ಮೊದಲನೇ ವಾಚನ: ವಿಮೋಚನಾಕಾಂಡ 32:7-14
ಇತ್ತ ಸರ್ವೇಶ್ವರ ಮೋಶೆಗೆ, "ನೀನು ಕೂಡಲೆ ಬೆಟ್ಟದಿಂದ ಇಳಿದು ಹೋಗು. ಈಜಿಪ್ಟಿನಿಂದ ನೀನು ಕರೆದು ತಂದ ನಿನ್ನ ಜನರು ಕೆಟ್ಟುಹೋದರು. ನಾನು ಅವರಿಗೆ ಆಜ್ಞಾಪಿಸಿದ ಮಾರ್ಗವನ್ನು ಇಷ್ಟು ಬೇಗನೆ ತೊರೆದುಬಿಟ್ಟು ತಮಗೆ ಲೋಹದ ಹೋರಿ ಕರುವನ್ನು ಮಾಡಿಸಿಕೊಂಡು, ಅದಕ್ಕೆ ಅಡ್ಡಬಿದ್ದು, ಬಲಿಗಳನ್ನರ್ಪಿಸಿ, "ಇಸ್ರಯೇಲರೇ ನೋಡಿ, ನಿಮ್ಮನ್ನು ಈಜಿಪ್ಟಿನಿಂದ ಕರೆದು ತಂದ ದೇವರು" ಎಂದು ಹೇಳಿಕೊಳ್ಳುತ್ತಿದ್ದಾರೆ. "ಈ ಜನರ ಸ್ವಭಾವ ನನಗೆ ಗೊತ್ತಿದೆ. ಇವರು ನನ್ನ ಆಜ್ಞೆಗೆ ಬಗ್ಗದ ಹಟಮಾರಿಗಳು. ಆದಕಾರಣ ನೀನು ನನಗೆ ಅಡ್ಡ ಬರಬೇಡ. ನನ್ನ ಕೋಪಾಗ್ನಿ ಉರಿಯಲಿ. ಅವರನ್ನು ಸುಟ್ಟು ಭಸ್ಮ ಮಾಡುವೆನು. ಬಳಿಕ ನಿನ್ನಿಂದಲೇ ಬೇರೆ ಒಂದು ದೊಡ್ಡ ಜನಾಂಗ ಉದಯಿಸುವಂತೆ ಮಾಡುವೆನು," ಎಂದು ಹೇಳಿದರು ಆಗ ಮೋಶೆ ತನ್ನ ದೇವರಾದ ಸರ್ವೇಶ್ವರನನ್ನು ಹೀಗೆಂದು ಬೇಡಿಕೊಂಡನು: "ಸ್ವಾಮಿ ಸರ್ವೇಶ್ವರಾ, ಮಹಾಶಕ್ತಿಯಿಂದಲೂ ಭುಜಬಲದಿಂದಲೂ ತಾವೇ ಈಜಿಪ್ಟಿನಿಂದ ಬಿಡಿಸಿದ ತಮ್ಮ ಪ್ರಜೆಯ ಮೇಲೆ ಕೋಪಾಗ್ನಿ ಕಾರಬಹುದೆ? ತಾವು ಕೋಪಾಗ್ನಿಯನ್ನು ಬಿಟ್ಟು, ತಮ್ಮ ಪ್ರಜೆಗೆ ಕೇಡು ಮಾಡಬೇಕೆಂಬ ಮನಸ್ಸನ್ನು ಮಾರ್ಪಡಿಸಿಕೊಳ್ಳಿ. ತಮ್ಮ ದಾಸರಾದ ಅಬ್ರಹಾಮ್, ಇಸಾಕ್, ಹಾಗು ಯಕೋಬರನ್ನು ನೆನಪಿಗೆ ತಂದುಕೊಳ್ಳಿ ತಾವು ತಮ್ಮ ಜೀವದಾಣೆ ಪ್ರಮಾಣ ಮಾಡಿ ಅವರಿಗೆ, "ನಾನು ನಿಮ್ಮ ಸಂತತಿಯನ್ನು ಹೆಚ್ಚಿಸಿ ಆಕಾಶದ ನಕ್ಷತ್ರಗಳಷ್ಟು ಅಸಂಖ್ಯವಾಗಿ ಮಾಡುವೆನು; ನಾನು ಸೂಚಿಸಿರುವ ಈ ಪ್ರದೇಶಗಳನ್ನೆಲ್ಲಾ ನಿಮ್ಮ ಸಂತತಿಯವರಿಗೆ ಕೊಡುವೆನು; ಮತ್ತು ಅವರು ಈ ನಾಡನ್ನು ಶಾಶ್ವತವಾಗಿ ಸ್ವಾಧೀನದಲ್ಲಿಟ್ಟುಕೊಳ್ಳುವರು" ಎಂದು ನಾವು ಮಾತುಕೊಡಲಿಲ್ಲವೇ" ಎಂದನು. ಆಗ ಸರ್ವೇಶ್ವರ ತಮ್ಮ ಪ್ರಜೆಗಳಿಗೆ ಮಾಡುವೆನೆಂದು ಹೇಳಿದ ಕೇಡಿನ ಬಗ್ಗೆ ಮನಸ್ಸನ್ನು ಮಾರ್ಪಡಿಸಿಕೊಂಡರು.
ಕೀರ್ತನೆ: 106:19-20, 21-22, 23
ಶ್ಲೋಕ: ಮರೆಯಬೇಡವೆನ್ನ ಪ್ರಭೂ, ನಿನ್ನ ಪ್ರಜೆಗೆ ದಯೆತೋರುವಾಗ
ಶುಭಸಂದೇಶ:ಯೊವಾನ್ನ 5:31-47
"ನನ್ನ ಪರವಾಗಿ ನಾನೇ ಸಾಕ್ಷಿ ನೀಡಿದರೆ ನನ್ನ ಸಾಕ್ಷಿಗೆ ಬೆಲೆಯಿರದು. ನನ್ನ ಪರವಾಗಿ ಸಾಕ್ಷಿ ನೀಡುವಾತನು ಇನ್ನೊಬ್ಬನಿದ್ದಾನೆ. ಆತನು ನೀಡುವ ಸಾಕ್ಷ್ಯಕ್ಕೆ ಬೆಲೆಯಿದೆ ಎಂದು ನಾನು ಬಲ್ಲೆ. ನೀವೇ ಯೊವಾನ್ನನ ಬಳಿಗೆ ದೂತರನ್ನು ಕಳುಹಿಸಿದ್ದಿರಿ. ಆತನು ಸತ್ಯವನ್ನು ಕುರಿತು ಸಾಕ್ಷಿ ಹೇಳಿದ್ದಾನೆ ನನಗೆ ಮಾನವ ಸಾಕ್ಷಿ ಬೇಕೆಂದು ಅಲ್ಲ; ಆದರೆ ಇದನ್ನೆಲ್ಲಾ ನಿಮ್ಮ ಉದ್ಧಾರಕೆಂದು ನಾನು ಹೇಳುತ್ತಿದ್ದೇನೆ. ಯೊವಾನ್ನನು ಉಜ್ವಲವಾಗಿ ಉರಿಯುವ ದೀಪದಂತೆ ಇದ್ದನು. ಆ ಬೆಳಕಿನಲ್ಲಿ ನೀವು ಸ್ವಲ್ಪ ಕಾಲ ನಲಿದಾಡಿದಿರಿ. ಯೊವಾನ್ನನು ನೀಡಿದ ಸಾಕ್ಷ್ಯಕ್ಕಿಂತಲೂ ಮಿಗಿಲಾದ ಸಾಕ್ಷ್ಯ ನನಗುಂಟು: ನಾನು ಸಾಧಿಸುತ್ತಿರುವ ಸುಕೃತ್ಯಗಳೇ. ಅಂದರೆ, ಪಿತನು ನನಗೆ ಮಾಡಿ ಮುಗಿಸಲು ಕೊಟ್ಟ ಕಾರ್ಯಗಳೇ, ನಾನು ಪಿತನಿಂದ ಬಂದವನೆಂದು ನನ್ನ ಪರವಾಗಿ ಸಾಕ್ಷಿಕೊಡುತ್ತದೆ. ನನ್ನನ್ನು ಕಳುಹಿಸಿದ ಪಿತನೇ ನನ್ನ ಪರವಾಗಿ ಸಾಕ್ಷಿ ನೀಡಿದ್ದಾರೆ. ನೀವಾದರೋ ಅವರ ಧ್ವನಿಯನ್ನು ಎಂದೂ ಕೇಳಿಲ್ಲ, ಅವರ ದರ್ಶನವನ್ನು ಎಂದೂ ಕಂಡಿಲ್ಲ. ಅವರ ಸಂದೇಶ ನಿಮ್ಮಲ್ಲಿ ನೆಲಸಿಲ್ಲ. ಏಕೆಂದರೆ, ಅವರು ಕಳುಹಿಸಿದವನಲ್ಲಿ ನೀವು ವಿಶ್ವಾಸವಿಡಲಿಲ್ಲ. ಪವಿತ್ರ ಗ್ರಂಥದಿಂದಲೇ ನಿತ್ಯ ಜೀವ ಲಭಿಸುವುದೆಂದು ಭಾವಿಸಿ, ನೀವು ಅದನ್ನು ಪರಿಶೀಲಿಸಿ ನೋಡುತ್ತೀರಿ. ಆ ಗ್ರಂಥವು ಸಹ ನನ್ನ ಪರವಾಗಿ ಸಾಕ್ಷಿ ಹೇಳುತ್ತದೆ. ಆದರೂ ನಿತ್ಯ ಜೀವವನ್ನು ಪಡೆಯುವುದಕ್ಕಾಗಿ ನನ್ನ ಬಳಿಗೆ ಬರಲು ನಿಮಗೆ ಇಷ್ಟವಿಲ್ಲ. "ನಾನು ಮನುಷ್ಯರಿಂದ ಬರುವ ಗೌರವವನ್ನು ಅರಸುವುದಿಲ್ಲ. ದೇವರ ಮೇಲೆ ನಿಮಗೆ ಪ್ರೀತಿಯಿಲ್ಲವೆಂದು ನಾನು ಚೆನ್ನಾಗಿ ಬಲ್ಲೆ. ನಾನು ಬಂದಿರುವುದು ಪಿತನ ಹೆಸರಿನಲ್ಲೇ. ಆದರೂ ನೀವು ನನ್ನನ್ನು ಬರಮಾಡಿಕೊಳ್ಳುವುದಿಲ್ಲ. ಬೇರೊಬ್ಬರನ್ನು ತನ್ನ ಸ್ವಂತ ಹೆಸರಿನಲ್ಲಿ ಬಂದನೆಂದರೆ ಅಂಥವನನ್ನು ನೀವು ಬರಮಾಡಿಕೊಳ್ಳುತ್ತೀರಿ. ಕಾರಣ, ದೇವರಿಂದ ಸಿಗುವಂಥ ಗೌರವವನ್ನು ಅರಸದೆ ನಿಮ್ಮ ನಿಮ್ಮಲ್ಲೇ ಪರಸ್ಪರ ಗೌರವವನ್ನು ಬಯಸುತ್ತೀರಿ. ಹೀಗಿರುವಲ್ಲಿ, ನಿಮ್ಮಲ್ಲಿ ವಿಶ್ವಾಸ ಮೂಡಲು ಹೇಗೆ ತಾನೆ ಸಾಧ್ಯ? ಪಿತನ ಮುಂದೆ ನಾನು ನಿಮ್ಮನ್ನು ಅಪಾದಿಸುತ್ತಿರುವೆನೆಂದು ಎಣಿಸಬೇಡಿ. ಅಪಾದಿಸುವವನು ಒಬ್ಬನಿದ್ದಾನೆ. ಆತನೇ ನೀವು ಆಶ್ರಯಿಸಿಕೊಂಡಿರುವ ಮೋಶೆ. ಮೋಶೆಯಲ್ಲಿ ನಿಮಗೆ ವಿಶ್ವಾಸ ಇದ್ದಿದ್ದರೆ ನನ್ನಲ್ಲಿ ವಿಶ್ವಾಸ ಇಡುತ್ತಿದ್ದಿರಿ. ಏಕೆಂದರೆ, ಆತನು ಬರೆದುದು ನನ್ನನ್ನು ಕುರಿತೇ. ಆತನು ಬರೆದುದರಲ್ಲಿ ನಿಮಗೆ ನಂಬಿಕೆಯಿಲ್ಲವೆಂದ ಮೇಲೆ ನನ್ನ ಮಾತಿನಲ್ಲಿ ನಿಮಗೆ ಹೇಗೆ ನಂಬಿಕೆ ಹುಟ್ಟೀತು?"
ಮನಸಿಗೊಂದಿಷ್ಟು : ದೈವ ಶಾಸ್ತ್ರವನ್ನು ಅಭ್ಯಾಸಿಸುವುದರಲ್ಲಿ, ಬೋಧಿಸುವುದರಲ್ಲಿ, ಅರ್ಥೈಸುವಲ್ಲಿ ಆತ್ತ್ಯುತ್ತಮರೆನಿಸಿಕೊಂಡಿದ್ದ ಯೆಹೂದ್ಯರು ಜೀವಂತ ವಾಕ್ಯವೇ ಜೊತೆಗಿದ್ದರೂ ಗುರುತಿಸದೆ ಹೋದರು. ದೈವ ವಾಕ್ಯಗಳನ್ನು ದೇವರ ಕೋನದಿಂದಲ್ಲದೆ ತಮ್ಮ ಜ್ಞಾನದ ಮೂಲಕ ಅರ್ಥೈಸುವ ಪ್ರಯತ್ನದಿಂದಾಗಿ ಅವರ ಮನಸುಗಳು ಮುಚ್ಚಿತ್ತು. ನಾವು ಸಹ ಕೇವಲ ಔಪಚಾರಿಕವಾಗಿ ಪ್ರಾರ್ಥನೆ, ಆಚರಣೆಗಳಲ್ಲಿ ಮಾತ್ರ ತೊಡಗಿಕೊಂಡು ಮನಸಿನಲ್ಲಿ ದೇವರ ಪ್ರೀತಿಯಿಲ್ಲದಿದ್ದರೆ, ಇಂದಿನ ಶುಭಸಂದೇಶದಲ್ಲಿನ ಯೇಸುವಿನ ಮಾತು ನಮಗೂ ಅನ್ವಯ.
ಪ್ರಶ್ನೆ : ನಾವು ಯಾರ ಗೌರವವನು ಹೆಚ್ಚು ಬಯಸುತ್ತಿದ್ದೇವೆ? ಮನುಷ್ಯರದ್ದೋ? ದೇವರದ್ದೋ?
No comments:
Post a Comment