ಮೊದಲನೇ ವಾಚನ: ಆದಿಕಾಂಡ 19:15-29

ಹೊತ್ತು ಮೂಡುವುದಕ್ಕೆ ಮುಂಚೆ ದೂತರು ಲೋಟನಿಗೆ, "ಏಳು, ನಿನ್ನ ಹೆಂಡತಿ ಮತ್ತು ಹೆಣ್ಣುಮಕ್ಕಳಿಬ್ಬರನ್ನು ಕರೆದುಕೊಂಡು ಬೇಗನೆ ಹೊರಡು; ಇಲ್ಲದಿದ್ದರೆ ಊರಿಗೆ ಬರುವ ದಂಡನೆಯಲ್ಲಿ ನೀನೂ ಸಿಕ್ಕಿಕೊಂಡು ನಾಶವಾಗಬೇಕಾದೀತು," ಎಂದು ಹೇಳಿ ತ್ವರೆಪಡಿಸಿದರು. ಅವನು ಇನ್ನೂ ತಡಮಾಡುತ್ತಿರುವುದನ್ನು ಕಂಡು, ಆ ಮನುಷ್ಯರು ಅವನನ್ನು ಹಾಗು ಅವನ ಹೆಂಡತಿ ಮಕ್ಕಳನ್ನು ಕೈಹಿಡಿದು ಹೊರಗೆ ತಂದು ಊರಾಚೆಗೆ ಬಿಟ್ಟರು. ಸರ್ವೇಶ್ವರಸ್ವಾಮಿಗೆ ಅವನ ಮೇಲೆ ಅಷ್ಟು ಕನಿಕರವಿತ್ತು. ಊರ ಹೊರಗೆ ಬಿಟ್ಟಾದ ಮೇಲೆಆ ಇಬ್ಬರಲ್ಲಿ ಒಬ್ಬನು, "ಪ್ರಾಣ ಉಳಿಸಿಕೊಳ್ಳಬೇಕಾದರೆ ಓಡಬೇಕು, ಹಿಂದಕ್ಕೆ ನೋಡಬಾರದು; ಬಯಲುಸೀಮೆಯಲ್ಲೂ ನಿಲ್ಲದೆ ಗುಡ್ಡಗಾಡಿಗೆ ಓಡಬೇಕು, ಇಲ್ಲವಾದರೆ ನಾಶವಾದೀತು!" ಎಂದು ಎಚ್ಚರಿಸಿದನು. ಅದಕ್ಕೆ ಲೋಟನು, ಸ್ವಾಮೀ ಅದು ನನ್ನಿಂದಾಗದು; ನಿಮ್ಮ ದಾಸನ ಮೇಲೆ ಮರುಕವಿಟ್ಟು ಪ್ರಾಣ ಉಳಿಸಿದ್ದೇನೋ ಮಹಾ ಉಪಕಾರವಾಯಿತು; ಆದರೆ ಗುಡ್ಡಗಾಡಿಗೆ ಹೋಡಿಹೋಗಲು ನನ್ನಿಂದಾಗದು, ಅಲ್ಲಿಗೆ ಸೇರುವುದಕ್ಕೆ ಮುಂಚೆಯೇ ಈ ವಿಪತ್ತಿಗೆ ಸಿಕ್ಕಿ ಸತ್ತೇನು. ಆದುದರಿಂದ ಅಗೋ, ಅಲ್ಲಿ ಊರೊಂದು ಕಾಣಿಸುತ್ತಿದೆ; ಅದು ಅಷ್ಟೇನು ದೂರವಲ್ಲ, ಚಿಕ್ಕ ಊರು ಔದಲ್ಲವೆ? ಅಲ್ಲಿಗಾದರು ಹೋಗಲು ಅಪ್ಪಣೆಯಾದರೆ ಪ್ರಾಣ ಉಳಿಯುತ್ತದೆ," ಎಂದನು. ಅದಕ್ಕಾತನು, "ಸರಿ, ಹಾಗೆಯೇ ಆಗಲಿ, ಈ ನಿನ್ನ ಕೋರಿಕೆಯನ್ನೂ ನೆರವೇರಿಸುತ್ತೇನೆ. ನೀನು ಹೇಳಿದ ಆ ಊರನ್ನು ನಾಶಮಾಡುವುದಿಲ್ಲ. ಬೇಗನೆ ಅಲ್ಲಿಗೆ ಹೋಗಿ ಸುರಕ್ಷಿತವಾಗಿರು. ನೀನು ಅಲ್ಲಿಗೆ ಮುಟ್ಟುವ ತನಕ ನಾನು ಏನನ್ನೂ ಮಾಡಲಿಕ್ಕಾಗುವುದಿಲ್ಲ," ಎಂದನು. ಲೋಟನು ಆ ಊರನ್ನು ಚಿಕ್ಕದು ಎಂದು ಕರೆದುದಕ್ಕಾಗಿ "ಚೋಗರ್" ಎಂದು ಹೆಸರಾಯಿತು. ಲೋಟನು ಚೋಗರನ್ನು ಮುಟ್ಟುವಷ್ಟರಲ್ಲಿ ಸೂರ್ಯೊದಯವಾಗಿತ್ತು. ಆಗ ಸರ್ವೇಶ್ವರಸ್ವಾಮಿ ಸೊದೋಮ್ - ಗೊಮೋರಗಳ ಮೇಲೆ ಅಗ್ನಿ, ಉರಿಯುತ್ತಿರುವ ಗಂಧಕಮಳೆ ಸುರಿಸಿದರು. ಆ ಪಟ್ಟಣಗಳನ್ನೂ, ಇಡೀ ಆ ಬಯಲುಸೀಮೆಯನ್ನೂ ಅವುಗಳ ನಿವಾಸಿಗಳನ್ನೂ ಹೊಲಗಳ ಬೆಳೆಯೆಲ್ಲವನ್ನೂ ಹಾಳುಮಾಡಿದರು. ಲೋಟನ ಹೆಂಡತಿಯೋ, ಅವನ ಹಿಂದೆ ಬರುತ್ತಿದ್ದಾಗ ಹಿಂದಿರುಗಿ ನೋಡಿದಳು; ಕೂಡಲೇ ಉಪ್ಪಿನ ಕಂಬವಾಗಿ ಮಾರ್ಪಟ್ಟಳು. ಇತ್ತ ಅಬ್ರಹಾಮನು ಬೆಳಗ್ಗೆ ಎದ್ದು ತಾನು ಸರ್ವೇಶ್ವರಸ್ವಾಮಿ ಸನ್ನಿಧಿಯಲ್ಲಿ ನಿಂತಿದ್ದ ಸ್ಥಳಕ್ಕೆ ಮರಳಿ ಬಂದನು. ಸೊದೋಮ್ - ಗೊಮೋರ ಹಾಗೂ ಆ ಬಯಲುಸೀಮೆಯತ್ತ ಅವನು ಕಣ್ಣುಹಾಹಿಸಿದಾಗ, ಇಗೋ, ಆ ಪ್ರದೇಶದಿಂದ ಹೊಗೆ, ದೊಡ್ಡ ಆವಿಗೆಯ ಹೊಗೆಯಂತೆ ಭುಗಿಲೇರುತ್ತಿತ್ತು. ದೇವರು ಆ ಬಯಲುಸೀಮೆಯ ಪಟ್ಟಣಗಳನ್ನು ನಾಶಮಾಡಿದಾಗ ಲೋಟನು ವಾಸವಾಗಿದ್ದ ಊರುಗಳನ್ನೇನ್ನೋ ಹಾಳುಮಾಡಿದರು. ಆದರೆ ಅಬ್ರಹಾಮನನ್ನು ನೆನಪಿಗೆ ತಂದುಕೊಂಡು ಲೋಟನನ್ನು ತಪ್ಪಿಸಿ ಕಾಪಾಡಿದರು.
ಕೀರ್ತನೆ: 26:2-3, 9-10, 11-12
ಶ್ಲೋಕ: ಕೈಬಿಡದ ನಿನ್ನೊಲವು ನನ್ನ ಕಣ್ಮುಂದಿದೆ
ಶುಭಸಂದೇಶ: ಮತ್ತಾಯ 8:23-27
ಆ ಮೇಲೆ ಯೇಸುಸ್ವಾಮಿ ದೋಣಿಯನ್ನು ಹತ್ತಿದರು. ಶಿಷ್ಯರೂ ಹತ್ತಿ ಅವರ ಸಂಗಡ ಹೋದರು. ಇದ್ದಕ್ಕಿದ್ದ ಹಾಗೆ ಸರೋವರದಲ್ಲಿ ರಭಸವಾದ ಬಿರುಗಾಳಿ ಎದ್ದಿತು. ದೋಣಿ ಅಲೆಗಳಿಂದ ಮುಳುಗಿ ಹೋಗುವುದರಲ್ಲಿತ್ತು. ಯೇಸುವಾದರೋ ನಿದ್ರಾವಶರಾಗಿದ್ದರು. ಶಿಷ್ಯರು ಹತ್ತಿರಕ್ಕೆ ಬಂದು ಅವರನ್ನು ಎಬ್ಬಿಸಿ, "ಸ್ವಾಮೀ, ಕಾಪಾಡಿ. ನಾವು ನೀರುಪಾಲಾಗುತ್ತಿದ್ದೇವೆ," ಎಂದರು. ಅದಕ್ಕೆ ಯೇಸು, ಅಲ್ಪ ವಿಶ್ವಾಸಿಗಳೇ, ನಿಮಗೇಕೆ ಇಷ್ಟು ಭಯ?" ಎಂದರು. ಆನಂತರ ಎದ್ದುನಿಂತು ಸುಂಟರಗಾಳಿಯನ್ನೂ ಸರೋವರವನ್ನೂ ಗದರಿಸಿದರು. ಆಗ ವಾತಾವರಣ ಪ್ರಶಾಂತವಾಯಿತು. ಶಿಷ್ಯರು ನಿಬ್ಬೆರಗಾದರು. "ಗಾಳಿಯೂ ಸರೋವರವೂ ಇವರು ಹೇಳಿದಂತೆ ಕೇಳಬೇಕಾದರೆ ಇವರೆಂತಹ ವ್ಯಕ್ತಿಯಾಗಿರಬೇಕು!" ಎಂದುಕೊಂಡರು.
No comments:
Post a Comment