ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

03.11.2019 - "ನರಪುತ್ರನು ಬಂದಿರುವುದು ಪತಿತರನ್ನು ಅರಸಿ ಉದ್ಧರಿಸುವುದಕ್ಕೆ"

ಮೊದಲನೇ ವಾಚನ: ಜ್ಞಾನಗ್ರಂಥ ಗ್ರಂಥ  11:22-12:2 

ಕರ್ತರೇ, ನಿಮ್ಮ ದೃಷ್ಟಿಯಲ್ಲಿ ಇಡೀ ವಿಶ್ವವು ತಕ್ಕಡಿಯಲ್ಲಿನ ಒಂದು ಅಣುವಿನಂತೆ ಮುಂಜಾನೆ ನೆಲಕ್ಕೆ ಬೀಳುವ ಮಂಜಿನ ಒಂದು ಹನಿಯಂತೆ. ಏನು ಮಾಡಲೂ ನಿನಗೆ ಶಕ್ತಿಯಿದೆ, ಆದರೂ ಎಲ್ಲರಿಗೂ ಕರುಣೆ ತೋರುತ್ತೀರಿ. ಜನರು ನಿಮಗೆ ಅಭಿಮುಖರಾಗಲೆಂದೇ, ಅವರ ಪಾಪಗಳನ್ನು ಕಂಡರೂ ಕಾಣದಂತಿದ್ದೀರಿ. ಪ್ರೀತಿಸುತ್ತೀರಿ ಸೃಷ್ಟಿಯನ್ನೆಲ್ಲಾ; ನೀವುಂಟು ಮಾಡಿದ್ದನ್ನು ಹೇಸುವುದಿಲ್ಲ ಹೇಸುತ್ತಿದ್ದರೆ ಉಂಟುಮಾಡುತ್ತಿರಲಿಲ್ಲ. ನಿಮ್ಮ ಚಿತ್ತ ಇದ್ದ ಹೊರತು, ಯಾವುದು ಬಾಳೀತು? ನಿಮ್ಮ ಕರೆ ಇಲ್ಲದಿದ್ದರೆ, ಇದ್ದುದು ಹೇಗೆ ಉಳಿದೀತು? ಹೇ ಸರ್ವೇಶ್ವರಾ, ಜೀವಾತ್ಮಗಳ ಪ್ರಿಯನೇ ಎಲ್ಲವೂ ನಿಮ್ಮವಾದುದರಿಂದ, ಎಲ್ಲಕ್ಕೂ ಇದೆ ನಿಮ್ಮ ರಕ್ಷಣೆ ಅಮರವಾದ ನಿಮ್ಮ ಚೈತನ್ಯವು ಇರುವುದು ಪ್ರತಿಯೊಂದರಲ್ಲೂ. ಎಂದೇ ಸನ್ಮಾರ್ಗದಿಂದ ತಪ್ಪಿಹೋದವರನ್ನು ಸ್ವಲ್ಪಸ್ವಲ್ಪವಾಗಿ ತಿದ್ದುತ್ತೀರಿ ಮಾಡಿದ ಅಪರಾಧಗಳನ್ನು ನೆನಪಿಗೆ ತಂದುಕೊಟ್ಟು ಎಚ್ಚರಿಸುತ್ತೀರಿ. ಸರ್ವೇಶ್ವರಾ, ದುಷ್ಟತನ ಬಿಟ್ಟು ನಿಮ್ಮನ್ನವರು ನಂಬಲೆಂದೇ ಹೀಗೆ ಮಾಡುತ್ತೀರಿ. 

ಕೀರ್ತನೆ: 145:1-2, 8-9, 10-11, 14-15 
ಶ್ಲೋಕ: ದೇವಾ, ಮಾಡುವೆ ಯುಗಯುಗಾಂತರಕ್ಕೂ ನಿನ್ನ ನಾಮಕೆ ನಮನ 

ಎರಡನೇ ವಾಚನ: 2 ಥೆಸಲೋನಿಯರಿಗೆ 1:11-2:2 

ಸಹೋದರರೇ, ನಿಮಗೋಸ್ಕರ ನಾವು ಸದಾ ಪ್ರಾರ್ಥಿಸುತ್ತೇವೆ. ದೇವರೇ ನೀಡಿರುವ ಕರೆಗೆ ನೀವು ಯೋಗ್ಯವಾಗಿ ಬಾಳುವಂತಾಗಲಿ; ದೇವರ ಮಹಿಮಾಶಕ್ತಿಯಿಂದ ನಿಮ್ಮ ಶುಭಾಕಾಂಕ್ಷೆಗಳು ಮತ್ತು ವಿಶ್ವಾಸಪ್ರೇರಿತ ಕಾರ್ಯಗಳು ಪೂರ್ಣವಾಗಲಿ. ಹೀಗೆ ನಿಮ್ಮ ಮುಖಾಂತರ ಪ್ರಭು ಯೇಸುವಿನ ನಾಮಕ್ಕೂ ಮತ್ತು ಅವರಲ್ಲಿ ನಿಮಗೂ ಮಹಿಮೆಯುಂಟಾಗಲಿ. ನಿಮ್ಮ ದೇವರ ಹಾಗೂ ಪ್ರಭು ಯೇಸುಕ್ರಿಸ್ತರ ಅನುಗ್ರಹದಿಂದ ಇದು ನೆರವೇರಲಿ. ನಮ್ಮ ಪ್ರಭು ಯೇಸುಕ್ರಿಸ್ತರ ಪುನರಾಗಮನವನ್ನು ಮತ್ತು ನಾವು ಅವರ ಸನ್ನಿಧಿಯಲ್ಲಿ ಒಂದಾಗಿ ಸೇರುವ ವಿಷಯವನ್ನು ಕುರಿತು ನಿಮ್ಮಲ್ಲಿ ನಾವು ವಿನಂತಿಸುವುದೇನೆಂದರೆ; ಪ್ರಭುವಿನ ದಿನವು ಬಂದೇಬಿಟ್ಟಿತೆಂದು ಪ್ರವಾದನೆಯಿಂದಾಗಲಿ, ಪ್ರವಚನದಿಂದಾಗಲಿ ಅಥವಾ ನಮ್ಮ ಪತ್ರದಿಂದಾಗಲಿ ತಿಳಿದು ಬಂದಿದೆಯೆಂದು ಯಾರಾದರೂ ಹೇಳಿದರೆ, ಒಮ್ಮೆಗೇ ನೀವು ತಳಮಳಗೊಳ್ಳದಿರಿ. 

ಶುಭಸಂದೇಶ: ಲೂಕ 19:1-10 


ಯೇಸುಸ್ವಾಮಿ ಜೆರಿಕೊ ಪಟ್ಟಣವನ್ನು ಪ್ರವೇಶಿಸಿ ಅದರ ಬೀದಿಗಳಲ್ಲಿ ಹಾದು ಹೋಗುತ್ತಿದ್ದರು. ಅಲ್ಲಿ ಜಕ್ಕಾಯ ಎಂಬುವನಿದ್ದನು. ಅವನು ಸುಂಕವಸೂಲಿಯವರ ಮುಖಂಡ ಹಾಗೂ ಧನಾಢ್ಯ. ಯೇಸು ಯಾರೆಂದು ನೋಡಬೇಕೆಂಬ ಅಪೇಕ್ಷೆ ಅವನದು. ಆದರೆ ಅವನು ಗಿಡ್ಡ ವ್ಯಕ್ತಿ. ಜನಜಂಗುಳಿಯ ಮಧ್ಯೆ ಯೇಸುವನ್ನು ನೋಡಲು ಪ್ರಯತ್ನಿಸಿದರೂ ಅವನಿಂದಾಗಲಿಲ್ಲ. ಆದಕಾರಣ ಮುಂದಕ್ಕೆ ಓಡಿಹೋಗಿ ಯೇಸು ಬರುತ್ತಿದ್ದ ಆ ಮಾರ್ಗದಲ್ಲಿ ಒಂದು ಆಲದ ಮರವನ್ನು ಕಂಡು ಅದನ್ನು ಹತ್ತಿದನು. ಯೇಸು ಆ ಸ್ಥಳಕ್ಕೆ ಬಂದು, ತಲೆಯೆತ್ತಿ ನೋಡಿ, "ಜಕ್ಕಾಯಾ, ಒಡನೆ ಇಳಿದು ಬಾ; ಈ ದಿನ  ನಿನ್ನ ಮನೆಯಲ್ಲಿ ನಾನು  ತಂಗಬೇಕು," ಎಂದರು. ಜಕ್ಕಾಯನು ತಕ್ಷಣವೇ ಇಳಿದು ಬಂದು ಯೇಸುವನ್ನು ಸಂತೋಷದಿಂದ ಸ್ವಾಗತಿಸಿದನು. ಇದನ್ನು ನೋಡಿದವರೆಲ್ಲರು, "ಯೇಸು ಪಾಪಿಷ್ಠನ ಮನೆಗೆ ಅತಿಥಿಯಾಗಿ ಹೋಗುತ್ತಾನಲ್ಲಾ?" ಎಂದು ಗೊಣಗುಟ್ಟಿದರು. ಜಕ್ಕಾಯನು ನೆರೆದಿದ್ದ ಜನರ ಮುಂದೆ ಎದ್ದುನಿಂತು ಯೇಸುವಿಗೆ, "ಪ್ರಭುವೇ, ನನ್ನ ಆಸ್ತಿಪಾಸ್ತಿಯಲ್ಲಿ ಅರ್ಧಭಾಗವನ್ನು ಬಡಬಗ್ಗರಿಗೆ ಕೊಟ್ಟುಬಿಡುತ್ತೇನೆ. ಯಾರಿಗಾದರೂ ಮೋಸಮಾಡಿ ಅವರಿಂದೇನಾದರೂ ನಾನು ಕಸಿದುಕೊಂಡಿದ್ದರೆ ಅದಕ್ಕೆ ನಾಲ್ಕರಷ್ಟು ಹಿಂದಕ್ಕೆ ಕೊಡುತ್ತೇನೆ," ಎಂದನು. ಆಗ ಯೇಸು, "ಇಂದು ಈ ಮನೆ ಉದ್ಧಾರವಾಯಿತು. ಇವನು ಕೂಡ ಅಬ್ರಹಾಮನ ವಂಶಕ್ಕೆ ಸೇರಿದವನಲ್ಲವೇ? ನರಪುತ್ರನು ಬಂದಿರುವುದು ಪತಿತರನ್ನು ಅರಸಿ ಉದ್ಧರಿಸುವುದಕ್ಕೆ," ಎಂದು ಹೇಳಿದರು.

No comments:

Post a Comment