ಪವಿತ್ರ ಗುರುವಾರ
ಮೊದಲನೇ ವಾಚನ: ವಿಮೋಚನಾಕಾಂಡ 12:1-8, 11-14
ಸರ್ವೇಶ್ವರಸ್ವಾಮಿ ಮೋಶೆ ಮತ್ತು ಆರೋನರ ಸಂಗಡ ಮತನಾಡಿ ಹೀಗೆಂದರು: "ಎಲ್ಲ ಮಾಸಗಳಲ್ಲಿ ಇದೇ ನಿಮಗೆ ಆದಿ ಮಾಸವಾಗಿರಬೇಕು. ಇದೇ ನಿಮಗೆ ಪ್ರತಿವರ್ಷದ ಮೊದಲನೆಯ ತಿಂಗಳಾಗಿರಬೇಕು. ಈ ವಿಷಯದಲ್ಲಿ ನೀವು ಇಸ್ರಯೇಲರ ಸಮಾಜಕ್ಕೆಲ್ಲ ಈ ರೀತಿ ಕಟ್ಟಳೆ ಇಡಬೇಕು: ಈ ತಿಂಗಳ ಹತ್ತನೆಯ ದಿನದಲ್ಲಿ ನಿಮ್ಮ ನಿಮ್ಮ ಗೋತ್ರಗಳ ಪ್ರತಿಯೊಂದು ಮನೆಯವರು ಒಂದೊಂದು ಕುರಿಮರಿಯನ್ನಾಗಲಿ, ಆಡುಮರಿಯನ್ನಾಗಲಿ ಆರಿಸಿಕೊಳ್ಳಬೇಕು. ಕುಟುಂಬವು ಚಿಕ್ಕದಾಗಿದ್ದು ಒಂದು ಮರಿಯನ್ನು ಪೂರ್ತಿಯಾಗಿ ತಿನ್ನಲಾಗದಿದ್ದರೆ ಹತ್ತಿರದ ನೆರೆಮನೆಯ ಕುಟುಂಬದೊಂದಿಗೆ ಸೇರಿ ಒಬ್ಬೊಬ್ಬನು ಇಷ್ಟಿಷ್ಟು ತಿನ್ನುವನೆಂದು ಲೆಕ್ಕ ಹಾಕಿ ಜನಗಳ ಸಂಖ್ಯಾನುಸಾರ ಮರಿಗಳನ್ನು ಆರಿಸಿಕೊಳ್ಳಲಿ. ಆ ಮರಿಯು ಯಾವ ದೋಷವೂ ಇರದ ಒಂದು ವರ್ಷದ ಗಂಡಾಗಿರಬೇಕು. ಕುರಿಗಳಿಂದಾಗಲಿ ಆಡುಗಳಿಂದಾಗಲಿ ಅದನ್ನು ಆರಿಸಿಕೊಳ್ಳಬಹುದು. ಈ ತಿಂಗಳಿನ ಹದಿನಾಲ್ಕನೆಯ ದಿನದವರೆಗೆ ಅವುಗಳನ್ನು ಇಟ್ಟುಕೊಂಡಿದ್ದು ಆ ದಿನ ಸಂಜೆ ವೇಳೆಯಲ್ಲಿ ಇಸ್ರಯೇಲ್ ಸಮಾಜದವರೆಲ್ಲರು ತಮ್ಮ ತಮ್ಮ ಕೂಟಗಳಲ್ಲಿ ಕೊಯ್ಯಬೇಕು. ಅವುಗಳ ರಕ್ತದಲ್ಲಿ ಸ್ವಲ್ಪ ತೆಗೆದು ತಾವು ಆ ಭೋಜನ ಮಾಡುವ ಮನೆಯ ಬಾಗಿಲಿನ ಎರಡು ನಿಲುವು ಕಂಬಗಳಿಗೂ ಮೇಲಿನ ಪಟ್ಟಿಗೂ ಹಚ್ಚಬೇಕು. ಆ ಭೋಜನವನ್ನು ಮಾಡಬೇಕಾದ ಕ್ರಮ ಇದು: ನೀವು ನಡುಕಟ್ಟಿಕೊಂಡು, ಕೆರಮೆಟ್ಟಿಕೊಂಡು ಊರುಗೋಲನ್ನು ಹಿಡಿದುಕೊಂಡು, ಬೇಗ ಬೇಗನೆ ಊಟ ಮಾಡಬೇಕು: ಏಕೆಂದರೆ ಅದು ಸರ್ವೇಶ್ವರಸ್ವಾಮಿಗೆ ಆಚರಿಸತಕ್ಕ ಪಾಸ್ಕಹಬ್ಬ. ಆ ರಾತ್ರಿ ನಾನು ಈಜಿಪ್ಟ್ ದೇಶದ ನಡುವೆ ಹಾದು ಹೋಗುವೆನು; ಮನುಷ್ಯರಾಗಿರಲಿ, ಪ್ರಾಣಿಗಳಾಗಿರಲಿ ಚೊಚ್ಚಲಾದುದೆಲ್ಲವನ್ನು ಸಂಹರಿಸುವೆನು. ಈಜಿಪ್ಟ್ ದೇಶದ ಸಮಸ್ತ ದೇವತೆಗಳನ್ನೂ ದಂಡಿಸುವೆನು. ನಾನೇ ಸರ್ವೇಶ್ವರ! ನೀವು ಬಾಗಿಲಿಗೆ ಹಚ್ಚಿದ ಆ ರಕ್ತವು ನೀವಿರುವ ಮನೆಗಳನ್ನು ಸೂಚಿಸುವುದು. ಅದನ್ನು ಕಂಡು ನಿಮಗೆ ಯಾವ ಹಾನಿಯನ್ನು ಮಾಡದೆ ಮುಂದಕ್ಕೆ ದಾಟಿ ಹೋಗುವೆನು. ನಾನು ಈಜಿಪ್ಟಿನವರನ್ನು ಸಂಹರಿಸುವಾಗ ನಿಮಗೆ ಯಾವ ಕೇಡೂ ಆಗದು. ಆ ದಿನವು ನಿಮಗೆ ಸ್ಮರಣೀಯ ದಿನವಾಗಿರುವುದು. ಅಂದು ನೀವು ಸರ್ವೇಶ್ವರನ ಗೌರವಾರ್ಥ ಹಬ್ಬವನ್ನು ಕೊಂಡಾಡಬೇಕು. ಅದನ್ನು ಶಾಶ್ವತ ನಿಯಮವೆಂದು ತಲತಲಾಂತರಕ್ಕೂ ಆಚರಿಸಬೇಕು".
ಕೀರ್ತನೆ: 116:12-13, 15-16, 17-18
ಶ್ಲೋಕ: ನಾವು ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ, ಪಾನಪಾತ್ರೆಯಿಂದ ಕುಡಿಯುವಾಗ ಕ್ರಿಸ್ತೇಸುವಿನ ರಕ್ತದಲ್ಲಿ ಪಾಲ್ಗೊಳ್ಳುತ್ತೇವೆ.
ಎರಡನೇ ವಾಚನ: 1 ಕೊರಿಂಥಿಯರಿಗೆ 11:23-26
ಸಹೋದರರೇ, ನಿಮಗೆ ಮಾಡಿದ ಉಪದೇಶವನ್ನು ನಾನು ಪ್ರಭುವಿನಿಂದಲೇ ಪಡೆದೆನು. ಅದೇನೆಂದರೆ; ಪ್ರಭುಯೇಸು, ತಮ್ಮನ್ನು ಹಿಡಿದುಕೊಡಲಾದ ಆ ರಾತ್ರಿ ರೊಟ್ಟಿಯನ್ನು ತೆಗೆದುಕೊಂಡು ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ ಅದನ್ನು ಮುರಿದು, "ಇದು ನಿಮಗಾಗಿ ಒಪ್ಪಿಸಲಾಗುವ ನನ್ನ ಶರೀರ, ಇದನ್ನು ನನ್ನ ಸ್ಮರಣೆಗಾಗಿ ಮಾಡಿ," ಎಂದರು. ಅಂತೆಯೇ ಭೋ ಬೋಜನದ ಕೊನೆಯಲ್ಲಿ ಪಾನ ಪಾತ್ರೆಯನ್ನು ತೆಗೆದುಕೊಂಡು, "ಈ ಪಾತ್ರೆ ನನ್ನ ರಕ್ತದಿಂದ ಮುದ್ರಿತವಾದ ಹೊಸ ಒಡಂಬಡಿಕೆ; ಇದನ್ನು ನೀವು ಪಾನಮಾಡುವಾಗಲೆಲ್ಲಾ ನನ್ನ ಸ್ಮರಣೆಗಾಗಿ ಮಾಡಿರಿ," ಎಂದರು. ಎಂದೇ, ನೀವು ಈ ರೊಟ್ಟಿಯನ್ನು ಭುಜಿಸಿ ಈ ಪಾತ್ರೆಯಿಂದ ಪಾನಮಾಡುವಾಗಲೆಲ್ಲಾ ಪ್ರಭು ಬರುವ ತನಕ ಅವರ ಮರಣವನ್ನು ಸಾರುತ್ತೀರಿ.
ಶುಭಸಂದೇಶ: ಯೊವಾನ್ನ 13:1-15

ಮನಸಿಗೊಂದಿಷ್ಟು :
"ಭ್ರಷ್ಟ ಶಿಷ್ಯನನ್ನು ಸಂಗಡ ವಿಂಗಡಿಸದೆಯೇ
ಆಷ್ಟು ಪ್ರೇಮದಿಂದ ಅವನ ಪಾದ ತೊಳೆದರು"
ಎಂಬುದು ಪವಿತ್ರ ಗುರುವಾರದ ಗೀತೆಯೊಂದರ ಸಾಲು. ತಮ್ಮದೇ ಶಿಷ್ಯನೊಬ್ಬ ತಮಗೆ ದ್ರೋಹವೆಸಗಿ ತಮ್ಮ ಮರಣಕ್ಕೆ ಕಾರಣನಾಗುತ್ತಾನೆ ಎಂಬ ಸತ್ಯ ಯೇಸುವಿಗೆ ಗೊತಿತ್ತು. ಒಬ್ಬ ಗುರುವಿಗೆ ಇದಕ್ಕಿಂತ ದೊಡ್ಡ ನಂಬಿಕೆ ದ್ರೋಹ ಹಾಗೂ ನೋವು ಬೇರಿಲ್ಲ. ಅದರೆ ಈ ಪರಿಸ್ಥಿತಿಯನ್ನು ಯೇಸು ನಿಭಾಯಿಸಿದ ರೀತಿ ಇತಿಹಾಸ ಪುಟಗಳಲ್ಲಿ ಅಮರವಾಗಿದೆ. ಅತ್ಯಂತ ವಿನಯ ಹಾಗೂ ಅತ್ಯಂತೆ ಪ್ರೀತಿಯಿಂದ ಆ ದ್ರೋಹವನ್ನು ಸಹಿಸಿಕೊಳ್ಳುತ್ತಾರೆ.
ಧಾರ್ಮಿಕ ಆಚರಣೆಗಳಿಂದ ಪ್ರತ್ಯೇಕವಾಗಿ ನೋಡಿದರೂ ಇತಿಹಾಸ ಪುಟಗಳಲ್ಲಿ ಅತ್ಯಂತ ಹೃದಯಸ್ಪರ್ಶಿ ಘಟನೆಯೆಂದರೆ ಯೇಸು ತಮ್ಮ ಶಿಷ್ಯರ ಪಾದ ತೊಳೆದದ್ದು. ಈ ಘಟನೆಗೆ ಹೆಚ್ಚಿನ ವಿವರಣೆ ಬೇಕಿಲ್ಲ. ಇದನ್ನು ನಾವು ನೆನೆದಾಗಲೆಲ್ಲಾ ಯೇಸು ನಮ್ಮದೇ ಪಾದ ತೊಳೆದಂತಾಗಬೇಕು, ನಮ್ಮಲ್ಲಿ ಆ ವಿನಯ, ಆ ಪ್ರೀತಿ, ಆ ಸಹನೆ ಮನೆ ಮಾಡಬೇಕು.
"ಅಯ್ಯೋ ಜನರೇ, ನಿಮ್ಮ ಹೃದಯವಿನ್ನು ದು;ಖಿಸದೇ
ದಿವ್ಯ ಕರ್ತರನ್ನು ಭಾದೆಪಡಿಸಲಿರುವಿರೋ"
ಪ್ರಶ್ನೆ : ಯೇಸುವಿನ ಈ ಉದಾತ್ತ ಕ್ರಿಯೆಗೆ ನಮ್ಮ ಪ್ರತಿಕ್ರಿಯೆ ಏನು?
No comments:
Post a Comment