ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

21.11.2019

ಮೊದಲನೇ ವಾಚನ: 1 ಮಕ್ಕಬಿಯರು 2:15-29 

ಧರ್ಮ ವಿರೋಧ ಕಾರ್ಯಗಳಲ್ಲಿ ತೊಡಗಿದ್ದ ಅರಸನ ಅಧಿಕಾರಿಗಳು ಯಜ್ಞ ಅರ್ಪಿಸುವುದಕ್ಕಾಗಿ ಮೋದೀನ್ ಊರಿಗೆ ಬಂದರು. ಅನೇಕ ಜನ ಇಸ್ರಯೇಲರು ಅದೇ ಎಡೆಗೆ ಬಂದರು.  ಮತ್ತಾತಿಯನು ಅವನ ಮಕ್ಕಳೂ ಅಲ್ಲಿಗೆ ಬಂದರು. ಅರಸನ ಅಧಿಕಾರಿಗಳು ಮತ್ತಾತಿಯನನ್ನು ಉದ್ದೇಶಿಸಿ, "ನೀನು ಈ ಊರಿಗೆ ಮುಖ್ಯಸ್ಥ, ಸನ್ಮಾನಿತ ಹಾಗು ಹಿರಿಯವನು. ನಿನ್ನ ಮಕ್ಕಳ ಹಾಗೂ ಬಂಧು ಬಳಗದವರ ಬೆಂಬಲ ನಿನಗಿದೆ. ಆದುದರಿಂದ ನೀನೇ ಮುಂದಾಳಾಗಿ ನಿಂತು, ಎಲ್ಲ ಜನಾಂಗದವರು ಜುದೇಯದ ನಿವಾಸಿಗಳು ಹಾಗು ಜೆರುಸಲೇಮಿನಲ್ಲಿ ಉಳಿದಿರುವವರು ಮಾಡಿದಂತೆ, ಅರಸನ ಅಪ್ಪಣೆಯ ಮೇರೆಗೆ ನಡೆದುಕೊ; ಆಗ ನೀನು ನಿನ್ನ ಮನೆಯವರೂ ಅರಸನ ಮಿತ್ರರೆಂದು ಪರಿಗಣಿತರಾಗುವಿರಿ; ನಿನಗೂ ನಿನ್ನ ಮಕ್ಕಳಿಗೂ ಬೆಳ್ಳಿ , ಬಂಗಾರ ಮತ್ತಿತರ ಸಂಭಾವನೆಗಳನ್ನು  ಗೌರವಾರ್ಥವಾಗಿ ಕೊಡಲಾಗುವುದು," ಎಂದು ಹೇಳಿದರು. ಆಗ ಮತ್ತಾತಿಯನು ಉದ್ವೇಗದಿಂದ, "ಅರಸನ ಸಾಮ್ರಾಜ್ಯದಲ್ಲಿರುವ ಎಲ್ಲ ಜನಾಂಗಗಳು ಬೇಕಾದರೆ ಆತನ ಮಾತನ್ನು ಕೇಳಲಿ; ಪ್ರತಿಯೊಬ್ಬನು ತನ್ನ ಪೂರ್ವಜರ ಪೂಜಾಕ್ರಮಗಳನ್ನು ತೊರೆದು, ಅರಸನ ಆಜ್ಞೆಯ ಮೇರೆಗೆ ಬೇಕಾದರೆ ನಡೆಯಲಿ; ಆದರೆ ನಾನು, ನನ್ನ ಮಕ್ಕಳು, ನನ್ನ ಬಂಧುಬಳಗದವರು ನಮ್ಮ ಪಿತ್ರುಗಳ ಒಡಂಬಡಿಕೆಯ ಪ್ರಕಾರವೇ ನಡೆಯುತ್ತೇವೆ. ಧರ್ಮಶಾಸ್ತ್ರದ ನಿಬಂಧನೆಗಳನ್ನು ನಾವು ಉಲ್ಲಂಘಿಸಲಾರೆವು. ಇಲ್ಲ, ಎಂದಿಗೂ ಇಲ್ಲ; ಅರಸನ ಮಾತನ್ನು ಕೇಳಿ, ನಾವು ನಮ್ಮ ಆರಾಧನಾ ವಿಧಿಗಳನ್ನು ಬಿಟ್ಟು ಎಡಕ್ಕಾಗಲಿ, ಬಲಕ್ಕಾಗಲಿ ಹೋಗುವುದಿಲ್ಲ," ಎಂದು ಗಟ್ಟಿಯಾಗಿ ಹೇಳಿದನು. ಅವನು ಈ ಮಾತುಗಳನ್ನಾಡಿ ಮುಗಿಸುವಷ್ಟರಲ್ಲಿ ಒಬ್ಬ ಯೆಹೂದ್ಯನು, ಮೋದೀನದ ಒಂದು ಜಗಲಿಯ ಮೇಲೆ ಅರಸನ ಅಪ್ಪಣೆಯ ಮೇರೆಗೆ ಏರ್ಪಡಿಸಲಾಗಿದ್ದ ಯಜ್ಞವನ್ನು ಅರ್ಪಿಸಲು ಅಲ್ಲಿಗೆ ಬಂದು ಎಲ್ಲರ ಮುಂದೆ ನಿಂತನು. ಮತ್ತಾತಿಯನು ಅದನ್ನು ನೋಡಿ ಆವೇಶಪೂರಿತನಾದನು; ಅವನ ಮೈ ನಡುಗಿತು. ನ್ಯಾಯ ಪ್ರಮಾಣಕ್ಕನುಸಾರ ತನ್ನ ಕೋಪವನ್ನು ತೋರಿಸಲು ಓಡಿಹೋಗಿ, ಅದೇ ಜಗಲಿಯ ಮೇಲೆ ಆ ವ್ಯಕ್ತಿಯನ್ನು ಕಡಿದುಹಾಕಿದನು. ಅಂಥ ಯಜ್ಞವನ್ನು ಅರ್ಪಿಸಲು ಜನರನ್ನು ಒತ್ತಾಯಪಡಿಸಿದ್ದ ಅಧಿಕಾರಿಯನ್ನು ಕೂಡ ಕೊಂದು ಹಾಕಿದನು; ಆ ಜಗಲಿಯನ್ನೂ ಕೆಡವಿ ಹಾಕಿದನು. ಸಾಲು ಎಂಬುವನ ಮಗ ಜಿಮ್ರಿ ಎಂಬುವನಿಗೆ ಫಫೀನೆಹಾಸನು ಮಾಡಿದಂತೆಯೇ ಇವನೂ ಧರ್ಮಶಾಸ್ತ್ರದ ಬಗ್ಗೆ ಅಭಿಮಾನವುಳ್ಳವನಾಗಿದ್ದನು. ತರುವಾಯ ಮತ್ತಾತಿಯನು ಊರಲ್ಲೆಲ್ಲಾ ಘಂಟಾಘೋಷವಾಗಿ, "ಧರ್ಮಶಾಸ್ತ್ರದ ಬಗ್ಗೆ ಅಭಿಮಾನವುಳ್ಳವನು, ಒಡಂಬಡಿಕೆಯನ್ನು ಕಾಪಾಡಿಕೊಳ್ಳಲು ಆಶಿಸುವವನು, ನನ್ನ ಹಿಂದೆ ಬರಲಿ," ಎಂದು ಕರೆಕೊಟ್ಟನು. ಆನಂತರ ಅವನೂ ಅವನ ಮಕ್ಕಳೂ ಊರಲ್ಲಿ ತಮಗಿದ್ದುದನ್ನೆಲ್ಲ ಅಲ್ಲೇ ಬಿಟ್ಟು ಗುಡ್ಡಗಳಿಗೆ ಓಡಿಹೋದರು. ಇವರಂತೆಯೇ ನ್ಯಾಯನೀತಿಯನ್ನು ಅರಸುತ್ತಿದ್ದ ಅನೇಕರು ಕಾಡುಸೇರಿ ಅಲ್ಲೇ ಬೀಡುಮಾಡಿದರು. 

ಕೀರ್ತನೆ: 50:1-2, 5-6, 14-15 

ಶ್ಲೋಕ: ಸನ್ಮಾರ್ಗ ಹಿಡಿವವನಿಗೆ ತೋರುವೆ ಪರಮ ಜೀವೋದ್ಧಾರವನು 

ಶುಭಸಂದೇಶ: ಲೂಕ 19:41-44 


ಯೇಸುಸ್ವಾಮಿ ಜೆರುಸಲೇಮ್ ಪಟ್ಟಣಕ್ಕೆ ಇನ್ನೂ ಹತ್ತಿರವಾಗಿ ಬಂದು ಅದನ್ನು ನೋಡಿ, "ಇಂದಾದರೂ ನೀನು ಶಾಂತಿಮಾರ್ಗವನ್ನು ಅರಿತುಕೊಂಡಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು. ಆದರೆ ಅದು ಈಗ ನಿನ್ನ ಕಣ್ಣಿಗೆ ಮರೆಯಾಗಿದೆ. ಕಾಲವು ಬರುವುದು. ಆಗ ಶತ್ರುಗಳು ನಿನ್ನ ಸುತ್ತಲೂ ಆಳ್ವೇಲಿಯೆಬ್ಬಿಸಿ, ಮುತ್ತಿಗೆ ಹಾಕಿ, ಎಲ್ಲೆಡೆಯೂ ನುಗ್ಗಿ, ನಿನ್ನನ್ನೂ ನಿನ್ನೊಳಗಿನ ಜನರನ್ನೂ ಧ್ವಂಸ ಮಾಡುವರು;, ನಿನ್ನಲ್ಲಿ ಕಲ್ಲಿನ ಮೇಲೆ ಕಲ್ಲು ನಿಲ್ಲದಂತೆ ಮಾಡುವರು. ಏಕೆಂದರೆ, ದೇವರು ನಿನ್ನನ್ನು ಅರಸಿ ಬಂದ ಕಾಲವನ್ನು ನೀನು ಅರಿತುಕೊಳ್ಳದೆ ಹೋದೆ," ಎಂದು ಅದರ ಸಲುವಾಗಿ ಕಣ್ಣೀರಿಟ್ಟರು.

No comments:

Post a Comment