ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

11.07.23 - "ಬೆಳೆಯೇನೋ ಹೇರಳ, ಕೊಯಿಲುಗಾರರೋ ವಿರಳ"

ಮೊದಲನೆಯ ವಾಚನ: ಆದಿಕಾಂಡ 32:22-32


ಆ ರಾತ್ರಿ ಯಕೋಬನು ತನ್ನ ಇಬ್ಬರು ಹೆಂಡತಿಯರನ್ನೂ ಇಬ್ಬರು ದಾಸಿಯರನ್ನೂ ಹನ್ನೊಂದು ಮಂದಿ ಮಕ್ಕಳನ್ನೂ ಕರೆದುಕೊಂಡು ' ಯಬ್ಬೋಕ್ ' ಹೊಳೆಯನ್ನು ದಾಟುವ ಸ್ಥಳದಲ್ಲಿ ದಾಟಿದನು. ಅವರನ್ನೂ ತನ್ನ ಆಸ್ತಿಪಾಸ್ತಿಯನ್ನೂ ದಾಟಿಸಿದ ಮೇಲೆ ಯಕೋಬನು ಒಂಟಿಯಾಗಿ ಹಿಂದೆ ನಿಂತಿದ್ದನು. ಯಾರೋ ಒಬ್ಬ ಪುರುಷ ಬೆಳಗಾಗುವ ತನಕ ಅವನ ಸಂಗಡ ಹೋರಾಡಿದನು. ಆ ಪುರುಷ ತಾನು ಗೆಲ್ಲದೆ ಇರುವುದನ್ನು ಕಂಡು ಯಕೋಬನ ತೊಡೆಯ ಕೀಲನ್ನು ಮುಟ್ಟಿದ್ದರಿಂದ ಹೋರಾಡುತ್ತಿರುವಾಗಲೆ ಯಕೋಬನ ತೊಡೆಯ ಕೀಲು ತಪ್ಪಿತು. ಆ ಪುರುಷ, " ನನ್ನನ್ನು ಹೋಗಬಿಡು, ಬೆಳಗಾಗುತ್ತಿದೆ, " ಎನ್ನಲು ಯಕೋಬನು, " ನೀವು ನನ್ನನ್ನು ಆಶೀರ್ವದಿಸದ ಹೊರತು, ನಿಮ್ಮನ್ನು ಹೋಗಬಿಡುವುದಿಲ್ಲ, " ಎಂದನು. ಆ ಪುರುಷ, " ನಿನ್ನ ಹೆಸರೇನು? " ಎಂದು ಕೇಳಿದ್ದಕ್ಕೆ ಯಕೋಬನು, " ನನ್ನ ಹೆಸರು ಯಕೋಬ " ಎಂದನು. ಆವನು ಯಕೋಬನಿಗೆ, " ಇನ್ನು ಮೇಲೆ ನೀನು ಯಕೋಬ ಎನಿಸಿಕೊಳ್ಳುವುದಿಲ್ಲ, ದೇವರ ಸಂಗಡ ಹಾಗು ಮನುಷ್ಯರ ಸಂಗಡ ಹೋರಾಡಿ ಗೆದ್ದವನಾದ್ದರಿಂದ ನಿನಗೆ ' ಇಸ್ರಯೇಲ್ ಎಂದು ಹೆಸರುಂಟಾಗುವುದು, " ಎಂದು ಹೇಳಿದನು. ಯಕೋಬನು, " ನಿಮ್ಮ ಹೆಸರನ್ನು ದಯವಿಟ್ಟು ನನಗೆ ತಿಳಿಸಬೇಕು, " ಎಂದಾಗ ಆ ಪುರುಷ, " ನನ್ನ ಹೆಸರನ್ನು ವಿಚಾರಿಸುವುದೇಕೆ? " ಎಂದು ಹೇಳಿ ಅಲ್ಲೇ ಅವನನ್ನು ಆಶೀರ್ವದಿಸಿದನು. ಯಕೋಬನು, " ನಾನು ದೇವರನ್ನು ಮುಖಾಮುಖಿಯಾಗಿ ಕಂಡಿದ್ದರೂ ಪ್ರಾಣಸಹಿತ ಉಳಿದಿದ್ದೇನಲ್ಲಾ ! " ಎಂದುಕೊಂಡು ಆ ಸ್ಥಳಕ್ಕೆ ' ಪೆನೀಯೇಲ್ ' ಎಂದು ಹೆಸರಿಟ್ಟನು. ಅವನು ಪೆನೂವೇಲನ್ನು ದಾಟುತ್ತಿರುವಾಗ ಸೂರ್ಯೋದಯವಾಯಿತು, ಕೀಲುಕಳಚಿದ ತೊಡೆಯ ನಿಮಿತ್ತ ಅವನು ಕುಂಟಿಕೊಂಡೇ ನಡೆದನು. ಆ ಪುರುಷನು ಯಕೋಬನ ತೊಡೆಯ ಕೀಲನ್ನು ಮುಟ್ಟಿದ್ದರಿಂದ ಇಸ್ರಾಯೇಲರು ಇಂದಿನವರೆಗೂ ತೊಡೆಯ ಕೀಲಿನ ಮೇಲಿರುವ ಮಾಂಸವನ್ನು ತಿನ್ನುವುದಿಲ್ಲ.

ಕೀರ್ತನೆ 17:1, 2-3, 6-7, 8, 15
ಶ್ಲೋಕ: ಸತ್ಯಸಂಧನಾದ ನಾನು ಸೇರುವೆ ನಿನ್ನ ಸಾನಿಧ್ಯವನು.

ಲಕ್ಷ್ಯವಿಡು, ಓ ಪ್ರಭೂ, ಎನ್ನ ನ್ಯಾಯವಾದ ಮೊರೆಗೆ
ಕಿವಿಗೊಡು, ನಿಷ್ಕಪಟ ಬಾಯಿಂದ ಬಂದ ಪ್ರಾರ್ಥನೆಗೆ

ನ್ಯಾಯತೀರ್ಪು ಬರಲಿ ಎನಗೆ, ನಿನ್ನಿಂದಲೆ
ನೀತಿಗನುಸಾರ ನೋಡುವಾತ ನೀನಲ್ಲವೆ?
ಹೃದಯ ವೀಕ್ಷಿಸು, ಇರುಳೆಲ್ಲ ವಿಚಾರಿಸು, ಅಗ್ನಿಪರೀಕ್ಷೆ ಮಾಡಿಸು
ನಾ ದೋಷರಹಿತ, ಮಾತಲಿ ತಪ್ಪದವ, ಎಂದಾಗ ತೀರ್ಮಾಣಿಸು

ಸದುತ್ತರ ಪಾಲಿಪೆಯೆಂದು ನಂಬಿ ಬೇಡುವೆನಯ್ಯಾ
ಮೊರೆಯಿಡುವೆ ದೇವಾ, ಕಿವಿಗೊಟ್ಟು ಆಲಿಸಯ್ಯಾ
ಶರಣರನು ಶತ್ರುವಿನಿಂದ ಸಂರಕ್ಷಿಸುವಾತ ನೀನಯ್ಯಾ
ಭುಜಬಲವನು ಪ್ರಯೋಗಿಸಿ ಕಾಪಾಡುವಾತ ನೀನಯ್ಯಾ
ನಿನ್ನಚಲ ಪ್ರೀತಿಯನ್ನಚ್ಚರಿಯಿಂದ ತೋರ್ಪಡಿಸಯ್ಯಾ

ನಿನ್ನ ರೆಕ್ಕೆಗಳ ನೆರಳಲಿ ಎನ್ನ ಮರೆಸಿಡು
ಸತ್ಯಸಂಧನಾದ ನಾನೊ ಸೇರುವೆ ನಿನ್ನ ಸಾನಿಧ್ಯವನು
ಎಚ್ಚೆತ್ತು ನಿನ್ನ ಮುಖದರ್ಶನದಿಂದ ತೃಪ್ತನಾಗುವೆನು

ಶುಭಸಂದೇಶ : ಮತ್ತಾಯ 9:32-38
ಆ ಕಾಲದಲ್ಲಿ ಕುರುಡರು ಹೊರಟುಹೋಗುತ್ತಿದ್ದ ಹಾಗೆ, ದೆವ್ವ ಮೂಕನನ್ನು ಕೆಲವರು ಯೇಸುವಿನ ಬಳಿಗೆ ಕರತಂದರು. ದೆವ್ವ ಬಿಡಿಸಿದ ಮೇಲೆ ಆ ಮೂಕನಿಗೆ ಮಾತು ಬಂದಿತು. ಜನರೆಲ್ಲರೂ ಆಶ್ಚರ್ಯಚಕಿತರಾದರು. " ಇಂತಹ ಕಾರ್ಯವನ್ನು ನಾವು ಇಸ್ರಯೇಲಿನಲ್ಲಿ ಕಂಡದ್ದೇ ಇಲ್ಲ ! " ಎಂದುಕೊಂಡರು. ಆದರೆ ಫರಿಸಾಯರು, " ಇವನು ದೆವ್ವಗಳೊಡೆಯನ ಶಕ್ತಿಯಿಂದಲೇ ದೆವ್ವಗಳನ್ನು ಬಿಡಿಸುತ್ತಾನೆ, " ಎಂದರು. ಯೇಸು, ಊರುರುಗಳಲ್ಲೂ ಹಳ್ಳಿಹಳ್ಳಿಗಳಲ್ಲೂ ಸಂಚಾರ ಮಾಡುತ್ತಾ ಅಲ್ಲಿಯ ಪ್ರಾರ್ಥನಾಮಂದಿರಗಳಲ್ಲಿ ಬೋಧಿಸಿದರು. ಶ್ರೀಸಾಮ್ರಾಜ್ಯದ ಶುಭಸಂದೇಶವನ್ನು ಸಾರಿದರು. ಎಲ್ಲಾ ತರಹದ ರೋಗರುಜಿನಗಳನ್ನು ಗುಣಪಡಿಸಿದರು. ಆ ಜನಸಮೂಹವನ್ನು ಕಂಡಾಗ ಅವರ ಮನ ಕರಗಿತು. ಏಕೆಂದರೆ, ಕುರಬನಿಲ್ಲದ ಕುರಿಗಳಂತೆ ಅವರು ತೊಳಲಿದ್ದರು ಹಾಗೂ ಬಳಲಿದ್ದರು. ಆದುದರಿಂದ ಯೇಸು ತಮ್ಮ ಶಿಷ್ಯರಿಗೆ, " ಬೆಳೆಯೇನೋ ಹೇರಳ, ಕೊಯಿಲುಗಾರರೋ ವಿರಳ, ಈ ಕಾರಣ ತನ್ನ ಕೊಯಲಿಗೆ ಆಳುಗಳನ್ನು ಕಳುಹಿಸುವಂತೆ ಬೆಳೆಯ ಯಜಮಾನನನ್ನು ಪ್ರಾರ್ಥಿಸಿರಿ, " ಎಂದರು.

No comments:

Post a Comment