ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

08.03.22 - "ಪರಕೀಯರಂತೆ ನಿರರ್ಥಕ ಪದಗಳನ್ನು ಪಿಸುಗುಟ್ಟಬೇಡ."

ಮೊದಲನೇ ವಾಚನ: ಯೆಶಾಯ 55:10-11


ಸ್ವಾಮಿ ಸರ್ವೇಶ್ವರ ಹೀಗೆನ್ನುತ್ತಾರೆ: ಮಳೆಯೂ ಹಿಮವೂ ಆಕಾಶ ಮಂಡಲದಿಂದಿಳಿದು ಬಂದು ತೋಯಿಸಿ, ಹಸಿರುಗೊಳಿಸಿ, ಹುಲುಸು ಮಾಡುತ್ತವೆ ಭೂಮಿಯನ್ನು. ಬಿತ್ತುವವನಿಗೆ ಬೀಜ, ಉಣ್ಣುವವನಿಗೆ ಅಹಾರ ಒದಗಿಸದೆ ಹಿಂದಿರುಗಿ ಬರುವುದಿಲ್ಲ ಅವು ಸುಮ್ಮನೆ ಬಂದಲ್ಲಿಗೆ. ಅಂತೆಯೇ, ನನ್ನ ಬಾಯಿಂದ ಹೊರಡುವ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿದ ಹೊರತು, ನನ್ನ ಉದ್ದೇಶವನು ಕೈಗೂಡಿಸಿದ ಹೊರತು, ನನ್ನ ಬಳಿಗೆ ವ್ಯರ್ಥವಾಗಿ ಹಿಂದಿರುಗದು.

ಕೀರ್ತನೆ: 34:4-5, 6-7, 16-17, 18-19,
ಶ್ಲೋಕ: ಸಜ್ಜನನಿಗೊದಗುವ ಸಂಕಟಗಳು ವಿಪರೀತ

ಶುಭಸಂದೇಶ: ಮತ್ತಾಯ 6:7-15

"ಪ್ರಾರ್ಥನೆ ಮಾಡುವಾಗ ಪರಕೀಯರಂತೆ ನಿರರ್ಥಕ ಪದಗಳನ್ನು ಪಿಸುಗುಟ್ಟಬೇಡ. ತಮ್ಮ ಪ್ರಾರ್ಥನೆ ದೀರ್ಘವಾದಷ್ಟೂ ದೇವರು ಆಲಿಸುತ್ತಾರೆಂದು ಅವರು ಭಾವಿಸುತ್ತಾರೆ. ನೀವು ಅವರಂತೆ ಆಗಬೇಡಿ. ನಿಮ್ಮ ಅಗತ್ಯಗಳೇನೆಂದು ನೀವು ಕೇಳುವುದಕ್ಕೆ ಮೊದಲೇ ನಿಮ್ಮ ತಂದೆಗೆ ಗೊತ್ತಿದೆ. ಆದುದರಿಂದ ಹೀಗೆಂದು ಪ್ರಾರ್ಥನೆ ಮಾಡಿ: "ಸ್ವರ್ಗದಲ್ಲಿರುವ ಓ ನಮ್ಮ ತಂದೆಯೇ, ನಿಮ್ಮ ಪವಿತ್ರ ನಾಮ ಪೂಜಿತವಾಗಲಿ; ನಿಮ್ಮ ಸಾಮ್ರಾಜ್ಯ ಬರಲಿ; ನಿಮ್ಮ ಚಿತ್ತ ಸ್ವರ್ಗದಲ್ಲಿ ನೆರವೇರುವ ಪ್ರಕಾರ ಜಗತ್ತಿನಲ್ಲಿಯೂ ನೆರವೇರಲಿ. ನಮ್ಮ ಅನುದಿನದ ಅಹಾರವನ್ನು ನಮಗಿಂದು ಕೊಡಿ. ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸುವ ಪ್ರಕಾರ ನಾವು ಮಾಡಿದ ತಪ್ಪುಗಳನ್ನು ಕ್ಷಮಿಸಿ. ನಮ್ಮನ್ನು ಶೋಧನೆಗೆ ಒಳಪಡಿಸಬೇಡಿ; ಕೇಡಿನಿಂದ ನಮ್ಮನ್ನು ರಕ್ಷಿಸಿ. "ಜನರ ತಪ್ಪುಗಳನ್ನು ನೀವು ಕ್ಷಮಿಸಿದರೆ ಸ್ವರ್ಗದಲ್ಲಿರುವ ನಿಮ್ಮ ತಂದೆ ನಿಮ್ಮನ್ನು ಕ್ಷಮಿಸುವರು. ಜನರನ್ನ ನೀವು ಕ್ಷಮಿಸದಿದ್ದರೆ, ನಿಮ್ಮ ತಂದೆಯೂ ನಿಮ್ಮ ತಪ್ಪುಗಳನ್ನು ಕ್ಷಮಿಸರು.

ಮನಸಿಗೊಂದಿಷ್ಟು ಅತ್ಯಂತ ಸರಳವಾಗಿ ಕಾಣುವ ಪರಲೋಕ ಪ್ರಾರ್ಥನೆ ನಮಗೆ ನಿಜಕ್ಕೂ ಸವಾಲೊಡ್ಡೂವಂತ ಪ್ರಾರ್ಥನೆಯೇ ಸರಿ. ನಮ್ಮ ಚಿತ್ತಕ್ಕಿಂತ ದೇವರ ಚಿತ್ತ ನಡೆಯಲಿ ಎನ್ನುವುದು ಕಷ್ಟವಲ್ಲವೇ? ನಮ್ಮ ಅನುದಿನದ ಅವಶ್ಯಕತೆಯಷ್ಟೇ ನಮಗೆ ಸಾಕೆ? ನಾವು ಇತರರನ್ನು ಕ್ಷಮಿಸುವಂತೆ ನಮ್ಮನ್ನು ಕ್ಷಮಿಸಿ ಎನ್ನುವ ಕಂಡೀಷನ್, ಲೌಕಿಕ  ಸುಖದ ಶೋಧನೆಯಲ್ಲೇ ಸುಖ ಕಂಡಿರುವಾಗ ಆ ಶೋಧನೆಗಳಿಗೆ ಒಳಪಡಿಸಬೇಡಿ ಎನ್ನುವ ಬೇಡಿಕೆಗಳು ನಮ್ಮ ಅಂತರಂಗವನ್ನು ಶೋಧಿಸುವಂತದ್ದು. ನಾವು ಪ್ರತಿ ದಿನ ಮಾಡುವ ಈ ಪ್ರಾರ್ಥನೆ ನಿಜಕ್ಕೂ ನಮ್ಮ ಅಂತರಂಗದಿಂದ ಬರುತ್ತಿದೆಯೇ?

ಪ್ರಶ್ನೆ: ನಮ್ಮ ಪ್ರಾರ್ಥನೆಯಲ್ಲಿ ನಿರರ್ಥಕ ಪದಗಳೆಷ್ಟು, ಸ್ವಾರ್ಥ ಬೇಡಿಕೆಗಳೆಷ್ಟು?



No comments:

Post a Comment