ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

03.07.23 - ವಿಶ್ವಾಸರಹಿತನಾಗಿರಬೇಡ, ವಿಶ್ವಾಸಿಸು

ಮೊದಲನೇ ವಾಚನ : ಪ್ರೇಷಿತರ ಕಾರ್ಯಕಲಾಪಗಳು  : 10:24-35 


ಮರುದಿವಸ ಅವನು ಸೆಜರೇಯವನ್ನು ತಲುಪಿದನು. ಇತ್ತ ಕೊರ್ನೇಲಿಯನು ತಾನು ಆಹ್ವಾನಿಸಿದ ನೆಂಟರಿಷ್ಟರೊಡನೆಮತ್ತು ಆಪ್ತಮಿತ್ರರೊಡನೆ ಪೇತ್ರನಿಗಾಗಿ ಕಾಯುತ್ತಿದ್ದನು. ಪೇತ್ರನು ಮನೆಯನ್ನು ಪ್ರವೇಶಿಸುತ್ತಿದ್ದಂತೆ ಕೊರ್ನೇಲಿನು ಅವನನ್ನು ಎದುರಗೊಂಡುಪಾದಕ್ಕೆರಗಿಸಾಷ್ಟಾಂಗ ನಮಸ್ಕಾರ ಮಾಡಿದನು. ಪೇತ್ರನು ಅವನನ್ನು ಮೇಲಕ್ಕೆಬ್ಬಿಸಿ,   ಎದ್ದು ನಿಲ್ಲು,  ನಾನೂ ಒಬ್ಬ ಸಾಮಾನ್ಯ ಮನುಷ್ಯನೇ,” ಎಂದನು.

ಕೊರ್ನೇಲಿಯನೊಡನೆ ಮಾತನಾಡುತ್ತಾ ಪೇತ್ರನು ಮನೆಯೊಳಕ್ಕೆ ಬಂದಾಗ ಅಲ್ಲಿ ಅನೇಕ ಜನರು ಸಭೆ ಸೇರಿರುವುದನ್ನು ಕಂಡನು. ಪೇತ್ರನು ಅವರಿಗೆ, “ಯೆಹೂದ್ಯನೊಬ್ಬನು ಅನ್ಯಧರ್ಮದವರೊಡನೆ ಸಂಪರ್ಕ ಇಟ್ಟುಕೊಳ್ಳುವುದು ಅಥವಾ ಅವರಿಗೆ ಭೇಟಿಕೊಡುವುದು ಧರ್ಮನಿಷಿದ್ಧ ಎಂಬುದು ನಿಮಗೆ ತಿಳಿದೇ ಇದೆ. ಆದರೆ, ನಾನು ಯಾರನ್ನೂ ಅಶುದ್ಧ ಅಥವಾ ಅಸ್ಪೃಶ್ಯ ಎನ್ನಬಾರದೆಂದು ದೇವರು ನನಗೆ ತೋರಿಸಿಕೊಟ್ಟಿದ್ದಾರೆ. ಆದುದರಿಂದಲೇ ನೀವು ಹೇಳಿಕಳುಹಿಸಿದಾಗ ನಾನು ಯಾವ ಆಕ್ಷೇಪಣೆಮಾಡದೆ ಬಂದಿದ್ದೇನೆ. ಈಗ ನನ್ನನ್ನು ಕರೆದ ಕಾರಣವೇನೆಂದು ತಿಳಿಯಬಯಸುತ್ತೇನೆ,” ಎಂದನು.

ಆಗ ಕೊರ್ನೇಲಿಯನು, “ನಾನು ಮೂರು ದಿನಗಳ ಹಿಂದೆ ಮಧ್ಯಾಹ್ನ ಮೂರು ಗಂಟೆಯ ಇದೇ ಸಮಯದಲ್ಲಿ ಪ್ರಾರ್ಥನೆ ಮಾಡುತ್ತಾ ಇದ್ದೆ. ಹಠಾತ್ತನೆ ಶೋಭಾಯಮಾನ ವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬನು ನನ್ನೆದುರಿಗೆ ನಿಂತನು. ಅವನು, “ಕೊರ್ನೇಲಿಯಾ, ದೇವರು ನಿನ್ನ ಪ್ರಾರ್ಥನೆಯನ್ನು ಆಲಿಸಿದ್ದಾರೆ; ನಿನ್ನ ದಾನಧರ್ಮಗಳನ್ನು ಮೆಚ್ಚಿದ್ದಾರೆ. ಯಾರನ್ನಾದರೂ ಜೊಪ್ಪಕ್ಕೆ ಕಳುಹಿಸಿ ಪೇತ್ರ ಎಂದು ಕರೆಯಲಾದ ಸಿಮೋನನನ್ನು ಬರಮಾಡಿಕೊ. ಅವನು ಸಮುದ್ರತೀರದಲ್ಲಿ ವಾಸಿಸುತ್ತಿರುವ, ಚರ್ಮ ಹದಮಾಡುವ ಸಿಮೋನನ ಮನೆಯಲ್ಲಿ ತಂಗಿದ್ದಾನೆ,” ಎಂದನು. ಅಂತೆಯೇ ನಾನು ತಕ್ಷಣ ತಮ್ಮನ್ನು ಕರೆತರಲು ಕಳುಹಿಸಿದೆ. ತಾವು ಇಲ್ಲಿಗೆ ದಯಮಾಡಿಸಿದಿರಿ. ಪ್ರಭು ತಮಗೆ ಆಜ್ಞಾಪಿಸಿರುವುದನ್ನೆಲ್ಲಾ ಕೇಳಲು ನಾವೆಲ್ಲರೂ ಇಲ್ಲಿ ದೇವರ ಸನ್ನಿಧಿಯಲ್ಲಿ ಸೇರಿದ್ದೇವೆ,” ಎಂದನು.

ಆಗ ಪೇತ್ರನು ಹೀಗೆಂದು ಉಪದೇಶ ಮಾಡಿದನು: “ದೇವರು ಪಕ್ಷಪಾತಿಯಲ್ಲ. ವಿಷಯ ನನಗೆ ಮನದಟ್ಟಾಗಿದೆ. ದೇವರಿಗೆ ಭಯಪಟ್ಟು ಸತ್ಪುರುಷನಾಗಿ ಬಾಳುವವನು ಯಾವ ಜನಾಂಗದವನೇ ಆಗಿರಲಿ, ಅವನು ಅವರ ಮೆಚ್ಚುಗೆಗೆ ಪಾತ್ರನಾಗುತ್ತಾನೆ.

-ಪ್ರಭುವಿನ ವಾಕ್ಯ

ಎರಡನೇ ವಾಚನ  : ಹಿಬ್ರಿಯರಿಗೆ 1:2-3 


ಆದರೆ, ಇತ್ತೀಚಿನ ಅಂತಿಮ ದಿನಗಳಲ್ಲಿ ಅವರು ತಮ್ಮ ಪುತ್ರನ ಮುಖೇನ ನಮ್ಮೊಡನೆ ಮಾತನಾಡಿದ್ದಾರೆ. ದೇವರು ಇಡೀ ವಿಶ್ವವನ್ನು ಉಂಟುಮಾಡಿದ್ದು ಇವರ ಮುಖಾಂತರವೇ; ಸಮಸ್ತಕ್ಕೂ ಬಾಧ್ಯನನ್ನಾಗಿ ನೇಮಿಸಿರುವುದು ಇವರನ್ನೇ. ಇವರೇ ದೇವರ ಮಹಿಮೆಯ ತೇಜಸ್ಸು; ಇವರೇ ದೈವತ್ವದ ಪಡಿಯಚ್ಚು; ತಮ್ಮ ಶಕ್ತಿಯುತ ವಾಕ್ಯದಿಂದ ಇವರೇ ಸಮಸ್ತಕ್ಕೂ ಆಧಾರ; ನಮ್ಮ ಪಾಪಗಳನ್ನು ತೊಡೆದುಹಾಕಿ, ಸ್ವರ್ಗದಲ್ಲಿ ಮಹೋನ್ನತ ದೇವರ ಬಲಪಾರ್ಶ್ವದಲ್ಲಿ ಆಸೀನರಾಗಿರುವವರೂ ಇವರೇ.

-ಪ್ರಭುವಿನ ವಾಕ್ಯ

ಶುಭಸಂದೇಶ: ಯೊವಾನ್ನ20:24-29

ಹನ್ನೆರಡು ಮಂದಿಯಲ್ಲಿ ಒಬ್ಬನಾದ ದಿದುಮ ಎಂಬ ತೋಮನು, ಯೇಸು ಸ್ವಾಮಿ ಬಂದಾಗ ಶಿಷ್ಯರೊಡನೆ ಇರಲಿಲ್ಲ. ಉಳಿದ ಶಿಷ್ಯರು, “ನಾವು ಪ್ರಭುವನ್ನು ನೋಡಿದೆವು,” ಎಂದು ಹೇಳಿದರು. ಅದಕ್ಕೆ ಅವನು, “ಅವರ ಕೈಗಳಲ್ಲಿ ಮೊಳೆಗಳಿಂದಾದ ಗಾಯದ ಕಲೆಯನ್ನು ನಾನು ನೋಡಬೇಕು. ಮೊಳೆಗಳು ಜಡಿದಿದ್ದ ಜಾಗದಲ್ಲಿ ನನ್ನ ಬೆರಳನ್ನಿಡಬೇಕು, ಅವರ ಪಕ್ಕೆಯಲ್ಲಿ ನನ್ನ ಕೈಯನ್ನು ಇಟ್ಟು ನೋಡಬೇಕು. ಆ ಹೊರತು ನಾನು ನಂಬುವುದೇ ಇಲ್ಲ,” ಎಂದುಬಿಟ್ಟನು.

ಎಂಟು ದಿನಗಳು ಕಳೆದವು. ಶಿಷ್ಯರು ಪುನಃ ಒಳಗೆ ಒಟ್ಟುಗೂಡಿದ್ದರು. ತೋಮನೂ ಅವರೊಡನೆ ಇದ್ದನು. ಬಾಗಿಲುಗಳು ಮುಚ್ಚಿದ್ದರೂ ಯೇಸು ಬಂದು ಅವರ ನಡುವೆ ನಿಂತು, “ನಿಮಗೆ ಶಾಂತಿ” ಎಂದರು. ಆಮೇಲೆ ತೋಮನಿಗೆ, “ಇಗೋ ನೋಡು, ನನ್ನ ಕೈಗಳು; ನಿನ್ನ ಬೆರಳನ್ನು ತಂದು ಇಲ್ಲಿಡು. ನಿನ್ನ ಕೈಯನ್ನು ಚಾಚಿ ನನ್ನ ಪಕ್ಕೆಯಲ್ಲಿಡು. ವಿಶ್ವಾಸರಹಿತನಾಗಿರಬೇಡ, ವಿಶ್ವಾಸಿಸು,” ಎಂದು ಹೇಳಿದರು. ಆಗ ತೋಮನು, “ನನ್ನ ಪ್ರಭುವೇ, ನನ್ನ ದೇವರೇ,” ಎಂದನು. ಯೇಸು ಅವನಿಗೆ, “ನನ್ನನ್ನು ಕಂಡುದರಿಂದ ತಾನೆ ನಿನಗೆ ವಿಶ್ವಾಸ ಹುಟ್ಟಿತು? ಕಾಣದೆ ವಿಶ್ವಾಸಿಸುವವರು ಧನ್ಯರು,” ಎಂದು ಹೇಳಿದರು.

1 comment:

  1. Praise the lord brother please send previous gospel readings.

    ReplyDelete