ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

30.03.22 - "ಒಂದು ವೇಳೆ ತಾಯಿ ಮರೆತರೂ ನಾ ನಿನ್ನನ್ನು ಮರೆಯೆ."

ಮೊದಲನೇ ವಾಚನ: ಯೆಶಾಯ  49:8-15 

ತಮ್ಮ ಪ್ರಜೆಗೆ ಇಂತೆನ್ನುತ್ತಾರೆ ಸರ್ವೇಶ್ವರಸ್ವಾಮಿ: "ನಿನಗೆ ದಯಪಾಲಿಸಿರುವೆನು ಸದುತ್ತರವನ್ನು ಪ್ರಸನ್ನತೆಯ ಕಾಲದಲಿ ಸಹಾಯ ನೀಡುವೆನು ರಕ್ಷಣೆಯ ದಿನದಲಿ ನಿನ್ನನ್ನು ಕಪಾಡಿ ನೇಮಿಸುವೆನು ಜನತೆಗೆ ಸ್ಥಿರ ಒಡಂಬಡಿಕೆಯಾಗಿ. "ಹೊರಟು ಹೋಗಿರಿ" ಎನ್ನುವೆನು ಸೆರೆಯಾಳುಗಳಿಗೆ "ಬೆಳಕಿಗೆ ಬನ್ನಿರಿ" ಎನ್ನುವೆನು ಕತ್ತಲಲ್ಲಿರುವವರಿಗೆ ಪಾಳುಬಿದ್ದ ಸೊತ್ತುಗಳನ್ನು ಹಂಚಿಕೊಡುವೆನು ಅವರಿಗೆ. ದೇಶವನ್ನು ಪುನಃ ತರುವೆನು ಪೂರ್ವಸ್ಥಿತಿಗೆ ದಾರಿಯುದ್ಧಕ್ಕೂ ಆಹಾರ ಒದಗಿಸುವೆನು ನನ್ನ ಪ್ರಜೆಗೆ ಬೋಳು ಬೆಟ್ಟಗಳೆಲ್ಲ ಹುಲ್ಲುಗಾವಲುಗಳಾಗುವುವು ನನ್ನಾ ಮಂದೆಗೆ. ಇರದು ಅವರಿಗೆ ಹಸಿವು ಬಾಯಾರಿಕೆ, ಬಡಿಯವು ಅವರಿಗೆ ಬಿಸಿಲುಬೇಗೆ. ನಡೆಸುವೆನು ನೀರುಕ್ಕುವ ಚಿಲುಮೆಗಳ ಬಳಿಗೆ, ಕರುಣಾಕರನು  ಅವರಿಗೆ. ಸಮದಾರಿಯಾಗಿಸುವೆನು ನನ್ನ ಬೆಟ್ಟಗುಡ್ಡಗಳನು, ಎತ್ತರಿಸುವೆನು ನನ್ನ ರಾಜಮಾರ್ಗಗಳನು. ನೋಡಿ, ಬರುತಿಹರು ನನ್ನ ಜನರು ದೂರದಿಂದ ಹೌದು, ಬರುತಿಹರು ಉತ್ತರ ಪಶ್ಚಿಮದಿಂದ, ದಕ್ಷಿಣದ ಆ ಆಶ್ವಾನ್ ನಾಡಿನಿಂದ. ಹರ್ಷಧ್ವನಿಗೈ ಆಕಾಶವೇ, ಉಲ್ಲಾಸಪಡು ಪೊಡವಿಯೇ, ತಟ್ಟಾಡಿರಿ ಬೆಟ್ಟಗಡ್ಡಗಳೇ, ಏಕೆನೆ ಸಂತೈಸಿಹನು ಸರ್ವೇಶ್ವರ ತನ್ನ ಪ್ರಜೆಯನು, ಕನಿಕರಿಸಿಹನು ಶೋಷಿತರಾದ ತನ್ನ ಜನರನು. ಜೆರುಸಲೇಮಿನ ಜನರಾದರೋ ಇಂತೆಂದರು: ಸರ್ವೇಶ್ವರ ನಮ್ಮನ್ನು ಕೈ ಬಿಟ್ಟಿಹನು, ಆ ಸ್ವಾಮಿ ನಮ್ಮನ್ನು ಮರೆತುಬಿಟ್ಟಿಹನು." ಹೆತ್ತ ತಾಯಿಗೆ ತನ್ನ ಕಂದನ ಪ್ರೀತಿ ಬತ್ತಿಹೋಗುವುದುಂಟೆ? ಆಕೆ ತನ್ನ ಮೊಲೆಗೂಸನ್ನು ಮರೆತುಬಿಡುವುದುಂಟೆ? ಒಂದು ವೇಳೆ ಆಕೆ ಮರೆತರೂ ನಾ ನಿನ್ನನ್ನು ಮರೆಯೆ." 

ಕೀರ್ತನೆ: 145:8-9, 13-14, 17-18 
ಶ್ಲೋಕ: ಪ್ರಭು ದಯಾನಿಧಿ, ಕೃಪಾಸಾಗರನು ಸಹನಶೀಲನು, ಪ್ರೀತಿಪೂರ್ಣನು 

ಶುಭಸಂದೇಶ: ಯೊವಾನ್ನ 5:17-30 

ಯೆಹೂದ್ಯರ ಆಕ್ಷೇಪಣೆಗೆ ಉತ್ತರವಾಗಿ ಯೇಸು, "ನನ್ನ ಪಿತ ಸತತವೂ ಕಾರ್ಯನಿರತರು. ಅವರಂತೆಯೇ ನಾನು ಸದಾ ಕಾರ್ಯನಿರತನಾಗಿದ್ದೇನೆ," ಎಂದು ನುಡಿದರು. ಯೇಸು ಸಬ್ಬತ್ತಿನ ನಿಯಮವನ್ನು ಮುರಿದುದೇ ಅಲ್ಲದೆ, ದೇವರನ್ನು ತನ್ನ ಪಿತನೆಂದು ಹೇಳಿಕೊಳ್ಳುತ್ತಾ, ತನ್ನನ್ನೇ ದೇವರಿಗೆ ಸರಿಸಮ ಮಾಡಿಕೊಳ್ಳುತ್ತಿದ್ದಾನೆಂದು ಯೆಹೂದ್ಯರು ಅವರನ್ನು ಕೊಲ್ಲಲು ಮತ್ತಷ್ಟು ಹವಣಿಸಿದರು. ಯೇಸುಸ್ವಾಮಿ ಅವರನ್ನು ಉದ್ದೇಶಿಸಿ ಹೀಗೆಂದರು: ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಪುತ್ರನು ತನ್ನಷ್ಟಕ್ಕೆ ತಾನೇ ಏನೂ ಮಾಡಲಾರನು; ಪಿತನು ಮಾಡುವುದನ್ನು ಕಂಡು ತಾನೂ ಹಾಗೆಯೇ ಮಾಡುತ್ತಾನೆ ಪಿತನು ಮಾಡುವುದನ್ನೇ ಪುತ್ರನೂ ಮಾಡುವುದು. ಪುತ್ರನೆಂದರೆ ಪಿತನಿಗೆ ಪ್ರೀತಿ. ಆದುದರಿಂದ ತಾವು ಮಾಡುವುದನ್ನೆಲ್ಲಾ ಪುತ್ರನಿಗೆ ತೋರಿಸುತ್ತಾರೆ. ಇದಲ್ಲದೆ ಇನ್ನೂ ಎಷ್ಟೋ ಮಿಗಿಲಾದ ಕಾರ್ಯಗಳನ್ನು ಪುತ್ರನಿಗೆ ತೋರಿಸುತ್ತಾರೆ. ಅವುಗಳನ್ನು ಕಂಡು ನೀವು ಬೆರಗಾಗುವಿರಿ. ಪಿತನು ಸತ್ತವರನ್ನು ಎಬ್ಬಿಸಿ ಅವರಿಗೆ ಜೀವವನ್ನು ಕೊಡುವಂತೆಯೇ ಪುತ್ರನು ತನಗೆ ಬೇಕಾದವರಿಗೆ ಜೀವವನ್ನು ಕೊಡುತ್ತಾನೆ. ಅಲ್ಲದೆ, ಪಿತನು ಯಾರನ್ನೂ ತೀರ್ಪಿಗೆ ಗುರಿಮಾಡುವುದಿಲ್ಲ. ತೀರ್ಪುಕೊಡುವ ಅಧಿಕಾರವನ್ನೆಲ್ಲಾ ಅವರು ಪುತ್ರನಿಗೆ ಕೊಟ್ಟಿದ್ದಾರೆ. ಏಕೆಂದರೆ, ತಮ್ಮನ್ನು ಗೌರವಿಸುವಂತೆಯೇ ಜನರೆಲ್ಲರು ಪುತ್ರನನ್ನು ಗೌರವಿಸಬೇಕೆಂಬುದು ಅವರ ಬಯಕೆ. ಪುತ್ರನನ್ನು ಗೌರವಿಸದವನು ಆತನನ್ನು ಕಳುಹಿಸಿದ ಪಿತನನ್ನು ಗೌರವಿಸುವುದಿಲ್ಲ. ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನನ್ನ ಮಾತಿಗೆ ಕಿವಿಗೊಟ್ಟು ನನ್ನನ್ನು ಕಳುಹಿಸಿದ ಆತನಲ್ಲಿ ವಿಶ್ವಾಸವಿಡುವವನು ನಿತ್ಯಜೀವವನ್ನು ಪಡೆದಿರುತ್ತಾನೆ. ಅವನು ಖಂಡನೆಗೆ ಗುರಿಯಾಗನು. ಅವನು ಈಗಾಗಲೇ ಸಾವನ್ನು ದಾಟಿ ಜೀವವನ್ನು ಸೇರಿರುತ್ತಾನೆ. ಸತ್ಯವಾಗಿ ನಿಮಗೆ ಮತ್ತೆ ಹೇಳುತ್ತೇನೆ; ಸತ್ತವರು ದೇವರ ಪುತ್ರನ ಧ್ವನಿಯನ್ನು ಕೇಳುವ ಕಾಲ ಬರುವುದು; ಈಗಾಗಲೇ ಬಂದಿದೆ; ಈ ಧ್ವನಿಯನ್ನು ಕೇಳುವವರು ಜೀವಿಸುವರು. ಪಿತನು ತಾನೇ ಸ್ವಯಂ ಜೀವ ಮೂಲವಾಗಿರುವಂತೆ ಪುತ್ರನು ಸಹ ಸ್ವಯಂ ಜೀವ ಮೂಲವಾಗಿರುವಂತೆ ಕರುಣಿಸಿದ್ದಾರೆ. ಅದೂ ಅಲ್ಲದೆ, ಆತನು ನರಪುತ್ರನಾಗಿರುವ ಕಾರಣ ತೀರ್ಪನ್ನು ಕೊಡುವ ಹಕ್ಕನ್ನು ಆತನಿಗೇ ದಯಪಾಲಿಸಿದ್ದಾರೆ. ಇದನ್ನು ಕೇಳಿ ನೀವು ಬೆರಗಾಗುವುದು ಬೇಡ. ಸತ್ತ ಸಮಾಧಿಯಲ್ಲಿರುವವರೆಲ್ಲರೂ ಆತನ ಧ್ವನಿಯನ್ನು ಕೇಳುವ ಕಾಲ ಬರುವುದು. ಹಾಗೆ ಕೇಳಿದವರೆಲ್ಲಾ ಸಮಾಧಿಯನ್ನು ಬಿಟ್ಟು ಎದ್ದುಬರುವರು: ಸಜ್ಜನರು ಸಜೀವಕ್ಕಾಗಿ ಪುನರುತ್ದಾನರಾಗುವರು, ದುರ್ಜನರು ದಂಡನಾ ತೀರ್ಪಿಗಾಗಿ ಪುನರುತ್ದಾನರಾಗುವರು. ನನ್ನಷ್ಟಕ್ಕೇ ನಾನೇ ಏನೂ ಮಾಡಲಾರೆ. ಪಿತನು ನನಗೆ ತಿಳಿಸಿದ ಪ್ರಕಾರ ನಾನು ತೀರ್ಪುಕೊಡುತ್ತೇನೆ. ಈ ನನ್ನ ತೀರ್ಪು ನ್ಯಾಯ ಬದ್ಧ ಆದುದು. ಏಕೆಂದರೆ, ನಾನು ನನ್ನ ಸ್ವಂತ ಇಚ್ಛೆಯನ್ನು ನೆರವೇರಿಸದೆ ಪಿತನ ಚಿತ್ತವನ್ನೇ ನೆರವೇರಿಸಲು ಆಶಿಸುತ್ತೇನೆ.

ಮನಸಿಗೊಂದಿಷ್ಟು : ಇಲ್ಲಿ ಯೇಸು ತಮ್ಮ ಹಾಗೂ ಪಿತ ದೇವರ ನಡುವಿನ ಸಂಬಂಧದ ಬಗ್ಗೆ ಅತ್ಯಂತ ಪ್ರಭಾವಶಾಲಿಯಾಗಿ ಮಾತನಾಡುತ್ತಾರೆ. ತಮಗೆ ಪಿತ ದೇವರು ನೀಡಿರುವ ಪರಮ ಅಧಿಕಾರದ ಬಗ್ಗೆ ಮಾತನಾಡುತ್ತಲೇ ತಾನು ತನ್ನ ಇಚ್ಛೆಗಿಂತಲೂ ಪಿತ ದೇವರ ಇಚ್ಛೆಯನ್ನೇ ಬಯಸುತ್ತೇನೆ ಎನ್ನುತ್ತಾರೆ. ನಮ್ಮ ಬಾಳಿನಲ್ಲಿ ನಾವು ದೇವರ ಚಿತ್ತ ಬಯಸಿದ್ದೇ ಆದರೆ, ಯೇಸು ಮತ್ತು ದೇವರ ಅವಿನಾಭಾವ ಸಂಬಂಧ ನಮ್ಮದೂ ದೇವರದೂ ಆಗಬಹುದು.

ಪ್ರಶ್ನೆ : ಸಜ್ಜನರಿಗೆ ಸಜೀವ  ನೀಡುವ ಪುನರುತ್ಥಾನದಲ್ಲಿ ನಮ್ಮ ನಂಬಿಕೆ ಎಷ್ಟು? 

No comments:

Post a Comment