ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

12.08.23

ಮೊದಲನೇ ವಾಚನ: ಧರ್ಮೋಪದೇಶಕಾ೦ಡ 6: 4-13

“ಇಸ್ರಯೇಲ್ ಜನಾಂಗವೇ ಕೇಳು: ನಿನ್ನ ದೇವರಾದ ಸರ್ವೇಶ್ವರಸ್ವಾಮಿ ಒಬ್ಬರೇ ದೇವರು. ನಿನ್ನ ಪೂರ್ಣಹೃದಯದಿಂದ, ಪೂರ್ಣಪ್ರಾಣದಿಂದ, ಪೂರ್ಣಶಕ್ತಿಯಿಂದ ನಿನ್ನ ದೇವರಾದ ಸರ್ವೇಶ್ವರನನ್ನು ಪ್ರೀತಿಸು. ಈ ದಿನ ನಾನು ನಿನಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿ ನಾಟಿರಲಿ. ಇವುಗಳನ್ನು ನಿನ್ನ ಮಕ್ಕಳಿಗೆ ಮನದಟ್ಟಾಗಿಸು; ಮನೆಯಲ್ಲಿರುವಾಗಲು, ಪ್ರಯಾಣದಲ್ಲಿರುವಾಗಲು, ಮಲಗುವಾಗಲು, ಏಳುವಾಗಲು ಇವುಗಳನ್ನು ಕುರಿತು ಪಾಠಹೇಳು. ಜ್ಞಾಪಕಾರ್ಥವಾಗಿ ಅವುಗಳನ್ನು ನಿನ್ನ ಕೈಗೆ ಕಟ್ಟಿಕೊ; ಜ್ಞಾಪಕ ಪಟ್ಟಿಯಂತೆ ಹಣೆಗೆ ತೊಟ್ಟುಕೊ. ನಿನ್ನ ಮನೆ ಬಾಗಿಲಿನ ನಿಲುವುಪಟ್ಟಿಗಳಲ್ಲೂ ತಲೆಬಾಗಿಲಿನ ಮೇಲೂ ಅವುಗಳನ್ನು ಬರೆ. “ನಿನ್ನ ಪಿತೃಗಳಾದ ಅಬ್ರಹಾಮ್, ಇಸಾಕ್, ಯಕೋಬರಿಗೆ ನಿನ್ನ ದೇವರಾದ ಸರ್ವೇಶ್ವರ ಪ್ರಮಾಣಮಾಡಿದ ನಾಡಿಗೆ ನಿನ್ನನ್ನು ಸೇರಿಸಿದಾಗ, ನೀನು ಕಟ್ಟದ ಸುಂದರವಾದ ದೊಡ್ಡ ಪಟ್ಟಣಗಳನ್ನು, ನೀನು ಕೂಡಿಸದ ಉತ್ತಮೋತ್ತಮ ವಸ್ತುಗಳಿಂದ ತುಂಬಿದ ಮನೆಗಳನ್ನು, ನೀನು ತೋಡದ ನೀರುಗುಂಡಿಗಳನ್ನು, ನೀನು ಬೆಳಸದ ದ್ರಾಕ್ಷಿತೋಟಗಳನ್ನು ಹಾಗು ಎಣ್ಣೆಮರಗಳನ್ನು ಅನುಭವಿಸುತ್ತಾ ತೃಪ್ತನಾಗಿ ಇರುವೆ. ಈಜಿಪ್ಟ್ ದೇಶದಲ್ಲಿ ಗುಲಾಮನಾಗಿದ್ದ ನಿನ್ನನ್ನು ಬಿಡುಗಡೆ ಮಾಡಿದ ಸರ್ವೇಶ್ವರನನ್ನು ಆಗ ಮರೆತುಬಿಡದಂತೆ ಎಚ್ಚರಿಕೆಯಿಂದಿರು. ನಿನ್ನ ದೇವರಾದ ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವನಾಗಿರು; ಅವರಿಗೇ ಸೇವೆಮಾಡು; ಅವರ ಹೆಸರು ಹೇಳಿ ಪ್ರಮಾಣಮಾಡು.

ಕೀರ್ತನೆ: 18:1-3, 46, 50, 51
ಶ್ಲೋಕ: ಪ್ರಭುವೇ, ನೀನೇ  ಬಲವು,ನನಗಿದೆ ನಿನ್ನಲೇ ಒಲವು. 

ಪ್ರಭೂ, ನೀನೇ ನನ್ನ ಬಲವು ನನಗಿದೆ ನಿನ್ನಲ್ಲೇ ಒಲವು
ಪ್ರಭುವೇ ನನ್ನ ಕಲ್ಲುಕೋಟೆ, ನನಗೆ ವಿಮೋಚಕ
ಆತನೇ ನನ್ನ ದೇವ, ನನ್ನಾಶ್ರಯದುರ್ಗ
ಆತನೆನಗೆ ಗುರಾಣಿ, ಗಿರಿ, ರಕ್ಷಣಾ ಶೃಂಗ

ಪ್ರಭು ಸ್ತುತ್ಯಾರ್ಹನು
ಶತ್ರುಗಳಿಂದ ಕಾಪಾಡುವರು ನಾನವಗೆ ಮೊರೆಯಿಡಲು
ಸರ್ವೇಶ್ವರನು ಚೈತನ್ಯ ಸ್ವರೂಪನು
ನನ್ನುದ್ಧಾರಕನಾದವನಿಗೆ ಸ್ತುತಿಸ್ತೋತ್ರ
ನನ್ನ ರಕ್ಷಿಸುವ ದೇವರಿಗೆ ಜಯಕಾರ

ತಾನೇ ನೇಮಿಸಿದ ಅರಸನಿಗೆ ಆತನೀವನು ವಿಶೇಷ ರಕ್ಷಣೆ
ಅನುಗ್ರಹಿಸುವನಾತ ಅನಂತಾನಂತ ಕೃಪೆ
ತಾನಭಿಷೇಕಿಸಿದ ದಾವೀದನಿಗೆ, ಆತನ ಸಂತತಿಗೆ

ಶುಭಸಂದೇಶ: ಮತ್ತಾಯ 17:14-21

ಜನರ ಗುಂಪು ಇದ್ದಲ್ಲಿಗೆ ಅವರೆಲ್ಲರು ಮರಳಿಬಂದರು. ಆಗ ಒಬ್ಬನು ಯೇಸುಸ್ವಾಮಿಯ ಬಳಿಗೆ ಬಂದು, "ಪ್ರಭೂ, ನನ್ನ ಮಗನ ಮೇಲೆ ಕನಿಕರವಿಡಿ, ಅವನು ಮೂರ್ಛಾರೋಗಿ, ಅವನ ಕಷ್ಟ ಹೇಳತೀರದು, ಆಗಾಗ ಬೆಂಕಿಯಲ್ಲೋ ನೀರಿನಲ್ಲೋ ಬಿದ್ದು ಬಿಡುತ್ತಾನೆ. ಅವನನ್ನು ತಮ್ಮ ಶಿಷ್ಯರ ಬಳಿಗೆ ಕರೆದುಕೊಂಡು ಬಂದೆ. ಆದರೆ ಅವನನ್ನು ಗುಣಪಡಿಸಲು ಅವರಿಂದಾಗಲಿಲ್ಲ," ಎಂದು ಮೊಣಕಾಲೂರಿ ಯಾಚಿಸಿದನು. ಅದಕ್ಕೆ ಯೇಸು, "ಅಯ್ಯೋ ವಿಶ್ವಾಸವಿಲ್ಲದ ವಕ್ರ ಪೀಳಿಗೆಯೇ, ಇನ್ನೆಷ್ಟುಕಾಲ ನಾನು ನಿಮ್ಮೊಂದಿಗಿರಲಿ? ಇನ್ನೆಷ್ಟು ಕಾಲ ನಿಮ್ಮನ್ನು ಸಹಿಸಿಕೊಳ್ಳಲಿ?" ಎಂದು ಹೇಳಿ, "ಆ ಹುಡುಗನನ್ನು ಇಲ್ಲಿ ನನ್ನ ಬಳಿಗೆ ಕರೆದುಕೊಂಡು ಬನ್ನಿ," ಎಂದರು. ಅನಂತರ ಆ ಹುಡುಗನಲ್ಲಿದ್ದ ದೆವ್ವವನ್ನು ಅವರು ಗದರಿಸಿದೊಡನೆಯೇ, ಅದು ಅವನನ್ನು ಬಿಟ್ಟು ಹೋಯಿತು. ಅವನು ತಕ್ಷಣವೇ ಸ್ವಸ್ಥನಾದನು. ತರುವಾಯ ಶಿಷ್ಯರು ಪ್ರತ್ಯೇಕವಾಗಿ ಯೇಸುವಿನ ಬಳಿಗೆ ಬಂದು, "ಆ ದೆವ್ವವನ್ನು ಬಿಡಿಸಲು ನಮ್ಮಿಂದಾಗಲಿಲ್ಲವಲ್ಲ, ಅದೇಕೆ?" ಎಂದು ಕೇಳಿದರು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, "ನಿಮ್ಮ ಅಲ್ಪವಿಶ್ವಾಸವೇ ಅದಕ್ಕೆ ಕಾರಣ. ನಾನು ನಿಶ್ಚಯವಾಗಿ ಹೇಳುತ್ತೇನೆ: ನಿಮಗೆ ಸಾಸಿವೆ ಕಾಳಿನಷ್ಟು ವಿಶ್ವಾಸವಾದರೂ ಇದ್ದಲ್ಲಿ, ಈ ಬೆಟ್ಟಕ್ಕೆ ಇಲ್ಲಿಂದ ಆ ಸ್ಥಳಕ್ಕೆ ಹೋಗು, ಎಂದು ಹೇಳಿದರೆ ಅದು ಹೋಗುತ್ತದೆ. ನಿಮ್ಮಿಂದ ಅಸಾಧ್ಯವಾದುದು ಒಂದೂ ಇರದು. (ಈ ಬಗೆಯ ದೆವ್ವಗಳನ್ನು ಹೊರಗಟ್ಟಲು ಪ್ರಾರ್ಥನೆ ಮತ್ತು ಉಪವಾಸ ಮಾಡುವುದನ್ನು ಬಿಟ್ಟು ಬೇರೆ ಮಾರ್ಗವಿಲ್ಲ)," ಎಂದರು.

No comments:

Post a Comment