ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

04.02.22 - "ಸ್ನಾನಿಕ ಯೊವಾನ್ನನ ತಲೆಯನ್ನು ಇದೀಗಲೇ ಒಂದು ತಟ್ಟೆಯಲ್ಲಿ ತರಿಸಿಕೊಡಿ"

 ಮೊದಲನೇ ವಾಚನ: ಸಿರಾಖನು 47:2-11


ಶಾಂತಿ ಬಲಿಪಶುವಿನಿಂದ ಕೊಬ್ಬನ್ನು ಬೇರ್ಪಡಿಸುವಂತೆ ಇಸ್ರಯೇಲರಿಂದ ಮೀಸಲಾದವನು ದಾವೀದನೆ. ಸಿಂಹಗಳನ್ನು ಆಡಿಸಿದನಿವನು ಆಡುಮರಿಗಳಂತೆ ಕರಡಿಗಳೊಂದಿಗೆ ಆಡಿದನು ಕುರಿಮರಿಗಳೊಂದಿಗೆ ಆಡುವಂತೆ. ಈತನೇ ಅಲ್ಲವೆ ತಾರುಣ್ಯದಲಿ ಕವಣೆಕಲ್ಲನು ಕೈಗೆತ್ತಿಕೊಂಡವನು? ಬಲಾಢ್ಯನೂ ಜಂಬಕೋರನೂ ಆದ ಗೊಲ್ಯಾತನನ್ನು ಸಂಹರಿಸಿ ನೆಲಕ್ಕುರುಳಿಸಿದವನು? ಈ ಪರಿ ತನ್ನ ಜನಾಂಗದ ಅವಮಾನವನ್ನು ಹೋಗಲಾಡಿಸಿದವನು? ಇವನು ಮೊರೆಯಿಡಲು ಮಹೋನ್ನತ ಸರ್ವೇಶ್ವರನಿಗೆ ಶಕ್ತಿ ನೀಡಿದನಾತ ಇವನ ಭುಜಬಲಕ್ಕೆ ಯುದ್ಧವೀರನಾದ ಆ ವ್ಯಕ್ತಿಯನ್ನು ಸಂಹರಿಸುವುದಕ್ಕೆ ತನ್ನ ಜನಾಂಗದವರ ಕೀರ್ತಿಪತಾಕೆಯನು ಮೇಲೆತ್ತುವುದಕ್ಕೆ. ಎಂತಲೇ ಜನರು ಗೌರವಿಸಿದರವನನು ‘ಹತ್ತು ಸಾವಿರಗಟ್ಟಲೆ’ ಕೊಂದುದಕ್ಕಾಗಿ ಹೊಗಳಿದರವನನ್ನು ಸರ್ವೇಶ್ವರನ ಆಶೀರ್ವಾದಗಳಿಗಾಗಿ ಮಹಿಮೆಯ ಮುಕುಟ ಕೊಡಲಾಯಿತವನಿಗೆ ಅದಕ್ಕಾಗಿ. ನಾಶಗೊಳಿಸಿದನು ಸುತ್ತಲೂ ಇದ್ದ ಶತ್ರುಗಳನ್ನು ಸೋಲಿಸಿದನು ತನ್ನ ವಿರೋಧಿಗಳಾದ ಫಿಲಿಷ್ಟಿಯರನ್ನು ಮುರಿದು ಪುಡಿಪುಡಿಮಾಡಿದನು ಅವರ ಕಳಸಕೊಂಬನ್ನು ಹಾಗೆಯೇ ಇರುವುದದು ಇಂದಿನವರೆಗು. ಪರಿಶುದ್ಧನು, ಮಹೋನ್ನತನು ಆದಾತನಿಗೆ ಸಲ್ಲಿಸಿದನು ಧನ್ಯವಾದ ತನ್ನ ಎಲ್ಲ ಕಾರ್ಯಗಳಲ್ಲೂ ಗಂಭೀರ ವಚನಗಳಿಂದ. ಆತನನ್ನು ಕೀರ್ತಿಸಿ ಹಾಡಿದನು ಪೂರ್ಣಹೃದಯದಿಂದ, ತನ್ನ ಸೃಷ್ಟಿಕರ್ತನನ್ನು ಪ್ರೀತಿವಾತ್ಸಲ್ಯದಿಂದ. ಇದಲ್ಲದೆ ಗಾಯಕರನ್ನಿರಿಸಿದನು ಬಲಿಪೀಠದ ಮುಂದೆ ಮಧುರ ಗೀತವನ್ನು ಹಾಡಿ ವಂದಿಸುವಂತೆ. ವಿಜೃಂಭಣೆಯನ್ನು ತಂದನು ಉತ್ಸವಗಳಿಗೆ ಉತ್ಸವಕಾಲಗಳಿಗಿತ್ತನು ಪೂರ್ಣವಾದ ಕ್ರಮಬದ್ಧತೆ. ಏರ್ಪಡಿಸಿದನು ಆ ಸಂದರ್ಭಗಳಲ್ಲಿ ಸರ್ವೇಶ್ವರನ ಶ್ರೀನಾಮವನ್ನು ಕೀರ್ತಿಸುವಂತೆ ಪವಿತ್ರಾಲಯದಲ್ಲಿ ಬೆಳಗಿನಿಂದ ಆ ಧ್ವನಿ ಕೇಳಿಬರುವಂತೆ. ಸರ್ವೇಶ್ವರ ಪರಿಹರಿಸಿದನು ಇವನ ಪಾಪವನ್ನು ಶಾಶ್ವತವಾಗಿಸಿದನು ಅವನ ಕೀರ್ತಿ ಪತಾಕೆಯನ್ನು. ಒಡಂಬಡಿಕೆಮಾಡಿ ಶಾಶ್ವತಗೊಳಿಸಿದನು ಅರಸೊತ್ತಿಗೆಯನ್ನು ದಯಪಾಲಿಸಿದನವನಿಗೆ ಇಸ್ರಯೇಲರಲ್ಲಿ ಮಹಿಮಾ ಸಿಂಹಾಸನವನ್ನು.

ಕೀರ್ತನೆ: 18:31, 47, 50, 51

ಶ್ಲೋಕ: ನನ್ನ ಉದ್ಧಾರಕನಾದ ಸರ್ವೇಶ್ವರನಿಗೆ ಸ್ತುತಿಸ್ತೊತ್ರವು

ಶುಭಸಂದೇಶ: ಮಾರ್ಕ 6:14-29

ಇಷ್ಟರಲ್ಲಿ ಯೇಸುಸ್ವಾಮಿಯ ಹೆಸರು ಮನೆಮಾತಾಯಿತು. ಅದು ಹೆರೋದ ಅರಸನ ಕಿವಿಗೂ ಬಿತ್ತು. ಯೇಸುವಿನ ವಿಚಾರವಾಗಿ ಕೆಲವರು, “ಮಡಿದ ಸ್ನಾನಿಕ ಯೊವಾನ್ನನೇ ಮರಳಿ ಜೀವಂತವಾಗಿ ಬಂದಿದ್ದಾನೆ; ಆದುದರಿಂದಲೇ ಮಹತ್ಕಾರ್ಯಗಳನ್ನು ಮಾಡುವ ಶಕ್ತಿ ಇವನಿಗಿದೆ,” ಎನ್ನುತ್ತಿದ್ದರು. ಇನ್ನು ಕೆಲವರು, ‘ಈತನೇ ಎಲೀಯನು’ ಎಂದೂ ಮತ್ತೆ ಕೆಲವರು, “ಪ್ರಾಚೀನ ಪ್ರವಾದಿಗಳಂತೆ ಈತನೂ ಒಬ್ಬ ಪ್ರವಾದಿ,” ಎಂದೂ ಹೇಳುತ್ತಿದ್ದರು. ಇದನ್ನೆಲ್ಲಾ ಕೇಳಿದ ಹೆರೋದನು, “ಹೌದು, ನಾನು ಶಿರಚ್ಛೇದನ ಮಾಡಿದ ಯೊವಾನ್ನನೇ ಮರಳಿ ಜೀವಂತನಾಗಿ ಬಂದಿದ್ದಾನೆ,” ಎಂದನು. ಹೆರೋದನು ತಾನು ಇಟ್ಟುಕೊಂಡಿದ್ದ ಹೆರೋದಿಯಳ ನಿಮಿತ್ತ ಯೊವಾನ್ನನನ್ನು ಸೆರೆಹಿಡಿಸಿ ಬಂಧನದಲ್ಲಿರಿಸಿದ್ದನು. ಹೆರೋದಿಯಳು ಹೆರೋದನ ಸಹೋದರ ಫಿಲಿಪ್ಪನ ಧರ್ಮಪತ್ನಿ. ಆದರೂ ಹೆರೋದನು ಆಕೆಯನ್ನು ಹೆಂಡತಿಯಾಗಿ ಇಟ್ಟುಕೊಂಡಿದ್ದನು. ಈ ಕಾರಣ ಯೊವಾನ್ನನು, “ನಿನ್ನ ಸಹೋದರನ ಪತ್ನಿಯನ್ನು ನೀನು ಇಟ್ಟುಕೊಂಡಿರುವುದು ನ್ಯಾಯವಲ್ಲ,” ಎಂದು ಪದೇಪದೇ ಅವನನ್ನು ಎಚ್ಚರಿಸುತ್ತಿದ್ದನು. ಇದರ ನಿಮಿತ್ತ ಹೆರೋದಿಯಳು ಯೊವಾನ್ನನ ಮೇಲೆ ಹಗೆಯಿಟ್ಟು ಆತನನ್ನು ಕೊಲ್ಲಿಸಬೇಕು ಎಂದಿದ್ದಳು. ಆದರೆ ತನ್ನ ಸೇಡನ್ನು ತೀರಿಸಿಕೊಳ್ಳಲು ಅವಳಿಂದಾಗಿರಲಿಲ್ಲ. ಏಕೆಂದರೆ, ಯೊವಾನ್ನನು ಸಂತನು ಹಾಗೂ ಸತ್ಪುರುಷನು ಎಂದು ಹೆರೋದನು ಅರಿತು, ಆತನಿಗೆ ಭಯಪಟ್ಟು ಯಾವ ಅಪಾಯವೂ ಆತನಿಗೆ ಬಾರದಂತೆ ನೋಡಿಕೊಳ್ಳುತ್ತಿದ್ದನು. ಯೊವಾನ್ನನು ಹೇಳುತ್ತಿದ್ದ ಮಾತುಗಳನ್ನು ಕೇಳಿದಾಗಲೆಲ್ಲಾ ಹೆರೋದನ ಮನಸ್ಸು ಅಲ್ಲೋಲ ಕಲ್ಲೋಲವಾಗುತ್ತಿತ್ತು. ಆದರೂ ಆತನ ಮಾತುಗಳನ್ನು ಕಿವಿಗೊಟ್ಟು ಕೇಳುತ್ತಿದ್ದನು. ಕಡೆಗೊಮ್ಮೆ, ಹೆರೋದಿಯಳಿಗೆ ಅನುಕೂಲವಾದ ಸಂದರ್ಭ ಒದಗಿತು. ಹೆರೋದನು ತನ್ನ ಹುಟ್ಟುಹಬ್ಬದ ದಿನಾಚರಣೆಯಂದು, ಆಸ್ಥಾನಿಕರಿಗೂ ಸೇನಾಧಿಪತಿಗಳಿಗೂ ಗಲಿಲೇಯ ಪ್ರಾಂತ್ಯದ ಪ್ರಮುಖರಿಗೂ ಔತಣಕೂಟವನ್ನು ಏರ್ಪಡಿಸಿದನು. ಆ ಸಮಾರಂಭದಲ್ಲಿ ಹೆರೋದಿಯಳ ಮಗಳು ಔತಣಶಾಲೆಗೆ ಬಂದು ನರ್ತನ ಮಾಡಿದಳು. ಹೆರೋದನೂ ಅವನ ಜೊತೆಯಲ್ಲಿ ಭೋಜನಕ್ಕೆ ಕುಳಿತಿದ್ದ ಅತಿಥಿಗಳೂ ಅದನ್ನು ಬಹಳವಾಗಿ ಮೆಚ್ಚಿಕೊಂಡರು. ಆಗ ಅರಸ ಹೆರೋದನು ಅವಳಿಗೆ, “ನಿನಗೆ ಏನು ಬೇಕಾದರೂ ಕೇಳು, ಕೊಡುತ್ತೇನೆ” ಎಂದನು. “ನೀನು ಏನು ಕೇಳಿಕೊಂಡರೂ ಸರಿ, ನನ್ನ ರಾಜ್ಯದಲ್ಲಿ ಅರ್ಧವನ್ನು ಕೇಳಿಕೊಂಡರೂ ಅದನ್ನು ನಿನಗೆ ಕೊಡುತ್ತೇನೆ,” ಎಂದು ಪ್ರಮಾಣ ಮಾಡಿದನು. ಅವಳು ತನ್ನ ತಾಯಿಯ ಬಳಿಗೆ ಹೋಗಿ, “ಅಮ್ಮಾ, ನಾನು ಏನನ್ನು ಕೇಳಿಕೊಳ್ಳಲಿ?” ಎಂದು ವಿಚಾರಿಸಿದಳು. “ಸ್ನಾನಿಕ ಯೊವಾನ್ನನ ತಲೆಯನ್ನು ಕೇಳು,” ಎಂದು ಆಕೆ ಮಗಳನ್ನು ಪ್ರೇರೇಪಿಸಿದಳು. ಕೂಡಲೆ ಅವಳು ಅರಸನ ಬಳಿಗೆ ಧಾವಿಸಿ, “ಸ್ನಾನಿಕ ಯೊವಾನ್ನನ ತಲೆಯನ್ನು ಇದೀಗಲೇ ಒಂದು ತಟ್ಟೆಯಲ್ಲಿ ತರಿಸಿಕೊಡಿ; ಇದೇ ನನ್ನ ಬೇಡಿಕೆ,” ಎಂದು ಕೇಳಿಕೊಂಡಳು. ಅರಸನಿಗೆ ಅತೀವ ದುಃಖವಾಯಿತು. ಆದರೂ ಅತಿಥಿಗಳೆಲ್ಲರ ಮುಂದೆ ತಾನು ಮಾಡಿದ ಪ್ರಮಾಣದ ನಿಮಿತ್ತ ಅವಳ ಕೋರಿಕೆಯನ್ನು ನಿರಾಕರಿಸಲಾಗಲಿಲ್ಲ. ಆದುದರಿಂದ ಅವನು ಒಬ್ಬ ಪಹರೆಯವನನ್ನು ಕರೆದು, ಕೂಡಲೇ ಯೊವಾನ್ನನ ತಲೆಯನ್ನು ತರಬೇಕೆಂದು ಅವನಿಗೆ ಆಜ್ಞೆಮಾಡಿ ಕಳುಹಿಸಿದನು. ಪಹರೆಯವನು ಸೆರೆಮನೆಗೆ ಹೋಗಿ ಯೊವಾನ್ನನ ತಲೆಯನ್ನು ಕತ್ತರಿಸಿ, ಅದನ್ನು ತಟ್ಟೆಯಲ್ಲಿ ಇಟ್ಟು ಹುಡುಗಿಗೆ ತಂದುಕೊಟ್ಟನು. ಅವಳು ಅದನ್ನು ತನ್ನ ತಾಯಿಗೆ ಕೊಟ್ಟಳು. ಇದನ್ನು ಕೇಳಿದ ಯೊವಾನ್ನನ ಶಿಷ್ಯರು ಅಲ್ಲಿಗೆ ಬಂದು ಶವವನ್ನು ತೆಗೆದುಕೊಂಡು ಹೋಗಿ ಸಮಾಧಿ ಮಾಡಿದರು. 

No comments:

Post a Comment