ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

08.11.2019 - "ಅಪ್ರಾಮಾಣಿಕ ಮೇಸ್ತ್ರಿ ಮಾಡಿದ ಮುಂದಾಲೋಚನೆಯನ್ನು ಅವನ ಯಜಮಾನ ಪ್ರಶಂಸಿಸಿದ"

ಮೊದಲನೇ ವಾಚನ: ರೋಮನರಿಗೆ 15:14-21

ಸಹೋದರರೇ, ನೀವು ಗುಣಸಂಪನ್ನರೂ ಒಬ್ಬರಿಗೊಬ್ಬರು ಬುದ್ಧಿ ಹೇಳಿಕೊಳ್ಳಲು ಸಮರ್ಥರೂ ಆಗಿದ್ದೀರಿ ಎಂದು ನಾನು ಚೆನ್ನಾಗಿ ಬಲ್ಲೆ. ಆದರೂ ಕೆಲವು ವಿಷಯಗಳತ್ತ ನಿಮ್ಮ ಗಮನ ಸೆಳೆಯುವ ಉದ್ದೇಶದಿಂದ ಅಲ್ಲಲ್ಲಿ ಹೆಚ್ಚಿನ ಧೈರ್ಯವಹಿಸಿ ಬರೆದಿದ್ದೇನೆ. ದೇವರು ನನಗೆ ದಯಪಾಲಿಸಿರುವ ವಿಶೇಷ ವರದಾನದಿಂದಾಗಿ ಈ ಪ್ರಕಾರ ಬರೆದಿದ್ದೇನೆ ಈ ವರದಿಂದಲೇ ಯೆಹೂದ್ಯರಲ್ಲದ ಜನರಿಗೆ ನಾನು ಕ್ರಿಸ್ತ ಯೇಸುವಿನ ದಾಸನಾದೆ. ಯೆಹೂದ್ಯರಲ್ಲದವರು ಪವಿತ್ರಾತ್ಮರ ಮೂಲಕ ಪರಿಶುದ್ಧರಾಗಿ, ದೇವರಿಗೆ ಸಮರ್ಪಕ ಕಾಣಿಕೆಯಾಗುವಂತೆ ದೇವರ ಶುಭಸಂದೇಶವನ್ನು ಸಾರುವುದೇ ನನ್ನ ಪೂಜ್ಯಸೇವೆ, ಅದುವೇ ನನ್ನ ಯಾಜಕ ಸೇವೆ. ದೇವರಿಗಾಗಿ ಸಲ್ಲಿಸುವ ಈ ಸೇವೆಯನ್ನು ಕುರಿತು ನಾನು ಕ್ರಿಸ್ತಯೇಸುವಿನಲ್ಲಿ ಹೆಮ್ಮೆಪಡಲು ಕಾರಣ ಉಂಟು. ಕ್ರಿಸ್ತ ಯೇಸು ನನ್ನ ಮುಖಾಂತರ ಅಂದರೆ, ನನ್ನ  ಬೋಧನೆ ಹಾಗು ಸಾಧನೆಗಳ ಮೂಲಕ, ಸೂಚಕ ಹಾಗೂ ಅದ್ಬುತ ಕಾರ್ಯಗಳ ಮೂಲಕ ಮತ್ತು ಪವಿತ್ರಾತ್ಮರ ಶಕ್ತಿಯ ಮೂಲಕ ಯೆಹೂದ್ಯರಲ್ಲದವರನ್ನೂ ತಮ್ಮ ಶರಣರನ್ನಾಗಿಸಿಕೊಂಡಿದ್ದಾರೆ. ಇದೊಂದನ್ನು ಬಿಟ್ಟು ಬೇರೆ ಯಾವುದನ್ನು ಕುರಿತು ಹೊಗಳಿಕೊಳ್ಳಲು ನಾನು ಧೈರ್ಯಗೊಳ್ಳುವುದಿಲ್ಲ ಜೆರುಸಲೇಮಿನಿಂದ ಪ್ರಾರಂಭಿಸಿ ಇಲ್ಲುರಿಕ ಪ್ರಾಂತ್ಯದವರಿಗೂ ಸುತ್ತಮುತ್ತಲಿನಲ್ಲೂ ನಾನು ಸಂಚಾರಮಾಡಿ, ಕ್ರಿಸ್ತ ಯೇಸುವಿನ ಶುಭಸಂದೇಶವನ್ನು ಪೂರ್ತಿಯಾಗಿ ಪ್ರಚಾರಮಾಡಿದ್ದೇನೆ. ಮತ್ತೊಬ್ಬನು ಹಾಕಿದ ಅಸ್ತಿವಾರದ ಮೇಲೆ ನಾನು ಕಟ್ಟುವುದು ಸರಿಯಲ್ಲವೆಂಬುದು ನನ್ನ ಅಭಿಪ್ರಾಯ. ಆದಕಾರಣ ಕ್ರಿಸ್ತ ಯೇಸುವಿನ ನಾಮವು ಪ್ರಚಾರವಾಗದ ಕಡೆ ಹೋಗಿ ಶುಭಸಂದೇಶವನ್ನು ಸಾರಬೇಕೆಂಬುದೇ ನನ್ನ ಆಕಾಂಕ್ಷೆ. "ಯಾರಿಗೆ ಆತನ ಸುದ್ದಿ ಮುಟ್ಟಿಲ್ಲವೋ ಅವರು ಆತನನ್ನು ನೋಡುವರು; ಯಾರು ಆತನ ವರ್ತಮಾನ ಕೇಳಿಲ್ಲವೋ ಅವರು ಅತನನ್ನು ಗ್ರಹಿಸಿಕೊಳ್ಳುವರು," ಎಂಬುದಾಗಿ ಪವಿತ್ರಗ್ರಂಥದಲ್ಲಿ ಬರೆದಿರುವ ಪ್ರಕಾರ ನನ್ನ ಕಾರ್ಯವನ್ನು ನಡೆಸಿದ್ದೇನೆ.

ಕೀರ್ತನೆ: 98:1, 2-3, 3-4
ಶ್ಲೋಕ: ರಾಷ್ಟ್ರಗಳಿಗೆ ತೋರಿಸಿಹನು ಜೀವೋದ್ಧಾರಕಾ ಶಕ್ತಿಯನು

ಶುಭಸಂದೇಶ: ಲೂಕ 16:1-8

ಯೇಸುಸ್ವಾಮಿ ತಮ್ಮ ಶಿಷ್ಯರನ್ನು ಉದ್ದೇಶಿಸಿ ಇಂತೆಂದರು: "ಒಬ್ಬನು ಧನಿಕನಿದ್ದ, ಅವನ ವ್ಯವಹಾರಗಳನ್ನು ನೋಡಿಕೊಳ್ಳಲು ಒಬ್ಬ ಮೇಸ್ತ್ರಿಯಿದ್ದ. ಇವನು ಧನಿಕನ ಆಸ್ತಿಯನ್ನು ಹಾಳುಮಾಡುತ್ತಿದ್ದಾನೆಂದು ದೂರು ಬಂದಿತು. ಧನಿಕನು ಅವನನ್ನು ಕರೆದು, "ಏನಿದು, ನಿನ್ನ ವಿಷಯವಾಗಿ ನಾನು ಹೀಗೆಲ್ಲ ಕೇಳುತ್ತಾ ಇದ್ದೇನೆ? ನಿನ್ನ ಕೆಲಸದ ಲೆಕ್ಕಾಚಾರವನ್ನು ಒಪ್ಪಿಸಿಬಿಡು. ಇನ್ನು ನೀನು ಮೇಸ್ತ್ರಿ ಆಗಿರಲು ಆಗದು," ಎಂದ. ಆಗ ಮೇಸ್ತ್ರಿ, "ಈಗ ಏನು ಮಾಡಲಿ? ಯಜಮಾನನು ನನ್ನನ್ನು ಕೆಲಸದಿಂದ ತೆಗೆದು ಬಿಡುತ್ತಾನಲ್ಲಾ; ಅಗೆಯಲು ಶಕ್ತಿ ಸಾಲದು; ಭಿಕ್ಷೆ ಬೇಡಲು ನನಗೆ ನಾಚಿಕೆ," ಎಂದು ಚಿಂತಾಕ್ರಾಂತನಾದ, ಮರುಕ್ಷಣ, "ಸರಿ, ಕೆಲಸದಿಂದ ನನ್ನನ್ನು ತೆಗೆದುಹಾಕಿದ ಮೇಲೆ ಜನರು ನನ್ನನ್ನು ತಮ್ಮ ಮನೆಗೆ ಸೇರಿಸಿಕೊಳ್ಳುವಂತೆ ನಾನು ಏನು ಮಾಡಬೇಕೆಂದು ಈಗ ಗೊತ್ತಾಯಿತು," ಎಂದುಕೊಂಡ. ಯಜಮಾನನ ಸಾಲಗಾರರನ್ನು ಒಬ್ಬೊಬ್ಬರನ್ನಾಗಿ ಬರಮಾಡಿಕೊಂಡ. "ನೀನು ನನ್ನ ಯಜಮಾನನಿಗೆ ತೀರಿಸಬೇಕಾದ ಸಾಲ ಎಷ್ಟು?" ಎಂದು ಮೊದಲನೆಯವನನ್ನು ಕೇಳಿದ. ಅವನು, "ನೂರು ಬುದ್ದಲಿ ಎಣ್ಣೆ," ಎಂದ. ಅದಕ್ಕೆ ಮೇಸ್ತ್ರಿ, "ಇಗೋ, ನಿನ್ನ ಪತ್ರ, ಕುಳಿತುಕೊಂಡು "ಐವತ್ತು" ಎಂದು ಬೇಗನೆ ಬರೆ," ಎಂದ. ಬಳಿಕ ಇನ್ನೊಬ್ಬನನ್ನು ಕರೆದು, "ನೀನೆಷ್ಟು ಸಾಲ ತೀರಿಸಬೇಕು?" ಎಂದು ಕೇಳಿದ. ಅವನು "ನೂರು ಖಂಡುಗ ಗೋದಿ" ಎಂದಾಗ "ಇಗೋ ನಿನ್ನ ಪತ್ರ, "ಎಂಬತ್ತು"ಎಂದು ಬರೆ", ಎಂದ. ಈ ಅಪ್ರಾಮಾಣಿಕ ಮೇಸ್ತ್ರಿ ಮಾಡಿದ ಮುಂದಾಲೋಚನೆಯನ್ನು ಅವನ ಯಜಮಾನ ಪ್ರಶಂಸಿಸಿದ. ಏಕೆಂದರೆ, ತಮ್ಮ ತಮ್ಮ ವ್ಯವಹಾರಗಳಲ್ಲಿ ಲೌಕಿಕ ಜನರು ಬೆಳಕಿನ ರಾಜ್ಯದ ಜನರಿಗಿಂತ ಜಾಣರು.

No comments:

Post a Comment