07.11.2019 - "ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖನಾಗಿ ದೇವರಿಗೆ ಅಭಿಮುಖನಾಗುವ ಒಬ್ಬ ಪಾಪಿಯ ವಿಷಯವಾಗಿ ಹೆಚ್ಚು ಸಂತೋಷ ಉಂಟಾಗುತ್ತದೆ"

ಮೊದಲನೇ ವಾಚನ: ರೋಮನರಿಗೆ 14:7-12

ಸಹೋದರರೇ, ನಮ್ಮಲ್ಲಿ ಯಾರೂ ತನಗಾಗಿಯೇ ಬದುಕುವುದಿಲ್ಲ; ತನಗಾಗಿಯೇ ಸಾಯುವುದಿಲ್ಲ. ನಾವು ಬದುಕಿದರೂ ಪ್ರಭುವಿಗಾಗಿಯೇ; ಸತ್ತರೂ ಅವರಿಗಾಗಿಯೇ. ನಾವು ಬದುಕಿದರೂ ಸತ್ತರೂ ಪ್ರಭುವಿಗೆ ಸೇರಿದವರು, ಏಕೆಂದರೆ, ಸತ್ತವರಿಗೂ ಬದುಕುವವರಿಗೂ ಪ್ರಭುವಾಗಬೇಕೆಂಬ ಉದ್ದೇಶದಿಂದಲೇ ಕ್ರಿಸ್ತ ಯೇಸು ಸತ್ತು ಜೀವಂತರಾದುದ್ದು. ಹೀಗಿರುವಲ್ಲಿ ಸಸ್ಯಹಾರಿಯೇ, ನೀನು ನಿನ್ನ ಸಹೋದರರನ್ನು ದೋಷಿಯೆಂದು ತೀರ್ಪಿಡುವುದೇಕೆ? ಮಾಂಸಹಾರಿಯೇ, ನಿನ್ನ ಸಹೋದರನನ್ನು ಹೀನೈಸುವುದೇಕೆ? ನಾವೆಲ್ಲರೂ ದೇವರ ನ್ಯಾಯಸ್ಥಾನದ ಮುಂದೆ ನಿಲ್ಲಬೇಕಲ್ಲವೆ? ಪವಿತ್ರ ಗ್ರಂಥದಲ್ಲಿ;  "ಎಲ್ಲರೂ ನನಗೆ ಸಾಷ್ಟಾಂಗವೆರಗುವರು ಎಲ್ಲರೂ ನನ್ನನ್ನು ದೇವರೆಂದು ನಿವೇದಿಸುವರು ಇದಕ್ಕೆ ಜೀವಸ್ವರೂಪನಾದ  ನಾನೇ ಸಾಕ್ಷಿ," ಎಂದು ಸರ್ವೇಶ್ವರಸ್ವಾಮಿ ಹೇಳಿದ್ದಾರೆ. ನಮ್ಮಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ವಿಷಯವಾಗಿ ದೇವರಿಗೆ ಲೆಕ್ಕವನ್ನು ಒಪ್ಪಿಸಬೇಕು.

ಕೀರ್ತನೆ: 27:1, 4, 13-14
ಶ್ಲೋಕ: ನನಗೆ ಬೆಳಕು, ನನಗೆ ರಕ್ಷೆ ಪ್ರಭುವೇ

ಶುಭಸಂದೇಶ: ಲೂಕ 15:1-10

ಯೇಸುಸ್ವಾಮಿಯ ಉಪದೇಶವನ್ನು ಕೇಳಲು ಎಲ್ಲಾ ಸುಂಕದವರೂ ಪಾಪಿಗಳೂ ಬರುತ್ತಿದ್ದರು. ಇದನ್ನು ಕಂಡ ಫರಿಸಾಯರು ಮತ್ತು ಧರ್ಮಶಾಸ್ತ್ರಿಗಳು, "ಈ ಮನುಷ್ಯ ಪಾಪಿಗಳನ್ನು ಬರಮಾಡಿಕೊಳ್ಳುತ್ತಾನೆ; ಅವರೊಡನೆ ಊಟಮಾಡುತ್ತಾನೆ," ಎಂದು ಗೊಣಗಿದರು. ಆ ಸಂದರ್ಭದಲ್ಲಿ ಯೇಸು ಈ ಸಾಮತಿಯನ್ನು ಹೇಳಿದರು: "ನಿಮ್ಮಲ್ಲಿ ಯಾರ ಬಳಿಯಾದರೂ ನೂರು ಕುರಿಗಳು ಇವೆಯೆನ್ನೋಣ. ಅವುಗಳಲ್ಲಿ ಒಂದು ಕುರಿ ಕಾಣದೆ ಹೋದಾಗ ಅವನೇನು ಮಾಡುತ್ತಾನೆ? ಇರುವ ತೊಂಭತ್ತೊಂಭತ್ತು ಕುರಿಗಳನ್ನು ಹುಲ್ಲುಗಾವಲಿನಲ್ಲೇ ಬಿಟ್ಟು ಕಾಣದೆ ಹೋದ ಆ ಒಂದು ಕುರಿ ಸಿಕ್ಕುವ ತನಕ ಹುಡುಕಿಕೊಂಡು ಹೋಗುತ್ತಾನಲ್ಲವೆ? ಅದು ಸಿಕ್ಕಿದಾಗ ಸಿಕ್ಕಿತೆಂಬ ಸಂತೋಷದಿಂದ ಅದನ್ನು ಹೆಗಲ ಮೇಲೆ ಎತ್ತಿಕೊಂಡು ಮನೆಗೆ ಬರುತ್ತಾನೆ; ಸ್ನೇಹಿತರನ್ನೂ ನೆರೆಯವರನ್ನೂ ಒಟ್ಟಿಗೆ ಕರೆಯುತ್ತಾನೆ. "ಕಳೆದು ಹೋಗಿದ್ದ ಕುರಿ ಸಿಕ್ಕಿತು; ನನ್ನೊಡನೆ ಸೇರಿ ಸಂತೋಷಪಡಿ," ಎನ್ನುತ್ತಾನೆ. ಅಲ್ಲವೆ? ಅದೇ ರೀತಿಯಲ್ಲಿ, ಪಶ್ಚಾತ್ತಾಪದ ಅವಶ್ಯಕತೆಯಿಲ್ಲದ ತೊಂಭತ್ತೊಂಭತ್ತು ಸತ್ಪುರುಷರ ವಿಷಯವಾಗಿ ಸ್ವರ್ಗದಲ್ಲಿ ಉಂಟಾಗುವ ಸಂತೋಷಕ್ಕಿಂತ, ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖನಾಗಿ ದೇವರಿಗೆ ಅಭಿಮುಖನಾಗುವ ಒಬ್ಬ ಪಾಪಿಯ ವಿಷಯವಾಗಿ ಹೆಚ್ಚು ಸಂತೋಷ ಉಂಟಾಗುತ್ತದೆ ಎಂಬುವುದರಲ್ಲಿ ಸಂದೇಹವಿಲ್ಲ. ಅಂತೆಯೇ, ಮನೆಯಾಕೆಯೊಬ್ಬಳು ತನ್ನ ಬಳಿಯಿದ್ದ ಹತ್ತು ನಾಣ್ಯಗಳಲ್ಲಿ ಒಂದನ್ನು ಕಳೆದುಕೊಂಡಳು ಎನ್ನೋಣ. ಆಗ ಅವಳೇನು ಮಾಡುತ್ತಾಳೆ?ದೀಪ ಹಚ್ಚಿ ಮನೆಯನ್ನು ಗುಡಿಸಿ, ಕಳೆದು ಹೋದ ನಾಣ್ಯ ಸಿಕ್ಕುವವರೆಗೂ ಚೆನ್ನಾಗಿ ಹುಡುಕಾಡುತ್ತಾಳೆ, ಅಲ್ಲವೇ? ಅದು ಸಿಕ್ಕಿದಾಗ ತನ್ನ ಗೆಳತಿಯರನ್ನೂ ನೆರೆಯವರನ್ನೂ ಒಟ್ಟಿಗೆ ಕರೆದು, "ಕಳೆದುಹೋದ ನಾಣ್ಯ ಸಿಕ್ಕಿಬಿಟ್ಟಿತು‌. ನನ್ನೊಡನೆ ಸೇರಿ ಸಂತೋಷಪಡಿ," ಎನ್ನುತ್ತಾಳಲ್ಲವೆ? ಅದೇ ಮೇರೆಗೆ ಪಶ್ಚಾತ್ತಾಪಪಟ್ಟು ದೇವರಿಗೆ ಅಭಿಮುಖನಾಗುವ ಒಬ್ಬ ಪಾಪಿಯ ವಿಷಯವಾಗಿ ದೇವದೂತರಿಗೆ ಸಂತೋಷ ಉಂಟಾಗುತ್ತದೆಂಬುದು ನಿಶ್ಚಯ," ಎಂದರು.

No comments:

Post a Comment

09.01.2026 - ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ

  ಮೊದಲನೇ ವಾಚನ: 1 ಯೊವಾನ್ನ 5: 5-13 ಪ್ರಿಯರೇ, ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ...