ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

20.11.2019

ಮೊದಲನೇ ವಾಚನ: 2 ಮಕ್ಕಬಿಯರು 7:1, 20-31

ಆ ಕಾಲದಲ್ಲಿ ಏಳು ಮಂದಿ ಸಹೋದರರನ್ನು ಅವರ ತಾಯಿಯೊಂದಿಗೆ, ಅರಸನ ಅಪ್ಪಣೆಯ ಮೇರೆಗೆ ದಸ್ತಗಿರಿ ಮಾಡಲಾಯಿತು. ನಿಷೇಧಿಸಲಾಗಿದ್ದ ಹಂದಿಯ  ಮಾಂಸವನ್ನು ತಿನ್ನಬೇಕೆಂದು ಅವರನ್ನು ಬಲವಂತ ಪಡಿಸಲಾಗಿತ್ತು. ಚಾಟಿಯಿಂದಲೂ ಬಾರುಗಳಿಂದಲೂ ಹೊಡೆದು ಅವರನ್ನು ಬಾಧಿಸಿದರು. ಎಲ್ಲಕ್ಕಿಂತಲೂ ಮಿಗಿಲಾಗಿ ಅವರ ತಾಯಿಯ ವರ್ತನೆ ಅತೀ ಆಶ್ಚರ್ಯಕರವಾಗಿತ್ತು! ಆಕೆ ಚಿರಸ್ಮರಣೆಗೆ ಪಾತ್ರಳಾದವಳು. ಒಂದೇ ದಿನದಲ್ಲಿ ತನ್ನ ಏಳು ಮಕ್ಕಳು ಕಣ್ಮುಂದೆ ಸತ್ತಿದ್ದರೂ ದೇವರಲ್ಲಿ ಅವಳಿಗಿದ್ದ ನಂಬಿಕೆಯ ನಿಮಿತ್ತ ಎಲ್ಲವನ್ನೂ ಧೈರ್ಯದಿಂದ ಸಹಿಸಿಕೊಂಡಳು. ಉದಾತ್ತ ಮನೋಭಾವದಿಂದ ತುಂಬಿದವಳಾಗಿ, ತನ್ನ ಸ್ತ್ರೀಸಹಜವಾದ ಆವೇಶದೊಂದಿಗೆ  ಪೌರುಷತ್ವವನ್ನೂ ಕೂಡಿಸಿ, ಒಬ್ಬೊಬ್ಬನಿಗೂ ಮಾತೃಭಾಷೆಯಲ್ಲಿ: "ನೀವು ಹೇಗೆ ನನ ಉದರದಲ್ಲಿ ಉದ್ಭವಿಸಿದಿರಿ ಎಂಬುದನ್ನು ನಾನು ಅರಿಯೆ. ನಿಮಗೆ ಜೀವವನ್ನೂ ಉಸಿರನ್ನೂ ಕೊಟ್ಟದ್ದು ನಾನಲ್ಲ. ನಿಮ್ಮ ದೇಹದ ಅಂಗಾಂಗಗಳನ್ನು ಜೋಡಿಸಿದ್ದೂ ನಾನಲ್ಲ. ಲೋಕವನ್ನು ಸೃಷ್ಟಿಸಿದವರೇ ಅದನ್ನೆಲ್ಲ ಮಾಡಿದ್ದು. ಅವರೇ ಮಾನವ ಕೋಟೆಯನ್ನು ಉಂಟುಮಾಡಿದವರು. ಸಕಲಕ್ಕೂ ಆದಿಕಾರಣರು ಅವರೇ ಅವರ ಆಜ್ಞೆಗಳನ್ನು ಪಾಲಿಸುವುದಕ್ಕಾಗಿ ನೀವು ಹಿಂಸೆಗೊಳಗಾಗುವುದರಿಂದ, ಅವರು ಕರುಣೆಯಿಂದ ನಿಮಗೆ ಜೀವವನ್ನೂ ಉಸಿರನ್ನೂ ಹಿಂದಕ್ಕೆ ಕೊಡುವರು." ಎಂದು ಹುರಿದುಂಬಿಸಿದಳು. ಇದರಿಂದ ಅಂತಿಯೋಕನಿಗೆ ಅವಮಾನವಾದಂತೆ ತೋರಿತು.  ತನ್ನನ್ನೇ ಅವಳು ಹೀನೈಸುತ್ತಿದ್ದಾಳೆಂಬುದರ ಬಗ್ಗೆ ಸಂಶಯ ಮೂಡಿತು. ಅವಳ ಕೊನೆಯ ಮಗ ಇನ್ನೂ ಉಳಿದಿದ್ದ. ಅಂತಿಯೋಕನು ಅವನನ್ನು ಮಾತುಗಳಿಂದ ಪುಸಲಾಯಿಸಿದನು; ಅವನು ತನ್ನ ಪೂರ್ವಜರ ಆಚಾರಗಳನ್ನು ತೊರೆದು ಬಿಡುವುದಾದರೆ ಅವನನ್ನು ಐಶ್ವರ್ಯವಂತನನ್ನಾಗಿ, ಉನ್ನತ ಪದವಿಯುಳ್ಳವನಾಗಿ ಮಾಡುವುದಾಗಿಯೂ ಅವನನ್ನು ತನ್ನ ಸ್ನೇಹಿತನೆಂದೆಣಿಸಿ ರಾಜ್ಯದ ವ್ಯವಹಾರಗಳ ಮೇಲ್ವಿಚಾರಕನಾಗಿ ನೇಮಿಸುವುದಾಗಿಯೂ ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದನು. ಆದರೆ ಆ ಯುವಕನು ಅವನಿಗೆ ಯಾವ ವಿಧದಲ್ಲೂ ಕಿವಿಗೊಡಲಿಲ್ಲ. ಆಗ ಅರಸನು ಆ ತಾಯಿಯನ್ನು ಬಳಿಗೆ ಕರೆಸಿ, ತನ್ನ ಪ್ರಾಣವನ್ನು ಉಳಿಸಿಕೊಳ್ಳುವಂತೆ ಆ ಹುಡುಗನಿಗೆ ಬುದ್ಧಿ ಹೇಳಬೇಕೆಂದು ಒತ್ತಾಯಿಸಿದನು. ಅರಸನು ಬಹಳವಾಗಿ ಒತ್ತಾಯಿಸಿದ ಮೇಲೆ, ತಾಯಿ ಮಗನಿಗೆ ಬುದ್ಧಿ ಹೇಳಿದಳು. ಮಗನ ಮೇಲೆ ಒರಗಿಕೊಂಡು, ಕ್ರೂರಿಯಾದ ಅರಸನನ್ನು ಪರಿಹಾಸ್ಯ ಮಾಡುತ್ತಾ, ಮಾತೃಭಾಷೆಯಲ್ಲೇ ಹೀಗೆಂದಳು: "ಮಗನೇ, ನನ್ನ ಮೇಲೆ ಮರುಕವಾಗಿರು. ಒಂಬತ್ತು ತಿಂಗಳು ನಿನ್ನನ್ನು ನನ್ನ ಉದರದಲ್ಲಿ ಹೊತ್ತೆ. ಮೂರು ವರ್ಷ ಮೊಲೆಯೂಡಿಸಿ ನಿನ್ನನ್ನು ಸಾಕಿಸಲಹಿದೆ. ನಿನ್ನ ಜೀವನದ ಈ ಗಳಿಗೆಯವರೆಗೂ ನಿನ್ನನ್ನು ಪೋಷಿಸಿ ಸಾಕಿದೆ. ನಿನ್ನ ಆರೈಕೆ ಮಾಡಿದೆ. ಮಗನೇ, ಸ್ವರ್ಗವನ್ನೂ ಭೂಮಿಯನ್ನೂ ಅದರಲ್ಲಿರುವುದೆಲ್ಲವನ್ನೂ ನೋಡು, ಏನೂ ಇಲ್ಲದೆ ದೇವರು ಅದೆಲ್ಲವನ್ನೂ ಉಂಟುಮಾಡಿದರು. ಮಾನವ ಕೋಟಿಯು ಸಹ ಆದೇ ರೀತಿ ಉಂಟಾಯಿತು; ಇದನ್ನು ಒಪ್ಪಿಕೋ. ಈ ಕಟುಕನಿಗೆ ನೀನು ಹೆದರಬೇಡ. ನೀನು ನಿನ್ನ ಸಹೋದರರಿಗೆ ಯೋಗ್ಯ ತಮ್ಮನೆಂದು ಸಾಬೀತುಪಡಿಸು. ಸಾವನ್ನು ಅಪ್ಪು. ಹೀಗೆ ದೇವರ ಕರುಣೆಯಿಂದ, ನಿನ್ನ ಸಹೋದರರೊಂದಿಗೆ ನಿನ್ನನ್ನು ನಾನು ಪುನಃ ಪಡೆಯುವಂತಾಗಲಿ!" ಆಕೆ ಇನ್ನೂ ಮಾತಾಡುತ್ತಿರುವಾಗಲೇ, ಆ ಯುವಕನು, "ಏತಕ್ಕಾಗಿ ಇನ್ನೂ ಕಾದಿದ್ದೀರಿ? ನಾನು ಅರಸನ ಆಜ್ಞೆಯನ್ನು ಪಾಲಿಸುವುದಿಲ್ಲ. ಬದಲಿಗೆ ಮೋಶೆಯ ಮುಖಾಂತರ ನಮ್ಮ ಪೂರ್ವಜರಿಗೆ ಕೊಟ್ಟ ನಿಯಮವನ್ನು ಅನುಸರಿಸುತ್ತೇವೆ. ಹಿಬ್ರಿಯರಾದ ನಮ್ಮ ಜನರಿಗೆ ಇಂಥ ದುಷ್ಕೃತ್ಯಗಳನ್ನು ಎಸಗಿರುವ ನೀನು ಖಂಡಿತವಾಗಿಯೂ ದೇವರ ಕೈಯಿಂದ ತಪ್ಪಿಸಿಕೊಳ್ಳುವಂತಿಲ್ಲ," ಎಂದನು.

ಕೀರ್ತನೆ: 17:1, 5-6, 8, 15
ಶ್ಲೋಕ: ಪ್ರಭೂ, ಎಚ್ಚೆತ್ತು ನಿನ್ನ ಮುಖದರ್ಶನದಿಂದ ತೃಪ್ತನಾಗುವೆನು

ಶುಭಸಂದೇಶ: ಲೂಕ 19:11-28

ಯೇಸುಸ್ವಾಮಿ ಈಗ ಜೆರುಸಲೇಮಿಗೆ ಸಮೀಪದಲ್ಲೇ ಇದ್ದರು. ಅವರ ಮಾತುಗಳನ್ನು ಕೇಳುತ್ತಿದ್ದ ಜನರು ದೇವರ ಸಾಮ್ರಾಜ್ಯ ಇದೀಗಲೇ ಪ್ರತ್ಯಕ್ಷವಾಗುವುದೆಂದು ಭಾವಿಸಿದ್ದರು. ಈ ಕಾರಣ ಯೇಸು ಅವರಿಗೆ ಒಂದು ಸಾಮತಿಯನ್ನು ಹೇಳಿದರು: "ಕುಲೀನನೊಬ್ಬ ರಾಜಪದವಿಯನ್ನು ಗಳಿಸಿಬರಲು ದೂರದ ರಾಜಧಾನಿಗೆ ಹೊರಟ. ಹೊರಡುವಾಗ ತನ್ನ ಹತ್ತು ಮಂದಿ ಸೇವಕರನ್ನು ಕರೆದು, ಒಬ್ಬೊಬ್ಬನಿಗೂ ಒಂದರಂತೆ ಹತ್ತು ಚಿನ್ನದ ನಾಣ್ಯಗಳನ್ನು ಕೊಟ್ಟು, "ನಾನು ಬರುವತನಕ ವ್ಯಪಾರ ಮಾಡಿಕೊಂಡಿರಿ," ಎಂದು ಹೇಳಿ ಹೋದ. ಅವನ ನಾಡಿಗರಾದರೋ ಅವನನ್ನು ದ್ವೇಷಿಸುತ್ತಿದ್ದರು. "ಇವನು ನಮಗೆ ರಾಜನಾಗುವುದು ಬೇಡ," ಎಂದು ತಿಳಿಸಲು ಅವನ ಹಿಂದೆಯೇ  ತಮ್ಮ ಪ್ರತಿನಿಧಿಗಳನ್ನು ಕಳುಹಿಸಿದರು. ಆದರೂ ಅವನು ರಾಜಪದವಿಯನ್ನು ಪಡೆದು ಹಿಂದಿರುಗಿ ಬಂದ. ತನ್ನಿಂದ ಹಣಪಡೆದ ಸೇವಕರು ವ್ಯಾಪಾರಮಾಡಿ ಎಷ್ಟೆಷ್ಟು ಲಾಭಗಳಿಸಿದ್ದಾರೆಂದು ತಿಳಿದುಕೊಳ್ಳುವುದಕ್ಕಾಗಿ ಅವರನ್ನು ಕೂಡಲೇ ತನ್ನ ಬಳಿಗೆ ಕರೆತರಲು ಆಜ್ಞಾಪಿಸಿದ. ಮೊದಲನೆಯವನು ಮುಂದೆ ಬಂದು, "ಪ್ರಭುವೇ, ನಿಮ್ಮ ಒಂದು ನಾಣ್ಯದಿಂದ ನಾನು ಹತ್ತು ನಾಣ್ಯಗಳನ್ನು ಸಂಪಾದಿಸಿದ್ದೇನೆ," ಎಂದ. ಅದಕ್ಕೆ ಅವನು, "ಭಲಾ, ನೀನು ಒಳ್ಳೆಯ ಸೇವಕ, ಸ್ವಲ್ಪದರಲ್ಲಿ ನೀನು ಪ್ರಮಾಣಿಕನಾಗಿದ್ದೆ. ಆದ್ದರಿಂದ ಹತ್ತು ಪಟ್ಟಣಗಳಿಗೆ ಅಧಿಪತಿಯಾಗಿರು" ಎಂದ. ಎರಡನೆಯ ಸೇವಕನು ಬಂದು, "ಪ್ರಭುವೇ, ನೀವು ಕೊಟ್ಟ ಒಂದು ನಾಣ್ಯದಿಂದ ಐದು ನಾಣ್ಯಗಳನ್ನು ಸಂಪಾದಿಸಿದ್ದೇನೆ," ಎಂದ. ಅದಕ್ಕೆ ರಾಜ, "ನೀನು ಐದು ಪಟ್ಟಣಗಳಿಗೆ ಅಧಿಪತಿಯಾಗಿರು," ಎಂದ. ಬಳಿಕ ಮತೊಬ್ಬ ಸೇವಕನು ಬಂದು, "ಇಗೋ, ಪ್ರಭುವೇ, ನಿಮ್ಮ ಚಿನ್ನದ ನಾಣ್ಯ; ನಿಮಗೆ ಭಯಪಟ್ಟು ಇದನ್ನು ಬಟ್ಟೆಯಲ್ಲಿ ಭದ್ರವಾಗಿ ಕಟ್ಟಿ ಇಟ್ಟಿದ್ದೆ. ಏಕೆಂದರೆ, ನೀವು ಕಠಿಣ ಮನುಷ್ಯರು; ನೀವು ಕೂಡಿಡದ್ದನ್ನು ಕೊಂಡು ಹೋಗುತ್ತೀರಿ, ಬಿತ್ತದಿದ್ದನ್ನು ಕೊಯಿಲು ಮಾಡುತ್ತೀರಿ," ಎಂದ. ರಾಜ ಅವನನ್ನು ನೋಡಿ, "ಎಲಾ ದುಷ್ಟ  ಸೇವಕನೇ, ನೀನು ಆಡಿದ ಮಾತಿನಿಂದಲೇ ನಿನಗೆ ತೀರ್ಪುಕೊಡುತ್ತೇನೆ. ನಾನು ಕೂಡಿಡದ್ದನ್ನು ಕೊಂಡುಹೋಗುವ, ಬಿತ್ತದ್ದನ್ನು ಕೊಯಿಲುಮಾಡುವ ಕಠಿಣ ಮನುಷ್ಯನೆಂದು ನಿನಗೆ ತಿಳಿದಿತ್ತು ಅಲ್ಲವೆ? ಹಾಗಾದರೆ ನನ್ನ ಹಣವನ್ನೇಕೆ ಬಡ್ಡಿ ಅಂಗಡಿಯಲ್ಲಿ ಹಾಕಿಡಲಿಲ್ಲ? ನಾನು ಬಂದು ಬಡ್ಡಿಸಮೇತ ನನ್ನ ಅಸಲನ್ನು ತೆಗೆದುಕೊಳ್ಳುತ್ತಿದ್ದೆನಲ್ಲಾ," ಎಂದು ಹೇಳಿ ಪರಿಚಾರಕರಿಗೆ, "ಇವನಿಂದ ಆ ಚಿನ್ನದ ನಾಣ್ಯವನ್ನು ಕಿತ್ತು  ಹತ್ತು ನಾಣ್ಯಗಳುಳ್ಳವನಿಗೆ ಕೊಡಿ," ಎಂದ. ಅದಕ್ಕವರು, "ಪ್ರಭುವೇ, ಅವನಲ್ಲಿ ಈಗಾಗಲೇ ಹತ್ತು ನಾಣ್ಯಗಳಿವೆಯಲ್ಲಾ?" ಎಂದರು. ಆಗ ರಾಜ, "ಉಳ್ಳ ಪ್ರತಿಯೊಬ್ಬನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ; ಇಲ್ಲದವನಿಂದ ಇರುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ, ಇದು ನಿಶ್ಚಯ," ಎಂದ. ಅಲ್ಲದೆ, "ನಾನು ತಮಗೆ ರಾಜನಾಗುವುದು ಬೇಡವೆಂದ ನನ್ನ ಶತ್ರುಗಳನ್ನು ಇಲ್ಲಿಗೆ ಎಳೆದು ತಂದು ನನ್ನ ಮುಂದೆಯೇ ಸಂಹರಿಸಿರಿ," ಎಂದ." ಇದನ್ನೆಲ್ಲಾ ಹೇಳಿ ಆದ ಮೇಲೆ ಯೇಸುಸ್ವಾಮಿ ಅವರೆಲ್ಲರಿಗಂತ ಮುಂದಾಗಿ ನಡೆದು ಜೆರುಸಲೇಮಿನತ್ತ ತೆರಳಿದರು.

No comments:

Post a Comment