ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

21.07.23 - "ನನಗೆ ಬೇಕಾದುದು ದಯೆ, ಯಜ್ಞಬಲಿಯಲ್ಲ"

ಮೊದಲನೇ ವಾಚನ: ವಿಮೋಚನಾಕಾಂಡ  11:10-12:14


ಮೋಶೆ ಮತ್ತು ಆರೋನರು ಫರೋಹನ ಮುಂದೆ ಈ ಸೂಚಕ ಕಾರ್ಯಗಳನ್ನೆಲ್ಲಾ ಮಾಡಿದ್ದರೂ ಸರ್ವೇಶ್ವರ ಫರೋಹನ ಹೃದಯವನ್ನು ಕಲ್ಲಾಗಿಸಿದ್ದರು. ಅವನು ತನ್ನ ದೇಶವನ್ನು ಬಿಟ್ಟು ಹೊರಡುವುದಕ್ಕೆ ಇಸ್ರಯೇಲರಿಗೆ ಅಪ್ಪಣೆ ಕೊಡದೆಹೋದನು. ಈಜಿಪ್ಟ್ ದೇಶದಲ್ಲಿ ಸರ್ವೇಶ್ವರಸ್ವಾಮಿ ಮೋಶೆ ಮತ್ತು ಆರೋನರ ಸಂಗಡ ಮಾತನಾಡಿ ಹೀಗೆಂದರು:  "ಎಲ್ಲ ಮಾಸಗಳಲ್ಲಿ ಇದೇ ನಿಮಗೆ ಆದಿಮಾಸವಾಗಿರಬೇಕು. ಇದೇ ನಿಮಗೆ ಪ್ರತಿ ವರ್ಷದ ಮೊದಲನೆಯ ತಿಂಗಳಾಗಿರಬೇಕು. ಈ ವಿಷಯದಲ್ಲಿ ನೀವು ಇಸ್ರಯೇಲರ ಸಮಾಜಕ್ಕೆಲ್ಲ ಈ ರೀತಿ ಕಟ್ಟಳೆ ಇಡಬೇಕು. "ಈ ತಿಂಗಳ ಹತ್ತನೆಯ ದಿನದಲ್ಲಿ ನಿಮ್ಮ ನಿಮ್ಮ ಗೋತ್ರಗಳ ಪ್ರತಿಯೊಂದು ಮನೆಯವರು ಒಂದೊಂದು ಕುರಿಮರಿಯನ್ನಾಗಲಿ, ಆಡು ಮರಿಯನ್ನಾಗಲಿ ಆರಿಸಿಕೊಳ್ಳಬೇಕು. ಕುಟುಂಬವು ಚಿಕ್ಕದಾಗಿದ್ದು ಒಂದು ಮರಿಯನ್ನು ಪೂರ್ತಿಯಾಗಿ ತಿನ್ನಲಾಗದಿದ್ದರೆ ಹತ್ತಿರದ ನೆರೆಮನೆಯ ಕುಟುಂಬದೊಂದಿಗೆ ಸೇರಿ ಒಬ್ಬೊಬ್ಬನು ಇಷ್ಟಿಷ್ಟು ತಿನ್ನುವನೆಂದು ಲೆಕ್ಕ ಹಾಕಿ ಜನಗಳ ಸಂಖ್ಯಾನುಸಾರ ಮರಿಗಳನ್ನು ಆರಿಸಿಕೊಳ್ಳಲಿ. ಆ ಮರಿಯು ಯಾವ ದೋಷವೂ ಇಲ್ಲದ ಒಂದು ವರ್ಷದ ಗಂಡಾಗಿರಬೇಕು. ಕುರಿಗಳಿಂದಾಗಲಿ ಆಡುಗಳಿಂದಾಗಲಿ ಅದನ್ನು ಆರಿಸಿಕೊಳ್ಳಬಹುದು. ಈ ತಿಂಗಳಿನ ಹದಿನಾಲ್ಕನೆಯ ದಿನದವರೆಗೆ ಅವುಗಳನ್ನು ಇಟ್ಟುಕೊಂಡಿದ್ದು ಆ ದಿನದ ಸಂಜೆ ವೇಳೆಯಲ್ಲಿ ಇಸ್ರಯೇಲ್ ಸಮಾಜದವರೆಲ್ಲರು ತಮ್ಮತಮ್ಮ ಕೂಟಗಳಲ್ಲಿ ಕೊಯ್ಯಬೇಕು. ಅವುಗಳ ರಕ್ತದಲ್ಲಿ ಸ್ವಲ್ಪ ತೆಗೆದು ತಾವು ಆ ಭೋಜನ ಮಾಡುವ ಮನೆಯ ಬಾಗಿಲಿನ ಎರಡು ನಿಲುವು ಕಂಬಗಳಿಗೂ ಮೇಲಿನ ಪಟ್ಟಿಗೂ ಹಚ್ಚಬೇಕು. ಆ ರಾತ್ರಿಯಲ್ಲೇ ಆ ಮಾಂಸವನ್ನು ತಿನ್ನಬೇಕು. ಅದನ್ನು ಬೆಂಕಿಯಲ್ಲಿ ಸುಟ್ಟು ಹುಳಿಯಿಲ್ಲದ ರೊಟ್ಟಿಗಳ ಮತ್ತು ಕಹಿಯಾದ ಪಲ್ಯಗಳ ಸಮೇತ ಊಟ ಮಾಡಬೇಕು. ಅದನ್ನು ಹಸಿಯಾಗಿಯೋ ಅಥವಾ ನೀರಿನಲ್ಲಿ ಬೇಯಿಸಿಯೋ ತಿನ್ನಕೂಡದು. ಅದನ್ನೆಲ್ಲಾ, ತಲೆ ಕಾಲು, ಒಳ ಭಾಗಗಳ ಸಹಿತವಾಗಿ, ಬೆಂಕಿಯಲ್ಲಿ ಸುಟ್ಟೇ ತಿನ್ನಬೇಕು. ಮರುದಿನ ಬೆಳಗಿನ ತನಕ ಅದರಲ್ಲಿ ಸ್ವಲ್ಪವನ್ನಾದರು ಮಿಗಿಸಕೂಡದು. ಬೆಳಗಿನವರೆಗೆ ಮಿಕ್ಕಿದ್ದನ್ನು ಬೆಂಕಿಯಿಂದ ಸುಟ್ಟುಬಿಡಬೇಕು. ಆ ಬೋಜನವನ್ನು ಮಾಡಬೇಕಾದ ಕ್ರಮ ಇದು; ನೀವು ನಡುಕಟ್ಟಿಕೊಂಡು, ಕೆರಮೆಟ್ಟಿಕೊಂಡು ಊರುಗೋಲನ್ನು ಹಿಡಿದುಕೊಂಡು, ಬೇಗಬೇಗನೆ ಊಟಮಾಡಬೇಕು. ಏಕೆಂದರೆ ಅದು ಸರ್ವೇಶ್ವರಸ್ವಾಮಿಗೆ ಆಚರಿಸತಕ್ಕ ಪಾಸ್ಕಹಬ್ಬ. ಆ ರಾತ್ರಿ ನಾನು ಈಜಿಪ್ಟ್ ದೇಶದ ನಡುವೆ ಹಾದು ಹೋಗುವೆನು. ಮನುಷ್ಯರಾಗಿರಲಿ, ಪ್ರಾಣಿಗಳಾಗಿರಲಿ ಚೊಚ್ಚಲಾದುದೆಲ್ಲವನ್ನು ಸಂಹರಿಸುವೆನು. ಈಜಿಪ್ಟ್ ದೇಶದ ಸಮಸ್ತ ದೇವತೆಗಳನ್ನೂ ದಂಡಿಸುವೆನು. ನಾನೇ ಸರ್ವೇಶ್ವರ! ನೀವು ಬಾಗಿಲಿಗೆ ಹಚ್ಚಿದ ಆ ರಕ್ತವು ನೀವಿರುವ ಮನೆಗಳನ್ನು ಸೂಚಿಸುವುದು. ಅದನ್ನು ಕಂಡು ನಿಮಗೆ ಯಾವ ಹಾನಿಯನ್ನು ಮಾಡದೆ ಮುಂದಕ್ಕೆ ದಾಟಿಹೋಗುವೆನು. ನಾನು ಈಜಿಪ್ಟಿನವರನ್ನು ಸಂಹರಿಸುವಾಗ ನಿಮಗೆ ಯಾವ ಕೇಡೂ ಆಗದು.  ಆದಿನವು ನಿಮಗೆ ಸ್ಮರಣೀಯ ದಿನವಾಗಿರುವುದು. ಅಂದು ನೀವು ಸರ್ವೇಶ್ವರನ ಗೌರವಾರ್ಥ ಹಬ್ಬವನ್ನು ಕೊಂಡಾಡಬೇಕು. ಅದನ್ನು ಶಾಶ್ವತ ನಿಯಮವೆಂದು ತಲತಲಾಂತರಕ್ಕೂ ಆಚರಿಸಬೇಕು.

ಕೀರ್ತನೆ: 116:12-13, 15, 16, 17-18
ಶ್ಲೋಕ: ಪ್ರಖ್ಯಾತಪಡಿಸುವೆನು ಪ್ರಭುವಿನ ನಾಮವನು

ಆಗ ನಂಬಿದರು ಪ್ರಭುವಿನಾ ಮಾತನು I
ಮಾಡಿದರಾಗ ಆತನ ಗುಣಗಾನವನು II
ಆದರೆ ಮರೆತರು ಬೇಗನೆ ಆತನ ಸತ್ಕಾರ್ಯಗಳನು I
ಕಾಯದೆ ಹೋದರು ಆತನಾ ಸಂಕಲ್ಪ ಸಾದನೆಯನು II

ಪೂರೈಸಿದನಾತ ಅವರ ಕೋರಿಕೆಯನು I
ಕಳುಹಿಸಿದನಾದರೆ ಭೀಕರ ರೋಗವನು II
ಅಸೂಯೆಗೊಂಡರು ಪಾಳೆಯದೊಳು ಮೋಶೆಯ ಮೇಲೆ I
ಪ್ರಭುವಿಗೆ ಪ್ರತಿಷ್ಠಿತನಾದ ಆ ಆರೋನನ ಮೇಲೆ II

ಭೂಮಿ ಬಾಯ್ದೆರೆದು ನುಂಗಿತು ದಾತಾನನನು I
ಮುಚ್ಚಿಬಿಟ್ಟಿತು ಅಭಿರಾಮನ ಕಡೆಯವರನು II
ಆ ಜನರ ಮಧ್ಯದಲಿ ಬೆಂಕಿ ಹಬ್ಬಿತು I
ಅಗ್ನಿಜ್ವಾಲೆ ದಹಿಸಿಬಿಟ್ಟಿತು ಆ ದುಷ್ಟರನು II

ಶುಭಸಂದೇಶ: ಮತ್ತಾಯ 12:1-8

ಒಂದು ಸಬ್ಬತ್ ದಿನ ಯೇಸುಸ್ವಾಮಿ ಗೋದಿಯ ಹೊಲಗಳನ್ನು ಹಾದುಹೋಗುತ್ತಿದ್ದರು. ಅವರ ಸಂಗಡವಿದ್ದ ಶಿಷ್ಯರಿಗೆ ಹಸಿವಾಯಿತು. ಅವರು ಗೋದಿಯ ತೆನೆಗಳನ್ನು ಕಿತ್ತು ತಿನ್ನಲಾರಂಭಿಸಿದರು. ಇದನ್ನು ಕಂಡ ಫರಿಸಾಯರು, "ನೋಡು, ನೋಡು, ನಿನ್ನ ಶಿಷ್ಯರು ಸಬ್ಬತ್ ದಿನದಲ್ಲಿ ನಿಷಿದ್ಧವಾದುದನ್ನು ಮಾಡುತ್ತಿದ್ದಾರೆ," ಎಂದರು. ಅದಕ್ಕೆ ಯೇಸು, "ಹಿಂದೆ ಅರಸ ದಾವೀದನು ಮತ್ತು ಅವನ ಸಂಗಡಿಗರು ಹಸಿದಿದ್ದಾಗ ಏನು ಮಾಡಿದರೆಂದು ನೀವು ಓದಿರಬೇಕಲ್ಲವೆ? ಅವನು ದೇವಮಂದಿರದೊಳಕ್ಕೆ ಹೋಗಿ ಯಾಜಕರ ಹೊರತು ತಾನೇ ಆಗಲಿ, ಸಂಗಡಿಗರೇ ಆಗಲಿ, ತಿನ್ನಬಾರದಾಗಿದ್ದ ನೈವೇದ್ಯದ ರೊಟ್ಟಿಗಳನ್ನೇ ತಿನ್ನಲಿಲ್ಲವೆ? ಇದಲ್ಲದೆ, ಪ್ರತಿಯೊಂದು ಸಬ್ಬತ್ ದಿನವೂ ಯಾಜಕರು ದೇವಾಲಯದಲ್ಲಿ ಸಬ್ಬತ್ ದಿನದ ನಿಯಮಗಳನ್ನು ಉಲ್ಲಂಘಿಸಿಯೂ ನಿರ್ದೋಷಿಗಳಾಗಿದ್ದಾರೆ. ಇದನ್ನು ನೀವು ಮೋಶೆಯ ಧರ್ಮಶಾಸ್ತ್ರದಲ್ಲಿ ಓದಿಲ್ಲವೆ?. ದೇವಾಲಯಕ್ಕಿಂತಲೂ ಶ್ರೇಷ್ಟವಾದವನು ಇಲ್ಲಿದ್ದಾನೆಂಬುದು ನಿಮಗೆ ತಿಳಿದಿರಲಿ, "ನನಗೆ ಬೇಕಾದುದು ದಯೆ, ಯಜ್ಞ ಬಲಿಯಲ್ಲ" ಎಂಬ ವಾಕ್ಯದ ಅರ್ಥ ನಿಮಗೆ ತಿಳಿದಿದ್ದರೆ, ನಿರ್ದೋಷಿಗಳನ್ನು ನೀವು ಖಂಡಿಸುತ್ತಿರಲಿಲ್ಲ. ಏಕೆಂದರೆ ನರಪುತ್ರನು ಸಬ್ಬತ್ತಿಗೆ ಒಡೆಯ," ಎಂದರು.

No comments:

Post a Comment