ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

18.11.2019 - "ನನ್ನಿಂದ ನಿನಗೇನಾಗಬೇಕು?"

ಮೊದಲನೇ ವಾಚನ: 1 ಮಕ್ಕಬಿಯರು 1:10-15, 41-43, 54-57, 62-63


ಈ ಅಧಿಕಾರಿಗಳಿಂದ ವಿಷಲತೆಯ ಬೇರೊಂದು ಚಿಗುರಿಕೊಂಡಿತು. ಇವನೇ ಅಂತಿಯೋಕ ಎಪಿಫನೆಸ್ ಎಂಬುವನು. ಇವನು "ಅಂತಿಯೋಕ" ಎಂಬ ರಾಜನ ಮಗ; ರೋಂ ನಗರದಲ್ಲಿ ಒತ್ತೆಯಾಳಾಗಿ ಬಿದ್ದಿದ್ದ. ಗ್ರೀಕ್ ರಾಜ್ಯದ 137 ರಲ್ಲಿ ಇವನು ಪಟ್ಟಕ್ಕೆ ಬಂದ. ಆ ದಿನಗಳಲ್ಲಿ ಧರ್ಮಶಾಸ್ತ್ರವನ್ನು ಮೀರಿ ನಡೆಯುತ್ತಿದ್ದ ಕೆಲವರು ಇಸ್ರಯೇಲಿನಲ್ಲಿ ತಲೆಯೆತ್ತಿಕೊಂಡರು. ಇವರು, "ನಮ್ಮ ಸುತ್ತಮುತ್ತಲಿನ ಅನ್ಯಜನರ ಸಂಗಡ ಸಂಧಾನ ಮಾಡಿಕೊಳ್ಳೋಣ ಬನ್ನಿ: ನಾವು ಅವರಿಂದ ಬೇರೆಯಾದಾಗಿನಿಂದ  ಬಹಳ ಸಂಕಟಗಳಿಗೆ ಈಡಾಗಿದ್ದೇವೆ," ಎಂದು ಹೇಳುತ್ತಾ ಅನೇಕರನ್ನು ತಪ್ಪುದಾರಿಗೆ ಎಳೆದರು. ಹಲವರಿಗೆ ಈ ಸಲಹೆ ಹಿತಕರವಾಗಿಯೇ  ಕಂಡಿತು. ಕೆಲವು ಮಂದಿ ಅರಸನವರೆಗೂ ಹೋದರು. ಅರಸನೂ ಅವರಿಗೆ ಅನ್ಯಜನರ ಆಚಾರವಿಚಾರಗಳನ್ನು ಅನುಸರಿಸಲು ಅಪ್ಪಣೆಕೊಟ್ಟನು. ಪರಿಣಾಮವಾಗಿ, ಅವರು ಹೋಗಿ ಅನ್ಯಜನರ ಸಂಪ್ರದಾಯದಂತೆ ಜೆರುಸಲೇಮಿನಲ್ಲೆ ಒಂದು ವ್ಯಯಾಮ ಶಾಲೆಯನ್ನು ಕಟ್ಟಿಸಿದರು. ಸುನ್ನತಿ ಚಿಹ್ನೆಗಳನ್ನು ಮರೆಮಾಚಿದರು, ಪವಿತ್ರ ಒಡಂಬಡಿಕೆಯನ್ನು ಮೀರಿದರು, ಅನ್ಯಜನರೊಡನೆ ಮಿಶ್ರವಾದರು, ದುಷ್ಟತನಕ್ಕೆ ದಾಸರಾದರು. ತರುವಾಯ ಅರಸ ಅಂತಿಯೋಕನು, "ಎಲ್ಲರು ಒಂದೇ ಜನಾಂಗದಂತೆ ಬಾಳಬೇಕು; ಪ್ರತಿಯೊಬ್ಬನು ತನ್ನ ಸ್ವಂತ ಧರ್ಮವನ್ನು ಬಿಟ್ಟುಬಿಡಬೇಕು," ಎಂದು ಪ್ರಕಟಿಸಿದನು. ಎಲ್ಲ ಜನಾಂಗದವರು ಅರಸನ ಮಾತಿಗೆ ಓಗೊಟ್ಟಿದ್ದರು. ಇಸ್ರಯೇಲರಲ್ಲಿ ಅನೇಕರು ಅವನ ಪೂಜೆಮಾಡಲು ಒಪ್ಪಿ ಮೂರ್ತಿಗೆ ಬಲಿ ಅರ್ಪಿಸಿದರು; ಸಬ್ಬತ್ ದಿನವನ್ನು ಅಪವಿತ್ರಗೊಳಿಸಿದರು. ಅರಸನು   145ನೇ ವರ್ಷದ ಮಾರ್ಗಶಿರ ಮಾಸದ ಹದಿನೈದನೆಯ ದಿನದಂದು "ವಿನಾಶಕರ ವಿಕಟಮೂರ್ತಿ"ಯನ್ನು ಬಲಿಪೀಠದ ಮೇಲೆ ಸ್ಥಾಪಿಸಿದನು. ಜುದೇಯದ ಊರುಕೇರಿಗಳಲ್ಲಿ ಎಲ್ಲೆಲ್ಲೂ ವಿಗ್ರಹಗಳಿಗೆ ಪೀಠಗಳನ್ನು ನಿರ್ಮಿಸಲಾಯಿತು. ಮನೆಯ ಬಾಗಿಲುಗಳಲ್ಲೂ ಊರುಬೀದಿಗಳಲ್ಲೂ ಧೂಪಾರತಿಗಳನ್ನು ಎತ್ತಿಸಲಾಯಿತು. ಕೈಗೆ ಸಿಕ್ಕಿದ ಧರ್ಮಶಾಸ್ತ್ರ ಗ್ರಂಥಗಳನ್ನು ಹರಿದು ಬೆಂಕಿಗೆ ಹಾಕಲಾಯಿತು. ಯಾರಾರಲ್ಲಿ ಒಡಂಬಡಿಕೆಯ ಗ್ರಂಥವಿತ್ತೋ ಯಾರಾರು ಧರ್ಮಶಾಸ್ತ್ರಕ್ಕೆ ಬದ್ಧರಾಗಿದ್ದರೋ ಅವರನ್ನು ರಾಜಾಜ್ಞೆಯಂತೆ ಮರಣಕ್ಕೆ ಗುರಿಮಾಡಲಾಯಿತು. ಆದರೂ ಇಸ್ರಯೇಲರಲ್ಲಿ ಅನೇಕರು ರಾಜಾಜ್ಞೆಯನ್ನು ಪ್ರತಿಭಟಿಸಿ, ಅಶುದ್ಧ ಆಹಾರವನ್ನು ತಿನ್ನಲು ನಿರಾಕರಿಸಿದರು. ಪವಿತ್ರ ಒಡಂಬಡಿಕೆಯನ್ನು ಮೀರಿ ಅಂಥ ಆಹಾರವನ್ನು ತಿನ್ನುವುದಕ್ಕಿಂತ ಸಾಯುವುದೇ ಲೇಸೆಂದು ಎಣಿಸಿ ಸಾವಿಗೆ ಸಿದ್ಧರಾದರು. ಅಂತೆಯೇ ಹಲವರು ಪ್ರಾಣತ್ಯಾಗ ಮಾಡಿದರು. ಆಗ ಭೀಕರ ಕೋಪಾಗ್ನಿ ಇಸ್ರಯೇಲಿನ ಮೇಲೆ ಉರಿಯುತ್ತಿತು.

ಕೀರ್ತನೆ: 119:53, 61, 134, 150, 155, 158
ಶ್ಲೋಕ: ನಿನ್ನಚಲ ಪ್ರೀತಿಗನುಸಾರ ಚೈತನ್ಯಗೊಳಿಸೆನ್ನನು

ಶುಭಸಂದೇಶ: ಲೂಕ 18:35-43

ಯೇಸುಸ್ವಾಮಿ ಜೆರಿಕೊ ಪಟ್ಟಣವನ್ನು ಸಮೀಪಿಸುತ್ತಿದ್ದಾಗ ಕುರುಡನೊಬ್ಬನು ದಾರಿಯ ಪಕ್ಕದಲ್ಲಿ ಕುಳಿತು ಭಿಕ್ಷೆ ಬೇಡುತ್ತಿದ್ದನು. ಜನಸಂದಣಿಯ ಶಬ್ದವನ್ನು ಆಲಿಸಿ, ಅದೇನೆಂದು ವಿಚಾರಿಸಿದನು. "ನಜರೇತಿನ ಯೇಸು ಈ ಮಾರ್ಗವಾಗಿ ಹೋಗುತ್ತಿದ್ದಾರೆ," ಎಂದು ಅವನಿಗೆ ತಿಳಿಸಲಾಯಿತು. ಕೂಡಲೇ ಅವನು, "ಯೇಸುವೇ, ದಾವೀದ ಕುಲಪುತ್ರರೇ, ನನಗೆ ದಯೆತೋರಿ," ಎಂದು ಗಟ್ಟಿಯಾಗಿ ಕೂಗಿಕೊಂಡನು. ಮುಂದೆ ಹೋಗುತ್ತಿದ್ದವರು, "ಸುಮ್ಮನಿರು" ಎಂದು ಅವನನ್ನು ಗದರಿಸಿದರು. ಅವನಾದರೋ, "ದಾವೀದ ಕುಲಪುತ್ರರೇ, ನನಗೆ ದಯೆತೋರಿ" ಎಂದು ಮತ್ತಷ್ಟು ಗಟ್ಟಿಯಾಗಿ ಕೂಗಿಕೊಂಡನು. ಇದನ್ನು ಕೇಳಿ ಯೇಸು, ಅಲ್ಲೇ ನಿಂತು, ಅವನನ್ನು ತಮ್ಮ ಬಳಿಗೆ ಕರೆದುತರುವಂತೆ ಅಪ್ಪಣೆ ಮಾಡಿದರು. ಅವನು ಹತ್ತಿರಕ್ಕೆ ಬಂದಾಗ, "ನನ್ನಿಂದ ನಿನಗೇನಾಗಬೇಕು?" ಎಂದು ಕೇಳಲು ಅವನು, "ಸ್ವಾಮಿಾ, ನನಗೆ ಕಣ್ಣು ಕಾಣುವಂತೆ ಮಾಡಿ," ಎಂದು ಪ್ರಾರ್ಥಿಸಿದನು. ಯೇಸು ಅವನಿಗೆ, "ದೃಷ್ಟಿಯನ್ನು ಪಡೆ; ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಮಾಡಿದೆ," ಎಂದರು. ಆ ಕ್ಷಣವೇ ಅವನಿಗೆ ದೃಷ್ಟಿಬಂದಿತು. ದೇವರನ್ನು ಸ್ತುತಿಸುತ್ತಾ ಅವನೂ ಯೇಸುವನ್ನು ಹಿಂಬಾಲಿಸಿದನು. ಇದನ್ನು ನೋಡಿದ ಜನರೆಲ್ಲರೂ ದೇವರನ್ನು ಕೊಂಡಾಡಿದರು.

No comments:

Post a Comment