ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

29.07.23 - "ಸರ್ವೇಶ್ವರ ಸ್ವಾಮಿಯ ಆಜ್ಞೆಗಳನ್ನೆಲ್ಲಾ ಅನುಸರಿಸಿ ನಡೆಯುತ್ತೇವೆ"

ಮೊದಲನೇ ವಾಚನ: ವಿಮೋಚನಾಕಾಂಡ 24:3-8

ಮೋಶೆ ಜನರ ಬಳಿಗೆ ಬಂದು ಸರ್ವೇಶ್ವರನ ಎಲ್ಲ ಆಜ್ಞೆಗಳನ್ನೂ, ವಿಧಿವಿಧಾನಗಳನ್ನೂ ವಿವರಿಸಿದನು. ಜನರೆಲ್ಲರು, "ಸರ್ವೇಶ್ವರ ಸ್ವಾಮಿಯ ಆಜ್ಞೆಗಳನ್ನೆಲ್ಲಾ ಅನುಸರಿಸಿ ನಡೆಯುತ್ತೇವೆ," ಎಂದು ಒಕ್ಕೊರಳಿನಿಂದ ಉತ್ತರ ಕೊಟ್ಟರು. ಮೋಶೆ ಸರ್ವೇಶ್ವರನ ಆಜ್ಞೆಗಳನ್ನೆಲ್ಲ ಬರೆದಿಟ್ಟನು. ಬೆಳಗ್ಗೆ ಎದ್ದು ಆ ಬೆಟ್ಟದಡಿಯಲ್ಲಿ ಒಂದು ಬಲಿಪೀಠವನ್ನು ಕಟ್ಟಿಸಿದನು. ಇಸ್ರಯೇಲರ ಹನ್ನೆರಡು ಕುಲಗಳಿಗೆ ಹನ್ನೆರಡು ಕಲ್ಲಿನ ಕಂಬಗಳನ್ನು ಸ್ಥಾಪನೆಮಾಡಿಸಿದನು. ಇಸ್ರಯೇಲರ ಯೌವನಸ್ಥರು ಸರ್ವೇಶ್ವರಸ್ವಾಮಿಗೆ ದಹನ ಬಲಿಗಳನ್ನು ಅರ್ಪಿಸುವಂತೆಯೂ ಅಪ್ಪಣೆಕೊಟ್ಟನು. ಆ ಬಲಿಪಶುಗಳ ರಕ್ತದಲ್ಲಿ ಅರ್ಧವನ್ನು ತೆಗೆದು ಬಟ್ಟಲುಗಳಲ್ಲಿ ತುಂಬಿದನು. ಮಿಕ್ಕ ಅರ್ಧವನ್ನು, ಬಲಿಪೀಠದ ಮೇಲೆ ಪ್ರೋಕ್ಷಿಸಿದನು. ತರುವಾಯ, ನಿಬಂಧನ ಗ್ರಂಥವನ್ನು ತೆಗೆದುಕೊಂಡು ಜನರಿಗೆ ಕೇಳಿಸುವಂತೆ ಓದಿದನು. ಅವರು ಅದನ್ನು ಕೇಳಿದ ಮೇಲೆ, "ಸರ್ವೇಶ್ವರಸ್ವಾಮಿಯ ಆಜ್ಞೆಗಳನ್ನೆಲ್ಲಾ ಅನುಸರಿಸುತ್ತೇವೆ; ಅವುಗಳಿಗೆ ವಿಧೇಯರಾಗಿರುತ್ತೇವೆ," ಎಂದರು. ಆಗ ಮೋಶೆ ಬಟ್ಟಲುಗಳಲ್ಲಿದ್ದ ರಕ್ತವನ್ನು ತೆಗೆದುಕೊಂಡು ಜನರಮೇಲೆ ಚಿಮುಕಿಸಿ, "ಇಗೋ, ಈ ಗ್ರಂಥದಲ್ಲಿ ಹೇಳಿರುವ ಎಲ್ಲ ಆಜ್ಞೆಗಳ ಪ್ರಕಾರ ಸರ್ವೇಶ್ವರ ನಿಮ್ಮ ಸಂಗಡ ಮಾಡಿಕೊಂಡ ಒಡಂಬಡಿಕೆಯನ್ನು ಸ್ಥಿರಪಡಿಸುವ ರಕ್ತ ಇದೇ," ಎಂದನು.

ಕೀರ್ತನೆ: 50:1-2, 5-6, 14-15
ಶ್ಲೋಕ: ದೇವರಿಗೆ ಧನ್ಯವಾದವೆ ನಿನ್ನ ಬಲಿಯರ್ಪಣೆಯಾಗಿರಲಿ

ದೇವಾಧಿದೇವನಾದ ಪ್ರಭುವಿನ ನುಡಿ ಇಡೀ ಜಗಕೆ
ಆತನ ಸನ್ನಿಧಿಗೆ ಕರೆ, ಪೂರ್ವದಿಂದ ಪಶ್ಚಿಮದವರೆಗೆ
ಸುರ ಸುಂದರವಾದ ಸಿಯೋನಿನಿಂದ
ಉದಯಸಿಹನು ದೇವನು ಶೋಭೆಯಿಂದ.

“ಬಲಿ ಮೂಲಕ ಒಡಂಬಡಿಕೆ ಗೈದ ಭಕ್ತರನು
ಸಭೆ ಸೇರಿಸಿ ಇಲ್ಲೆನ್ನ ಮುಂದೆ,” ಎನ್ನುತಿಹನು
ದೇವನೇ ಸತ್ಯಸ್ವರೂಪಿ, ನ್ಯಾಯಾಧಿಪತಿ
ಇದನು ಸಾರಿ ಹೇಳಲಿ ಆಕಾಶ ಪ್ರಕೃತಿ.

ದೇವರಿಗೆ ಧನ್ಯವಾದವೆ ನಿನ್ನ ಬಲಿಯರ್ಪಣೆಯಾಗಿರಲಿ
ಪರಾತ್ಪರನಿಗೆ ಮಾಡಿದ ಹರಕೆಗಳು ಸಮರ್ಪಿತವಾಗಲಿ
ಕಷ್ಟದಲಿ ಮೊರೆಯಿಡೆ, ನೆರವಾಗುವೆ
ಆಗ ನೀ ನನ್ನನು ಕೊಂಡಾಡುವೆ.

ಶುಭಸಂದೇಶ: ಮತ್ತಾಯ 13:24-30



ಯೇಸುಸ್ವಾಮಿ ಜನರಿಗೆ ಮತ್ತೊಂದು ಸಾಮತಿಯನ್ನು ಹೇಳಿದರು: "ಸ್ವರ್ಗಸಾಮ್ರಾಜ್ಯವು ತನ್ನ ಹೊಲದಲ್ಲಿ ಒಳ್ಳೆಯ ಗೋದಿಯನ್ನು ಬಿತ್ತಿದ ರೈತನನ್ನು ಹೋಲುತ್ತದೆ. ಒಂದು ರಾತ್ರಿ ಎಲ್ಲರೂ ನಿದ್ರಿಸುತ್ತಿರುವಾಗ, ಅವನ ವೈರಿ ಬಂದು, ಗೋದಿಯ ನಡುವೆ ಕಳೆಗಳನ್ನು ಬಿತ್ತಿಹೋದ. ಗೋದಿ ಬೆಳೆದು ತೆನೆ ಬಿಟ್ಟಾಗ ಕಳೆ ಬೆಳೆದಿರುವುದು ಗೋಚರವಾಯಿತು. ಆಗ ಆಳುಗಳು ತಮ್ಮ ಯಜಮಾನನ ಬಳಿಗೆ ಬಂದು, "ಸ್ವಾಮೀ, ನಿಮ್ಮ ಹೊಲದಲ್ಲಿ ಬಿತ್ತಿದ್ದು ಉತ್ತಮವಾದ ಗೋದಿ ಅಲ್ಲವೆ? ಜೊತೆಗೆ ಕಳೆಯು ಕಾಣಿಸಿಕೊಂಡಿದೆಯಲ್ಲಾ, ಅದೆಲ್ಲಿಂದ ಬಂತು?" ಎಂದರು. ಯಜಮಾನ, "ಇದು ನನ್ನ ವೈರಿ ಮಾಡಿರುವ ಕೆಲಸ," ಎಂದ. 'ಹಾಗಾದರೆ, ಕಳೆಗಳನ್ನು ಕಿತ್ತು ಹಾಕೋಣವೇ?' ಎಂದರು ಆಳುಗಳು. ಅದಕ್ಕೆ ಯಜಮಾನ "ಬೇಡ, ಬೇಡ; ಕಳೆಗಳನ್ನು ಕೀಳುವಾಗ, ಗೋದಿಯನ್ನೂ ಕಿತ್ತು ಬಿಟ್ಟೀರಿ. ಸುಗ್ಗಿಯವರೆಗೆ  ಎರಡೂ ಒಟ್ಟಿಗೆ ಬೆಳೆಯಲಿ; ಸುಗ್ಗಿಯ ಕಾಲದಲ್ಲಿ ಮೊದಲು ಕಳೆ ಕಿತ್ತು, ಸುಟ್ಟು ಹಾಕಲು ಕಟ್ಟಿಡಿ; ಬಳಿಕ ಗೋದಿಯನ್ನು ಒಕ್ಕಣೆಮಾಡಿ ನನ್ನ ಕಣಜಕ್ಕೆ ತುಂಬಿರಿ, ಎಂದು ಕೊಯ್ಲುಗಾರರಿಗೆ ಹೇಳುತ್ತೇನೆ,' ಎಂದ

No comments:

Post a Comment