ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

12.07.23 - " 'ಸ್ವರ್ಗಸಾಮ್ರಾಜ್ಯವು ಸಮೀಪಿಸಿದೆ ' ಎಂದು ಬೋಧನೆ ಮಾಡಿರಿ"

ಮೊದಲನೆಯ ವಾಚನ: ಆದಿಕಾಂಡ 41:55-57, 42:5-7, 17-24


ಕ್ರಮೇಣ ಈಜಿಪ್ಟಿಗೂ ಬರ ಬಂದಾಗ ಪ್ರಜೆಗಳು ಆಹಾರಬೇಕೆಂದು ಪರೋಹನಿಗೆ ಮೊರೆಯಿಟ್ಟರು. ಆಗ ಅವನು ಅವರಿಗೆ, " ಹೋಗಿ, ಜೋಸೆಫನ ಬಳಿಗೆ, ಅವನು ಹೇಳಿದಂತೆ ಮಾಡಿ, " ಎಂದು ಉತ್ತರ ಕೊಟ್ಟನು. ಬರವು ದೇಶದಲ್ಲೆಲ್ಲ ಹರಡಿಕೊಂಡಾಗ ಜೋಸೆಫನು ಕಣಜಗಳನ್ನೆಲ್ಲ ತೆಗೆಸಿ, ಈಜಿಪ್ಟರಿಗೆ ಧಾನ್ಯವನ್ನು ಮಾರಿಸಿದನು. ಈಜಿಪ್ಟ್ ದೇಶದಲ್ಲಿ ಬರವು ಬಹು ಘೋರವಾಗಿತ್ತು. ಅಂತೆಯೇ ಲೋಕದಲ್ಲೆಲ್ಲಾ ಬರವು ಭಯಂಕರವಾಗಿತ್ತು, ಎಲ್ಲ ದೇಶದವರು ಜೋಸೆಫನಿಂದ ಧಾನ್ಯ ಕೊಂಡುಕೊಳ್ಳಲು ಈಜಿಪ್ಟಿಗೆ ಬರುತ್ತಿದ್ದರು. ಕಾನಾನ್ ನಾಡಿನಲ್ಲೂ ಬರವಿತ್ತು. ಧಾನ್ಯ ಕೊಂಡುಕೊಳ್ಳಲು ಅಲ್ಲಿಂದ ಈಜಿಪ್ಟಿಗೆ ಬಂದವರಲ್ಲಿ ಯಕೋಬನ (ಇಸ್ರಯೇಲನ) ಮಕ್ಕಳೂ ಇದ್ದರು. ಆಗ ಈಜಿಪ್ಟ್ ದೇಶದಲ್ಲಿ ಅಧಿಕಾರ ನಡೆಸುತ್ತಿದ್ದವನು ಹಾಗೂ ಜನರಿಗೆ ದವಸಧಾನ್ಯ ಮಾರಾಟ ಮಾಡಿಸುತ್ತಿದ್ದವನು ಜೋಸೆಫನೇ. ಇಂತಿರಲು ಅವನ ಅಣ್ಣಂದಿರು ಬಂದು ಅವನ ಮುಂದೆ ನೆಲದವರೆಗೂ ಬಾಗಿ ನಮಸ್ಕರಿಸಿದರು. ಜೋಸೆಫನು ಅವರನ್ನು ನೋದಿದ ಕೂಡಲೆ ಗುರುತುಹಿಡಿದನು. ಆದರೂ ಅವರ ಪರಿಚಯ ಇಲ್ಲದವನಂತೆ ಬಿರುನುಡಿಯಿಂದ, " ನೀವು ಎಲ್ಲಿಯವರು? " ಎಂದು ಕೇಳಿದನು. ಅವರು, " ನಾವು ಧಾನ್ಯ ಕೊಂಡುಕೊಳ್ಳುವುದಕ್ಕಾಗಿ ಕಾನಾನ್ ನಾಡಿನಿಂದ ಬಂದವರು, " ಎಂದು ಹೇಳಿದರು. ಅವರೆಲ್ಲರನ್ನು ಮೂರು ದಿನಗಳವರೆಗೆ ಕಾವಲಲ್ಲಿ ಇರಿಸಿದನು. ಮೂರನೆಯ ದಿನ ಜೋಸೆಫನು ಅವರನ್ನು ಕರೆಸಿ, " ನಾನು ದೇವರಲ್ಲಿ ಭಯಭಕ್ತಿಯುಳ್ಳವನು, ನಿಮಗೆ ಜೀವದ ಜೀವದ ಮೇಲೆ ಆಶೆಯಿದ್ದರೆ ನಾನು ಹೇಳಿದಂತೆ ಮಾಡಿ: ನೀವು ಸತ್ಯವಂತರಾದರೆ ನಿಮ್ಮಲ್ಲಿ ಒಬ್ಬನನ್ನು ಮಾತ್ರ ಸೆರೆಯಲ್ಲಿಡುತ್ತೇನೆ. ಮಿಕ್ಕವರು ಕ್ಷಾಮದಿಂದ ಬಳಲುತ್ತಿರುವ ನಿಮ್ಮ ನಿಮ್ಮ ಕುಟುಂಬಗಳಿಗೆ ಅಗತ್ಯವಾದ ಧಾನ್ಯವನ್ನು ತೆಗೆದುಕೊಂಡು ಹೋಗಿ. ಆದರೆ ನಿಮ್ಮ ತಮ್ಮನನ್ನು ನನ್ನ ಬಳಿಗೆ ಕರೆದುಕೊಂಡು ಬರಬೇಕು, ಕರೆದುಕೊಂಡು ಬಂದರೆ, ನಿಮ್ಮ ಮಾತು ಸತ್ಯವೆಂದು ತಿಳಿದುಕೊಳ್ಳುತ್ತೇನೆ. ಆಗ ನೀವು ಸಾಯದೆ ಉಳಿಯುವಿರಿ, " ಎಂದನು. ಅವರು ಹಾಗೆಯೇ ಮಾಡಲು ಒಪ್ಪಿಕೊಂಡರು. ಆಗ ಅವರು ತಮ್ಮತಮ್ಮೊಳಗೆ, " ನಾವು ನಮ್ಮ ತಮ್ಮನಿಗೆ ಮಾಡಿದ ದ್ರೋಹಕ್ಕೆ ತಕ್ಕದಂಡನೆಯನ್ನು ಅನುಭವಿಸುತ್ತಿದ್ದೇವೆ. ಅವನು ನಮ್ಮನ್ನು ಕಳಕಳಿಯಿಂದ ಬೇಡಿಕೊಂಡ. ಅವನ ಪ್ರಾಣ ಸಂಕಟವನ್ನು ತಿಳಿದೂ ನಾವು ಅವನ ಮೊರೆಗೆ ಕಿವಿಗೊಡಲಿಲ್ಲ. ಆದ್ದರಿಂದಲೆ ಈ ಸಂಕಟದಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ, " ಎಂದು ಮಾತಾಡಿಕೊಂಡರು. ಅಂತೆಯೇ ರೂಬೇನನು, " ಆ ಹುಡುಗನಿಗೆ ಯಾವ ಕೇಡೂ ಮಾಡಬೇಡಿ ' ಎಂದು ನಾನು ಹೇಳಲಿಲ್ಲವೆ? ನೀವು ಕೇಳದೆ ಹೋದಿರಿ. ಅವನ ರಕ್ತ ಈಗ ನಿಮ್ಮಿಂದ ಪ್ರಾಯಶ್ಚಿತ್ತ ಕೇಳುತ್ತಿದೆ, " ಎಂದ. ಜೋಸೆಫನು ಒಬ್ಬ ಅನುವಾದಕನ ಮುಖಾಂತರ ಅವರ ಸಂಗಡ ಮಾತನಾಡುತ್ತಿದ್ದುದರಿಂದ ಅವನಿಗೆ ತಮ್ಮ ಮಾತು ಗೊತ್ತಾಗುತ್ತಿದೆ ಎಂದು ಅವರು ನೆನಸಲಿಲ್ಲ. ಜೋಸೆಫನಾದರೋ ಅವರ ಬಳಿಯಿಂದ ಮರೆಯಾಗಿ ಹೋಗಿ ಕಣ್ಣೀರು ಸುರಿಸಿದ. ತರುವಾಯ ಅವರ ಬಳಿಗೆ ಬಂದು, ಸಂಭಾಷಣೆ ಮುಂದುವರೆಸಿ, ಸಿಮೆಯೋನನನ್ನು ಆರಿಸಿ ಅವರ ಕಣ್ಣೆದುರಿನಲ್ಲೇ ಅವನಿಗೆ ಬೇಡಿಹಾಕಿಸಿದ.

ಕೀರ್ತನೆ 33 : 2-3, 10-11, 18-19
ಶ್ಲೋಕ: ನಮ್ಮ ಮೇಲಿರಲಿ ಪ್ರಭು ನಿನ್ನಚಲ ಪ್ರೀತಿ.

ಪ್ರಭುವನು ಕೊಂಡಾಡಿ ಕಿನ್ನರಿಯನು ನುಡಿಸುತ
ಕೀರ್ತಿಸಿ ದಶತಂತಿ ವೀುಣೆಯನು ಭಾರಿಸುತ
ನೂತನ ಕೀರ್ತನೆಯನು ಆತನಿಗೆ ಹಾಡಿರಿ
ಇಂಪಾಗಿ ಬಾರಿಸಿ ಸೊಂಪಾಗಿ ಭಜಿಸಿರಿ

ವ್ಯರ್ಥವಾಗಿಪನು ಪ್ರಭು ರಾಷ್ಟ್ರಯೋಜನೆಗಳನು
ನಿರರ್ಥಕವಾಗಿಪನು ಜನರ ದುಷ್ಟಸಂಕಲ್ಪಗಳನು
ಪ್ರಭುವಿನ ಯೋಜನೆ ಶಾಶ್ವತ
ಅವನ ಸಂಕಲ್ಪ ಅನವರತ

ಪ್ರಭುವಾದರೋ ಕಟಾಕ್ಷಿಸುವನು ತನಗಂಜಿನಡೆವವರನು
ಲಕ್ಷಿಸುವನು ತನ್ನ ಕೃಪೆಯನು ನಿರೀಕ್ಷಿಸುವವರನು
ತಪ್ಪಿಸುವನವರ ಪ್ರಾಣವನು ಮರಣದಿಂದ
ಉಳಿಸುವನು ಜೀವವನು ಕ್ಷಾಮಡಾಮರದಿಂದ

ಶುಭಸಂದೇಶ: ಮತ್ತಾಯ 10 : 1-7


ಆ ಕಾಲದಲ್ಲಿ ಯೇಸು ತಮ್ಮ ಹನ್ನೆರಡು ಮಂದಿ ಶಿಷ್ಯರನ್ನು ಒಟ್ಟಿಗೆ ಕರೆದು, ಎಲ್ಲ ರೋಗರುಜಿನಗಳನ್ನು ಗುಣಪಡಿಸುವುದಕ್ಕೂ ದೆವ್ವಗಳನ್ನು ಬಿಡಿಸುವುದಕ್ಕೂ ಅವರಿಗೆ ಅಧಿಕಾರವನ್ನು ಕೊಟ್ಟರು. ಆ ಹನ್ನೆರಡು ಮಂದಿ ಪ್ರೇಷಿತರ ಹೆಸರುಗಳು ಇವು: ಮೊದಲನೆಯವನು ಪೇತ್ರ ಎನಿಸಿಕೊಂಡ ಸಿಮೋನ ಮತ್ತು ಅವನ ಸಹೋದರ ಅಂದ್ರೇಯ ಜೆಬೆದಾಯನ ಮಗ ಯಕೋಬ ಮತ್ತು ಅವನ ಸಹೋದರ ಯೊವಾನ್ನ ಫಿಲಿಪ್ಪ ಮತ್ತು ಬಾರ್ತೊಲೊಮಾಯ ತೋಮ ಮತ್ತು ಸುಂಕ ವಸೂಲಿಗಾರ ಮತ್ತಾಯ ಅಲ್ಪಾಯನ ಮಗ ಯಕೋಬ ಮತ್ತು ತದ್ದಾಯ ದೇಶಭಿಮಾನಿ ಎಂದು ಕರೆಯಲಾದ ಸಿಮೋನ ಮತ್ತು ಗುರುದ್ರೋಹಿ ಆಗಲಿದ್ದ ಯೂದ ಇಸ್ಕರಿಯೋತ. ಆ ಹನ್ನೆರಡು ಮಂದಿಯ ನಿಯೋಗವನ್ನು ಕಳುಹಿಸುವಾಗ ಯೇಸು ಅವರಿಗೆ ಕೊಟ್ಟ ಆದೇಶ ಇದು: " ಪರಕೀಯರತ್ತ ಹೋಗಲೇ ಬೇಡೀ, ಸಮಾರಿಯದವರ ಯಾವ ಊರಿಗೂ ಕಾಲಿಡಬೇಡಿ. ಅದಕ್ಕೆ ಬದಲು ತಪ್ಪಿಹೋದ ಕುರಿಗಳಂತೆ ಇರುವ ಇಸ್ರಯೇಲ್ ಜನರ ಬಳಿಗೆ ಹೋಗಿರಿ, ಹೋಗುತ್ತಾ, ' ಸ್ವರ್ಗಸಾಮ್ರಾಜ್ಯವು ಸಮೀಪಿಸಿದೆ ' ಎಂದು ಬೋಧನೆಮಾಡಿರಿ."

No comments:

Post a Comment