ಮೊದಲನೇ ವಾಚನ: ಆದಿಕಾಂಡ 37: 3-4,12-13,17-28

ಜೋಸೆಫನು ತನ್ನ ಅಣ್ಣಂದಿರ ಹತ್ತಿರಕ್ಕೆ ಬಂದಾಗ ಅವರು ಅವನ ಮೇಲಿದ್ದ ನಿಲುವಂಗಿಯನ್ನು ತೆಗೆದುಬಿಟ್ಟರು. ಅವನನ್ನು ಹಿಡಿದು ಬಾವಿಯೊಳಗೆ ಹಾಕಿದರು. ಆ ಬಾವಿ ನೀರಿಲ್ಲದೆ ಬರಿದಾಗಿತ್ತು. ತರುವಾಯ ಅವರು ಊಟಕ್ಕೆ ಕುಳಿತುಕೊಂಡರು. ಅಷ್ಟರಲ್ಲಿ, ಇಷ್ಮಾಯೇಲರ ಗುಂಪೊಂದು ಗಿಲ್ಯಾದಿನಿಂದ ಬರುವುದು ಅವರ ಕಣ್ಣಿಗೆ ಕಾಣಿಸಿತು. ಇವರು ತಮ್ಮ ಒಂಟೆಗಳ ಮೇಲೆ ಪರಿಮಳ ಪದಾರ್ಥ, ಸುಗಂದ ತೈಲ, ರಸಗಂದ ಇವುಗಳನ್ನು ಹೇರಿಕೊಂಡು, ಈಜಿಪ್ಟಿಗೆ ಪ್ರಯಾಣಮಾಡುತ್ತಿದ್ದರು. ಆಗ ಯೆಹೂದನು ತನ್ನ ಅಣ್ಣತಮ್ಮಂದಿರಿಗೆ, "ನಾವು ನಮ್ಮ ತಮ್ಮನನ್ನು ಕೊಂದು ಆ ಕೊಲೆಯನ್ನು ಮರೆ ಮಾಡಿದರೆ ಪ್ರಯೋಜನವೇನು? ಅವನನ್ನು ಆ ಇಷ್ಮಾಯೇಲರಿಗೆ ಮಾರಿಬಿಡೋಣ, ಬನ್ನಿ; ನಾವು ಅವನ ಮೇಲೆ ಕೈ ಹಾಕಬಾರದು, ಅವನು ನಮ್ಮ ತಮ್ಮನಲ್ಲವೆ?" ರಕ್ತ ಸಂಬಂಧಿಯಲ್ಲವೆ?" ಎಂದು ಹೇಳಿದ. ಅವನ ಆ ಮಾತಿಗೆ ಅಣ್ಣ ತಮ್ಮಂದಿರು ಒಪ್ಪಿದರು. ಅಷ್ಟರಲ್ಲಿ, ಮಿದ್ಯಾನಿನ ವರ್ತಕರು ಹಾದು ಹೋಗುತ್ತಿದ್ದರು. ಅವರು ಜೋಸೆಫನನ್ನು ಬಾವಿಯೊಳಗಿಂದ ಎತ್ತಿ ಈ ಇಷ್ಮಾಯೇಲರಿಗೆ ಇಪ್ಪತ್ತು ಬೆಳ್ಳಿನಾಣ್ಯಗಳಿಗೆ ಮಾರಿ ಬಿಟ್ಟರು. ಇವರು ಅವನನ್ನು ಈಜಿಪ್ಟ್ ದೇಶಕ್ಕೆ ತೆಗೆದುಕೊಂಡು ಹೋದರು.
ಕೀರ್ತನೆ: 105:16-17, 18-19, 20-21
ಶ್ಲೋಕ: ನೆನೆಯಿರಿ ಆತನ ಅದ್ಬುತಗಳನು, ಮಹತ್ಕಾರ್ಯಗಳನು
ಶುಭಸಂದೇಶ: ಮತ್ತಾಯ 21:33-43, 45-46
ಯೇಸುಸ್ವಾಮಿ ಮುಖ್ಯ ಯಾಜಕರಿಗೂ ಪ್ರಜಾ ಪ್ರಮುಖರಿಗೂ ಈ ಸಾಮತಿಯನ್ನು ಹೇಳಿದರು: ಒಬ್ಬ ಯಜಮಾನ ಒಂದು ದ್ರಾಕ್ಷಿತೋಟ ಮಾಡಿಸಿದ. ಅದರ ಸುತ್ತ ಬೇಲಿಯನ್ನು ಹಾಕಿಸಿದ. ದ್ರಾಕ್ಷಾರಸವನ್ನು ತೆಗೆಯಲು ಆಲೆಯನ್ನು ಹೂಡಿಸಿ ಕಾವಲಿಗಾಗಿ ಅಟ್ಟಣೆಯನ್ನು ಕಟ್ಟಿಸಿದ. ಅನಂತರ ಅದನ್ನು ಗೇಣಿದಾರರಿಗೆ ವಹಿಸಿ ಹೊರನಾಡಿಗೆ ಹೊರಟುಹೋದ. ಫಲಕೊಡುವ ಕಾಲ ಹತ್ತಿರವಾದಾಗ, ತನಗೆ ಬರಬೇಕಾದ ಪಾಲನ್ನು ತರುವುದಕ್ಕಾಗಿ ಆಳುಗಳನ್ನು ಗೇಣಿದಾರರ ಬಳಿಗೆ ಕಳುಹಿಸಿದ. ಇವರು ಆ ಆಳುಗಳ ಮೇಲೆ ಬಿದ್ದು ಒಬ್ಬನನ್ನು ಬಡಿದರು, ಇನ್ನೊಬ್ಬನನ್ನು ಕಡಿದರು, ಮತ್ತೊಬ್ಬನ ಮೇಲೆ ಕಲ್ಲುತೂರಿದರು. ತೋಟದ ಯಜಮಾನ ಮೊದಲಿಗಿಂತಲೂ ಹೆಚ್ಚು ಆಳುಗಳನ್ನು ಕಳುಹಿಸಿದ. ಅವರಿಗೂ ಅದೇ ಗತಿ ಆಯಿತು. ಕಟ್ಟಕಡೆಗೆ ಯಜಮಾನ, "ನನ್ನ ಮಗನಿಗೆ ಇವರು ಮರ್ಯಾದೆ ಕೊಟ್ಟೇಕೊಡುವರು' ಎಂದುಕೊಂಡು ತನ್ನ ಮಗನನ್ನೇ ಕಳುಹಿಸಿದ. ಆದರೆ ಗೇಣಿದಾರರು ಮಗನನ್ನು ಕಂಡೊಡನೇ, "ಈ ತೋಟಕ್ಕೆ ಇವನೇ ಉತ್ತರಾಧಿಕಾರಿ; ಬನ್ನಿ, ಇವನನ್ನು ಮುಗಿಸಿ ಬಿಡೋಣ. ಇವನಿಗೆ ಬರುವ ಸೊತ್ತನ್ನು ನಮ್ಮದಾಗಿಸಿಕೊಳ್ಳೋಣ," ಎಂದು ತಮ್ಮ ತಮ್ಮಲ್ಲೇ ಒಳಸಂಚು ಮಾಡಿಕೊಂಡರು. ಅಂತೆಯೇ ಅವನನ್ನು ಹಿಡಿದು, ತೋಟದಿಂದ ಹೊರಕ್ಕೆ ದಬ್ಬಿಕೊಂಡು ಹೋಗಿ ಕೊಂದು ಹಾಕಿದರು. . "ಈಗ ನೀವೇ ಹೇಳಿ; ತೋಟದ ಯಜಮಾನ ಬಂದಾಗ ಆಗೇಣಿದಾರರಿಗೆ ಏನು ಮಾಡುವನು?" ಎಂದು ಯೇಸು ಕೇಳಿದರು. "ಆ ಕೇಡಿಗರನ್ನು ಕ್ರೂರವಾಗಿ ಸಂಹರಿಸುವನು. ತರುವಾಯ ಕಾಲಕಾಲಕ್ಕೆ ಸರಿಯಾಗಿ ಪಾಲನ್ನು ಸಲ್ಲಿಸುವ ಬೇರೆಯವರಿಗೆ ತೋಟವನ್ನು ಗೇಣಿಗೆ ಕೊಡುವನು," ಎಂದು ಅಲ್ಲಿದ್ದವರು ಉತ್ತರಕೊಟ್ಟರು. ಬಳಿಕ ಯೇಸು ಇಂತೆಂದರು; "ಮನೆ ಕಟ್ಟುವವರು ಬೇಡವೆಂದು ಬಿಸಾಡಿದ ಆ ಕಲ್ಲೇ ಪ್ರಮುಖ ಮೂಲೆಗಲ್ಲಾಯಿತು ಸರ್ವೇಶ್ವರನಿಂದಲೇ ಆದ ಈ ಕಾರ್ಯ ನಮ್ಮ ಕಣ್ಣಿಗೆ ಅದೆಂಥ ಆಶ್ಚರ್ಯ!" ಎಂಬ ವಾಕ್ಯವನ್ನು ನೀವು ಪವಿತ್ರ ಗ್ರಂಥದಲ್ಲಿ ಓದಿಲ್ಲವೆ? ಆದುದರಿಂದ ನಾನು ನಿಮಗೆ ಹೇಳುತ್ತೇನೆ, "ದೇವರ ಸಾಮ್ರಾಜ್ಯವನ್ನು ನಿಮ್ಮಿಂದ ಕಿತ್ತುಕೊಂಡು ತಕ್ಕ ಫಲಕೊಡುವ ಜನತೆಗೆ ನೀಡಲಾಗುವುದು." ಮುಖ್ಯ ಯಾಜಕರೂ ಫರಿಸಾಯರೂ ಸ್ವಾಮಿ ಹೇಳಿದ ಸಾಮತಿಗಳನ್ನು ಕೇಳಿ, 'ಇವನು ನಮ್ಮನ್ನು ಕುರಿತೇ ಹೀಗೆ ಮಾತನಾಡುತ್ತಿದ್ದಾನೆ," ಎಂದು ಅರ್ಥ ಮಾಡಿಕೊಂಡರು. ಯೇಸುವನ್ನು ಹಿಡಿದು ಬಂಧಿಸಲು ಯತ್ನಿಸಿದರು. ಆದರೆ ಜನಸಮೂಹಕ್ಕೆ ಭಯಪಟ್ಟರು. ಏಕೆಂದರೆ ಜನರು ಯೇಸುವನ್ನು ಪ್ರವಾದಿ ಎಂದು ಸನ್ಮಾನಿಸುತ್ತಿದ್ದರು.
ಮನಸಿಗೊಂದಿಷ್ಟು : ಮನುಷ್ಯರ ಮೇಲೆ ದೇವರ ನಂಬಿಕೆ, ಸಹನೆ ಹಾಗೂ ನಂತರ ಕೋಪವನ್ನು ಇಂದಿನ ಶುಭಸಂದೇಶದಲ್ಲಿ ನಾವು ಕಾಣಬಹುದು. ದೇವರು ನಂಬಿಕೆಯಿಂದ ಈ ಬದುಕೆಂಬ ತೋಟವನ್ನು ಕೊಟ್ಟಿದ್ದಾರೆ. ನಮ್ಮೆಲ್ಲಾ ಪಾಪಗಳ ನಡುವೆಯೂ ಸಹನೆಯಿಂದ ಯೇಸು ಕ್ರಿಸ್ತರನ್ನೇ ನಮಗೆ ನೀಡಿದ್ದರೂ ನಾವು ಅವರ ವಿರುದ್ಧವಾಗಿ ನಡೆಯುತ್ತಿದ್ದೇವೆ. ಇನ್ನು ದಂಡನೆಯೊಂದೇ ಮಾರ್ಗ ಎಂಬ ಸ್ಥಿತಿಗೆ ನಮ್ಮನ್ನು ನಾವೇ ತಂದುಕೊಳ್ಳಬಾರದು. ಅದೇ ದೇವರ ಆಸೆ ಕೂಡ.
ಪ್ರಶ್ನೆ : ನಮ್ಮ ಬದುಕಿನ ಅಡಿಪಾಯ ಯಾವುದು? ದೈವ ನಂಬಿಕೆಯೇ? ಲೌಕಿಕ ಗಳಿಕೆಯೇ?
ಮನಸಿಗೊಂದಿಷ್ಟು : ಮನುಷ್ಯರ ಮೇಲೆ ದೇವರ ನಂಬಿಕೆ, ಸಹನೆ ಹಾಗೂ ನಂತರ ಕೋಪವನ್ನು ಇಂದಿನ ಶುಭಸಂದೇಶದಲ್ಲಿ ನಾವು ಕಾಣಬಹುದು. ದೇವರು ನಂಬಿಕೆಯಿಂದ ಈ ಬದುಕೆಂಬ ತೋಟವನ್ನು ಕೊಟ್ಟಿದ್ದಾರೆ. ನಮ್ಮೆಲ್ಲಾ ಪಾಪಗಳ ನಡುವೆಯೂ ಸಹನೆಯಿಂದ ಯೇಸು ಕ್ರಿಸ್ತರನ್ನೇ ನಮಗೆ ನೀಡಿದ್ದರೂ ನಾವು ಅವರ ವಿರುದ್ಧವಾಗಿ ನಡೆಯುತ್ತಿದ್ದೇವೆ. ಇನ್ನು ದಂಡನೆಯೊಂದೇ ಮಾರ್ಗ ಎಂಬ ಸ್ಥಿತಿಗೆ ನಮ್ಮನ್ನು ನಾವೇ ತಂದುಕೊಳ್ಳಬಾರದು. ಅದೇ ದೇವರ ಆಸೆ ಕೂಡ.
ಪ್ರಶ್ನೆ : ನಮ್ಮ ಬದುಕಿನ ಅಡಿಪಾಯ ಯಾವುದು? ದೈವ ನಂಬಿಕೆಯೇ? ಲೌಕಿಕ ಗಳಿಕೆಯೇ?
No comments:
Post a Comment