ಮೊದಲನೇ ವಾಚನ: ವಿಮೋಚನಾಕಾಂಡ 40:16-21,
34-38
ಸರ್ವೇಶ್ವರ ಆಜ್ಞಾಪಿಸಿದಂತೆಯೇ ಮೋಶೆ ಎಲ್ಲವನ್ನೂ
ಮಾಡಿದನು. ಎರಡನೆಯ ವರ್ಷದ ಮೊದಲನೆಯ ತಿಂಗಳಿನ ಪ್ರಥಮ ದಿನದಲ್ಲಿ ಮೋಶೆ ಗುಡಾರ ಎತ್ತಿಸಿ ಅದರ
ಗದ್ದಿಗೇಕಲ್ಲುಗಳನ್ನು ಹಾಕಿ ಕಂಬಗಳನ್ನು ನಿಲ್ಲಿಸಿದನು. ಗಡಾರದ ಮೇಲೆ ಡೇರೆಯ ಬಟ್ಟೆಗಳನ್ನು
ಹಾಸಿ ಆ ಡೇರೆಗೆ ಮೇಲು ಹೊದಿಕೆಯನ್ನು ಹಾಕಿದನು. ಸರ್ವೇಶ್ವರ ಆಜ್ಞಾಪಿಸಿದಂತೆಯೇ ಮೋಶೆ
ಅದೆಲ್ಲವನ್ನು ಮಾಡಿದನು. ಆಜ್ಞಾಶಾಸನಗಳನ್ನು ಮಂಜೂಷದಲ್ಲಿಟ್ಟು ಮಂಜೂಷಕ್ಕೆ ಗದ್ದಿಗೆಗಳನ್ನು
ಕೊಟ್ಟು ಅದರ ಮೇಲೆ ಕೃಪಾಸನವನ್ನಿಟ್ಟು, ಮಂಜೂಷವನ್ನು ಗುಡಾರದೊಳಕ್ಕೆ
ತಂದು, ಅದರ ಮುಂದೆ ತೆರೆಯನ್ನು
ಇರಿಸಿ, ಸರ್ವೇಶ್ವರ
ಆಜ್ಞಾಪಿಸಿದಂತೆಯೇ ಮೋಶೆ ಆಜ್ಞಾಶಾಸನಗಳ ಮಂಜೂಷವನ್ನು ಮರೆಮಾಡಿದನು. ಆಗ ಮೇಘವೊಂದು ದೇವದರ್ಶನದ
ಗುಡಾರವನ್ನು ಮುಚ್ಚಿತು; ಸರ್ವೇಶ್ವರನ ತೇಜಸ್ಸು ಗುಡಾರವನ್ನು ತುಂಬಿತು. ಮೇಘವು
ದೇವದರ್ಶನದ ಗುಡಾರದ ಮೇಲೆ ನೆಲೆಯಾಗಿ ಇದ್ದುದರಿಂದಲೂ ಸರ್ವೇಶ್ವರನ ತೇಜಸ್ಸು ಗುಡಾರದೊಳಗೆ ತುಂಬಿದ್ದುದರಿಂದಲೂ
ಮೋಶೆ ಬಿಡಾರದಲ್ಲಿ ಹೋಗಲಾರದೆ ಇದ್ದನು. ಆ ಮೇಘವು ಗುಡಾರವನ್ನು ಬಿಟ್ಟು
ಮೇಲಕ್ಕೆ ಹೋದಾಗ ಇಸ್ರಯೇಲರು ಮುಂದಕ್ಕೆ ಪ್ರಯಾಣಮಾಡುತ್ತಿದ್ದರು; ಆ ಮೇಘವು ಬಿಡದೆ ಇರುವಾಗ ಅದು ಬಿಡುವತನಕ ಪ್ರಯಾಣ ಮಾಡದೆ
ಇರುತ್ತಿದ್ದರು. ಇಸ್ರಯೇಲರ ಎಲ್ಲಾ ಪ್ರಯಾಣಗಳಲ್ಲಿಯೂ ಅವರ ಕಣ್ಣ ಮುಂದೆ ಹಗಲು ಹೊತ್ತಿನಲ್ಲಿ ಸರ್ವೇಶ್ವರನ
ಮೇಘವು ಗುಡಾರದ ಮೇಲೆ ಇತ್ತು; ರಾತ್ರಿ ವೇಳೆಯಲ್ಲಿ ಆ
ಮೇಘದೊಳಗೆ ಅಗ್ನಿಯು ಪ್ರಕಾಶಿಸುತ್ತಿತ್ತು.
ಕೀರ್ತನೆ: 84:3, 4, 5-6, 8, 11
ಶ್ಲೋಕ: ಹೇ ಪ್ರಭೂ ನಿನ್ನ ನಿವಾಸಗಳೆನಿತೋ ಸುಂದರ
ಶುಭಸಂದೇಶ: ಮತ್ತಾಯ 13:47-53
ಯೇಸು ತಮ್ಮ ಶಿಷ್ಯರಿಗೆ ಈ ಸಾಮತಿಯನ್ನು ಹೇಳಿದರು: ಸ್ವರ್ಗಸಾಮ್ರಾಜ್ಯವನ್ನು ಒಂದು ಮೀನುಬಲೆಗೆ
ಹೋಲಿಸಬಹುದು. ಬೆಸ್ತರು ಬಲೆಯನ್ನು ಸಮೂದ್ರದಲ್ಲಿ ಬೀಸಿ ಎಲ್ಲಾ ಜಾತಿಯ ಮೀನುಗಳನ್ನು
ಹಿಡಿಯುತ್ತಾರೆ. ಬಲೆ ತುಂಬಿದ ಮೇಲೆ ಅದನ್ನು ದಡಕ್ಕೆ ಎಳೆದು, ಕುಳಿತುಕೊಂಡು, ಒಳ್ಳೆಯ ಮೀನುಗಳನ್ನು ಮಾತ್ರ ಆರಿಸಿಕೊಂಡು ಬುಟ್ಟಿಗೆ ಹಾಕಿಕೊಳ್ಳುತ್ತಾರೆ; ಕೆಟ್ಟವನ್ನು ಎಸೆದುಬಿಡುತ್ತಾರೆ. ಕಾಲಾಂತ್ಯದಲ್ಲಿ ಇದರಂತೆಯೇ
ಆಗುವುದು; ದೇವದೂತರು ಹೊರಟುಬಂದು
ದುರ್ಜನರನ್ನು ಸಜ್ಜನರಿಂದ ಬೇರ್ಪಡಿಸುವರು. ದುರ್ಜನರನ್ನು ಅಗ್ನಿಕುಂಡದಲ್ಲಿ ಹಾಕುವರು. ಅಲ್ಲಿ
ಅವರು ಕಟಕಟನೆ ಹಲ್ಲು ಕಡಿದುಕೊಂಡು ಗೋಳಾಡುವರು."
"ಇದೆಲ್ಲ ನಿಮಗೆ ಅರ್ಥವಾಯಿತೇ?" ಎಂದು ಯೇಸುಸ್ವಾಮಿ ಕೇಳಿದರು. ಶಿಷ್ಯರು ಅರ್ಥವಾಯಿತು ಎಂದರು. ಆಗ
ಯೇಸು, "ಇಂತಿರಲು, ಸ್ವರ್ಗಸಾಮ್ರಾಜ್ಯದಲ್ಲಿ ಶಿಷ್ಯನಾಗಿರುವ ಪ್ರತಿಯೊಬ್ಬ ಶಾಸ್ತ್ರಜ್ಞನು ಮನೆಯ ಯಜಮಾನ ಇದ್ದ ಹಾಗೆ. ಅವನು ತನ್ನ ಉಗ್ರಾಣದಿಂದ ಹೊಸ ಹಾಗೂ ಹಳೆಯ
ವಸ್ತುಗಳನ್ನು ಹೊರಗೆ ತರುತ್ತಾ ಇರುತ್ತಾನೆ," ಎಂದರು. ಈ ಸಾಮತಿಯನ್ನು ಹೇಳಿಯಾದ ಮೇಲೆ ಯೇಸುಸ್ವಾಮಿ ಅಲ್ಲಿಂದ ಹೊರಟು
ಹೋದರು.
No comments:
Post a Comment