ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

09.03.22 - "ಪ್ರವಾದಿ ಯೋನನಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ"

ಮೊದಲನೇ ವಾಚನ: ಯೋನ 3:1-10


ಯೋನನಿಗೆ ಸರ್ವೇಶ್ವರ ಸ್ವಾಮಿಯ ವಾಣಿ ಪುನಃ ಕೇಳಿಸಿತು: "ಎದ್ದು ಮಹಾನಗರವಾದ ನಿನೆವೆಗೆ ಹೋಗು. ನಾನು ನಿಮಗೆ ತಿಳಿಸಿದ ಸಂದೇಶವನ್ನು ಅಲ್ಲಿಯ ನಿವಾಸಿಗಳಿಗೆ ಸಾರು," ಎಂದಿತು. ಸ್ವಾಮಿಯ ಆಜ್ಞಾನುಸಾರ ಯೋನನು ನಿನೆವೆಗೆ ಹೋದನು. ಅದೊಂದು ವಿಸ್ತಾರವಾದ ನಗರ. ಅದನ್ನು ಹಾದು ಹೋಗಲು ಮೂರು ದಿನಗಳು ಹಿಡಿಯುತ್ತಿತ್ತು. ನಗರವನ್ನು ಪ್ರವೇಶಿಸಿ ಒಂದು ದಿನದ ಪ್ರಯಾಣ ಮಾಡಿದ ನಂತರ ಯೋನನು ಸ್ವಾಮಿಯ ಸಂದೇಶವನ್ನು ಸಾರುತ್ತಾ, "ಜನರೇ ಕೇಳಿ: ನಿಮ್ಮ ನಗರ ನಲವತ್ತು ದಿನಗಳಲ್ಲಿ ನಾಶವಾಗುವುದು," ಎಂದನು. ಆ ನಗರದ ನಿವಾಸಿಗಳು ದೇವರ ಸಂದೇಶವನ್ನು ನಂಬಿದರು. ಪ್ರತಿಯೊಬ್ಬನೂ ಉಪವಾಸ ಕೈಗೊಳ್ಳಬೇಕೆಂದು ನಿರ್ಧರಿಸಿದರು. ಹಿರಿಯರು ಮೊದಲುಗೊಂಡು ಕಿರಿಯರವರೆಗೆ ಎಲ್ಲರೂ ಮನಃಪರಿವರ್ತನೆಯ ಚಿಹ್ನೆಯಾಗಿ ಗೋಣಿತಟ್ಟನ್ನು ಹುಟ್ಟುಕೊಂಡರು. ಈ ಸಂಗತಿ ನಿನೆವೆಯ ಅರಸನ ಕಿವಿಗೆ ಬಿದ್ದಿತು. ಅವನು ಸಿಂಹಾಸನದಿಂದ ಇಳಿದು, ತನ್ನ ರಾಜವಸ್ತ್ರಗಳನ್ನು ತೆಗೆದುಬಿಟ್ಟು, ಗೋಣಿತಟ್ಟನ್ನು ಉಟ್ಟುಕೊಂಡು ಬೂದಿಯಲ್ಲಿ ಕುಳಿತುಕೊಂಡನು. ಕೂಡಲೇ ತನ್ನ ಪ್ರಜೆಗಳಿಗೆ ಈ ರಾಜಾಜ್ಞೆಯನ್ನು ನಿನೆವೆಯಲ್ಲಿ ಹೊರಡಿಸಿದನು; "ಅರಸನ ಹಾಗೂ ಆತನ ಆಪ್ತ ಪ್ರಮುಖರ ಆಜ್ಞೆಯಿದು: ಜನರಾಗಲೀ, ದನಕರುಗಳಾಗಲೀ, ಕುರಿಮೇಕೆಗಳಾಗಲೀ ಯಾರೂ ಏನನ್ನೂ ತಿನ್ನಬಾರದು, ಕುಡಿಯಲೂಬಾರದು. ಎಲ್ಲಾ ಜನರು ಗೋಣಿತಟ್ಟನ್ನು ಉಟ್ಟುಕೊಳ್ಳಬೇಕು, ಪ್ರಾಣಿಗಳಿಗೂ ಹೊದಿಸಬೇಕು. ದೇವರನ್ನು ಶ್ರದ್ಧೆಯಿಂದ ಪ್ರಾರ್ಥಿಸಬೇಕು. ಎಲ್ಲರೂ ದೌರ್ಜನ್ಯವನ್ನು ತ್ಯಜಿಸಿ ಹಿಂಸಾಚಾರವನ್ನು ಕೈ ಬಿಡಬೇಕು ಹೀಗೆ ಮಾಡಿದ್ದೇ ಆದರೆ, ದೇವರು ಒಂದು ವೇಳೆ ತಮ್ಮ ಮನಸ್ಸನ್ನು ಬದಲಾಯಿಸಿ ತಮ್ಮ ಉಗ್ರ ಕೋಪವನ್ನು ತಡೆದಾರು, ನಾವು ನಾಶವಾಗದೆ ಉಳಿದೆವು." ಆ ಜನರು ಮಾಡಿದುದೆಲ್ಲವನ್ನು ದೇವರು ಗಮನಿಸಿದರು.  ತಮ್ಮ ದುರ್ನಡತೆಯನ್ನು ಜನರು ಕೈಬಿಟ್ಟದ್ದನ್ನು ಕಂಡು ಮನಮರುಗಿ ಅವರಿಗೆ ವಿಧಿಸಬೇಕೆಂದಿದ್ದ ಶಿಕ್ಷೆಯನ್ನು ತಡೆಹಿಡಿದರು.

ಕೀರ್ತನೆ: 51:3-4, 12-13, 18-19
ಶ್ಲೋಕ: ನೊಂದ ಬೆಂದ ಮನವನಾತ ಒಲ್ಲೆಯೆನನು

ಶುಭಸಂದೇಶ: ಲೂಕ 11: 29-32

ನರ ಗುಂಪು ಹೆಚ್ಚುತ್ತಿದ್ದಾಗ, ಯೇಸುಸ್ವಾಮಿ ಹೀಗೆಂದು ಮುಂದುವರಿಸಿದರು. "ಈ ಪೀಳಿಗೆ ಕೆಟ್ಟ ಪೀಳಿಗೆ ಇದು ಅದ್ಭುತ ಕಾರ್ಯವನ್ನು ಸಂಕೇತವಾಗಿ ಕೋರುತ್ತದೆ. ಪ್ರವಾದಿ ಯೋನನ ಸಂಕೇತವೇ ಹೊರತು ಬೇರೆ ಯಾವ ಸಂಕೇತವೂ ಇದಕ್ಕೆ ದೊರಕದು. ಹೇಗೆಂದರೆ ನಿನೆವೆ ನಗರದ ಜನರಿಗೆ ಪ್ರವಾದಿ ಯೋನನು ಸಂಕೇತವಾದಂತೆ ನರಪುತ್ರನು ಈ ಸಂತತಿಗೆ ಸಂಕೇತವಾಗಿರುವನು. ದೈವ ತೀರ್ಪಿನ ದಿನ ದಕ್ಷಿಣ ದೇಶದ ರಾಣಿ ಈ ಪೀಳಿಗೆಗೆ ಎದುರಾಗಿ ನಿಂತುಕೊಂಡು, ಇವರನ್ನು ಅಪರಾಧಿಗಳೆಂದು ತೋರಿಸುವಳು. ಆಕೆ ಸೊಲೊಮೋನನ ಜ್ಞಾನೋಕ್ತಿಗಳನ್ನು ಕೇಳುವುದಕ್ಕಾಗಿ ದೇಶದ ಕಟ್ಟಕಡೆಯಿಂದ ಬಂದಳು. ಆದರೆ, ಸೊಲೊಮೋನನಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ. ತೀರ್ಪಿನ ದಿನ ನಿನೆವೆ ನಗರದವರು, ಈ ಪೀಳಿಗೆಗೆ ಎದುರಾಗಿ ನಿಂತು ಇದನ್ನು ಅಪರಾಧಿ ಎಂದು ತೋರಿಸುವರು. ಏಕೆಂದರೆ, ಪ್ರವಾದಿ ಯೋನನ ಬೋಧನೆಯನ್ನು ಕೇಳಿ ಪಶ್ಚಾತಾಪಪಟ್ಟು ಅವರು ದೇವರಿಗೆ ಅಭಿಮುಖರಾದರು. ಆದರೆ ಪ್ರವಾದಿ ಯೋನನಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ."

ಮನಸಿಗೊಂದಿಷ್ಟು : ಅದ್ಭುತ ಕಾರ್ಯವನ್ನು ಬಯಸಿದ ಪೀಳಿಗೆಯನ್ನು ಕೆಟ್ಟ ಪೀಳಿಗೆ ಎನ್ನುತ್ತಾರೆ ಯೇಸು. ಆ ಪೀಳಿಗೆ ಇಂದಿಗೂ ಮುಂದುವರಿದಿದೆ. ನಮ್ಮ ಜೀವನದಲ್ಲಿ ಯೇಸು ಕ್ರಿಸ್ತರು ತಮ್ಮ ಜೀವನ, ಬೋಧನೆ, ಮೌಲ್ಯಗಳಿಗಿಂತ ನಮಗೆ ಬೇಕಾಗಿರುವುದು ನಮ್ಮ ಕಷ್ಟಗಳ ಪರಿಹಾರಕ್ಕಾಗಿ.  ಕ್ರಿಸ್ತನ ಮುಂದೆ ಅಸಹಾಯಕರಾಗಿ ನಿಲ್ಲುವುದು ತಪ್ಪಲ್ಲ. ಆದರೆ ನಮ್ಮ ಅವರ ನಡುವಿನ ಸಂಬಂಧ ಕೇವಲ ಅದ್ಭುತಗಳಿಗೆ, ಬೇಡಿಕೆಗಳಿಗೆ  ಸೀಮಿತವಾದರೆ ಅದಕ್ಕಿಂತ ದೌರ್ಭಾಗ್ಯ ಇನ್ನೊಂದಿಲ್ಲ.

ಪ್ರಶ್ನೆನಮ್ಮ ಹೃದಯವೂ ನೆನೆವೆ ನಗರದಂತಾಗಲು ಸಾಧ್ಯವಿಲ್ಲವೇ?

ಬುದ್ಧಿಗೊಂದಿಷ್ಟು : ಇಂದಿನ ಶುಭಸಂದೇಶದಲ್ಲಿ ಬರುವ ನಿನೆವೆ ನಗರ ಕ್ರಿಸ್ತ ಪೂರ್ವ 600 ಆಸುಪಾಸಿನಲ್ಲಿ ಸುಮಾರು ಐವತ್ತು ವರ್ಷಗಳ ಕಾಲ ಇಡೀ ವಿಶ್ವದಲ್ಲೇ ಅತ್ಯಂತ ದೊಡ್ಡ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು ಎನ್ನುತ್ತದೆ ಇತಿಹಾಸ. ಇಂತಹ ದೊಡ್ಡ ಹಾಗೂ ಎಲ್ಲಾ ರೀತಿಯ ಜನರಿದ್ದ ನಗರಕ್ಕೆ ಹೋಗಿ ದೇವರ ಮನಪರಿವರ್ತನೆಯ ಸಂದೇಶ ಕೊಡಲು ನನ್ನಿಂದ ಸಾಧ್ಯವೇ ಎಂಬ ಯೋನನ ಅಳುಕು ಸಹಜವಲ್ಲವೇ?


ಐತಿಹಾಸಿಕ ನೆನೆವೆ ನಗರ ಹಾಗೂ ಅದರ ಜನರ ಮನವರ್ತನೆಯ ಬಗ್ಗೆ ಯೋನನ ಗ್ರಂಥ ವನ್ನು ಓದಿ


No comments:

Post a Comment