ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

19.02.22 - "ಈತನು ನನ್ನ ಪುತ್ರ, ನನಗೆ ಪರಮಪ್ರಿಯನು, ಈತನ ಮಾತಿಗೆ ಕಿವಿಗೊಡಿ,”

ಮೊದಲನೇ ವಾಚನ: ಯಕೋಬ 3:1-10


ಸಹೋದರರೇ, ಎಲ್ಲರೂ ಬೋಧಕರಾಗಲು ಆತುರಪಡಬೇಡಿ. ಬೋಧಕರಾದ ನಾವು ಇತರರಿಗಿಂತಲೂ ತೀವ್ರವಾದ ನ್ಯಾಯವಿಚಾರಣೆಗೆ ಗುರಿಯಾಗುತ್ತೇವೆ. ನಾವೆಲ್ಲರೂ ಎಷ್ಟೋ ವಿಷಯಗಳಲ್ಲಿ ತಪ್ಪು ಮಾಡುವುದುಂಟು. ತನ್ನ ಮಾತಿನಲ್ಲಿ ತಪ್ಪುಮಾಡದೆ ಪೂರ್ತಿಯಾಗಿ ತನ್ನನ್ನೇ ಸ್ವಾಧೀನದಲ್ಲಿ ಇಟ್ಟುಕೊಳ್ಳುವ ವ್ಯಕ್ತಿ ಸಿದ್ಧಪುರುಷನೇ ಹೌದು. ಕುದುರೆಗಳನ್ನು ಗಮನಿಸಿರಿ. ಅವುಗಳ ಬಾಯಿಗೆ ಹಾಕುವ ಚಿಕ್ಕ ಕಡಿವಾಣದಿಂದ ನಮಗೆ ಇಷ್ಟ ಬಂದ ಕಡೆಗೆ ಅವುಗಳನ್ನು ನಡೆಸುತ್ತೇವೆ. ಅಂತೆಯೇ, ಹಡಗು ಎಷ್ಟೇ ದೊಡ್ಡದಿರಲಿ, ಎಂತಹ ಬಿರುಗಾಳಿಯ ಬಡಿತಕ್ಕೇ ಸಿಕ್ಕಿರಲಿ, ಕೇವಲ ಒಂದು ಚಿಕ್ಕ ಚುಕ್ಕಾಣಿಯಿಂದ ನಾವಿಕನು ತನಗೆ ಇಷ್ಟ ಬಂದ ಕಡೆಗೆ ಅದನ್ನು ತಿರುಗಿಸುತ್ತಾನೆ. ನಾಲಿಗೆಯೂ ಹಾಗೆಯೇ. ಇದು ಶರೀರದ ಸಣ್ಣ ಅಂಗವಾಗಿದ್ದರೂ ಬಡಾಯಿ ಕೊಚ್ಚುವುದು ಬಹಳ. ಒಂದು ಸಣ್ಣ ಕಿಡಿಯು ದೊಡ್ಡ ಕಾಡನ್ನೇ ಸುಡಬಲ್ಲದು. ನಾಲಿಗೆಯು ಆ ಬೆಂಕಿಯ ಕಿಡಿಯಂತೆ. ಅದು ಅಧರ್ಮಲೋಕದ ಪ್ರತೀಕ. ಅಂಗಾಂಗಗಳ ನಡುವೆ ಇದ್ದು ಇಡೀ ಶರೀರವನ್ನು ಮಲಿನಗೊಳಿಸುತ್ತದೆ. ನರಕಾಗ್ನಿಯಿಂದ ಹೊತ್ತಿಕೊಂಡು ಅದು ಬಾಳಿನ ಚಕ್ರಕ್ಕೇ ಬೆಂಕಿಯನ್ನು ಹಚ್ಚುತ್ತದೆ. ಸಕಲ ಜಾತಿಯ ಪ್ರಾಣಿಪಕ್ಷಿಗಳನ್ನೂ ಹರಿದಾಡುವ ಜಂತುಗಳನ್ನೂ ಜಲಜೀವಿಗಳನ್ನೂ ಮಾನವ ಪಳಗಿಸಬಲ್ಲನು; ಪಳಗಿಸಿಯೂ ಇದ್ದಾನೆ. ಆದರೆ ನಾಲಿಗೆಯನ್ನಾದರೋ ಹತೋಟಿಗೆ ತರಲು ಯಾರಿಗೂ ಸಾಧ್ಯವಿಲ್ಲ. ಅದು ಸತತ ಕೇಡನ್ನುಂಟು ಮಾಡುವ ಕಿಡಿ; ಮೃತ್ಯುಮಾರಕ ವಿಷಕೊಂಡಿ. ಪ್ರಭುವನ್ನೂ ಪರಮ ಪಿತನನ್ನೂ ಸ್ತುತಿಸುವುದು ಅದೇ ನಾಲಿಗೆಯೇ; ದೇವಸ್ವರೂಪದಲ್ಲಿ ಸೃಷ್ಟಿಸಲಾದ ಮಾನವನನ್ನು ಶಪಿಸುವುದೂ ಅದೇ ನಾಲಿಗೆಯೇ. ಸ್ತುತಿ ಶಾಪಗಳೆರಡೂ ಒಂದೇ ಬಾಯಿಂದ ಹೊರಡುತ್ತವೆ. ಪ್ರಿಯ ಸಹೋದರರೇ, ಇದು ತರವಲ್ಲ.

ಕೀರ್ತನೆ: 12:1-2, 3-4, 6-7
ಶ್ಲೋಕ: ಹೇ ಪ್ರಭೂ, ನಮ್ಮನ್ನು ಸದಾ ಸಂರಕ್ಷಿತವಾಗಿಡು.

ಶುಭಸಂದೇಶ: ಮಾರ್ಕ 9: 2-13


ಆರು ದಿನಗಳ ಬಳಿಕ ಪೇತ್ರ, ಯಕೋಬ ಮತ್ತು ಯೊವಾನ್ನ ಇವರನ್ನು ಮಾತ್ರ ತಮ್ಮೊಡನೆ ಕರೆದುಕೊಂಡು ಯೇಸುಸ್ವಾಮಿ ಎತ್ತರವಾದ ಒಂದು ಬೆಟ್ಟಕ್ಕೆ ಹೋದರು. ಅಲ್ಲಿ ಆ ಶಿಷ್ಯರ ಕಣ್ಣೆದುರಿಗೇ ಯೇಸು ರೂಪಾಂತರ ಹೊಂದಿದರು. ಆಗ ಅವರ ಉಡುಪು ಅತ್ಯಂತ ಶುಭ್ರವಾಗಿ ಹೊಳೆಯಿತು. ಜಗದ ಯಾವ ಅಗಸನಿಂದಲೂ ಮಡಿಮಾಡಲಾಗದಷ್ಟು ಅದು ಬಿಳುಪಾಯಿತು. ಮೋಶೆ ಮತ್ತು ಎಲೀಯ ಪ್ರತ್ಯಕ್ಷರಾಗಿ ಯೇಸುವಿನೊಡನೆ ಮಾತನಾಡುತ್ತಿದ್ದುದು ಶಿಷ್ಯರಿಗೆ ಕಾಣಿಸಿತು. ಆಗ ಪೇತ್ರನು ಯೇಸುವಿಗೆ, “ಗುರುದೇವಾ, ನಾವು ಇಲ್ಲೇ ಇರುವುದು ಒಳ್ಳೆಯದು; ಅಪ್ಪಣೆಯಾಗಲಿ, ಮೂರು ಗುಡಾರಗಳನ್ನು ಕಟ್ಟುವೆವು; ತಮಗೊಂದು, ಮೋಶೆಗೊಂದು ಮತ್ತು ಎಲೀಯನಿಗೊಂದು,” ಎಂದನು. ಪೇತ್ರನಿಗೆ ತಾನು ಏನು ಹೇಳುತ್ತಿದ್ದೇನೆಂದೇ ತಿಳಿಯಲಿಲ್ಲ. ಶಿಷ್ಯರು ಅಷ್ಟು ಭಯಭ್ರಾಂತರಾಗಿದ್ದರು! ಅಷ್ಟರಲ್ಲಿ ಮೇಘವೊಂದು ಅವರನ್ನು ಆವರಿಸಿತು. ಅದರೊಳಗಿಂದ, “ಈತನು ನನ್ನ ಪುತ್ರ, ನನಗೆ ಪರಮಪ್ರಿಯನು, ಈತನ ಮಾತಿಗೆ ಕಿವಿಗೊಡಿ,” ಎಂಬ ವಾಣಿ ಕೇಳಿಸಿತು. ತಕ್ಷಣ, ಶಿಷ್ಯರು ಸುತ್ತಲೂ ನೋಡಲು ತಮ್ಮೊಂದಿಗೆ ಯೇಸುವೊಬ್ಬರನ್ನೇ ಹೊರತು ಬೇರೆ ಯಾರನ್ನೂ ಕಾಣಲಿಲ್ಲ. ಅನಂತರ ಯೇಸು ಮತ್ತು ಅವರ ಶಿಷ್ಯರು ಬೆಟ್ಟದಿಂದ ಇಳಿದುಬರುವಾಗ, “ನರಪುತ್ರನು ಸತ್ತು ಪುನರುತ್ಥಾನಹೊಂದುವ ತನಕ ನೀವು ಕಂಡದ್ದನ್ನು ಯಾರಿಗೂ ಹೇಳಬೇಡಿ,” ಎಂದು ಆಜ್ಞಾಪಿಸಿದರು. ಅಂತೆಯೇ ಶಿಷ್ಯರು ಇದನ್ನು ಯಾರಿಗೂ ಹೇಳಲಿಲ್ಲ; ಆದರೂ ‘ಸತ್ತು ಪುನರುತ್ಥಾನ ಹೊಂದುವುದು’ ಎಂದರೆ ಏನು? ಎಂದು ತಮ್ಮತಮ್ಮೊಳಗೆ ಚರ್ಚಿಸಿಕೊಂಡರು. ಅನಂತರ, “ಎಲೀಯನು ಮೊದಲು ಬರಬೇಕಾದುದು ಅಗತ್ಯವೆಂದು ಶಾಸ್ತ್ರಜ್ಞರು ಹೇಳುತ್ತಾರಲ್ಲಾ, ಅದು ಹೇಗೆ?” ಎಂದು ಶಿಷ್ಯರು ಯೇಸುವನ್ನು ಕೇಳಿದರು. ಅದಕ್ಕೆ ಅವರು, “ ‘ಎಲೀಯನು ಮೊದಲು ಬಂದು ಎಲ್ಲವನ್ನೂ ಸಜ್ಜುಗೊಳಿಸುವನೆಂಬುದೇನೋ ನಿಜ. ಆದರೂ ನರಪುತ್ರನು ಜನರಿಂದ ತೀವ್ರಯಾತನೆಯನ್ನು ಅನುಭವಿಸಿ ಅವರಿಂದ ತಿರಸ್ಕøತನಾಗಬೇಕು,’ ಎಂದು ಪವಿತ್ರಗ್ರಂಥದಲ್ಲಿ ಬರೆದಿದೆಯಲ್ಲವೆ; ಇದು ಹೇಗೆ? ಆದರೆ ನಾನು ನಿಮಗೆ ಹೇಳುವುದೇನೆಂದರೆ, ‘ಎಲೀಯನು ಬಂದಾಗಿದೆ; ಆತನ ವಿಷಯವಾಗಿ ಮೊದಲೇ ಬರೆದಿರುವಂತೆ ಜನರು ತಮ್ಮ ಇಚ್ಛಾನುಸಾರ ಆತನನ್ನು ಹಿಂಸಿಸಿದ್ದೂ ಆಗಿದೆ’,” ಎಂದರು. 

No comments:

Post a Comment