ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

20.02.22 - "ನಿಮ್ಮನ್ನು ನಿಂದಿಸುವವರಿಗಾಗಿ ಪ್ರಾರ್ಥಿಸಿರಿ"

ಮೊದಲನೇ ವಾಚನ: 1  ಸಮುವೇಲನು 26:2, 7-9, 12-13, 22-23

ಸೌಲನು ಇಸ್ರಯೇಲರಲ್ಲಿ ಶ್ರೇಷ್ಠರಾದ ಮೂರು ಸಾವಿರ ಮಂದಿ ಸೈನಿಕರನ್ನು ಆರಿಸಿಕೊಂಡು ದಾವೀದನನ್ನು ಹುಡುಕುವುದಕ್ಕಾಗಿ ಜೀಫ್ ಮರುಭೂಮಿಗೆ ಹೋದನು. ದಾವೀದನು ಮತ್ತು ಅಬೀಷೈಯು, ರಾತ್ರಿಯಲ್ಲಿ ಆ ಪಾಳೆಯಕ್ಕೆ ಹೋದಾಗ ಸೌಲನು ಬಂಡಿಗಳ ಗುಂಪಿನ ಮಧ್ಯೆ ಮಲಗಿಕೊಂಡು ನಿದ್ರೆ ಮಾಡುತ್ತಿದ್ದನು. ಅವನ ಭರ್ಜಿಯನ್ನು ಅವನ ತಲೆಯ ಹತ್ತಿರ ನೆಲಕ್ಕೆ ತಿವಿದು ನಿಲ್ಲಿಸಲಾಗಿತ್ತು. ಅಬ್ನೇರನೂ ಸೈನಿಕರೂ ಅವನ ಸುತ್ತಲೂ ಮಲಗಿದ್ದರು. ಅಬೀಷೈಯು ದಾವೀದನಿಗೆ, "ದೇವರು ಈ ದಿನ ನಿನ್ನ ವೈರಿಯನ್ನು ನಿನ್ನ ಕೈಗೆ ಒಪ್ಪಿಸಿಕೊಟ್ಟಿದ್ದಾರೆ; ಅಪ್ಪಣೆಯಾಗಲಿ, ನಾನು ಬರ್ಜಿಯಿಂದ ಒಂದೇ ಪೆಟ್ಟಿನಲ್ಲಿ ಅವನನ್ನು ನೆಲಕ್ಕೆ ಕಚ್ಚಿಕೊಳ್ಳುವಂತೆ ತಿವಿಯುತ್ತೇನೆ. ಎರಡನೆಯ ಸಾರಿ ಹೊಡೆಯುವ ಅವಶ್ಯಕತೆ ಇರುವುದಿಲ್ಲ." ಎಂದು ಹೇಳಿದನು. ಆದರೆ ದಾವೀದನು, "ಅವನನ್ನು ಕೊಲ್ಲಬೇಡ;   ಸರ್ವೇಶರನ ಅಭಿಷಿಕ್ತನಿಗೆ ವಿರೋಧವಾಗಿ ಕೈಯೆತ್ತುವ ಯಾವನೂ ನಿರಪರಾಧಿ ಎಂದು ಎಣಿಸಲ್ಪಡನು," ಎಂದನು. ಸೌಲನ ತಲೆದಿಂಬಿನ ಬಳಿಯಲ್ಲಿದ್ದ ಭರ್ಜಿ ಹಾಗು ತಂಬಿಗೆಗಳನ್ನು ತೆಗೆದುಕೊಂಡು ಹೋದರೂ ಯಾರೂ ಕಾಣಲಿಲ್ಲ; ಯಾರಿಗೂ ಗೊತ್ತಾಗಲಿಲ್ಲ ಯಾರಿಗೂ ಎಚ್ಚರವಾಗಲಿಲ್ಲ. ಏಕೆಂದರೆ ಸರ್ವೇಶ್ವರ ಅವರಿಗೆ ಗಾಢ ನಿದ್ರೆಯನ್ನು ಬರಮಾಡಿದ್ದರು; ಒಬ್ಬರಿಗೂ ಎಚ್ಚರವಿಲ್ಲದೆ ಎಲ್ಲರು ಮೈಮರೆತು ನಿದ್ರೆಯಲ್ಲಿ ಮಗ್ನರಾಗಿದ್ದರು. ದಾವೀದನು ತನಗೂ ಪಾಳೆಯಕ್ಕೂ ತಕ್ಕಷ್ಟು ಅಂತರವಿರುವ ಹಾಗೆ ಸುರಕ್ಷಿತವಾದ ದೂರ ಸ್ಥಳಕ್ಕೆ ಹೋಗಿ ಗುಡ್ಡವನ್ನೇರಿ ತುದಿಯಲ್ಲಿ ನಿಂತನು. ದಾವೀದನು, "ಅರಸರೇ, ಇಗೋ, ನಿಮ್ಮ ಭರ್ಜಿ ಇಲ್ಲಿದೆ; ಸೇವಕರಲ್ಲೊಬ್ಬನು ಬಂದು ತೆಗೆದುಕೊಂಡು ಹೋಗಲಿ.  ಸರ್ವೇಶ್ವರ ಪ್ರತಿಯೊಬ್ಬನಿಗೂ ಅವನವನ ನೀತಿ  ಸತ್ಯತೆಗಳಿಗೆ ಅನುಸಾರ ಫಲವನ್ನು ಕೊಡುವರು. ಅವರು ಈ ದಿನ ನಿಮ್ಮನ್ನು ನನ್ನ ಕೈಗೆ  ಒಪ್ಪಿಸಿಕೊಟ್ಟಿದ್ದರೂ ನೀವು  ಸರ್ವೇಶ್ವರನ ಅಭಿಷಿಕ್ತರೆಂದು ನಾನು ನಿಮ್ಮ ಮೇಲೆ ಕೈ ಹಾಕಲಿಲ್ಲ.

ಕೀರ್ತನೆ: 103:1-2, 3-4, 8-10, 12-13
ಶ್ಲೋಕ: ಪ್ರಭು ದಯಾಳು, ಕೃಪಾಪೂರ್ಣನು.

ಎರಡನೇ ವಾಚನ: 1 ಕೊರಿಂಥಿಯರಿಗೆ 15:45-49

ವಿತ್ರ ಗ್ರಂಥದಲ್ಲಿ ಲಿಖಿತವಾಗಿರುವಂತೆ ಮೊದಲ ಮಾನವನಾದ ಆದಾಮನು ಜೀವ ಪಡೆದ ವ್ಯಕ್ತಿ; ಕಡೆಯ ಆದಾಮನಾದರೋ ಜೀವ ಕೊಡುವ ಆತ್ಮ. ಮೊದಲು ಆದುದು ಆಧ್ಯಾತ್ಮಿಕವಾದುದಲ್ಲ, ಪ್ರಾಕೃತವಾದುದು, ಆನಂತರ ಆದುದು ಆಧ್ಯಾತ್ಮಿಕವಾದುದು. ಮೊದಲನೆಯ ಮಾನವನು ಮಣ್ಣಿನಿಂದಾದವನು; ಮಣ್ಣಿಗೆ ಸಂಬಂದಪಟ್ಟವನು. ಎರಡನೆಯ ಮಾನವನಾದರೋ ಸ್ವರ್ಗದಿಂದ ಬಂದವನು ಮಣ್ಣಿಗೆ ಸಬಂಧಪಟ್ಟವರು ಮಣ್ಣಿನಿಂದ ಆದವನಂತೆಯೇ ಇರುತ್ತಾರೆ. ಸ್ವರ್ಗಕ್ಕೆ ಸಬಂಧಪಟ್ಟವರು ಸ್ವರ್ಗದಿಂದ ಬಂದವನಂತೆಯೇ ಇರುತ್ತಾರೆ. ಮಣ್ಣಿನಿಂದ ಆದವನ ರೂಪವನ್ನು ನಾವು ಧರಿಸಿರುವಂತೆಯೇ ಸ್ವರ್ಗದಿಂದ ಬಂದಾತನ ರೂಪವನ್ನು ಧರಿಸುತ್ತೇವೆ.

ಶುಭಸಂದೇಶ: ಲೂಕ 6:27-38

"ನ್ನನ್ನು ಆಲಿಸುತ್ತಿರುವವರೇ, ನನ್ನ ಮಾತನ್ನು ಕೇಳಿರಿ: ನಿಮ್ಮ ಶತ್ರುಗಳನ್ನು ಪ್ರೀತಿಸಿರಿ, ನಿಮ್ಮನ್ನು ದ್ವೇಷಿಸುವವರನ್ನು ಸತ್ಕರಿಸಿರಿ. ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿರಿ, ನಿಮ್ಮನ್ನು ನಿಂದಿಸುವವರಿಗಾಗಿ ಪ್ರಾರ್ಥಿಸಿರಿ. ನಿನ್ನ ಒಂದು ಕೆನ್ನೆಗೆ ಹೊಡೆಯುವವನಿಗೆ ಇನ್ನೊಂದು ಕೆನ್ನೆಯನ್ನು ಹೊಡ್ಡು, ನಿನ್ನ ಮೇಲಂಗಿಯನ್ನು ಕಿತ್ತುಕೊಳ್ಳುವವನಿಗೆ ಒಳ ಅಂಗಿಯನ್ನೂ ತೆಗೆಯಲು ಬಿಡು. ಕೇಳಿಕೊಳ್ಳುವ ಪ್ರತಿಯೊಬ್ಬನಿಗೂ ಕೊಡು, ನಿನ್ನ ಸ್ವತ್ತನ್ನು ಕಸಿದುಕೊಳ್ಳುವವನಿಂದ ತಿರುಗಿ ಕೇಳದಿರು. ಅಲ್ಲದೆ, ಇತರರು ನಿಮಗೆ ಏನೇನು ಮಾಡಬೇಕೆಂದು ನೀವು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ. ನಿಮ್ಮನ್ನು ಪ್ರೀತಿಸುವವರನ್ನೇ ನೀವು ಪ್ರೀತಿಸಿದರೆ ಅದೇನು ಪುಣ್ಯ? ಪಾಪಿಷ್ಟರು ಸಹ ತಮ್ಮನ್ನು ಪ್ರೀತಿಸುವವರನ್ನು ಪ್ರೀತಿಸುತ್ತಾರಲ್ಲವೆ? ಉಪಕಾರ ಮಾಡಿದವರಿಗೇ ಉಪಕಾರ ಮಾಡಿದರೆ ಅದೇನು ಪುಣ್ಯ? ಪಾಪಿಷ್ಟರು ಸಹ ಹಾಗೆಯೇ ಮಾಡುತ್ತಾರಲ್ಲವೆ? ಸಾಲ ತೀರಿಸುವಂಥ ನಂಬಿಗಸ್ಥನಿಗೇ ಸಾಲಕೊಟ್ಟರೆ ಅದೇನು ಪುಣ್ಯ? ಕೊಟ್ಟಷ್ಟೂ ಬರುತ್ತದೆಂದು ಪಾಪಿಷ್ಟರು ಸಹ ಸಾಲ ಕೊಡುತ್ತಾರಲ್ಲವೆ?" ಆದುದರಿಂದ ನಿಮ್ಮ ಶತ್ರುಗಳನ್ನು ಪ್ರೀತಿಸಿರಿ.  ಅವರಿಗೆ ಒಳಿತನ್ನೇ ಮಾಡಿರಿ. ಪ್ರತಿಯಾಗಿ ಪಡೆಯುವ ಆಶೆಯಿಡದೆ ಸಾಲ ಕೊಡಿ. ಆಗ ನಿಮಗೆ ಮಹತ್ತಾದ ಸಂಭಾವನೆ ದೊರಕುವುದು. ನೀವು ಮಹೋನ್ನತ ದೇವರ ಮಕ್ಕಳಾಗುವಿರಿ. ದೇವರು ದುರ್ಜನರಿಗೂ  ಒಳ್ಳೆಯವರು ಕೃತಘ್ನರಿಗೂ ಒಳ್ಳೆಯವರು. ನಿಮ್ಮ ತಂದೆಯಾದ ದೇವರಂತೆ ನೀವೂ ದಯಾವಂತರಾಗಿರಿ. "ನೀವು ಇತರರ ಬಗ್ಗೆ ತೀರ್ಪುಕೊಡಬೇಡಿ. ಆಗ ದೇವರು ನಿಮ್ಮ ಬಗ್ಗೆ ತೀರ್ಪು ಕೊಡುವುದಿಲ್ಲ; ಪರರನ್ನು ದಂಡನೆಗೆ ಗುರಿಮಾಡಬೇಡಿ, ದೇವರು ನಿಮ್ಮನ್ನೂ ದಂಡನೆಗೆ ಗುರಿಮಾಡುವುದಿಲ್ಲ. ಪರರನ್ನು ಕ್ಷಮಿಸಿರಿ, ದೇವರು ನಿಮ್ಮನ್ನೂ ಕ್ಷಮಿಸುವರು; ಪರರಿಗೆ ಕೊಡಿ, ದೇವರು ನಿಮಗೂ ಕೊಡುವರು; ಅಳತೆಯಲ್ಲಿ ತುಂಬಿ, ಕುಲುಕಿ, ಅದುಮಿ ತುಳುಕುವಂತೆ ಅಳೆದು ನಿಮ್ಮ ಮಡಿಲಿಗೆ ಹಾಕುವರು. ನೀವು ಕೊಟ್ಟ ಅಳತೆಯಲ್ಲೇ ದೇವರು ನಿಮಗೂ ಅಳೆದು ಕೊಡುವರು," ಎಂದರು.

ಮನಸಿಗೊಂದಿಷ್ಟು :  ’ಮಾಡಬೇಡ’ ಎನ್ನುವ ಆದರ್ಶಗಳ ನಡುವೆ ’ಮಾಡು’ ಎನ್ನುವ ಮೌಲ್ಯಗಳನ್ನು ಯೇಸು ನಮಗೆ ನೀಡುತ್ತಿದ್ದಾರೆ. ’ಶತ್ರುಗಳನ್ನು ದ್ವೇಷಿಸಬೇಡಿ’ ಎನ್ನುವುದು ಲೋಕ ರೂಢಿಯಲ್ಲಿ  ಮಾನ್ಯವಾದ ಮೌಲ್ಯವಾದರೆ ’ಅವರನ್ನು ಪ್ರೀತಿಸಿರಿ’ ಎನ್ನುವುದು ಇನ್ನೂ ಎತ್ತರದ ಕ್ರಿಸ್ತನ ಮೌಲ್ಯ. ನಾವು ನಮ್ಮನ್ನು ಹೋಲಿಸಿಕೊಳ್ಳಬೇಕಾದುದು ನಮ್ಮ ನೆರೆಯವನ ಗುಣ ಆದರ್ಶಗಳೊಂದಿಗೆ ಅಲ್ಲ, ದೇವರ ಗುಣ ಮೌಲ್ಯಗಳೊಂದಿಗೆ. ಆಗಾದಾಗ ಮಾನವತೆಯನ್ನು ಪೊರೈಸಿ ದೈವತ್ವದತ್ತ ನಮ್ಮ ಹೆಜ್ಜೆ ಸಾಗುತ್ತದೆ..... 

ಪ್ರಶ್ನೆ : ಸಾಮಾನ್ಯತೆಗಿಂತ ಇನ್ನೆಷ್ಟು ಎತ್ತರಕ್ಕೆ ಏರಬಲ್ಲವು?

No comments:

Post a Comment