ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

13.07.23 - "ತೀರ್ಪಿನ ದಿನ ಆ ಊರಿನ ಗತಿ ಸೊದೋಮ್ ಮತ್ತು ಗೊಮೋರ ಊರುಗಳ ಗತಿಗಿಂತ ಕಠಿಣವಾಗಿರುವುದೆಂದು ನಾನು ನಿಮಗೆ ಒತ್ತಿ ಹೇಳುತ್ತೇನೆ"

ಮೊದಲನೆಯ ವಾಚನ: ಆದಿಕಾಂಡ 44:18-21, 23-29; 45:1-5


ಆಗ ಯೆಹೂದನು ಹತ್ತಿರಕ್ಕೆ ಬಂದು, “ನನ್ನೊಡೆಯಾ, ತಮ್ಮ ಸೇವಕನಾದ ನಾನು ಒಂದು ಮಾತನ್ನು ಅರಿಕೆಮಾಡಿಕೊಳ್ಳುತ್ತೇನೆ: ನನ್ನ ಮೇಲೆ ಸಿಟ್ಟುಮಾಡಬೇಡಿ; ತಾವು ಫರೋಹನಿಗೆ ಸಮಾನರು. ಒಡೆಯರಾದ ತಾವು ಸೇವಕರಾದ ನಮ್ಮನ್ನು, ‘ನಿಮಗೆ ತಂದೆಯಾಗಲಿ, ತಮ್ಮನಾಗಲಿ ಇದ್ದಾರೋ?’ ಎಂದು ಕೇಳಿದಿರಿ. ನಾವು ‘ತಂದೆ ಇದ್ದಾರೆ, ಅವರು ಮುದುಕ; ಮುಪ್ಪಿನಲ್ಲಿ ಅವರಿಗೆ ಹುಟ್ಟಿದ ಒಬ್ಬ ಚಿಕ್ಕ ಹುಡುಗ ಇದ್ದಾನೆ. ಅವನ ಒಡಹುಟ್ಟಿದವನು ಸತ್ತುಹೋದ. ಅವನ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದವರಲ್ಲಿ ಅವನೊಬ್ಬನೇ ಉಳಿದಿದ್ದಾನೆ. ಅವನ ಮೇಲೆ ತಂದೆಗೆ ಅಪಾರ ಪ್ರೀತಿ,’ ಎಂದು ಹೇಳಿದೆವು. ಅದಕ್ಕೆ ತಾವು ಸೇವಕರಾದ ನಮಗೆ, ‘ನಾನು ಆ ಹುಡುಗನನ್ನು ನೋಡಬೇಕು, ಅವನನ್ನು ನನ್ನ ಬಳಿಗೆ ಕರೆದು ತನ್ನಿ,’ ಎಂದು ಅಪ್ಪಣೆಕೊಟ್ಟಿರಿ. ಅದಕ್ಕೆ ತಾವು, ‘ನಿಮ್ಮ ತಮ್ಮನು ಬಾರದಿದ್ದರೆ ನೀವು ಮತ್ತೊಮ್ಮೆ ನನ್ನ ಮುಖವನ್ನು ನೋಡಕೂಡದು,’ ಎಂದು ಆಜ್ಞೆಕೊಟ್ಟಿರಿ. “ತಮ್ಮ ಸೇವಕರಾದ ನಾವು ನಮ್ಮ ತಂದೆಯ ಬಳಿಗೆ ಹೋದಾಗ ಒಡೆಯರ ಮಾತನ್ನು ತಿಳಿಸಿದೆವು. ನಮ್ಮ ತಂದೆ, ‘ನೀವು ಇನ್ನೊಮ್ಮೆ ಹೋಗಿ ಧಾನ್ಯ ಕೊಂಡುಕೊಂಡು ಬನ್ನಿ’ ಎಂದಾಗ, ನಾವು, ‘ಹೋಗಲಾಗದು, ತಮ್ಮನು ನಮ್ಮ ಜೊತೆಯಲ್ಲಿ ಇಲ್ಲವಾದರೆ ಆ ಮನುಷ್ಯನ ಮುಖವನ್ನು ನೋಡಲಾಗದು. ತಮ್ಮನು ನಮ್ಮ ಸಂಗಡ ಬಂದರೆ ಮತ್ತೆ ಹೋಗುತ್ತೇವೆ’ ಎಂದು ಹೇಳಿದೆವು. ಅದಕ್ಕೆ ತಮ್ಮ ಸೇವಕರಾದ ನಮ್ಮ ತಂದೆ, ‘ನನ್ನ ಪತ್ನಿಯಲ್ಲಿ ನನಗೆ ಇಬ್ಬರೇ ಗಂಡು ಮಕ್ಕಳು ಹುಟ್ಟಿದರೆಂಬುದು ನಿಮಗೆ ತಿಳಿದ ವಿಷಯ. ಅವರಲ್ಲಿ ಒಬ್ಬನು ನನ್ನನ್ನು ಬಿಟ್ಟು ಹೊರಟು ಹೋದ: ಅವನು ನಿಸ್ಸಂದೇಹವಾಗಿ ಕಾಡುಮೃಗದಿಂದ ಸೀಳಿಹಾಕಲ್ಪಟ್ಟಿರಬೇಕು ಎಂದು ತಿಳಿದುಕೊಂಡೆ; ಅಂದಿನಿಂದ ಅವನನ್ನು ನಾನು ಕಂಡಿಲ್ಲ. ಈಗ ಇವನನ್ನೂ ನನ್ನ ಬಳಿಯಿಂದ ತೆಗೆದುಕೊಂಡು ಹೋಗಬೇಕೆಂದಿದ್ದೀರಿ. ಇವನಿಗೂ ಏನಾದರು ಆಪತ್ತು ಒದಗಿದರೆ, ಈ ನರೆಕೂದಲಿನ ಮುದುಕ ಸಂಕಟದಿಂದ ಸಮಾಧಿ ಸೇರಲು ನೀವೇ ಕಾರಣರಾಗುತ್ತೀರಿ’ ಎಂದರು. ಇದನ್ನು ಕೇಳಿದ ಮೇಲೆ ತನ್ನ ಪರಿವಾರದವರ ಮುಂದೆ, ತನ್ನನ್ನೇ ಇನ್ನು ತಡೆಹಿಡಿದುಕೊಳ್ಳಲು ಜೋಸೆಫನಿಂದ ಆಗಲಿಲ್ಲ. “ಇಲ್ಲಿಂದ ಎಲ್ಲರನ್ನು ಆಚೆ ಕಳಿಸಿರಿ,” ಎಂದು ಬಾಯ್ತೆರೆದು ಹೇಳಿದ. ಜೋಸೆಫನು ಅಣ್ಣತಮ್ಮಂದಿರಿಗೆ ತನ್ನ ಪರಿಚಯ ಸಿಗುವಂತೆ ಮಾಡುವಾಗ ಇತರರು ಯಾರೂ ಹತ್ತಿರ ಇರಲಿಲ್ಲ. ಅವನು ಗಟ್ಟಿಯಾಗಿ ಅತ್ತದ್ದು ಈಜಿಪ್ಟಿನವರಿಗೆ ಕೇಳಿಸಿತು; ಫರೋಹನ ಮನೆಯವರಿಗೂ ಆ ಸುದ್ದಿ ಮುಟ್ಟಿತು. ಜೋಸೆಫನು ತನ್ನ ಅಣ್ಣ ತಮ್ಮಂದಿರಿಗೆ, “ನಾನೇ ಜೋಸೆಫ್! ನನ್ನ ತಂದೆ ಇನ್ನೂ ಇದ್ದಾರೋ?” ಎಂದು ಕೇಳಿದ. ಅವರು ತತ್ತರಗೊಂಡು ಉತ್ತರಿಸಲಾರದೆ ಹೋದರು. ಜೋಸೆಫನು, “ಹತ್ತಿರಕ್ಕೆ ಬನ್ನಿ” ಎನ್ನಲು, ಅವರು ಹತ್ತಿರಕ್ಕೆ ಬಂದರು. ಅವನು ಅವರಿಗೆ, “ಈಜಿಪ್ಟ್ ದೇಶಕ್ಕೆ ಹೋಗಲಿ” ಎಂದು ನೀವು ಮಾರಿಬಿಟ್ಟ ನಿಮ್ಮ ತಮ್ಮ ಜೋಸೆಫ್ ನಾನೇ. ನೀವು ನನ್ನನ್ನು ಇಲ್ಲಿಗೆ ಮಾರಿದ್ದಕ್ಕಾಗಿ ವ್ಯಸನಪಡಬೇಡಿ, ನಿಮ್ಮನ್ನೇ ನಿಂದಿಸಿಕೊಳ್ಳಬೇಡಿ. ಏಕೆಂದರೆ ಜೀವ ರಕ್ಷಣೆಗಾಗಿಯೇ ದೇವರು ನನ್ನನ್ನು ನಿಮಗೆ ಮುಂಚಿತವಾಗಿ ಇಲ್ಲಿಗೆ ಕಳುಹಿಸಿದರು.

ಕೀರ್ತನೆ 105:16-17, 18-19, 20-21
ಶ್ಲೋಕ: ಧ್ಯಾನಿಸಿ ನೀವು ಪ್ರಭುವಿನ ಪವಾಡಗಳನು. 

ತದನಂತರ ಬರಮಾಡಿದನಾ ನಾಡಿನಲಿ ಕ್ಷಾಮವನು
ಮುರಿದುಬಿಟ್ಟನು ಆಹಾರವೆ0ಬ ಊರುಗೊಲನು
ಕಳುಹಿಸಿದ ಅವರಿಗೆ ಮು0ದಾಗಿ ಒಬ್ಬಾತನನು
ದಾಸತ್ವಕೆ ಮಾರಲಾದ ಆ ಜೋಸೆಫನನು

ಅವನ ಕಾಲು ನೊ0ದವು ಸ0ಕೋಲೆಗಳಿಂದ
ಕುತ್ತಿಗೆ ಕೊರೆಯಿತು ಕಬ್ಬಿಣದ ಕೋಳಗಳಿಂದ
ಕ್ರಮೇಣ ಕೈಗೊ0ಡಿತು ಜೋಸೆಫನು ನುಡಿದದ್ದು
ಪ್ರಭುವಿನ ವಾಣಿ ಕ0ಡುಬ0ದಿತು ಸತ್ಯವೆಂದು

ಬಿಡಿಸಲವನನು ಅರಸ ಕಳಿಸಿದ ಆಳನು
ಬಿಡುಗಡೆ ಮಾಡಿದ ಜನಾಧಿಪತಿ ಅವನನು
ನೇಮಿಸಿದವನನು ತನ್ನ ಮನೆಗೆ ಯಾಜಮಾನನ್ನಾಗಿ
ಮಾಡಿದ ತನ್ನಾಸ್ತಿಗೆಲ್ಲಾ ಅಧಿಕಾರಿಯನ್ನಾಗಿ

ಶುಭಸಂದೇಶ: ಮತ್ತಾಯ 10:6-15

ಅದಕ್ಕೆ ಬದಲು ತಪ್ಪಿಹೋದ ಕುರಿಗಳಂತೆ ಇರುವ ಇಸ್ರಯೇಲ್ ಜನರ ಬಳಿಗೆ ಹೋಗಿರಿ; ಹೋಗುತ್ತಾ, ‘ಸ್ವರ್ಗ ಸಾಮ್ರಾಜ್ಯವು ಸಮೀಪಿಸಿದೆ’ ಎಂದು ಬೋಧನೆ ಮಾಡಿರಿ. ರೋಗಿಗಳನ್ನು ಗುಣಪಡಿಸಿರಿ, ಸತ್ತವರನ್ನು ಮತ್ತೆ ಬದುಕಿಸಿರಿ, ಕುಷ್ಠರೋಗಿಗಳನ್ನು ಸ್ವಸ್ಥಮಾಡಿರಿ, ದೆವ್ವಗಳನ್ನು ಬಿಡಿಸಿರಿ. ಉಚಿತವಾಗಿ ಪಡೆದಿರುವಿರಿ, ಉಚಿತವಾಗಿ ಕೊಡಿ. ಜೇಬಿನಲ್ಲಿ ಚಿನ್ನ, ಬೆಳ್ಳಿ, ತಾಮ್ರವನ್ನಾಗಲಿ, ಪ್ರಯಾಣಕ್ಕೆಂದು ಜೋಳಿಗೆಯನ್ನಾಗಲಿ, ಎರಡು ಅಂಗಿಗಳನ್ನಾಗಲಿ, ಕಾಲಿಗೆ ಕೆರವನ್ನಾಗಲಿ, ಕೈಗೆ ದಂಡವನ್ನಾಗಲಿ ತೆಗೆದುಕೊಳ್ಳಬೇಡಿ. ಏಕೆಂದರೆ, ದುಡಿಮೆಗಾರನು ಜೀವನಾಧಾರಕ್ಕೆ ಬಾಧ್ಯನು. "ನೀವು ಒಂದು ಪಟ್ಟಣಕ್ಕಾಗಲಿ, ಹಳ್ಳಿಗಾಗಲಿ ಹೋದಾಗ, ಅಲ್ಲಿ ನಿಮ್ಮನ್ನು ಬರಮಾಡಿಕೊಳ್ಳಲು ಯೋಗ್ಯನು ಯಾರೆಂದು ಕಂಡುಹಿಡಿಯಿರಿ. ಅಲ್ಲಿಂದ ಮುಂದಕ್ಕೆ ಸಾಗುವವರೆಗೂ ಅವನಲ್ಲೇ ತಂಗಿರಿ. ನೀವು ಒಂದು ಮನೆಗೆ ಹೋದಾಗ, "ಈ ಮನೆಗೆ ಶುಭವಾಗಲಿ!" ಎಂದು ಹರಸಿರಿ. ಆ ಮನೆಯವರು ನಿಮ್ಮನ್ನು ಸ್ವಾಗತಿಸಿದರೆ, ನಿಮ್ಮ ಆಶೀರ್ವಾದ ಅವರ ಮೇಲೆ ನೆಲಸಲಿ. ನಿಮ್ಮನ್ನು ಸ್ವಾಗತಿಸದೆ ಹೋದರೆ, ನಿಮ್ಮ ಆಶೀರ್ವಾದ ನಿಮಗೇ ಹಿಂದಿರುಗಲಿ. ಒಂದು ಮನೆಯೇ ಆಗಲಿ, ಊರೇ ಆಗಲಿ, ನಿಮ್ಮನ್ನು ಸ್ವಾಗತಿಸದೆ ಅಥವಾ ನಿಮಗೆ ಕಿವಿಗೊಡದೆ ಹೋದರೆ, ಆ ಮನೆಯನ್ನು ಅಥವಾ ಊರನ್ನು ಬಿಟ್ಟು ಮುಂದಕ್ಕೆ ಹೋಗಿರಿ. ಹೋಗುವಾಗ ನಿಮ್ಮ ಪಾದಗಳಿಗೆ ಅಂಟಿರುವ ಧೂಳನ್ನೂ ಝಾಡಿಸಿಬಿಡಿ. ತೀರ್ಪಿನ ದಿನ ಆ ಊರಿನ ಗತಿ ಸೊದೋಮ್ ಮತ್ತು ಗೊಮೋರ ಊರುಗಳ ಗತಿಗಿಂತ ಕಠಿಣವಾಗಿರುವುದೆಂದು ನಾನು ನಿಮಗೆ ಒತ್ತಿ ಹೇಳುತ್ತೇನೆ.

No comments:

Post a Comment