ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

20.03.22 - " ಹಣ್ಣುಬಿಟ್ಟರೆ ಸರಿ; ಇಲ್ಲದಿದ್ದರೆ ಕಡಿದು ಹಾಕೋಣ"

ಮೊದಲನೇ ವಾಚನ: ವಿಮೋಚನಾಕಾಂಡ 3:1-8, 13-15

ಮೋಶೆ ಮಿದ್ಯಾನರ ಪೂಜಾರಿಯೂ ತನ್ನ ಮಾವನೂ ಆದ ಇತ್ರೋನನ ಮಂದೆಯನ್ನು ಮೇಯಿಸುತ್ತಿದ್ದನು. ಒಮ್ಮೆ ಆ ಮಂದೆಯನ್ನು ಕಾಡಿನ ಹಿಂಬಾಗಕ್ಕೆ ನಡೆಸಿಕೊಂಡು  'ಹೋರೇಬ್' ಎಂಬ ದೇವರ ಬೆಟ್ಟಕ್ಕೆ ಬಂದನು. ಅಲ್ಲಿ ಮುಳ್ಳಿನ ಪೊದೆಯೊಂದರ ಒಳಗೆ ಉರಿಯುವ ಬೆಂಕಿಯಲ್ಲಿ ಸರ್ವೇಶ್ವರನ ದೂತನು ಅವನಿಗೆ ಕಾಣಿಸಿಕೊಂಡನು. ಮೊಶೆ ನೋಡಿದನು. ಆ ಮುಳ್ಳಿನ ಪೊದೆ ಉರಿಯುತ್ತಲೇ ಇತ್ತು; ಆದರೆ ಸುಟ್ಟುಹೋಗದೆ ಇತ್ತು. ಆಗ ಮೋಶೆ, "ಇದೇನು ಆಶ್ಚರ್ಯ! ಪೊದೆ ಸುಟ್ಟುಹೋಗದೆ ಇರುವುದಕ್ಕೆ ಕಾರಣವೇನು? ನಾನು ಹತ್ತಿರ ಹೋಗಿ ತಿಳಿದುಕೊಳ್ಳುತ್ತೇನೆ" ಎಂದುಕೊಂಡನು. ಅದನ್ನು ನೋಡಲು ಅವನು ಮುಂದಕ್ಕೆ ಬರುವುದನ್ನು ಸರ್ವೇಶ್ವರಸ್ವಾಮಿ ಕಂಡರು. ಪೊದೆಯೊಳಗಿಂದ, "ಮೋಶೆ, ಮೋಶೆ," ಎಂದು ದೇವರು ಕರೆದರು. ಅದಕ್ಕವನು, ಇಗೋ, ಇದ್ದೇನೆ," ಎಂದು ಉತ್ತರಕೊಟ್ಟನು. ದೇವರು ಅವನಿಗೆ "ಹತ್ತಿರ ಬರಬೇಡ! ನಿನ್ನ ಕಾಲಿನ ಕೆರಗಳನ್ನು ತೆಗೆದುಹಾಕು; ಏಕೆಂದರೆ ನೀನು ನಿಂತಿರುವ ಸ್ಥಳ ಪವಿತ್ರಭೂಮಿ," ಎಂದು ಹೇಳಿದರು. ಅದೂ ಅಲ್ಲದೆ, "ನಾನು ನಿನ್ನ ತಂದೆಯ ದೇವರು, ಇಸಾಕನ  ದೇವರು ಯಕೋಬನ ದೇವರು," ಎಂದರು. ಆಗ ಮೋಶೆ ದೇವರನ್ನು ದಿಟ್ಟಿಸಿ ನೋಡಲು ಭಯಪಟ್ಟು ಮುಖವನ್ನು ಮುಚ್ಚಿಕೊಂಡನು. ಆಗ ಸರ್ವೇಶ್ವರ, " ಈಜಿಪ್ಟ್ ನಲ್ಲಿರುವ ನನ್ನ ಜನರ ದುರವಸ್ಥೆಯನ್ನು ನಾನು ಕಣ್ಣಾರೆ ನೋಡಿದ್ದೇನೆ ಬಿಟ್ಟೀ ಕೆಲಸ ಮಾಡಿಸಿಕೊಳ್ಳುವವರ ಬಗ್ಗೆ ಅವರು ಇಟ್ಟ ಮೊರೆ ನನಗೆ ಕೇಳಿಸಿದೆ. ಅವರ ಕಷ್ಟದುಃಖವನ್ನೆಲ್ಲಾ ನಾನು ಬಲ್ಲೆ. ಆದಕಾರಣ ಅವರನ್ನು ಈಜಿಪ್ಟಿನವರ ಕೈಯಿಂದ ಬಿಡಿಸುವುದಕ್ಕೂ ಮತ್ತು ಆ ದೇಶದಿಂದ ಹೊರತಂದು ಹಾಲೂ ಜೇನೂ ಹರಿಯುವ ಸವಿಸ್ತಾರವಾದ ಒಳ್ಳೆಯ ನಾಡಿಗೆ, ನಡೆಸಿಕೊಂಡು ಹೋಗುವುದಕ್ಕೂ ಇಳಿದು ಬಂದಿದ್ದೇನೆ, ಎಂದರು. ಮೋಶೆ ದೇವರಿಗೆ, "ನಾನು ಇಸ್ರಯೇಲರ ಬಳಿಗೆ ಹೋಗಿ, 'ನಿಮ್ಮ ಪೂರ್ವಜರ ದೇವರು ನನ್ನನ್ನು ನಿಮ್ಮ ಬಳಿಗೆ ಕಳಿಸಿದ್ದಾರೆ," ಎಂದು ಹೇಳಿದಾಗ ಅವರು ಒಂದು ವೇಳೆ, "ಆತನ ಹೆಸರೇನು?" ಎಂದು ನನ್ನನ್ನು ಕೇಳಿದರೆ ನಾನೇನು ಉತ್ತರ ಕೊಡಬೇಕು?" ಎಂದು ಕೇಳಿದನು. ಆಗ ದೇವರು ಹೀಗೆಂದರು. "ಇರುವವನಾಗಿ ಇರುವವನು ನಾನೇ; ನೀನು ಇಸ್ರಯೇಲರಿಗೆ 'ತಾನಾಗಿ ಇರುವವನು,’ ನನ್ನನ್ನ ನಿಮ್ಮ ಬಳಿಗೆ ಕಳಿಸಿದ್ದಾನೆ ಎಂದು ಹೇಳು," ದೇವರು ಮೋಶೆಗೆ ಮತ್ತೆ ಇಂತೆಂದರು: "ನೀನು ಇಸ್ರಯೇಲರಿಗೆ, "ನಿಮ್ಮ ಪೂರ್ವಜರಾದ ಅಬ್ರಹಾಮ , ಇಸಾಕ ಹಾಗು ಯಕೋಬರ ದೇವರಾಗಿರುವ ಸರ್ವೇಶ್ವರ ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾರೆ" ಎಂದು ಹೇಳು. ಇದು ಸದಾಕಾಲಕ್ಕೂ ನನ್ನ ಹೆಸರು. ಈ ಹೆಸರಿನಿಂದಲೇ ತಲತಲಾಂತರಕ್ಕೂ ನನ್ನನ್ನು ಸ್ಮರಿಸಬೇಕು."

ಕೀರ್ತನೆ: 103:1-4, 6-8, 11
ಶ್ಲೋಕ: ಪ್ರಭು ಸಹನಶೀಲನು, ಪ್ರೀತಿಮಯನು.

ಎರಡನೇ ವಾಚನ: 1 ಕೊರಿಂಥಿಯರಿಗೆ : 10:1-6, 10-12

ಪ್ರಿಯ ಸಹೋದರರೇ, ನಮ್ಮ ಪೂರ್ವಜರಿಗೆ ಸಂಭವಿಸಿದವುಗಳತ್ತ ನಿಮ್ಮ ಗಮನವನ್ನು ಸೆಳೆಯಬೇಕೆಂದಿದ್ದೇನೆ ಅವರೆಲ್ಲರೂ ಮೋಡದ ನೆರಳಿನಲ್ಲಿಯೇ ನಡೆದರು. ಎಲ್ಲರೂ ಸಮುದ್ರವನ್ನು ಸುರಕ್ಷಿತವಾಗಿ ದಾಟಿದರು. ಹೀಗೆ ಅವರು ಮೋಡದಲ್ಲಿಯೂ ಸಮುದ್ರದಲ್ಲಿಯೂ ಸ್ನಾನದೀಕ್ಷೆಯನ್ನು ಪಡೆದು ಮೋಶೆಗೆ ಶಿಷ್ಯರಾದರು. ಎಲ್ಲರೂ ಒಂದೇ ದೈವಿಕ ಪಾನೀಯವನ್ನು ಕುಡಿದರು; ಅದೂ ತಮ್ಮೊಡನೆ ಬರುತ್ತಿದ್ದ ದೈವಿಕ ಬಂಡೆಯಿಂದ ಕುಡಿದರು. ಕ್ರಿಸ್ತಯೇಸುವೇ ಆ ಬಂಡೆ. ಆದರೂ ಅವರಲ್ಲಿ ಬಹುಮಂದಿ ದೇವರ ಮೆಚ್ಚುಗೆಗೆ ಪಾತ್ರರಾಗಲಿಲ್ಲ. ಆದ್ದರಿಂದಲೇ ಮರುಭೂಮಿಯಲ್ಲಿ ಮಡಿದು ಮಣ್ಣುಪಾಲಾದರು. ಈ ಘಟಣೆಗಳು ನಮಗೆ ಎಚ್ಚರಿಕೆ ನೀಡುವ ನಿದರ್ಶನಗಳಾಗಿವೆ. ಅವರಂತೆ ನಾವು ಕೆಟ್ಟದಾದವುಗಳನ್ನು ಆಶಿಸಬಾರದು. ಅವರಲ್ಲಿ ಕೆಲವರು ಗೊಣಗುಟ್ಟಿದರು ಸಂಹಾರಕ ದೂತನಿಂದ ಸಂಹರಿಸಲ್ಪಟ್ಟರು. ನೀವು ಅವರಂತೆ ಗೊಣಗುಟ್ಟವರಾಗಬೇಡಿ. ಇದೆಲ್ಲ ಅವರಿಗೆ ಸಂಭವಿಸಿದುದು ಇತರರಿಗೆ ನಿದರ್ಶನವಾಗಿರಲೆಂದು. ಇವುಗಳನ್ನು ಬರೆದಿಟ್ಟಿರುವುದು, ಯುಗಾಂತ್ಯಕ್ಕೆ ಬಂದಿರುವ ನಮಗೆ ಮುನ್ನೆಚ್ಚರಿಕೆಯಾಗಿರಲೆಂದು. ಆದಕಾರಣ ಸ್ಥಿರವಾಗಿ ನಿಂತಿರುವೆನೆಂದು ಕೊಚ್ಚಿಕೊಳ್ಳುವವನೇ, ಕುಸಿದುಬೀಳದಂತೆ ಎಚ್ಚರಿಕೆಯಿಂದಿರು.

ಶುಭಸಂದೇಶ: ಲೂಕ 13:1-9




























ಕೆಲವರು ಯೇಸುಸ್ವಾಮಿಯ ಬಳಿಗೆ ಬಂದು, ಬಲಿಯರ್ಪಿಸುತ್ತಾ ಇದ್ದ ಗಲಿಲೇಯದವರನ್ನು ಪಿಲಾತನು ಕೊಲ್ಲಿಸಿದನೆಂಬ ವಿಷಯವನ್ನು ತಿಳಿಸಿದರು. ಅದಕ್ಕೆ ಯೇಸು, "ಇಂಥಾ ಕೊಲೆಗೆ ಈಡಾದವರು ಇತರ ಎಲ್ಲ ಗಲಿಲೇಯದವರಿಗಂತ ಹೆಚ್ಚು ಪಾಪಿಗಳೆಂದು ಭಾವಿಸುತ್ತೀರೋ,? ಹಾಗೆ ಭಾವಿಸಕೂಡದು. ನೀವು ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗದೆ ಹೋದರೆ, ಅವರ ಹಾಗೆಯೇ ನೀವೂ ನಾಶವಾಗುವಿರಿ, ಶಿಲೊವಾ ಎಂಬಲ್ಲಿ ಗೋಪುರ ಕುಸಿದು ಬಿದ್ದಾಗ ಹದಿನೆಂಟು ಜನ ಸತ್ತರಲ್ಲವೆ? ಅವರು ಜೆರುಸಲೇಮಿನಲ್ಲಿ ವಾಸವಾಗಿರುವ ಇತರ ಎಲ್ಲಾ ಜನರಿಗಿಂತ ಹೆಚ್ಚು ದೋಷಿಗಳಾಗಿದ್ದರೆಂದು ಭಾವಿಸುತ್ತಿರೋ? ಹಾಗಲ್ಲ, ನೀವು ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗದಿದ್ದರೆ, ಅವರ ಹಾಗೆಯೇ ನೀವೂ ನಾಶವಾಗುವಿರಿ," ಎಂದರು. ಅನಂತರ ಯೇಸುಸ್ವಾಮಿ ಈ ಸಾಮತಿಯನ್ನು ಹೇಳಿದರು: " ಒಬ್ಬನು ತನ್ನ ದ್ರಾಕ್ಷಿ ತೋಟದಲ್ಲಿ ಒಂದು ಅಂಜೂರದ ಮರವನ್ನು ನೆಡಿಸಿದ್ದ. ಒಮ್ಮೆ ಅವನು ಬಂದು ಅದರಲ್ಲಿ ಹಣ್ಣನ್ನು ಹುಡುಕಲು ಒಂದೂ ಕಾಣಿಸಲಿಲ್ಲ. ತೋಟಗಾರನನ್ನು ಕರೆದು, "ನೋಡು, ಮೂರು ವರ್ಷಗಳಿಂದ ಈ ಮರದಲ್ಲಿ ಹಣ್ಣನ್ನು ‌ಹುಡುಕುತ್ತಾ ಇದ್ದೇನೆ. ಒಂದಾದರೂ ಕಂಡುಬರಲಿಲ್ಲ  ಇನ್ನು ಇದನ್ನು ಕಡಿದು ಹಾಕು. ಭೂಮಿಗೆ ಭಾರವಾಗಿ ಅದರ ಸಾರವನ್ನು ಇದೇಕೆ ವ್ಯರ್ಥ ಮಾಡಬೇಕು?" ಎಂದು ಹೇಳಿದ. ಅದಕ್ಕೆ ತೋಟಗಾರನು, "ಸ್ವಾಮೀ, ಈ ಒಂದು ವರ್ಷ ಇದು ಹಾಗೆಯೇ ಇರಲಿ ಬಿಡಿ. ಅಷ್ಟರಲ್ಲಿ ಸುತ್ತಲೂ ಪಾತಿತೆಗೆದು ಗೊಬ್ಬರ ಹಾಕುತ್ತೇನೆ, ಮುಂದಿನ ವರ್ಷ ಹಣ್ಣುಬಿಟ್ಟರೆ ಸರಿ; ಇಲ್ಲದಿದ್ದರೆ ಕಡಿದು ಹಾಕೋಣ," ಎಂದನು,"

ಮನಸಿಗೊಂದಿಷ್ಟು : ದೇವರು ನಮಗೆ ನೀಡಿರುವ,  ವಿಸ್ತರಿಸಿರುವ ಅನುಗ್ರಹ ಹಾಗೂ ಕೃಪೆಯನ್ನು ಅರ್ಥ ಮಾಡಿಕೊಳ್ಳದಿದ್ದರೆ ಅಂಜುರ ಮರಕ್ಕೆ ಸಿಕ್ಕ ಎಚ್ಚರಿಕೆ ನಮಗೂ ಸಿಗುತ್ತದೆ. ದೇವರ ಅನುಗ್ರಹ, ಪ್ರೀತಿಯ ಸಾರವನ್ನು  ಉಪಯೋಗಿಸಿಕೊಳ್ಳದೆ, ಉಪಯೋಗಿಸಿಯೂ ಫಲ ಕೊಡದೆ ಹೋದರೆ ನಮ್ಮ ಜೀವನ ವ್ಯರ್ಥವೇ ಸರಿ. ಈ ಲೋಕದ ಲೆಕ್ಕಚಾರದಲ್ಲಿ ನಾವು ಸ್ಥಿರವಾಗಿ ನಿಂತಿರುವೆವು ಎಂದು ಬೆನ್ನು ತಟ್ಟಿಕೊಳ್ಳದೆ ದೇವರ ಎದುರಿನಲ್ಲಿ ನಾವೆಷ್ಟು ಯೋಗ್ಯರು ಎಂಬುದನ್ನು ಯೋಚಿಸೋಣ. ಇಳ್ಳಿ ಮತ್ತೊಂದು ಸಂದೇಶವೂ ಇದೆ. ಜೀವನದಲ್ಲಿ ಕಷ್ಟ ಪಡುವವರು ದೇವರಿಂದ ಶಿಕ್ಷೆ ಪಡುತ್ತಿದ್ದಾರೆ ನಾವು ಭಾಗ್ಯವಂತರು ಎಂದು ಬೆನ್ನು ತಟ್ಟಿಕೊಳ್ಳಬೇಡಿ ಎಂಬ ಸಂದೇಶವನ್ನು ಸಹ ಯೇಸು ಸ್ವಾಮಿ ಸ್ಪಷ್ಟವಾಗಿ ನೀಡುತ್ತಿದ್ದಾರೆ.

ಪ್ರಶ್ನೆ : ದೇವರ ಪ್ರೀತಿ ಅನುಗ್ರಹ ನಮ್ಮಲ್ಲಿ ಎಷ್ಟು ಫಲ ನೀಡಿದೆ ?



 ತಪಸ್ಸು ಕಾಲದಲ್ಲಿನ ಇಲ್ಲಿಯವರೆಗಿನ ಪ್ರಶ್ನೆಗಳು 


 -   ತಪಸ್ಸು ಕಾಲದಲ್ಲಿ ನಮ್ಮ ಅಧ್ಯಾತ್ಮಿಕ ಗುರಿಗಳೇನು?

 -  ಶಿಲುಬೆ ಹೊತ್ತು ಹಿಂಬಾಲಿಸಲು ಸಿದ್ಧವಿದ್ದೇವೆಯೇ

 -  ದೇವರ ಮುಂದೆ ನಾವು ತೋರಬಹುದಾದ ಆಸ್ತಿಗಳಾವುವು

 -  ನಮಗೆ  ದೈವೀಕ ವೈದ್ಯನ ಅವಶ್ಯಕತೆಯಿದೆ ಎಂಬ ಅರಿವು ನಮಗಿದೆಯೇ?

 -  ನಾವಿಂದು ಯಾವುದೆಲ್ಲವುಗಳಿಂದ ಜೀವಿಸುತ್ತಿದ್ದೇವೆ?

 -  ನಮ್ಮ ಜೀವನದಲ್ಲಿ ಹಸಿದವರಿಗೆ ನಾವಾಗೇ ಹೋಗಿ ಊಟವಿತ್ತ ಉದಾಹರಣೆಗಳೆಷ್ಟು

 -  ನಮ್ಮ ಪ್ರಾರ್ಥನೆಯಲ್ಲಿ ನಿರರ್ಥಕ ಪದಗಳೆಷ್ಟುಸ್ವಾರ್ಥ ಬೇಡಿಕೆಗಳೆಷ್ಟು?

 -  ನಮ್ಮ ಹೃದಯವೂ ನೆನೆವೆ ನಗರದಂತಾಗಲು ಸಾಧ್ಯವಿಲ್ಲವೇ?

 -  ನಮಗಾಗಿ ನಾವು ಏನು ಅಪೇಕ್ಷಿಸುತ್ತೇವೆಯೋ ಅದನ್ನು ಇತರರಿಗೂ ಬಯಸುತ್ತಿದ್ದೇವೆಯೇ?

 -  ನಾವು ಮತ್ತೊಬ್ಬರನ್ನು ತುಚ್ಛೀಕರಿಸಿದ ಸಂದರ್ಭಗಳ ಲೆಕ್ಕ ನಮ್ಮಲ್ಲಿದೆಯೇ?   

-ನಾವು ಯೇಸುವಿಗೆ ಸ್ವಂತ ಜನರಾಗಿದ್ದೇವೆಯೇ ಅಥವಾ ಇನ್ನೂ ಅನ್ಯರಾಗೇ ಉಳಿದಿದ್ದೇವೆಯೇ?

-ಯೇಸುವಿನ ಈ ರೂಪಾಂತರದ ಘಟನೆ ನಮ್ಮೊಳಗಿನ ರೂಪಾಂತರಕ್ಕೆ ಸ್ಪೂರ್ತಿಯಾಗಬಲ್ಲದೇ?

                           -ದಾಸನಾಗಿರು’ ಎಂಬ ಯೇಸುವಿನ ವಾಕ್ಯಕ್ಕೆ ನಾವೆಷ್ಟು ಬದ್ಧ?  

- ನಮ್ಮ ಬದುಕಿನ ಅಡಿಪಾಯ ಯಾವುದುದೈವ ನಂಬಿಕೆಯೇಲೌಕಿಕ ಗಳಿಕೆಯೇ?


- ದೇವರಿಂದ ನಮ್ಮ ಲೌಕೀಕ ಜೀವನ ಎಷ್ಟು ದೂರಾ ಸಾಗಿದೆ?





 :: 

No comments:

Post a Comment