ಮೊದಲನೆಯ ವಾಚನ : ಆದಿಕಾಂಡದಿಂದ ಇಂದಿನ ವಾಚನ 19:15-29
ಮೂಡುವುದಕ್ಕೆ ಮುಂಚೆ ದೂತರು ಲೋಟನಿಗೆ, " ಏಳು, ನಿನ್ನ ಹೆಂಡತಿ ಮತ್ತು ಹೆಣ್ಣುಮಕ್ಕಳಿಬ್ಬರನ್ನು ಕರೆದುಕೊಂಡು ಬೇಗನೆ ಹೊರಡು ; ಇಲ್ಲದಿದ್ದರೆ ಊರಿಗೆ ಬರಲಿರುವ ದಂಡನೆಯಲ್ಲಿ ನೀನೂ ಸಿಕ್ಕಿಕೊಂಡು ನಾಶವಾಗಬೇಕಾದೀತು, " ಎಂದು ಹೇಳಿ ತ್ವರೆಪಡಿಸಿದನು. ಅವನು ಇನ್ನೂ ತಡಮಾಡುತ್ತಿರುವುದನ್ನು ಕಂಡು, ಆ ಮನುಷ್ಯರು ಅವನನ್ನು ಹಾಗು ಅವನ ಹೆಂಡತಿ ಮಕ್ಕಳನ್ನು ಕೈಹಿಡಿದು ಹೊರಗೆ ತಂದು ಊರಾಚೆಗೆ ಬಿಟ್ಟರು. ಸರ್ವೇಶ್ವರಸ್ವಾಮಿಗೆ ಅವನ ಮೇಲೆ ಅಷ್ಟು ಕನಿಕರವಿತ್ತು. ಊರ ಹೊರಗೆ ಬಿಟ್ಟಾದ ಮೇಲೆ ಆ ಇಬ್ಬರಲ್ಲಿ ಒಬ್ಬನು, " ಪ್ರಾಣ ಉಳಿಸಿಕೊಳ್ಳಬೇಕಾದರೆ ಓಡಬೇಕು, ಹಿಂದಕ್ಕೆ ತಿರುಗಿ ನೋಡಬಾರದು ; ಬಯಲುಸೀಮೆಯಲ್ಲೂ ನಿಲ್ಲದೆ ಗುಡ್ಡಗಾಡಿಗೆ ಓಡಬೇಕು, ಇಲ್ಲವಾದರೆ ನಾಶವಾದೀತು ! "ಎಂದು ಎಚ್ಚರಿಸಿದನು. ಅದಕ್ಕೆ ಲೋಟನು, "ಸ್ವಾಮಿ, ಅದು ನನ್ನಿಂದಾಗದು ; ನಿಮ್ಮ ದಾಸನ ಮೇಲೆ ಮರುಕವಿಟ್ಟು, ಪ್ರಾಣ ಉಳಿಸಿದ್ದೇನೋ ಮಹಾ ಉಪಕಾರವಾಯಿತು ; ಆದರೆ ಗುಡ್ಡಗಾಡಿಗೆ ಓಡಿಹೋಗಲು ನನ್ನಿಂದಾಗದು, ಅಲ್ಲಿಗೆ ಸೇರುವುದಕ್ಕೆ ಮುಂಚೆಯೇ ಈ ವಿಪತ್ತಿಗೆ ಸಿಕ್ಕಿ ಸತ್ತೇನು. ಆದುದರಿಂದ ಅಗೋ, ಅಲ್ಲಿ ಊರೊಂದು ಕಾಣಿಸುತ್ತಿದೆ ; ಅದು ಅಷ್ಟೇನು ದೂರವಲ್ಲ, ಚಿಕ್ಕ ಊರು, ಹೌದಲ್ಲವೆ ? ಅಲ್ಲಿಗಾದರೂ ಹೋಗಲು ಅಪ್ಪಣೆಯಾದರೆ ಪ್ರಾಣ ಉಳಿಯುತ್ತದೆ, " ಎಂದನು. ಅದಕ್ಕಾತನು, " ಸರಿ, ಹಾಗೆಯೇ ಆಗಲಿ, ಈ ನಿನ್ನ ಕೋರಿಕೆಯನ್ನು ನೆರವೇರಿಸುತ್ತೇನೆ. ನೀನು ಹೇಳಿದ ಆ ಊರನ್ನು ಹಾಳುಮಾಡುವುದಿಲ್ಲ. ಬೇಗನೆ ಅಲ್ಲಿಗೆ ಹೋಗಿ ಸುರಕ್ಷಿತವಾಗಿರು. ನೀನು ಅಲ್ಲಿಗೆ ಮುಟ್ಟುವ ತನಕ ನಾನು ಏನನ್ನೂ ಮಾಡಲಿಕ್ಕಾಗುವುದಿಲ್ಲ, " ಎಂದನು. ಲೋಟನು ಆ ಊರನ್ನು ಚಿಕ್ಕದು ಎಂದು ಕರೆದುದಕ್ಕಾಗಿ ಅದಕ್ಕೆ "ಚೋಗರ್" ಎಂದು ಹೆಸರಾಯಿತು. ಲೋಟನು ಚೋಗುರನ್ನು ಮುಟ್ಟುವಷ್ಟರಲ್ಲಿ ಸೂರ್ಯೋದಯವಾಗಿತ್ತು. ಆಗ ಸರ್ವೇಶ್ವರಸ್ವಾಮಿ ಸೊದೋಮ್ - ಗೊಮೋರಗಳ ಮೇಲೆ ಅಗ್ನಿ, ಉರಿಯುತ್ತಿರುವ ಗಂಧಕಮಳೆ ಸುರಿಸಿದರು. ಆ ಪಟ್ಟಣಗಳನ್ನೂ, ಇಡೀ ಆ ಬಯಲುಸೀಮೆಯನ್ನೂ ಅವುಗಳ ನಿವಾಸಿಗಳನ್ನೂ ಹೊಲಗಳ ಬೆಳೆಯೆಲ್ಲವನ್ನೂ ಹಾಳುಮಾಡಿದರು. ಲೋಟನ ಹೆಂಡತಿಯೋ, ಅವನ ಹಿಂದೆ ಬರುತ್ತಿದ್ದಾಗ ಹಿಂದಿರುಗಿ ನೋಡಿದಳು ; ಕೂಡಲೇ ಉಪ್ಪಿನ ಕಂಬವಾಗಿ ಮಾರ್ಪಟ್ಟಳು. ಇತ್ತ ಅಬ್ರಾಮನು ಬೆಳಿಗ್ಗೆ ಎದ್ದು ತಾನು ಸರ್ವೇಶ್ವರಸ್ವಾಮಿ ಸನ್ನಿಧಿಯಲ್ಲಿ ನಿಂತಿದ್ದ ಸ್ಥಳಕ್ಕೆ ಮರಳಿ ಬಂದನು. ಸೊದೋಮ್ - ಗೊಮೋರ ಹಾಗೂ ಆ ಬಯಲುಸೀಮೆಯತ್ತ ಅವನು ಕಣ್ಣು ಹಾಯಿಸಿದಾಗ, ಇಗೋ, ಆ ಪ್ರದೇಶದಿಂದ ಹೊಗೆ, ದೊಡ್ಡ ಆವಿಗೆಯ ಹೊಗೆಯಂತೆ ಭುಗಿಲೇರುತ್ತಿತ್ತು. ದೇವರು ಆ ಬಯಲುಸೀಮೆಯ ಪಟ್ಟಣಗಳನ್ನು ನಾಶಮಾಡಿದಾಗ ಲೋಟನು ವಾಸವಾಗಿದ್ದ ಊರುಗಳನ್ನೇನೋ ಹಾಳುಮಾಡಿದರು. ಆದರೆ ಅಬ್ರಾಮನನ್ನು ನೆನಪಿಗೆ ತಂದುಕೊಂಡು ಲೋಟನನ್ನು ತಪ್ಪಿಸಿ ಕಾಪಾಡಿದರು.
- ಪ್ರಭುವಿನ ವಾಕ್ಯ
ಕೀರ್ತನೆ 26:2-3,9-10,11-12.ಶ್ಲೋಕ: ಕೈಬಿಡದ ನಿನ್ನೊಲವು ನನ್ನ ಕಣ್ಮುಂದಿದೆ |
ಪರೀಕ್ಷಿಸು, ಪ್ರಭೂ, ಎನ್ನನ್ನು ಪರಿಶೀಲಿಸು|
ಹೃನ್ಮನಗಳೆಲ್ಲವನು ನೀ ಪರಿಶೋಧಿಸು||
ಕೈಬಿಡದ ನಿನ್ನೊಲವು ನನ್ನ ಕಣ್ಮುಂದಿದೆ|
ನೀ ತೋರಿದ ಸತ್ಯ ಪಥದಲಿ, ನಾ ನಡೆದೆ||
ಪಾಪಿಗಳ ಸಮೇತ ಎನ್ನ ಪ್ರಾಣವನಳಿಸಬೇಡಯ್ಯಾ|
ಕೊಳೆಪಾತಕರ ಸಮೇತ ಎನ್ನ ಜೀವ ತೆಗೆಯಬೇಡಯ್ಯಾ||
ಇದೆ ಆ ಜನರ ಕೈಗಳಲಿ ಕೆಡಕುತನ|
ಬಲಗೈ ತುಂಬ ಲಂಚಕೋರತನ||
ನೀತಿಯ ಪಥದೊಳು ನಾ ನಡೆವೆನಯ್ಯಾ|
ಕರುಣೆ ತೋರುವ ಪ್ರಭೂ, ರಕ್ಷಿಸಯ್ಯಾ||
ಸಮತಳದಲಿ ನಿಂತಿವೆ ನನ್ನ ಪಾದಗಳು|
ಸ್ತುತಿಸುವೆ ನಾ ಪ್ರಭುವನು ಭಕ್ತರ ಸಭೆಯೊಳು||
ಮೃತ್ಯುಶಕ್ತಿಯನ್ನು ವಿನಾಶಗೊಳಿಸಿ, ಅಮರಜೀವವನ್ನು ಶುಭಸಂದೇಶದ
ಮೂಲಕ ಬೆಳಕಿಗೆ ತಂದವರು
ಯೇಸುವೇ,,
ಅಲ್ಲೆಲೂಯ!
ಶುಭಸಂದೇಶ ವಾಚನ : ಮತ್ತಾಯನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 8:23-27
ಆ ಕಾಲದಲ್ಲಿ ಯೇಸು ದೋಣಿಯನ್ನು ಹತ್ತಿದರು. ಶಿಷ್ಯರು ಹತ್ತಿ ಅವರ ಸಂಗಡ ಹೋದರು. ಇದ್ದಕ್ಕಿದ್ದ ಹಾಗೆ ಸರೋವರದಲ್ಲಿ ರಭಸವಾದ ಬಿರುಗಾಳಿ ಎದ್ದಿತು. ದೋಣಿ ಅಲೆಗಳಿಂದ ಮುಳುಗಿ ಹೋಗುವುದರಲ್ಲಿತ್ತು. ಯೇಸುವಾದರೋ ನಿದ್ರಾವಶರಾಗಿದ್ದರು. ಶಿಷ್ಯರು ಹತ್ತಿರಕ್ಕೆ ಬಂದು ಅವರನ್ನು ಎಬ್ಬಿಸಿ, "ಪ್ರಭೂ, ಕಾಪಾಡಿ, ನಾವು ನೀರುಪಾಲಾಗುತ್ತಿದ್ದೇವೆ, " ಎಂದರು. ಅದಕ್ಕೆ ಯೇಸು, "ಅಲ್ಪ ವಿಶ್ವಾಸಿಗಳೇ, ನಿಮಗೇಕೆ ಇಷ್ಟು ಭಯ? "ಎಂದರು. ಅನಂತರ ಎದ್ದುನಿಂತು ಸುಂಟರಗಾಳಿಯನ್ನೂ ಸರೋವರವನ್ನೂ ಗದರಿಸಿದರು. ಆಗ ವಾತಾವರಣ ಪ್ರಶಾಂತವಾಯಿತು. ಶಿಷ್ಯರು ನಿಬ್ಬೆರಗಾದರು. " ಗಾಳಿಯೂ ಸರೋವರವೂ ಇವರು ಹೇಳಿದಂತೆ ಕೆಳಬೇಕಾದರೆ ಇವರೆಂತಹ ವ್ಯಕ್ತಿಯಾಗಿರಬೇಕು ! " ಎಂದುಕೊಂಡರು.
-ಪ್ರಭುಕ್ರಿಸ್ತರ ಶುಭಸಂದೇಶ
No comments:
Post a Comment