ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

03.02.22

ಮೊದಲನೆಯ ವಾಚನ: ಅರಸುಗಳ ಮೊದಲನೆಯ ಗ್ರಂಥದಿಂದ ವಾಚನ 2:1-4,10-12

ದಾವೀದನ ಮರಣ ಸಮಯ ಸಮೀಪಿಸಿದಾಗ ಅವನು ತನ್ನ ಮಗ ಸೊಲೊಮೋನನಿಗೆ ಹೀಗೆಂದು ಆಜ್ಞಾಪಿಸಿದನು: ಜಗದ ಜನರೆಲ್ಲರು ಹೋಗುವ ದಾರಿಯನ್ನು ನಾನು ಈಗ ಹಿಡಿಯಬೇಕು; ನೀನು ಧೈರ್ಯದಿಂದಿರು. ನಿನ್ನ ಸಾಮರ್ಥ್ಯವನ್ನು ತೋರಿಸು. ನಿನ್ನ ದೇವರಾದ ಸರ್ವೇಶ್ವರಸ್ವಾಮಿಯ ಕಟ್ಟಳೆಯನ್ನು ಕೈಗೊಂಡು ಅವರ ಮಾರ್ಗದಲ್ಲೇ ನಡೆದುಕೋ; ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವ ಅವರ ಆಜ್ಞಾನಿಯಮ-ವಿಧಿನಿರ್ಣಯಗಳನ್ನು ಪಾಲಿಸು. ಹೀಗೆ ಮಾಡುವುದಾದರೆ ನೀನು ಏನು ಮಾಡಿದರೂ ಎಲ್ಲಿಗೆ ಹೋದರು ಕೃತಾರ್ಥನಾಗುವೆ. ಇದಲ್ಲದೆ ಸರ್ವೇಶ್ವರ, ನಿನ್ನ ಸಂತಾನದವರು ಪೂರ್ಣ ಮನಸ್ಸಿನಿಂದಲೂ ಪೂರ್ಣ ಪ್ರಾಣದಿಂದಲೂ ನನಗೆ ನಂಬಿಗಸ್ತರಾಗಿ ನಡೆದುಕೊಳ್ಳುವುದರಲ್ಲಿ ಜಾಗರೂಕರಾಗಿದ್ದರೆ ಅವರು ಇಸ್ರಯೇಲ್ ಸಿಂಹಾಸನದ ಮೇಲೆ ಕುಳಿತುಕೊಳ್ಳುವುದು ತಪ್ಪದು,' ಎಂದು ನನಗೆ ಮಾಡಿದ ವಾಗ್ದಾನವನ್ನು ಅವರು ಸ್ಥಿರಪಡಿಸುವರು. ಅನಂತರ ದಾವೀದನು ಮರಣ ಹೊಂದಿ ಪಿತೃಗಳ ಬಳಿಗೆ ಸೇರಿದನು. ಅವನ ಶವವನ್ನು ದಾವೀದನಗರದಲ್ಲಿ ಸಮಾಧಿಮಾಡಿದರು. ದಾವೀದನು ಇಸ್ರಯೇಲರನ್ನು ಆಳಿದ್ದು ನಲ್ವತ್ತು ವರ್ಷ: ಹೆಬ್ರೋನಿನಲ್ಲಿ ಏಳು ವರ್ಷ, ಜೆರುಸಲೇಮಿನಲ್ಲಿ ಮೂವತ್ತಮೂರು ವರ್ಷ ಆಳಿದನು. ಸೊಲೊಮೋನನು ತನ್ನ ತಂದೆ ದಾವೀದನ ಸಿಂಹಾಸನವನ್ನು ಏರಿದನು. ಅವನ ರಾಜ್ಯ ಸಮೃದ್ಧಿಯಾಗಿ ಬೆಳೆಯಿತು.

ಕೀರ್ತನೆ: 1 ಪೂರ್ವಕಾಲದ ವೃತ್ತಾಂತ 29:11-12,
ಶ್ಲೋಕ: ಸರ್ವಾಧಿಕಾರ ಬಲಪರಾಕ್ರಮ ಇರುವುದು ಪ್ರಭು ನಿಮ್ಮ ಕೈಯಲ್ಲೇ.

ಹೇ ಸರ್ವೇಶ್ವರಾ, ನಮ್ಮ ಪಿತೃ ಯಕೋಬನ ದೇವರೇ|
ಸದಾಕಾಲಕ್ಕೂ ಸ್ತುತಿಸ್ತೋತ್ರ ಸಲ್ಲಲಿ ನಿಮಗೆ||
ಹೇ ಸರ್ವೇಶ್ವರಾ, ಮಹಿಮೆ, ಪ್ರತಾಪ,ವೈಭವ, ಪರಾಕ್ರಮ, ಪ್ರತಿಭೆ, ನಿಮ್ಮವೇ|
ಭೂಮ್ಯಾಕಾಶಗಳಲ್ಲಿರುವ ಸಮಸ್ತವೂ ನಿಮ್ಮದೇ||

ಸರ್ವೇಶ್ವರಾ, ರಾಜ್ಯಭಾರವೂ ನಿಮ್ಮದೇ|
ಸರ್ವವನು ಮಹೋನ್ನತರಾಗಿ ಆಳುವವರೂ ನೀವೇ||
ಆಸ್ತಿ-ಪಾಸ್ತಿ, ಐಶ್ವರ್ಯ ಬರುವುದು ನಿಮ್ಮಿಂದಲೇ|
ಸರ್ವಾಧಿಕಾರ ಬಲಪರಾಕ್ರಮ ಇರುವುದು ನಿಮ್ಮ ಕೈಯಲ್ಲೇ|
ಪಟ್ಟ ಪದವಿಗೆಸರ್ವಶಕ್ತಿ ಸಾಹಸಕ್ಕೆ ಮೂಲ ನೀವೇ||

ಶುಭಸಂದೇಶ: ಮಾರ್ಕ 6: 7-13

ಆ ಕಾಲದಲ್ಲಿ ಯೇಸು ಸುತ್ತಮುತ್ತಲಿನ ಊರುಗಳಿಗೆ ಹೋಗಿ ಜನರಿಗೆ ಪ್ರಬೋಧಿಸಿದರು. ಇದಲ್ಲದೆ ಹನ್ನೆರಡು ಮಂದಿ ಶಿಷ್ಯರನ್ನು ಕರೆದು ಅವರಿಗೆ ದೆವ್ವಬಿಡಿಸುವ ಅಧಿಕಾರವನ್ನಿತ್ತು. ಅವರನ್ನು ಇಬ್ಬಿಬ್ಬರನ್ನಾಗಿ ಕಳುಹಿಸಿದರು. ಕಳುಹಿಸುವಾಗ, ಪ್ರಯಾಣ ದಂಡವೊಂದನ್ನು ಹೊರತು ಇನ್ನೇನನ್ನೂ ತೆಗೆದುಕೊಂಡು ಹೋಗಬೇಡಿ. ಬುತ್ತಿ, ಜೋಳಿಗೆ, ಜೇಬಿನಲ್ಲಿ ಹಣ, ಯಾವುದೂ ಬೇಡ, ಪಾದರಕ್ಷೆಯನ್ನು ಮೆಟ್ಟಿಕೊಂಡರೆ ಸಾಕು, ಎರಡು ಅಂಗಿಗಳನ್ನು ತೊಟ್ಟುಕೊಳ್ಳಬೇಡಿ, ಎಂದು ಅಪ್ಪಣೆ ಮಾಡಿದರು. ಇದಲ್ಲದೆ, ನೀವು ಯಾವುದೇ ಒಂದು ಊರಿಗೆ ಹೋದಾಗ ಆ ಊರನ್ನು ಬಿಡುವವರೆಗೂ ಆತಿಥ್ಯ ನೀಡುವ ಯಾವುದಾದರೂ ಒಂದು ಮನೆಯಲ್ಲೇ ಉಳಿದುಕೊಳ್ಳಿ. ಯಾವುದೇ ಊರಿನ ಜನರು ನಿಮ್ಮನ್ನು ಸ್ವಾಗತಿಸದೆಯೂ ನಿಮ್ಮ ಬೋಧನೆಗೆ ಕಿವಿಗೊಡದೆಯೂ ಹೋದರೆ, ಆ ಊರನ್ನು ಬಿಟ್ಟು ಹೋಗುವಾಗ ನಿಮ್ಮ ಪಾದಕ್ಕೆ ಹತ್ತಿದ ಧೂಳನ್ನು ಕೂಡ ಝಾಡಿಸಿಬಿಡಿ. ಅವರ ವಿರುದ್ಧ ಅದು ಸಾಕ್ಷಿಯಾಗಿರಲಿ, ಎಂದರು. ಶಿಷ್ಯರು ಹೊರಟು ಹೋಗಿ ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿರಿ, ದೇವರಿಗೆ ಅಭಿಮುಖರಾಗಿರಿ, ಎಂದು ಜನರಿಗೆ ಸಾರಿ ಹೇಳಿದರು. ದೆವ್ವಹಿಡಿದಿದ್ದ ಅನೇಕರಿಂದ ದೆವ್ವಗಳನ್ನು ಹೊರಗಟ್ಟಿದರು. ತೈಲ ಲೇಪನಮಾಡಿ ಅನೇಕ ರೋಗಿಗಳನ್ನು ಗುಣಪಡಿಸಿದರು.

No comments:

Post a Comment