ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

05.07.2019

ಮೊದಲನೇ ವಾಚನ ಆದಿಕಾಂಡ: 23:1-4,  19;  24:1-8, 62-67

ಸಾರಳು ನೂರಿಪ್ಪತ್ತೇಳು ವರ್ಷ ಬದುಕಿದ್ದಳು. ಇಷ್ಟು ವರ್ಷಗಳಾದ ಮೇಲೆ ಆಕೆ ಕಾನಾನ್ ನಾಡಿನ ಹೆಬ್ರೋನೆಂಬ ಕಿರ್ಯತರ್ಬದಲ್ಲಿ ಕಾಲವಾದಳು. ಅಬ್ರಹಾಮನು ಅಲ್ಲಿಗೆ ಬಂದು ಅವಳಿಗಾಗಿ ಕಣ್ಣೀರಿಟ್ಟು ಗೋಳಾಡಿದನು. ಆನಂತರ ಅವನು ಶವದ ಬಳಿಯಿಂದ ಎದ್ದು ಹಿತ್ತಿಯರ ಬಳಿಗೆ ಬಂದು, "ನಿಮ್ಮ ಮಧ್ಯೆ ನಾನೊಬ್ಬ ಹೊರನಾಡಿಗ, ಒಬ್ಬ ಪ್ರವಾಸಿ, ಮೃತಳಾಗಿರುವ ನನ್ನ ಪತ್ನಿಯನ್ನು ಸಮಾಧಿ ಮಾಡಲು ಸ್ವಲ್ಪ ಜಮೀನನ್ನು ನನ್ನ ಸ್ವಂತಕ್ಕೆ ಕೊಡಬೇಕೆಂದು ಕೇಳಿಕೊಳ್ಳುತ್ತೇನೆ." ಎಂದನು. ಇದಾದ ಮೇಲೆ ಹೆಬ್ರೋನೆಂಬ ಮಮ್ರೆಗೆ ಎದುರಾಗಿರುವ ಮಕ್ಸೇಲದ ಜಮೀನಿನಲ್ಲಿರುವ ಗವಿಯೊಳಗೆ ಸಮಾಧಿ ಮಾಡಿದನು. ಅಬ್ರಹಾಮನು ಆಗ ತಂಬು ವಯಸ್ಸಿನ ಮುದುಕ. ಸರ್ವೇಶ್ವರಸ್ವಾಮಿ ಅವನ ಎಲ್ಲ ಕೆಲಸಕಾರ್ಯಗಳನ್ನು ಆಶೀರ್ವದಿಸಿದ್ದರು. ಒಮ್ಮೆ ಅವನು, ತನ್ನ ಆಸ್ತಿಯನ್ನು ನೋಡಿಕೊಳ್ಳುತ್ತಿದ್ದ ಹಿರಿಯ ಸೇವಕನಿಗೆ, "ನನ್ನ ಮಗ ಇಸಾಕನಿಗೆ ಹೆಣ್ಣನ್ನು ನಾನು ವಾಸಮಾಡುತ್ತಿರುವ ಕಾನಾನ್ಯರಿಂದ ತರಬಾರದು; ನನ್ನ ಸ್ವಂತ ನಾಡಿಗೂನನ್ನ ಭಂದುಬಳಗದವರ ಬಳಿಗೂ ಹೋಗಿ ಅವರಿಂದಲೇ ಅವನಿಗೆ ಹೆಣ್ಣು ತರಬೇಕು. ಹಾಗೆ ಮಾಡುತ್ತೇನೆಂದು ನೀನು ನನ್ನ ತೊಡೆಯ ಕೆಳಗೆ ಕೈಯಿಟ್ಟು ಇಹಪರಲೋಕಗಳ  ಸರ್ವೇಶ್ವರನಾದ ದೇವರ ಮೇಲೆ ಪ್ರಮಾಣ ಮಾಡಬೇಕು," ಎಂದು ಹೇಳಿದನು. ಅದಕ್ಕೆ ಆ ಸೇವಕ "ಒಂದು ವೇಳೆ ಆ ಕನ್ಯೆಗೆ ಈ ನಾಡಿಗೆ ನನ್ನೊಡನೆ ಬರಲು ಇಷ್ಟ ಇಲ್ಲದೆ ಹೋದೀತು. ಆಗ, ನೀವು ಬಿಟ್ಟುಬಂದ ನಾಡಿಗೆ ನಿಮ್ಮ ಮಗನನ್ನು ಮರಳಿ ಕರೆದುಕೊಂಡು ಹೋಗಬಹುದೆ?" ಎಂದು ವಿಚಾರಿಸಿದ. ಅಬ್ರಹಾಮನು ಅವನಿಗೆ, "ಅದೆಂದಿಗೂ ಕೂಡದು; ಅಲ್ಲಿಗೆ ನನ್ನ ಮಗನನ್ನು ಕರೆದುಕೊಂಡು ಹೋಗಲೇಬಾರದು. ನನ್ನ ತಂದೆಯ ಮನೆಯಿಂದಲೂ ನಾನು ಹುಟ್ಟಿದ ನಾಡಿನಿಂದಲೂ ನನ್ನನ್ನು ಇಲ್ಲಿಗೆ ಕರೆತಂದು, "ನಿನ್ನ ಸಂತತಿಗೆ ಈ ನಾಡನ್ನು ಕೊಡುತ್ತೇನೆ," ಎಂದು ಪರಲೋಕ ದೇವರಾದ ಸರ್ವೇಶ್ವರಸ್ವಾಮಿ ಪ್ರಮಾಣ ಮಾಡಿ ಹೇಳಿದ್ದಾರೆ. ಅವರೇ ತಮ್ಮ ದೂತನನ್ನು ನಿನ್ನ ಮುಂದೆ ಕಳುಹಿಸಿ, ನೀನು ಅಲ್ಲಿಂದ ನನ್ನ ಮಗನಿಗೆ ಹೆಣ್ಣು ತರುವುದಕ್ಕೆ ಅನುಕೂಲ ಮಾಡಿಕೊಡುವರು. ಇಲ್ಲಿಗೆ ನಿನ್ನ ಸಂಗಡ ಬರಲು ಆ ಕನ್ಯೆಗೆ ಇಷ್ಟವಿಲ್ಲದೆ ಹೋದರೆ, ನಾನು ಮಾಡಿಸಿದ ಪ್ರಮಾಣದಿಂದ ನೀನು ಬಿಡುಗಡೆಯಾಗಿರುವೆ. ಹೇಗೂ ನನ್ನ ಮಗನನ್ನು ಮರಳಿ ಅಲ್ಲಿಗೆ ಕರೆದುಕೊಂಡು ಹೋಗಕೂಡದು," ಎಂದು ಮತ್ತೊಮ್ಮೆ ಒತ್ತಿ ಹೇಳಿದನು. ಇತ್ತ ಇಸಾಕನು "ಲಹ್ಯೆರೋಯಿ" ಎಂಬಲ್ಲಿಗೆ ಹೋಗಿಬಂದು ಕಾನಾನ್ ನಾಡಿನ ದಕ್ಷಿಣ ಪ್ರಾಂತ್ಯದಲ್ಲಿ ವಾಸಮಾಡುತ್ತಿದ್ದನು. ಸಂಜೆ ವೇಳೆಯಲ್ಲಿ ಅವನು ವಿಶ್ರಾಂತಿಗಾಗಿ ತಿರುಗಾಡಲು ಹೋಗಿದ್ದನು. ಕಣ್ಣೆತ್ತಿ ನೋಡಿದಾಗ ಒಂಟೆಗಳು ಬರುತ್ತಿರುವುದು ಅವನಿಗೆ ಕಾಣಿಸಿತು. ರೆಬೆಕ್ಕಳೂ ಕಣ್ಣೆತ್ತಿ ಇಸಾಕನನ್ನು ನೋಡಿ ಒಂಟೆಯಿಂದ ಕೆಳಗಿಳಿದಳು. "ನಮ್ಮ ಕಡೆ ಹೊಲದಲ್ಲಿ ನಡೆದು ಬರುತ್ತಿರುವ ಆ ಮನುಷ್ಯ ಯಾರು?" ಎಂದು ಸೇವಕನನ್ನು ಕೇಳಿದಳು. "ಅವನೇ ನನ್ನೊಡೆಯ" ಎಂದು ಹೇಳಿದಾಗ ಆಕೆ ಮುಸುಕು ಹಾಕಿಕೊಂಡಳು. ಆ ಸೇವಕನು ತಾನು ಮಾಡಿದ ಕಾರ್ಯಗಳನ್ನೆಲ್ಲ ಇಸಾಕನಿಗೆ ವರದಿ ಮಾಡಿದನು. ಇಸಾಕನು ಆಕೆಯನ್ನು ತನ್ನ ತಾಯಿ ಸಾರಳ ಗುಡಾರಕ್ಕೆ ಕರೆದುಕೊಂಡು ಹೋದನು. ಹೀಗೆ ಅವನು ರೆಬೆಕ್ಕಳನ್ನು ವರಿಸಿದನು; ಆಕೆ ಅವನಿಗೆ ಪತ್ನಿಯಾದಳು. ಆಕೆಯ ಮೇಲಿನ ಪ್ರೀತಿ, ತನ್ನ ತಾಯಿ ಸಾರಳನ್ನು  ಕಳೆದುಕೊಂಡಿದ್ದ ಅವನಿಗೆ ಸಾಂತ್ವನ ತಂದಿತು.

ಕೀರ್ತನೆ: 106:1-2, 3-4, 4-5
ಶ್ಲೋಕ: ಪ್ರಭು ದಯಾಪೂರಿತ, ಆತನ ಪ್ರೀತಿ ಶಾಶ್ವತ

ಶುಭಸಂದೇಶ: ಮತ್ತಾಯ 9:9-13

ಯೇಸುಸ್ವಾಮಿ ಆ ಸ್ಥಳವನ್ನು ಬಿಟ್ಟು ಮುಂದಕ್ಕೆ ಹೋಗುತ್ತಿದ್ದಾಗ ಮತ್ತಾಯ ಎಂಬುವನನ್ನು ಕಂಡರು. ಅವನು ಸುಂಕ ವಸೂಲಿಗಾಗಿ ಉಕ್ಕಡದಲ್ಲಿ ಕುಳಿತ್ತಿದ್ದನು. "ನನ್ನನ್ನು ಹಿಂಬಾಲಿಸು," ಎಂದು ಹೇಳಿ ಯೇಸು ಅವನನ್ನು ಕರೆದರು. ಮತ್ತಾಯನು ಎದ್ದು ಅವರನ್ನು ಹಿಂಬಾಲಿಸಿದನು. ಇದಾದ ಮೇಲೆ ಯೇಸುಸ್ವಾಮಿ ಮತ್ತಾಯನ ಮನೆಯಲ್ಲಿ ಊಟಕ್ಕೆ ಕುಳಿತ್ತಿದ್ದರು. ಬಹುಮಂದಿ "ಸುಂಕದವರೂ",  "ಪಾಪಿಷ್ಠರೂ" ಅಲ್ಲಿಗೆ ಬಂದರು. ಯೇಸು ಮತ್ತು ಅವರ ಶಿಷ್ಯರು ಕುಳಿತಿದ್ದ ಪಂಕ್ತಿಯಲ್ಲೇ ಇವರೂ  ಊಟಕ್ಕೆ ಕುಳಿತರು ಫರಿಸಾಯರು ಇದನ್ನು ಕಂಡದ್ದೇ ಯೇಸುವಿನ ಶಿಷ್ಯರನ್ನು ಉದ್ದೇಶಿಸಿ, "ನಿಮ್ಮ ಗುರು ಇಂತಹ ಬಹಿಷ್ಕ್ರತ ಜನರ ಜೊತೆಯಲ್ಲಿ ಊಟ ಮಾಡವುದೇ?" ಎಂದು ಆಕ್ಷೇಪಿಸಿದರು. ಇದನ್ನು ಕೇಳಿಸಿಕೊಂಡ ಯೇಸು, "ವೈದ್ಯನ ಅವಶ್ಯಕತೆ ಇರುವುದು ರೋಗಿಗಳಿಗೆ; ಆರೋಗ್ಯವಂತರಿಗಲ್ಲ. ನೀವು ಹೋಗಿ, "ನನಗೆ ಬೇಕಾದುದು ದಯೆ, ಯಜ್ಞಬಲಿಯಲ್ಲ" ಎಂದು ಪವಿತ್ರಗ್ರಂಥದಲ್ಲಿ ಬರೆದಿರುವ ವಾಕ್ಯದ ಅರ್ಥವನ್ನು ಕಲಿತುಕೊಳ್ಳಿ. ನಾನು ಕರೆಯಲು ಬಂದಿರುವುದು ಧರ್ಮಿಷ್ಠರನ್ನಲ್ಲ, ಪಾಪಿಷ್ಠರನ್ನು" ಎಂದರು.

No comments:

Post a Comment