ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

27.07.23 - ನೀವಾದರೋ ಭಾಗ್ಯವಂತರು. ನಿಮ್ಮ ಕಣ್ಣುಗಳು ಕಾಣುತ್ತವೆ, ಕಿವಿಗಳು ಕೇಳುತ್ತವೆ

ಮೊದಲನೇ ವಾಚನ: ವಿಮೋಚನಕಾಂಡ 19:1-2,9-11,16-20


ಇಸ್ರಯೇಲರು ಈಜಿಪ್ಟ್ ದೇಶದಿಂದ ಹೊರಟ ಮೂರನೆಯ ತಿಂಗಳಿನ ಅದೇ ದಿವಸದಲ್ಲಿ ಸೀನಾಯಿ ಮರುಭೂಮಿಗೆ ಬಂದರು. ಅವರು ರೆಫೀದೀಮನ್ನು ಬಿಟ್ಟು ಆ ಮರುಭೂಮಿಗೆ ಬಂದು ಅಲ್ಲಿನ ಬೆಟ್ಟಕ್ಕೆ ಎದುರಾಗಿ ಇಳಿದುಕೊಂಡರು. ಸರ್ವೇಶ್ವರ ಮೋಶೆಗೆ, "ಇಗೋ, ನಾನು ನಿನ್ನ ಸಂಗಡ ಮಾತನಾಡುವುದನ್ನು ಜನರು ಕೇಳುವಂತೆಯೂ ಎಂದಿಗೂ ನಿನ್ನನ್ನು ನಂಬುವಂತೆಯೂ ನಾನು ಕಾರ್ಮುಗಿಲಲ್ಲಿ ನಿನ್ನ ಬಳಿಗೆ ಬರುತ್ತೇನೆ, "ಎಂದು ಹೇಳಿದರು. ಮೋಶೆ ಜನರ ಮಾತುಗಳನ್ನು ಸರ್ವೇಶ್ವರನಿಗೆ ಅರಿಕೆಮಾಡಲು ಸರ್ವೇಶ್ವರ ಹೀಗೆಂದರು: " ನೀನು ಜನರ ಬಳಿಗೆ ಹೋಗಿ ಇಂದು ಮತ್ತು ನಾಳೆ ಅವರನ್ನು ಪರಿಶುದ್ದಗೊಳಿಸು. ಅವರು ತಮ್ಮ ಬಟ್ಟೆಗಳನ್ನು ಮಡಿಮಾಡಿಕೊಳ್ಳಲಿ. ಮೂರನೆಯ ದಿನ ಸಿದ್ಧರಾಗಿರಲಿ. ಏಕೆಂದರೆ ಆ ಜನರಿಗೂ ಪ್ರತ್ಯಕ್ಷನಾಗಲು ಸೀನಾಯಿ ಬೆಟ್ಟದ ಮೇಲೆ ಇಳಿದು ಬರುವೆನು. " ಮೂರನೆಯ ದಿನ ಸೂರ್ಯೋದಯ ಆಗುವಾಗ ಆ ಬೆಟ್ಟದ ಮೇಲೆ ಗುಡುಗು, ಮಿಂಚು, ಕಾರ್ಮುಗಿಲು ಹಾಗೂ ತುತೂರಿಯ ಮಹಾದ್ವನಿ ಉಂಟಾಯಿತು. ಪಾಳೆಯದಲ್ಲಿದ್ದ ಜನರೆಲ್ಲರು ನಡುಗಿದರು. ದೇವದರ್ಶನಕ್ಕಾಗಿ ಮೋಶೆ ಜನರನ್ನು ಪಾಳೆಯದ ಹೊರಕ್ಕೆ ಬರಮಾಡಿದನು. ಅವರು ಬಂದು ಬೆಟ್ಟದ ಬುಡದಲ್ಲಿ ನಿಂತರು. ಸೀನಾಯಿ ಬೆಟ್ಟವೆಲ್ಲ ಹೊಗೆಯಿಂದ ಆವರಿಸಿಕೊಂಡಿತ್ತು. ಏಕೆಂದರೆ ಸರ್ವೇಶ್ವರಸ್ವಾಮಿ ಬೆಂಕಿಯ ರೂಪದಲ್ಲಿ ಆ ಬೆಟ್ಟದ ಮೇಲೆ ಇಳಿದು ಬಂದಿದ್ದರು. ಆ ಹೊಗೆ ಆವಿಗೆಯ ಹೊಗೆಯಂತೆ ಏರಿತು. ಅದೂ ಅಲ್ಲದೆ ಬೆಟ್ಟವೆಲ್ಲ ಬಹಳವಾಗಿ ಕಂಪಿಸಿತು. ತುತೂರಿಯ ಧ್ವನಿ ಹೆಚ್ಚು ಹೆಚ್ಚಾಗುತ್ತಾ ಬಂದಿತು. ಮೋಶೆ ಮಾತಾಡಿದಾಗ ದೇವರು ಮೇಘಗರ್ಜನೆಯಿಂದ ಉತ್ತರಕೊಟ್ಟರು. ಸರ್ವೇಶ್ವರ ಸೀನಾಯಿ ಬೆಟ್ಟದ ಶಿಖರಕ್ಕೆ ಇಳಿದು ಬಂದರು. ಅವರು, "ಬೆಟ್ಟದ ತುದಿಗೆ ಬಾ, " ಎಂದು ಮೋಶೆಯನ್ನು ಕರೆಯಲು ಅವನು ಬೆಟ್ಟವನ್ನೇರಿದನು.

ಕೀರ್ತನೆ
ಅಜರ್ಯನ ಗೀತೆ 1:29,30,31,32-33,34, V.29
ಶ್ಲೋಕ: ನೀವು ಪರಮಪೂಜ್ಯರು, ಎಂದೆಂದಿಗೂ ಮಹೋನ್ನತರು |

ನಮ್ಮ ಪೂರ್ವಜರ ದೇವರಾದ ಸರ್ವೇಶ್ವರಾ, ನೀವು ಪರಮಪೂಜ್ಯರು, ಎಂದೆಂದಿಗೂ ಮಹೋನ್ನತರು.
ಮಹಿಮಾಯುತವಾದ ನಿಮ್ಮ ನಾಮ ಸ್ತುತ್ಯಾರ್ಹವಾದುದು,
ಪರಮಪೂಜ್ಯವಾದುದು ಎಂದೆಂದಿಗೂ ಮಹಾ ಘನತರವಾದುದು .

ಪರಮ ವೈಭವದಿಂದ ಕೂಡಿದ ಮಂದಿರದಲಿ ನೀವು ಸ್ತುತಿಸ್ತೋತ್ರಕ್ಕೆ ಪಾತ್ರರು;
ನೀವು ಪರಮಪೂಜ್ಯರು, ಎಂದೆಂದಿಗೂ ಮಹೋನ್ನತರು||

ಸಾಗರಾದಿಗಳನು ಸಮೀಕ್ಷಿಸುವ ನಿಮಗೆ ಸ್ತೋತ್ರ
ನಿಮ್ಮ ಸಾಮ್ರಾಜ್ಯದ ಸಿಂಹಾಸನದ ಮೇಲೆ ಆಸೀನರಾಗಿರುವ ನಿಮಗೆ ಸ್ತೋತ್ರ
ನೀವು ಪರಮಪೂಜ್ಯರು, ಎಂದೆಂದಿಗೂ ಮಹೋನ್ನತರು||

ಗಗನಮಂಡಲದಲ್ಲಿ ಸ್ತೋತ್ರಪಾತ್ರರು, ನೀವು ಸ್ತುತ್ಯರು
ಎಂದೆಂದಿಗೂ ಮಹಿಮಾನ್ವಿತರು||

ಘೋಷಣೆ ಕೀರ್ತನೆ 145:14
ಅಲ್ಲೆಲೂಯ, ಅಲ್ಲೆಲೂಯ!

ಜೆರುಸಲೇಮ್, ಕೀರ್ತಿಸು ಪ್ರಭುವಿನ ನಾಮವನು | ಕಳುಹಿಸುವನು ಧರೆಗೆ ತನ್ನ ಆಣತಿಯನು ||
ಅಲ್ಲೆಲೂಯ!

ಶುಭಸಂದೇಶ: ಮತ್ತಾಯ 13:10-17


ಆ ಕಾಲದಲ್ಲಿ ಶಿಷ್ಯರು ಯೇಸುವಿನ ಬಳಿಗೆ ಬಂದು, "ನೀವು ಜನರೊಡನೆ ಮಾತನಾಡುವಾಗ ಸಾಮತಿಗಳನ್ನು ಉಪಯೋಗಿಸುತ್ತೀರಿ, ಏಕೆ? "ಎಂದು ಕೇಳಿದರು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, "ಸ್ವರ್ಗಸಾಮ್ರಾಜ್ಯದ ರಹಸ್ಯಗಳನ್ನು ಅರಿತುಕೊಳ್ಳುವ ಸದವಕಾಶ ಲಭಿಸಿರುವುದು ನಿಮಗೆ, ಅವರಿಗಲ್ಲ. ಉಳ್ಳವನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ, ಅವನು ಸಮೃದ್ದನಾಗುತ್ತಾನೆ. ಇಲ್ಲದವನಿಂದ ಇರುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ. ಅವರೊಡನೆ ಸಾಮತಿ ರೂಪದಲ್ಲಿ ಮಾತನಾಡುವುದಕ್ಕೆ ಕಾರಣ ಇದು: ಅವರು ಕಣ್ಣಾರೆ ನೋಡಿದರೂ ಕಾಣುವುದಿಲ್ಲ ; ಕಿವಿಯಾರೆ ಕೇಳಿದರೂ ಕಿವಿಗೊಡುವುದಿಲ್ಲ ; ಗ್ರಹಿಸುವುದೂ ಇಲ್ಲ. ಪ್ರವಾದಿ ಯೆಶಾಯನ ಈ ಪ್ರವಚನ ಅವರಲ್ಲಿ ಈಡೇರೀತ್ತದೆ: 
'ಕೇಳಿ ಕೇಳಿಯೂ ಗ್ರಹಿಸರು; ನೋಡಿ ನೋಡಿಯೂ ಕಾಣರು.  ಈ ಜನರ ಹೃದಯ ಕಲ್ಲಾಗಿದೆ, ಕಿವಿ ಮಂದವಾಗಿದೆ, ಕಣ್ಣು ಮಬ್ಬಾಗಿದೆ. ಇಲ್ಲದಿದ್ದರೆ ಇವರ ಕಣ್ಣು ಕಾಣುತ್ತಾ, ಕಿವಿ ಕೇಳುತ್ತಾ ಹೃದಯ ಗ್ರಹಿಸುತ್ತಾ ನನ್ನತ್ತ ತಿರುಗುತ್ತಿದ್ದರು; ದೇವರಾದ ನಾನಿವರನು ಸ್ವಸ್ಥಪಡಿಸುತ್ತಿದ್ದೆನು.' ನೀವಾದರೋ ಭಾಗ್ಯವಂತರು. ನಿಮ್ಮ ಕಣ್ಣುಗಳು ಕಾಣುತ್ತವೆ, ಕಿವಿಗಳು ಕೇಳುತ್ತವೆ. ಎಷ್ಟೋ ಪ್ರವಾದಿಗಳು ಹಾಗೂ ಸತ್ಪುರುಷರು ನೀವು ನೋಡುವುದನ್ನು ನೋಡುವುದಕ್ಕೂ, ಕೇಳುವುದನ್ನು ಕೇಳುವುದಕ್ಕೂ ಅಪೇಕ್ಷಿಸಿದರು. ಆದರೆ ಅವರು ನೋಡಲೂ ಇಲ್ಲ, ಕೇಳಲೂ ಇಲ್ಲ ಎಂಬುದು ನಿಮಗೆ ತಿಳಿದಿರಲಿ, " ಎಂದರು.

No comments:

Post a Comment