ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

13.03.22 - "ಈತನು ನನ್ನ ಪುತ್ರನು; ನಾನು ಆರಿಸಿಕೊಂಡವನು, ಈತನ ಮಾತಿಗೆ ಕಿವಿಗೊಡಿರಿ,"

ಮೊದಲನೇ ವಾಚನ: ಆದಿಕಾಂಡ 15:5-12, 17-18


ಸರ್ವೇಶ್ವರ ಬಳಿಕ ಅಬ್ರಾಮನನ್ನು ಹೊರಗೆ ಕರೆತಂದು, " ಆಕಾಶದ ಕಡೆಗೆ ನೋಡು. ಆ ನಕ್ಷತ್ರಗಳನ್ನು ನಿನ್ನಿಂದಾದರೆ ಲೆಕ್ಕಿಸು. ನಿನ್ನ ಸಂತಾನವು ಅಷ್ಟು ಅಸಂಖ್ಯಾತವಾಗುವುದು!" ಎಂದರು. ಅಬ್ರಾಮನು ಸರ್ವೇಶ್ವರ ಸ್ವಾಮಿಯಲ್ಲಿ ವಿಶ್ವಾಸವಿಟ್ಟನು. ಅವರು ಅವನ ವಿಶ್ವಾಸವೇ ಸರಿಯಾದ ಸಂಬಂಧವೆಂದು ಪರಿಗಣಿಸಿದರು. ಸರ್ವೇಶ್ವರ ಬಳಿಕ ಅಬ್ರಾಮನಿಗೆ ಇಂತೆಂದರು: "ಈ ನಾಡನ್ನು ನಿನಗೆ ಸೊತ್ತಾಗಿ ಕೊಡಬೇಕೆಂದು ಬಾಬಿಲೋನಿನಲ್ಲಿರುವ ಊರ್ ಪಟ್ಟಣದಿಂದ ನಿನ್ನನ್ನು ಬರಮಾಡಿದ ಸರ್ವೇಶ್ವರ ನಾನೇ," ಎಂದರು. ಅದಕ್ಕೆ ಅಬ್ರಾಮನು, "ಸರ್ವೇಶ್ವರ, ಇದು ನನ್ನ ಸೊತ್ತು ಎಂದು ತಿಳಿದುಕೊಳ್ಳುವುದು ಹೇಗೆ?" ಎಂದನು. ಸರ್ವೇಶ್ವರ ಪ್ರತ್ಯುತ್ತರವಾಗಿ, "ನೀನು ಮೂರು ಮೂರು ವರ್ಷದ ಒಂದು ಕಡಸನ್ನು, ಒಂದು ಆಡನ್ನು, ಒಂದು ಟಗರನ್ನು, ಒಂದು ಬೆಳವಕ್ಕಿಯನ್ನು ಹಾಗು ಒಂದು ಮರಿ ಪಾರಿವಾಳವನ್ನು ತೆಗೆದುಕೊಂಡು ಬಾ," ಎಂದರು. ಅಬ್ರಾಮನು ಅವುಗಳನ್ನೆಲ್ಲಾ ತೆಗೆದುಕೊಂಡು ಬಂದು ಆ ಪ್ರಾಣಿಗಳನ್ನು ಕಡಿದು, ಎರಡೆರಡು ಹೋಳುಮಾಡಿ, ತುಂಡಿಗೆ ತುಂಡನ್ನು ಎದುರಾಗಿಟ್ಟನು. ಪಕ್ಷಿಗಳನ್ನು ಮಾತ್ರ ಕಡಿಯಲಿಲ್ಲ. ಆ ಪ್ರಾಣಿಗಳ ತುಂಡುಗಳ ಮೇಲೆ ರಣ ಹದ್ದುಗಳು ಎರಗಿದಾಗ - ಅಬ್ರಾಮನು ಅವುಗಳನ್ನು ಓಡಿಸಿಬಿಟ್ಟನು. ಹೊತ್ತು ಮುಳುಗುತ್ತಿದ್ದಾಗ ಅಬ್ರಾಮನಿಗೆ ಗಾಢನಿದ್ರೆ ಹತ್ತಿತು. ಭೀಕರವಾದ ಕಾರ್ಗತ್ತಲು ಅವನನ್ನು ಕವಿಯಿತು. ಹೊತ್ತು ಮುಳುಗಿ ಕಾರ್ಗತ್ತಲಾದಾಗ ಇಗೋ, ಹೊಗೆಯಾಡುವ ಒಲೆಯೊಂದು ಹಾಗು ಉರಿಯುವ ದೀವಟಿಗೆಯೊಂದು ಕಾಣಿಸಿಕೊಂಡು ಆ ತುಂಡುಗಳ ನಡುವೆ ಹಾದುಹೋದವು. ಸರ್ವೇಶ್ವರ ಅಂದೇ ಅಬ್ರಾಮನ ಸಂಗಡ ಒಂದು ಒಡಂಬಡಿಕೆಯನ್ನು ಮಾಡಿಕೊಂಡರು: "ಈಜಿಪ್ಟಿನ ನದಿಯಿಂದ ಯೂಫ್ರೆಟಿಸ್ ಮಹಾನದಿಯವರೆಗೆ, ಕೊಡುವೆನು ಈ ನಾಡೆಲ್ಲವನ್ನು ನಿನ್ನ ಸಂತತಿಯವರಿಗೆ,"

ಕೀರ್ತನೆ: 27:1, 7-8, 8-9, 13-14
ಶ್ಲೋಕ: ನನಗೆ ಬೆಳಕು ರಕ್ಷೆ ಪ್ರಭುವೇ

ಎರಡನೇ ವಾಚನ; ಫಿಲಿಪ್ಪಿಯರಿಗೆ 3:17-4:1

 ಸಹೋದರರೇ, ನೀವು ನನ್ನನ್ನು ಅನುಸರಿಸಿ. ನಮ್ಮಂತೆ ಆದರ್ಶಜೀವನ ನಡೆಸುವವರನ್ನು ಅನುಸರಿಸಿ ಬಾಳಿರಿ. ಕ್ರಿಸ್ತಯೇಸುವಿನ ಶಿಲುಬೆಗೆ ವಿರೋಧವಾಗಿ ನಡೆಯುವವರು ಅನೇಕರಿದ್ದಾರೆ. ಇದನ್ನು ನಾನು ಹಲವಾರು ಸಾರಿ ತಿಳಿಸಿರುವಂತೆ ಈಗಲೂ ಅತೀವ ದುಃಖದಿಂದ ಹೇಳುತ್ತಿದ್ದೇನೆ. ಹೊಟ್ಟೆಯೇ ಅವರ ದೇವರು, ನಾಚಿಕೆಪಡಿಸುವ ಕಾರ್ಯಗಳಲ್ಲಿಯೇ ಅವರಿಗೆ ಹೆಮ್ಮೆ, ನಶ್ವರವಾದ ವಿಷಯಗಳಲ್ಲಿಯೇ ಅವರಿಗೆ ವ್ಯಾಮೋಹ. ಹೀಗಾಗಿ, ವಿನಾಶವೇ ಅವರ ಅಂತ್ಯ. ನಾವಾದರೋ ಸ್ವರ್ಗಸಾಮ್ರಾಜ್ಯದ ಪ್ರಜೆಗಳು, ಉದ್ಧರಕರಾದ ಪ್ರಭು ಯೇಸುಕ್ರಿಸ್ತರು ಪನರಾಗಮಿಸುವುದು ಅಲ್ಲಿಂದಲೇ ಎಂದು ಎದುರುನೋಡುತ್ತಿದ್ದೇವೆ. ಅವರು ಸಮಸ್ತವನ್ನು ಸ್ವಾಧೀನಪಡಿಸಿಕೊಳ್ಳುವರು; ಸಶ್ವರವಾದ ನಮ್ಮ ದೀನ ದೇಹಗಳನ್ನು ತಮ್ಮ ಶಕ್ತಿಯಿಂದ ರೂಪಾಂತರಗೊಳಿಸಿ ತಮ್ಮ ತೇಜೋಮಯ ಶರೀರದಂತೆ ಮಾಡುವರು. ಹೀಗಿರಲಾಗಿ ಒಲವಿನ ಸಹೋದರರೇ, ನನ್ನ ಅತಿ ಪ್ರಿಯರೇ, ಆಪ್ತರೇ, ನನ್ನ ಮುದವೂ ಮುಕುಟವೂ ಆದವರೇ, ಪ್ರಭುವಿನಲ್ಲಿ ದೃಢ ವಿಶ್ವಾಸಿಗಳಾಗಿ ಬಾಳಿರಿ.

ಶುಭಸಂದೇಶ: ಲೂಕ 9:28-36

ಪೇತ್ರ, ಯೊವಾನ್ನ ಮತ್ತು ಯಕೋಬ ಇವರನ್ನು ತನ್ನೊಡನೆ ಕರೆದುಕೊಂಡು ಯೇಸುಸ್ವಾಮಿ ಪ್ರಾರ್ಥನೆ ಮಾಡಲು ಬೆಟ್ಟವನ್ನು ಹತ್ತಿದರು. ಪ್ರಾರ್ಥನೆ ಮಾಡುವ ಸಮಯದಲ್ಲಿ ಯೇಸುವಿನ ಮುಖಚರ್ಯೆಯು ಮಾರ್ಪಟ್ಟಿತು. ಅವರ ಉಡುಪು ಬೆಳ್ಳಗೆ ಪ್ರಜ್ವಲಿಸಿತು. ಇದ್ದಕಿದ್ದ ಹಾಗೆ ಮೋಶೆ ಮತ್ತು ಎಲೀಯ ಎಂಬ ಇಬ್ಬರು ಪ್ರವಾದಿಗಳು ಅವರೊಡನೆ ಮಾತನಾಡುತ್ತಿದ್ದರು. ದಿವ್ಯ ವೈಭವದಿಂದ ಕಂಗೊಳಿಸುತ್ತಿದ್ದ ಇವರಿಬ್ಬರು ಯೇಸು ಜೆರುಸಲೇಮಿನಲ್ಲಿ ಪ್ರಾಣ ತ್ಯಾಗಮಾಡಿ ದೈವೇಚ್ಛೆಯನ್ನು ನೆರವೇರಿಸಲಿದ್ದ ವಿಷಯವಾಗಿ  ಸಂಭಾಷಿಸುತ್ತಿದ್ದರು. ಗಾಢ ನಿದ್ರೆಯಲ್ಲಿದ್ದ ಪೇತ್ರ ಮತ್ತು ಸಂಗಡಿಗರು ಎಚ್ಚೆತ್ತಾಗ ಯೇಸುವಿನ ಮಹಿಮೆಯನ್ನೂ ಅವರೊಡನೆ ನಿಂತಿದ್ದ ಆ ಇಬ್ಬರನ್ನೂ ಕಂಡರು. ಅವರಿಬ್ಬರು ಯೇಸುವನ್ನು ಬಿಟ್ಟುಹೋಗುತ್ತಿರುವಾಗ, ಪೇತ್ರನು ಯೇಸುವಿಗೆ, "ಗುರುದೇವಾ, ನಾವು ಇಲ್ಲೇ ಇರುವುದು ಒಳ್ಳೆಯದು; ಅಪ್ಪಣಿಯಾಗಲಿ, ಮೂರು ಗುಡಾರಗಳನ್ನು ಕಟ್ಟುವೆವು - ತಮಗೊಂದು, ಮೋಶೆಗೊಂದು ಮತ್ತು ಎಲೀಯನಿಗೊಂದು," ಎಂದನು. ತಾನು ಏನು ಹೇಳುತ್ತಿರುವೆನೆಂದೇ ಪೇತ್ರನು ಗ್ರಹಿಸಲಿಲ್ಲ. ಆತನು ಇದನ್ನು ಹೇಳುತ್ತಿದ್ದ ಹಾಗೆ ಮೇಘವೊಂದು ಬಂದು ಅವರನ್ನಾವರಿಸಿತು. ಆ ಮೇಘದಲ್ಲಿ ಅವರು ಅದೃಶ್ಯರಾದಾಗ ಶಿಷ್ಯರು ದಿಗಿಲುಗೊಂಡರು. ಅದರೊಳಗಿಂದ, "ಈತನು ನನ್ನ ಪುತ್ರನು; ನಾನು ಆರಿಸಿಕೊಂಡವನು ಈತನ ಮಾತಿಗೆ ಕಿವಿಗೊಡಿರಿ," ಎಂಬ ವಾಣಿ ಕೇಳಿಸಿತು. ಆ ವಾಣಿ ಆದಮೇಲೆ ಕಾಣಿಸಿಕೊಂಡವರು ಯೇಸು ಮಾತ್ರ. ಶಿಷ್ಯರು ತಾವು ನೋಡಿದ್ದನ್ನು ಕುರಿತು ಆ ದಿನಗಳಲ್ಲಿ ಏನನ್ನೂ ಹೇಳದೆ, ಯಾರಿಗೂ ತಿಳಿಸದೆ ತತ್ಕಾಲ ಮೌನದಿಂದ ಇದ್ದರು.


ಮನಸಿಗೊಂದಿಷ್ಟು : ಗಾಢ ನಿದ್ರೆಯಲ್ಲಿದ್ದ ಶಿಷ್ಯರು ಎಚ್ಚೆತ್ತಾಗ ಕ್ರಿಸ್ತನ ಮಹಿಮೆಯನ್ನು ನೋಡಿದರು ಎನ್ನುತ್ತದೆ ಇಂದಿನ ಶುಭ ಸಂದೇಶ. ನಮ್ಮ ಜೀವನದಲ್ಲೂ ಅನೇಕ ಸಲ ನಾವು ಕ್ರಿಸ್ತನ ಮಹಿಮೆಯನ್ನು ಕಾಣಲು ನಮ್ಮ ಅಧ್ಯಾತ್ಮಿಕ ನಿದ್ದೆಯೇ ಅಡ್ಡಿಯಾಗುತ್ತದೆ. ಗೊಂದಲಗಳು ನಮ್ಮನ್ನು ಕಾಡಿದಾಗ ದೇವರ ಮಾತು ಕೇಳಲು ನಮ್ಮ ಮನಸು ಜಾಗೃತವಾಗಿರಬೇಕಾಗುತ್ತದೆ. ಶುಭ ಸಂದೇಶದಲ್ಲಿ ಶಿಷ್ಯರಿಗೆ ಕೇಳಿದ ವಾಣಿಯಂತೆ ದೈವ ವಾಕ್ಯಗಳು ನಮ್ಮನ್ನು ಮುನ್ನಡೆಸುತ್ತಿರಲಿ ಎಂಬುದು ನಮ್ಮ ಗುರಿಯಾಗಲಿ.

ಪ್ರಶ್ನೆ :ಯೇಸುವಿನ ಈ ರೂಪಾಂತರದ ಘಟನೆ ನಮ್ಮೊಳಗಿನ ರೂಪಾಂತರಕ್ಕೆ ಸ್ಪೂರ್ತಿಯಾಗಬಲ್ಲದೇ?


ತಪಸ್ಸು ಕಾಲದಲ್ಲಿನ ಇಲ್ಲಿಯವರೆಗಿನ ಪ್ರಶ್ನೆಗಳು 


Ø   ತಪಸ್ಸು ಕಾಲದಲ್ಲಿ ನಮ್ಮ ಅಧ್ಯಾತ್ಮಿಕ ಗುರಿಗಳೇನು?

Ø  ಶಿಲುಬೆ ಹೊತ್ತು ಹಿಂಬಾಲಿಸಲು ಸಿದ್ಧವಿದ್ದೇವೆಯೇ? 

Ø  ದೇವರ ಮುಂದೆ ನಾವು ತೋರಬಹುದಾದ ಆಸ್ತಿಗಳಾವುವು? 

Ø  ನಮಗೆ  ದೈವೀಕ ವೈದ್ಯನ ಅವಶ್ಯಕತೆಯಿದೆ ಎಂಬ ಅರಿವು ನಮಗಿದೆಯೇ?

Ø  ನಾವಿಂದು ಯಾವುದೆಲ್ಲವುಗಳಿಂದ ಜೀವಿಸುತ್ತಿದ್ದೇವೆ?

Ø  ನಮ್ಮ ಜೀವನದಲ್ಲಿ ಹಸಿದವರಿಗೆ ನಾವಾಗೇ ಹೋಗಿ ಊಟವಿತ್ತ ಉದಾಹರಣೆಗಳೆಷ್ಟು? 

Ø  ನಮ್ಮ ಪ್ರಾರ್ಥನೆಯಲ್ಲಿ ನಿರರ್ಥಕ ಪದಗಳೆಷ್ಟುಸ್ವಾರ್ಥ ಬೇಡಿಕೆಗಳೆಷ್ಟು?

Ø  ನಮ್ಮ ಹೃದಯವೂ ನೆನೆವೆ ನಗರದಂತಾಗಲು ಸಾಧ್ಯವಿಲ್ಲವೇ?

Ø  ನಮಗಾಗಿ ನಾವು ಏನು ಅಪೇಕ್ಷಿಸುತ್ತೇವೆಯೋ ಅದನ್ನು ಇತರರಿಗೂ ಬಯಸುತ್ತಿದ್ದೇವೆಯೇ?

Ø  ನಾವು ಮತ್ತೊಬ್ಬರನ್ನು ತುಚ್ಛೀಕರಿಸಿದ ಸಂದರ್ಭಗಳ ಲೆಕ್ಕ ನಮ್ಮಲ್ಲಿದೆಯೇ?   

Øನಾವು ಯೇಸುವಿಗೆ ಸ್ವಂತ ಜನರಾಗಿದ್ದೇವೆಯೇ ಅಥವಾ ಇನ್ನೂ ಅನ್ಯರಾಗೇ ಉಳಿದಿದ್ದೇವೆಯೇ? 

No comments:

Post a Comment