11.08.23 - "ಪ್ರಪಂಚವನ್ನೆಲ್ಲಾ ಗೆದ್ದುಕೊಂಡರೂ ಒಬ್ಬನು ತನ್ನ ಪ್ರಾಣವನ್ನೇ ಕಳೆದುಕೊಂಡರೆ ...."

ಮೊದಲನೇ ವಾಚನ: ಧರ್ಮೋಪದೇಶಕಾಂಡ 4:32-40

ಮೋಶೆಯು ಜನರಿಗೆ ಹೇಳಿದ್ದೇನೆಂದರೆ, "ದೇವರು ಮಾನವರನ್ನು ಸೃಷ್ಟಿಸಿ ಭೂಮಿಯ ಮೇಲಿರಿಸಿದ ದಿನ ಮೊದಲ್ಗೊಂಡು ಇಂದಿನವರೆಗೆ, ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿನವರೆಗೆ, ಅಂಥ ಅದ್ಭುತ ಕಾರ್ಯ ನಡೆದುದ್ದುಂಟೇ? ಅಂಥ ಸುದ್ಧಿಯನ್ನಾದರೂ ಕೇಳಿದ್ದುಂಟೇ? ನೀವೇ ವಿಚಾರಿಸಿಕೊಳ್ಳಿ, ದೇವರು ಅಗ್ನಿ ಜ್ವಾಲೆಯೊಳಗಿಂದ ಮಾತಾಡಿದ ಸ್ವರ ಕೇಳಿಸಿತಲ್ಲವೇ? ಬೇರೆ ಯಾವ ಜನರಾದರು ದೇವರ ಸ್ವರ ಕೇಳಿ ಬದುಕಿದ್ದುಂಟೇ? ಬೇರೆ ಯಾವ ದೇವರು ತಾನೆ ಪರಿಶೋಧನೆ, ಪವಾಡ, ಮಹತ್ಕಾರ್ಯ, ಯುದ್ಧ, ಭುಜಪರಾಕ್ರಮ, ಶಿಕ್ಷಾಹಸ್ತ, ಭಯಂಕರ ಕಾರ್ಯ ಇವುಗಳನ್ನು ಪ್ರಯೋಗಿಸಿ ಒಂದು ಜನಾಂಗವನ್ನು ಮತ್ತೊಂದು ಜನಾಂಗದ ಕೈಯಿಂದ ತಪ್ಪಿಸಲು ಪ್ರಯತ್ನಿಸಿದ್ದಾರೆ? ನಿಮ್ಮ ದೇವರಾದ ಸರ್ವೇಶ್ವರ ಸ್ವಾಮಿಯಾದರೋ ಈಜಿಪ್ಟಿನಲ್ಲಿ ನಿಮ್ಮ ಪರವಾಗಿ, ಇದನ್ನೆಲ್ಲಾ ನಿಮ್ಮ ಕಣ್ಮುಂದೆಯೇ, ನಡೆಸಿದರಲ್ಲವೆ? ಸರ್ವೇಶ್ವರ ಸ್ವಾಮಿಯೊಬ್ಬರೇ ದೇವರು, ಬೇರೆ ದೇವರೇ ಇಲ್ಲವೆಂದು ನೀವು ಅರಿತುಕೊಳ್ಳುವುದಕ್ಕಾಗಿ ಇದನ್ನೆಲ್ಲಾ ನಿಮಗೆ ಮಾತ್ರ ತೋರಿಸಲಾಗಿದೆ. ನೀವು ಕಲಿತುಕೊಳ್ಳಬೇಕೆಂದೇ ಸರ್ವೇಶ್ವರ ಆಕಾಶದಿಂದ ತಮ್ಮ ಸ್ವರ ನಿಮಗೆ ಕೇಳಿಸುವ ಹಾಗೆ ಮಾಡಿದರು. ತಾವಿದ್ದ ಮಹಾ ಅಗ್ನಿಜ್ವಾಲೆಯನ್ನು ಭೂಮಿಯ ಮೇಲೆ ನೀವು ನೋಡುವಂತೆ ಮಾಡಿದರು; ಆ ಅಗ್ನಿಜ್ವಾಲೆಯ ಒಳಗಿಂದ  ಅವರು ಆಡಿದ ಮಾತುಗಳನ್ನು ನೀವು ಕೇಳಿದಿರಿ. ನಿಮ್ಮ ಪಿತೃಗಳನ್ನು ಪ್ರೀತಿಸಿ, ತರುವಾಯ ಅವರ ಸಂತತಿಯಾದ ನಿಮ್ಮನ್ನೂ ಆರಿಸಿಕೊಂಡರು. ಈಗ ನಮಗೆ ತಿಳಿದಿರುವಂತೆ ನಿಮಗಿಂತ ದೊಡ್ಡವೂ ಬಲಿಷ್ಠವೂ ಆದ ಜನಾಂಗಗಳನ್ನು ಹೊರಡಿಸಿ ಅವರ ನಾಡಲ್ಲೇ ನಿಮ್ಮನ್ನು ಸೇರಿಸಿ, ಆ ನಾಡನ್ನು ನಿಮಗೇ ಸ್ವಂತ ನಾಡನ್ನಾಗಿ ಕೊಡಲು ಸಂಕಲ್ಪಿಸಿದ್ದಾರೆ. ತಾವೇ ನಿಮ್ಮೊಂದಿಗಿದ್ದು, ತಮ್ಮ ಅಪಾರ ಸಾಮರ್ಥ್ಯದಿಂದ ನಿಮ್ಮನ್ನು ಈಜಿಪ್ಟ್ ದೇಶದಿಂದ ಕರೆದು ತಂದಿದ್ದಾರೆ. ನೀವು ಇದನ್ನೆಲ್ಲಾ ಆಲೋಚಿಸಿ, ಮೇಲೆ ಆಕಾಶದಲ್ಲಾಗಲಿ, ಕೆಳಗೆ ಭೂಮಿಯಲ್ಲಾಗಲಿ ಸರ್ವೇಶ್ವರಸ್ವಾಮಿಯೊಬ್ಬರೇ ದೇವರು, ಬೇರೆ ಯಾವ ದೇವರೂ ಇಲ್ಲವೆಂಬುದನ್ನು ಈಗ ಗ್ರಹಿಸಿಕೊಂಡು ಜ್ಞಾಪಕದಲ್ಲಿ ಇಡಬೇಕು. ನಾನು ಇಂದು ನಿಮಗೆ ತಿಳಿಸಿದ ಅವರ ಆಜ್ಞಾವಿಧಿಗಳನ್ನು ಅನುಸರಿಸಿ ನಡೆಯಿರಿ. ಆಗ ನಿಮಗೂ ನಿಮ್ಮ ಸಂತತಿಗೂ ಶುಭವುಂಟಾಗುವುದು; ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಶಾಶ್ವತವಾಗಿ ಕೊಡುವ ನಾಡಿನಲ್ಲಿ ನೀವು ದೀರ್ಘಕಾಲ ಬಾಳುವಿರಿ.

ಕೀರ್ತನೆ: 77:12-13, 14-15, 16, 20

ಶ್ಲೋಕ: ಧ್ಯಾನಿಸುವೆ ನಾ ನಿನ್ನ ಕಾರ್ಯಗಳನೆಲ್ಲ

ಶುಭಸಂದೇಶ: ಮತ್ತಾಯ 16:24-28

ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ, ಅವನು ತನ್ನನ್ನು ತಾನೇ ಪರಿತ್ಯಜಿಸಲಿ. ತನ್ನ ಶಿಲುಬೆಯನ್ನು ತಾನೇ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ. ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಹಾತೊರೆಯುವವನು ಅದನ್ನು ಕಳೆದುಕೊಳ್ಳುವನು. ಆದರೆ ನನ್ನ ನಿಮಿತ್ತ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಕಂಡುಕೊಳ್ಳುವನು. ಪ್ರಪಂಚವನ್ನೆಲ್ಲಾ ಗೆದ್ದುಕೊಂಡರೂ ಒಬ್ಬನು ತನ್ನ ಪ್ರಾಣವನ್ನೇ ಕಳೆದುಕೊಂಡರೆ ಅದರಿಂದ ಅವನಿಗೆ ದೊರಕುವ ಲಾಭವೇನು? ಅಥವಾ ಮನುಷ್ಯನು ತನ್ನ ಪ್ರಾಣಕ್ಕೆ ಈಡಾಗಿ ಏನನ್ನು ತಾನೇ ಕೊಡಬಲ್ಲನು? ನರಪುತ್ರನು ತನ್ನ ಪಿತನ ಪ್ರಭಾವದೊಡನೆ ತನ್ನ ದೂತರ ಸಮೇತ ಬರಲಿದ್ದಾನೆ. ಆಗ ಪ್ರತಿಯೊಬ್ಬ ಮಾನವನಿಗೆ ಅವನವನ ಕೃತ್ಯಕ್ಕೆ ತಕ್ಕ ಪ್ರತಿಫಲ ಕೊಡುವನು. ಇಲ್ಲಿರುವವರಲ್ಲಿ ಕೆಲವರು ನರಪುತ್ರನು ತನ್ನ ಸಾಮ್ರಾಜ್ಯದಲ್ಲಿ ಪ್ರತ್ಯಕ್ಷನಾಗುವುದನ್ನು ಕಾಣುವುದಕ್ಕೆ ಮುನ್ನ ಸಾವನ್ನು ಸವಿಯುವುದಿಲ್ಲ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ.

No comments:

Post a Comment

12.04.2026 - ನನ್ನ ಪ್ರಭುವೇ, ನನ್ನ ದೇವರೇ

  ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 2:42-47 ಭಕ್ತಾದಿಗಳು ಪ್ರೇಷಿತರ ಬೋಧನೆಯನ್ನು ಕೇಳುವುದರಲ್ಲಿ ನಿರತರಾಗಿದ್ದರು; ಅನ್ಯೋನ್ಯವಾಗಿ ಬಾಳುತ್ತಿದ್ದರು; ರೊಟ್ಟಿ ಮ...