ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

05.04.2020 - ‘ನನ್ನ ಕಾಲ ಸವಿೂಪಿಸಿತು, ಪಾಸ್ಕವನ್ನು ನನ್ನ ಶಿಷ್ಯರ ಸಮೇತ ನಿನ್ನ ಮನೆಯಲ್ಲಿಯೇ ಆಚರಿಸಬೇಕೆಂದಿದ್ದೇನೆ’

ಗರಿಗಳ ಭಾನುವಾರ   



 ಮೊದಲನೇ ವಾಚನ: ಯೆಶಾಯ: 50:4-7

ದಣಿದವರನ್ನು ಹಿತನುಡಿಗಳಿಂದ ತಣಿಸುವಂತೆ ಅನುಗ್ರಹಿಸುತ್ತಾನೆನಗೆ ಸ್ವಾಮಿ ಸರ್ವೇಶ್ವರ ಶಿಕ್ಷಿತರ ನಾಲಗೆಯನು; ಶಿಷ್ಯನೋಪಾದಿ ನಾನು ಆತನನ್ನು ಆಲಿಸುವಂತೆ ಬೆಳಬೆಳಗೂ ನನ್ನನೆಚ್ಚರಿಸಿ ಚೇತನಗೊಳಿಸುತ್ತಾನೆ ನನ್ನ ಕಿವಿಯನು. ತೆರೆದಿಹನು ಸ್ವಾಮಿ ಸರ್ವೇಶ್ವರ ನನ್ನ ಕಿವಿಯನು ಎಂದೇ ವಿಮುಖನಾಗಲಿಲ್ಲ ನಾನು, ಪ್ರತಿಭಟಿಸಲಿಲ್ಲ ಆತನನು. ಬೆನ್ನುಕೊಟ್ಟೆನು ಹೊಡೆಯುವವರಿಗೆ ಗಡ್ಡ ಒಡ್ಡಿದೆನು ಅದನ್ನು ಕೀಳುವವರಿಗೆ ಮುಖ ಮರೆಮಾಡಲಿಲ್ಲ ಉಗುಳುಬುಗುಳಿಗೆ. ನೆರವಾಗಿಹನು ನನಗೆ ಸ್ವಾಮಿ ಸರ್ವೇಶ್ವರ ಎಂದೇ ತಲೆತಗ್ಗಿಸಲಿಲ್ಲ ನಾನು ನಾಚಿಕೆಯಿಂದ ಗಟ್ಟಿಮಾಡಿಕೊಂಡೆ ಮುಖವನು ಕಗ್ಗಲ್ಲಿನ ಹಾಗೆ ಆಶಾಭಂಗಪಡಲಾರೆನೆಂದು ಗೊತ್ತು ನನಗೆ.

ಕೀರ್ತನೆ: 22:8-9, 17-18, 19-20, 23-24

ಶ್ಲೋಕ: ದೇವಾ, ಓ ಎನ್ನ ದೇವಾ, ಏಕೆನ್ನ ಕೈ ಬಿಟ್ಟೆ?

ದೇವಾ ಓ ಎನ್ನ ದೇವಾ ಏಕೆನ್ನ ಕೈ ಬಿಟ್ಟೆ ? |
ಕಿವಿಗೊಡದೆ ಏಕೆ ದೂರವಾಗಿ ಬಿಟ್ಟೆ ? ||

ಇತ್ತನಿವನು ಭರವಸೆ , ಪ್ರಭುವೆ ತನ್ನುದ್ಧಾರಕ ನೆಂದು |
ಅತನಿಗಿವನು ಮೆಚ್ಚುಗೆಯಾದರೆ
ರಕ್ಷಿಸಲಿ ಇಂತೆಂದು ||

ಮಾತೆಯುದರದಿಂದ ಎನ್ನನು ಹೊರ ಬರಿಸಿದವನು ನೀನು |
ನಿಶ್ಚಿಂತೆಯಾ ಕೂಸನು ಆಕೆಯ ಮಡಿಲಿನಲಿ ಇರಿಸಿದವನು ನೀನು ||

ಎಣಿಸಬಹುದಿದೆ ನನ್ನೆಲುಬುಗಳನ್ನೆಲ್ಲವನು |
ಹಿಗ್ಗುತ್ತಹರು ದುರುಗುಟ್ಟಿ ನೋಡೆನ್ನನು ||
ನನ್ನ ಉಡುಗೆಗಳನ್ನು ಹಂಚಿಕೊಂಡರು |
ನನ್ನ ಅಂಗಿಗೋಸ್ಕರ ಚೀಟು ಹಾಕಿದರು ||

ನನ್ನಿಂದ ದೂರ ಸರಿಯಲು ಬೇಡ, ಪ್ರಭು |
ನೀನೆನ್ನ ಶಕ್ತಿ, ನೆರವಾಗಲು ತ್ವರೆ ಮಾಡು ||
ಕತ್ತಿಗೆ ತುತ್ತಾಗದಂತೆ ತಪ್ಪಿಸು |
ಕುಕ್ಕುರಗಳಿಂದ ಪ್ರಾಣವನುಳಿಸು ||

ಮಣಿಯಿರಿ, ಪ್ರಭುವಿನಲಿ ಭಯ ಭಕುತಿಯುಳ್ಳವರೆ  |
ಭಜಿಸಿರಿ ಇಸ್ರಯೇಲರೆ , ಯಾಕೋಬ ಕುಲಜರೇ ||

ತೃಣೀಕರಿಸನು, ತಿರಸ್ಕರಿಸನು ದಲಿತನನು |
ವಿಮುಖನಾಗನು, ಪ್ರಾರ್ಥನೆಗೆ ಕಿವಿಗೊಡುವನು ||


ಎರಡನೇ ವಾಚನ: ಪಿಲಿಪ್ಪಿಯರಿಗೆ: 2:6-11

ದೇವಸ್ವರೂಪಿ ತಾನಾಗಿದ್ದರೂ ನಿರುತ ದೇವರಿಗೆ ಸಮನಾದ ಆ ಸಿರಿ ಪದವಿಯನಾತ ಹಿಡಿದಿಟ್ಟುಕೊಳ್ಳಲಿಲ್ಲ ಬಿಡಲೊಲ್ಲೆನೆನುತ. ತನ್ನನೇ ಬರಿದು ಮಾಡಿಕೊಂಡು ದಾಸನ ರೂಪವನು ಧರಿಸಿಕೊಂಡು ಮನುಜನಾಕಾರದಲಿ ಕಾಣಿಸಿಕೊಂಡು ನರಮಾನವರಿಗೆ ಸರಿಸಮನಾದ. ತನ್ನನೇ ಆತ ತಗ್ಗಿಸಿಕೊಂಡು ವಿಧೇಯನಾಗಿ ನಡೆದುಕೊಂಡು ಮರಣಪರಿಯಂತ, ಹೌದೌದು, ಶಿಲುಬೆಯ ಮರಣಪರಿಯಂತ ವಿಧೇಯನಾದ. ಎಂತಲೇ ಪರಮೋನ್ನತ ಸ್ಥಾನಕ್ಕೇರಿಸಿದನಾತನನು ಇತ್ತನು ಹೆಸರುಗಳೊಳುತ್ತಮ ಹೆಸರನು ದೇವಪರಮನು. ಯೇಸುವಿನ ಹೆಸರಿಗೆಂದೇ ಮೊಣಕಾಲೂರಿ ಮಣಿವರು ಸ್ವರ್ಗವಾಸಿಗಳು, ಭೂನಿವಾಸಿಗಳು, ಪಾತಾಳ ಜೀವರಾಶಿಗಳು. ‘ಕ್ರಿಸ್ತ ಯೇಸುವೇ ಪ್ರಭು’ ಎಂದೆಲ್ಲರಿಗೆ ಅರಿಕೆ ಮಾಡುವರು ಪಿತದೇವನ ಮಹಿಮೆಯನು ಈ ಪರಿ ಹೊಗಳಿ ಸಾರುವರವರು.

ಶುಭಸಂದೇಶ: ಮತ್ತಾಯ 26:14-27;66


ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತಿನ ಯೂದ ಎಂಬಾತ ಮುಖ್ಯ ಯಾಜಕರ ಬಳಿಗೆ ಹೋದನು. “ನಿಮಗೆ ನಾನು ಯೇಸುವನ್ನು ಹಿಡಿದುಕೊಟ್ಟರೆ ನನಗೇನು ಕೊಡುವಿರಿ?” ಎಂದು ಅವರನ್ನು ವಿಚಾರಿಸಿದನು. ಅವರೋ, ಅವನಿಗೆ ಮೂವತ್ತು ಬೆಳ್ಳಿ ನಾಣ್ಯಗಳನ್ನು ನಿಗದಿಮಾಡಿ ಕೊಟ್ಟರು. ಆ ಗಳಿಗೆಯಿಂದ ಯೇಸುವನ್ನು ಹಿಡಿದೊಪ್ಪಿಸಲು ಅವನು ಸಂದರ್ಭ ಕಾಯುತ್ತಾ ಇದ್ದನು. ಅಂದು ಹುಳಿರಹಿತ ರೊಟ್ಟಿಯ ಹಬ್ಬದ ಮೊದಲನೆಯ ದಿನ. ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದು, “ತಮಗೆ ಪಾಸ್ಕ ಭೋಜನವನ್ನು ನಾವು ಎಲ್ಲಿ ಸಿದ್ಧಪಡಿಸಬೇಕೆನ್ನುತ್ತೀರಿ?” ಎಂದು ಕೇಳಿದರು. ಅದಕ್ಕೆ ಅವರು, “ಪಟ್ಟಣದಲ್ಲಿ ನಾನು ಸೂಚಿಸುವಂಥವನ ಬಳಿಗೆ ಹೋಗಿರಿ, ‘ನನ್ನ ಕಾಲ ಸವಿೂಪಿಸಿತು, ಪಾಸ್ಕವನ್ನು ನನ್ನ ಶಿಷ್ಯರ ಸಮೇತ ನಿನ್ನ ಮನೆಯಲ್ಲಿಯೇ ಆಚರಿಸಬೇಕೆಂದಿದ್ದೇನೆ’; ಇದನ್ನು ನಮ್ಮ ಗುರುವೇ ಹೇಳಿಕಳುಹಿಸಿದ್ದಾರೆ ಎಂದು ಅವನಿಗೆ ತಿಳಿಸಿರಿ,” ಎಂದರು. ಯೇಸು ಸೂಚಿಸಿದಂತೆಯೇ ಶಿಷ್ಯರು ಹೋಗಿ ಪಾಸ್ಕ ಭೋಜನವನ್ನು ತಯಾರಿಸಿದರು. ಸಂಜೆಯಾಯಿತು. ಯೇಸುಸ್ವಾಮಿ ಹನ್ನೆರಡು ಮಂದಿ ಶಿಷ್ಯರ ಸಂಗಡ ಊಟಕ್ಕೆ ಕುಳಿತರು. ಅವರೆಲ್ಲರೂ ಊಟಮಾಡುತ್ತಿದ್ದಾಗ ಯೇಸು, “ನಿಮ್ಮಲ್ಲೇ ಒಬ್ಬನು ನನಗೆ ದ್ರೋಹ ಬಗೆಯುತ್ತಾನೆ, ಎಂದು ನಿಮಗೆ ಖಂಡಿತವಾಗಿ ಹೇಳುತ್ತೇನೆ,” ಎಂದರು. ಶಿಷ್ಯರು ಬಹಳ ಕಳವಳಗೊಂಡರು. ಒಬ್ಬರಾದ ಮೇಲೊಬ್ಬರು, “ಸ್ವಾವಿೂ, ನಾನೋ? ನಾನೋ?” ಎಂದು ಕೇಳತೊಡಗಿದರು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ಊಟದ ಬಟ್ಟಲಲ್ಲಿ ನನ್ನೊಡನೆ ಕೈ ಅದ್ದಿ ಉಣ್ಣುವವನೇ ನನಗೆ ದ್ರೋಹ ಬಗೆಯುತ್ತಾನೆ. ನರಪುತ್ರನೇನೋ ಪವಿತ್ರ ಗ್ರಂಥದಲ್ಲಿ ಬರೆದಿರುವ ಪ್ರಕಾರ ಹೊರಟುಹೋಗುತ್ತಾನೆ, ನಿಜ. ಆದರೆ ಅಯ್ಯೋ, ನರಪುತ್ರನಿಗೆ ದ್ರೋಹ ಬಗೆಯುವವನ ದುರ್ಗತಿಯನ್ನು ಏನೆಂದು ಹೇಳಲಿ! ಅವನು ಹುಟ್ಟದೇ ಇದ್ದಿದ್ದರೆ ಎಷ್ಟೋ ಚೆನ್ನಾಗಿತ್ತು!” ಎಂದರು. ಗುರುದ್ರೋಹಿಯಾದ ಯೂದನು ಆಗ, “ಗುರುವೇ, ಅವನು ನಾನಲ್ಲ ತಾನೇ?” ಎಂದನು. ಅದಕ್ಕೆ ಯೇಸು, “ಅದು ನಿನ್ನ ಬಾಯಿಂದಲೇ ಬಂದಿದೆ,” ಎಂದರು. ಅವರೆಲ್ಲರೂ ಊಟ ಮಾಡುತ್ತಿರುವಾಗ ಯೇಸುಸ್ವಾಮಿ ರೊಟ್ಟಿಯನ್ನು ತೆಗೆದುಕೊಂಡು ದೈವಸ್ತುತಿ ಮಾಡಿ, ಅದನ್ನು ಮುರಿದು, ಶಿಷ್ಯರಿಗೆ ಕೊಡುತ್ತಾ, “ಇದನ್ನು ತೆಗೆದುಕೊಂಡು ಭುಜಿಸಿರಿ, ಇದು ನನ್ನ ಶರೀರ,” ಎಂದರು. ಬಳಿಕ ಪಾನಪಾತ್ರೆಯನ್ನು ತೆಗೆದುಕೊಂಡು, ದೇವರಿಗೆ ಕೃತಜ್ಞತಾ ಸ್ತೋತ್ರವನ್ನು ಸಲ್ಲಿಸಿ, ಅದನ್ನು ಅವರಿಗೆ ಕೊಡುತ್ತಾ ಇಂತೆಂದರು: “ಇದರಲ್ಲಿ ಇರುವುದನ್ನು ಎಲ್ಲರೂ ಪಾನಮಾಡಿ; ಇದು ನನ್ನ ರಕ್ತ, ಸಮಸ್ತ ಜನರ ಪಾಪಕ್ಷಮೆಗಾಗಿ ಸುರಿಸಲಾಗುವ ಒಡಂಬಡಿಕೆಯ ರಕ್ತ. ನಾನು ನನ್ನ ಪಿತನ ಸಾಮ್ರಾಜ್ಯದಲ್ಲಿ ದ್ರಾಕ್ಷಾರಸ ನಿಮ್ಮ ಸಂಗಡ ಹೊಸದಾಗಿ ಕುಡಿಯುವ ದಿನದವರೆಗೂ ಅದನ್ನು ಇನ್ನು ಕುಡಿಯುವುದಿಲ್ಲ ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ,” ಎಂದರು. ಬಳಿಕ ಅವರೆಲ್ಲರು ಕೀರ್ತನೆ ಹಾಡಿ, ಓಲಿವ್ ಗುಡ್ಡಕ್ಕೆ ಹೊರಟರು. ಆಗ ಯೇಸು ತಮ್ಮ ಶಿಷ್ಯರಿಗೆ, “ ‘ ಕುರಿಗಾಹಿಯನ್ನು ಕೊಲ್ಲುವೆನು ಕುರಿಗಳು ಚದರುವುವು,’ ಎಂದು ಪವಿತ್ರ ಗ್ರಂಥದಲ್ಲೇ ಬರೆದಿದೆ. ಅದರಂತೆಯೇ ನೀವೆಲ್ಲರೂ ಇದೇ ರಾತ್ರಿ ನನ್ನಲ್ಲಿ ವಿಶ್ವಾಸ ಕಳೆದುಕೊಂಡು ಹಿಮ್ಮೆಟ್ಟುವಿರಿ. ನಾನಾದರೋ ಪುನರುತ್ಥಾನಹೊಂದಿ ನಿಮಗಿಂತ ಮುಂದಾಗಿ ಗಲಿಲೇಯಕ್ಕೆ ಹೋಗುವೆನು,” ಎಂದರು. ಇದನ್ನು ಕೇಳಿದ ಪೇತ್ರನು, “ಎಲ್ಲರು ತಮ್ಮಲ್ಲಿ ವಿಶ್ವಾಸ ಕಳೆದುಕೊಂಡು ಹಿಮ್ಮೆಟ್ಟಿದರೂ ನಾನು ಮಾತ್ರ ಎಂದಿಗೂ ಹಾಗೆ ಮಾಡುವುದಿಲ್ಲ” ಎಂದು ಸಾರಿ ಹೇಳಿದನು. ಅದಕ್ಕೆ ಯೇಸು, “ಇದೇ ರಾತ್ರಿ ಕೋಳಿ ಕೂಗುವ ಮೊದಲೇ ‘ಆತನನ್ನು ನಾನರಿಯೆ’ ಎಂದು ನೀನು ಮೂರು ಬಾರಿ ನನ್ನನ್ನು ನಿರಾಕರಿಸುವೆ; ಇದು ಖಂಡಿತ,” ಎಂದರು. ಆದರೆ ಪೇತ್ರನು, “ನಾನು ತಮ್ಮೊಡನೆ ಸಾಯಬೇಕಾಗಿ ಬಂದರೂ ಸರಿಯೆ, ತಮ್ಮನ್ನು ಮಾತ್ರ ನಿರಾಕರಿಸೆನು,” ಎಂದು ನುಡಿದನು. ಅದರಂತೆಯೇ ಉಳಿದ ಶಿಷ್ಯರೂ ದನಿಗೂಡಿಸಿದರು. ಅನಂತರ ಯೇಸುಸ್ವಾಮಿ ಅವರೊಡನೆ ಗೆತ್ಸೆಮನೆ ಎಂಬ ತೋಪಿಗೆ ಬಂದರು. ಅಲ್ಲಿ ಶಿಷ್ಯರಿಗೆ, “ನಾನು ಅತ್ತ ಹೋಗಿ ಪ್ರಾರ್ಥನೆ ಮಾಡಿ ಬರುವವರೆಗೂ ನೀವು ಇಲ್ಲೇ ಕುಳಿತಿರಿ,” ಎಂದರು. ಬಳಿಕ ಪೇತ್ರನನ್ನೂ ಜೆಬೆದಾಯನ ಇಬ್ಬರು ಕುಮಾರರನ್ನೂ ತಮ್ಮೊಂದಿಗೆ ಕರೆದುಕೊಂಡು ಮುಂದಕ್ಕೆ ಹೋದರು. ಅಲ್ಲಿ ಸ್ವಾಮಿ ಚಿಂತಾಕ್ರಾಂತರಾದರು, ದುಃಖಭರಿತರಾದರು. “ನನ್ನ ಮನೋವೇದನೆ ಪ್ರಾಣಹಿಂಡುವಷ್ಟು ತೀವ್ರವಾಗಿದೆ. ನೀವು ಇಲ್ಲೇ ಇದ್ದು ನನ್ನೊಡನೆ ಎಚ್ಚರವಾಗಿರಿ,” ಎಂದರು. ಅನಂತರ ಅವರು ಅಲ್ಲಿಂದ ಇನ್ನೂ ಸ್ವಲ್ಪ ಮುಂದಕ್ಕೆ ಹೋಗಿ, ನೆಲದ ಮೇಲೆ ಅಧೋಮುಖವಾಗಿ ಬಿದ್ದು ಪ್ರಾರ್ಥನೆ ಮಾಡಿದರು. “ನನ್ನ ಪಿತನೇ, ಸಾಧ್ಯವಾದರೆ ಈ ಕಷ್ಟದ ಕೊಡವು ನನ್ನಿಂದ ದೂರವಾಗಲಿ, ಆದರೂ ನನ್ನ ಚಿತ್ತದಂತೆ ಅಲ್ಲ, ನಿಮ್ಮ ಚಿತ್ತದಂತೆಯೇ ಆಗಲಿ,” ಎಂದರು. ಅನಂತರ ಆ ಮೂವರು ಶಿಷ್ಯರ ಬಳಿಗೆ ಬಂದು, ಅವರು ನಿದ್ರಿಸುತ್ತಿರುವುದನ್ನು ಕಂಡರು. ಪೇತ್ರನನ್ನು ಉದ್ದೇಶಿಸಿ, “ಏನಿದು, ಒಂದು ಗಂಟೆಯಾದರೂ ನನ್ನೊಡನೆ ಎಚ್ಚರವಾಗಿರಲು ನಿಮ್ಮಿಂದ ಆಗದೇ ಹೋಯಿತೇ? ಪ್ರಲೋಭನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥನೆ ಮಾಡಿರಿ. ಆತ್ಮಕ್ಕೇನೋ ಆಸಕ್ತಿ ಇದೆ, ಆದರೆ ದೇಹಕ್ಕೆ ಶಕ್ತಿಸಾಲದು,” ಎಂದರು. ಎರಡನೆಯ ಬಾರಿ ಹಿಂದಕ್ಕೆ ಹೋಗಿ ಇಂತೆಂದು ಪ್ರಾರ್ಥನೆಮಾಡಿದರು: “ನನ್ನ ಪಿತನೇ, ನಾನು ಸೇವಿಸದ ಹೊರತು ಈ ಕಷ್ಟದ ಕೊಡ ನನ್ನಿಂದ ತೊಲಗದಾದರೆ ಅದು ನಿಮ್ಮ ಚಿತ್ತದಂತೆಯೇ ಆಗಲಿ.” ಯೇಸು ಮರಳಿ ಆ ಶಿಷ್ಯರ ಬಳಿಗೆ ಬಂದಾಗ ಅವರು ಇನ್ನೂ ನಿದ್ರಾವಸ್ಥೆಯಲ್ಲಿದ್ದರು. ಅವರ ಕಣ್ಣುಗಳು ಭಾರವಾಗಿ ಇದ್ದವು. ಪುನಃ ಅವರನ್ನು ಬಿಟ್ಟು ಹಿಂದಿರುಗಿ ಮೂರನೆಯ ಬಾರಿ ಅದೇ ಮಾತುಗಳನ್ನು ಹೇಳಿ ಪ್ರಾರ್ಥಿಸಿದರು .

ಅದಾದ ಬಳಿಕ ಶಿಷ್ಯರನ್ನು ಸಮೀಪಿಸಿ, “ನೀವು ಇನ್ನೂ ನಿದ್ರಿಸಿ ವಿಶ್ರಮಿಸುತ್ತಾ ಇರುವಿರೋ? ಸಾಕು, ಸಮಯ ಸಮೀಪಿಸಿಬಿಟ್ಟಿತು. ನರಪುತ್ರನು ದುರ್ಜನರ ಕೈವಶವಾಗಲಿದ್ದಾನೆ. ಎದ್ದೇಳಿ, ಹೋಗೋಣ. ನನಗೆ ದ್ರೋಹ ಬಗೆಯುವವನು ಹತ್ತಿರವೇ ಇದ್ದಾನೆ, ನೋಡಿ,” ಎಂದರು. ಯೇಸುಸ್ವಾಮಿ ಇನ್ನೂ ಮಾತನಾಡುತ್ತಿದ್ದ ಹಾಗೆ, ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಯೂದನು ಅಲ್ಲಿಗೆ ಬಂದನು. ಖಡ್ಗಗಳನ್ನೂ ಲಾಠಿಗಳನ್ನೂ ಹಿಡಿದಿದ್ದ ಒಂದು ದೊಡ್ಡ ಗುಂಪು ಅವನೊಂದಿಗೆ ಇತ್ತು. ಮುಖ್ಯ ಯಾಜಕರೂ ಜನರ ಪ್ರಮುಖರೂ ಅವರನ್ನು ಕಳುಹಿಸಿದ್ದರು. ‘ನಾನು ಯಾರಿಗೆ ಮುದ್ದಿಡುತ್ತೇನೋ ಆತನೇ ಆ ವ್ಯಕ್ತಿ. ಆತನನ್ನು ಹಿಡಿದುಕೊಳ್ಳಿ,’ ಎಂದು ಆ ಗುರುದ್ರೋಹಿ ಅವರಿಗೆ ಮೊದಲೇ ಸೂಚನೆ ಕೊಟ್ಟಿದ್ದನು. ಅದರಂತೆಯೇ ಅವನು ಯೇಸುಸ್ವಾಮಿಯ ಸಮೀಪಕ್ಕೆ ನೇರವಾಗಿ ಬಂದು, “ಗುರುವೇ, ನಮಸ್ಕಾರ,” ಎಂದು ಹೇಳುತ್ತಾ ಅವರಿಗೆ ಮುದ್ದಿಟ್ಟನು. ಯೇಸು ಅವನಿಗೆ, “ಮಿತ್ರಾ, ನೀನು ಮಾಡಬಂದ ಕಾರ್ಯವನ್ನು ಮಾಡಿ ಮುಗಿಸು,” ಎಂದರು. ಆಗ ಆ ಜನರು ಹತ್ತಿರಕ್ಕೆ ಬಂದು, ಯೇಸುವನ್ನು ಹಿಡಿದು ಬಂಧಿಸಿದರು. ಕೂಡಲೆ ಯೇಸುವಿನ ಸಂಗಡ ಇದ್ದ ಒಬ್ಬನು ತನ್ನ ಖಡ್ಗವನ್ನು ಹಿರಿದು, ಪ್ರಧಾನ ಯಾಜಕನ ಆಳನ್ನು ಹೊಡೆದು ಅವನ ಕಿವಿಯನ್ನು ಕತ್ತರಿಸಿಬಿಟ್ಟನು. ಆಗ ಯೇಸು ಅವನಿಗೆ, “ನಿನ್ನ ಖಡ್ಗವನ್ನು ಒರೆಗೆ ಹಾಕು. ಖಡ್ಗ ಎತ್ತಿದವರೆಲ್ಲರೂ ಖಡ್ಗದಿಂದಲೇ ಹತರಾಗುವರು. ನಾನು ನನ್ನ ಪಿತನನ್ನು ಕೇಳಿಕೊಂಡರೆ ಅವರು ತಕ್ಷಣವೇ ಹನ್ನೆರಡು ದಳಗಳಿಗಿಂತಲೂ ಹೆಚ್ಚು ದೇವದೂತರನ್ನು ಕಳಿಸುವುದಿಲ್ಲವೆಂದು ಕೊಂಡೆಯಾ? ಆದರೆ, ಈ ಪ್ರಕಾರವೇ ಆಗಬೇಕು ಎನ್ನುವ ಪವಿತ್ರ ಗ್ರಂಥದ ವಾಕ್ಯ ನೆರವೇರುವುದಾದರೂ ಹೇಗೆ?” ಎಂದರು. ಅದೇ ಸಂದರ್ಭದಲ್ಲಿ ಯೇಸುಸ್ವಾಮಿ ಜನರ ಗುಂಪನ್ನು ಉದ್ದೇಶಿಸಿ, “ದರೋಡೆಗಾರನನ್ನು ಹಿಡಿಯುವುದಕ್ಕೋ ಎಂಬಂತೆ ಖಡ್ಗಗಳನ್ನೂ ಲಾಠಿಗಳನ್ನೂ ಹಿಡಿದುಕೊಂಡು ನನ್ನನ್ನು ಬಂಧಿಸಲು ಬರಬೇಕಾಗಿತ್ತೆ? ನಾನು ಪ್ರತಿದಿನವೂ ಮಹಾದೇವಾಲಯದಲ್ಲಿ ಕುಳಿತು ಬೋಧನೆ ಮಾಡುತ್ತಾ ಇದ್ದೆ. ಆಗ ನೀವು ನನ್ನನ್ನು ಬಂಧಿಸಲಿಲ್ಲ. ಆದರೆ ಪವಿತ್ರ ಗ್ರಂಥದ ಪ್ರವಾದನೆಗಳು ಈಡೇರಲೆಂದೇ ಇದೆಲ್ಲಾ ಜರುಗಿದೆ,” ಎಂದರು. ಆಗ ಶಿಷ್ಯರೆಲ್ಲರೂ ಯೇಸುವನ್ನು ತೊರೆದು ಪಲಾಯನ ಮಾಡಿದರು. ಬಳಿಕ ಯೇಸುಸ್ವಾಮಿಯನ್ನು ಬಂಧಿಸಿದ್ದವರು ಅವರನ್ನು ಪ್ರಧಾನಯಾಜಕ ಕಾಯಫನ ಬಳಿಗೆ ಕರೆದೊಯ್ದರು. ಅಲ್ಲಿ ಧರ್ಮಶಾಸ್ತ್ರಿಗಳೂ ಪ್ರಮುಖರೂ ಸಭೆ ಸೇರಿದ್ದರು. ಪೇತ್ರನಾದರೋ ದೂರದಿಂದ ಯೇಸುವನ್ನು ಹಿಂಬಾಲಿಸುತ್ತಿದ್ದನು. ಅವನು ಪ್ರಧಾನ ಯಾಜಕನ ಭವನದವರೆಗೂ ಬಂದು, ಹೊರಾಂಗಣವನ್ನು ಹೊಕ್ಕು ಪಹರೆಯವರ ಜೊತೆ ಕುಳಿತುಕೊಂಡನು. ಇದೆಲ್ಲ ಹೇಗೆ ಕೊನೆಗೊಳ್ಳುವುದೆಂದು ನೋಡಬೇಕೆಂಬ ಉದ್ದೇಶ ಅವನದಾಗಿತ್ತು. ಇತ್ತ ಮುಖ್ಯ ಯಾಜಕರೂ ಉಚ್ಚನ್ಯಾಯಸಭೆಯ ಸದಸ್ಯರೆಲ್ಲರೂ ಯೇಸುವನ್ನು ಮರಣದಂಡನೆಗೆ ಗುರಿಪಡಿಸುವ ಸಲುವಾಗಿ ಸುಳ್ಳುಸಾಕ್ಷಿಯನ್ನು ಹುಡುಕುತ್ತಿದ್ದರು. ಹಲವಾರು ಸುಳ್ಳುಸಾಕ್ಷಿಗಳು ಮುಂದೆ ಬಂದರು. ಆದರೂ ಸರಿಯಾದ ಒಂದು ಸಾಕ್ಷ್ಯವೂ ಅವರಿಗೆ ದೊರಕಲಿಲ್ಲ. ಕಡೆಗೆ ಇಬ್ಬರು ಮುಂದೆ ಬಂದು, “ಮಹಾದೇವಾಲಯವನ್ನು ಕೆಡವಿಬಿಟ್ಟು ಅದನ್ನು ಮೂರು ದಿನಗಳಲ್ಲಿ ಮರಳಿ ಕಟ್ಟುವ ಶಕ್ತಿ ನನಗಿದೆ,’ ಎಂದು ಇವನು ಹೇಳಿದ್ದಾನೆ,” ಎಂದರು. ಆಗ ಪ್ರಧಾನಯಾಜಕನು ಎದ್ದುನಿಂತು ಯೇಸುವನ್ನು ನೋಡಿ, “ಈ ಜನರು ನಿನಗೆ ವಿರುದ್ಧ ತಂದಿರುವ ಆರೋಪಣೆಗಳನ್ನು ಕೇಳುತ್ತಿರುವೆಯಾ? ಇವುಗಳಿಗೆ ನಿನ್ನ ಉತ್ತರ ಏನು?” ಎಂದು ಪ್ರಶ್ನಿಸಿದನು. ಆದರೆ ಯೇಸು ಮೌನವಾಗಿದ್ದರು. “ಜೀವಂತ ದೇವರ ಮೇಲೆ ಆಣೆಯಿರಿಸಿ ನಾನು ನಿನ್ನನ್ನು ಕೇಳುತ್ತಿದ್ದೇನೆ, ‘ನೀನು ದೇವರ ಪುತ್ರ ಹಾಗೂ ಅಭಿಷಿಕ್ತನಾದ ಲೋಕೋದ್ಧಾರಕನೋ?’ ನಮಗೆ ಹೇಳು,” ಎಂದನು ಆ ಪ್ರಧಾನಯಾಜಕ. ಅದಕ್ಕೆ ಯೇಸು, “ಅದು ನಿಮ್ಮ ಬಾಯಿಂದಲೇ ಬಂದಿದೆ; ಮಾತ್ರವಲ್ಲ, ನಾನು ಹೇಳುವುದನ್ನು ಕೇಳಿ: ನರಪುತ್ರನು ಸರ್ವಶಕ್ತ ದೇವರ ಬಲಗಡೆ ಆಸೀನನಾಗಿರುವುದನ್ನೂ ಆಕಾಶದ ಮೇಘಗಳ ಮೇಲೆ ಬರುವುದನ್ನೂ ಇನ್ನು ಮುಂದಕ್ಕೆ ಕಾಣುವಿರಿ,” ಎಂದರು. ಇದನ್ನು ಕೇಳಿದ್ದೇ ಪ್ರಧಾನಯಾಜಕನು ತನ್ನ ಉಡುಪನ್ನು ಕೋಪದಿಂದ ಹರಿದುಕೊಂಡನು. “ಇವನು ದೇವದೂಷಣೆ ಆಡಿದ್ದಾನೆ. ಇನ್ನು ನಮಗೆ ಸಾಕ್ಷಿಗಳು ಏತಕ್ಕೆ? ಇವನಾಡಿದ ದೇವದೂಷಣೆಯನ್ನು ನೀವೇ ಕೇಳಿದ್ದೀರಿ. ಈಗ ನಿಮ್ಮ ತೀರ್ಮಾನ ಏನು?” ಎಂದು ಕೇಳಿದನು. ಅವರು, “ಇವನಿಗೆ ಮರಣ ದಂಡನೆ ಆಗಬೇಕು,” ಎಂದು ಉತ್ತರಕೊಟ್ಟರು. ಬಳಿಕ ಅವರು ಯೇಸುಸ್ವಾಮಿಯ ಮುಖದ ಮೇಲೆ ಉಗುಳಿದರು; ಅವರನ್ನು ಗುದ್ದಿದರು. ಕೆಲವರು ಅವರ ಕೆನ್ನೆಗೆ ಹೊಡೆದು, “ಎಲೈ ಕ್ರಿಸ್ತಾ, ನಿನ್ನನ್ನು ಹೊಡೆದವರಾರು? ನಮಗೆ ಪ್ರವಾದಿಸಿ ಹೇಳು,” ಎಂದರು. ಇತ್ತ ಪೇತ್ರನು ಹೊರಾಂಗಣದಲ್ಲಿ ಕುಳಿತಿದ್ದನು. ದಾಸಿಯೊಬ್ಬಳು ಆತನ ಬಳಿಗೆ ಬಂದು, “ನೀನು ಸಹ ಗಲಿಲೇಯದ ಯೇಸುವಿನೊಂದಿಗೆ ಇದ್ದವನು,” ಎಂದಳು. “ನೀನು ಹೇಳುವುದು ಏನೆಂದು ನನಗೆ ತಿಳಿಯದು,” ಎಂದು ಪೇತ್ರನು ಎಲ್ಲರ ಮುಂದೆ ನಿರಾಕರಿಸಿದನು. ಆತ ಅಲ್ಲಿಂದ ಎದ್ದು ಹೆಬ್ಬಾಗಿಲ ಬಳಿ ಬಂದಾಗ ಇನ್ನೊಬ್ಬ ದಾಸಿ ಆತನನ್ನು ಕಂಡು, “ಈತ ನಜರೇತಿನ ಯೇಸುವಿನೊಂದಿಗೆ ಇದ್ದವನೇ,” ಎಂದು ಅಲ್ಲಿದ್ದವರಿಗೆ ತಿಳಿಸಿದಳು. ಪೇತ್ರನು, “ಆ ಮನುಷ್ಯ ಯಾರೋ ನಾನರಿಯೆ,” ಎಂದು ಆಣೆಯಿಟ್ಟು ಇನ್ನೊಮ್ಮೆ ನಿರಾಕರಿಸಿದನು. ಸ್ವಲ್ಪ ಹೊತ್ತಾದ ಮೇಲೆ ಅಲ್ಲಿ ನಿಂತಿದ್ದವರು ಪೇತ್ರನ ಹತ್ತಿರಕ್ಕೆ ಬಂದು, “ಖಂಡಿತವಾಗಿ ನೀನೂ ಅವರಲ್ಲಿ ಒಬ್ಬನು. ನೀನು ಮಾತನಾಡುವ ರೀತಿಯೇ ನಿನ್ನನ್ನು ತೋರಿಸಿಕೊಡುತ್ತದೆ,” ಎಂದು ಹೇಳಿದರು. ಆಗ ಪೇತ್ರನು ತನ್ನನ್ನೇ ಶಪಿಸಿಕೊಳ್ಳಲಾರಂಭಿಸಿ, “ಆ ಮನುಷ್ಯನನ್ನು ನಾನು ಖಂಡಿತವಾಗಿ ಅರಿಯೆನು,” ಎಂದು ಆಣೆಯಿಟ್ಟು ಹೇಳಿದನು. ಆ ಕ್ಷಣವೇ ಕೋಳಿಕೂಗಿತು. “ಕೋಳಿಕೂಗುವ ಮೊದಲೇ, ‘ಆತನನ್ನು ನಾನರಿಯೆ’ನೆಂದು ನನ್ನನ್ನು ಮೂರು ಬಾರಿ ನಿರಾಕರಿಸುವೆ,” ಎಂದ ಸ್ವಾಮಿಯ ನುಡಿ ಪೇತ್ರನ ನೆನಪಿಗೆ ಬಂದಿತು. ಆತನು ಅಲ್ಲಿಂದ ಹೊರಗೆ ಹೋಗಿ, ಬಹಳವಾಗಿ ವ್ಯಥೆಪಟ್ಟು ಅತ್ತನು. 

ಬೆಳಗಾಯಿತು. ಎಲ್ಲ ಮುಖ್ಯ ಯಾಜಕರೂ ಜನರ ಪ್ರಮುಖರೂ ಸೇರಿ ಯೇಸುವನ್ನು ಕೊಲ್ಲಿಸುವುದಕ್ಕೆ ಸಮಾಲೋಚನೆ ಮಾಡಿದರು. ಅಂತೆಯೇ ಯೇಸುವಿಗೆ ಬೇಡಿ ಹಾಕಿಸಿ, ಅವರನ್ನು ರಾಜ್ಯಪಾಲ ಪಿಲಾತನ ಬಳಿಗೆ ಕರೆದೊಯ್ದು ಅವನ ವಶಕ್ಕೆ ಒಪ್ಪಿಸಿದರು. ಯೇಸುಸ್ವಾಮಿ ದಂಡನೆಗೆ ಗುರಿಯಾದರೆಂಬುದನ್ನು ಕಂಡು, ಗುರುದ್ರೋಹಿ ಯೂದನು ಪರಿತಾಪಗೊಂಡನು. ಆ ಮೂವತ್ತು ಬೆಳ್ಳಿ ನಾಣ್ಯಗಳನ್ನು ಮುಖ್ಯಯಾಜಕರ ಮತ್ತು ಪ್ರಮುಖರ ಬಳಿಗೆ ಮರಳಿ ತಂದನು. “ನಾನು ನಿರ್ದೋಷಿಯನ್ನು ಹಿಡಿದುಕೊಟ್ಟು ಪಾಪಕಟ್ಟಿಕೊಂಡೆ,” ಎಂದು ಹೇಳಿದನು. ಅದಕ್ಕೆ ಅವರು, ‘ಅದರಿಂದ ನಮಗೇನು? ಅದನ್ನು ನೀನೇ ನೋಡಿಕೋ,’ ಎಂದುಬಿಟ್ಟರು. ಆಗ ಅವನು ಆ ಹಣವನ್ನು ದೇವಾಲಯದಲ್ಲೇ ಎಸೆದು, ಹೊರಟುಹೋಗಿ ನೇಣು ಹಾಕಿಕೊಂಡು ಸತ್ತನು. ಮುಖ್ಯ ಯಾಜಕರು ಆ ಹಣವನ್ನು ತೆಗೆದುಕೊಂಡು, “ಇದು ರಕ್ತದ ಕ್ರಯ. ಇದನ್ನು ಕಾಣಿಕೆ ಕೋಶದಲ್ಲಿ ಹಾಕುವುದು ಸರಿಯಲ್ಲ,” ಎಂದುಕೊಂಡರು. ಕಡೆಗೆ ಒಂದು ನಿರ್ಧಾರಕ್ಕೆ ಬಂದರು. ಪರದೇಶಿಗಳನ್ನು ಹೂಳುವುದಕ್ಕೋಸ್ಕರ ‘ಕುಂಬಾರನ ಹೊಲ’ವನ್ನು ಆ ಹಣಕೊಟ್ಟು ಕೊಂಡುಕೊಂಡರು. ಈ ಕಾರಣದಿಂದಲೇ ಅದನ್ನು ‘ನೆತ್ತರ ನೆಲ’ ಎಂದು ಇಂದಿಗೂ ಕರೆಯಲಾಗುತ್ತಿದೆ. ಹೀಗೆ, “ಮೂವತ್ತು ಬೆಳ್ಳಿ ನಾಣ್ಯಗಳನ್ನೆತ್ತಿ ಸರ್ವೇಶ್ವರಸ್ವಾಮಿ ನನಗಿತ್ತ ಆದೇಶದಂತೆ ‘ಕುಂಬಾರನ ಹೊಲ’ ಕೊಳ್ಳಲು ಅದನ್ನು ತೆತ್ತರು. ಅಮೂಲ್ಯ ವ್ಯಕ್ತಿಗೆ ಕಟ್ಟಿದ ಬೆಲೆಯದು, ಇಸ್ರಯೇಲ ಜನರು ಒಪ್ಪಿದ ಮೊತ್ತವದು,” ಎಂದು ವಚನಿಸಿದ ಪ್ರವಾದಿ ಯೆರೆವಿೂಯನ ಮಾತುಗಳು ಈಡೇರಿದವು. ಯೇಸುಸ್ವಾಮಿಯನ್ನು ರಾಜ್ಯಪಾಲನ ಮುಂದೆ ನಿಲ್ಲಿಸಿದರು. “ನೀನು ಯೆಹೂದ್ಯರ ಅರಸನೋ?” ಎಂದು ರಾಜ್ಯಪಾಲ ಪ್ರಶ್ನಿಸಿದನು. ಅದಕ್ಕೆ ಯೇಸು, “ಅದು ನಿಮ್ಮ ಬಾಯಿಂದಲೇ ಬಂದಿದೆ,” ಎಂದು ಮರುನುಡಿದರು. ಆದರೆ ಮುಖ್ಯಯಾಜಕರೂ ಊರಪ್ರಮುಖರೂ ಮಾಡಿದ ಆಪಾದನೆಗಳಿಗೆ ಅವರು ಏನೂ ಉತ್ತರ ಕೊಡಲಿಲ್ಲ. ಆಗ ಪಿಲಾತನು, “ಇವರು ನಿನಗೆ ವಿರುದ್ಧ ಇಷ್ಟೆಲ್ಲಾ ಹೇಳುತ್ತಿರುವುದು ನಿನಗೆ ಕೇಳಿಸುತ್ತಿಲ್ಲವೆ?” ಎಂದನು. ಯೇಸು ಯಾವುದಕ್ಕೂ ಉತ್ತರ ಕೊಡಲಿಲ್ಲ. ಇದರಿಂದ ರಾಜ್ಯಪಾಲನಿಗೆ ಅತ್ಯಾಶ್ಚರ್ಯವಾಯಿತು. ಪ್ರತಿ ಪಾಸ್ಕ ಹಬ್ಬದ ಸಂದರ್ಭದಲ್ಲಿ ಜನರು ಬಯಸುವ ಒಬ್ಬ ಕೈದಿಯನ್ನು ಬಿಡುಗಡೆ ಮಾಡುವುದು ರಾಜ್ಯಪಾಲನ ಪದ್ಧತಿಯಾಗಿತ್ತು. ಆಗ ಬರಬ್ಬನೆಂಬ ಕುಪ್ರಸಿದ್ಧ ಕೈದಿಯೊಬ್ಬನು ಸೆರೆಯಲ್ಲಿದ್ದನು. ಹೀಗಿರಲಾಗಿ, ಪಿಲಾತನು ಅಲ್ಲಿ ಕೂಡಿದ್ದ ಜನರನ್ನು ಉದ್ದೇಶಿಸಿ, “ನಾನು ಯಾರನ್ನು ಬಿಡುಗಡೆ ಮಾಡಬೇಕೆನ್ನುತ್ತೀರಿ? ಬರಬ್ಬನನ್ನೋ ಅಥವಾ ‘ಕ್ರಿಸ್ತ’ ಎಂದು ಕರೆಯಲಾಗುವ ಯೇಸುವನ್ನೋ?” ಎಂದು ಕೇಳಿದನು. ಆ ಜನರು ಅಸೂಯೆಯಿಂದಲೇ ಯೇಸುವನ್ನು ಹಿಡಿದೊಪ್ಪಿಸಿದ್ದಾರೆಂದು ಅವನಿಗೆ ಅರಿವಾಗಿತ್ತು. ಅದೂ ಅಲ್ಲದೆ, ಪಿಲಾತನು ನ್ಯಾಯಪೀಠದಲ್ಲಿ ಕುಳಿತಿರುವಾಗ, “ನೀವು ಆ ಸತ್ಪುರುಷನ ತಂಟೆಗೆ ಹೋಗಬೇಡಿ; ಆತನ ದೆಸೆಯಿಂದ ಕಳೆದ ರಾತ್ರಿ ಕನಸಿನಲ್ಲಿ ಬಹಳ ಸಂಕಟಪಟ್ಟಿದ್ದೇನೆ,” ಎಂದು ಅವನ ಪತ್ನಿ ಹೇಳಿಕಳುಹಿಸಿದಳು. ಇತ್ತ, ಬರಬ್ಬನನ್ನು ಬಿಡುಗಡೆಮಾಡಿ ಯೇಸುವನ್ನು ಕೊಲ್ಲಬೇಕೆಂದು ಕೇಳಿಕೊಳ್ಳುವಂತೆ ಮುಖ್ಯ ಯಾಜಕರು ಮತ್ತು ಪ್ರಮುಖರು ಜನರನ್ನು ಪ್ರಚೋದಿಸಿದರು. ರಾಜ್ಯಪಾಲನು ಪುನಃ ಜನರ ಗುಂಪನ್ನು ನೋಡಿ, “ಈ ಇಬ್ಬರಲ್ಲಿ ಯಾರನ್ನು ನಿಮಗೆ ಬಿಟ್ಟುಕೊಡಲಿ?” ಎಂದು ಕೇಳಿದನು. ಅದಕ್ಕೆ ಅವರು “ಬರಬ್ಬನನ್ನೇ” ಎಂದು ಉತ್ತರಕೊಟ್ಟರು. “ಹಾಗಾದರೆ, ‘ಕ್ರಿಸ್ತ’ ಎಂದು ಕರೆಯಲಾಗುವ ಯೇಸುವನ್ನು ಏನುಮಾಡಲಿ?” ಎಂದು ಪಿಲಾತನು ಮರುಪ್ರಶ್ನೆ ಹಾಕಿದನು. ಅವರೆಲ್ಲರು, “ಅವನನ್ನು ಶಿಲುಬೆಗೇರಿಸಿ,” ಎಂದು ಉತ್ತರಿಸಿದರು. “ಏಕೆ? ಇವನೇನು ಕೇಡು ಮಾಡಿದ್ದಾನೆ?” ಎಂದು ಪಿಲಾತನು ಕೇಳಲು, “ಶಿಲುಬೆಗೇರಿಸಿ, ಶಿಲುಬೆಗೇರಿಸಿ,” ಎಂದು ಅವರು ಇನ್ನೂ ಹೆಚ್ಚಾಗಿ ಆರ್ಭಟಿಸಿದರು. ಕೈ ತೊಳೆದುಕೊಂಡರೆ ಕರ್ತವ್ಯ ನೀಗೀತೆ? ಪಿಲಾತನು ತನ್ನ ಪ್ರಯತ್ನದಿಂದ ಏನೂ ಫಲಿಸುತ್ತಿಲ್ಲವೆಂದೂ ಅದಕ್ಕೆ ಬದಲಾಗಿ ದಂಗೆ ಏಳುವ ಸೂಚನೆಯಿದೆಯೆಂದೂ ಮನಗಂಡನು. ಆದುದರಿಂದ ನೀರನ್ನು ತರಿಸಿ, “ಈ ನಿರಪರಾಧಿಯ ರಕ್ತಪಾತಕ್ಕೆ ಹೊಣೆ ನಾನಲ್ಲ; ಅದಕ್ಕೆ ನೀವೇ ಹೊಣೆಗಾರರು,” ಎಂದು ಹೇಳಿ ಜನರೆದುರಿಗೆ ಕೈ ತೊಳೆದುಕೊಂಡನು. ಅದಕ್ಕೆ ಜನರೆಲ್ಲರೂ, “ಅವನ ರಕ್ತ ನಮ್ಮ ಮೇಲೂ ನಮ್ಮ ಮಕ್ಕಳ ಮೇಲೂ ಇರಲಿ,” ಎಂದು ಕೂಗಿಕೊಂಡರು. ಬಳಿಕ ಪಿಲಾತನು ಅವರ ಇಷ್ಟದಂತೆಯೇ ಬರಬ್ಬನನ್ನು ಬಿಟ್ಟುಕೊಟ್ಟನು. ಯೇಸುವನ್ನು ಕೊರಡೆಗಳಿಂದ ಹೊಡೆಸಿ ಶಿಲುಬೆಗೇರಿಸಲು ಒಪ್ಪಿಸಿಬಿಟ್ಟನು. ರಾಜ್ಯಪಾಲನ ಸೈನಿಕರು ಯೇಸುಸ್ವಾಮಿಯನ್ನು ರಾಜಭವನದ ಒಳಕ್ಕೆ ಕರೆದೊಯ್ದರು. ಅವರ ಸೈನ್ಯಪಡೆಯೆಲ್ಲವು ಸ್ವಾಮಿಯನ್ನು ಸುತ್ತುಗಟ್ಟಿತು. ಸೈನಿಕರು ಅವರ ಉಡುಪನ್ನು ಸುಲಿದು, ಕಡುಗೆಂಪು ಮೇಲಂಗಿಯೊಂದನ್ನು ಅವರಿಗೆ ಹೊದಿಸಿದರು. ಮುಳ್ಳಿನಿಂದ ಒಂದು ಕಿರೀಟವನ್ನು ಹೆಣೆದು, ಅವರ ತಲೆಯ ಮೇಲೆ ಇರಿಸಿದರು. ಕೈಗೆ ಒಂದು ಕೋಲನ್ನು ಕೊಟ್ಟರು. ಆ ಮೇಲೆ ಅವರ ಮುಂದೆ ಮೊಣಕಾಲೂರಿ, “ಯೆಹೂದ್ಯರ ಅರಸನಿಗೆ ಜಯವಾಗಲಿ!” ಎಂದು ಹೇಳಿ ಪರಿಹಾಸ್ಯ ಮಾಡಿದರು. ಅವರ ಮೇಲೆ ಉಗುಳಿದರು. ಆ ಕೋಲನ್ನು ಕಿತ್ತುಕೊಂಡು ತಲೆಯ ಮೇಲೆ ಹೊಡೆದರು. ಹೀಗೆ ಪರಿಹಾಸ್ಯ ಮಾಡಿ ಆದಮೇಲೆ, ಹೊದಿಸಿದ್ದ ಮೇಲಂಗಿಯನ್ನು ತೆಗೆದುಹಾಕಿ, ಅವರ ಉಡುಪನ್ನೇ ಪುನಃ ತೊಡಿಸಿದರು. ಬಳಿಕ ಅವರನ್ನು ಶಿಲುಬೆಗೇರಿಸಲು ಕರೆದೊಯ್ದರು. ಸೈನಿಕರು ಯೇಸುಸ್ವಾಮಿಯನ್ನು ಕರೆದುಕೊಂಡು ಊರಹೊರಗೆ ಹೋಗುತ್ತಿದ್ದಾಗ ಸಿರೇನ್ ಪಟ್ಟಣದ ಸಿಮೋನ್ ಎಂಬಾತನನ್ನು ಕಂಡರು. ಯೇಸುವಿನ ಶಿಲುಬೆಯನ್ನು ಹೊತ್ತು ಬರುವಂತೆ ಅವನನ್ನು ಬಲವಂತಮಾಡಿದರು. ಅವರೆಲ್ಲರು ಗೊಲ್ಗೊಥ ಎಂಬ ಸ್ಥಳಕ್ಕೆ ಬಂದು ಸೇರಿದರು. (ಗೊಲ್ಗೊಥ ಎಂದರೆ ‘ಕಪಾಲ ಸ್ಥಳ’ ಎಂದು ಅರ್ಥ). ಅಲ್ಲಿ ಕಹಿಬೆರೆಸಿದ ದ್ರಾಕ್ಷಾರಸವನ್ನು ಯೇಸುವಿಗೆ ಕುಡಿಯಲು ಕೊಟ್ಟರು. ಅವರು ಅದನ್ನು ರುಚಿನೋಡಿ ಕುಡಿಯಲು ಇಚ್ಛಿಸಲಿಲ್ಲ. ಯೇಸುವನ್ನು ಶಿಲುಬೆಗೇರಿಸಿದ ಬಳಿಕ ಅವರ ಉಡುಪಿಗಾಗಿ ಸೈನಿಕರು ಚೀಟುಹಾಕಿ ತಮ್ಮತಮ್ಮೊಳಗೇ ಹಂಚಿಕೊಂಡರು. ಅನಂತರ ಅಲ್ಲೇ ಕುಳಿತು ಕಾವಲುಕಾಯುತ್ತಾ ಇದ್ದರು. “ಈತ ಯೇಸು, ಯೆಹೂದ್ಯರ ಅರಸ” ಎಂದು ಬರೆದಿದ್ದ ದೋಷಾರೋಪಣೆಯ ಫಲಕವನ್ನು ಅವರ ಶಿರಸ್ಸಿನ ಮೇಲ್ಭಾಗದಲ್ಲಿ ಇಟ್ಟರು. ಯೇಸುವಿನ ಬಲಗಡೆ ಒಬ್ಬನು, ಎಡಗಡೆ ಒಬ್ಬನು, ಹೀಗೆ ಇಬ್ಬರು ಕಳ್ಳರನ್ನು ಅವರ ಸಂಗಡ ಶಿಲುಬೆಗೇರಿಸಿದರು. ಪಕ್ಕದಲ್ಲಿ ಹಾದು ಹೋಗುತ್ತಿದ್ದ ಜನರು ತಲೆಯಾಡಿಸುತ್ತಾ “ಮಹಾದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಅದನ್ನು ಮತ್ತೆ ಕಟ್ಟಬಲ್ಲವನೇ, ಈಗ ನಿನ್ನನ್ನು ನೀನೇ ರಕ್ಷಿಸಿಕೋ; ನೀನು ದೇವರ ಪುತ್ರನಾದರೆ ಶಿಲುಬೆಯಿಂದ ಇಳಿದು ಬಾ,” ಎಂದು ಮೂದಲಿಸಿದರು. ಅಂತೆಯೇ ಮುಖ್ಯ ಯಾಜಕರು, ಧರ್ಮಶಾಸ್ತ್ರಿಗಳು ಮತ್ತು ಪ್ರಮುಖರು, “ಇವನು ಇತರರನ್ನು ರಕ್ಷಿಸಿದ; ಆದರೆ ತನ್ನನ್ನು ತಾನೇ ರಕ್ಷಿಸಿಕೊಳ್ಳಲು ಇವನಿಂದಾಗದು; ಇಸ್ರಯೇಲಿನ ಅರಸನಂತೆ! ಈಗ ಶಿಲುಬೆಯಿಂದ ಇಳಿದು ಬರಲಿ; ಆಗ ಇವನನ್ನು ನಂಬುತ್ತೇವೆ. ದೇವರಲ್ಲಿ ಭರವಸೆಯಿಟ್ಟಿದ್ದ; ತಾನು ‘ದೇವರ ಪುತ್ರ’ ಎಂದು ಹೇಳಿಕೊಳ್ಳುತ್ತಿದ್ದ; ದೇವರಿಗೆ ಇಷ್ಟವಾದವನು ಇವನಾಗಿದ್ದರೆ ದೇವರೇ ಬಂದು ಇವನನ್ನು ಬಿಡುಗಡೆಮಾಡಲಿ,” ಎಂದು ಅಪಹಾಸ್ಯ ಮಾಡುತ್ತಿದ್ದರು. ಯೇಸುವಿನೊಡನೆ ಶಿಲುಬೆಗೇರಿಸಲಾಗಿದ್ದ ಕಳ್ಳರು ಕೂಡ ಅದೇ ರೀತಿ ಅಣಕಿಸಿದರು. ಆಗ ನಡುಮಧ್ಯಾಹ್ನ. ಆಗಿನಿಂದ ಮೂರು ಗಂಟೆಯವರೆಗೂ ನಾಡಿನಲ್ಲೆಲ್ಲಾ ಕತ್ತಲೆ ಕವಿಯಿತು. ಸುಮಾರು ಮೂರು ಗಂಟೆಯ ಸಮಯದಲ್ಲಿ ಯೇಸುಸ್ವಾಮಿ, “ಏಲೀ, ಏಲೀ, ಲಮಾ ಸಬಕ್ತಾನಿ?” ಅಂದರೆ, “ನನ್ನ ದೇವರೇ, ನನ್ನ ದೇವರೇ, ನನ್ನನ್ನೇಕೆ ಕೈಬಿಟ್ಟಿರಿ?” ಎಂದು ಗಟ್ಟಿಯಾಗಿ ಕೂಗಿಕೊಂಡರು. ಅಲ್ಲಿ ನಿಂತಿದ್ದವರಲ್ಲಿ ಕೆಲವರು ಇದನ್ನು ಕೇಳಿ, “ಇವನು ಎಲೀಯನನ್ನು ಕರೆಯುತ್ತಿದ್ದಾನೆ,” ಎಂದರು. ಕೂಡಲೇ ಅವರಲ್ಲೊಬ್ಬನು ಓಡಿಹೋಗಿ ಸ್ಪಂಜನ್ನು ತೆಗೆದುಕೊಂಡುಬಂದು, ಅದನ್ನು ಹುಳಿರಸದಲ್ಲಿ ತೋಯಿಸಿ, ಒಂದು ಕೋಲಿನ ತುದಿಗೆ ಸಿಕ್ಕಿಸಿ, ಯೇಸುವಿಗೆ ಕುಡಿಯಲು ಕೊಟ್ಟನು. ಮಿಕ್ಕವರು, “ತಾಳು, ಇವನನ್ನು ರಕ್ಷಿಸಲು ಎಲೀಯನು ಬರುವನೋ ನೋಡೋಣ,” ಎಂದರು. ಯೇಸುಸ್ವಾಮಿ ಮತ್ತೊಮ್ಮೆ ಗಟ್ಟಿಯಾಗಿ ಕೂಗಿ ಅಸುನೀಗಿದರು.

ಆಗ ಇಗೋ, ಮಹಾದೇವಾಲಯದ ತೆರೆಯು ಮೇಲಿಂದ ಕೆಳಗಿನವರೆಗೆ ಇಬ್ಭಾಗವಾಗಿ ಸೀಳಿಹೋಯಿತು; ಭೂಮಿ ನಡುಗಿತು, ಬಂಡೆಗಳು ಸಿಡಿದವು; ಸಮಾಧಿಗಳು ತೆರೆದುಕೊಂಡವು. ನಿಧನಹೊಂದಿದ್ದ ಅನೇಕ ಭಕ್ತರ ದೇಹಗಳು ಜೀವಂತವಾಗಿ ಎದ್ದವು. ಹೀಗೆ ಎದ್ದವರು ಸಮಾಧಿಗಳಿಂದ ಹೊರಗೆ ಬಂದು, ಯೇಸು ಪುನರುತ್ಥಾನ ಹೊಂದಿದ ಬಳಿಕ ಪವಿತ್ರ ನಗರಕ್ಕೆ ಹೋಗಿ ಅನೇಕರಿಗೆ ಕಾಣಿಸಿಕೊಂಡರು. ಶತಾಧಿಪತಿ ಮತ್ತು ಅವನ ಸಂಗಡ ಯೇಸುವನ್ನು ಕಾಯುತ್ತಿದ್ದವರು ಭೂಕಂಪವನ್ನೂ ನಡೆದುದೆಲ್ಲವನ್ನೂ ಕಂಡು ಭಯಭ್ರಾಂತರಾದರು. “ಸತ್ಯವಾಗಿಯೂ ಈತ ದೇವರ ಪುತ್ರನೇ ಸರಿ,” ಎಂದರು. ಯೇಸುವನ್ನು ಗಲಿಲೇಯದಿಂದ ಹಿಂಬಾಲಿಸಿ ಬಂದಿದ್ದ ಹಾಗೂ ಅವರ ಸೇವೆ ಮಾಡಿದ ಮಹಿಳೆಯರೂ ಅಲ್ಲಿದ್ದರು. ಅವರು ಇದೆಲ್ಲವನ್ನು ದೂರದಿಂದ ನೋಡುತ್ತಾ ಇದ್ದರು. ಅವರಲ್ಲಿ ಮಗ್ದಲದ ಮರಿಯಳು, ಯಕೋಬ ಹಾಗೂ ಜೋಸೆಫನ ತಾಯಿ ಮರಿಯಳು ಮತ್ತು ಜೆಬೆದಾಯನ ಮಕ್ಕಳ ತಾಯಿ ಇದ್ದರು. ಸಂಜೆಯಾಯಿತು. ಅರಿಮತಾಯ ಊರಿನ ಜೋಸೆಫ್ ಎಂಬ ಒಬ್ಬ ಧನವಂತನು ಅಲ್ಲಿಗೆ ಬಂದನು. ಈತನು ಸಹ ಯೇಸುವಿನ ಶಿಷ್ಯನಾಗಿದ್ದನು. ಈಗ ಪಿಲಾತನ ಬಳಿಗೆ ಹೋಗಿ ಯೇಸುವಿನ ಪಾರ್ಥಿವ ಶರೀರವನ್ನು ತನಗೆ ಕೊಡಿಸಬೇಕೆಂದು ಬೇಡಿದನು. ಪಿಲಾತನು ಅದನ್ನು ಕೊಡುವಂತೆ ಅಪ್ಪಣೆಮಾಡಿದನು. ಜೋಸೆಫ್ ಅದನ್ನು ತೆಗೆದುಕೊಂಡು ಶುದ್ಧವಾದ ನಾರುಮಡಿ ವಸ್ತ್ರದಿಂದ ಸುತ್ತಿದನು. ತನಗೆಂದು ಬಂಡೆಯಲ್ಲಿ ಕೊರೆಯಲಾಗಿದ್ದ ಹೊಸ ಸಮಾಧಿಯಲ್ಲಿ ಅದನ್ನು ಇರಿಸಿದನು. ಆ ಸಮಾಧಿಯ ದ್ವಾರಕ್ಕೆ ಒಂದು ದೊಡ್ಡ ಕಲ್ಲನ್ನು ಉರುಳಿಸಿ ಹೊರಟುಹೋದನು. ಮಗ್ದಲದ ಮರಿಯಳು ಮತ್ತು ಆ ಇನ್ನೊಬ್ಬ ಮರಿಯಳು ಅಲ್ಲೇ ಸಮಾಧಿಗೆ ಎದುರಾಗಿ ಕುಳಿತುಕೊಂಡಿದ್ದರು. ಸಾವಿಗೆ ಸಮಾಧಿಯ ಸಾಕ್ಷಿ ಮಾರನೆಯ ದಿನ, ಅಂದರೆ, ‘ಸಿದ್ಧತೆಯ ದಿನ’ ಕಳೆದ ಮೇಲೆ, ಮುಖ್ಯ ಯಾಜಕರು ಮತ್ತು ಫರಿಸಾಯರು ಕೂಡಿ ಪಿಲಾತನ ಬಳಿಗೆ ಬಂದರು. “ಸ್ವಾವಿೂ, ಆ ಮೋಸಗಾರ ಬದುಕಿದ್ದಾಗ, ‘ಮೂರು ದಿನಗಳಾದ ಮೇಲೆ ನಾನು ಪುನರ್ಜೀವಂತನಾಗಿ ಏಳುವೆನು,’ ಎಂದು ಹೇಳಿದ್ದು ನಮಗೆ ಜ್ಞಾಪಕದಲ್ಲಿದೆ. ಆದ್ದರಿಂದ ಮೂರನೆಯ ದಿನದ ತನಕ ಅವನ ಸಮಾಧಿಗೆ ಭದ್ರವಾದ ಕಾವಲಿರಿಸಲು ಅಪ್ಪಣೆಯಾಗಬೇಕು; ಇಲ್ಲದಿದ್ದರೆ ಅವನ ಶಿಷ್ಯರು ಅವನನ್ನು ಕದ್ದುಕೊಂಡು ಹೋಗಿ, ಸತ್ತವನು ಬದುಕಿಬಂದಿದ್ದಾನೆ ಎಂದು ಜನರಿಗೆ ಹೇಳಬಹುದು; ಆಗ ಮೊದಲನೆಯ ಮೋಸಕ್ಕಿಂತ ಕಡೆಯದೇ ಕಡುಮೋಸವಾದೀತು,” ಎಂದು ಕೇಳಿಕೊಂಡರು. ಪಿಲಾತನು ಅವರಿಗೆ, “ಕಾವಲುಗಾರರು ಇದ್ದಾರಲ್ಲವೆ? ಹೋಗಿ ನಿಮಗೆ ಬೇಕಾದಂತೆ ಭದ್ರಪಡಿಸಿಕೊಳ್ಳಿ” ಎಂದನು.  ಅವರು ಹೋಗಿ, ಸಮಾಧಿಯ ಕಲ್ಲಿಗೆ ಮುದ್ರೆ ಹಾಕಿ, ಕಾವಲಿರಿಸಿ, ಸಮಾಧಿಯನ್ನು ಸುಭದ್ರ ಪಡಿಸಿದರು.

ಮನಸ್ಸಿಗೊಂದಿಷ್ಟು : ಯೇಸುಕ್ರಿಸ್ತರು ಜೆರುಸಲೇಮನ್ನು ಪ್ರವೇಶಿಸಿದ ಘಟನೆ ಮೈನವಿರೇಳಿಸುವಂಥದ್ದು. ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನ ಯೇಸುವಿಗೆ ಕೊಟ್ಟ ಸ್ವಾಗತ ಐತಿಹಾಸಿಕ. ಯೇಸು ಬದುಕಿದ್ದ ಸುಮಾರು 160 ವರ್ಷಗಳ ಹಿಂದೆ ತಮ್ಮ ವೈರಿಗಳನ್ನು ಬಗ್ಗು ಬಡಿದ ಸೈಮನ್ ಮೆಕಾಭಿಯಸ್ ಎಂಬ ಸೈನ್ಯಾಧಿಕಾರಿಗೆ ಇದೇ ರೀತಿಯ ಸ್ವಾಗತವನ್ನು ಜನ ಜೆರುಸಲೇಮಿನಲ್ಲಿ ಕೊಟ್ಟಿದ್ದರು. ಯೇಸು ಸಹಾ ತಮ್ಮನ್ನು ಕಷ್ಟಗಳಿಂದ ಬಿಡಿಸುವ ಅದೇ ರೀತಿಯ ಕ್ರಾಂತಿಕಾರಿ ರಾಜ ಎಂಬ ಬಲವಾದ ನಂಬಿಕೆಯಿಂದಲೇ, ಒಬ್ಬ ರಾಜನಿಗೆ ಕೊಡುವ ಸ್ವಾಗತವನ್ನು ಗೌರವವನ್ನು ಯೇಸುವಿಗೆ ನೀಡುತ್ತಾರೆ.

ಆದರೆ ಯೇಸುವಿನ ಆಶಯವೇ ಬೇರೆಯಾಗಿತ್ತು ಯೇಸು ಒಂದು ಕತ್ತೆಯ ಮೇಲೆ ಶಾಂತಿದೂತನಾಗಿ ಪ್ರವೇಶಿಸುತ್ತಾರೆ. ಅಂದಿನ ಸಮಾಜದಲ್ಲಿ ಕತ್ತೆಗೆ ಮಹತ್ವದ ಸ್ಥಾನವಿತ್ತು. ಯುದ್ಧಕ್ಕೆ ಹೊರಟ ರಾಜ ಕುದುರೆಯ ಮೇಲೂ, ಶಾಂತಿಯನ್ನು ಸಾರುವ ರಾಜ ಕತ್ತೆಯ ಮೇಲೆ ಕೂತು ಸಾಗುವ ಪದ್ಧತಿಯಿತ್ತು. ಜನ ಅಂದು ಸಂಭ್ರಮಿಸಿದರೂ, ಕೆಲವೇ ದಿನಗಳ ಅಂತರದಲ್ಲಿ ಯೇಸು ನಿಸ್ಸಹಾಯಕರಾಗಿ ಪಿಲಾತನ ಎದುರು ನಿಂತಿರುವುದನ್ನು ಕಂಡು ಅವರ ನಿರೀಕ್ಷೆಗೆ ಪೆಟ್ಟು ಬಿತ್ತು. ಇಂದು ಗರಿಗಳನ್ನು ಹಿಡಿದು ಸ್ತುತಿಗೀತೆ ಹಾಡುತ್ತಿರುವ ನಾವು ಯೇಸುವಿನಿಂದ ಏನನ್ನು ನಿರೀಕ್ಷಿಸುತ್ತಿದ್ದೇವೆ?

ಹೊಸಾನ್ನ  ಎಂಬುದರ ಮೂಲ ಅರ್ಥ ’ರಕ್ಷಿಸು’  ಎಂದು ಪಂಡಿತರ ಅಭಿಪ್ರಾಯ. ರೋಗದ ಭಯದ ಮೇಲೆ ಮನೆಯಲ್ಲಿರುವ  ಸಂದರ್ಭದಲ್ಲಿ ಹೊಸಾನ್ನದ ’ರಕ್ಷಿಸು’ ಎಂಬ ಮೊತೆ ನಮ್ಮದಾಗಲಿ, ದೇವಾಲಯಕ್ಕೆ ಹೋಗಲು ಸಾಧ್ಯವಾಗಿಲ್ಲದಿರಿವುದರಿಂದ ನಮ್ಮ ಮನೆಗೇ ಮನಕ್ಕೆ ಯೇಸುವನ್ನು ಸಂಭ್ರಮದಿಂದ ಸ್ವಾಗತಿಸೋಣ.

ಪ್ರಶ್ನೆ :  ರಕ್ಷಿಸು ಎಂಬ ನಮ್ಮ ಮೊರೆ ಯಾವುದೆಲ್ಲದರಿಂದ?

ಪ್ರಭುವೇ,
ಜೆರುಸಲೇಮ್ ದ್ವಾರಕ್ಕೆ
ಬಂದಿರಿ ಗರಿ ಜಯಘೋಷಗಳ 
ನಡುವೆ ರಾಜನಂತೆ
ದಿನಗಳಂತರದಲ್ಲಿನಿಂತಿರಿ  
ಮೌನದಿ ಪಿಲಾತನ 
ಮುಂದೆ ಅಪರಾಧಿಯಂತೆ
ಹೊತ್ತಿರಿ ಶಿಲುಬೆಯ 
ಕಲ್ವಾರಿಯೆಡೆಗೆ ದೀನನಂತೆ
ತೂಗಿ ಮಡಿದಿರಿ ಘೋರ
ನೋವಿನಿಂದ ಕಳ್ಳನಂತೆ
ನಾನಾದರೋ ಇರುವೆ
ಏನೂ ಅಗಿಲ್ಲದಂತೆ
ಬನ್ನಿರಿ ಈ ಮನದ ದ್ವಾರಕ್ಕೆ
ನನ್ನ ಪಶ್ಚಾತ್ತಾಪದ
ಗರಿಗಳ ನಡುವೆ
ನಿಮ್ಮೊಡನೆ ನಾನೂ 
ಬರುವೆ ಸಿಮೋನನಂತೆ



No comments:

Post a Comment