ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

28.07.23

ಮೊದಲನೇ ವಾಚನ: ವಿಮೋಚನಾಕಾಂಡ 20:1-17

ದೇವರು ಕೊಟ್ಟ ಆಜ್ಞೆಗಳು ಇವು: "ನಾನೇ ನಿನ್ನ ದೇವರಾದ ಸರ್ವೇಶ್ವರ ಗುಲಾಮತನದಲ್ಲಿದ್ದ ನಿನ್ನನ್ನು ಈಜಿಪ್ಟಿನಿಂದ ಬಿಡುಗಡೆ ಮಾಡಿದವನು. ನಾನಲ್ಲದೆ ನಿನಗೆ ಬೇರೆ ದೇವರುಗಳು ಇರಕೂಡದು. ಆಕಾಶದಲ್ಲಾಗಲಿ, ಭೂಮಿಯಲ್ಲಾಗಲಿ, ಭೂಮಿಯ ಕೆಳಗಿನ ನೀರಿನಲ್ಲಾಗಲಿ ಇರುವ ಯಾವುದರ ರೂಪವನ್ನು ಅಥವಾ ವಿಗ್ರಹವನ್ನು ಮಾಡಿಕೊಳ್ಳಬೇಡ. ಅವುಗಳಿಗೆ ಅಡ್ಡಬೀಳಬೇಡ, ಅವುಗಳನ್ನು ಆರಾಧಿಸಬೇಡ. ಏಕೆಂದರೆ ನಾನೇ ನಿನ್ನ ದೇವರಾದ ಸರ್ವೇಶ್ವರ. ನನಗೆ ಸಲ್ಲತಕ್ಕ ಗೌರವವನ್ನು ನಾನು ಮತ್ತೊಬ್ಬನಿಗೆ ಸಲ್ಲಗೊಡಿಸುವುದಿಲ್ಲ. ನನ್ನನ್ನು ದ್ವೇಷಿಸುವವರನ್ನು ದಂಡಿಸುತ್ತೇನೆ; ಅವರ ದೋಷಫಲವನ್ನು ಅವರ ಮಕ್ಕಳ ಮೇಲೆ ಮೂರು ನಾಲ್ಕು ತಲೆಗಳವರೆಗೆ ಬರಮಾಡುತ್ತೇನೆ. ನನ್ನನ್ನು ಪ್ರೀತಿಸಿ, ನನ್ನ ಆಜ್ಞೆಗಳನ್ನು ಕೈಗೊಳ್ಳುವವರಿಗಾದರೋ ಸಾವಿರ ತಲೆಗಳವರೆಗೆ ದಯೆತೋರಿಸುತ್ತೇನೆ. ನಿನ್ನ ದೇವರಾದ ಸರ್ವೇಶ್ವರನ ಹೆಸರನ್ನು ದುರುಪಯೋಗಪಡಿಸಿಕೊಳ್ಳಬೇಡ. ಏಕೆಂದರೆ ಸರ್ವೇಶ್ವರನಾದ ನಾನು ನನ್ನ ಹೆಸರನ್ನು ದುರುಪಯೋಗಪಡಿಸಿಕೊಳ್ಳುವವನನ್ನು ಶಿಕ್ಷಿಸದೆ ಬಿಡುವುದಿಲ್ಲ. ಸಬ್ಬತ್ ದಿನವನ್ನು ದೇವರ ದಿನವೆಂದು ತಿಳಿದು ಪವಿತ್ರವಾಗಿ ಆಚರಿಸು. ಆರು ದಿನಗಳು ದುಡಿದು ನಿನ್ನ ಕೆಲಸವನ್ನೆಲ್ಲ ಮಾಡು. ಏಳನೆಯ ದಿನ ನಿನ್ನ ದೇವರಾದ ಸರ್ವೇಶ್ವರನಿಗೆ ಮೀಸಲಾದ ವಿಶ್ರಾಂತಿ ದಿನ. ಅಂದು ನೀನು ಯಾವ ಕೆಲಸವನ್ನು ಮಾಡಬಾರದು. ನಿನ್ನ ಗಂಡುಹೆಣ್ಣು ಮಕ್ಕಳು, ನಿನ್ನ ಗಂಡುಹೆಣ್ಣು ಆಳುಗಳು, ಪಶುಪ್ರಾಣಿಗಳು ಹಾಗು ನಿನ್ನ ಊರಲ್ಲಿರುವ ಅನ್ಯ ದೇಶದವರು ಯಾವ ಕೆಲಸವನ್ನು ಮಾಡಬಾರದು. ಸರ್ವೇಶ್ವರನಾದ ನಾನು ಆರು ದಿನಗಳಲ್ಲಿ ಭೂಮ್ಯಾಕಾಶಗಳನ್ನೂ ಸಮುದ್ರವನ್ನೂ ಅವುಗಳಲ್ಲಿರುವ ಸಮಸ್ತವನ್ನೂ ಸೃಷ್ಟಿಮಾಡಿ ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡೆನು. ಆದುದರಿಂದ ಅದನ್ನು ಸರ್ವೇಶ್ವರನ ವಿಶ್ರಾಂತಿ ದಿನವನ್ನಾಗಿ ಆಶೀರ್ವದಿಸಿ ಪವಿತ್ರಗೊಳಿಸಿದೆನು. ನಿನ್ನ ತಂದೆತಾಯಿಗಳನ್ನು ಗೌರವಿಸು; ಗೌರವಿಸಿದರೆ ನಿನ್ನ ದೇವರೂ ಸರ್ವೇಶ್ವರನೂ ಆದ ನಾನು ನಿನಗೆ ಅನುಗ್ರಹಿಸುವ ನಾಡಿನಲ್ಲಿ ಬಹುಕಾಲ ಬಾಳುವೆ. ಕೊಲೆಮಾಡಬೇಡ, ವ್ಯಭಿಚಾರಮಾಡಬೇಡ, ಕದಿಯಬೇಡ, ನೆರೆಯವನ ವಿರುದ್ಧ ಸುಳ್ಳುಸಾಕ್ಷಿ ಹೇಳಬೇಡ,  ನೆರೆಯವನ ಮನೆಯನ್ನು ಬಯಸಬೇಡ; ಅವನ ಹೆಂಡತಿ, ಗಂಡಾಳು, ಹೆಣ್ಣಾಳು, ಎತ್ತು, ಕತ್ತೆ ಮುಂತಾದ ಯಾವುದನ್ನೂ ಬಯಸಬೇಡ."

ಕೀರ್ತನೆ: 19:8, 9, 10, 11
ಶ್ಲೋಕ: ಪ್ರಭುವೇ, ನಿತ್ಯಜೀವವನ್ನು ಈಯುವ ನುಡಿ ಇರುವುದು ತಮ್ಮಲ್ಲೆ

ಪ್ರಭುವಿನ ಆಜ್ಞೆ ಪರಿಪೂರ್ಣ; ಜೀವನಕದು ನವಚೇತನ
ನಂಬಲರ್ಹ; ಪ್ರಭುವಿನ ಶಾಸನ ಮುಗ್ಧರಿಗದು ಸುಜ್ಞಾನ.

ಪ್ರಭುವಿನ ನಿಯಮ ನೀತಿಬದ್ಧ; ಮನಸ್ಸಿಗದು ಒಸಗೆ
ಪ್ರಭುವಿನ ಕಟ್ಟಳೆ ಪರಿಶುದ್ಧ; ಕಣ್ಣಿಗದು ದೀವಿಗೆ
ಪ್ರಭುವಿನ ಭೀತಿ ಪವಿತ್ರ; ಅದೆಂದಿಗೂ ಶಾಶ್ವತ
ಪ್ರಭುವಿನ ತೀರ್ಪು ಯಥಾರ್ಥ; ಪರಿಪೂರ್ಣ ನ್ಯಾಯಯುತ.

ಅಪೇಕ್ಷಣೀಯವಾದುವವು ಚಿನ್ನ ಅಪರಂಜಿಗಿಂತ
ಅತಿಮಧುರವಾದುವು ಅಪ್ಪಟ ಜೇನುತುಪ್ಪಕ್ಕಿಂತ.

ಶುಭಸಂದೇಶ: ಮತ್ತಾಯ 13:18-23


ಯೇಸು ತಮ್ಮ ಶಿಷ್ಯರನ್ನುದ್ದೇಶಿಸಿ, "ಈಗ  ಬಿತ್ತುವವನ ಸಾಮತಿಯ ಅರ್ಥವನ್ನು ಕೇಳಿ: ಒಬ್ಬನು ಶ್ರೀ ಸಾಮ್ರಾಜ್ಯದ ಸಂದೇಶವನ್ನು ಕೇಳಿ ಅದನ್ನು ಗ್ರಹಿಸದೆ ಹೋದರೆ, ಕೇಡಿಗನು ಬಂದು ಅವನ ಹೃದಯದಲ್ಲಿ ಬಿತ್ತಿದ್ದ ಬೀಜವನ್ನು ತೆಗೆದೆಸೆಯುತ್ತಾನೆ. ಇವನು ಕಲ್ದಾರಿಯಲ್ಲಿ ಬಿದ್ದ ಬೀಜವನ್ನು ಹೋಲುತ್ತಾನೆ. ಬೇರೊಬ್ಬನು ಈ ಸಂದೇಶವನು ಕೇಳಿದಕೂಡಲೇ ಅದನ್ನು ಸಂತೋಷದಿಂದ ಸ್ವೀಕರಿಸುತ್ತಾನೆ. ಆದರೆ ಅದು ತನ್ನಲ್ಲಿ ಬೇರೂರದ ಕಾರಣ ಕೊಂಚಕಾಲ ಮಾತ್ರ ಇದ್ದು, ಸಂದೇಶದ ನಿಮಿತ್ತ ಕಷ್ಟ ಕೋಟಲೆಗಳು ಬಂದೊದಗಿದ ಕೂಡಲೆ ಎಡವಿ ಬೀಳುತ್ತಾನೆ. ಇವನು ಕಲ್ಲು ನೆಲದ ಮೇಲೆ ಬಿದ್ದ ಬೀಜವನ್ನು ಹೋಲುತ್ತಾನೆ. ಇನ್ನೊಬ್ಬನು ಸಂದೇಶವನ್ನೇನೋ ಕೇಳುತ್ತಾನೆ, ಆದರೆ ಪ್ರಾಪಂಚಿಕ ಚಿಂತನೆಗಳು, ಐಶ್ವರ್ಯದ ವ್ಯಾಮೋಹಗಳು ಆ ಸಂದೇಶವನ್ನು ಫಲಬಿಡದಂತೆ ಅದುಮಿಬಿಡುತ್ತವೆ: ಇವನು ಮುಳ್ಳುಪೊದೆಗಳಲ್ಲಿ ಬಿದ್ದ ಬೀಜವನ್ನು ಹೋಲುತ್ತಾನೆ. ಇನ್ನೊಬ್ಬನು ವಾಕ್ಯವನ್ನು ಕೇಳುತ್ತಾನೆ,  ಗ್ರಹಿಸಿಕೊಳ್ಳುತ್ತಾನೆ; ಫಲಪ್ರದನಾಗಿ ನೂರರಷ್ಟು, ಅರವತ್ತರಷ್ಟು, ಮೂವತ್ತರಷ್ಟು ಫಲ ಕೊಡುತ್ತಾನೆ. ಇವನು ಹದವಾದ ಭೂಮಿಯಲ್ಲಿ ಬಿದ್ದ ಬೀಜವನ್ನು ಹೋಲುತ್ತಾನೆ," ಎಂದರು.

No comments:

Post a Comment