ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

15.11.2019

ಮೊದಲನೇ ವಾಚನ: ಜ್ಞಾನ ಗ್ರಂಥ 13:1-9

ದೇವರನ್ನು ಅರಿಯದ ಮನುಜರೆಲ್ಲರು ಮಂದಮತಿಗಳೆಂಬುದು ಸಹಜ. ಕಣ್ಣಿಗೆ ಕಾಣುವ ಚೆಲುವಾದವುಗಳಿಂದ ಇರುವಾತನನು ಅವರರಿಯಲಿಲ್ಲ. ಸೃಷ್ಟಿಯಾದ ವಸ್ತುಗಳನ್ನು ಗಮನಿಸಿ ಸೃಷ್ಟಿಕರ್ತನನು ಗುರುತಿಸಲಿಲ್ಲ. ಬದಲಿಗೆ ಅಗ್ನಿ, ಆವಿ, ವೇಗವಾಯು, ತಾರಾಗಣ, ಭೋರ್ಗರೆವ ಸಾಗರ, ಗಗನದ ಜ್ಯೋರ್ತಿಮಂಡಲ ಇವುಗಳೇ ಜಗವನ್ನಾಳುವ ದೇವರೆಂದುಕೊಂಡರಲ್ಲಾ! ಇವುಗಳಲ್ಲಿನ ಚೆಲುವಿಗೆ ಮಣಿದು ಇವುಗಳನ್ನೇ ದೇವರೆಂದುಕೊಂಡರು. ಗ್ರಹಿಸದೆ ಹೋದರು ಇವುಗಳ ಒಡೆಯ ಇನ್ನೆಷ್ಟು ಮಿಗಿಲಾಗಿರಬೇಕೆಂದು! ಸೌಂದರ್ಯಕ್ಕೆ ಮೂಲವಾದ ಸರ್ವೇಶ್ವರನೇ ನಿರ್ಮಿಸಿಹನು ಇವುಗಳನ್ನು. ಇವುಗಳಲ್ಲಿನ ಗುಣಶಕ್ತಿಗೆ ಅಚ್ಚರಿಗೊಂಡು ಹಾಗೆ ನುಡಿದಿದ್ದರೆ ಇವುಗಳನ್ನು ರೂಪಿಸಿದವನೆಷ್ಟು ಶಕ್ತನೆಂದು ತಿಳಿಯಲಿ ಅವುಗಳಿಂದಲೇ ಸೃಷ್ಟಿವಸ್ತುಗಳ ಸೌಂದರ್ಯ ಮಹತ್ವಗಳಿಂದ ಅವುಗಳ ಸೃಷ್ಟಿಕರ್ತನ ಸಾದೃಶ್ಯ ಸಾಧ್ಯ. ಇಂಥವರ ಮೇಲೆ ಬರುವ ಅಪರಾಧ ಅಂಥ ದೊಡ್ಡದೇನೂ ಅಲ್ಲ, ದೇವರನ್ನು ಹುಡುಕುವ ಆಶೆಯಿಂದಲೇ, ತಪ್ಪುಹಾದಿ  ಹಿಡಿದಿರಬಹುದಲ್ಲಾ. ಸೃಷ್ಟಿಕಾರ್ಯಗಳ ನಡುವೆ ಬಾಳುತ್ತಾ ವಿಚಾರಿಸುತ್ತಾರೆ ಮನಃಪೂರ್ವಕವಾಗಿ ಭ್ರಮೆಗೊಳ್ಳುತ್ತಾರೆ ಅವುಗಳ ಸಹಜವಾದ ಚೆಲುವಿಗೆ ಬೆರಗಾಗಿ. ಹೀಗಿದ್ದರೂ ಇಂಥವರನ್ನೇ ದೋಷಮುಕ್ತರೆನ್ನಲಾದೀತೆ? ಪ್ರಪಂಚವನ್ನೇ ಶೋಧಿಸಿನೋಡುವ ಶಕ್ತಿ ಇವರಲ್ಲಿದ್ದ ಮೇಲೆ ಸೃಷ್ಟಿಗೆ ಒಡೆಯನಾದವನನು ಅರಿತುಕೊಳ್ಳಲು ತಡವಾದುದೇಕೆ?

ಕೀರ್ತನೆ: 19:2-3, 4-5
ಶ್ಲೋಕ: ತಾರಾಮಂಡಲ ತೋರುತಿದೆ ದೇವರ ಸೃಕೃತಿಗಳನು

ಶುಭಸಂದೇಶ: ಲೂಕ 17:26-37

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: "ನೋವನ ಕಾಲದಲ್ಲಿ ನಡೆದಂತೆಯೇ ನರಪುತ್ರನು ಬರುವ ಕಾಲದಲ್ಲೂ ನಡೆಯುವುದು. ನೋವನು ನಾವೆಯನ್ನು ಹತ್ತುವ ದಿನದ ತನಕ ಜನರು ತಿನ್ನುತ್ತಾ ಕುಡಿಯುತ್ತಾ ಇದ್ದರು; ಮದುವೆಮಾಡಿಕೊಳ್ಳುತ್ತಾ, ಮಾಡಿಕೊಡುತ್ತಾ ಇದ್ದರು; ಜಲಪ್ರಳಯ ಬಂದು ಎಲ್ಲರನ್ನು ನಾಶಮಾಡಿತು. ಅಂತೆಯೇ, ಲೋತನ ಕಾಲದಲ್ಲೂ ನಡೆಯಿತು. ಜನರು ಅನ್ನಪಾನೀಯಗಳಲ್ಲಿ ಆಸಕ್ತರಾಗಿದ್ದರು; ಲೇವಾದೇವಿಯಲ್ಲಿ ತೊಡಗಿದ್ದರು ನೆಡುವುದರಲ್ಲೂ ನಿರ್ಮಿಸುವುದರಲ್ಲೂ ನಿರತರಾಗಿದ್ದರು. ಲೋತನು ಸೊದೋಮ್ ಊರನ್ನು ಬಿಟ್ಟು ತೆರಳಿದ ದಿನದಂದೇ ಆಕಾಶದಿಂದ ಅಗ್ನಿ ಮತ್ತು ಗಂಧಕದ ಮಳೆ ಸುರಿದು ಎಲ್ಲರನ್ನು ನಾಶಮಾಡಿತು. ನರಪುತ್ರನು ಪ್ರತ್ಯಕ್ಷನಾಗುವ ದಿನದಲ್ಲೂ ಹಾಗೆಯೇ  ನಡೆಯುವುದು. ಆ ದಿನಗಳಲ್ಲಿ ಮಾಳಿಗೆಯ ಮೇಲಿರುವವನು ಮನೆಯಲ್ಲಿರುವ ಸರಕುಸಾಮಗ್ರಿಗಳನ್ನು ತೆಗೆದುಕೊಳ್ಳಲು ಕೆಳಗಿಳಿಯದಿರಲಿ. ಅಂತೆಯೇ, ಹೊಲದಲ್ಲಿರುವವನು ಮನೆಗೆ ಹಿಂದಿರುಗದಿರಲಿ. ಲೋತನ ಪತ್ನಿಗಾದ ಗತಿಯನ್ನು ನೆನಪಿಗೆ ತಂದುಕೊಳ್ಳಿರಿ! ಯಾರು ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಇಚ್ಛಿಸುತ್ತಾನೋ ಅವನು ಅದನ್ನು ಕಳೆದುಕೊಳ್ಳುತ್ತಾನೆ; ಯಾರು ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಾನೋ ಅವನು ಅದನ್ನು ರಕ್ಷಿಸಿಕೊಳ್ಳುತ್ತಾನೆ. ಆ ರಾತ್ರಿ ಒಂದೇ ಹಾಸಿಗೆಯಲ್ಲಿ ಇಬ್ಬರು ಮಲಗಿದ್ದರೆ, ಆ ಇಬ್ಬರಲ್ಲಿ ಒಬ್ಬನನ್ನು ತೆಗೆದುಕೊಂಡು ಹೋಗಲಾಗುವುದು; ಒಬ್ಬನನ್ನು ಬಿಡಲಾಗುವುದು. ಒಂದೇ. ಕಲ್ಲಲ್ಲಿ ಬೀಸುತ್ತಿರುವ ಇಬ್ಬರು ಮಹಿಳೆಯರಲ್ಲಿ, ಒಬ್ಬಳನ್ನು ತೆಗೆದುಕೊಂಡು ಹೋಗಲಾಗುವುದು, ಇನ್ನೊಬ್ಬಳನ್ನು ಬಿಡಲಾಗುವುದು. ಹೊಲದಲ್ಲಿದ್ದ ಇಬ್ಬರಲ್ಲಿ, ಒಬ್ಬನನ್ನು ತೆಗೆದುಕೊಂಡು ಹೋಗಲಾಗುವುದು, ಮತ್ತೊಬ್ಬನನ್ನು ಬಿಡಲಾಗುವುದು" ಎಂದರು. "ಸ್ವಾಮಿಾ, ಇದು ಎಲ್ಲಿ ನಡೆಯುವುದು?" ಎಂದು ಶಿಷ್ಯರು ಕೇಳಿದಾಗ, ಯೇಸು, "ಹೆಣವಿದ್ದಲ್ಲಿ ರಣಹದ್ದುಗಳು ಬಂದು ಕೂಡುವುವು," ಎಂದರು.

No comments:

Post a Comment