ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

25.11.2019

ಮೊದಲನೇ ವಾಚನ: ದಾನಿಯೇಲ  1:1-6, 8-20 

ಜುದೇಯದ ಅರಸ ಯೆಹೋಯಾಕೀಮನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ಬಾಬಿಲೋನಿನ ರಾಜ ನೆಬೂಕದ್ನೆಚ್ಚರನು ಜೆರುಸಲೇಮಿಗೆ ಬಂದು ಮುತ್ತಿಗೆ ಹಾಕಿದನು.  ಸರ್ವೇಶ್ವರಸ್ವಾಮಿ ಜುದೇಯದ ಅರಸ ಯೆಹೋಯಾಕೀಮನನ್ನು ಅವನ ಕೈವಶವಾಗುವಂತೆ ಮಾಡಿದರು. ಅಃತೆಯೇ ದೇವಾಲಯದ ಆನೇಕ ಪೂಜಾಪಾತ್ರೆಗಳು ಅವನ ಕೈವಶವಾದವು. ನೆಬೂಕದ್ನೆಚ್ಚರನು ಅವುಗಳನ್ನು ಶಿನಾರ್ ದೇಶಕ್ಕೆ ಸಾಗಿಸಿ, ತನ್ನ ದೇವರ ಮಂದಿರಕ್ಕೆ ತಂದು, ಆ ದೇವರ ಭಂಡಾರಕ್ಕೆ ಸೇರಿಸಿಕೊಂಡನು. ಆನಂತರ ಆ ರಾಜನು ತನ್ನ ಕಂಚುಕಿಯರಲ್ಲಿ ಮುಖ್ಯಸ್ಥನಾದ ಅಶ್ಪೇನಜನಿಗೆ, "ನೀನು ಇಸ್ರಯೇಲರಲ್ಲಿ, ಅಂದರೆ ರಾಜವಂಶೀಯರಲ್ಲಿ ಮತ್ತು ಪ್ರಧಾನರಲ್ಲಿ ಕೆಲವು ಯುವಕರನ್ನು ಇಲ್ಲಿಗೆ ಕರೆದು ಬಾ. ಅವರು ಅಂಗದೋಷವಿಲ್ಲದವರಾಗಿರಬೇಕು. ಸುಂದರರು, ಸಮಸ್ತ ಶಾಸ್ತ್ರಜ್ಞರು, ಪಂಡಿತರು, ವಿದ್ಯಾನಿಪುಣರು, ರಾಜಾಲಯದಲ್ಲಿ ಸನ್ನಿಧಿಸೇವೆ ಮಾಡಲು ಸಮರ್ಥರೂ ಆಗಿರಬೇಕು. ಅವರಿಗೆ ಬಾಬಿಲೋನ್ ಪಂಡಿತರ ಭಾಷೆಗಳನ್ನೂ ಶಾಸ್ತ್ರಗಳನ್ನೂ ಕಲಿಸಬೇಕು. " ಎಂದು ಅಪ್ಪಣೆಕೊಟ್ಟನು. ಇದಲ್ಲದೆ, "ಇನ್ನುಮುಂದಕ್ಕೆ ಅವರು ಸನ್ನಿಧಿಸೇವಕರಾಗುವಂತೆ, ನನ್ನ ಭೋಜನ  ಪದಾರ್ಥಗಳನ್ನು ಹಾಗೂ ನಾನು ಕುಡಿಯುವ ದ್ರಾಕ್ಷಾರಸವನ್ನು ಅವರಿಗೆ ಪ್ರತಿದಿನ ಬಡಿಸುವ ಏರ್ಪಾಡುಮಾಡಿ ಅವರನ್ನು ಮೂರುವರ್ಷ ಪೋಷಿಸಬೇಕು" ಎಂದು ಆಜ್ಞಾಪಿಸಿದನು. ಹೀಗೆ ಆರಿಸಿಕೊಂಡ ಯುವಕರಲ್ಲಿ ದಾನಿಯೇಲನು, ಹನನ್ಯನು, ಮಿಶಾಯೇಲನು, ಅಜರ್ಯನು ಎಂಬ ಯೆಹೂದ್ಯರು ಸೇರಿದ್ದರು. ಆದರೆ ದಾನಿಯೇಲನು  ತಾನು ರಾಜನ ಭೋಜನ ಪದಾರ್ಥಗಳನ್ನು ತಿಂದು ಹಾಗೂ ರಾಜನು ಕುಡಿಯುವ ದ್ರಾಕ್ಷಾರಸವನ್ನು ಕುಡಿದು ತನ್ನನ್ನೇ ಅಶುದ್ಧ ಮಾಡಿಕೊಳ್ಳಬಾರದೆಂದು ನಿಶ್ಚಯಿಸಿಕೊಂಡನು. ಕಂಚುಕಿಯರ ನಾಯಕನಿಗೆ, "ಕ್ಷಮಿಸು, ನಾನು ಅಶುದ್ಧನಾಗಲಾರೆ," ಎಂದು  ವಿನಂತಿಸಿದನು.  ಕಂಚುಕಿಯರ ನಾಯಕನು ದಾನಿಯೇಲನ ಮೇಲೆ ಕನಿಕರ ಮತ್ತು ದಯೆ ತೋರುವಂತೆ ದೇವರು ಅನುಗ್ರಹಿಸಿದರು. ಆದುದರಿಂದ ಆ ನಾಯಕನು ದಾನಿಯೇಲನಿಗೆ, "ನಿಮಗೆ ಅನ್ನಪಾನಗಳನ್ನು ಏರ್ಪಡಿಸಿದ ನನ್ನೊಡೆಯನಾದ ರಾಜನು ನಿಮ್ಮಂತೆ ಆಯ್ಕೆಯಾದ ಯುವಕರ ಮುಖಕಿಂತ ನಿಮ್ಮ ಮುಖ ಬಾಡಿರುವುದನ್ನು ನೋಡಿ ನನ್ನ ತಲೆ ತಗ್ಗಿಸಬಹುದೆಂಬ  ಭಯ ನನಗಿದೆ. ಇದಕ್ಕೆ ನೀವು ಕಾರಣವಾಗಬಹುದಲ್ಲವೆ?" ಎಂದು ಹೇಳಿದನು. ದಾನಿಯೇಲನು ತನ್ನನ್ನೂ, ಹನನ್ಯ, ಮಿಶಾಯೇಲ, ಅಜರ್ಯ ಇವರನ್ನೂ ನೋಡಿಕೊಳ್ಳಲು ಆ ನಾಯಕನು ನೇಮಿಸಿದ್ದ ವಿಚಾರಕನ ಬಳಿಗೆ ಬಂದು, "ಅಯ್ಯಾ, ಹತ್ತು ದಿನಗಳ ಮಟ್ಟಿಗೆ ನಮ್ಮನ್ನು ಪರೀಕ್ಷಿಸಿನೋಡು. ಸೇವಕರಾದ ನಮಗೆ ಭೋಜನಕ್ಕೆ ಬದಲಾಗಿ ಕಾಯಿಪಲ್ಯ, ಪಾನಕ್ಕೆ ಬದಲಾಗಿ ನೀರು ಒದಗಿಸಿದರೆ ಸಾಕು. ಆಮೇಲೆ ನಮ್ಮ ಮುಖಗಳನ್ನೂ ರಾಜಭೋಜನ ಉಣ್ಣುವ ಮುಖಗಳನ್ನೂ ಹೋಲಿಸಿನೋಡು. ಆನಂತರ ನಿನಗೆ ತೋಚಿದ ಹಾಗೆ ನಮಗೆ ಮಾಡು," ಎಂದು ಕೇಳಿಕೊಂಡನು. ವಿಚಾರಕನು ಅವರ ಬಿನ್ನಹಕ್ಕೆ ಒಪ್ಪಿ ಹತ್ತುದಿನದವರೆಗೆ ಪರೀಕ್ಷಿಸಿದನು. ಹತ್ತು ದಿನಗಳಾದ ಮೇಲೆ ರಾಜಭೋಜನ ಉಣ್ಣುತ್ತಿದ್ದ ಎಲ್ಲ ಯುವಕರಿಗಿಂತ ಇವರು ಸುಂದರವಾಗಿಯೂ ಪುಷ್ಟರಾಗಿಯೂ ಕಾಣಿಸಿದರು. ಅಂದಿನಿಂದ ವಿಚಾರಕನು ಇವರಿಗೆ ನೇಮಕವಾದ ಭೋಜನ ಪದಾರ್ಥಗಳನ್ನೂ ಕುಡಿಯಬೇಕಾದ ದ್ರಾಕ್ಷಾರಸವನ್ನೂ ತೆಗೆದುಬಿಟ್ಟು ಕಾಯಿಪಲ್ಯಗಳನ್ನೇ ಕೊಡುತ್ತಾ ಬಂದನು. ಹೀಗಿರಲು ದೇವರು ಆ ನಾಲ್ಕು ಮಂದಿ ಯುವಕರಿಗೆ ಸಕಲ ಶಾಸ್ತ್ರಗಳಲ್ಲೂ ವಿದ್ಯೆಗಳಲ್ಲೂ ಜ್ಞಾನ ವಿವೇಕಗಳನ್ನು ದಯಪಾಲಿಸಿದರು. ದಾನಿಯೇಲನು ಸಮಸ್ತ ಸ್ವಪ್ನಗಳನ್ನೂ  ದಿವ್ಯ ದರ್ಶನಗಳನ್ನೂ ಅರ್ಥೈಸುವುದರಲ್ಲಿ ಪ್ರವಿಣನಾದನು. ರಾಜನು ನೇಮಿಸಿದ ಕಾಲವು ಕಳೆಯಿತು. ಆ ಯುವಕರನ್ನು ರಾಜಸನ್ನಿಧಿಗೆ ಕರೆದು ತರುವ ಸಮಯವು ಬಂದಿತು. ಕಂಚುಕಿಯರ ನಾಯಕ ಅವರನ್ನು ನೆಬೂಕದ್ನೆಚ್ಚರನ ಸಮ್ಮುಖಕ್ಕೆ ಕರೆದು ತಂದನು. ರಾಜನು ಅವರ ಸಂಗಡ ಮಾತಾಡುವಾಗ ಅಲ್ಲಿದ್ದ ಯುವಕರಲ್ಲೆಲ್ಲ ದಾನಿಯೇಲನಿಗೆ, ಹನನ್ಯನಿಗೆ, ಮಿಶಾಯೇಲನಿಗೆ, ಅಜರ್ಯನಿಗೆ, ಸಮಾನರು ಯಾರೂ ಕಂಡುಬರಲಿಲ್ಲ. ಆದಕಾರಣ ಆ ನಾಲ್ವರು ಸನ್ನಿಧಿ ಸೇವಕರಾದರು. ಬಳಿಕ ರಾಜನು ಶಾಸ್ತ್ರೀಯ ವಿದ್ಯೆಯ ಎಲ್ಲ ವಿಷಯಗಳಲ್ಲಿ ಅವರನ್ನು ವಿಚಾರ ಮಾಡಿದಾಗ ಸಮಸ್ತ ರಾಜ್ಯದಲ್ಲಿನ ಎಲ್ಲ ಜೋಯಿಸರಿಗಿಂತಲೂ ಮಂತ್ರವಾದಿಗಳಿಗಿಂತಲೂ ಹತ್ತರಷ್ಟು ನಿಪುಣರಾಗಿ ಕಂಡುಬಂದರು. 

ಅಜರ್ಯ: 1:29-33 
ಶ್ಲೋಕ: ಸರ್ವೇಶ್ವರಾ, ನೀವು ಪರಮಪೂಜ್ಯರು, ಎಂದೆಂದಿಗೂ ಮಹೋನ್ನತರು 

ಶುಭಸಂದೇಶ: ಲೂಕ 21:1-4 

"ಒಬ್ಬ ಬಡ ವಿಧವೆ ತಾಮ್ರದ ಚಿಕ್ಕ ನಾಣ್ಯಗಳೆರಡನ್ನು  ಕಾಣಿಕೆಯಾಗಿ ಹಾಕುವುದನ್ನು ಯೇಸು ಕಂಡರು. "ದೇವಾಲಯದ ಕಾಣಿಕೆಯ ಪೆಟ್ಟಿಗೆಯಲ್ಲಿ ಧನವಂತರು ತಮ್ಮ ಕಾಣಿಕೆಗಳನ್ನು ಹಾಕುತ್ತಿದ್ದುದನ್ನು ಯೇಸುಸ್ವಾಮಿ ಗಮನಿಸಿದರು. ಅಷ್ಟರಲ್ಲಿ ಒಬ್ಬ ಬಡ ವಿಧವೆ ಅಲ್ಲಿಗೆ ಬಂದು, ತಾಮ್ರದ ಚಿಕ್ಕ ನಾಣ್ಯಗಳೆರಡನ್ನು ಕಾಣಿಕೆಯಾಗಿ ಹಾಕಿದಳು. ಅದನ್ನು ಕಂಡ ಯೇಸು, "ಈ ಬಡ ವಿಧವೆ ಅವರೆಲ್ಲರಿಗಿಂತಲೂ ಹೆಚ್ಚಾಗಿ ಅರ್ಪಿಸಿದಳೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಅವರೆಲ್ಲರು ತಮ್ಮ ಅಪರಿಮಿತ ಐಶ್ವರ್ಯದಿಂದ ಕಾಣಿಕೆಯಿತ್ತರು; ಈಕೆಯಾದರೋ, ತನ್ನ ಕಡುಬಡತನದಲ್ಲೂ ತನಗಿದ್ದ ಜೀವನಾಧಾರವನ್ನೆಲ್ಲಾ ಕೊಟ್ಟುಬಿಟ್ಟಳು," ಎಂದರು.

No comments:

Post a Comment