ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

16.11.2019

ಮೊದಲನೇ ವಾಚನ: ಜ್ಞಾನ ಗ್ರಂಥ 18:14-16; 19:6-9

ಸೌಮ್ಯವಾದ ಮೌನ ಸಮಸ್ತವನು ಆವರಿಸಲು ನಡುರಾತ್ರಿ ವೇಗವಾಗಿ ಚಲಿಸಿ ಬಂದಿರಲು, ನಿಮ್ಮ ಸರ್ವಶಕ್ತ ವಾಣಿ ತನ್ನ ರಾಜ ಸಿಂಹಾಸನ ಬಿಟ್ಟು ಪ್ರಬಲ ಯುದ್ಧವೀರನಂತೆ ಸ್ವರ್ಗದಿಂದ ಜಿಗಿದು ನಾಶನಕ್ಕೆ ಗುರಿಯಾದ ನಾಡಿನೊಳಕ್ಕೆ ಬಂದಿತು. ಕಟ್ಟುನಿಟ್ಟಾದ ನಿನ್ನಾಜ್ಞೆಯೆಂಬ ಹದವಾದ ಕತ್ತಿಯನ್ನು ಅದು ಹಿಡಿದು ನಿಂತಿತ್ತು ಎಲ್ಲವನು ಸಾವಿನಿಂದ ತುಂಬಿಸಿ, ನೆಲದ ಮೇಲೆ ನಿಂತಿತ್ತು; ಆದರೂ ಆಗಸವನ್ನೇ ಮುಟ್ಟುತ್ತಿತ್ತು. ನಿಮ್ಮ ದಾಸರು ದೇವಾ, ಹಾನಿಗೀಡಾಗದಂತೆ ತಲೆಬಾಗಿತು ಸಮಗ್ರ ಸೃಷ್ಟಿ ನಿಮ್ಮ ಆಜ್ಞೆಗೆ ಬದಲಾಯಿಸಿಕೊಂಡಿತು ತನ್ನ ಸಹಜ ರೂಪವನೆ. ಪಾಳೆಯಕ್ಕೆ ನೆರಳು ನೀಡಲು ಮೇಘ ಕವಿಯಿತು ಜಲರಾಶಿಯಿದ್ದಲ್ಲಿ ಒಣನೆಲವು ಮೇಲೆದ್ದಿತು ಕೆಂಪು ಸಮುದ್ರದ ನಡುವೆ ಸುರಕ್ಷಿತ ಹೆದ್ದಾರಿ ಕಾಣಿಸಿತು ಮೊರೆಯುತ್ತಿದ್ದ ಅಲೆಗಳ ಮಧ್ಯೆ ಹುಲ್ಲುಗಾವಲುಂಟಾಯಿತು. ಒಂದೇ ಸಮೂಹದಂತೆ ನಿಮ್ಮ ಹಸ್ತಾಶ್ರಯ ಪಡೆದ ಜನರು ನಾನಾ ಅದ್ಭುತ ಕಾರ್ಯಗಳನ್ನು ನೋಡಿ , ಆ  ಸಮುದ್ರವನ್ನೆ ದಾಟಿದರು. ತಮ್ಮನ್ನು ಬಿಡುಗಡೆ ಮಾಡಿದ ನಿಮ್ಮನ್ನು ಹೇ ಸರ್ವೇಶ್ವರ, ಕೊಂಡಾಡಿದರು ಕುರಿಮರಿಗಳಂತೆ ಕುಣಿದಾಡಿದರು, ಬಿಚ್ಚದ ಕುದುರೆಗಳಂತೆ ಓಡಾಡಿದರು.

ಕೀರ್ತನೆ: 105:2-3, 36-37, 42-43
ಶ್ಲೋಕ: ನೆನೆಯಿರಿ ಪ್ರಭುವಿನ ಅದ್ಭುತಗಳನು


ಶುಭಸಂದೇಶ: ಲೂಕ 18:1-8


ನಿರಾಶರಾಗದೆ ನಿರಂತರವಾಗಿ ಪ್ರಾರ್ಥನೆ ಮಾಡಬೇಕು ಎಂಬುದನ್ನು ಕಲಿಸಲು, ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಈ ಸಾಮತಿಯನ್ನು ಹೇಳಿದರು: "ಒಂದು ನಗರದಲ್ಲಿ ಒಬ್ಬ ನ್ಯಾಯಾಧೀಶನಿದ್ದ. ಅವನು ದೇವರಿಗೂ ಭಯಪಡುತ್ತಿರಲಿಲ್ಲ; ಮಾನವರಿಗೂ ಲಕ್ಷ್ಯಕೊಡುತ್ತಿರಲಿಲ್ಲ. ಅದೇ ಊರಿನಲ್ಲಿ ಒಬ್ಬ ವಿಧವೆಯಿದ್ದಳು. ಅವಳು ಪದೇಪದೇ ಅವನ ಬಳಿಗೆ ಬಂದು, "ನನ್ನ ವಿರೋಧಿ ಅನ್ಯಾಯ ಮಾಡಿದ್ದಾನೆ; ನನಗೆ ನ್ಯಾಯ ದೊರಕಿಸಿಕೊಡಿ," ಎಂದು ಹೇಳಿಕೊಳ್ಳುತ್ತಿದ್ದಳು. ಬಹುಕಾಲ ನ್ಯಾಯಾಧೀಶನು ಅವಳಿಗೆ ಕಿವಿಗೊಡಲೇ ಇಲ್ಲ. ಕೊನೆಗೆ ಅವನು, "ನಾನು ದೇವರಿಗೆ ಹೆದರುವವನಲ್ಲ; ಮಾನವರಿಗೆ ಲಕ್ಷ್ಯಕೊಡುವವನೂ ಅಲ್ಲ; ಇಷ್ಟಾದರೂ ಈ ವಿಧವೆಯ ಕಾಟವನ್ನು ತಪ್ಪಿಸಿಕೊಳ್ಳಲು, ಈಕೆಯ ನ್ಯಾಯ ತೀರಿಸಿಬಿಡುತ್ತೇನೆ ಇಲ್ಲವಾದರೆ, ಈಕೆ ಪದೇಪದೇ ಬಂದು ನನ್ನ ತಲೆಕೆಡಿಸಿಬಿಟ್ಟಾಳು," ಎಂದುಕೊಂಡ," ಆನಂತರ ಪ್ರಭು ಯೇಸು, "ಈ ನೀತಿಗೆಟ್ಟ ನ್ಯಾಯಾಧೀಶ ಹೇಳಿಕೊಂಡ ಮಾತುಗಳನ್ನು ಕೇಳಿದಿರಲ್ಲವೇ ಹೀಗಿರುವಲ್ಲಿ ದೇವರು, ತಾವಾಗಿ ಆಯ್ಕೆಮಾಡಿಕೊಂಡ ಜನರು ಹಗಲು ರಾತ್ರಿ ತಮಗೆ ಮೊರೆಯಿಡುವಾಗ ನ್ಯಾಯ ತೀರಿಸದೆ ಹೋಗುವರೆ? ತಡಮಾಡಿಯಾರೆ? ಶೀಘ್ರವಾಗಿ ಅವರಿಗೆ ನ್ಯಾಯ ದೊರಕಿಸಿಕೊಡುವರೆಂದು ನಿಮಗೆ ಹೇಳುತ್ತೇನೆ. ಇಷ್ಟಾದರೂ ನರಪುತ್ರನು ಬರುವಾಗ ಜಗತ್ತಿನಲ್ಲಿ ವಿಶ್ವಾಸವಿರುವುದನ್ನು ಕಾಣುವನೋ?" ಎಂದರು.

No comments:

Post a Comment