ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

17.11.2019 - "ಎಲ್ಲರೂ ನಿಮ್ಮನ್ನು ದ್ವೇಷಿಸುವರು. ಆದರೂ ನಿಮ್ಮ ತಲೆ ಕೂದಲೊಂದೂ ನಾಶವಾಗುವುದಿಲ್ಲ"

ಮೊದಲನೇ. ವಾಚನ: ಮಲಾಕಿ 4:1-2

"ಇಗೋ, ಆ ದಿನ ಬರುತ್ತಿದೆ ಒಲೆಯಂತೆ ಉರಿಯುತ್ತಿದೆ. ಎಲ್ಲ ಆಹಂಕಾರಿಗಳು, ದುಷ್ಕರ್ಮಿಗಳು, ಒಣಹುಲ್ಲಿನಂತೆ ಆಗಿಹೋಗಿದ್ದಾರೆ. ಆದ್ದರಿಂದ ಬರಲಿರುವ ಆ ದಿನದಂದು ಸುಟ್ಟು ಭಸ್ಮವಾಗುತ್ತಾರೆ. ಬುಡ ರೆಂಬೆಸಹಿತ ಬೂದಿಯಾಗುತ್ತದೆ," ಎನ್ನುತ್ತಾರೆ ಸೇನಾಧೀಶ್ವರ ಸರ್ವೇಶ್ವರ. ನನ್ನ ನಾಮದಲ್ಲಿ ಭಯಭಕ್ತಿಯಿಂದ ಇರುವ ನಿಮಗಾದರೋ ಜೀವೋದ್ಧಾರಕನೆಂಬ  ಸೂರ್ಯನು ಉದಹಿಸಿ, ಸುಕ್ಷೆಮವನ್ನೀಯುವ ಕಿರಣಗಳನ್ನು ಬೀರುವನು.


ಕೀರ್ತನೆ: 98:5-6, 7-8, 9

ಶ್ಲೋಕ: ಪ್ರಭು ಬರುವನು ಇಹಲೋಕಕೆ ನ್ಯಾಯತೀರಿಸಲು

ಎರಡನೇ ವಾಚನ: 2 ಥೆಸಲೋನಿಯರಿಗೆ 3:7-12

ಸಹೋದರರೇ, ನಾವು ಹೇಗೆ ನಡೆದುಕೊಂಡೆವೋ ಹಾಗೆಯೇ, ನೀವು ಸಹ ನಡೆದುಕೊಳ್ಳಬೇಕೆಂಬುದು ನಿಮಗೆ ತಿಳಿದ ವಿಷಯ. ನಾವು ನಿಮ್ಮ ಬಳಿಯಿದ್ದಾಗ ಸೋಮಾರಿಗಳಾಗಿರಲಿಲ್ಲ ಪುಕ್ಕಟೆಯಾಗಿ ನಾವು ಯಾರ ಅನ್ನವನ್ನೂ ಉಣ್ಣಲಿಲ್ಲ. ನಿಮ್ಮಲ್ಲಿ ಯಾರಿಗೂ ಹೊರೆಯಾಗಬಾರದೆಂದು ಹಗಲಿರುಳೂ ನಾವೇ ಕಷ್ಟಪಟ್ಟು ದುಡಿದಿದ್ದೇವೆ. ನಿಮ್ಮಿಂದ ಪೋಷಣೆ ಪಡೆಯಲು ನಮಗೆ ಹಕ್ಕಿಲ್ಲವೆಂದಲ್ಲ; ನೀವು ನಮ್ಮನ್ನು ಅನುಸರಿಸಿ ನಡೆಯುವಂತೆ, ನಿಮಗೆ ಆದರ್ಶವಾಗಿ ಇರಬೇಕೆಂದೇ ನಾವು ಹೀಗೆ ಮಾಡಿದೆವು. ನಾವು ನಿಮ್ಮೊಡನಿದ್ದಾಗ, "ದುಡಿಯಲೊಲ್ಲದವನು ಉಣಲೂಬಾರದು," ಎಂದು ನಿಮಗೆ ಆಜ್ಞಾಪಿಸಿದ್ದೆವು. ಈಗಲಾದರೋ ನಿಮ್ಮಲ್ಲಿ ಕೆಲವರು ದುಡಿಯದೆ ಮೈಗಳ್ಳರಾಗಿ ಅಲ್ಲಲ್ಲಿ ಅಲೆದಾಡುತ್ತಾ ಹರಟೆಮಲ್ಲರಾಗಿದ್ದಾರೆಂದು ನಮಗೆ ತಿಳಿದು ಬಂದಿದೆ. ಇಂಥವರು ತಮ್ಮ ಜೀವನೋಪಾಯಕ್ಕಾಗಿ ತಾವೇ ದುಡಿದು ಸಂಪಾದಿಸಬೇಕೆಂದು ಪ್ರಭು ಯೇಸುವಿನ ಹೆಸರಿನಲ್ಲಿ ಎಚ್ಚರಿಸಿ ಆಜ್ಞಾಪಿಸುತ್ತೇವೆ.

ಶುಭಸಂದೇಶ: ಲೂಕ 21:5-19


"ಈ ಮಹಾದೇವಾಲಯವು ಆನಂದವಾದ ಕಲ್ಲುಗಳಿಂದಲೂ ಅಮೂಲ್ಯವಾದ ಕೊಡುಗೆಗಳಿಂದಲೂ ಎಷ್ಟು ಆಲಂಕೃತವಾಗಿದೆ!" ಎಂದು ಕೆಲವರು ಮಾತನಾಡುತ್ತಿದ್ದರು. ಆಗ ಯೇಸು, "ಇವುಗಳನ್ನು ನೀವು ನೋಡುತ್ತಿದ್ದೀರಲ್ಲವೆ? ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯದು; ಎಲ್ಲವನ್ನೂ ಕೆಡವಿಹಾಕುವ ಕಾಲವೊಂದು ಬರುವುದು," ಎಂದರು. "ಗುರುವೇ, ಇದು ಸಂಭವಿಸುವುದು ಯಾವಾಗ? ಇದೀಗಲೇ ಸಂಭವಿಸಲಿದೆ ಎಂದು ತಿಳಿಸುವ ಪೂರ್ವಸೂಚನೆ ಯಾವುದು?" ಎಂದು ಕೆಲವರು ಕೇಳಿದರು. ಅದಕ್ಕೆ ಯೇಸುಸ್ವಾಮಿ, "ನೀವು ಮೋಸಹೋಗದಂತೆ ಜಾಗರೂಕರಾಗಿರಿ. "ಅನೇಕರು ನಾನೇ ಆತ, ನಾನೇ ಆತ," ಎನ್ನುತ್ತಾ ನನ್ನ ಹೆಸರನ್ನೇ ಇಟ್ಟುಕೊಂಡು ಬಂದು, "ಕಾಲವು ಸಮೀಪಿಸಿಬಿಟ್ಟಿತು," ಎಂದು ಹೇಳುತ್ತಾರೆ. ಅವರನ್ನು ಹಿಂಬಾಲಿಸಬೇಡಿ. ಸಮರ ಸಂಕಲಹಗಳ ಸುದ್ದಿ ಬಂದಾಗ ದಿಗಿಲುಗೊಳ್ಳಬೇಡಿ; ಇವೆಲ್ಲವೂ ಮೊದಲು ಸಂಭವಿಸಲೇಬೇಕು. ಆದರೂ ಅಂತ್ಯವು ಕೂಡಲೇ ಬರುವುದಿಲ್ಲ," ಎಂದರು. ಅದೂ ಅಲ್ಲದೆ ಯೇಸು ಇಂತೆಂದರು: "ಜನಾಂಗಕ್ಕೆ ವಿರುದ್ಧವಾಗಿ ಜನಾಂಗ, ರಾಷ್ಟ್ರಕ್ಕೆ ವಿರುದ್ಧವಾಗಿ ರಾಷ್ಟ್ರ ಯುದ್ಧಕ್ಕಿಳಿಯುವುವು; ಭೀಕರ ಭೂಕಂಪಗಳಾಗುವುವು; ಕ್ಷಾಮಡಾಮರಗಳು ತಲೆದೋರರುವುವು; ಭಯಂಕರ ಘಟನೆಗಳೂ ಬಾಹ್ಯಾಕಾಶದಲ್ಲಿ ಅಪೂರ್ವ ಸೂಚನೆಗಳೂ ಕಾಣಿಸಿಕೊಳ್ಳುವುವು. ಇದೆಲ್ಲಾ ಸಂಭವಿಸುವುದಕ್ಕೆ ಮುಂಚೆ ನಿಮ್ಮನ್ನು ಬಂಧಿಸಿ ಹಿಂಸೆಗೊಳಪಡಿಸುವರು. ಪ್ರರ್ಥನಾ ಮಂದಿರಗಳಿಗೂ ಕಾರಾಗೃಹಗಳಿಗೂ ಎಳೆದೊಪ್ಪಿಸುವರು; ನನ್ನ ನಾಮದ ನಿಮಿತ್ತ ನಿಮ್ಮನ್ನು ಅರಸರ ಹಾಗೂ ಅಧಿಪತಿಗಳ ಮುಂದಕ್ಕೆ ಎಳೆಯುವರು. ಶುಭಸಂದೇಶಕ್ಕೆ ಸಾಕ್ಷಿಕೊಡಲು ಇದು ನಿಮಗೆ ಸದವಕಾಶವಾಗಿರುತ್ತದೆ. ಆಗ ವಾದಿಸುವುದು ಹೇಗೆಂದು ನೀವು ಮುಂಚಿತವಾಗಿ ಚಿಂತಿಸಬೇಕಾಗಿಲ್ಲ; ಇದು ನಿಮಗೆ ಮನದಟ್ಟಾಗಿರಲಿ. ಏಕೆಂದರೆ ನಿಮ್ಮ ವಿರೋಧಿಗಳಾರೂ ಪ್ರತಿಭಟಿಸಲು ಅಥವಾ ವಿರೋಧಿಸಲು ಆಗದಂಥ ವಾಕ್ಚಾತುರ್ಯವನ್ನೂ ಜ್ಞಾನಶಕ್ತಿಯನ್ನೂ ನಿಮಗೆ ಕೊಡುವೆನು. ನಿಮ್ಮ ತಂದೆತಾಯಿಗಳೇ, ಒಡಹುಟ್ಟಿದವರೇ, ಬಂಧುಮಿತ್ರರೇ, ನಿಮ್ಮನ್ನು ಪರಾಧೀನ ಮಾಡುವರು; ಮಾತ್ರವಲ್ಲ, ನಿಮ್ಮಲ್ಲಿ ಕೆಲವರನ್ನು ಕೊಂದುಹಾಕಿಸುವರು. ನೀವು ನನ್ನವರು ಆದುದರಿಂದಲೇ ಎಲ್ಲರೂ ನಿಮ್ಮನ್ನು ದ್ವೇಷಿಸುವರು. ಆದರೂ ನಿಮ್ಮ ತಲೆ ಕೂದಲೊಂದೂ  ನಾಶವಾಗುವುದಿಲ್ಲ. ಸೈರಣೆಯಿಂದಿರಿ, ಸಂರಕ್ಷಣೆಯನ್ನು ಪಡೆಯುವಿರಿ."

No comments:

Post a Comment