ತನ್ನ ಪ್ರಮುಖ ಪತ್ನಿಯರೂ ಉಪಪತ್ನಿಯರೂ ಕುಡಿಯುವುದಕ್ಕಾಗಿ ತನ್ನ ತಂದೆ ನೆಬೂಕದ್ನೆಚ್ಚರನು ಜೆರುಸಲೇಮಿನ ದೇವಾಲಯದ ಗರ್ಭಗುಡಿಯಿಂದ ಸೂರೆಯಾಗಿ ತಂದ ಬಂಗಾರದ ಪೂಜಾ ಪಾತ್ರೆಗಳನ್ನು ತರಿಸಿದ. ರಾಜನೂ ಅವನ ಪ್ರಮುಖರೂ ಪತ್ನಿ - ಉಪಪತ್ನಿಯರೂ ಅವುಗಳಲ್ಲಿ ಕುಡಿದರು. ಕುಡಿದುಕೊಂಡೇ ಬಂಗಾರ, ಬೆಳ್ಳಿ, ಕಂಚು, ಕಬ್ಬಿಣ, ಮರ ಮತ್ತು ಕಲ್ಲಿನ ತಮ್ಮ ದೇವರುಗಳನ್ನು ಆರಾಧಿಸಿದರು. ಅದೇ ಸಮಯದಲ್ಲಿ ಒಬ್ಬ ಮನುಷ್ಯನ ಕೈಬೆರಳುಗಳು ಕಾಣಿಸಿಕೊಂಡು ದೀಪಸ್ತಂಭದ ಎದುರಿಗೆ ಅರಮನೆಯ ಸುಣ್ಣದ ಗೋಡೆಯ ಮೇಲೆ ಬರೆಯಲು ತೊಡಗಿದವು. ಬರೆಯುತ್ತಿದ್ದ ಆ ಕೈಯನ್ನು ರಾಜನು ನೋಡಿದನು. ಅದನ್ನು ಕಂಡದ್ದೇ ಅವನ ಮುಖ ಕಳೆಗುಂದಿತು, ಮನಸು ಕಳವಳಗೊಂಡಿತು, ಸೊಂಟದ ಕೀಲು ಸಡಿಲಗೊಂಡಿತು, ಮೊಣಕಾಲುಗಳು ಒಂದಕ್ಕೊಂದು ಬಡಿದುಕೊಂಡವು. ಅಂತೆಯೇ, ದಾನಿಯೇಲನನ್ನು ರಾಜ ಸನ್ನಿಧಿಗೆ ಬರಮಾಡಲಾಯಿತು. ರಾಜನು ಅವನಿಗೆ: "ರಾಜನಾದ ನನ್ನ ತಂದೆ ಜುದೇಯದಿಂದ ಖೈದಿಯಾಗಿ ತಂದು ಸೆರೆಮಾಡಿದ ಯೆಹೂದ್ಯರಲ್ಲಿ ದಾನಿಯೇಲ್ ಎಂಬುವನು ನೀನೋ? ದೇವರ ಆತ್ಮ ನಿನ್ನಲ್ಲಿ ನೆಲೆಸಿದೆಯೆಂದು ನಾನು ಕೇಳಿದ್ದೇನೆ. ನಿನಗೆ ಪರಮಜ್ಞಾನ, ವಿವೇಕ, ಬುದ್ಧಿ, ತೇಜಸ್ಸು ಇದೆಯೆಂದು ನನಗೆ ತಿಳಿದುಬಂದಿದೆ. ನೀನು ಗೂಡಾರ್ಥಗಳನ್ನು ವಿವರಿಸಬಲ್ಲವನೂ ಎಂಬ ಸಮಾಚಾರ ನನಗೆ ಮುಟ್ಟಿದೆ. ಈ ಬರಹವನ್ನು ಓದಿ, ಇದರ ಅಭಿಪ್ರಾಯವನ್ನು ನನಗೆ ತಿಳಿಸಿದೆಯಾದರೆ ನಿನಗೆ ಕೆನ್ನೀಲಿಯ ರಾಜವಸ್ತ್ರವನ್ನು ಹೊದಿಸಿ. ಕೊರಳಿಗೆ ಚಿನ್ನದ ಹಾರವನ್ನು ಹಾಕಿಸಿ, ನಿನ್ನನ್ನು ರಾಜ್ಯದ ಮೂವರು  ಮುಖ್ಯಾಧಿಕಾರಿಗಳಲ್ಲಿ ಒಬ್ಬನನ್ನಾಗಿ ನೇಮಿಸುವೆನು," ಎಂದು ಹೇಳಿದನು. ಆಗ ದಾನಿಯೇಲನು ರಾಜನಿಗೆ, "ಅರಸರೇ, ನಿಮ್ಮ ದಾನಗಳು ನಿಮಗೇ ಇರಲಿ. ನಿಮ್ಮ ಬಹುಮಾನಗಳು ಮತ್ತೊಬ್ಬನಿಗೆ ದೊರಕಲಿ. ಆದರೆ ನಾನು ಈ ಬರಹವನ್ನು ಓದಿ ಅದರ ಅರ್ಥವನ್ನು ತಮಗೆ ತಿಳಿಸುವೆನು. ಪರಲೋಕದ ಒಡೆಯನಿಗೆ ವಿರುದ್ಧವಾಗಿ ನಿಮ್ಮನ್ನೆ ಹೆಚ್ಚಿಸಿಕೊಂಡಿದ್ದೀರಿ. ದೇವಾಲಯದಿಂದ ಪವಿತ್ರ ಪೂಜಾಪಾತ್ರೆಗಳನ್ನು ಇಲ್ಲಿಗೆ ತಂದಿದ್ದೀರಿ. ನೀವೂ ನಿಮ್ಮ ರಾಜ್ಯದ ಪ್ರಮುಖರೂ ಪತ್ನಿ - ಉಪಪತ್ನಿಯರೂ ಅವುಗಳಲ್ಲಿ ದ್ರಾಕ್ಷಾರಸವನ್ನೂ ಕುಡಿದಿದ್ದೀರಿ. ಬುದ್ದಿ, ಕಣ್ಣು, ಕಿವಿ ಇಲ್ಲದೆ ಬೆಳ್ಳಿಬಂಗಾರಗಳ, ಕಂಚು ಕಬ್ಬಿಣಗಳ, ಮರ ಕಲ್ಲುಗಳ ದೇವರುಗಳನ್ನು ಆರಾಧಿಸಿದ್ದೀರಿ. ನಿಮ್ಮ ಪ್ರಾಣ ಯಾರ ಕೈಯಲ್ಲಿದೆಯೋ ನಿಮ್ಮ ಸ್ಥಿತಿಗತಿಗಳು ಯಾರ ಅಧೀನದಲ್ಲಿದೆಯೋ ಆ ದೇವರನ್ನು ಮಾತ್ರ ಗೌರವಿಸದೆ ಇದ್ದೀರಿ. ಹೀಗಿರಲು, ಆ ಕೈಬೆರಳು ದೇವರ ಸನ್ನಿಧಿಯಿಂದ ಬಂದು ಬರೆದಿದೆ. ಬರೆದಿರುವ ಮಾತುಗಳು ಇವು: "ಮೆನೇ, ಮೆನೇ, ತೆಕೇಲ್, ಉಫರ್ಸಿನ್." ಇದರ ಅರ್ಥ ಹೀಗಿದೆ: "ಮೆನೇ" ಎಂದರೆ, ದೇವರು ನಿನ್ನ ಆಳ್ವಿಕೆಯ ಕಾಲಾವಧಿಯನ್ನು ಲೆಕ್ಕಿಸಿ ಕೊನೆಗಾಣಿಸಿದ್ದಾರೆ. "ತೆಕೇಲ್" ಎಂದರೆ ನಿನ್ನನ್ನು ತಕ್ಕಡಿಯಲ್ಲಿ ಹಾಕಿ ನೋಡಲು ನಿನ್ನ ತೂಕ ಕಡಿಮೆಯಾಗಿ ಕಂಡುಬಂದಿದೆ. "ಉಫರ್ಸಿನ್" ಎಂದರೆ ನಿನ್ನ ರಾಜ್ಯವನ್ನು ವಿಭಾಗಮಾಡಿ ಮೇದ್ಯರಿಗೂ ಪರ್ಷಿಯದವರಿಗೂ ಕೊಡಲಾಗಿದೆ," ಎಂದು ಅರಿಕೆಮಾಡಿದನು. 
  
ಅಜರ್ಯ: 1:40-45 
ಶ್ಲೋಕ: ಸರ್ವೇಶ್ವರನನ್ನು ಕೊಂಡಾಡಿ, ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿರಿ 

ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ಇದೆಲ್ಲಾ ಸಂಭವಿಸುವುದಕ್ಕೆ ಮುಂಚೆ ನಿಮ್ಮನ್ನು ಬಂಧಿಸಿ ಹಿಂಸೆಗೊಳಪಡಿಸುವರು. ಪ್ರಾರ್ಥನಾ ಮಂದಿರಗಳಿಗೂ ಕಾರಾಗೃಹಗಳಿಗೂ ಎಳೆದೊಪ್ಪಿಸುವರು; ನನ್ನ ನಾಮದ ನಿಮಿತ್ತ ನಿಮ್ಮನ್ನು ಅರಸರ ಹಾಗೂ ಅಧಿಪತಿಗಳ ಮುಂದಕ್ಕೆ ಎಳೆಯುವರು. ಶುಭಸಂದೇಶಕ್ಕೆ ಸಾಕ್ಷಿಕೊಡಲು ಇದು ನಿಮಗೆ  ಸದವಕಾಶವಾಗಿರುತ್ತದೆ. ಆಗ ವಾದಿಸುವುದು ಹೇಗೆಂದು ನೀವು ಮುಂಚಿತವಾಗಿ ಚಿಂತಿಸಬೇಕಾಗಿಲ್ಲ; ಇದು ನಿಮಗೆ ಮನದಟ್ಟಾಗಿರಲಿ. ಏಕೆಂದರೆ ನಿಮ್ಮ ವಿರೋಧಿಗಳಾರೂ ಪ್ರತಿಭಟಿಸಲು ಅಥವಾ ವಿರೋಧಿಸಲು ಆಗದಂಥ ವಾಕ್ಚಾತುರ್ಯವನ್ನೂ ಜ್ಞಾನಶಕ್ತಿಯನ್ನೂ ನಿಮಗೆ ಕೊಡುವೆನು. ನಿಮ್ಮ ತಂದೆತಾಯಿಗಳೇ, ಒಡಹುಟ್ಟಿದವರೇ, ಬಂಧುಮಿತ್ರರೇ, ನಿಮ್ಮನ್ನು ಪರಾಧೀನ ಮಾಡುವರು; ಮಾತ್ರವಲ್ಲ, ನಿಮ್ಮಲ್ಲಿ ಕೆಲವರನ್ನು ಕೊಂದು ಹಾಕಿಸುವರು. ನೀವು ನನ್ನವರು ಆದುದರಿಃದಲೇ ಎಲ್ಲರೂ ನಿಮ್ಮನ್ನು ದ್ವೇಷಿಸುವರು ಆದರೂ ನಿಮ್ಮ ತಲೆಕೂದಲೊಂದೂ ನಾಶವಾಗುವುದಿಲ್ಲ. ಸೈರಣೆಯಿಂದಿರಿ, ಸಂರಕ್ಷಣೆಯನ್ನು ಪಡೆಯುವಿರಿ."

No comments:

Post a Comment