ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

11.11.19 - "ನಿನ್ನ ಸಹೋದರನು ತಪ್ಪು ಮಾಡಿದರೆ ಅವನನ್ನು ಖಂಡಿಸು; ಪಶ್ಚಾತ್ತಾಪಪಟ್ಟರೆ ಕ್ಷಮಿಸಿ ಬಿಡು"

ಮೊದಲನೇ ವಾಚನ: ಜ್ಞಾನ ಗ್ರಂಥ 1:1-7

ಪೊಡವಿಯ ಪಾಲಕರೇ, ನ್ಯಾಯ ನೀತಿಯನ್ನು ಪ್ರೀತಿಸಿರಿ ಯಥಾರ್ಥ ಚಿತ್ತರಾಗಿ ಸರ್ವೇಶ್ವರನನ್ನು ಧ್ಯಾನಿಸಿರಿ ನಿಷ್ಕಪಟ ಮನಸ್ಸಿನಿಂದ ಆತನನ್ನು ಅರಸಿರಿ. ಸರ್ವೇಶ್ವರನು ದರ್ಶನವೀಯುವುದು ತನ್ನಲ್ಲಿ ಅಪನಂಬಿಕೆ ಪಡದವರಿಗೆ ಸರ್ವೇಶ್ವರನನ್ನು ಅರಿತುಕೊಂಡವರು ಅವರನ್ನು ಗುರಿಪಡಿಸರು ಪರೀಕ್ಷೆಗೆ. ದುರಾಲೋಚನೆಗಳು ಮಾನವನನ್ನು ದೂರ ಮಾಡುತ್ತವೆ ದೇವರಿಂದ. ದೇವರನ್ನು ಪರೀಕ್ಷಿಸಲೆತ್ನಿಸುವವನನ್ನು ಹುಚ್ಚನನ್ನಾಗಿಸುತ್ತದೆ ಆತನ ಶಕ್ತಿ ಸಾಮರ್ಥ್ಯ. ಸುಜ್ಞಾನ ಪ್ರವೇಶಿಸದು ಕಪಟಾತ್ಮವನ್ನು ಪಾಪಾಧೀನವಾದ ಹೃದಯದಲ್ಲಿ ಅದು ತಂಗದು. ಸುಶಿಕ್ಷಿತವಾದ ನಿರ್ಮಲ ಆತ್ಮ ಮೋಸದೆಡೆ ನಿಲ್ಲದು ಅವಿವೇಕ ಆಲೋಚನೆಗಳಿಂದದು ಓಡಿಹೋಗುವುದು ಅನ್ಯಾಯವು ಸಮೀಪಿಸಿದಾಗ ಅದು ಅಸಹ್ಯಪಡುವುದು. ಸುಜ್ಞಾನವೆಂಬುದು ಮಾನವನನ್ನು ಸ್ನೇಹಿಸುವ ಚೈತನ್ಯವು ಆದರೆ ದೇವದೂಷಣೆ ಆಡುವವರನ್ನು ಅದು ದಂಡಿಸದೆ ಬಿಡದು. ಏಕೆಂದರೆ ಅಂತರಾಲೋಚನೆಗಳಿಗೆ ದೇವರೇ ಸಾಕ್ಷಿ ಆತ ಹೃದಯಗಳನ್ನೂ ವೀಕ್ಷಿಸುತ್ತಾನೆ ಗಮನಿಸಿ ನಾಲಿಗೆ ಆಡುವುದನ್ನು ಅರ್ಥಮಾಡಿಕೊಳ್ಳುತ್ತಾನೆ ಚೆನ್ನಾಗಿ. ಸರ್ವೇಶ್ವರನ ಚೈತನ್ಯ ವಿಶ್ವವನ್ನು ತುಂಬಿದೆ ಸಮಸ್ತವನ್ನು ಒಟ್ಟಿಗೆ ಹಿಡಿದಿರುವ ಅದಕ್ಕೆ ಪ್ರತಿಯೊಂದೂ ತಿಳಿದಿದೆ.

ಕೀರ್ತನೆ: 139:1-3, 4-6, 7-8, 9-10
ಶ್ಲೋಕ: ನಡೆಸೆನ್ನ ಓ ಪ್ರಭೂ, ಆ ಸನಾತನ ಪಥದಲಿ

ಪ್ರಭೂ, ಪರಿಶೋಧಿಸಿರುವೆ ನೀ ನನ್ನನು|
ಅರಿತುಕೊಂಡಿರುವೆ ಅಂತರಂಗವನು||
ನಾ ಕೂರುವುದೂ ಏಳುವುದೂ ನಿನಗೆ ಗೊತ್ತಿದೆ|
ನನ್ನಾಲೋಚನೆ ದೂರದಿಂದಲೇ ನಿನಗೆ ತಿಳಿದಿದೆ||
ನನ್ನ ನಡೆಯನು, ನಿದ್ರೆಯನು ನೀ ಬಲ್ಲಾತ|
ನನ್ನ ನಡತೆಯಲ್ಲವೂ ನಿನಗೆ ಸುಪರಿಚಿತ||

ಪ್ರಭೂ ನಾ ಮಾತೆತ್ತುವುದಕ್ಕೆ ಮುಂಚಿತವಾಗಿ|
ತಿಳಿದುಹೋಗಿದೆ ಎಲ್ಲ ನಿನಗೆ ಪೂರ್ತಿಯಾಗಿ||
ನನ್ನ ಹಿಂದೆಯೂ ಮುಂದೆಯೂ ನೀನಿರುವೆ|
ಅಭಯ ಹಸ್ತವನು ನನ್ನ ಮೇಲಿರಿಸಿರುವೆ||
ನನ್ನ ಕುರಿತು ನಿನಗಿರುವ ಅರಿವು ಅಗಾಧ|
ನನ್ನ ಬುದ್ಧಿಗದು ಸಿಲುಕದಷ್ಟು ಉನ್ನತ||

ನಾನೆಲ್ಲಿಗೆ ಹೋಗಲು ಸಾಧ್ಯ, ನಿನ್ನಾತ್ಮನಿಂದ ತಪ್ಪಿಸಿಕೊಳ್ಳಲು?|
ನಾನೆಲ್ಲಿಗೆ ಓಡಲು ಸಾಧ್ಯ, ನಿನ್ನ ಸನ್ನಿಧಿಯಿಂದ ಮರೆಯಾಗಲು?||
ಆಕಾಶಕ್ಕೆ ನಾನೇರಿದರೂ ನೀನಿರುವೆ ಅಲ್ಲಿ|
ಪಾತಾಳದಲಿ ನಾ ನಿದ್ರಿಸಿದರೂ ನೀನಿರುವೆ ಅಲ್ಲಿ||

ನಾನರುಣನ ರೆಕ್ಕೆಗಳನ್ನೇರಿ ಹಾರಿದರೂ|
ಸಮುದ್ರ ಕಟ್ಟಕಡೆಗಳಲಿ ನಾ ಸೇರಿದರೂ||
ಅಲ್ಲೂ ನನ್ನ ನಡೆಸುವುದು ನಿನ್ನ ಕೈ|
ನನ್ನ ಹಿಡಿದಿರುವುದು ನಿನ್ನ ಬಲಗೈ||

ಶುಭಸಂದೇಶ: ಲೂಕ 17:1-6

ಯೇಸುಸ್ವಾಮಿ ತಮ್ಮ ಶಿಷ್ಯರನ್ನು ಉದ್ದೇಶಿಸಿ, "ಪಾಪ ಪ್ರಚೋದನೆಗಳು ಬಂದೇ ಬರುತ್ತವೆ. ಆದರೆ ಅವು ಯಾರಿಂದ ಬರುತ್ತವೋ ಅವನಿಗೆ ಧಿಕ್ಕಾರ! ಅಂಥವನು ಈ ಚಿಕ್ಕವರಲ್ಲಿ ಒಬ್ಬನಿಗೆ ಪಾಪಕ್ಕೆ ಕಾರಣನಾಗುವುದಕ್ಕಿಂತ, ಬೀಸುವ ಕಲ್ಲನ್ನು ಕುತ್ತಿಗೆಗೆ ಬಿಗಿಸಿಕೊಂಡು ಸಮುದ್ರದಲ್ಲಿ ದಬ್ಬಿಸಿಕೊಳ್ಳುವುದೇ ಲೇಸು. ನೀವಾದರೋ ಎಚ್ಚರಿಕೆಯಿಂದಿರಿ! "ನಿನ್ನ ಸಹೋದರನು ತಪ್ಪು ಮಾಡಿದರೆ ಅವನನ್ನು ಖಂಡಿಸು; ಪಶ್ಚಾತ್ತಾಪಪಟ್ಟರೆ ಕ್ಷಮಿಸಿಬಿಡು. ಅವನು ದಿನಕ್ಕೆ ಏಳುಸಾರಿ ನಿನಗೆ ವಿರುದ್ಧ ತಪ್ಪು ಮಾಡಿ ಪ್ರತಿಯೊಂದು ಸಾರಿಯೂ ಪಶ್ಚಾತ್ತಾಪಪಟ್ಟು ನಿನ್ನ ಬಳಿಗೆ ಬಂದು, "ಕ್ಷಮಿಸು," ಎಂದು ಕೇಳಿಕೊಂಡರೆ ನೀನು ಅವನನ್ನು ಕ್ಷಮಿಸಲೇಬೇಕು," ಎಂದರು. ಸ್ವಾಮಿಾ, ನಮ್ಮ ವಿಶ್ವಾಸವನ್ನು ಹೆಚ್ಚಿಸಿರಿ," ಎಂದು ಪ್ರೇಷಿತರು ಕೇಳಿಕೊಂಡರು. ಆಗ ಯೇಸುಸ್ವಾಮಿ, "ಸಾಸಿವೆ ಕಾಳಿನಷ್ಟು ವಿಶ್ವಾಸ ನಿಮ್ಮಲ್ಲಿದ್ದು, ನೀವು ಈ ಅತ್ತಿ ಮರಕ್ಕೆ, "ನೀನು ಬೇರು ಸಹಿತ ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ನಾಟಿಕೊ," ಎಂದು ಆಜ್ಞಾಪಿಸಿದ್ದೇ ಆದರೆ ಅದು ನಿಮಗೆ ವಿಧೇಯವಾಗಿ ನಡೆದುಕೊಳ್ಳುವುದು.

No comments:

Post a Comment