ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

01.12.2019 - "ನರಪುತ್ರನು ನೀವು ನಿರೀಕ್ಷಿಸದ ಗಳಿಗೆಯಲ್ಲಿ ಬರುವನು."

ಮೊದಲನೇ ವಾಚನ: ಯೆಶಾಯ 2:1-5 

ಜುದೇಯ ಮತ್ತು ಜೆರುಸಲೇಮಿನ ವಿಷಯವಾಗಿ ಆಮೋಚನ ಮಗನಾದ ಯೆಶಾಯನು ಕಂಡ ದರ್ಶನದಲ್ಲಿ ಕೇಳಿಬಂದ ದೈವೋಕ್ತಿ: ಸರ್ವೇಶ್ವರನ ಶ್ರೀ ನಿವಾಸದ ಪರ್ವತವು ಅಂತಿಮ ಕಾಲದಂದು ಪ್ರತಿಷ್ಠೆಗೊಳ್ಳುವುದು. ಗುಡ್ಡಬೆಟ್ಟಗಳಿಗಿಂತ ಎತ್ತರವಾಗಿ ಬೆಳೆದುಬರುವುವು ಅದರತ್ತ ಸಕಲ ರಾಷ್ಟ್ರಗಳು ಜಲಧಾರೆಯಂತೆ ಹರಿದುಬರುವುವು. ದೇಶವಿದೇಶಗಳವರು ಬಂದು ಹೇಳುವರು ಹೀಗೆ: "ಬನ್ನಿ, ಹೋಗೊಣ ಸರ್ವೇಶ್ವರಸ್ವಾಮಿಯ ಪರ್ವತಕ್ಕೆ ಇಸ್ರಯೇಲರ ದೇವರ ಮಂದಿರಕ್ಕೆ. ಬೋಧಿಸುವನಾತ ನಮಗೆ ಆತನ ಮಾರ್ಗಗಳನು. ನಾವು ಹಿಡಿದುನಡೆವಂತೆ ಆತನ ಪಥವನು ಹೊರಡುವುದು ಧರ್ಮಶಾಸ್ತ್ರ ಸಿಯೋನಿನಿಂದ; ಸ್ವಾಮಿಯ ದಿವ್ಯವಾಣಿ ಜೆರುಸಲೇಮಿನಿಂದ. ಬಗೆಹರಿಸುವನು ದೇಶದೇಶಗಳ ವ್ಯಾಜ್ಯವನು. ತೀರಿಸುವನು ರಾಷ್ಟ್ರರಾಷ್ಟ್ರಗಳ ನ್ಯಾಯವನು ಹಾಕುವರವರು ಕುಲುಮೆಗೆ ತಮ್ಮಾಯುಧಗಳನು. ಮಾರ್ಪಡಿಸುವರು ಕತ್ತಿಗಳನು ನೇಗಿಲ ಗುಳಗಳನ್ನಾಗಿ, ಭರ್ಜಿಗಳನು ಕುಡುಗೋಲುಗಳನ್ನಾಗಿ. ಕತ್ತಿಯ ನೆತ್ತರು ಜನಾಂಗ ಜನಾಂಗದೆದುರಿಗೆ; ಯುದ್ಧವಿದ್ಯೆಯ ಕಲಿಕೆ ಅಗತ್ಯವಿರದು ಅವರಿಗೆ, ಯಕೋಬ ಮನೆತನದವರೇ, ಬನ್ನಿ, ಸ್ವಾಮಿಯ ಬೆಳಕಿನಲ್ಲಿ ನಡೆಯೋಣ." 

ಕೀರ್ತನೆ: 122:1-2, 3-4, 4-5, 6-7, 8-9 

ಶ್ಲೋಕ: ಪ್ರಭುವಿನಾಲಾಯಕೆ ಬಾ ಹೋಗೋಣ ಎಂದಾಗ ಆಯಿತೆನಗೆ ಆನಂದ, ಜನರೆನ್ನ ಕರೆದಾಗ 


1. ಪ್ರಭುವಿನಾಲಾಯಕೆ ಬಾ ಹೋಗೋಣ ಎಂದಾಗ |
ಆಯಿತೆನಗೆ ಆನಂದ, ಜನರೆನ್ನ ಕರೆದಾಗ ||
ನಮ್ಮ ಕಾಲುಗಳು ಓ ಜೆರುಸಲೇಮೇ |
ತಲುಪಿವೆ ನಿನ್ನ ಪುರದ್ವಾರಗಳನೇ ||

2. ಕುಲಗಳು ಯಾತ್ರೆಯಾಗಿ ಬರುವುವು ಇಲ್ಲಿಗೆ |
ಮಾಡುವರಿಲ್ಲಿಯೆ ಪ್ರಭುವಿನ ನಾಮಕೀರ್ತನೆ |
ಪಾಲಿಪರಿಂತು ಇಸ್ರಯೇಲರಿಗೆ ವಿಧಿಸಿದಾಜ್ಞೆ ||
ಸ್ಥಾಪಿತವಾಗಿವೆಯಿಲ್ಲಿ ನ್ಯಾಯಪೀಠಗಳು |
ದಾವೀದನ ಮನೆತನದವರ ಸಿಂಹಾಸನಗಳು ||

3. ಜೆರುಸಲೇಮಿನ ಶುಭಕ್ಕಾಗಿ ಮಾಡಿರಿ ಪ್ರಾರ್ಥನೆ |
"ಜೆರುಸಲೇಮ್, ನಿನ್ನಭಿಮಾನಿಗಳಿಗೆ ಪ್ರವರ್ಧನೆ ||
ಶುಭವಿರಲಿ ನಿನ್ನೀ - ಪೌಳಿಗೋಡೆಗಳೊಳಗೆ |
ಸಂರಕ್ಷಣೇ ಇರಲಿ ನಿನ್ನ ಅರಮನೆಯೊಳಗೆ" ||

4. ನನ್ನ ಬಂಧುಬಳಗದವರ ನಿಮಿತ್ತ |
"ನಿನಗೆ ಶುಭವಿರಲಿ" ಎಂಬುದು ನನ್ನ ಮತ ||
ನಮ್ಮ ಸ್ವಾಮಿದೇವರ ಮಂದಿರದ ನಿಮಿತ್ತ |
ಹರಸುವೆ ನಿನ್ನ ಸುಕ್ಷೇಮವನು ಹಾರೈಸುತ ||

ಎರಡನೇ ವಾಚನ: ರೋಮನರಿಗೆ 13:11-14 

ಸಹೋದರರೇ, ಇದೆಂತಹ ಕಾಲವೆಂದು ತಿಳಿದಿರುವ ನೀವು ಇದೆಲ್ಲವನ್ನು ಮಾಡಬೇಕು. ನಿದ್ರೆಯಿಂದ ಎಚ್ಚೆತ್ತುಕೊಳ್ಳುವ ವೇಳೆಯು ಸಮೀಪಿಸಿತು. ನಾವು ಕ್ರಿಸ್ತ ಯೇಸುವನ್ನು ವಿಶ್ವಾಸಿಸಲು ಆರಂಭಿಸಿದಾಗ ಇದ್ದುದಕ್ಕಿಂತಲೂ ಈಗ ನಮ್ಮ ಉದ್ಧಾರವು ಸಮೀಪವಾಗಿದೆ. ಇರುಳು ಬಹುಮಟ್ಟಿಗೆ ಕಳೆಯಿತು, ಹಗಲು ಸಮೀಪಿಸಿತು. ಇನ್ನು ಅಂಧಕಾರಕ್ಕೆ ಅನುಗುಣವಾದ ದುಷ್ಕ್ರತ್ಯಗಳನ್ನು ತ್ಯಜಿಸಿಬಿಡೋಣ. ಬೆಳಕಿಗೆ ಅನುಗುಣವಾದ ಆಯುಧಗಳನ್ನು ಧರಿಸಿಕೊಳ್ಳೋಣ. ದುಂದೌತಣ - ಕುಡಿತನಗಳಲ್ಲಾಗಲೀ, ಕಾಮವಿಲಾಸ - ನಿರ್ಲಜ್ಜಾಕೃತ್ಯಗಳಲ್ಲಾಗಲೀ, ಕಲಹ - ಮತ್ಸರಗಳಲ್ಲಾಗಲೀ ಕಾಲಕಳೆಯದೆ ಬೆಳಕಿನಲ್ಲಿ ಬಾಳುವವರಂತೆ ಸಭ್ಯರಾಗಿ ವರ್ತಿಸೋಣ. ದೇಹದ ದುರಿಚ್ಛೆಗಳಿಗೆ ಬಲಿಯಾಗದೆ ಕ್ರಿಸ್ತಂಬರರಾಗಿರಿ. 

ಶುಭಸಂದೇಶ: ಮತ್ತಾಯ 24:37-44 

ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ನೋವನ ಕಾಲದಲ್ಲಿ ಆದಂತೆಯೇ ನರಪುತ್ರನು ಬರುವಾಗಲೂ ಆಗುವುದು. ಜಲಪ್ರಳಯಕ್ಕೆ ಹಿಂದಿನ ದಿನಗಳಲ್ಲಿ ನೋವನು ನಾವೆಯನ್ನು ಹತ್ತುವ ದಿನದವರೆಗೆ ಜನರು ತಿನ್ನುತ್ತಲೇ ಇದ್ದರು ಕುಡಿಯುತ್ತಲೇ ಇದ್ದರು; ಮದುವೆ ಮಾಡಿಕೊಡುವುದರಲ್ಲೂ ಮಾಡಿಕೊಡುವುದರಲ್ಲೂ ನಿರತರಾಗಿದ್ದರು. ಜಲಪ್ರಳಯ ಬಂದು ಅವರನ್ನು ಕೊಚ್ಚಿಕೊಂಡು ಹೋಗುವ ತನಕ ಅದರ ಅರಿವೇ ಅವರಿಗಿರಲಿಲ್ಲ. ನರಪುತ್ರನು ಆಗಮಿಸುವಾಗಲೂ ಹಾಗೆಯೇ ನಡೆಯುವುದು. ಆಗ ಹೊಲದಲ್ಲಿದ್ದ ಇಬ್ಬರಲ್ಲಿ ಒಬ್ಬನನ್ನು ತೆಗೆದುಕೊಂಡು ಹೋಗಲಾಗುವುದು. ಇನ್ನೊಬ್ಬನನ್ನು ಬಿಡಲಾಗುವುದು. ಒಂದೆ ಕಲ್ಲಿನಲ್ಲಿ ಬೀಸುತ್ತ ಇರುವ ಇಬ್ಬರು ಮಹಿಳೆಯರಲ್ಲಿ ಒಬ್ಬಳನ್ನು ತೆಗೆದುಕೊಂಡು ಹೋಗಲಾಗುವುದು, ಇನ್ನೊಬ್ಬಳನ್ನು ಬಿಡಲಾಗುವುದು. ನಿಮ್ಮ ಪ್ರಭು ಯಾವ ದಿನ ಬರುತ್ತಾನೆಂದು ನಿಮಗೆ ತಿಳಿಯದು. ಆದ್ದರಿಂದ ಎಚ್ಚರವಾಗಿರಿ. ಕಳ್ಳನು ಬರುವ ಗಳಿಗೆ ಮನೆಯ ಯಾಜಮಾನನಿಗೆ ತಿಳಿದಿದ್ದರೆ ಅವನು ಎಚ್ಚರವಾಗಿದ್ದು ತನ್ನ ಮನೆಗೆ ಕನ್ನಹಾಕಲು ಬಿಡನು ಅಲ್ಲವೆ? ಇದನ್ನು ಚೆನ್ನಾಗಿ ತಿಳಿದುಕೊಂಡು ನೀವು ಸಹ ಸಿದ್ಧರಾಗಿರಿ. ಎಕೆಂದರೆ ನರಪುತ್ರನು ನೀವು ನಿರೀಕ್ಷಿಸದ ಗಳಿಗೆಯಲ್ಲಿ ಬರುವನು.

No comments:

Post a Comment