ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

08.08.23

ಮೊದಲನೆಯ ವಾಚನ: ಸಂಖ್ಯಾಕಾಂಡ12:1-13

ಮೋಶೆ ಕೂಷ್ ನಾಡಿನ ಮಹಿಳೆಯೊಬ್ಬಳನ್ನು ಮದುವೆ ಮಾಡಿಕೊಂಡಿದ್ದನು. ಈ ಕಾರಣ ಮಿರ್ಯಾಮಳು ಮತ್ತು ಆರೋನನು ಅವನಿಗೆ ವಿರುದ್ಧ ಮಾತಾಡತೊಡಗಿದರು. ಸರ್ವೇಶ್ವರ ಮೋಶೆಯ ಮುಖಾಂತರ ಮಾತ್ರ ಮಾತಾಡಿದ್ದಾರೋ? ನಮ್ಮ ಮುಖಾಂತರ ಮಾತಾಡಲಿಲ್ಲವೋ? " ಎಂದು ಹೇಳತೊಡಗಿದರು. ಅವರು ಆಡಿದ ಮಾತು ಸರ್ವೇಶ್ವರನಿಗೆ ಮುಟ್ಟಿತು. ಮೋಶೆ ಸಾಧು ಮನುಷ್ಯ. ನರಮಾನವರಲ್ಲೆಲ್ಲಾ ಅತ್ಯಂತ ಸಾಧು. ಹೀಗಿರಲಾಗಿ ಸರ್ವೇಶ್ವರ ತಟ್ಟನೆ ಮೋಶೆ, ಆರೋನ್ ಹಾಗೂ ಮಿರ್ಯಾಮರಿಗೆ, " ನೀವು ಮೂವರು ದೇವದರ್ಶನದ ಗುಡಾರಕ್ಕೆ ಬರಬೇಕು, " ಎಂದು ಆಜ್ಞಾಪಿಸಿದರು. ಅವರು ಬಂದಾಗ ಸರ್ವೇಶ್ವರ ಮೇಘಸ್ತಂಭದಲ್ಲಿ ಇಳಿದು ಬಂದು ದೇವದರ್ಶನದ ಗುಡಾರದ ಬಾಗಿಲಲ್ಲಿ ನಿಂತು ಆರೋನ್ ಹಾಗೂ ಮಿರ್ಯಾಮಳನ್ನು ಹತ್ತಿರಕ್ಕೆ ಕರೆದರು. ಅವರು ಸಮೀಪಿಸಿದಾಗ, " ನನ್ನ ಮಾತಿಗೆ ಕಿವಿಗೊಡಿ ನಿಮ್ಮಲ್ಲಿ ಪ್ರವಾದಿಯಿದ್ದರೆ ಅವನಿಗೆ ಕಾಣಿಸಿಕೊಳ್ಳುವೆ ಜ್ಞಾನದೃಷ್ಟಿಯಲ್ಲಿ, ಇಲ್ಲವೆ ಅವನ ಸಂಗಡ ಮಾತಾಡುವೆ ಸ್ವಪ್ನದಲ್ಲಿ. ನನ್ನ ದಾಸನಾದ ಮೋಶೆ ಅಂಥವನಲ್ಲ, ಅವನೇ ನಂಬಿಗಸ್ತ ನನ್ನ ಮನೆಯಲ್ಲೆಲ್ಲಾ. ನಾನವನ ಸಂಗಡ ಮಾತಾಡುವುದು ನಿಗೂಢವಾಗಿ ಅಲ್ಲ. ಮುಖಾಮುಖಿಯಾಗಿ, ಸ್ಪಷ್ಟವಾಗಿ, ಒಗಟಾಗಿಯಲ್ಲ. ಸರ್ವೇಶ್ವರನ ಸ್ವರೂಪವನ್ನೇ ಕಂಡವನಾತ! ಇಂತಿರಳು ನನ್ನ ದಾಸ ಮೋಶೆಗೆ ವಿರುದ್ಧ ಮಾತನಾಡಲು ನೀವೇಕೆ ಭಯಪಡಲಿಲ್ಲಾ? " ಎಂದು ಹೇಳಿ ಕೋಪದಿಂದ ಹೊರಟುಹೋದರು. ಆ ಮೇಘವು ದೇವದರ್ಶನದ ಗುಡಾರದಿಂದ ಅದೃಶ್ಯವಾದದ್ದೇ ಇಗೋ, ಮಿರ್ಯಾಮಳ ಚರ್ಮ ಹಿಮದಂತೆ ಬಿಳಿಚಿಕೊಂಡಿತ್ತು. ಆಕೆಗೆ ತೊನ್ನು ಹತ್ತಿತ್ತು. ಆರೋನನು ಆಕೆಯನ್ನು ನೋಡಿ ಆಕೆಗೆ ತೊನ್ನು ಪ್ರಾಪ್ತವಾಯಿತೆಂದು ತಿಳಿದುಕೊಂಡೆವು. ಆಗ ಆರೋನನು ಮೋಶೆಗೆ, " ಅಯ್ಯಾ, ನಾವು ಮುರ್ಖರಾಗಿ ನಡೆದು ಪಾಪ ಕಟ್ಟಿಕೊಂಡೆವು. ಈ ಪಾಪದ ಫಲವನ್ನು ನಾವು ಅನುಭವಿಸುವಂತೆ ಮಾಡಬೇಡ, ಇದು ನನ್ನ ವಿನಂತಿ. ಅರ್ಧ ಮಾಂಸ ಕೊಳೆತುಹೋಗಿ ಹುಟ್ಟಿದ ಶಿಶುವಿನ ಶವದಂತೆ ಈಕೆ ಆಗುವುದು ಬೇಡ, " ಎಂದು ಕೇಳಿಕೊಂಡನು. ಆಗ ಮೋಶೆ ಸರ್ವೇಶ್ವರನಿಗೆ " ಹೇ ದೇವಾ, ಆಕೆಯನ್ನು ಗುಣಪಡಿಬೇಕೆಂದು ಬೇಡಿಕೊಳ್ಳುತ್ತೇನೆ, " ಎಂದು ಮೊರೆಯಿಟ್ಟನು.

ಕೀರ್ತನೆ 51:1-5, 10-11,
ಶ್ಲೋಕ: ಕೃಪಾಳುದೇವಾ, ಅಳಿಸೆನ್ನ ದೋಷವನು.

ಕೃಪಾಳುದೇವಾ, ಕರುಣೆಸೆನ್ನನು
ಕರುಣಾನಿಧಿ, ಅಳಿಸೆನ್ನ ದೋಷವನು
ತೊಳೆ ಪೂರ್ತಿಯಾಗಿ ಪಾಪದಿಂದೆನ್ನನು
ದೋಷ ಪರಿಹರಿಸಿ ಶುದ್ದಗೊಳಿಸೆನ್ನನು

ಒಪ್ಪಿಕೊಂಡೆನಿದೊ, ನಾನೇ ಅಪರಾಧಿ
ಕಟ್ಟಿದಂತಿದೆ ಕಣ್ಗೆ ಪಾಪ ದಿನವಿಡಿ
ಹೌದು ದೇವಾ, ನಿನಗೆ ದ್ರೋಹವೆಸಗಿದೆ
ನಿನ್ನ ಕಣ್ಗೆ ಕೆಟ್ಟದುದನೆ ಮಾಡಿದೆ

ನಿನ್ನ ನಿರ್ಣಯವು ನ್ಯಾಯಯುತ
ನೀ ನೀಡುವ ತೀರ್ಪು ನಿರ್ಲಿಪ್ತ
ನಾ ಜನಿಸಿದೆ ಪಾಪಪಂಗದಲೇ
ದ್ರೋಹಿ ನಾ ಮಾತೃಗರ್ಭದಿಂದಲೇ

ಶುದ್ದ ಹೃದಯವನು ದೇವಾ, ನಿರ್ಮಿಸು
ಆಂತರಂಗವನು ಚೇತನಗೊಳಿಸು
ತಳ್ಳಬೇಡೆನ್ನನು ದೇವಾ, ನಿನ್ನ ಸನ್ನಿಧಿಯಿಂದ
ದೂಡಬೇಡ ನಿನ್ನ ಪವಿತ್ರಾತ್ಮನನು ನನ್ನಿಂದ

ಶುಭಸಂದೇಶ: ಮತ್ತಾಯ 14:22-36

ಆ ಕಾಲದಲ್ಲಿ ಯೇಸು ತಾವು ಜನರ ಗುಂಪನ್ನು ಕಳಿಸಿಬಿಡುವಷ್ಟರಲ್ಲಿ, ಶಿಷ್ಯರು ದೋಣಿ ಹತ್ತಿ ತಮಗಿಂತ ಮುಂದಾಗಿ ಸರೋವರದ ಆಚೆಯ ದಡಕ್ಕೆ ಹೋಗಬೇಕೆಂದು ಆಜ್ಞಾಪಿಸಿದರು. ಜನರನ್ನು ಬೀಳ್ಕೊಟ್ಟ ಬಳಿಕ ಪ್ರಾರ್ಥನೆಮಾಡಲು ಯೇಸು ಒಬ್ಬರೇ ಬೆಟ್ಟಕ್ಕೆ ಹೋದರು. ಕತ್ತಲೆ ಕವಿದಾಗ ಅವರು ಅಲ್ಲಿ ಒಬ್ಬಂಟಿಗರಾಗಿದ್ದರು. ಅಷ್ಟರಲ್ಲಿ ದೋಣಿ ದಡದಿಂದ ಬಹುದೂರ ಸಾಗಿತ್ತು. ಎದುರುಗಾಳಿ ಬೀಸಿ ಅದು ಅಲೆಗಳ ಬಡಿತಕ್ಕೆ ಸಿಕ್ಕಿಕೊಂಡಿತ್ತು. ಆಗ ರಾತ್ರಿಯ ಕಡೇ ಜಾವದ ಸಮಯ. ಯೇಸು ಸರೋವರದ ಮೇಲೆ ನಡೆದುಕೊಂಡೇ ಶಿಷ್ಯರ ಬಳಿಗೆ ಬಂದರು. ಹೀಗೆ ಸರೋವರದ ಮೇಲೆ ನಡೆದು ಬರುತ್ತಿದ್ದ ಯೇಸುವನ್ನು ನೋಡಿದಾಗ ಶಿಷ್ಯರು ಭಯಭ್ರಾಂತರಾದರು. ದಿಗಿಲುಗೊಂಡು, " ಭೂತ, ಭೂತ ! " ಎಂದು ಚೀರಿದರು. ತಕ್ಷಣವೇ ಯೇಸು, " ಭಯಪಡಬೇಡಿ, ನಾನೇ. ಬೇರೆ ಯಾರೂ ಅಲ್ಲ, ಧೈರ್ಯದಿಂದಿರಿ, " ಎಂದು ಅವರೊಡನೆ ಮಾತನಾಡಿದರು. ಆಗ ಪೇತ್ರನು, " ಸ್ವಾಮಿ, ನೀವೇ ಆದರೆ ನಾನೂ ನೀರಿನ ಮೇಲೆ ನಡೆದು ನಿಮ್ಮ ಬಳಿಗೆ ಬರುವಂತೆ ಆಜ್ಞಾಪಿಸಿ, " ಎಂದನು. ಯೇಸು, " ಬಾ" ಎಂದು ಕರೆಯಲು ಪೇತ್ರನು ದೋಣಿಯನ್ನು ಬಿಟ್ಟು ನೀರಿನ ಮೇಲೆ ನಡೆಯುತ್ತಾ ಯೇಸುವಿನತ್ತ ಬಂದನು. ಆದರೆ ಬಲವಾದ ಗಾಳಿ ಬೀಸುತ್ತಿರುವುದನ್ನು ಕಂಡು ಹೆದರಿದನು. ಹಾಗೆಯೇ ಮುಳುಗಿ ಹೋಗಲಾರಂಭಿಸಿದನು. ಆಗ, " ಸ್ವಾಮಿ, ಕಾಪಾಡಿ, ಕಾಪಾಡಿ, " ಎಂದು ಕೂಗಿಕೊಂಡನು. ಆ ಕ್ಷಣವೇ ಯೇಸು ಕೈಚಾಚಿ ಅವನನ್ನು ಹಿಡಿದುಕೊಂಡು, " ಅಲ್ಪ ವಿಶ್ವಾಸಿಯೇ, ಏಕೆ ಸಂದೇಹ ಪಟ್ಟೆ ? " ಎಂದರು. ಅನಂತರ ಅವರಿಬ್ಬರೂ ದೋಣಿಯನ್ನು ಹತ್ತಿದರು. ಕೂಡಲೇ ಗಾಳಿ ನಿಂತುಹೋಯಿತು. ದೋಣಿಯಲ್ಲಿದ್ದವರು " ನೀವು ನಿಜವಾಗಿಯೂ ದೇವರ ಪುತ್ರ! " ಎಂದು ಹೇಳಿ ಯೇಸುವನ್ನು ಆರಾಧಿಸಿದರು. ಅವರೆಲ್ಲರೂ ಸರೋವರವನ್ನು ದಾಟಿ ಗೆನೆಸರೇತ್ ಊರಿನ ದಡ ಸೇರಿದರು. ಈ ಊರಿನವರು ಯೇಸುವನ್ನು ಗುರುತು ಹಚ್ಚಿದ್ದೇ ತಡ ಸುತ್ತಮುತ್ತಲಿನ ಊರುಗಳಿಗೆಲ್ಲಾ ಹೇಳಿಕಳುಹಿಸಿದರು. ರೋಗರುಜಿನಗಳಿಂದ ನರಳುತ್ತಿದ್ದವರನ್ನು ಕರೆದುಕೊಂಡು ಬಂದರು. ಇವರು, " ನಿಮ್ಮ ಉಡುಪಿನ ಅಂಚನ್ನಾದರೂ ಮುಟ್ಟಲು ಅಪ್ಪಣೆಯಾದರೆ ಸಾಕು, " ಎಂದು ಯೇಸುವನ್ನು ಬೇಡಿಕೊಂಡರು. ಹಾಗೆ ಮುಟ್ಟಿದವರೆಲ್ಲರೂ ಗುಣಹೊಂದಿದರು.

No comments:

Post a Comment