ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

27.03.22 - "ತಪ್ಪಿ ಹೋಗಿದ್ದ, ಈಗ ಸಿಕ್ಕಿದ್ದಾನೆ"

ಮೊದಲನೇ ವಾಚನ: ಯೆಹೋಶುವ 5:9,10-12
ರ್ವೇಶ್ವರಸ್ವಾಮಿ ಯೆಹೋಶುವನಿಗೆ, "ನಾನು ಈಜಿಪ್ಟಿನ ಕಳಂಕವನ್ನುಈದಿನ ನಿಮ್ಮಿಂದ ನಿವಾರಿಸಿಬಿಟ್ಟಿದ್ದೇನೆ," ಎಂದು ಹೇಳಿದ್ದರಿಂದ ಆ ಸ್ಥಳಕ್ಕೆ ಇಂದಿನವರೆಗೂ ಗಿಲ್ಗಾಲ್ ಎಂಬ ಹೆಸರಿಡಲಾಗಿದೆ. ಇಸ್ರಯೇಲರು ಗಿಲ್ಗಾಲಿನಲ್ಲಿ ತಂಗಿದ್ದಾಗ ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದ ಸಂಜೆ ಜೆರಿಕೋವಿನ ಬಯಲಿನಲ್ಲಿ ಪಾಸ್ಕಹಬ್ಬವನ್ನಾಚರಿಸಿದರು.  ಮಾರನೆಯ ದಿನದಂದು ಕಾನಾನಿನ ಧಾನ್ಯವನ್ನು ಊಟಕ್ಕೆ ಬಳಸಲು ತೊಡಗಿದರು. ಹುಳಿಯಿಲ್ಲದ ರೊಟ್ಟಿಗಳನ್ನು ಮತ್ತು ಸುಟ್ಟ ತೆನೆಗಳನ್ನು ತಿನ್ನತೊಡಗಿದರು. ಆ ನಾಡಿನ ಹುಟ್ಟುವಳಿಯನ್ನು ಊಟಮಾಡಿದ ಮರುದಿನವೇ ಮನ್ನವು ನಿಂತುಹೋಯಿತು, ಅದು ಅವರಿಗೆ ಮತ್ತೆ ಸಿಕ್ಕಲೇ ಇಲ್ಲ. ಇಸ್ರಯೇಲರು ಆ ವರ್ಷವೆಲ್ಲ ಕಾನಾನ್ ನಾಡಿನ ಉತ್ಪನ್ನವನ್ನೇ ಅನುಭವಿಸಿದರು.

ಕೀರ್ತನೆ: 34:2-3, 4-5, 6-7
ಶ್ಲೋಕ: ಸವಿದು ನೋಡು ಪ್ರಭುವಿನ ಮಾಧುರ್ಯವನ್ನು

ಎರಡನೇ ವಾಚನ: 2 ಕೊರಿಂಥಿಯರಿಗೆ  5:17-21

ಹೋದರರೇ, ಯಾರಾದರೂ ಯೇಸುಕ್ರಿಸ್ತರೊಡನೆ ಒಂದಾದರೆ ಅವನು ನೂತನ ಸೃಷ್ಟಿಯಾಗುತ್ತಾನೆ. ಹಳೆಯದೆಲ್ಲಾ ಅಳಿದು ಹೋಗುತ್ತದೆ. ಹೊಸದಿದೋ, ಜನ್ಮತಳೆದಿದೆ. ಇದೆಲ್ಲಾ ಆಗುವುದು ದೇವರಿಂದ. ದೇವರು ಕ್ರಿಸ್ತಯೇಸುವಿನ ಮುಖಾಂತರ ನಮ್ಮನ್ನು ತಮ್ಮೊಡನೆ ಸಂಧಾನ ಪಡಿಸಿಕೊಂಡಿದ್ದಾರೆ. ಇದಲ್ಲದೆ, ಇತರರನ್ನು ಸಂಧಾನಕ್ಕೆ ತರುವ ಕಾರ್ಯವನ್ನು ನಮಗೆ ವಹಿಸಿದ್ದಾರೆ. ಹೌದು, ದೇವರು ಮಾನವರ ಅಪರಾಧಗಳನ್ನು ಲೆಕ್ಕಿಸದೆ, ಕ್ರಿಸ್ತ ಯೇಸುವಿನಲ್ಲಿ ಇಡೀ ಜಗತ್ತನ್ನೇ ತಮ್ಮೊಡನೆ ಸಂಧಾನಗೊಳಿಸುತ್ತಿದ್ದಾರೆ. ಈ ಸಂಧಾನದ ಸಂದೇಶವನ್ನು ಸಾರುವ ಸೌಭಾಗ್ಯವನ್ನು ಅವರೇ ನಮಗೆ ಕೊಟ್ಟಿದ್ದಾರೆ. ಆದ್ದರಿಂದಲೇ ನಾವು ಕ್ರಿಸ್ತಯೇಸುವಿನ ರಾಯಭಾರಿಗಳು. ದೇವರೇ ನಮ್ಮ ಮುಖಾಂತರ ಕರೆನೀಡುತ್ತಿದ್ದಾರೆ. ಅವರೊಡನೆ ಸಂಧಾನಮಾಡಿಕೊಳ್ಳಿರೆಂದು ಕ್ರಿಸ್ತಯೇಸುವಿನ ಹೆಸರಿನಲ್ಲಿ ನಾವು ನಿಮ್ಮನ್ನು ವಿನಂತಿಸುತ್ತೇವೆ. ಪಾಪವನ್ನೇ ಅರಿಯದ ಕ್ರಿಸ್ತಯೇಸುವನ್ನು ದೇವರು ನಮಗೋಸ್ಕರ ಪಾಪಸ್ವರೂಪಿಯನ್ನಾಗಿಸಿದರು. ಕ್ರಿಸ್ತಯೇಸುವಿನಲ್ಲಿ ನಾವು ದೇವರೊಡನೆ ಸತ್ಸಂಬಂಧವನ್ನು ಪಡೆಯಲೆಂದೇ ಹೀಗೆ ಮಾಡಿದರು.

ಶುಭಸಂದೇಶ: ಲೂಕ 15:1-3, 11-32

ಯೇಸುಸ್ವಾಮಿಯ ಉಪದೇಶವನ್ನು ಕೇಳಲು ಎಲ್ಲಾ ಸಂಕದವರು ಪಾಪಿಗಳು ಬರುತ್ತಿದ್ದರು. ಇದನ್ನು ಕಂಡ ಫರಿಸಾಯರು ಮತ್ತು ಧರ್ಮಶಾಸ್ತ್ರಿಗಳು, ಈ ಮನುಷ್ಯ ಪಾಪಿಗಳನ್ನು ಬರಮಾಡಿಕೊಳ್ಳುತ್ತಾನೆ;  ಅವರೊಡನೆ ಊಟ ಮಾಡುತ್ತಾನೆ." ಎಂದು ಗೊಣಗಿದರು.ಆ ಸಂದರ್ಭದಲ್ಲಿ ಯೇಸು ಈ ಸಾಮತಿಯನ್ನು ಹೇಳಿದರು: "ಒಬ್ಬಾತನಿಗೆ ಇಬ್ಬರು ಮಕ್ಕಳಿದ್ದರು ಅವರಲ್ಲಿ ಕಿರಿಯವನು "ಅಪ್ಪಾ, ಆಸ್ತಿಯಲ್ಲಿ ನನಗೆ ಬರಬೇಕಾದ ಪಾಲನ್ನು ಕೊಟ್ಟುಬಿಡು," ಎಂದು ಕೇಳಿದ. ತಂದೆ ಅವರಿಬ್ಬರಿಗೂ ಆಸ್ತಿಯನ್ನು ಹಂಚ್ಚಿಕೊಟ್ಟ. ಕೆಲವು ದಿವಸಗಳಾದ ಮೇಲೆ ಕಿರಿಯ ಮಗ ತನ್ನ ಆಸ್ತಿಯನ್ನೆಲ್ಲಾ ಮಾರಿ, ಬಂದ ಹಣವನ್ನು ತೆಗೆದುಕೊಂಡು ಮನೆ ಬಿಟ್ಟು ಹೋದ. ದೂರ ದೇಶಕ್ಕೆ ಹೋಗಿ, ದುಂದು ಜೀವನ ನಡೆಸಿ ಹಣವನ್ನೆಲ್ಲಾ ಪೊಲು ಮಾಡಿಬಿಟ್ಟ. ಹೀಗೆ ಅವನು ಎಲ್ಲವನ್ನು ಹಾಳು ಮಾಡಿಕೊಂಡ ಮೇಲೆ ಆ ದೇಶಾದಾದ್ಯಂತ ಘೋರವಾದ ಕ್ಷಾಮ ತಲೆದೋರಿತು. ನಿರ್ಗತಿಕನಾದ ಅವನು ಹೋಗಿ, ಆ ದೇಶದ ನಿವಾಸಿಯೊಬ್ಬನನ್ನು ಆಶ್ರಯಿಸಿದ. ಆತ ಇವನನ್ನು ಹಂದಿ ಮೆಯಿಸಲು ತನ್ನ ರೊಪ್ಪಗಳಿಗೆ ಕಳುಹಿಸಿದ. ಅಲ್ಲಿ ಹಂದಿ ತಿನ್ನುತ್ತಿದ್ದ ಕಾಳುಗಳನ್ನಾದರೂ ತಂದು ಹಸಿವನ್ನು ನೀಗಿಸಿಕೊಳ್ಳಲು ಹಂಬಲಿಸಿದ. ಆದರೆ ಅದನ್ನೂ ಅವನಿಗೆ ಯಾರೂ ಕೊಡಲಿಲ್ಲ. ಆಗ ಅವನಿಗೆ ಬುದ್ಧಿ ಬಂದಿತು. ನನ್ನ ತಂದೆಯ ಮನೆಯಲ್ಲಿ ಎಷ್ಟೋ ಮಂದಿ ಕೂಲಿಯಾಳುಗಳಿಗೆ ತಿಂದು ತೇಗುವಷ್ಟು ಆಹಾರವಿದೆ. ನಾನಾದರೋ ಇಲ್ಲಿ ಹಸಿವಿನಿಂದ ಸಾಯುತ್ತಾ ಇದ್ದೇನೆ. ನಾನು ಇದೀಗಲೇ ಹೊರಟು, ತಂದೆಯ ಬಳಿಗೆ ಹೋಗಿ, "ಅಪ್ಪಾ, ದೇವರಿಗೂ ನಿಮಗೂ ವಿರುದ್ಧವಾಗಿ ಪಾಪಮಾಡಿದ್ದೇನೆ; ನಿಮ್ಮ ಮಗನು ಎನಿಸಿಕೊಳ್ಳುವ ಯೋಗ್ಯತೆಯೂ ನನಗಿಲ್ಲ; ನನ್ನನ್ನು ನಿಮ್ಮ ಮನೆಯ ಕೂಲಿಯಾಳುಗಳಲ್ಲಿ ಒಬ್ಬನನ್ನಾಗಿ ಇಟ್ಟುಕೊಳ್ಳಿ ಎಂದು ಬೇಡಿಕೊಳ್ಳುತ್ತೇನೆ," ಎಂದುಕೊಡ. 
ಅಂತೆಯೇ ಎದ್ದು ತಂದೆಯ ಬಳಿಗೆ ಹೊರಟ. ಮಗನು ಇನ್ನೂ ಅಷ್ಟು ದೂರದಲ್ಲಿ ಇರುವಾಗಲೇ ತಂದೆ ನೋಡಿದ. ಆತನ ಹೃದಯ ಕನಿಕರದಿಂದ ಕರಗಿ ಹೋಯಿತು. ಓಡಿಹೋಗಿ, ಮಗನನ್ನು ಬಿಗಿಯಾಗಿ ತಬ್ಬಿಕೊಂಡು ಮುತ್ತಿಟ್ಟ. ಆದರೂ ಮಗನು, "ಅಪ್ಪಾ, ದೇವರಿಗೂ ನಿಮಗೂ ವಿರುದ್ಧವಾಗಿ ಪಾಪ ಮಾಡಿದ್ದೇನೆ; ನಿಮ್ಮ ಮಗನೆನಸಿಕೊಳ್ಳುವ ಯೋಗ್ಯತೆಯೂ ನನಗಿಲ್ಲ" ಎಂದ. ತಂದೆಯಾದರೋ ಆಳುಗಳನ್ನು ಕರೆದು, ಅತ್ಯುತ್ತಮವಾದ ಅಂಗಿಯನ್ನು ತಕ್ಷಣವೇ ತಂದು ಇವನಿಗೆ ಉಡಿಸಿರಿ. ಬೆರಳಿಗೆ ಉಂಗುರವನ್ನು ತೊಡಿಸಿರಿ, ಕಾಲಿಗೆ ಪಾದರಕ್ಷೆಯನ್ನು ಮೆಟ್ಟಿಸಿರಿ.; ಕೊಬ್ಬಿದ ಕರುವನ್ನು ತಂದು ಕೊಯ್ಯಿರಿ; ಹಬ್ಬ ಮಾಡೋಣ, ಆನಂದಿಸೋಣ, ಏಕೆಂದರೆ, ಈ ನನ್ನ ಮಗ ಸತ್ತು ಹೋಗಿದ್ದ, ಈಗ ಬದುಕಿ ಬಂದಿದ್ದಾನೆ. ತಪ್ಪಿ ಹೋಗಿದ್ದ, ಈಗ ಸಿಕ್ಕಿದ್ದಾನೆ,' ಎಂದು ಹೇಳಿದ. ಒಡನೆಯೇ ಹಬ್ಬದ ಸಡಗರ ತೊಡಗಿತು.
                              ಇತ್ತ ಹೊಲಕ್ಕೆ ಹೋಗಿದ್ದ ಹಿರಿಯ ಮಗ ಹಿಂದಿರುಗಿ ಮನೆಯನ್ನು ಸಮೀಪಿಸುವಾಗ ಗಾನ, ನರ್ತನಗಳ ಶಬ್ದವು ಅವನ ಕಿವಿಗೆ ಬಿತ್ತು. "ಮನೆಯಲ್ಲೇನು ವಿಶೇಷ?' ಎಂದು ಒಬ್ಬ ಆಳನ್ನು ಕರೆದು ವಿಚಾರಿಸಿದ. "ನಿಮ್ಮ ತಮ್ಮ ಬಂದಿದ್ದಾರೆ; ಅವರು ಮರಳಿ ಸುರಕ್ಷಿತವಾಗಿ ಬಂದುದಕ್ಕಾಗಿ ಕೊಬ್ಬಿದ ಕರುವನ್ನು ನಿಮ್ಮ ತಂದೆ ಕೊಯ್ಯಿಸಿದ್ದಾರೆ," ಎಂದು ಆಳು ತಿಳಿಸಿದ. ಇದನ್ನು ಕೇಳಿದ ಹಿರಿಯ ಮಗನಿಗೆ ಸಿಟ್ಟು ಬಂದಿತು. ಮನೆಯೊಳಕ್ಕೆ ಕಾಲಿಡಲೂ ಒಪ್ಪಲಿಲ್ಲ. ತಂದೆಯೇ ಹೊರಗೆ ಬಂದು ಬೇಡಿಕೊಂಡಾಗ ಅವನು, "ನೋಡಿ, ನಾನು ಇಷ್ಟು ವರ್ಷಗಳಿಂದ ನಿಮಗೆ ಗುಲಾಮನಂತೆ ಸೇವೆ ಮಾಡುತ್ತಿದ್ದೇನೆ. ನಿಮ್ಮ ಮಾತನ್ನು ಎಂದೂ ಮೀರಿಲ್ಲ; ಆದರೂ ನಾನು ನನ್ನ ಸ್ನೇಹಿತರೊಡನೆ ಹಬ್ಬಮಾಡಲು ಒಂದು ಆಡುಮರಿಯನ್ನು ಕೂಡ ನೀವು ಕೊಟ್ಟಿಲ್ಲ. ಆದರೆ ನಿಮ್ಮ ಆಸ್ತಿಪಾಸ್ತಿಯನ್ನೆಲ್ಲಾ ವೇಶ್ಯೆಯರಿಗೆ ಸುರಿದು  ಈ ನಿಮ್ಮ ಮಗ ಬಂದುದ್ದೇ ಕೊಬ್ಬಿಸಿದ ಕರುವನ್ನು ಕೊಯ್ಯಿಸಿದ್ಧೀರಿ!' ಎಂದು ವಾದಿಸಿದ. ಆಗ ತಂದೆ ಅವನಿಗೆ, 'ಮಗನೇ, ನೀನು ಯಾವಾಗಲೂ ನನ್ನ ಸಂಗಡ ಇದ್ದೀ; ನನ್ನ ಸರ್ವಸ್ವವೂ ನಿನ್ನದೇ ಆಗಿದೆ. ಈ ನಿನ್ನ ತಮ್ಮ ನಮ್ಮ ಪಾಲಿಗೆ ಸತ್ತುಹೋಗಿದ್ದ. ಈಗ ಬದುಕಿಬಂದಿದ್ದಾನೆ. ತಪ್ಪಿ ಹೋಗಿದ್ದ; ಈಗ ಸಿಕ್ಕಿದ್ಧಾನೆ. ಆದುದರಿಂದ ನಾವು ಹಬ್ಬಮಾಡಿ ಆನಂದಿಸುವುದು ಸಹಜವಲ್ಲವೇ" ಎಂದನು."

ಮನಸಿಗೊಂದಿಷ್ಟು : ಆಗ ತಾನೆ ಅಬ್ರಹಾಂ ಲಿಂಕನ್ ತಮ್ಮದೇ ದೇಶದ ಮೇಲೆ ಯುದ್ಧ ಸಾರಿದ್ದ ದಕ್ಷಿಣ ಪ್ರಾಂತ್ಯದ ಜನರ ಮೇಲೆ ಗೆಲುವು ಸಾಧಿಸಿದ್ದರು. ಸೋತು ಮತ್ತೆ ದೇಶಕ್ಕೆ ಮರಳಿದ ಆ ಜನರನ್ನು ಏನು ಮಾಡುತ್ತೀರಿ ಎಂದು ಕೇಳಲಾಯಿತು. ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬಹುದು ಎಂಬ ಉತ್ತರದ ನಿರೀಕ್ಷೆಯಲ್ಲಿದ್ದವರಿಗೆ ಅಬ್ರಹಾಂ ಲಿಂಕನ್ " ಅವರು ನಮ್ಮಿಂದ ದೂರ ಹೋಗೆ ಇಲ್ಲವೆಂಬಂತೆ ಬರ ಮಾಡಿಕೊಳ್ಳುತೇನೆ" ಎನ್ನುತ್ತಾರೆ.

ಓ ಆತ್ಮಗಳೇ ಈಗೇಕೆ ಚದುರಿ ಹೋಗಿವಿರೇ
ಬೆದರಿ ದಿಕ್ಕೆಟ್ಟ ಕುರಿ ಮಂದೆಯಂತೆ
ಮೂರ್ಖ ಮನಗಳೇ ಈಗೇಕೆ ದೂರಾಗುವಿರೇ
ನೈಜ ಆಳ ಆ ದೇವನ ಪ್ರೀತಿಯಿಂದಲೇ 

ಪ್ರಶ್ನೆ ಓ ಪಾಪದ ಮನವೇ ಮರಳಿ 
            ಬರುವುದೆಂದು ಮತ್ತೆ ದೇವನ ಬಳಿಗೆ?

No comments:

Post a Comment