ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

24.11.2019 - "ಇಂದೇ ನೀನು ನನ್ನೊಡನೆ ಪರಂಧಾಮದಲ್ಲಿರುವೆ"

ಮೊದಲನೇ ವಾಚನ: 2ಸಮುವೇಲ 5:1-3 


ಇಸ್ರಯೇಲರ ಎಲ್ಲ ಕುಲಗಳವರು ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದರು. "ನಾವು ನಿಮ್ಮ ರಕ್ತಸಂಬಂಧಿಗಳು; ಹಿಂದಿನ ದಿವಸಗಳಲ್ಲಿ, ಅಂದರೆ ಸೌಲನ ಆಳ್ವಿಕೆಯಲ್ಲಿ, ಇಸ್ರಯೇಲರ ದಳಪತಿಯಾಗಿ ಹೋಗುತ್ತಾ ಬರುತ್ತಾ ಇದ್ದವರು ನೀವೇ. ನಿಮ್ಮನ್ನು ಕುರಿತು ಸರ್ವೇಶ್ವರಸ್ವಾಮಿ, "ನೀನು ನನ್ನ ಪ್ರಜೆಗಳಾದ ಇಸ್ರಯೇಲರ ನಾಯಕನೂ ಪಾಲಕನೂ ಆಗಿರುವೆ," ಎಂದು ವಾಗ್ದಾನ ಮಾಡಿದ್ದಾರೆ," ಎಂದರು. ಹೆಬ್ರೋನಿನಲ್ಲಿದ್ದ ಅರಸ ದಾವೀದನು ತನ್ನ ಬಳಿಗೆ ಬಂದಿದ್ದ ಇಸ್ರಯೇಲರ ಹಿರಿಯರೊಡನೆ ಅಲ್ಲೇ ಸರ್ವೇಶ್ವರನ ಸನ್ನಿಧಿಯಲ್ಲಿ ಒಪ್ಪಂದ ಮಾಡಿಕೊಂಡನು. ಅವರು ದಾವೀದನನ್ನು ಅಭಿಷೇಕಿಸಿ ಇಸ್ರಯೇಲರ ಅರಸನನ್ನಾಗಿ ಮಾಡಿದರು.


ಕೀರ್ತನೆ: 122:1-2, 3-5 

ಶ್ಲೋಕ: ಪ್ರಭುವಿನಾಲಯಕೆ ಹೋಗೋಣ ಬಾ ಎಂದಾಗ, ಆಯಿತೆನಗೆ ಆನಂದ 

ಎರಡನೇ ವಾಚನ: ಕೊಲೊಸ್ಸೆಯರಿಗೆ 1:11-20 

ಸಹೋದರರೇ, ದೇವರ ಮಹಿಮಾಶಕ್ತಿಯಿಂದ ನೀವು ಬಲಗೊಂಡು ಎಲ್ಲವನ್ನೂ ತಾಳ್ಮೆಯಿಂದಲೂ ಸಮಾಧಾನದಿಂದಲೂ ಸಹಿಸಿಕೊಳ್ಳುವಿರಿ. ಪಿತನಿಗೆ ಹರ್ಷದಿಂದ ಕೃತಜ್ಞತಾಸ್ತುತಿ ಸಲ್ಲಿಸುವಿರಿ. ಏಕೆಂದರೆ, ಬೆಳಕಿನಲ್ಲಿರುವ ದೇವಜನರಿಗೆ ಕಾಯ್ದಿರಿಸಿರುವ ಸ್ವಾಸ್ಥ್ಯದಲ್ಲಿ ಪಾಲುಗಾರರಾಗಲು ನಿಮ್ಮನ್ನು ಯೋಗ್ಯರನ್ನಾಗಿ ಅವರು ಮಾಡಿದ್ದಾರೆ. ದೇವರು ನಮ್ಮನ್ನು ಅಂಧಕಾರದ ಆಡಳಿತದಿಂದ ಬಿಡುಗಡೆಮಾಡಿ ತಮ್ಮ ಪುತ್ರನ ಸಾಮ್ರಾಜ್ಯಕ್ಕೆ ಸುರಕ್ಷಿತವಾಗಿ ತಂದಿದ್ದಾರೆ. ಈ ಪುತ್ರನಲ್ಲಿ ನಮಗೆ ಪಾಪಕ್ಷಮೆ ದೊರಕಿದೆ, ವಿಮಾಚನೆ ಲಭಿಸಿದೆ. ಅದೃಶ್ಯ ದೇವನ ಸದೃಶ್ಯರೂಪನು ಕ್ರಿಸ್ತ, ಸೃಷ್ಟಿಗೆಲ್ಲ ಜೇಷ್ಠಪುತ್ರನಾತ. ಇರಲಿ ಇಹದಲಿ, ಅಶರೀರ ಒಡೆಯರಾಗಲಿ, ಒಡೆತನವಾಗಲಿ, ಅಧಿಕಾರಿಗಳಾಗಲಿ, ಅಧಿಪತ್ಯವಾಗಿರಲಿ, ಅದುದೆಲ್ಲವೂ ಆತನಲಿ. ಆತನಿಂದ, ಆತನಿಗಾಗಿ. ಎಲ್ಲಕ್ಕೂ ಮೊದಲೇ ಇರುವನಾತ, ಸಮಸ್ತಕ್ಕೂ ಆಧಾರಭೂತ. ಸಭೆಯೆಂಬ ಶರೀರಕ್ಕೆ ಶಿರಸ್ಸಾತ, ಆದಿಸಂಭೂತ, ಅಗಲೆಲ್ಲದರಲ್ಲೂ ಅಗ್ರಸ್ಥ, ಸತ್ತವರಿಂದ ಮೊದಲೆದ್ದು ಬಂದನಾತ. ಆ ಸುತನಲ್ಲೇ ಇರಿಸಲು ನಿರ್ಧರಿಸಿದನು ಪಿತದೇವ ತನ್ನ ಸರ್ವ ಸಂಪೂರ್ಣತೆಯನು. ಶಿಲುಬೆಯಿಂದಾತ ಹರಿಸಿದ ರಕುತದಿಂದ ಆಗುತಲಿದೆ ಶಾಂತಿಸಮಾಧಾನ, ನಡೆದಿದೆ ದೇವರೊಡನೆ ಸಂಧಾನ, ಇಹಪರಗಳೆಲ್ಲಕ್ಕೂ ಆತನ ಮುಖೇನ. 

ಶುಭಸಂದೇಶ: ಲೂಕ 23:35-43 


ಶಿಲುಬೆಗೇರಿಸಿದ ಯೇಸುವನ್ನು ಜನರು ನೋಡುತ್ತಾ ನಿಂತಿದ್ದರು. ಅಲ್ಲಿದ್ದ ಮುಖಂಡರು ಯೇಸುವನ್ನು ಮೂದಲಿಸುತ್ತಾ, "ಇವನು ಇತರರನ್ನು ರಕ್ಷಿಸಿದ; ಇವನು ದೇವರಿಂದಲೇ ಅಭಿಷಿಕ್ತನಾದ ಲೋಕೋದ್ಧಾರಕನು ಮತ್ತು ಅವರಿಂದಲೇ ಆಯ್ಕೆಯಾದವನು ಆಗಿದ್ದರೆ ತನ್ನನ್ನು ತಾನೇ ರಕ್ಷಿಸಿಕೊಳ್ಳಲಿ," ಎಂದರು. ಸೈನಿಕರು ಮುಂದೆ ಬಂದು ಹುಳಿರಸವನ್ನು ಅವರತ್ತ ಒಡ್ಡಿ, "ನೀನು ಯೆಹೂದ್ಯರ ಅರಸನಾಗಿದ್ದರೆ ನಿನ್ನನ್ನು ನೀನೇ ರಕ್ಷಿಸಿಕೊ," ಎಂದು ಅಣುಕಿಸುತ್ತಿದ್ದರು. ಯೇಸುವಿನ ಶಿಲುಬೆಯ ಮೇಲ್ಗಡೆ,  " ಇವನು ಯೆಹೂದ್ಯರ ಅರಸ" ಎಂಬ  ಲಿಖಿತವಿತ್ತು. ತೂಗುಹಾಕಿದ್ದ ಅಪರಾಧಿಗಳಲ್ಲಿ ಒಬ್ಬನು, "ನೀನು ಕ್ರಿಸ್ತ ಅಲ್ಲವೆ? ಹಾಗಾದರೆ ನಿನ್ನನ್ನು ನೀನೇ ರಕ್ಷಿಸಿಕೋ , ನಮ್ಮನ್ನೂ ರಕ್ಷಿಸು," ಎಂದು ಹಂಗಿಸಿದನು. ಆದರೆ ಮತ್ತೊಬ್ಬ ಅಪರಾಧಿ ಅವನನ್ನು ಖಂಡಿಸುತ್ತಾ, "ನಿನಗೇ ದೇವರ ಭಯಬೇಡವೆ? ನೀನು ಸಹ ಇದೇ ಶಿಕ್ಷೆಗೆ ಗುರಿಯಾಗಿರುವೆ, ನಮಗೇನೋ ಶಿಕ್ಷೆ ನ್ಯಾಯವಾಗಿದೆ. ನಮ್ಮ ಕೃತ್ಯಕ್ಕೆ ತಕ್ಕ ಫಲ ಸಿಕ್ಕಿದೆ; ಇವರಾದರೋ, ನಿರಪರಾಧಿ!" ಎಂದನು. ಬಳಿಕ ಅವನು, "ಸ್ವಾಮಿ ಯೇಸುವೇ, ನೀವು ರಾಜ್ಯಾಧಿಕಾರದೊಡನೆ ಬರುವಾಗ ನನ್ನನ್ನು ಜ್ಞಾಪಿಸಿಕೊಳ್ಳಿ," ಎಂದು ಬೇಡಿಕೊಂಡನು. ಅವನಿಗೆ ಯೇಸು, "ಇಂದೇ ನೀನು ನನ್ನೊಡನೆ ಪರಂಧಾಮದಲ್ಲಿರುವೆ ಎಂದು ನಿಶ್ಚಯವಾಗಿ ಹೇಳುತ್ತೇನೆ," ಎಂದರು.

No comments:

Post a Comment